ಇಲ್ಲಿ ಒಂದು ಕಡೆ ರಾಜ್ಯೋತ್ಸವದ ಭಾಷಣ ಮಾಡಲು ಹೋಗಿದ್ದಾಗ ಮಠವೊಂದರ ಮರಿಸ್ವಾಮಿಗಳೊಬ್ಬರು ಸಿಕ್ಕಿ ‘ನಿಮ್ಮನ್ನು ಎಲ್ಲೋ ಈ ಹಿಂದೆ ನೋಡಿದ ಹಾಗಿದೆಯಲ್ಲಾ. ಆದರೆ ನೆನಪಾಗುತ್ತಿಲ್ಲವಲ್ಲಾ..’ ಎಂದು ಪೇಚಾಡಿಕೊಳ್ಳುತ್ತಿದ್ದರು. ‘ಹೌದು ನನಗೂ ಹಾಗನ್ನಿಸುತ್ತಿದೆ. ಆದರೆ ನನಗೂ ನೆನಪಾಗುತ್ತಿಲ್ಲವಲ್ಲಾ.. ’ ಎಂದು ನಾನೂ ಪೇಚಾಡಿಕೊಳ್ಳುತ್ತಿದ್ದೆ. ಆಮೇಲೆ ನಾವಿಬ್ಬರೂ ನಾವಿಬ್ಬರು ಸಂದಿಸಿರಬಹುದಾದ ಸಂದರ್ಭಗಳನ್ನು ಕಳೆಯುತ್ತಾ ಕೂಡುತ್ತಾ ಕೊನೆಗೆ ನಾವಿಬ್ಬರು ಈ ಹಿಂದೆ ಸಂಧಿಸಿದ್ದ ಜಾಗ ಎಲ್ಲಿ ಎಂದು ಕಂಡು ಹಿಡಿದುಬಿಟ್ಟೆವು. ಆಮೇಲೆ ಆ ದಿನಗಳನ್ನು ನೆನೆದುಕೊಂಡು ಜೋರಾಗಿ ನಗಾಡಿಕೊಂಡೆವು. ಏಕೆಂದರೆ ಸಾಧಾರಣವಾಗಿ ಹೇಳಿಕೊಳ್ಳಲು ಇಬ್ಬರೂ ಮುಜುಗರ ಪಟ್ಟುಕೊಳ್ಳಬೇಕಾದ ಸಂದರ್ಭವಾಗಿತ್ತು ಅದು. ಆದರೆ ಅದು ನಡೆದು ಮೂವತ್ತು ವರ್ಷಗಳು ಕಳೆದು ಹೋಗಿದ್ದರೂ ಕಳೆದ ವರ್ಷವೇ ನಡೆದಿತ್ತೋ ಎನ್ನುವ ಹಾಗೆ ಇಬ್ಬರ ಮನಸ್ಸಲ್ಲೂ ಅಚ್ಚಳಿಯದೇ ಉಳಿದಿತ್ತು.

ಸಣ್ಣ ಊರೊಂದರ ಮಠವೊಂದರ ಉಸ್ತುವಾರಿ ವಹಿಸಿಕೊಂಡು ಆಗಾಗ ಮೈಸೂರಿಗೆ ಬಂದುಹೋಗುವ ಅವರು ತುಂಬ ಸಂತೋಷದಲ್ಲಿ ಇರುವ ಹಾಗೇನೂ ಅವರ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ಬೇಕು ಬೇಡದ ಹಲವು ಉಸಾಬರಿಗಳನ್ನು ಅರ್ದಂಬರ್ದ ಹಚ್ಚಿಕೊಂಡು ಯಾವುದನ್ನೂ ತಾರ್ಕಿಕ ಕೊನೆ ಮುಟ್ಟಿಸದೆ ಓಡಾಡುತ್ತಿರುವ ನಾನೂ ಸಂತೋಷದಲ್ಲಿ ಇರಲಿಲ್ಲ. ಆದರೆ ನಮಗಿಬ್ಬರಿಗೂ ನಾವಿಬ್ಬರು ಮೂವತ್ತು ವರ್ಷಗಳ ಹಿಂದೆ ಮೈಸೂರಿನ ಜೇಲಿನಲ್ಲಿ ಒಟ್ಟಿಗೆ ಕಳೆದ ದಿನಗಳು ಒಮ್ಮೆಗೆ ನೆನಪಾಗಿ ಆ ನೆನಪುಗಳ ಜೊತೆಯಲ್ಲೇ ನಗುವೂ ಉಕ್ಕಿಬಂದು ಸ್ವಲ್ಪ ಹೊತ್ತು ಇಬ್ಬರೂ ಆರಾಮಾಗಿ ಹರಟುವಂತಾಯಿತು.

