ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು ಎಂದು ಈ ವ್ಯಕ್ತಿ ಬಯಸುವಷ್ಟು ಒಳ್ಳೆಯವನಾಗಿದ್ದನೇ ಆ ರಾಮಣ? ಎಂಬ ಪರಮಾಶ್ಚರ್ಯ ಅವರಿಬ್ಬರಿಗುಂಟಾಯಿತು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ “ಗುಲಾಬಿಪುರದ ಮುಳ್ಳು” ನಿಮ್ಮ ಓದಿಗೆ

ತಿಮ್ಮಪ್ಪಯ್ಯ ಭಟ್ಟರ ಪುಟ್ಟ ಹೋಟೆಲ್‍ನೊಳಕ್ಕೆ ಅನ್ಯಗ್ರಹ ಜೀವಿಯಂತೆ ಕಾಲಿಟ್ಟ ವ್ಯಕ್ತಿ ರಾಮಣನ ಬಗ್ಗೆ ವಿಚಾರಿಸಿ, ರಾಮಣ ತೀರಿಹೋಗಿ ವಾರ ಕಳೆಯಿತು ಎಂಬ ಸುದ್ದಿಯನ್ನು ಕೇಳಿದ ಕೂಡಲೇ ವ್ಯಕ್ತಪಡಿಸಿದ ತೀವ್ರವಾದ ವಿಷಾದ, ಏನೆಂದರೆ ಏನೂ ಕೆಲಸವೇ ಇಲ್ಲದವರಂತೆ ಮುರುಕು ಬೆಂಚಿಗೆ ತಳವೂರಿ ಮುಕ್ಕಾಲು ಗಂಟೆಯಿಂದ ಕುಳಿತಿದ್ದ ವೆಂಕಪ್ಪ- ಅಣ್ಣು ಇಬ್ಬರ ಕಣ್ಣುಗಳನ್ನೂ ಕಾಸಗಲವಾಗಿಸಿತು. ರಾಮಣನ ಸಾವಿಗೂ ಮರುಕಪಡುವವರಿದ್ದಾರೆಯೇ?! ಎಂಬ ಸೋಜಿಗ ಅವರನ್ನಾವರಿಸಿತು. ಆ ಸೋಜಿಗದ ಮುಂದೆ ಅವರ ಗಂಟಲು ದಾಟಿದ್ದ ಗೋಳಿಬಜೆಯ ರುಚಿ ಅವರಿಗೆ ಏನೇನೂ ಅಲ್ಲ ಎನಿಸಿತು. ಬಂದ ವ್ಯಕ್ತಿಗೆ ಕುಳಿತುಕೊಳ್ಳಲು ಸೂಚಿಸಿದ ತಿಮ್ಮಪ್ಪಯ್ಯ ಭಟ್ಟರು “ತಿನ್ನುವುದಕ್ಕೆ ಏನು ಕೊಡಲಿ?” ಎಂದು ಕೇಳಿ, ತಕ್ಷಣವೇ “ದೋಸೆ, ಗೋಳಿಬಜೆ, ಬನ್ಸ್, ಚಪಾತಿ, ಪರೋಟಾ, ಚಟ್ಟಂಬಡೆ…” ಎಂದು ತಮ್ಮ ಹೋಟೆಲ್‍ನಲ್ಲಿ ಆ ವೇಳೆಗೆ ದೊರೆಯದಿರುವ ತಿಂಡಿಗಳ ಹೆಸರನ್ನೂ ಹೇಳಿ, ಆಗಂತುಕನ ದೃಷ್ಟಿಯಲ್ಲಿ ತಮ್ಮ ಮುರುಕು ಹೋಟೆಲನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಿದರು. ಆದರೆ ಆ ವ್ಯಕ್ತಿ ತಿಂಡಿ ತಿನ್ನುವ ಮನಃಸ್ಥಿತಿಯಲ್ಲಿ ಇರಲಿಲ್ಲ. “ನನಗೆ ಅವರು ಬದುಕಿಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳುವುದಕ್ಕೇ ಆಗುತ್ತಿಲ್ಲ. ದೇವರಂಥಾ ಮನುಷ್ಯ. ಇಷ್ಟು ಬೇಗ ಹೋಗಬಾರದಿತ್ತು” ಎಂದವರು ಅತೀವ ಖೇದದಿಂದ ತಲೆ ಕೊಡವಿದರು.

ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು ಎಂದು ಈ ವ್ಯಕ್ತಿ ಬಯಸುವಷ್ಟು ಒಳ್ಳೆಯವನಾಗಿದ್ದನೇ ಆ ರಾಮಣ? ಎಂಬ ಪರಮಾಶ್ಚರ್ಯ ಅವರಿಬ್ಬರಿಗುಂಟಾಯಿತು. ಮರುಗಳಿಗೆಯೇ, ಈ ವ್ಯಕ್ತಿ ಆ ಬಿಕನಾಸಿ ರಾಮಣನ ಕುರಿತು ವ್ಯಂಗ್ಯವಾಡುತ್ತಿರಬಾರದೇಕೆ? ಎಂಬ ಸಂಶಯವೂ ಕಾಡಿತು. ಇದನ್ನು ಕೂಲಂಕಷವಾಗಿ ವಿಚಾರಿಸಿಯೇ ತೀರಬೇಕು ಎಂದು ಅಂದುಕೊಂಡ ಅವರಿಬ್ಬರು ಹಿಂದಿನ ಬೆಂಚಿನಿಂದ ವ್ಯಕ್ತಿಯಿದ್ದ ಮುಂದಿನ ಬೆಂಚಿನೆಡೆಗೆ ತಾತ್ಕಾಲಿಕ ಪ್ರಮೋಷನ್ ಪಡೆದುಕೊಂಡರು.

*****

‘ರಾಮಣ’ ಎಂಬ ಉಚ್ಛಾರಣೆ ಕೇಳಿದ ತಕ್ಷಣ ತಪ್ಪು ಉಚ್ಛಾರಣೆಯಿದು ಎಂದು ಅಂದುಕೊಳ್ಳುವವರೇ ಜಾಸ್ತಿ. ಆದರೆ ಅಂತಹದ್ದೊಂದು ತಪ್ಪು ಉಚ್ಚಾರ ವ್ಯಕ್ತಿಯೊಬ್ಬನ ಹೆಸರಾಗಿ ಗುಲಾಬಿಪುರದ ಜನತೆಯ ಬಾಯಲ್ಲಿ ಸದಾ ನಲಿದಾಡುತ್ತಿತ್ತು ಎನ್ನುವುದು ನಿಜ. ರಾಮಣ್ಣ ಎಂಬ ಹೆಸರು ರಾಮಣ ಆಗಿ ಬದಲಾದುದೇ ಒಂದು ಅಚ್ಚರಿಯ ಸಂಗತಿ.

ಐವರು ಹೆಣ್ಣುಮಕ್ಕಳ ಬಳಿಕ ಜನಿಸಿ, ಗುಲಾಬಿಪುರದ ಹಿರಿಮನೆಯ ಏಕೈಕ ವಂಶೋದ್ಧಾರಕ ಎನಿಸಿದ್ದ ರಾಮಣ್ಣನಿಗೆ ಆಗ ಹದಿನಾರರ ಪ್ರಾಯ. ಗ್ರಾಮದ ದೇವಸ್ಥಾನದ ಜಾತ್ರೆಗೆ ಮನೆಯವರ ಜೊತೆಗೆ ಹೋಗಿದ್ದ ಸಮಯವದು. ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದ ಈತನನ್ನು ಎದುರು ಮನೆಯ ತೊದಲು ಮಾತಿನ ಮಗು ದೊಡ್ಡದಾಗಿ ‘ರಾಮಣ’ ಎಂದು ಕರೆಯಿತು. ಊಟಕ್ಕೆ ಕುಳಿತಿದ್ದವರೆಲ್ಲ ಮುಗುಳ್ನಕ್ಕಾಗ ಮತ್ತಷ್ಟು ಹುರುಪಿನಿಂದ ಆ ಮಗು ‘ರಾಮಣ, ರಾಮಣ, ರಾಮಣ’ ಎಂದು ಹೇಳುತ್ತಾ, ಕೈಗಳನ್ನು ಬಡಿದುಕೊಂಡು ನಗಲಾರಂಭಿಸಿತು. ಪಂಕ್ತಿಯಲ್ಲಿಯೇ ಕುಳಿತಿದ್ದ ರಾಮಣ್ಣನ ಸ್ನೇಹಿತರು, ಸಂಬಂಧಿಕರು ಆ ಮಗುವನ್ನೇ ಅನುಕರಿಸಿದರು. ಊರವರ ಪಾಲಿಗೂ ಆತ ರಾಮಣ ಆಗಿಬಿಟ್ಟ. ಹೀಗೆ ಹಿರಿಮನೆಯ ಚಿಕ್ಕಧಣಿ ರಾಮಣ್ಣನಾಗಿದ್ದವ ಊರಜಾತ್ರೆಯ ಬಳಿಕ ರಾಮಣನಾಗಿ ಬದಲಾದ. ಅವನ ತಂದೆ- ತಾಯಿ ಬಿಟ್ಟರೆ ಮತ್ತೆಲ್ಲರೂ ಆತನನ್ನು ರಾಮಣ ಎಂದೇ ಕರೆಯತೊಡಗಿದರು.

ಇಂತಹ ರಾಮಣನನ್ನು ರಾವಣನ ಅಪರಾವತಾರ ಎನ್ನುವವರಿದ್ದಾರೆ. ಗುಲಾಬಿಪುರದ ಮುಳ್ಳು ಈತ ಎಂದು ಮಾತನಾಡಿಕೊಳ್ಳುವವರಿದ್ದಾರೆ. ರಾಮಣನ ಹಿಂದಿನಿಂದ ಹೀಗೆಲ್ಲ ಆಡಿಕೊಳ್ಳುವವರಿಗೆ ಅವನ ಎದುರಿಗೇ ಹೀಗೆ ಹೇಳುವ ಧೈರ್ಯ ಇರಲಿಲ್ಲ ಎನ್ನುವುದು ವಾಸ್ತವ. ತನ್ನಲ್ಲಿದ್ದ ಕೋಪ, ಹಠಮಾರಿತನದಿಂದಾಗಿ ಯೌವ್ವನಕ್ಕೆ ಕಾಲಿಡುವಾಗಲೇ ಕೆಲವರ ವಿರೋಧ ಕಟ್ಟಿಕೊಂಡಿದ್ದ ರಾಮಣ ಊರಿನ ಅಷ್ಟೂ ಜನರ ಮನಸ್ಸಿನೊಳಗೆ ಖಳನಾಯಕನಾಗಿ ರೂಪುಗೊಳ್ಳುವುದಕ್ಕೆ ಕಾರಣವಾದದ್ದು ಅದೊಂದು ಘಟನೆ.

