ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು.
ವ್ಯಾಸರಾವ್‌ ನಿಂಜೂರ್‌ ಅವರ ಆತ್ಮಕಥನ “ಎಳೆದ ತೇರು” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

ಮಲ್ಪೆಯಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದ ದೊಡ್ಡ ಅಣ್ಣನ ಹೊಟೇಲು ಕ್ರಮೇಣ ಕಳೆಗುಂದತೊಡಗಿತು. ಏನೋ ಭಿನ್ನಾಭಿಪ್ರಾಯ ಬಂದು ಕೃಷ್ಣಮೂರ್ತಿ ಅಣ್ಣ ಹೊಟೇಲು ತ್ಯಜಿಸಿ, ಚಿತ್ರದುರ್ಗಕ್ಕೆ ಹೋದ. ಎರಡು ಮೂರು ಇತರ ಹೊಟೇಲುಗಳೂ ಬಂದು ಸ್ಪರ್ಧೆಗಿಳಿದವು. ಜೊತೆಗೆ ಆತನ ರಸಿಕತನ, ಫನ್‍ಫೇರ್ ಹುಚ್ಚು. ದುಡ್ಡು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಗಿಲಿಗಿಟಿ ಮಾಡಿದ ತಮಿಳು ಮಾಂತ್ರಿಕನನ್ನು ನಂಬಿದ ಹುಂಬತನ ಇವೆಲ್ಲ ದಿನದಲ್ಲಿ ಆದ ವ್ಯಾಪಾರದ ಹಣವನ್ನು ಸ್ವಾಹಾ ಮಾಡುತ್ತಿದ್ದವು. ಮೈತುಂಬ ಸಾಲವಾಯಿತು. ಅತ್ತಿಗೆಯ ಬಳಿ ಇದ್ದ ಚೂರು ಪಾರು ಬಂಗಾರವನ್ನೂ ಮಾರಬೇಕಾಯಿತು. ಜೊತೆಗೆ ಕಾರ್ಪಣ್ಯದ ದಿನಗಳು ಬೇರೆ. ಸಕ್ಕರೆ ಸಿಗುತ್ತಿರಲಿಲ್ಲ. ಸಿಕ್ಕಿದರೂ ಗಗನಕ್ಕೇರಿದ ಬೆಲೆ. ಸಿಗಬೇಕಾದ ಸಾಮಾನುಗಳು ದುಡ್ಡು ಕೊಟ್ಟರೂ ಸಿಗುತ್ತಿರಲಿಲ್ಲ. ಹೀಗಾಗಿ ಹೊಟೇಲು ಮುಚ್ಚುವುದು ಅನಿವಾರ್ಯವಾಯಿತು.

