ಅಂದು ನಾನು ಲೇಖಕಿ `ಗಿರಿಬಾಲೆ’ಯನ್ನು ಕಂಡದ್ದು ಶಾರದೆಯ ನೇರ ಬಹಿರಂಗ ಭಕ್ತೆಯಾಗಿ. ಅಸ್ಖಲಿತ ವಾಗ್ಝರಿಯ, ವಯಸ್ಸಿಗೆ ಮಣಿದು ಮಸುಕಾಗದ ಸುಸ್ಪಷ್ಟ ನೆನಪುಗಳ, ಪುಟಿಪುಟಿವ ಚೇತನವನ್ನು. ಒಂದು ಪ್ರಶ್ನೆ ಹಾಕಿದರೆ ಸಾಕು ಆ ಕಾಲಕ್ಕೆ ಓಡುತ್ತಿದ್ದರು ಅವರು. ಆ ಪ್ರಾಯದಲ್ಲಿಯೇ ನಿಲ್ಲುತ್ತಿದ್ದರು. ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಸ್ತ್ರೀ ಧ್ವನಿ ಕೂಡಿಸಿದಾಕೆ, ಸ್ತ್ರೀಯರ ಪ್ರಗತಿಗಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸಿದಾಕೆ, ಆಶು ರಚನಕಾರ್ತಿ, ಮಕ್ಕಳಿಗಾಗಿ ಬರೆದವರು, ಕಥೆ ಕವನ ರಚಿಸಿ (ಕನ್ನಡದಲ್ಲಿ ಮಾತ್ರವಲ್ಲ, ತುಳುವಿನಲ್ಲೂ) ಕಾಲಂ ಬರೆದು, ಹರಿಕಥೆ ಮಾಡಿ, ಹಾಡಿ, ಹಾಡಿಸಿ, ವೀಣೆ ನುಡಿಸಿ, ನಾಟಕ ರಚಿಸಿ, ಆಡಿಸಿ, ನಟಿಸಿ- ಒಟ್ಟಿನಲ್ಲಿ ಕಲೆ ಹಾಗೂ ಸಾಹಿತ್ಯಲೋಕದಲ್ಲಿ ಮಿಂಚಿದಾಕೆ – ಅಂತೆಲ್ಲ ಒಂದು ಕಾಲದ ಅವರ ಕ್ರಿಯಾಶೀಲತೆಯನ್ನು ಕೆದಕಿ ಕೇಳ ಹೊರಟರೆ `ಏನೋ. ಎಲ್ಲ ಒಂದು ಹುಚ್ಚಲ್ಲವೆ!’ ಎಂದುಬಿಡುತ್ತಿದ್ದರು. ಬುದ್ಧಿ ಇಲ್ಲದಾಗ ಮಾಡಿದ ಕೆಲಸದಂತೆ, ಅದರ ಪ್ರಸ್ತಾಪವನ್ನೇ ಎತ್ತಲು ಮನಸ್ಸಿಲ್ಲದವರಂತೆ ಮಾತು ಬದಲಾಯಿಸುತ್ತಿದ್ದರು. ಆದರೆ ಒಮ್ಮೊಮ್ಮೆ ಹಾಗೆ ಮರೆಯ ಹೋಗುತ್ತ ಹೋಗುತ್ತ ಅವರ ಅರಿವಿಲ್ಲದೆಯೇ ಅಂದಿನ ನೆನಪಿನ ಕೋಶ ತೆರೆದುಕೊಳ್ಳುತಿತ್ತು.