ಗುಲಾಬಿಪುರದ ಎಲ್ಲಾ ಜನರೂ ಪ್ರತೀ ವರ್ಷವೂ ಗಣೇಶೋತ್ಸವವನ್ನು ಭರ್ಜರಿಯಿಂದ ಆಚರಿಸುತ್ತಿದ್ದರು. ಪಕ್ಕದ ಊರಾಗಿರುವ ಮಲ್ಲಿಗೆಪುರದಲ್ಲಿಯೂ ಅದೇ ವಾತಾವರಣ. ಎರಡೂ ಊರಿನ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುತ್ತಿದ್ದದ್ದು ಒಂದೇ ಕೆರೆಯಲ್ಲಿ. ಗುಲಾಬಿಪುರದ ಗಣೇಶೋತ್ಸವದ ಸಂಪೂರ್ಣ ಉಸ್ತುವಾರಿಯನ್ನು ಹಿರಿಮನೆಯವರೇ ಲಾಗಾಯ್ತಿನಿಂದಲೂ ವಹಿಸಿಕೊಂಡು ಬಂದಿದ್ದರು. ಈ ವರ್ಷ ರಾಮಣನ ತಂದೆ ತೀರಿಹೋಗಿದ್ದರಿಂದ ಹೊಣೆಗಾರಿಕೆಯೆಲ್ಲವೂ ರಾಮಣನ ಹೆಗಲನ್ನು ಅರಸಿಕೊಂಡು ಬಂದಿತ್ತು.

ದೊಡ್ಡ ಕಾರ್ಯಕ್ರಮವೊಂದರ ಜವಾಬ್ದಾರಿ ಹೊತ್ತಿದ್ದ ತರುಣ ರಾಮಣನಿಗೆ ಕಾರ್ಯಕ್ರಮವನ್ನು ಸಾಂಗವಾಗಿ ನೆರವೇರಿಸಿಕೊಡುವ ಉಮೇದು ಲೆಕ್ಕಕ್ಕಿಂತ ಜಾಸ್ತಿಯೇ ಇತ್ತು. ಎರಡು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮುಗಿಸಿದ ಉತ್ಸಾಹದಲ್ಲಿ ಮೂರನೆಯ ದಿನ ವಾಡಿಕೆಯಂತೆ ಗಣೇಶ ಮೂರ್ತಿಯ ವೈಭವದ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಆನಂದಣ್ಣನ ಗೂಡಂಗಡಿಯ ಹತ್ತಿರಕ್ಕೆ ತಲುಪುತ್ತಿದ್ದಂತೆ ಮಲ್ಲಿಗೆಪುರದ ಗಣೇಶೋತ್ಸವದ ಮೆರವಣಿಗೆಯೂ ಅದೇ ದಾರಿಯಾಗಿ ಬಂದಿತ್ತು. ಮೂರ್ತಿ ವಿಸರ್ಜನೆಯ ಕೆರೆ ಒಂದೇ ಆಗಿರುವುದರಿಂದ ಎರಡೂ ಊರಿನವರ ಮೆರವಣಿಗೆ ಜೊತೆಜೊತೆಯಾಗಿಯೇ ಸಾಗಲಾರಂಭಿಸಿತು.

ಇನ್ನೇನು ಕೆರೆ ಸಮೀಪಿಸಿತು ಎನ್ನುವಾಗ ಮೆರವಣಿಗೆಯ ಮಧ್ಯಭಾಗದಲ್ಲಿದ್ದ ತರುಣರ ಗುಂಪೊಂದು ಗದ್ದಲ ಎಬ್ಬಿಸಲಾರಂಭಿಸಿತ್ತು. ಆ ಗುಂಪಿನಲ್ಲಿದ್ದವರು ಗುಲಾಬಿಪುರದ ಆರು ಮಂದಿ ಯುವಕರು. ಅವರು ಮಲ್ಲಿಗೆಪುರದ ಪಟೇಲರ ಬಗ್ಗೆ ಏನೇನೋ ಕೆಟ್ಟದಾಗಿ, ಅವಾಚ್ಯವಾಗಿ ಮಾತನಾಡಲಾರಂಭಿಸಿದ್ದರು. ಹಾಗೆಂದು ಅವರ್ಯಾರೂ ಮದ್ಯದ ಅಮಲಿನಲ್ಲಿದ್ದವರಲ್ಲ. ಗುಲಾಬಿಪುರದ ಯುವಕರ ಈ ಮಾತುಗಳು ಮಲ್ಲಿಗೆಪುರದ ಯುವಕರನ್ನು ಕೆರಳಿಸಿದವು. ಸಂಭ್ರಮದ ಸಂದರ್ಭ ಸಂಘರ್ಷದ ಸನ್ನಿವೇಶವಾಗಿ ಮಾರ್ಪಾಡಾಯಿತು. ಅತಿರೇಕದ ಮಾತುಗಳು, ಲಘು ಹೊಡೆದಾಟ ಎಲ್ಲವೂ ಮುಗಿದ ಬಳಿಕ ಆ ಆರು ಮಂದಿ ಯುವಕರನ್ನು ಬೈದು, ವಿಚಾರಿಸಿದಾಗ ಅವರು ಹೇಳಿದ ಮಾತು ಸೇರಿದ್ದವರನ್ನು ದಂಗುಬಡಿಸಿತು. “ನಮ್ಮ ರಾಮಣ ಧಣಿಗಳೇ ಹೀಗೆ ಮಾಡಬೇಕೆಂದು ಹೇಳಿದ್ದು. ನಮಗೇನೂ ಗೊತ್ತಿಲ್ಲ. ನಮ್ಮನ್ನೇನೂ ಮಾಡಬೇಡಿ, ದಮ್ಮಯ್ಯ” ಎಂದು ತಲೆತಗ್ಗಿಸಿ ನುಡಿದ ಅವರು ತಕ್ಷಣವೇ ಜನ ಕಡಿಮೆಯಿದ್ದ ಪಾರ್ಶ್ವದಿಂದ ಪಲಾಯನ ಮಾಡಿದ್ದರು.

ಈಗ ಎಲ್ಲರ ದೃಷ್ಟಿ ರಾಮಣನ ಮೇಲಿತ್ತು. ಗುಲಾಬಿಪುರದ ಶ್ರೀಮಂತ ಮನೆತನದವರಾಗಿದ್ದ ಹಿರಿಮನೆಯವರು ಹಾಗೂ ಮಲ್ಲಿಗೆಪುರದ ಪಟೇಲರ ನಡುವೆ ಮನಸ್ತಾಪ ಇದ್ದುದು ಎರಡೂ ಊರಿನವರಿಗೆ ತಿಳಿದಿದ್ದ ವಿಷಯವೇ. ಅದರಲ್ಲಿ ಹೊಸದೇನಿಲ್ಲ. ಆದರೆ ಅದಕ್ಕಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ರಾಮಣ ಬಳಸಿಕೊಂಡುದರ ಬಗೆಗೆ ಊರಿನ ಎಲ್ಲರಿಗೂ ಕೋಪ ಬಂದಿತ್ತು. ರಾಮಣ ಸೂಚಿಸಿದ್ದರಿಂದಲೇ ತಾವು ಹೀಗೆ ಮಾಡಿದ್ದು ಎಂದು ಆರೋಪಿಸಿದವರು ಗುಲಾಬಿಪುರದ ಯುವಕರೇ ಆದುದರಿಂದ ಊರವರೆಲ್ಲರೂ ರಾಮಣ ಮಹಾಕುತಂತ್ರಿ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಅದೂ ಅಲ್ಲದೆ ಗಣೇಶ ಮೂರ್ತಿಯನ್ನು ಎದುರಿಗಿರಿಸಿಕೊಂಡು ಆ ಯುವಕರು ಆ ಮಾತನ್ನು ಹೇಳಿದ್ದರಿಂದ ಆಸ್ತಿಕರನ್ನೇ ಅತಿಯಾಗಿ ಹೊಂದಿದ್ದ ಊರುಗಳೆರಡೂ ಆ ಯುವಕರ ಮಾತಿನಲ್ಲಿ ಸಂಪೂರ್ಣ ವಿಶ್ವಾಸವನ್ನು ಇರಿಸಿದ್ದರು.

“ನಿಮ್ಮ ನಿಮ್ಮ ಜಗಳವನ್ನು ಇನ್ಯಾವತ್ತಾದರೂ ಮಾಡಿಕೊಳ್ಳಬೇಕಿತ್ತು. ಗಣೇಶೋತ್ಸವದಲ್ಲಿ ಅಲ್ಲ” ಅಶರೀರ ವಾಣಿಯಂತಹ ಧ್ವನಿಯೊಂದು ಗುಂಪಿನ ಮಧ್ಯದಿಂದ ಕೇಳಿಬಂತು. “ಅಲ್ಲ ರಾಮಣ, ನಿನ್ನಂತಹ ಜವಾಬ್ದಾರಿ ಇರುವವರೇ ಹೀಗೆ ಮಾಡುವುದಾ? ಇದು ಊರಿಗೇ ನಾಚಿಕೆಗೇಡು” ಸೇರಿದ್ದವರಲ್ಲಿಯೇ ಹಿರೀಕರೆನಿಸಿಕೊಂಡ ಮಹಾಬಲ ಶೆಟ್ಟರು ಸಾಧ್ಯವಾದಷ್ಟೂ ಸಾವಧಾನದಿಂದ ನುಡಿದರು. “ಥೂ, ಇಂಥ ಕರ್ಮಕ್ಕೆ ಈ ಹಬ್ಬ ಯಾಕೆ ಬೇಕಿತ್ತು?” ಕೋಪದಿಂದ ನುಡಿದ ಲಕ್ಷ್ಮಣ ಗೌಡ ತಕ್ಷಣವೇ ರಾಮಣನ ಕ್ರೋಧದ ಮೋರೆ ನೋಡಿ, ಎದೆಯೊಳಗೆ ಅವಲಕ್ಕಿ ಕುಟ್ಟಿದಂತಹ ಅನುಭವವಾಗಿ ಮಾತನ್ನು ಅಲ್ಲಿಗೇ ನಿಲ್ಲಿಸಿದ.