ಆದರೂ ಬೇರಾವ ಕೆಲಸವನ್ನು ಅರಿಯದ ಅಣ್ಣ ಯಾವ ಮಾಯಕದಲ್ಲೋ ಉಡುಪಿ, ತೆಂಕನಿಡಿಯೂರು, ಕೊಡವೂರಿನ ಮಲ್ಪೆ ರಸ್ತೆ ಮುಂತಾದೆಡೆ ಹೊಟೇಲು ಆರಂಭಿಸಿ ಎಲ್ಲೂ ಬರ್ಕತ್ತಾಗದೆ ಮುಚ್ಚಿ ಬಿಡುತ್ತಿದ್ದ. ಬಯಲಾಟ ನಡೆಯುವಲ್ಲಿ ಅವನ ಹೊಟೇಲು ಪ್ರತ್ಯಕ್ಷವಾಗುತ್ತಿತ್ತು. ಮೂರು ಬದಿ ಮಡಲಿನ ತಟ್ಟಿ, ಮೂರು ನಾಲ್ಕು ಬೆಂಚುಗಳು, ಕುದಿಯುವ ನೀರಿನಲ್ಲಿರುವ ಪಾವಾಣೆ ಸದ್ದು ಮಾಡುವ ಚರಿಗೆ, ಗ್ಲಾಸು, ಪ್ಲೇಟ್‍ಗಳು. ಟೆಂಪರರಿ ಹೊಟೇಲು ಸಿದ್ಧವಾಗುತ್ತಿತ್ತು. ಅವಲಕ್ಕಿ ಉಪ್ಪಿಟ್ಟು, ಈರುಳ್ಳಿ ಬಜೆ, ಚಟ್ಟಂಬಡೆ ಇವಷ್ಟೇ ತಿಂಡಿಗಳು. ಸಕ್ಕರೆಗೆ ಸ್ಯಾಕರಿನ್ಸ್, ಚಹಾಪುಡಿಗೆ ಕೇಸರಿ ಕಲರ್ ಮಿಶ್ರ ಮಾಡುವುದಂತೂ ಮಾಮೂಲು. ಆದರೆ ಯಾರದೂ ಕಂಪ್ಲೆಂಟ್ ಇರುತ್ತಿರಲಿಲ್ಲ. ಭಾರಿ ಮುನಾಫೆ ಇದ್ದರೂ ಸಿಕ್ಕಿದ ಹಣ ನಾಲ್ಕಾರು ದಿನಗಳಲ್ಲಿ ಖಾಲಿಯಾಗುತ್ತಿತ್ತು.

ಅಣ್ಣ ಮಾಡಿದ ಎಲ್ಲ ಹೊಟೇಲುಗಳಲ್ಲೂ, ಬೆಳಿಗ್ಗೆ ಶಾಲೆಗೆ ಹೋಗುವವರೆಗೆ ಹಾಗೂ ಶಾಲೆಯಿಂದ ಬಂದ ಬಳಿಕ ಸಪ್ಲೈಗೊ, ಗಲ್ಲದಲ್ಲಿ ಕೂರುವುದಕ್ಕೋ, ಕ್ಲೀನರ್ ಕೈಕೊಟ್ಟರೆ ಗ್ಲಾಸು ಪ್ಲೇಟು ತೊಳೆಯುವುದಕ್ಕೋ ನಾವಿಬ್ಬರು (ನಾನು ಮತ್ತು ರಾಮಚಂದ್ರ ಅಣ್ಣ) ಇರುವುದು ಕಡ್ಡಾಯವಾಗಿತ್ತು. ಸ್ವಲ್ಪ ದೊಡ್ಡವನಾದ ಮೇಲೆ ನಾನು ತಿಂಡಿ ಮಾಡುವ, ಅಡುಗೆ ಮಾಡುವ ಭಟ್ಟನಾಗಿಯೂ ಪರಿವರ್ತಿತನಾಗಿದ್ದೆ. ಯಾಕೆಂದರೆ ನಮ್ಮ ಕಾಳು ನಿಂಜೂರು (ಅಣ್ಣ)ರಿಗೆ ಕೆಲವೊಮ್ಮೆ ಊಟದ ಹೊಟೇಲು ಮಾಡುವ ಖಯಾಲಿಯೂ ಇತ್ತು. `ಶಿವಳ್ಳಿ ಬ್ರಾಹ್ಮಣರ ಟೀ ಕಾಫಿ ಕ್ಲಬ್, ಊಟ ತಯಾರಿದೆ’ ಎನ್ನುವ ಬೋರ್ಡು ಆಗ ಹೊಟೇಲಿನ ಹೊರಗೆ ರಾರಾಜಿಸುತ್ತಿತ್ತು. ನನಗೆ ಈಗಲೂ ನೆನಪಿದೆ. ಇಡ್ಲಿ, ದೋಸೆ, ಉದ್ದಿನ ವಡೆಗಾಗಿ ಭೀಮಗಾತ್ರದ ರುಬ್ಬುಕಲ್ಲಿನಲ್ಲಿ ರುಬ್ಬಿ ರುಬ್ಬಿ ಬಲಗೈ ಹಸ್ತದಲ್ಲಿ ರಕ್ತ ಜಿನುಗುವುದೂ ಇತ್ತು. ಅದನ್ನು ಕಂಡ ಅತ್ತಿಗೆ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ನನ್ನನ್ನು ರಮಿಸುತ್ತಿದ್ದರು. ತಗಣೆಗಳು ರಾಜಾರೋಷವಾಗಿ ರಾಜ್ಯಭಾರ ಮಾಡುತ್ತಿದ್ದ ಹೊಟೇಲಿನ ಬೆಂಚಿನಲ್ಲಿ ನನ್ನ ಶಯನ. ತಗಣೆ ಪೆಟ್ಟು ತಿನ್ನುವುದು ಅಭ್ಯಾಸವಾಗಿ ಹೋಗಿತ್ತು.