ತನ್ನ ಕೆಲ ಕಥೆಗಳನ್ನು ನೆನೆದು ಸಾರಾಂಶವನ್ನು ಹೇಳು ಹೇಳುತ್ತ `ಅರರೇ ಎಷ್ಟು ಚೆನ್ನಾಗಿದೆ! ನನಗೆ ಇದು ಹೇಗೆ ಹೊಳೆಯಿತು! ಅಂಥಾ ಕಾಲದಲ್ಲಿ ಹೀಗೆಲ್ಲ ಬರೆದೆ ಎಂದರೆ ನನಗೇ ನಂಬಲು ಆಗುತ್ತಿಲ್ಲ’ ಎಂದು ಅಭಿನಯಪೂರ್ವಕವಾಗಿ ನುಡಿದು ತನ್ನನ್ನೇ ಹೊರಗಿಂದ ನಿಂತು ನೋಡಿ ಅಚ್ಚರಿಯಾಗುತ್ತಿದ್ದರು. ಕೆಲ ಕಥೆಗಳನ್ನು ನೆನೆದು `ಯಾಕಾದರೂ ಬರೆದೆನೋ, ಬೇರೆ ಕೆಲಸವಿಲ್ಲದ್ದಕ್ಕೆ. ಅದೊಂದು ಮರುಳು. ಏನೇನೆಲ್ಲಾ ಬರೆದೆ, ಆಗ ಹೋಗದ್ದು -ನಗುತ್ತಿದ್ದರು. ಸ್ವಂತ ಜೀವನದ ಕತೆಯನ್ನೂ ಅವರು ಹೇಳುವ ರೀತಿಯೆಂದರೆ ಎಲ್ಲೋ ಕಳೆದುಹೋದ ಒಬ್ಬ ಹುಡುಗಿಯ ಚರಿತ್ರೆಯನ್ನು ತನ್ನದಾಗಿಸಿಕೊಂಡು ಹೇಳುತ್ತಿರುವೆನೋ ಎಂಬಂತೆ; ಪೂರ್ತಿಯಾಗಿ ಎಲ್ಲೂ ಹೊರಗೂ ನಿಲ್ಲದೆ, ಒಳಗೂ ನಿಲ್ಲದೆ! ಯಾವ ದುಃಖ, ಉದ್ವೇಗಗಳಿಲ್ಲದೆ, ಹೇಗೆ ಅದನೆಲ್ಲ ದಾಟಿ ಬಂದೆ ಎಂಬ ವಿಸ್ಮಯ-ಸಂಭ್ರಮದಿಂದ. ಸಂಭ್ರಮವೂ ವಿಸ್ಮಯವೂ ಆಕೆಯ ಸ್ಥಾಯೀ ಗುಣಗಳಲ್ಲವೆ. ಮುಖದಲ್ಲೊದು ನಗೆಯ ದೀಪ ಹಚ್ಚಿಕೊಳ್ಳದೆ ಮಾತಾಡಲಿಕ್ಕೇ ತಿಳಿಯದವರು ರಾಜವಾಡೆ. ಹುಟ್ಟಾ ಸ್ವತಂತ್ರ ಮನೋವೃತ್ತಿಯ ಈ ಲೇಖಕಿ ಉದ್ದಕ್ಕೂ ಕಂಡದ್ದು ಕನಸು, ಕನಸು ಮತ್ತೂ ಕನಸು. ಎಂಥ ಕಾಲದಲ್ಲಿಯೂ ಅವರು ತನ್ನ ಕನಸಿನ ಲೋಕವನ್ನು ಮುಚ್ಚಿಕೊಳ್ಳಲಿಲ್ಲ. ಎಂತಲೇ ಅವರು ಬದುಕಿನ ವಿಪ್ಲವ ಪ್ರವಾಹದಲ್ಲಿ ಬಳಿದುಕೊಂಡು ಹೋಗದೆ ಸ್ಥಿರ ನಿಂತು ನಾಳೆಗೆ ಇಣುಕುವ ಕತ್ತಿನ ಬಲ ಉಳಿಸಿಕೊಂಡರು. ಕೊನೆಯ ತನಕವೂ
ಅವರಲ್ಲಿನ ಮುಗ್ಧತನ, ಸಣ್ಣ ಸಣ್ಣ ತುಂಟತನ, ನಿಂತೆದ್ದು ಕೈ ತಟ್ಟಿ ಅತ್ತಿತ್ತ ಓಡಾಡಿ ಖುಷಿಪಡುವ ಚಿಮ್ಮು ಉತ್ಸಾಹ, ಕಲ್ಪಕ ಶಕ್ತಿ, ಕನಸುಗಾರಿಕೆ, ವಿಶೇಷ ಗ್ರಹಿಕೆ, ಘಟನಾವಳಿಗಳನ್ನು ಕಣ್ಣೆದುರು ಮಾತಿನಲ್ಲೇ ಮರುಸೃಷ್ಟಿಸಿ ಬಿಡುವ ಪ್ರತಿಭೆ ಮರೆಯಾಗಿರಲೇ ಇಲ್ಲ.