ಆಗ ನಾವಿಬ್ಬರೂ ಮೈಸೂರಿನಲ್ಲಿ ಓದುತ್ತಿದ್ದೆವು. ಲೇಖಕರೂ, ಕ್ರಾಂತಿಕಾರಿಗಳೂ, ಸಮಾಜವಾದಿಗಳೂ ಕಿಕ್ಕಿರಿದು ತುಂಬಿದ್ದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಾಹಿತ್ಯ ಓದುತ್ತಿದ್ದ ನಾನು ಮತ್ತು ಅರಮನೆಯ ಬಳಿಯ ಮಹಾರಾಜರ ಸಂಸ್ಕೃತ ಕಾಲೇಜಿನಲ್ಲಿ ವೇದ ಆಗಮ ಪುರಾಣಗಳನ್ನು ಓದುತ್ತಿದ್ದ ಅವರು. ಬಹುಶಃ ಜೇಲಿನಲ್ಲಿ ನಾವು ಆ ಎರಡು ಇರುಳು, ಆ ಎರಡು ಹಗಲುಗಳನ್ನು ಜೊತೆಗೆ ಕಳೆಯದಿದ್ದರೆ ಈ ಲೋಕದಲ್ಲಿ ಇಂತಹ ಜೀವಿಯೊಬ್ಬ ಬದುಕಿದ್ದ ಎಂದು ಅರಿಯದೇ ಇಬ್ಬರೂ ತೀರಿಹೋಗುತ್ತಿದ್ದೆವು.

ಮಲೆನಾಡಿನ ಕಡೆಯ ಹಳ್ಳಿಯೊಂದರಿಂದ ಬಡತನ ತಾಳಲಾರದೆ ಮಠ ಸೇರಿಕೊಂಡಿದ್ದ ಅವರು ತಮ್ಮ ಚುರುಕು ಬುದ್ದಿಯಿಂದಾಗಿ ಹಿರಿಯ ಸ್ವಾಮಿಗಳ ವಿಶೇಷ ಕೃಪಾ ಕಟಾಕ್ಷಕ್ಕೆ ಒಳಗಾಗಿ ಬಹಳ ಬೇಗ ಉಳಿದವರನ್ನು ಹಿಂದಿಕ್ಕಿ ಮಠದ ಶಾಖೆಯೊಂದರ ಮುಖ್ಯಸ್ಥರಾಗುವ ಹಂತಕ್ಕೆ ಬಂದಿದ್ದವರು. ಆದರೆ ಅದು ಯಾವುದೋ ಒಳರಾಜಕೀಯಕ್ಕೆ ಸಿಲುಕಿ ಮರಿಸ್ವಾಮಿಗಳಾಗಿಯೇ ಉಳಿದುಬಿಟ್ಟಿದ್ದರು. ತಮ್ಮ ಜೀವಿತದ ಉಳಿದ ಅವದಿಯನ್ನೂ ಈ ವ್ಯಸನದಲ್ಲೇ ಕಳೆಯಬೇಕೆಂದು ಅವರು ತೀರ್ಮಾನಿಸಿಕೊಂಡ ಹಾಗೆ ಕಾಣಿಸುತ್ತಿದ್ದರು. ನಾನಾದರೋ ಅವರ ಹಾಗೆಯೇ ಆದರೆ ಸ್ವಲ್ಪ ಬೇರೆ ರೀತಿಯಲ್ಲಿ ಹಾಗೇ ಮುಗಿದುಹೋಗುವುದೆಂದು ಕನಸು ಕಾಣುತ್ತಿದ್ದೆ.

ಆದರೆ ಈವತ್ತು ನಮಗಿಬ್ಬರಿಗೂ ಮೂವತ್ತು ವರ್ಷಗಳ ಹಿಂದಿನ ಮೈಸೂರಿನ ಜೇಲಿನ ಆ ದಿನಗಳು ನೆನಪಾಗಿ ಜೀವನ ಎಂಬುದು ಅಸಂಬದ್ಧವೂ, ಮನೋರಂಜಕವೂ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜೇಲಿನಷ್ಟೇ ಮುಕ್ತವೂ ಆಗಿದೆ ಎಂಬ ಸತ್ಯ ಗೊತ್ತಾಗಿ ಬದುಕಿನಲ್ಲಿ ಹೊಸಬೆಳಕು ಬಂದಂತಾಯಿತು. ಆಗ ಮೂವತ್ತು ವರ್ಷಗಳ ಹಿಂದೆ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನವು ನಡೆದಿತ್ತು. ಆ ಸಮ್ಮೇಳನದ ಹಲವು ಕುರುಹುಗಳು ಮೈಸೂರಿನಲ್ಲಿ ಈಗಲೂ ಉಳಿದಿವೆ.

ಅದೆಲ್ಲ ಹೋಗಲಿ ಬಿಡಿ. ಈ ವಿಶ್ವ ಕನ್ನಡ ಸಮ್ಮೇಳನದಿಂದಾಗಿ ವಿದ್ಯಾರ್ಥಿಗಳಾಗಿದ್ದ ನಾವು ಯಾಕೆ ಜೇಲುಪಾಲಾದೆವು ಎಂಬುದನ್ನು ಚುಟುಕಾಗಿ ಹೇಳಿಬಿಡುತ್ತೇನೆ. ಮೊದಲೇ ಹೇಳಿದ ಹಾಗೆ ಲೇಖಕರೂ, ಕ್ರಾಂತಿಕಾರಿಗಳೂ, ಸಮಾಜವಾದಿಗಳೂ ಕಿಕ್ಕಿರಿದು ತುಂಬಿದ್ದ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದ ನಾವು ಸಹಜವಾಗಿಯೇ ಪ್ರಗತಿ ಪರವೂ, ಶೋಷಿತರ ಪರವೂ ಹಾಗೂ ವ್ಯವಸ್ಥೆಯ ವಿರುದ್ದವೂ ಆಗಿದ್ದವು. ಎಂದೂ ಕಂಡು ಕೇಳರಿಯದ ಬರಗಾಲದಿಂದ ಬಳಲುತ್ತಿದ್ದ ಕನ್ನಡ ನಾಡಿನ ಆ ಸಂಕಷ್ಟದ ಸಮಯದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಕನ್ನಡ ಮೇಳ ಮಾಡುವುದು ಅಮಾನವೀಯ ಎಂದು ಬೀದಿಯಲ್ಲಿ ಪ್ರತಿಭಟಿಸುತ್ತ ಘೋಷಣೆ ಕೂಗುತ್ತಿದ್ದ ನಮ್ಮನ್ನೂ, ನಮ್ಮನ್ನು ಹುರಿದುಂಬಿಸುತ್ತಿದ್ದ ನಾಯಕರುಗಳನ್ನೂ ಅನಾಮತ್ತಾಗಿ ಎತ್ತಿಕೊಂಡು ಪೋಲೀಸು ವ್ಯಾನಿನಲ್ಲಿ ಹಾಕಿಕೊಂಡು ರಾತ್ರಿಯ ಹೊತ್ತು ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿ ಮೈಸೂರಿನ ಜೇಲಿನೊಳಕ್ಕೆ ಬಿಟ್ಟಿದ್ದರು.

ಮಹಾ ಕ್ರಾಂತಿಕಾರಿಗಳಂತೆ ಬೀಗುತ್ತಿದ್ದ ನಾವು ಅಲ್ಲೂ ಸುಮ್ಮನಿರದೆ ಜೇಲಿನೊಳಗೂ ಒಂದು ಪರ್ಯಾಯ ಸಮ್ಮೇಳನ ನಡೆಸಿ ಠರಾವುಗಳನ್ನು ಮಂಡಿಸಿದ್ದೆವು. ಠರಾವುಗಳೆಲ್ಲ ಮುಗಿದ ಮೇಲೆ ಸಂಜೆಗತ್ತಲಲ್ಲಿ ಜೇಲಿನೊಳಗಿನ ಗುಲಾಬಿ ಗಿಡಗಳನ್ನೂ, ಅವುಗಳಲ್ಲಿ ಅರಳಿದ್ದ ಹೂಗಳನ್ನೂ ನೋಡುತ್ತಾ ನಾನು ಕಣ್ಣು ತುಂಬಿಕೊಳ್ಳುತ್ತಿರುವಾಗ ಜೇಲಿನೊಳಗೆ ಮಹಾರಾಜಾ ಸಂಸ್ಕೃತ ಕಾಲೇಜಿನ ವೇದ ಆಗಮ ಪುರಾಣಗಳನ್ನು ಓದುತ್ತಿದ್ದ ಇನ್ನೊಂದು ತಂಡವೂ ಸೇರಿಕೊಂಡಿತು. ತಮಾಷೆಯೆಂದರೆ ವಿಶ್ವ ಕನ್ನಡ ಮೇಳವನ್ನು ಉಗ್ರವಾಗಿ ಪ್ರತಿಭಟಿಸಿ ಜೇಲುಪಾಲಾದ ನಾವು ಜೇಲಿನೊಳಗಡೆ ಜಂಬದಲ್ಲಿ ಓಡಾಡುತ್ತಿದ್ದರೆ ಸಂಸ್ಕೃತ ಕಾಲೇಜಿನ ಈ ಆಗಮಿಕರು ಮಕ್ಕಳಂತೆ ಅಳಲು ತೊಡಗಿದ್ದರು. ಏಕೆಂದರೆ ಏನೂ ತಪ್ಪು ಮಾಡದೆ, ಏನನ್ನೂ ಪ್ರತಿಭಟಿಸದೆ, ತಾವಾಯಿತು ತಮ್ಮ ವೇದಪುರಾಣಶ್ಲೋಕಗಳಾಯಿತು ಎಂಬಂತೆ ಬದುಕುತ್ತಿದ್ದ ಈ ಸಂಸ್ಕೃತದ ಹುಡುಗರು ಪೋಲೀಸು ಬೇಹುಗಾರನೊಬ್ಬನ ತಪ್ಪು ಮಾಹಿತಿಯಿಂದಾಗಿ ಜೇಲುಪಾಲಾಗಿದ್ದರು.

ನಡೆದ ಸಂಭವ ಇಷ್ಟೇ. ಮೈಸೂರು ಅರಮನೆಯ ಎದುರಿಗಿರುವ ಸಂಸ್ಕೃತ ಕಾಲೇಜಿನಲ್ಲಿ ಓದುತ್ತಿದ್ದ ಈ ಹುಡುಗರಿಗೆ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಾದರೂ ಸ್ವಲ್ಪ ಕನ್ನಡದ ಕುರಿತು ಆಳವಾಗಿ ತಿಳಿದುಕೊಳ್ಳುವ ಹಂಬಲ ಉಂಟಾಗಿತ್ತು. ಅದಕ್ಕಾಗಿ ಅವರು ಅರಮನೆಯ ಕೋಟೆಯೊಳಗಿರುವ ದೇಗುಲದ ಅಂಗಳದಲ್ಲಿ ಕನ್ನಡ ಉಪನ್ಯಾಸಕರಿಂದ ಪಂಪನಿಂದ ಹಿಡಿದು ಮಹಾದೇವರವರೆಗೆ ಉಪನ್ಯಾಸಗಳನ್ನು ಏರ್ಪಡಿಸಿದ್ದರು. ಸಮ್ಮೇಳನಕ್ಕಿಂತ ಹತ್ತು ದಿನಗಳ ಮೊದಲು ಆರಂಭವಾಗಿದ್ದ ಈ ಉಪನ್ಯಾಸ ಮಾಲಿಕೆ ಸಾಂಗವಾಗಿ ಮುಗಿದದ್ದೇ ಆದಲ್ಲಿ ಅವರೆಲ್ಲರೂ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡು ಸಮ್ಮೇಳನದಲ್ಲಿ ಲಗುಬಗೆಯಿಂದ ಪಾಲುಗೊಳ್ಳಬೇಕಾಗಿತ್ತು. ಆದರೆ ಓರ್ವ ಅತ್ಯುತ್ಸಾಹೀ ಪೋಲೀಸ್ ಬೇಹುಗಾರನ ಅಚಾತುರ್ಯದಿಂದಾಗಿ ಅವರೆಲ್ಲರೂ ಜೇಲುಪಾಲಾಗಿ ಜೇಲೊಳಗೆ ಅಳುತ್ತಾ ಕೂರಬೇಕಾಯಿತು.