ಆ ಬಳಿಕ ಶುರುವಾದದ್ದು ರಾಮಣನ ಉಗ್ರಾವತಾರ. ಅಲ್ಲಿದ್ದ ಎಲ್ಲರಿಗೂ ನೀರೊಳಗಿದ್ದೂ ಬೆವರಿ ಹೊರಬಂದ ದುರ್ಯೋಧನನನ್ನು ಕಂಡಂತಾಯಿತು. ಅವನ ಧ್ವನಿ, ಆರ್ಭಟವನ್ನು ಕೇಳಿ, ನಡುಗಿದ ಹೆಂಗಸರು ‘ಯಾಕೆ ಬಂದೆವಪ್ಪಾ ನಾವಿಲ್ಲಿಗೆ?’ ಎಂದುಕೊಳ್ಳುವಂತಾಯಿತು. ಮೊದಲಿನಿಂದಲೂ ಆತನನ್ನು ಮನದೊಳಗೇ ದ್ವೇಷಿಸುತ್ತಿದ್ದ ಬಿಸಿರಕ್ತದ ನಾಲ್ಕು ಮಂದಿ ಯುವಕರಿಗೆ ಆತನನ್ನು ಎದುರಿಸುವ ಕೆಚ್ಚು ಮೂಡಿದಂತಾದರೂ, ರಾಮಣನ ಉಗ್ರರೂಪ, ದೊಡ್ಡ ದೊಂಡೆ ಅವರನ್ನು ತಣ್ಣಗಾಗಿಸಿತು.

ವಿಪರೀತವಾಗಿ ಎಗರಾಡಿದ ರಾಮಣ ಬಿರುಗಾಳಿಯಂತೆ ಅಲ್ಲಿಂದ ಹೊರಟುಹೋದ. ಊರಿನವರಲ್ಲಿದ್ದ ಹಬ್ಬದ ಉಲ್ಲಾಸ ಸತ್ತುಹೋಗಿತ್ತು. ಹೆಚ್ಚಿನವರು ಬೇಸರ ವ್ಯಕ್ತಪಡಿಸುತ್ತಾ ಹೊರಟುಹೋದರು. ಅಲ್ಲಿದ್ದ ಹಿರಿಯರು ಪರಸ್ಪರ ಮಾತನಾಡಿಕೊಂಡು, ಮುಂದಿನ ವರ್ಷದಿಂದ ಎರಡೂ ಊರಿನವರು ಬೇರೆ ಬೇರೆ ದಿನ ಗಣೇಶ ಮೂರ್ತಿಯನ್ನು ವಿಸರ್ಜಿಸುವುದೆಂಬ ತೀರ್ಮಾನಕ್ಕೆ ಬಂದರು. ಅಂತಿಮವಾಗಿ ಉಳಿದಿದ್ದ ಕೆಲವೇ ಜನರು ಹೆಜ್ಜೆಗಳ ದೂರದಲ್ಲಿದ್ದ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿ, ತೆರಳಿದರು. ಊರಿನ ಇತಿಹಾಸದಲ್ಲಿ ಎಂದೂ ನಡೆಯದ ವಿದ್ಯಮಾನವೊಂದು ಗಣೇಶೋತ್ಸವ ಸಂದರ್ಭದಲ್ಲಿ ನಡೆದದ್ದು ಊರಿನ ಬಹುತೇಕರ ತಲೆ ಕೆಡುವಂತೆ ಮಾಡಿತ್ತು. ಹೀಗೆ ಈ ಘಟನೆಯ ಬಳಿಕ ರಾಮಣ ಊರವರೆಲ್ಲರ ಕಣ್ಣಿನಲ್ಲೂ ರಾವಣನಾಗಿಬಿಟ್ಟ.

ವರ್ಷ ವರ್ಷ ಸುರಿದ ಮಳೆನೀರು ರಾಮಣನ ಕುರಿತಾಗಿ ಊರವರಿಗಿದ್ದ ಅಸಹನೆಯ ತೀವ್ರತೆಯನ್ನು ಒಂದಷ್ಟು ತೊಳೆಯಿತಾದರೂ ಸಂಪೂರ್ಣವಾಗಿ ಅಲ್ಲ. ಊರವರು ರಾಮಣನ ಎಲ್ಲಾ ಮಾತು- ಕಾರ್ಯಗಳನ್ನು ಸಂಶಯದ ದೃಷ್ಟಿಯಿಂದಲೇ ನೋಡತೊಡಗಿದರು. ಹಾಗೆಂದು ಯಾರೂ ಅವನನ್ನು ಎದುರಿನಿಂದ ಬೈಯ್ಯುತ್ತಿರಲಿಲ್ಲ. ಊರಿನ ಪ್ರತಿಷ್ಠಿತ ಮನೆ ಅವನದಾಗಿದ್ದು, ಊರಿನ ಬಹುತೇಕರು ಒಂದಿಲ್ಲೊಂದು ರೀತಿಯಲ್ಲಿ ಆ ಮನೆಯ ಜೊತೆಗೆ ವ್ಯಾವಹಾರಿಕವಾದ ಇಲ್ಲವೇ ಭಾವನಾತ್ಮಕವಾದ ಸಂಬಂಧ ಹೊಂದಿದ್ದರಿಂದ ಅವನಿಗೆ ವಿಧೇಯತೆಯನ್ನು ತೋರ್ಪಡಿಸಿದಂತೆ ನಟಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವನು ಯಾರಿಗೂ ಬಗ್ಗದ, ಯಾರೆದುರೂ ಜಗ್ಗದ ಮಹಾ ಹಠಮಾರಿ ವ್ಯಕ್ತಿತ್ವದವನು ಎನ್ನುವುದು ಜನಜನಿತವಾಗಿದ್ದುದರಿಂದ ನಟನೆಯ ವಿನಯಶೀಲತೆಯನ್ನಾದರೂ ವ್ಯಕ್ತಪಡಿಸುವುದು ಊರಿನವರ ಅನಿವಾರ್ಯತೆಯಾಗಿತ್ತು.

ಹೀಗಿದ್ದ ರಾಮಣ ಗಣೇಶೋತ್ಸವದ ಗದ್ದಲ ನಡೆದ ಮರುವರ್ಷದಿಂದಲೇ ಊರಿನ ಪ್ರಾಥಮಿಕ ಶಾಲೆಯ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡಲಾರಂಭಿಸಿದ. “ಕುತಂತ್ರ ಬಯಲಾಯಿತಲ್ಲಾ, ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಅಷ್ಟೇ. ಇಲ್ಲವಾದರೆ ಇವನ ಅಪ್ಪನಿಗಿರದ ಕಾಳಜಿ ಇವನಿಗೆಂಥದ್ದಪ್ಪಾ? ಹಣ ಕೊಟ್ಟು ಊರವರನ್ನು ತನ್ನ ಜೇಬಿಗಿಳಿಸಿಕೊಳ್ಳುವ ಹುನ್ನಾರ” ಎಂದು ಬಹುತೇಕರು ಮಾತನಾಡಿಕೊಂಡಿದ್ದರು. ಆಶ್ಚರ್ಯದ ಸಂಗತಿಯೆಂದರೆ, ತನ್ನ ಬುದ್ಧಿವಂತ ಮಗಳ ನೆಪದಲ್ಲಿ ಧನಸಹಾಯ ಪಡೆದುಕೊಂಡಿದ್ದ ಕರಿಯನೂ ಕೂಡಾ ಹೀಗೆ ಮಾತನಾಡಿಕೊಳ್ಳುವವರ ಗುಂಪಿನ ಸದಸ್ಯನೇ ಆಗಿದ್ದ. “ನೀನು ಅವನಿಂದ ಧನಸಹಾಯ ಪಡೆದುಕೊಂಡಿದ್ದೀಯಲ್ಲಾ. ನಿನಗೆ ಅವನ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ ಬಿಡು” ಎಂದು ಕರಿಯನಿಗೆ ರಾಮ ಸಫಲಿಗ ಹೇಳಿದ್ದ. “ನಾನು ತೆಗೆದುಕೊಳ್ಳುವುದು ಬೇಡ ಅಂತಲೇ ಇದ್ದೆ. ಆದರೆ ನನ್ನ ಮಗಳು, ಅವಳಿನ್ನೂ ಚಿಕ್ಕವಳು. ಅವಳಿಗೆ ಅದೆಲ್ಲಾ ಗೊತ್ತಾಗುವುದಿಲ್ಲ. ಅವಳ ಆಸೆಗೆ ಅಡ್ಡಿ ಬರುವುದು ಬೇಡ ಅಂತ ತೆಗೆದುಕೊಂಡೆ ಅಷ್ಟೇ. ಅಷ್ಟಕ್ಕೂ ಅವ ಹಣ ಕೊಡುತ್ತಿರುವುದು ಕುತಂತ್ರ. ಅವನ ಆ ಕಂತ್ರಿಬುದ್ಧಿಗೆ ನಾವೂ ಅವನಿಂದ ಹಣ ತೆಗೆದುಕೊಂಡು, ಅವನ ಹಣವೆಲ್ಲಾ ಖಾಲಿಯಾಗುವ ಹಾಗೆ ಮಾಡಿ, ಅವನಿಗೆ ಬುದ್ಧಿ ಕಲಿಸಬೇಕು. ಶ್ರೀಕೃಷ್ಣ ಹೇಳಿದ್ದಾನಲ್ಲ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತ” ಎಂದು ಕರಿಯ ಹೇಳುವ ಮೂಲಕ ರಾಮ ಸಫಲಿಗನ ಕಣ್ಣಿಗೆ ಏಕಕಾಲಕ್ಕೆ ಆರ್ಥಿಕ ತಜ್ಞನಾಗಿ, ವೇದಾಂತಿಯಾಗಿ, ಮಹಾನ್ ಜ್ಞಾನಿಯಾಗಿ ಗೋಚರಿಸಿದ್ದ.

ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದ ಈತನನ್ನು ಎದುರು ಮನೆಯ ತೊದಲು ಮಾತಿನ ಮಗು ದೊಡ್ಡದಾಗಿ ‘ರಾಮಣ’ ಎಂದು ಕರೆಯಿತು. ಊಟಕ್ಕೆ ಕುಳಿತಿದ್ದವರೆಲ್ಲ ಮುಗುಳ್ನಕ್ಕಾಗ ಮತ್ತಷ್ಟು ಹುರುಪಿನಿಂದ ಆ ಮಗು ‘ರಾಮಣ, ರಾಮಣ, ರಾಮಣ’ ಎಂದು ಹೇಳುತ್ತಾ, ಕೈಗಳನ್ನು ಬಡಿದುಕೊಂಡು ನಗಲಾರಂಭಿಸಿತು. ಪಂಕ್ತಿಯಲ್ಲಿಯೇ ಕುಳಿತಿದ್ದ ರಾಮಣ್ಣನ ಸ್ನೇಹಿತರು, ಸಂಬಂಧಿಕರು ಆ ಮಗುವನ್ನೇ ಅನುಕರಿಸಿದರು.