ಅವರು ಹೊರತಂದ ಪತ್ರಿಕೆ `ಸುಪ್ರಭಾತ’ದ ಸಂಚಿಕೆಗಳನ್ನು ಅವಲೋಕಿಸಿದರೆ ಈ ಲೇಖಕಿ ಸ್ತ್ರೀ ಎಚ್ಚರದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕೆಲವು ಪ್ರಸಿದ್ಧ ಲೇಖಕಿಯರನ್ನು ಬೆಳಕಿಗೆ ತಂದ ಪತ್ರಿಕೆ, ಸುಪ್ರಭಾತ. ಶ್ರೀಮತಿ ಆನಂದಿ ಸದಾಶಿವರಾವ್, ದಿ. ಶ್ರೀಮತಿ ಎಂ.ಕೆ. ಜಯಲಕ್ಷ್ಮಿ, ಶ್ರೀಮತಿ ಲೀಲಾಬಾಯಿ ಕಾಮತ್ ಮೊದಲಾದವರು ಅದರಲ್ಲಿ ಬರೆಯುತ್ತಿದ್ದರು. ಅದರಲ್ಲಿ ಪ್ರಕಟವಾದ ಅಂದಿನ ದಿನದಲ್ಲಿ ಅಪರೂಪವೆನಿಸುವ ಕೆಲ ಬರಹಗಳನ್ನು ಕಂಡರೆ ಅವುಗಳನ್ನು ಬರೆದ ಲೇಖಕಿಯರೆಲ್ಲ ಎಲ್ಲಿ ಮಾಯವಾದರೋ ಎಂದು ಧೇನಿಸುವಂತಾಗುತ್ತದೆ. ಪತ್ರಿಕೆಗೆ ಚಂದಾ ಕೇಳಲು ಹೋದರೆ ಮಹಿಳೆಯರು `ನಮ್ಮ ಸಾಹಿತ್ಯವೆಂದರೆ ಕುತ್ತುಂಬರಿ ಜೀರಿಗೆ’ ಎಂದದ್ದನ್ನು ಸುಪ್ರಭಾತದ ವಿಚಾರ ಬಂದಾಗೆಲ್ಲ ನೆನೆದು ನಗುತ್ತಿದ್ದರು ರಾಜವಾಡೆ. ಪತ್ರಿಕೆಯನ್ನು ನಡೆಸಲು ಎದುರಾಗುತ್ತಿದ್ದ ಕಷ್ಟಗಳನ್ನೆಲ್ಲ ಶ್ರೀ ಗೋವಿಂದ ಪೈಯವರಿಗೆ ಹೇಳಿಕೊಳ್ಳುತ್ತ, ಅವರು ಕೊನೆಗೆ ರಚನಾತ್ಮಕ ಶಕ್ತಿ ಉಳ್ಳವರು ಪತ್ರಿಕೆ ನಡೆಸಬಾರದು, ನಿಲ್ಲಿಸು ಎಂದದ್ದರಿಂದ ಅವರ ಮಾತಿಗೆ ಗೌರವ ಕೊಟ್ಟು, ಅದಾಗಲೇ ಚಂದಾ ವಸೂಲಿ ಆಗಿದ್ದರಿಂದಾಗಿ ಒಂದು ವರ್ಷವನ್ನು ಪೂರ್ತಿಗೊಳಿಸಿ, ಹನ್ನೆರಡು ಸಂಚಿಕೆ ಮುಗಿಯುತ್ತಲೇ `ಸುಪ್ರಭಾತ’ವನ್ನು ನಿಲ್ಲಿಸಿದರಂತೆ. ಗೋವಿಂದ ಪೈ ಅವರನ್ನು ರಾಜವಾಡೆಯವರು ಕರೆಯುತ್ತಿದ್ದುದು `ಗುರುದೇವ’ ಅಂತಲೇ. ಪ್ರಾಯಶ; ಅಂದು ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ, ಅವರನ್ನು ಯಥಾವತ್ ಅರಿತು, ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಒಳಗೊಳಿಸಿಕೊಂಡು, ಹೊಣೆಯಿಂದ ನಡೆಸಿಕೊಂಡ ಅವರ ಕಾಲದ ಬರಹಗಾರರೆಂದರೆ ರಾಷ್ಟ್ರಕವಿ ಗೋವಿಂದ ಪೈ ಒಬ್ಬರೇ. ಸ್ಥಳೀಯವಾಗಿ ಮೆಚ್ಚಿ ಮಾತಾಡುತ್ತಿದ್ದ ಲೇಖಕರು, ಅವರ ಸಮಕಾಲೀನ ಕತೆಗಾರರಾದ `ಕವಿರಾಜಹಂಸ’ ಬಿರುದಾಂಕಿತ, ಶ್ರೀ ಸಾಂತ್ಯಾರು ವೆಂಕಟರಾಜ.

ಮೂಲ್ಕಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿದ್ದನ್ನು ಕೇಳಿದ ದೊಡ್ಡ ಸಾಹಿತಿಯೊಬ್ಬರು `ಆ ಹೆಂಗಸು ಇನ್ನೂ ಇದೆಯೆ?’ ಎಂದು ಕೇಳಿದ್ದರಂತೆ. ಈ ಪ್ರಶ್ನೆ ಅವರ ಮನದಲ್ಲಿ ಕೊನೆಯವರೆಗೂ ನೆಟ್ಟುಕೊಂಡೇ ಇತ್ತು. ಅದನ್ನು ತಂದು ಅವರ ಕಿವಿಗೆ ಹಾಕಿದ ಪರದುಃಖ ಸಂತೋಷಿಗಳಾದರೂ ಯಾರೋ. ಕೇಳಿ ರಾಜವಾಡೆ ಸಂಕಟ ಪಟ್ಟಿದ್ದರು. `ಹಾಗೆ ಅವರು ಕೇಳಿದ್ದು ನಿಮ್ಮನ್ನು ಛೇಡಿಸುವ ಅಥವಾ ಅಗೌರವಿಸುವ ಉದ್ದೇಶದಿಂದ ಇರಲಿಕ್ಕಿಲ್ಲ. ಖಂಡಿತ ಆತ ಅಂಥವರಲ್ಲ. ಅದು ಮಾತಿನಂಶವಾಗಿ ಹೊಮ್ಮಿದ ಅಚ್ಚರಿ ಆಗಿರಬಹುದು’ ಅಂತ ಸಮಾಧಾನ ಮಾಡಿದರೆ ಆಕೆಗೆ ಸಮಾಧಾನ ಆಗಬೇಕಲ್ಲ! `ಆ ಮಾತು ಅಷ್ಟು ಅಮಾಯಕವಲ್ಲರೀ. ತನ್ನ ಕಾಲದ ಲೇಖಕಿಯೊಬ್ಬಳ ಕಡೆಗೆ ಯಾವ ಗಮನವನ್ನೂ ಕೊಡದೆ ತಮ್ಮ ನೇರಕ್ಕೆ ತಮ್ಮದೇ ವರ್ತುಲದವರೊಂದಿಗೆ ಬರಕೊಂಡು ಹೊರಟವರು ಮಾತ್ರ ಹೀಗೆ ಉದ್ಗರಿಸಲು ಸಾಧ್ಯ. ಅದೊಂದು ಬಗೆಯ ನಿರ್ಲಕ್ಷ್ಯ, ಅನಾದರ. ಅಲ್ಲವೆಂದರೆ ನಾನವರಿಗೆ `ಆ ಗಂಡಸು ಇನ್ನೂ ಇದೆಯೆ?’ ಅಂತನ್ನಲು ಯಾಕೆ ಸಾಧ್ಯವಾಗುವುದಿಲ್ಲ?’ ಎಂದು ಮರುಪ್ರಶ್ನೆ ಹಾಕಿದ್ದರು ರಾಜವಾಡೆ. `ದಾಕ್ಷಿಣ್ಯಕ್ಕೋ ಸಹಾನುಭೂತಿಗೋ ನಾಲ್ಕು ಸಾಲು ಕವನದಲ್ಲೋ ಎದುರಾದಾಗ ಬೆನ್ನುತಟ್ಟಿಯೋ ಮಾತಾಡಿಬಿಟ್ಟರೆ ಸಾಲದು. ಆ ಕಾಲದಲ್ಲಿ ದೊಡ್ಡ ಲೇಖಕರೂ ವಿಮರ್ಶಕರೂ ಇದ್ದರು ನಿಜ; ಆದರೆ ನಮ್ಮನ್ನು ಅವರು ಸೇರಿಸಿಕೊಳ್ಳಲೇ ಇಲ್ಲ. ಈ ಲೆಕ್ಕದಲ್ಲಿ ಮಾತ್ರ ಅವರೆಲ್ಲ ಬರೀ ಬೂಸು. ಯಾವುದಕ್ಕೂ ನಮಗವರು ಒದಗಿ ಬರಲಿಲ್ಲ. ಆಗ ನಮಗೆ ಅದರ ಅಗತ್ಯವಿತ್ತು’ – ಎಂದಿದ್ದರು.

ಪ್ರತಿಭೆ ಇರುವವರು ಯಾರ ಪ್ರೋತ್ಸಾಹ ಶಿಫಾರಸ್ಸನ್ನೂ ಕಾಯದೆ ಬರೆಯುತ್ತಾರೆ ಅಂತ ಸುಲಭದಲ್ಲೊಂದು ಮಾತು ಒಗೆದು ಬಿಡಬಹುದು. ಆದರೆ ರಾಜವಾಡೆಯರ ಮಾತಿನಲ್ಲಿ ಅಡಗಿರುವ ಸೂಕ್ಷ್ಮಾಂಶಗಳನ್ನು ಎಂದಿಗೂ ಅಲ್ಲಗಳೆಯುವಂತಿಲ್ಲ, ಅಲ್ಲವೆ? ಯಾರ ಸತ್ಸಹವಾಸದಿಂದ ದೇಶಾಭಿಮಾನ, ಭಾಷಾಭಿಮಾನ, ಕರ್ತವ್ಯ ಜ್ಞಾನ, ಗುರುಹಿರಿಯರಲ್ಲಿ ಭಕ್ತಿ ಮೊದಲಾದ ಸದ್ಗುಣಗಳ ಅನುಭವವಾದವೋ ಆ `ದೇವ’ ನ ದಿವ್ಯ ಪಾದಪದ್ಮಗಳಲ್ಲಿ ದಾಸಿಯು ಈ ಅಲ್ಪ ಕೃತಿಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿರುವಳು. ಎಂಬ ಅರ್ಪಣೆಯಿರುವ ಅವರ ಆಹುತಿ ಇತ್ಯಾದಿ ಕತೆಗಳು (೧೯೩೮) ಸಂಕಲನಕ್ಕೆ ಮಾತ್ರ (ನನ್ನ ತಿಳಿವಿಗೆ ಬಂದಂತೆ) ಅವರು ಸ್ವತ: ಮುನ್ನುಡಿ ಬರೆದಿದ್ದರೆ ಕದಂಬ (೧೯೪೭) ಸಂಕಲನಕ್ಕೆ ಶ್ರೀ ಎಸ್. ವೆಂಕಟರಾಜ ಅವರ ಮುನ್ನುಡಿಯಿದೆ. ಈ ಎರಡೂ ಸಂಕಲನಗಳು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ ಎಂದು ಅವರ ಪೂರ್ಣ ಹೆಸರಿನಲ್ಲೆ ಪ್ರಕಟಗೊಂಡಿದೆ. `ಪುಣ್ಯಫಲ’ ಕಿರುಕಾದಂಬರಿ ಪ್ರಕಟವಾಗುವ ಹೊತ್ತಿಗೆ ಅವರು `ಗಿರಿಬಾಲೆ’ಯಾಗಿದ್ದರು. ಮುಂದೆ ೧೯೬೬ರಲ್ಲಿ ಹೊರಬಂದ ಶ್ರೀಮದ್ಭಾವೀ ಸಮೀರ ಶ್ರೀ ವಾದಿರಾಜ ಗುರುವರ ಕೃಪಾತರಂಗಗಳೆಂಬ ಎರಡು ಭಾಗಗಳ ಕೀರ್ತನಸಂಕಲನಗಳಿಗೆ ಉಡುಪಿಯ ಅಷ್ಟಮಠಗಳ ಶ್ರೀ ವಿಶ್ವೇಶ್ವರತೀರ್ಥರು, ಶ್ರೀ ವಿದ್ಯಾವಾರಿನಿಧಿ ತೀರ್ಥರು, ಶ್ರೀ ಸುಜ್ಞಾನೇಂದ್ರ ಶ್ರೀಪಾದಂಗಳವರು, ಶ್ರೀ ವಿಶ್ವೋತ್ತಮ ತೀರ್ಥರು `ಅನುಗ್ರಹ ವಚನ’ಗಳನ್ನು ಬರೆದಿದ್ದಾರೆ.

ರಾಜವಾಡೆಯವರ ಬರಹಗಳ ಮುಖ್ಯ ವಸ್ತುವೇ ಸ್ತ್ರೀ. ಅವರ ಎಲ್ಲ ನಿರ್ಣಯಗಳು, ತರ್ಕ ತಾಕಲಾಟಗಳು, ಸಂಕಟ ಸಂತೋಷ ದುಃಖಗಳು ಸಮಾನತೆಯ ವಾದಗಳು ನಿಂತಿರುವುದು ಆಧ್ಯಾತ್ಮಿಕ ಮತ್ತು ಮಾನವೀಯತೆಯ ತಳಹದಿಯ ಮೇಲೆ. ಆಧ್ಯಾತ್ಮದ ಕಡೆ ವಾಲಿಕೊಂಡಿದ್ದೂ ಕುರುಡಾಗಿ ಶರಣಾಗದ ಸತ್ಯನಿಷ್ಠುರ ಮನಸ್ಸು ಅವರದು. ಎಂತಲೇ ಮಠದ ಸ್ವಾಮಿಗಳ ಕುರಿತು ವಸ್ತುನಿಷ್ಠವಾಗಿ, ನಿರ್ಭಯವಾಗಿ ಅವರು ಬರೆಯಬಲ್ಲವರಾಗಿದ್ದರು. ಬದುಕಿನ ಕಟು ಸತ್ಯಗಳನ್ನು ಕಂಡ ಸ್ವತಃ ಉಂಡ ಈ ಅಪರೂಪದ ಅನುಭವಿಯ ಅಂಜಿಕೆ ಹಿಂಜರಿಕೆಗಳ ಗುರುತೇ ಅರಿಯದ ನಡೆ-ನುಡಿ, ಬದುಕಿಗೆ ಅವರು ತನ್ನನ್ನು ಒಡ್ಡಿಕೊಳ್ಳುತ್ತಿದ್ದ ರೀತಿ, ಸಮಾಜದ ಸಾಮಾನ್ಯಗ್ರಹಿಕೆಗೆ ಎಟಕುತ್ತಿರಲಿಲ್ಲ. ಜನ ಅವರ ಕುರಿತು ಹಿಂದಿನಿಂದ `ಸಂಕುಚಿತ ಲೋಕಸಹಜ’ದ ಟೀಕೆ-ಟಿಪ್ಪಣಿ, ಅಬದ್ಧ ಅಭಿಪ್ರಾಯಗಳನ್ನು ತಮ್ಮ ತಮ್ಮೊಳಗೇ ಆಡಿಕೊಳ್ಳುತ್ತಿದ್ದರಂತೆ. ಆದರೆ ಅವರು ಎದುರು ಬಂದರೆಂದರೆ ಒಂದು ಶಬ್ದ ಟೀಕಿಸುವ ಧೈರ್ಯ ಯಾರೊಬ್ಬರಿಗೂ ಇರದೆ ಅಂದ್ ಅಕ್ಕಾ, ಅತ್ತ್ ಅಕ್ಕಾ ((ಹೌದು ಅಕ್ಕಾ, ಅಲ್ಲ ಅಕ್ಕಾ) ಎಂದು ವಿನೀತರಾಗುತ್ತಿದ್ದರಂತೆ.

ಆಶ್ಚರ್ಯವೆಂದರೆ, ದಿಟ್ಟೆಯಾಗಿಯೂ ಅನುಭವಿಯಾಗಿಯೂ ತನ್ನೊಳಗಿನ ಲೇಖಕಿಯನ್ನು ಸ್ವತಂತ್ರವಾಗಲು ಮಾತ್ರ ಅವರೇ ಬಿಡಲಿಲ್ಲ. ಅರವತ್ತರ ದಶಕದಲ್ಲಿ ತಮ್ಮ ಅದುವರೆಗಿನ ಚಟುವಟಿಕೆಗಳಿಂದ ಸ್ವಯಂ ನಿವೃತ್ತಿ ಹೊಂದಿದರು. ಸಂಪತ್ತನ್ನೆಲ್ಲಾ ಮಾರಿ ಉಡುಪಿ ಶ್ರೀ ಕೃಷ್ಣನಿಗೆ ಸತತ ಮೂರು ಸಪ್ತೋತ್ಸವ ನಡೆಸಿದರು. ತನ್ನ ಮನೆತನಕ್ಕೆ ಬಂದ ಸಾವಿರದಿನ್ನೂರು ವರ್ಷಗಳಷ್ಟು ಹಳೆಯದಾದ ಶ್ರೀ ಶಾರದಾಂಬಾ ವಿಗ್ರಹವನ್ನು ಉಡುಪಿಯ ಚಿಟ್ಪಾಡಿಯಲ್ಲಿ ಸ್ಥಾಪಿಸಿ ಸ್ವಂತ ವೆಚ್ಚದಲ್ಲಿ ದೇಗುಲ ನಿರ್ಮಿಸಿದರು. ಶಾರದೆಯ ಕೈಂಕರ್ಯದ ತನ್ನ ರೀತಿಯನ್ನೇ ಪಲ್ಲಟಿಸಿಕೊಂಡುಬಿಟ್ಟರು. ಲೇಖಕಿ `ಗಿರಿಬಾಲೆ’ಯನ್ನು ನಿಧಾನವಾಗಿ ಮರೆಮಾಡಿ ಕೀರ್ತನಕಾರ್ತಿಯನ್ನು ಆವಾಹನೆ ಮಾಡಿಕೊಂಡರು. ಅಂದಿನಿಂದ ಆಕೆಯ ಜೀವನ ವಿಧಾನವೇ ಬದಲಾಯಿತು.