ಆದದ್ದು ಇಷ್ಟೇ. ಆವತ್ತು ಉಪನ್ಯಾಸದ ಒಂಬತ್ತನೇ ದಿನ. ವಿಷಯ:ಕುವೆಂಪು ಅವರ ಸಾಹಿತ್ಯ. ಉಪನ್ಯಾಸಕರು: ಮೈಸೂರಿನ ವಿಚಾರವಾದಿಗಳೂ, ಹೋರಾಟಗಾರರೂ ಹಾಗೂ ಕನ್ನಡ ಅದ್ಯಾಪಕರೂ ಆದ ಪ್ರೊಫೆಸರ್ ಕೆ.ರಾಮದಾಸ್ ಅವರು. ರಾಮದಾಸ್ ಅವರಿಗೆ ಉಪನ್ಯಾಸ ಮಾಡುವಾಗ ಕೈಗಳನ್ನು ಜೋರಾಗಿ ಅತ್ತಿತ್ತ ಅಲ್ಲಾಡಿಸುತ್ತಾ ತೋರಿಸುವುದು ಒಂದು ಅಭ್ಯಾಸ. ಅವರ ಈ ಅಭ್ಯಾಸವೇ ಈ ಸಂಸ್ಕೃತದ ಹುಡುಗರಿಗೆ ಮುಳುವಾಗಿದ್ದು. ಸಂಜೆ ಸಂಜೆ ಕತ್ತಲಲ್ಲಿ ಕೋಟೆಯೊಳಗಿನ ದೇಗುಲದ ಪ್ರಾಂಗಣದಲ್ಲಿ ಹೋರಾಟಗಾರ ರಾಮದಾಸರು ಜೋರಾಗಿ ಕೈಗಳನ್ನು ಬೀಸುತ್ತಾ ಸಂಸ್ಕೃತ ಕಾಲೇಜಿನ ಹುಡುಗರಿಗೆ ಕುವೆಂಪು ಕಾವ್ಯದಲ್ಲಿ ಪೃಕೃತಿಯನ್ನು ವರ್ಣಿಸುತ್ತಿರಬೇಕಾದರೆ ಅಲ್ಲೇ ಸಿವಿಲ್ ಡ್ರೆಸ್ಸಿನಲ್ಲಿ ನಿಂತು ಬೇಹುಗಾರಿಕೆ ನಡೆಸುತ್ತಿದ್ದ ಗುಪ್ತಚರ ಪೋಲೀಸನಿಗೆ ಅದು ಹೋರಾಟದ ಕರೆಯಂತೆ ಕಂಡು ಮೇಲದಿಕಾರಿಗಳಿಗೆ ವೈರ್ ಲೆಸ್ಸಿನಲ್ಲಿ ಸುದ್ದಿ ಮುಟ್ಟಿಸಿದ್ದ. ಹಾಗಾಗಿ ವಿಚಾರವಾದಿ ರಾಮದಾಸರ ಜೊತೆ ಆಗಮಿಕಶಾಸ್ತ್ರದ ಈ ಹುಡುಗರೂ ಜೇಲುಪಾಲಾಗಿ ಅಳುತ್ತಾ ಕೂರಬೇಕಾಯಿತು.

ಹೀಗೆ ಮೂವತ್ತು ವರ್ಷಗಳ ಹಿಂದೆ ಜೇಲಿನಲ್ಲಿ ಎರಡು ಹಗಲು ಎರಡು ಇರುಳು ಜೊತೆಗಿದ್ದ ಈ ಮರಿಸ್ವಾಮಿಗಳು ಮತ್ತು ನಾನು ಇಂದು ಬೆಳಗ್ಗೆ ರಾಜ್ಯೋತ್ಸವದ ಭಾಷಣದ ಮೊದಲು ಭೇಟಿಯಾಗಿದ್ದು. 7ನಾವಿಬ್ಬರೂ ಜೇಲಿನೊಳಗೆ ಜೊತೆಗೆ ಕಂಡದ್ದು, ಅನುಭವಿಸಿದ್ದು, ಕಷ್ಟಸುಖಗಳನ್ನು ಹಂಚಿಕೊಂಡಿದ್ದು, ಜೇಲಿನೊಳಗಡೆ ನಾವು ಕಂಡ ಖಳರು, ಕೊಲೆಗಾರರು ಮತ್ತು ನಮ್ಮಂತೆಯೇ ಇದ್ದ ಪಾತಕಿಗಳು. ಹಾಗೆ ನೋಡಿದರೆ ನಾವೆಲ್ಲರೂ ಕನ್ನಡಿಗರು ಮತ್ತು ಮನುಷ್ಯರು ಮತ್ತು ಸಣ್ಣ ಪುಟ್ಟ ಆಕಸ್ಮಿಕಗಳಿಂದಾಗಿ ಹೀಗೆ ಬದುಕುತ್ತಿರುವವರು ಎಂದೆಲ್ಲಾ ಮಾತಾಡಿಕೊಂಡೆವು.