ಇದಾದ ಮರುವರ್ಷ ರಾಮಣ ಊರಿನ ಜಾತ್ರೆಯಲ್ಲಿ ಕೆಳಜಾತಿಯವರ ಜೊತೆಗೆ ಕುಳಿತು ಊಟ ಮಾಡಿದಾಗ ಮತ್ತೊಮ್ಮೆ ಊರಿನ ಬಹುತೇಕರ ಚರ್ಚೆಯ ಕೇಂದ್ರಬಿಂದುವಾದ. “ಧಣಿಗಳಿಗೆ ಸ್ವಲ್ಪವೂ ಅಹಂಕಾರವೇ ಇಲ್ಲ. ನಮ್ಮ ಜೊತೆಗೆ ಕೂತು ಊಟ ಮಾಡಬೇಕಾದರೆ ಅದೆಷ್ಟು ಪ್ರೀತಿ ಇದೆ ನಮ್ಮ ಮೇಲೆ! ಹಿಂದಿನ ಧಣಿಗಳು ಒಳ್ಳೆಯವರಾಗಿದ್ದರೂ ಹೀಗಿರಲಿಲ್ಲ. ಇವರು ತುಂಬಾ ಒಳ್ಳೆಯವರು” ಎಂದು ಹೇಳುವ ವರ್ಗ ರೂಪುಗೊಂಡಿತ್ತು. “ನಾಳೆ ದಿನ ನಾವೆಲ್ಲಾ ಅವನ ವಿರುದ್ಧ ದಂಗೆ ಎದ್ದರೆ ಅವರಾದರೂ ಬೇಕಲ್ಲ ಬೆಂಬಲಕ್ಕೆ. ಆ ದುರಾಲೋಚನೆ ಅವನಿಗೆ” ಎಂಬ ಮಾತುಗಳನ್ನು ಶೀನಪ್ಪ ತನ್ನ ದೋಸ್ತಿಗಳೆದುರು ಆಡಿದ್ದ. ಎರಡು ಸಲ ಹಾರ್ಟ್ ಆಪರೇಶನ್, ಒಂದು ಸಲ ಮೂಲವ್ಯಾಧಿ ಆಪರೇಶನ್ ಮಾಡಿಸಿಕೊಂಡಿದ್ದಾನೆ ಶೀನಪ್ಪ. ಇಂತಹ ಶೀನಪ್ಪನಿಗೆ ರಾಮಣನ ವಿರುದ್ಧ ದಂಗೆ ಏಳುವ ಸಾಮರ್ಥ್ಯ ಬಿಡಿ, ಸರಿಯಾಗಿ ನಿಂತುಕೊಳ್ಳುವ ತ್ರಾಣವೇ ಇಲ್ಲ ಎನ್ನುವುದು ಅವನ ಆ ದೋಸ್ತಿಗಳೆಲ್ಲರಿಗೂ ತಿಳಿದಿದ್ದ ವಿಚಾರ. ಆದರೂ ಸುಮ್ಮನೆ ಹೂಂಗುಟ್ಟಿದ್ದರು. ರಾಮಣನ ಈ ನಿರ್ಧಾರ ಜಾತಿವಾದವನ್ನು ಬಲವಾಗಿ ನೆಚ್ಚಿಕೊಂಡಿದ್ದ ಕೆಲವರ ಕಣ್ಣು ಕೆಂಪಾಗಿಸಿದ್ದು ಸುಳ್ಳಲ್ಲ. ತಮ್ಮ ಜಾತಿಗೆ ಊರಿನಲ್ಲಿ ಮೂರು ಪೈಸೆಯ ಬೆಲೆ ಇಲ್ಲದಂತೆ ಮಾಡಿಬಿಡುತ್ತಾನೆ ಎಂಬ ಆತಂಕ ಅವರಲ್ಲಿದ್ದುದು ರಾಮಣನ ವಿರುದ್ಧದ ಸಿಟ್ಟಿಗೆ ಎಡೆಮಾಡಿಕೊಟ್ಟಿತ್ತು. ವಿರೋಧಗಳಿಗೆ ಸೊಪ್ಪುಹಾಕದ ಜಾಯಮಾನದವನಾಗಿದ್ದ ರಾಮಣ ಪ್ರತೀ ವರುಷವೂ ಕೆಳಜಾತಿಯವರೊಂದಿಗೆ ಊಟ ಮಾಡುವ ಪದ್ಧತಿಯನ್ನು ಮುಂದುವರಿಸಿದ್ದ.

ಹೀಗೆ ಕೆಳಜಾತಿಯವರ ವಿಶ್ವಾಸಕ್ಕೆ ಪಾತ್ರನಾದ ರಾಮಣ ಐದಾರು ವರುಷಗಳಲ್ಲಿಯೇ ಅದನ್ನು ಕಳೆದುಕೊಳ್ಳುವ ಸಂದರ್ಭವೂ ಸೃಷ್ಟಿಯಾಯಿತು. ಹರಿಜನ ಕೇರಿಯ ತನಿಯ ರಾಮಣನ ಮನೆಯ ನಂಬಿಕಸ್ಥ ಕೆಲಸದಾಳು. ಭೂಮಸೂದೆ ಜಾರಿಗೊಳ್ಳುವ ಮೊದಲು ತನಿಯನ ತಂದೆ ಚೋಮ ಅವರ ಮನೆಯ ಮೂಲದಾಳು ಆಗಿದ್ದವನು. ಚೋಮನಂತೂ ಶ್ರಮಜೀವಿ. ದುಡಿಯುವುದಕ್ಕೆಂದು ಕಟಿಬದ್ಧನಾಗಿ ನಿಂತರೆ ಅವನನ್ನು ಮೀರಿಸುವವರೇ ಇರಲಿಲ್ಲ ಎನ್ನುವುದು ಗುಲಾಬಿಪುರದ ಹಳೇಹುಲಿಗಳು ಈಗಲೂ ಹೇಳುವ ಮಾತು. ತನಿಯ ಇನ್ನೊಂದು ಜನ್ಮ ಪಡೆದುಬಂದರೂ ಅವನ ಅಪ್ಪನಂತಹ ಗೆಯ್ಮೆಗಾರನಾಗಲಿಕ್ಕಿಲ್ಲ ಎಂಬ ಅಭಿಪ್ರಾಯ ಈ ಹಿರಿಯರದ್ದಾಗಿತ್ತು. ಅಂಗಯ್ಯ ಪೂಜಾರಿಯ ಸೇಂದಿ ಅಂಗಡಿಯ ಸಮ್ಮೋಹನಕ್ಕೆ ಒಳಗಾಗಿದ್ದ ತನಿಯನಲ್ಲಿ ದುಡಿಮೆಯ ಉತ್ಸುಕತೆ ಇರಲಿಲ್ಲ. ಕೆಲಸ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ ಎಂಬ ಮನೋಭಾವ ಅವನಲ್ಲಿತ್ತು. “ಗಂಜಿಯಲ್ಲಿ ಬಿದ್ದ ನೊಣ ನಿನಗಿಂತ ಚುರುಕಾಗಿರುತ್ತದೆ ಮಾರಾಯ” ಎಂದು ರಾಮಣನಿಂದ ಪದೇ ಪದೇ ಬೈಸಿಕೊಳ್ಳುತ್ತಿದ್ದ ಈ ತನಿಯ ಅದೊಂದು ದಿನ ಅವನಿಂದ ಏಟು ತಿಂದ. ಅವನಿಗೆ ರಾಮಣ ಹೊಡೆದಿದ್ದಾನೆ ಎಂಬ ವಿಚಾರ ಗುಲಾಬಿಪುರದ ಜನರಿಗೆ ತಿಳಿದದ್ದು ಪೋಲೀಸ್ ಜೀಪಿನ ಚಕ್ರಗಳು ಅಲ್ಲಿನ ರಸ್ತೆಯಲ್ಲಿ ಓಡಾಡಿದಾಗಲೇ. ಈ ವಿಚಾರದಲ್ಲಿ ಮಲ್ಲಿಗೆಪುರದ ಪಟೇಲರು ತನಿಯನ ಪರ ನಿಂತರು. ಗುಲಾಬಿಪುರದಲ್ಲಿ ತನ್ನ ಅಧಿಪತ್ಯ ಸಾಧಿಸಲು ಹವಣಿಸುತ್ತಿದ್ದ ಮೂಲೆಮನೆ ಗಂಗಾಧರ ತನಿಯನ ಮನೆಗೇ ಹೋಗಿ, ಆತನಿಗೆ ಸಮಾಧಾನ ಹೇಳಿಬಂದ. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದ ಸಂಜೀವಣ್ಣ ತನಿಯನಿಗೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಭರವಸೆ ನೀಡಿದ. ಹೀಗೆ ಎಲ್ಲರ ಪ್ರಯತ್ನದ ಫಲವಾಗಿ ರಾಮಣನ ವಿರುದ್ಧ ಜಾತಿನಿಂದನೆ, ಹಲ್ಲೆ ಮೊದಲಾದ ಕೇಸುಗಳು ದಾಖಲಾದವು. ಒಂದಷ್ಟು ಸಮಯ ಜೈಲುವಾಸವನ್ನೂ ಅನುಭವಿಸಬೇಕಾಗಿ ಬಂತು. ಈ ಘಟನೆಯ ಬಳಿಕ ರಾಮಣ ಈ ಮೊದಲು ಸಹಪಂಕ್ತಿ ಭೋಜನದ ಮೂಲಕ ಗಳಿಸಿದ್ದ ಕೆಳಜಾತಿಯವರ ವಿಶ್ವಾಸ ಮಣ್ಣುಪಾಲಾಗಿತ್ತು. ಈಗ ಮೂಲೆಮನೆ ಗಂಗಾಧರ ಗುಲಾಬಿಪುರದ ಅಘೋಷಿತ ನಾಯಕನಾಗಿ ರೂಪುಗೊಂಡಿದ್ದ. ರಾಮಣನೆದುರು ತೊಡೆತಟ್ಟುವ ವ್ಯಕ್ತಿಗಾಗಿ ಅರಸುತ್ತಿದ್ದ ಊರಿನ ಬಹುತೇಕರು ಗಂಗಾಧರನನ್ನು ಬಲವಾಗಿ ಅಪ್ಪಿಕೊಂಡಿದ್ದರು.