ಇವೆಲ್ಲ ಬದುಕಿಗೆ ಮೇಲಿಂದ ಮೇಲೆ ಒದಗಿ ಬಂದ ಅನೇಕ ಘಟನಾವಳಿಗಳಿಂದಾಗಿ ಎಂದುಕೊಂಡರೂ ಆ ಘಟನಾವಳಿಗಳ ಪೂರ್ತಿ ವಿವರಗಳನ್ನೂ ಸ್ವತಃ ತಾನೆ ಸಮಾಧಿ ಮಾಡಿದರು, ವಿಶಿಷ್ಟ ಮಾದರಿಯಾಗಿ ಮುಂಚೂಣಿಯಲ್ಲಿ ನಿಲ್ಲಬಹುದಾಗಿದ್ದ ಕನ್ನಡದ ಲೇಖಕಿಯೊಬ್ಬಳು ತನ್ನೊಳಗೇ ಹೀಗೆ ಕರಗಿ ಹೋದಳು.ಅವರು ಬಹಳ ಆಸ್ಥೆಯಿಂದ ಕಟ್ಟಿಸಿದ, ಈಗಲೂ ಕುಂದಿಲ್ಲದ ಸುಂದರ ವಿನ್ಯಾಸದ, ಅವರ ಮನೆ ದೇವಸ್ಥಾನದ ಪಕ್ಕದ ಕಂಪೌಂಡಿನಲ್ಲಿಯೇ ಇದೆ, ಹಾಗೆಯೇ, ತದ್ವತ್. ನನಗವರು ಸಿಗುವ ಕಾಲಕ್ಕೆ ದೇಗುಲದ ಒಂದು ಬದಿಯಲ್ಲಿರುವ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಗುಡಿಯ ಜವಾಬ್ದಾರಿಯನ್ನು ಒಂದು ಕುಟುಂಬಕ್ಕೆ ವಹಿಸಿ ಆ ಕುಟುಂಬ ತನ್ನದೇ ಎಂಬಂತೆ ಅವರ ಜೊತೆಗಿದ್ದರು. ದೇವಸ್ಥಾನಕ್ಕೆ ಬಂದು ಹೋಗುವವರೊಡನೆಲ್ಲ ಆತ್ಮೀಯವಾಗಿ ಹರಟುತ್ತ ಗುರುತಿಲ್ಲದವರನ್ನೂ ಮಾತಾಡಿಸಿ ಹತ್ತಿರಾಗುತ್ತ ತನ್ನವರೆಂದು ರಕ್ತಸಂಬಂಧದ ಮರೆ ಹಿಡಿದು ಕರೆಯಲು ಯಾರೂ ಇಲ್ಲದೆಯೂ ಆ ನೋವನ್ನು ಮೀರಿ ನಿಂತವರಂತಿದ್ದರು. `ಸಣ್ಣದಿನಲ್ಲಿ ಕಡು ಬಡತನದಲ್ಲಿದ್ದಾಗ ಕಾಪು ಮಾರಿಯಮ್ಮಾ, ನನಗೆ ತುಂಬ ದುಡ್ಡು ಕೊಡು, ವಿದ್ಯೆ ಕೊಡು, ಕಲೆಕ್ಟರ್ ಗಂಡನ್ನ ಕೊಡು ಅಂತ ಬೇಡಿಕೊಂಡಿದ್ದೆ, ಹೆಡ್ಡಿ ನಾನು, ಮಗು ಕೊಡು ಅಂತ ಕೇಳಲೇ ಇಲ್ಲ. ದೇವಿಗಾದರೂ ಅಷ್ಟು ತಿಳಿಯಬೇಡವೇ, ಸಣ್ಣ ಹುಡುಗಿ ಪಾಪ, ಅದೆಲ್ಲ ಅವಳ ತಲೆಯಲ್ಲಿ ಇಲ್ಲ ಅಂತ. ನೋಡಿ ಅವಳು, ಮಗುವನ್ನು ಕೊಡಲೇ ಇಲ್ಲವಲ್ಲ!’ ಎಂದು ನಗುತ್ತಿದ್ದರು.

0
0