ಇಷ್ಟೆಲ್ಲಾ ಘಟನೆಗಳು ಕಾಲಕಾಲಕ್ಕೆ ನಡೆಯುತ್ತಿದ್ದಾಗಲೂ ಊರಿನಲ್ಲಿ ತಟಸ್ಥವಾಗಿ ಉಳಿದಿದ್ದ ಇಬ್ಬರು ವ್ಯಕ್ತಿಗಳಿದ್ದರು. ವೆಂಕಪ್ಪ ಮತ್ತು ಅಣ್ಣು. ರಾಮಣನ ಬಗ್ಗೆ ಊರಿಗೂರೇ ಮಾತನಾಡುತ್ತಿದ್ದಾಗಲೂ ಇವರ ನಾಲಗೆ ಹರಿದಾಡಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಇವರಲ್ಲಿ ಊರಿನ ಆಗುಹೋಗುಗಳಿಗೆ ಸ್ಪಂದಿಸದ ತಾಟಸ್ತ್ಯ ಧೋರಣೆ ಇತ್ತು. ಆದರೆ ಆ ಒಂದು ಸಂದರ್ಭ ಇಂತಹ ಪರಮಾದ್ಭುತ ನಿರ್ಲಿಪ್ತರನ್ನೂ ರಾಮಣನ ಪರಮದ್ವೇಷಿಗಳಾಗಿ ಪರಿವರ್ತಿಸಿತು. ವಾರದ ಹಿಂದಷ್ಟೇ ಖರೀದಿಸಿದ್ದ ನೀಲಿ ಬಣ್ಣದ ಓಮ್ನಿ ಕಾರಿನಲ್ಲಿ ಸ್ನೇಹಿತ ಅಣ್ಣುವನ್ನು ಕೂರಿಸಿಕೊಂಡು ವೆಂಕಪ್ಪ ರೈತ ಸಹಕಾರಿ ಸಂಘಕ್ಕೆ ಬಂದಿದ್ದ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ, ಸಂಘದ ಅಧ್ಯಕ್ಷರನ್ನು ಮಾತನಾಡಿಸಿ, ಕುಶಿಕುಶಿಯಿಂದ ಕಾರು ಹತ್ತಿದ್ದ. ಪರಿಚಯದ ಕೆಲವರಲ್ಲಿ ಮಾತನಾಡುತ್ತಾ, ಅವರಿಗೆ ಕೈ ಬೀಸುತ್ತಲೇ ಕಾರನ್ನು ಸ್ಟಾರ್ಟ್ ಮಾಡಿದ್ದ. ರಸ್ತೆಬದಿಯಿಂದ ಕಾರನ್ನು ರಸ್ತೆಗೆ ತೆಗೆದುಕೊಳ್ಳುತ್ತಿದ್ದಾಗಲೇ ಬಂದ ಕಾರು ಈತನ ಕಾರಿನ ಬಲಬದಿಗೆ ಒರೆಸಿತು. ಯಾರಿಗೂ ಏನೂ ಅಪಾಯವಾಗಲಿಲ್ಲ. ಆದರೆ ವಾರದ ಹಿಂದಷ್ಟೇ ತಂದ ತನ್ನ ಹೊಸ ಕಾರಿನ ಒಂದು ಬದಿ ಜಜ್ಜಿಹೋಗಿರುವುದನ್ನು ಕಂಡು ವೆಂಕಪ್ಪನಿಗೆ ಹೃದಯಾಘಾತವಾಗುವುದೊಂದೇ ಬಾಕಿ. ಆ ಕಾರಿನವನ ಜೊತೆಗೆ ಜಗಳಕ್ಕೆ ನಿಂತ. ಆ ಕಾರಿನವ ಬೇರ್ಯಾವುದೋ ಊರಿನವ ಆಗಿದ್ದುದರಿಂದ ವೆಂಕಪ್ಪ ಒಂದು ಸ್ವಲ್ಪವೂ ದಾಕ್ಷಿಣ್ಯ ಇಲ್ಲದೆ ದನಿಯೆತ್ತರಿಸಿ ಮಾತನಾಡಲಾರಂಭಿಸಿದ. ಆ ಕಾರಿನಲ್ಲಿದ್ದ ವ್ಯಕ್ತಿ ಮತ್ತು ವೆಂಕಪ್ಪ- ಅಣ್ಣುವಿನ ಮಧ್ಯೆ ನಡೆಯುತ್ತಿದ್ದ ಮಾತಿನ ಚಕಮಕಿಯನ್ನು ಊರಿನ ಜನ ಸುತ್ತ ನಿಂತು ನೋಡುತ್ತಿದ್ದವರು ಅಬ್ಬರ ಹೆಚ್ಚುತ್ತಿದ್ದಂತೆಯೇ ವೆಂಕಪ್ಪನ ಬೆಂಬಲಕ್ಕೆ ನಿಂತರು. ವಾಸ್ತವವಾಗಿ ಅವರ್ಯಾರಿಗೂ ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವುದು ಗೊತ್ತಿರಲಿಲ್ಲ. ಕಾರುಗಳು ಗುದ್ದಿಕೊಂಡ ಮೇಲಷ್ಟೇ ಅವರು ಆ ಕಡೆಗೆ ಗಮನ ಹರಿಸಿದ್ದು. ಆದರೆ ತಮ್ಮ ಊರಿನವನಾದ ವೆಂಕಪ್ಪನನ್ನು ಯಾರೋ ಪರವೂರಿನವನ ಎದುರು ಬಿಟ್ಟುಕೊಡಬಾರದು ಎಂಬ ಉದ್ದೇಶ ಅವರೆಲ್ಲರಲ್ಲೂ ಇದ್ದಂತೆ ಕಾಣುತ್ತಿತ್ತು. ಅಷ್ಟೂ ಜನರ ಧ್ವನಿಯೆದುರು ಆ ಪರವೂರಿನವನ ಸ್ವರ ಕ್ಷೀಣವಾಗಿತ್ತು.

ವೆಂಕಪ್ಪನಿಗಿಂತಲೂ ಮೊದಲೇ ಸಹಕಾರಿ ಸಂಘಕ್ಕೆ ಬಂದಿದ್ದ ರಾಮಣ ಈಗ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ. ಬುದ್ಧಿ ಇರುವ ಯಾರೇ ಆದರೂ ಊರಿನವನಾದ ವೆಂಕಪ್ಪನ ಪರವಾಗಿಯೇ ಮಾತಾಡುತ್ತಿದ್ದರು. ಆದರೆ ರಾಮಣ ಆ ಪರವೂರಿನವನ ಪರ ನಿಂತ. ಅವನದ್ದೇ ಸರಿ ಎಂದ. ವೆಂಕಪ್ಪನ ಊರಿನ ವ್ಯಕ್ತಿಯಾಗಿದ್ದ ರಾಮಣ ತನ್ನ ಪರವಾಗಿ ಮಾತನಾಡಿದ್ದು ಆ ಪರವೂರಿನ ವ್ಯಕ್ತಿಗೆ ಆನೆಬಲ ನೀಡಿತು. ತನ್ನದೇ ಸರಿ ಎಂದು ಮತ್ತೆ ಪಟ್ಟುಹಿಡಿಯತೊಡಗಿದ. ಮತ್ತೂ ಅನುಮಾನವಿದ್ದರೆ ಪೋಲೀಸರನ್ನು ಕರೆಸೋಣ ಎಂದ. ಅವನ ಉತ್ಸಾಹ ವೆಂಕಪ್ಪನ ಬಾಯಿಮುಚ್ಚಿಸಿತು. ಮೂಲೆಮನೆ ಗಂಗಾಧರ ಈಗ ಇಲ್ಲಿಗೆ ಬಂದಿದ್ದರೆ ತನ್ನ ಪರವಾಗಿ ಮಾತನಾಡುತ್ತಿದ್ದ ಎಂದು ವೆಂಕಪ್ಪನಿಗೆ ಅನಿಸಿತು. “ಪೋಲೀಸ್ ಎಲ್ಲ ಏನೂ ಬೇಡ” ಎಂದು ಹೇಳಿ, ಕಾರು ಹತ್ತಿ ಕುಳಿತುಕೊಳ್ಳುವಾಗ ವೆಂಕಪ್ಪನಿಗಾದ ಬೇಸರ ಅಷ್ಟಿಷ್ಟಲ್ಲ. ಆ ಪರವೂರಿನವನಿಂದ ಕಡಿಮೆ ಎಂದರೂ ಮೂರು ಸಾವಿರ ಪಡೆಯಬೇಕೆಂದುಕೊಂಡಿದ್ದ ಅವನ ಯೋಚನೆ ರಾಮಣನ ಮಧ್ಯಪ್ರವೇಶಿಸುವಿಕೆಯಿಂದಾಗಿ ಕಾರ್ಯಗತಗೊಂಡಿರಲಿಲ್ಲ. ಈ ಘಟನೆ ಆದ ಮೇಲೆ ವೆಂಕಪ್ಪ- ಅಣ್ಣು ಇಬ್ಬರಿಗೂ ರಾಮಣನ ತಲೆ ಕಂಡರೆ ಆಗುತ್ತಿರಲಿಲ್ಲ. ರಾಮಣನ ಹಿಂದಿನಿಂದ ಅವನನ್ನು ಬಿಕನಾಸಿ ರಾಮಣ ಎಂದೇ ಕರೆಯುತ್ತಿದ್ದರು.

*****

ಹೀಗೆ ರಾಮಣನನ್ನು ಊರಿನವರೆಲ್ಲ ದ್ವೇಷಿಸುತ್ತಿದ್ದುದಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿಯೇ ದ್ವೇಷಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಭಟ್ಟರ ಹೋಟೆಲ್‍ಗೆ ಬಂದ ಆ ಅಪರಿಚಿತ ಹೇಳಿದ ಮಾತು ಅಚ್ಚರಿ ಹುಟ್ಟುಹಾಕಿದ್ದರಲ್ಲಿ ಅಸಹಜತೆ ಇರಲಿಲ್ಲ. ಅಪರಿಚಿತನ ಪಕ್ಕದಲ್ಲಿ ಹೋಗಿ ಕುಳಿತ ಅವರಿಬ್ಬರು ಆರಂಭದಲ್ಲಿ ಆ ಅಪರಿಚಿತ ಹೇಳುತ್ತಿರುವ ‘ದೇವರಂಥ ಮನುಷ್ಯ ರಾಮಣ’ ತಮ್ಮ ಊರಿನ ರಾಮಣನೇ ಹೌದೋ ಅಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳತೊಡಗಿದರು. “ನೀವು ರಾಮಣನನ್ನು ನೋಡಿರಬೇಕಲ್ಲಾ?” ವೆಂಕಪ್ಪ ಪ್ರಶ್ನಿಸಿದ. ನೋಡಿದ್ದೇನೆ ಎಂಬರ್ಥದಲ್ಲಿ ಆ ವ್ಯಕ್ತಿ ತಲೆಯಾಡಿಸಿದ ತಕ್ಷಣವೇ “ಹೇಗಿದ್ದಾನೆ ಹೇಳಿ” ಎಂದ ಅಣ್ಣು. “ಆರಡಿ ಎತ್ತರ. ಅಗಲ ದೇಹ. ಬಿಳಿಯೂ ಅಲ್ಲ ಕಪ್ಪೂ ಅಲ್ಲದ ಮೈ ಬಣ್ಣ. ದಪ್ಪ ಮೀಸೆ. ಯಾವಾಗಲೂ ಜುಬ್ಬಾ ಧರಿಸುತ್ತಾರೆ. ಅದಕ್ಕೆ ಬಿಳಿಪಂಚೆ. ದೊಡ್ಡ ಸ್ವರ ಅವರದ್ದು” ಆ ವ್ಯಕ್ತಿ ಹೀಗೆ ಹೇಳಿದ ತಕ್ಷಣವೇ ಅಣ್ಣು ಹತ್ತಿರವೇ ಕುಳಿತಿದ್ದ ವೆಂಕಪ್ಪನನ್ನು ನೋಡಿ ನಮ್ಮೂರ ರಾಮಣನ ಬಗ್ಗೆಯೇ ಈತ ಹೇಳುತ್ತಿರುವುದು ಎಂಬರ್ಥದ ಮುಖಭಾವವನ್ನು ಪ್ರಕಟಿಸಿದ. “ಅಲ್ಲ, ಅವನನ್ನು ಒಳ್ಳೆಯವನು ಎನ್ನುತ್ತಿದ್ದೀರಲ್ಲಾ! ಈ ಊರಿನಲ್ಲಿ ಯಾರನ್ನು ಕೇಳಿದರೂ ಅವನನ್ನು ಕೆಟ್ಟವನು ಎಂದೇ ಹೇಳುತ್ತಾರೆ. ನಿಮಗೆ ಅವನು ಹೇಗೆ ಪರಿಚಯ?” ಎಂದು ಅತೀವ ಕುತೂಹಲದಿಂದ ಕೇಳಿದ ವೆಂಕಪ್ಪ.

ಆ ವ್ಯಕ್ತಿ ಹೇಳತೊಡಗಿದರು: “ನನ್ನ ಹೆಸರು ಪೀಟರ್. ನಾನು ಮೂಲತಃ ಬೆಂಗಳೂರಿನವನು. ಇಂಜಿನಿಯರಿಂಗ್ ಓದಿದ ಮೇಲೆ ನನಗೆ ವಿದೇಶದಲ್ಲಿ ಕೆಲಸ ಸಿಕ್ಕಿತು. ನಿಜವಾಗಿ ನನಗೆ ತಂದೆ- ತಾಯಿಯನ್ನು ಬಿಟ್ಟು ಫಾರಿನ್‍ಗೆ ಹೋಗುವ ಮನಸ್ಸಿರಲಿಲ್ಲ. ನಾನೊಬ್ಬನೇ ಮಗ ಆದ್ದರಿಂದ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ನನಗೆ ಗೊತ್ತಿತ್ತು. ಆದರೆ ನನ್ನ ಸ್ನೇಹಿತರು ಪದೇ ಪದೇ ಇಲ್ಲಿದ್ದು ಹತ್ತು ವರ್ಷಗಳಲ್ಲಿ ಸಂಪಾದಿಸುವ ಹಣವನ್ನು ವಿದೇಶದಲ್ಲಿ ಒಂದೇ ವರ್ಷದಲ್ಲಿ ಸಂಪಾದಿಸಬಹುದೆಂಬ ಸಲಹೆ ನೀಡುತ್ತಿದ್ದರು. ನನಗೂ ಅವರ ಸಲಹೆ ನಿಜವೆಂದು ಕಂಡಿತು. ಹೆತ್ತವರ ಜವಾಬ್ದಾರಿಯನ್ನು ಒಂದಷ್ಟು ಸಮಯದ ಮಟ್ಟಿಗೆ ನನ್ನ ಕಸಿನ್‍ಗೆ ವಹಿಸಿ, ನಾನು ಫಾರಿನ್‍ಗೆ ಹೋದೆ. ಸ್ನೇಹಿತರ ಮಾತು ನಿಜ. ಹೋಗಿ ಐದು ವರ್ಷಗಳಲ್ಲಿಯೇ ಭರಪೂರ ಸಂಪಾದನೆ ಮಾಡಿಕೊಂಡು ಬಂದೆ. ನನ್ನದೇ ಆದ ಕಂಪೆನಿ ಆರಂಭಿಸಿದೆ. ಒಳ್ಳೆ ಆರಂಭ ಪಡೆದ ಕಂಪೆನಿ ಹೆಚ್ಚೆಚ್ಚು ಲಾಭ ತಂದುಕೊಡತೊಡಗಿತು. ನನ್ನ ಮದುವೆ ಮಾಡಬೇಕೆಂದು ಹೆತ್ತವರ ಆಸೆ. ಅಂತೆಯೇ ಮದುವೆಯಾದೆ. ಮಗಳೇ ಜನಿಸಬೇಕೆಂಬ ಆಸೆ ನನಗಿತ್ತು. ಹಾಗೇ ಆದಾಗ ನನ್ನ ಸಂತೋಷಕ್ಕೆ ಮಿತಿ ಇರಲಿಲ್ಲ. ಅವಳಿಗೆ ಚೆನ್ನಾಗಿ ಶಿಕ್ಷಣ ಕೊಡಿಸಬೇಕು, ಅವಳ ಮದುವೆ, ಮಕ್ಕಳು ಇವೆಲ್ಲಾ ನನ್ನ ಕನಸುಗಳಾಗಿದ್ದವು. ನನ್ನ ಕನಸುಗಳೆಲ್ಲವನ್ನೂ ಪೂರೈಸುವವಳಂತೆಯೇ ಇದ್ದ ನನ್ನ ಮಗಳು ಡಿಗ್ರಿಗೆ ಸೇರಿಕೊಂಡಾಗ ಇದ್ದಕ್ಕಿದ್ದಂತೆಯೇ ಬದಲಾದಳು. ಓದಿನ ಕಡೆಗೆ ಗಮನ ಇಲ್ಲ. ನಾನೇನಾದರೂ ಬುದ್ಧಿಮಾತು ಹೇಳಿದರೆ ಕೋಪ. ಮಾತನ್ನು ಕೇಳುತ್ತಲೇ ಇರಲಿಲ್ಲ. ಯಾವನೋ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದುಬಂತು. ಅದು ಸರಿಯಲ್ಲ ಎಂದದ್ದಕ್ಕೆ ನನ್ನ ಮೇಲೇ ರೇಗಾಡಿದಳು. ನಾನು ಅವಳ ಪ್ರೈವೆಸಿಗೆ ಅಡ್ಡಬರುತ್ತಿದ್ದೇನೆ ಎಂದಳು. ಮನೆಬಿಟ್ಟು ಹೋಗುವುದಾಗಿ ಹೆದರಿಸಿದಳು. ಮಗಳು ಕೈತಪ್ಪಿ ಹೋಗುತ್ತಾಳೆಂದು ಭಯಗೊಂಡ ನಾನು ಅವಳ ಮನವೊಲಿಸುವ ಪ್ರಯತ್ನ ಮಾಡಿದೆ. ಅವಳು ನನ್ನ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವಳ ಮೇಲಿದ್ದ ನನ್ನ ಪ್ರೀತಿ ನಾನು ಅವಳ ಮೇಲೆ ತುಸು ಅತಿಯಾಗಿಯೇ ಕೋಪಗೊಳ್ಳುವಂತೆ ಮಾಡಿತು. ಅವಳು ನನ್ನ ಮಾತನ್ನು ಒಪ್ಪಿಕೊಳ್ಳಲು ಸಿದ್ಧಳಿರಲಿಲ್ಲ.

ನನ್ನ ಅವಳ ನಡುವೆ ಈ ಚರ್ಚೆ ನಡೆದು ವಾರ ಕಳೆದಿತ್ತು. ಸಂಜೆ ಹೊತ್ತಿಗೆ ಕರೆ ಮಾಡಿದ ಅವಳು ಆ ರಾತ್ರೆ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದಳು. ಅದು ಸುಳ್ಳೆಂದು ಗೊತ್ತಿದ್ದರೂ ಆ ಕ್ಷಣಕ್ಕೆ ನಾನೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಸುಳ್ಳು ಹೇಳಿದ ಅವಳು ಅವಳ ಪ್ರೇಮಿಯೆನಿಸಿಕೊಂಡ ಆ ಲೋಫರ್‌ನ ಜೊತೆಗೆ ಮಂಗಳೂರಿನ ಕಡೆಗೆ ಲಾಂಗ್‌ಡ್ರೈವ್ ಹೊರಟಿದ್ದಳು. ದಾರಿ ಮಧ್ಯೆ ಇದ್ದ ತನ್ನ ರೆಸಾರ್ಟ್‍ಗೆ ಕರೆದುಕೊಂಡು ಹೋದ ಆತ ಮೊದಲೇ ತನ್ನ ಸ್ನೇಹಿತರನ್ನೂ ಅಲ್ಲಿಗೆ ಬರಹೇಳಿದ್ದ. ನನ್ನ ಮಗಳು ಬೇಡ ಎಂದರೂ ಕೇಳದೆ ಸ್ನೇಹಿತರ ಜೊತೆ ಸೇರಿಕೊಂಡು ಭೀಕರವಾಗಿ ಅತ್ಯಾಚಾರ ಮಾಡಿದ ಆತ ಅರೆನಗ್ನ ಸ್ಥಿತಿಯಲ್ಲಿಯೇ ಅವಳನ್ನು ದಾರಿ ಬದಿಯಲ್ಲಿ ಎಸೆದುಹೋದ. ಮಾನ ಕಳೆದುಕೊಂಡು ಒದ್ದಾಡುತ್ತಿದ್ದ ನನ್ನ ಮಗಳು ಸಹಾಯಕ್ಕಾಗಿ ಅಂಗಲಾಚಿದ್ದು ಅದೇ ರಸ್ತೆಯಲ್ಲಿ ಕಾರಿನಲ್ಲಿ ಬಂದ ಆ ದೇವತಾ ಮನುಷ್ಯರಾದ ರಾಮಣ ಅವರನ್ನು…” ಮಾತನಾಡುವುದಕ್ಕಾಗದ ದುಃಖ ಪೀಟರ್ ಅವರನ್ನು ಆವರಿಸಿತು. ಆದರೂ ಸಾವರಿಸಿಕೊಂಡು ಮಾತು ಮುಂದುವರಿಸಿದರು- “…ಆ ಸ್ಥಿತಿಯಲ್ಲಿ ನನ್ನ ಮಗಳನ್ನು ಕಂಡ ಬೇರೆ ಯಾರೇ ಆಗಿದ್ದರೂ, ಮಾನವೀಯತೆ ಇಲ್ಲದವರು ಎಂದಾದರೆ, ಲೆಕ್ಕಕ್ಕೇ ತೆಗೆದುಕೊಳ್ಳದೆ ಹೋಗಿಬಿಡುತ್ತಿದ್ದರು. ಇಲ್ಲವೇ ತಾವೂ ಅತ್ಯಾಚಾರ ಮಾಡುತ್ತಿದ್ದರು. ಆದರೆ ಆ ಮಹಾನುಭಾವ ರಾಮಣ ಅವರು ಆ ರಾತ್ರೆ ಹೊತ್ತಿನಲ್ಲಿ ಅವಳನ್ನು ನಮ್ಮ ಮನೆಗೆ ತಂದುಬಿಟ್ಟಿದ್ದರು. ನಡೆದ ವಿಷಯ ತಿಳಿದ ಮೇಲೆ ನಮಗೆಲ್ಲಾ ಸಮಾಧಾನ ಹೇಳಿದ್ದರು.

ಅವರ ಕಾರಣದಿಂದಾಗಿ ನನ್ನ ಮಗಳು ಆ ಕ್ಷಣಕ್ಕೆ ದೈಹಿಕವಾಗಿ ಬದುಕುಳಿದರೂ ಮಾನಸಿಕವಾಗಿ ಸತ್ತುಹೋಗಿದ್ದಳು. ಆದ ಆಘಾತ ಅವಳನ್ನು ಪದೇ ಪದೇ ಕಾಡತೊಡಗಿತ್ತು. ಅದಲ್ಲದೆ ಅವಳ ಆ ದರಿದ್ರ ಪ್ರೇಮಿ ಡ್ರಗ್ಸ್ ಚಟವನ್ನೂ ಇವಳಿಗೆ ಅಂಟಿಸಿಬಿಟ್ಟಿದ್ದ. ಮಗಳ ಕುರಿತ ಚಿಂತೆಯಿಂದಾಗಿ ನನಗೆ ನನ್ನ ಕಂಪೆನಿಯ ಕಡೆಗೆ ಗಮನಹರಿಸಲು ಆಗುತ್ತಲೇ ಇರಲಿಲ್ಲ. ಕಂಪೆನಿ ನಷ್ಟ ಅನುಭವಿಸತೊಡಗಿತ್ತು. ಸಾಲ ಹೆಗಲೇರಿತ್ತು. ಡಿಪ್ರೆಶನ್‍ಗೆ ಹೋಗಿದ್ದ ಮಗಳನ್ನು ನಾನು ಅನೇಕ ಮನೋವೈದ್ಯರಲ್ಲಿ ಕರೆದುಕೊಂಡು ಹೋಗಿ, ಕೌನ್ಸಿಲಿಂಗ್ ಮಾಡಿಸಬೇಕಾಗಿತ್ತು. ಚಿಕಿತ್ಸೆ ಕೊಡಿಸಬೇಕಾಗಿತ್ತು. ಆದರೆ ಹಣ ಇರಲಿಲ್ಲ. ನನ್ನವರೆಂದು ಅನಿಸಿಕೊಂಡಿದ್ದವರೆಲ್ಲಾ ಕೈಬಿಟ್ಟಿದ್ದರು. ಆ ಸಂದರ್ಭದಲ್ಲಿ ನನ್ನ ನೆನಪಿಗೆ ಬಂದದ್ದು ರಾಮಣ ಅವರು. ಕರೆ ಮಾಡಿದೆ. ಸಾಲ ಕೇಳಿದೆ. ಚಿಕಿತ್ಸೆಗೆ ಬೇಕಾದಷ್ಟು ಹಣವನ್ನು ಅವರಾಗಿಯೇ ತಂದುಕೊಟ್ಟು, ನನಗೂ ನನ್ನ ಹೆಂಡತಿಗೂ ಭರಪೂರ ಭರವಸೆ ಕೊಟ್ಟು, ನಮಗಿದ್ದ ಆತಂಕವನ್ನು ಅರ್ಧವಾಗಿಸಿದರು.

ಹಂತಹಂತವಾಗಿ ಚಿಕಿತ್ಸೆ ಪಡೆದ ನನ್ನ ಮಗಳು ಒಂದೆರಡು ವರ್ಷಗಳಲ್ಲಿಯೇ ಚೇತರಿಸಿಕೊಂಡಳು. ಓದಿನ ಕಡೆಗೆ ಗಮನ ಹರಿಸಿದಳು. ಗೆಲುವಾದಳು. ಅವಳ ಮದುವೆಯ ಯೋಚನೆ ನನ್ನಲ್ಲಿತ್ತು. ಅವಳ ಜೀವನದಲ್ಲಿ ನಡೆದ ಘಟನೆಗಳನ್ನು ತಿಳಿದುಕೊಂಡ ಹುಡುಗನೊಬ್ಬ ಮನಃಪೂರ್ವಕವಾಗಿಯೇ ಅವಳನ್ನು ಮದುವೆಯಾಗಲು ನಿರ್ಧರಿಸಿದ. ಈಗ ಮಗಳು ಮದುವೆಯಾಗಿ ಗಂಡ, ಮಗನ ಜೊತೆಗೆ ಸುಖದಿಂದಿದ್ದಾಳೆ. ನನ್ನ ಮಗಳನ್ನು, ಅಲ್ಲಲ್ಲ, ನನ್ನ ಕನಸನ್ನು ಉಳಿಸಿಕೊಟ್ಟದ್ದು ನಿಮ್ಮೂರಿನ ರಾಮಣ ಅವರು. ಅಂಥವರು ಈಗಿಲ್ಲ ಎಂದರೆ ಏನರ್ಥ? ಎರಡು ವಾರಗಳ ಹಿಂದಷ್ಟೇ ಅವರ ಜೊತೆ ಫೋನ್‍ನಲ್ಲಿ ಮಾತಾಡಿದ್ದೆ. ಆ ಬಳಿಕ ನನ್ನ ಮೊಬೈಲ್ ಕಳೆದುಹೋಗಿ, ಅವರ ನಂಬರ್ ಮಿಸ್ ಆಗಿತ್ತು. ಮಾತನಾಡುವುದಕ್ಕೇ ಆಗಲಿಲ್ಲ. ಡ್ರಗ್ಸ್ ವ್ಯಸನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಮಾದಕ ವ್ಯಸನ ಹೊಂದಿರುವ ಯುವಜನರನ್ನು ಅದರಿಂದ ಹೊರತರುವ ಉದ್ದೇಶದಿಂದ ನಾನೊಂದು ಎನ್.ಜಿ.ಒ. ಆರಂಭಿಸುತ್ತಿದ್ದೇನೆ, ರಿ-ಬರ್ತ್ ಅಂತ. ಬರುವ ತಿಂಗಳು ಅದರ ಉದ್ಘಾಟನೆ ಇದೆ. ರಾಮಣ ಅವರನ್ನೇ ಉದ್ಘಾಟಕರಾಗಿಸಬೇಕೆಂಬ ಆಸೆ ನನಗಿತ್ತು. ಅವರ ನಂಬರ್ ಮಿಸ್ ಆದದ್ದರಿಂದ ಇಲ್ಲಿಗೇ ಬಂದೆ. ಆದರೆ ಅವರಿಗೆ ಈ ವಿಷಯ ತಿಳಿಸುವ ಮೊದಲೇ……” ಪೀಟರ್ ಅವರಿಗೆ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. “ಅಷ್ಟಕ್ಕೂ ಅವರು ತೀರಿಕೊಂಡದ್ದು ಹೇಗೆ?” ವೆಂಕಪ್ಪ- ಅಣ್ಣುವನ್ನು ಪೀಟರ್ ಪ್ರಶ್ನಿಸಿದರು. “ಇಲ್ಲೇ ಹತ್ತು ಕಿಲೋಮೀಟರ್ ದೂರದಲ್ಲಿ ಕಾರು ಆ್ಯಕ್ಸಿಡೆಂಟ್ ಆಗಿ ತೀರಿಹೋದದ್ದು. ಆಮೇಲೆ ನೋಡಿದರೆ ಕಾರಿನಲ್ಲಿ ಐದು ಲಕ್ಷ ರೂಪಾಯಿ ಹಣ ಇತ್ತಂತೆ. ಪಂಚಾಯತ್ ಚುನಾವಣೆಗೆ ರಾತ್ರೋ ರಾತ್ರೆ ಹಂಚುವುದಕ್ಕೆ ತರುತ್ತಿದ್ದ ಹಣ ಅದು ಎಂಬ ಸುದ್ದಿಯೂ ಇದೆ…” ವೆಂಕಪ್ಪ ಗುಟ್ಟಿನಲ್ಲಿ ಹೇಳಿದ. “ಅಯ್ಯೋ, ಏನೇನೋ ಹೇಳಬೇಡಿ. ನನ್ನ ಎನ್.ಜಿ.ಒ.ಗೆ ಐದು ಲಕ್ಷ ಕೊಡುತ್ತೇನೆ ಅಂತ ಎರಡು ವಾರಗಳ ಹಿಂದೆ ಮಾತನಾಡಿದ್ದಾಗ ಹೇಳಿದ್ದರು. ಅದೇ ಐದು ಲಕ್ಷ ಹಣ ತೆಗೆದುಕೊಂಡು ನನ್ನ ಮನೆಗೆ ಬರುತ್ತಿದ್ದಿರಬೇಕು…” ಪೀಟರ್ ಈಗ ಸಂಪೂರ್ಣ ಕಣ್ಣೀರಾಗಿದ್ದರು. ಅವರು ಅಳುತ್ತಿದ್ದ ರೀತಿ ವೆಂಕಪ್ಪ- ಅಣ್ಣುವಲ್ಲಿ ಮಾತ್ರವಲ್ಲ, ಹೋಟೆಲ್ ಅಡುಗೆಕೋಣೆಯಲ್ಲಿದ್ದ ತಿಮ್ಮಪ್ಪಯ್ಯ ಭಟ್ಟರಲ್ಲಿಯೂ ಅಚ್ಚರಿ ಮೂಡಿಸಿತು. ಕಣ್ಣೊರೆಸಿಕೊಂಡ ಪೀಟರ್ ಕೇಳಿದರು- “ಅಷ್ಟಕ್ಕೂ ನೀವು ಅವರನ್ನು ಕೆಟ್ಟವರು ಕೆಟ್ಟವರು ಎನ್ನುತ್ತಿದ್ದೀರಲ್ಲ, ಯಾಕೆ?” ತಕ್ಷಣವೇ ಆ ಪ್ರಶ್ನೆಗೇ ಕಾದಿದ್ದವನಂತೆ ವೆಂಕಪ್ಪ ಗಣೇಶೋತ್ಸವದಲ್ಲಿ ರಾಮಣನ ಕುತಂತ್ರದಿಂದ ತೊಡಗಿ ತನ್ನ ಕಾರು ನಜ್ಜುಗುಜ್ಜಾದ ಪ್ರಕರಣದವರೆಗೆ ಎಲ್ಲವನ್ನೂ ಅಭಿನಯಪೂರ್ವಕವಾಗಿ ಉತ್ಪ್ರೇಕ್ಷೆಯಿಂದ ವಿವರಿಸಿದ. ಸುಮ್ಮನಿರಲಾರದ ಅಣ್ಣು ವೆಂಕಪ್ಪ ವಿವರಿಸಿದ್ದನ್ನೇ ಮತ್ತೊಮ್ಮೆ ವರ್ಣಿಸಿ, ಪೀಟರ್ ಅವರ ಮುಖಭಾವದಲ್ಲಾಗುವ ಬದಲಾವಣೆಯನ್ನು ನಿರೀಕ್ಷಿಸುತ್ತಾ ಕುಳಿತ. ಅವರಿಬ್ಬರ ಮಾತುಗಳನ್ನು ಕೇಳಿದ ಪೀಟರ್ ನಿಧಾನಕ್ಕೆ ತಲೆಯಾಡಿಸಿ ಹೇಳತೊಡಗಿದರು- “ಬಹುಶಃ ನೀವು ಅವರನ್ನು ಅರ್ಥೈಸಿಕೊಂಡ ರೀತಿಯಲ್ಲಿ ತಪ್ಪಿದೆ. ಕಳೆದ ಬಾರಿ ನನ್ನ ಮನೆಗೆ ಬಂದಿದ್ದಾಗ ಅವರು ಎರಡು ದಿನ ಉಳಿದುಕೊಂಡಿದ್ದರು. ಯಾಕೋ ಬಹಳ ಚಿಂತೆಯಲ್ಲಿದ್ದಂತೆ ಇದ್ದರು. ನಾನು ವಿಚಾರಿಸಿದ್ದಕ್ಕೆ ಏನೂ ಹೇಳಿರಲಿಲ್ಲ. ಎರಡು ದಿನ ಬಿಟ್ಟು ಹೊರಡುವಾಗ ಅವರ ಡೈರಿ ನನ್ನ ಮನೆಯಲ್ಲಿಯೇ ಉಳಿದಿತ್ತು. ಇಂದು ಇಲ್ಲಿಗೆ ಬರುವಾಗ ತರಬೇಕೆಂದುಕೊಂಡಿದ್ದೆ. ಹೊರಡುವ ಗಡಿಬಿಡಿಯಲ್ಲಿ ಮರೆತೇಹೋಯ್ತು. ಆ ಡೈರಿಯನ್ನು ನಾನು ಓದುವುದಕ್ಕೆ ನೋಡಿದೆ. ಕನ್ನಡದಲ್ಲೇ ಬರೆದಿದ್ದಾರೆ. ಆದರೆ ಬಳಸಿರುವುದು ತುಳು ಭಾಷೆ ಇರಬೇಕು. ನನಗೆ ಅರ್ಥ ಆಗಲಿಲ್ಲ. ನಾನು ಮನೆ ತಲುಪಿದ ತಕ್ಷಣ ಆ ಡೈರಿಯನ್ನು ಕಳಿಸಿಕೊಡುತ್ತೇನೆ. ಅದನ್ನು ಓದಿನೋಡಿ. ಅವರ ಬಗ್ಗೆ ನೀವು ತಿಳಿದುಕೊಂಡಿರುವುದಕ್ಕಿಂತ ಭಿನ್ನವಾದ ಹೊಸ ವಿಚಾರ ತಿಳಿಯಬಹುದೆಂದು ನನಗನಿಸುತ್ತದೆ. ಈ ಹೋಟೆಲ್ ಮಾಲೀಕರ ವಿಳಾಸಕ್ಕೆ ಕಳಿಸಿಕೊಡುತ್ತೇನೆ. ಆಗಬಹುದಲ್ಲಾ?” ಎಂದು ಹೇಳಿದ ಪೀಟರ್ ತಿಮ್ಮಪ್ಪಯ್ಯ ಭಟ್ಟರಲ್ಲಿ ಕೇಳಿ, ವಿಳಾಸ ಬರೆದುಕೊಂಡರು. ಅವನ ಡೈರಿ ಓದಿದರೇನು ಬಿಟ್ಟರೇನು ಎಂಬಂತೆ ಕುಳಿತಿದ್ದ ವೆಂಕಪ್ಪ ಮತ್ತು ಅಣ್ಣು ಇಬ್ಬರೂ ಅಲ್ಲಿಂದ ಹೊರಟುಹೋದರು.

ವಿಳಾಸ ಬರೆದುಕೊಂಡು, ಹೊರಟುನಿಂತ ಪೀಟರ್ ತನ್ನ ಬ್ಯಾಗ್ ಎತ್ತಿಕೊಂಡು ಹೋಟೆಲ್ ಬಾಗಿಲ ಬಳಿಗೆ ಹೋದವರು ತಕ್ಷಣ ಏನೋ ನೆನಪಾದವರಂತೆ ಅಲ್ಲೇ ನಿಂತರು. ಬ್ಯಾಗನ್ನು ಬೆಂಚಿನ ಮೇಲಿಟ್ಟವರು, ಅದರಿಂದ ಫ್ರೇಮ್ ಹಾಕಲಾಗಿದ್ದ ಫೋಟೋ ಒಂದನ್ನು ಹೊರದೆಗೆದು ಭಟ್ಟರ ಕಡೆಗೆ ಚಾಚಿ ಹೇಳಿದರು- “ನಾನು ಕಳೆದ ತಿಂಗಳು ಉತ್ತರ ಭಾರತಕ್ಕೆ ಹೋಗಿದ್ದೆ. ಅಲ್ಲಿಯ ಅಂಗಡಿಯೊಂದರಿಂದ ತೆಗೆದುಕೊಂಡ ವಿಶಿಷ್ಟ ಕಲಾಕೃತಿ ಇದು. ರಾಮಣ ಅವರಿಗೆ ಉಡುಗೊರೆಯಾಗಿ ನೀಡಲೆಂದು ತಂದದ್ದು. ಅದಂತೂ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಇದನ್ನು ನೀವು ನಿಮ್ಮ ಹೋಟೆಲ್‍ನ ಗೋಡೆಯಲ್ಲಿ ತೂಗುಹಾಕಿದರೆ ಇದನ್ನು ಅವರಿಗೇ ಕೊಟ್ಟಂತಹ ಸಂತಸ ನನಗಾಗುತ್ತದೆ. ಸರಿ ಎಂದು ಒಪ್ಪಿಕೊಂಡ ಭಟ್ಟರು, ಆ ಫೋಟೋ ತೆಗೆದುಕೊಂಡರು. ಪೀಟರ್ ಹೋದ ಬಳಿಕ ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರು. ವಿಶಿಷ್ಟವೆನಿಸುವ ಚಿತ್ರವೊಂದು ಆ ಫೋಟೋ ಫ್ರೇಮಿನೊಳಗಿತ್ತು. ಅರ್ಧ ದೇಹ ಶ್ರೀರಾಮನದ್ದು, ಇನ್ನರ್ಧ ದೇಹ ರಾವಣನದ್ದು. ರಾಮ- ರಾವಣರ ಅರ್ಧರ್ಧ ಶರೀರಗಳು ಸಂಯೋಗಗೊಂಡು ಒಂದು ಪರಿಪೂರ್ಣ ದೇಹ ರೂಪುಗೊಂಡಿತ್ತು. ಆ ಚಿತ್ರದಲ್ಲಿದ್ದ ರಾವಣನನ್ನು ಕಂಡ ಕೂಡಲೇ ಭಟ್ಟರಿಗೆ ನೆನಪಾದದ್ದು ರಾಮಣ ಹಿಂದೊಮ್ಮೆ ಯಕ್ಷಗಾನ ತಾಳಮದ್ದಲೆಯಲ್ಲಿ ಹೇಳಿದ್ದ ರಾವಣನ ಅರ್ಥ.

ಗುಲಾಬಿಪುರದ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ‘ರಾವಣ ವಧೆ’ ಎನ್ನುವ ಯಕ್ಷಗಾನ ತಾಳಮದ್ದಲೆ ಆಯೋಜಿಸಿದ್ದರು. ಅದರಲ್ಲಿ ರಾವಣನ ಅರ್ಥ ಯಾರು ಹೇಳುವುದು ಎಂಬ ಚರ್ಚೆ ಬಂದಾಗ “ರಾವಣ ಮತ್ತೆ ಯಾರು? ನಮ್ಮ ರಾಮಣ ಧಣಿಗಳು” ಎಂದು ಟೈಲರ್ ರಮೇಶಣ್ಣ ತುಸು ವ್ಯಂಗ್ಯವಾಗಿ ಹೇಳಿದ್ದ. ಅವನ ಆ ವ್ಯಂಗ್ಯದ ಮಾತೇ ನಿಜವಾಗಿತ್ತು.

ಅಂದು ರಾವಣನ ಅರ್ಥಧಾರಿಯಾದ ರಾಮಣ, ಪಾತ್ರದಲ್ಲಿಯೇ ಸಂಪೂರ್ಣ ಮುಳುಗಿಹೋದವನಂತೆ ಹೇಳಿದ ಮಾತು ಈಗ ತಿಮ್ಮಪ್ಪಯ್ಯ ಭಟ್ಟರ ಕಿವಿಯಲ್ಲಿ ರಿಂಗಣಿಸತೊಡಗಿತು- “ಒಬ್ಬ ವ್ಯಕ್ತಿ ಸಮಾಜದ ಕಣ್ಣಿಗೆ ಕೆಟ್ಟವನಾಗಿ ಕಾಣಿಸಿಕೊಂಡಿದ್ದಾನೆ ಎಂದರೆ ಆತ ಕೆಟ್ಟವನೇ ಆಗಿರಬೇಕೆಂದೇನೂ ಇಲ್ಲ. ಆತ ತನ್ನಲ್ಲಿರುವ ಒಳ್ಳೆಯತನವನ್ನು ಸಮಾಜದೆದುರು ಮಂಡಿಸಲು ವಿಫಲನಾದವನೂ ಆಗಿರಬಹುದು. ತಾನು ಒಳ್ಳೆಯವನೆಂದು ರುಜುವಾತಿಪಡಿಸಲು ಬರದಿರುವ ಮುಗ್ಧನೂ ಆಗಿರಬಹುದು……”

ರಾಮಣನ ಈ ಮಾತು ಕಿವಿಯಲ್ಲಿ ರಿಂಗಣಿಸುತ್ತಿರುವಂತೆಯೇ ಭಟ್ಟರು ಫೋಟೋವನ್ನು ನೋಡಿದಾಗ ರಾವಣನ ಕಣ್ಣಿನೊಳಗೆ ರಾಮ ನಗುತ್ತಿದ್ದ. ರಾಮನ ಕಣ್ಣಿನೊಳಗೆ ರಾವಣ ಆರ್ಭಟಿಸುತ್ತಿದ್ದ. ಆ ರಾಮ ರಾವಣರ ಚಿತ್ರದಲ್ಲಿ ರಾಮಣನೇ ಕಂಡಂತೆ ಭಟ್ಟರಿಗೆ ಭಾಸವಾಯಿತು.