ನನ್ನ ಅತ್ತಿಗೆಯಂತೂ ನನಗೆ ಹೆತ್ತಬ್ಬೆಯ ಸಮಾನ. ನಾನು ಹತ್ತು ತಿಂಗಳ ಮಗುವಿದ್ದಾಗ ಹಿರಿಯ ಸೊಸೆಯಾಗಿ ಮನೆ ಸೇರಿದ ಇವರಿಗೆ ನಾನೇ ಹೆಚ್ಚು ಕಡಿಮೆ ಹಿರಿ ಮಗು. ಹನ್ನೊಂದು ಮಕ್ಕಳಿಗೆ ಜನ್ಮವಿತ್ತ ಈಕೆ ನಿಜವಾಗಿಯೂ ಮಹಾತಾಯಿಯೇ ಸೈ.

ನಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಬರ. ಅಪ್ಪಯ್ಯನಿಗಾಗಲಿ, ಅವರ ಅಣ್ಣ ಮಂಜುನಾಥ ನಿಂಜೂರರಿಗಾಗಲಿ ಹೆಣ್ಣು ಸಂತಾನವಿಲ್ಲ. ಹೀಗಾಗಿಯೇ ನನಗೆ ಜಡೆ ಹೆಣೆದು ಅಮ್ಮ ಸಂಭ್ರಮಿಸುತ್ತಿದ್ದುದನ್ನು ಈಗಾಗಲೇ ಹೇಳಿದ್ದೇನೆ. ನನ್ನ ಅಣ್ಣ ಲಕ್ಷ್ಮೀನಾರಾಯಣ ಅಥವಾ ಕಾಳು ನಿಂಜೂರರಿಗೂ ಹೆಣ್ಣು ಮಕ್ಕಳಾಗಲಿಲ್ಲ. ಅದಕ್ಕೋಸ್ಕರ ಅದೆಷ್ಟು ಮಂತ್ರವಾದಿಗಳ ಮೊರೆ ಹೊಕ್ಕರೋ, ಎಷ್ಟು ತೀರ್ಥಯಾತ್ರೆ ಕೈಗೊಂಡರೊ ಅದರ ಲೆಕ್ಕವಿಲ್ಲ. ಏಳುಗಂಡು ಮಕ್ಕಳಾದ ಬಳಿಕ ಅಣ್ಣನಿಗೆ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದವು. ಎಲ್ಲ ಮಕ್ಕಳಿಗೂ ಮೊದಲಿನ ನಾಲ್ಕು ಮಕ್ಕಳನ್ನು ಹೊರತುಪಡಿಸಿ ಹೆಸರನ್ನು ನಾನೇ ಇಟ್ಟೆ. ಗಂಡು ಮಕ್ಕಳೆಲ್ಲ ರಾಜ, ಹೆಣ್ಣು ಮಕ್ಕಳೆಲ್ಲ ಶ್ರೀ ಅಂದರೆ ನಾಗರಾಜ, ರವಿರಾಜ, ಜಯರಾಜ, ಭಾಗ್ಯಶ್ರೀ, ಕಾವ್ಯಶ್ರೀ, ಜಯಶ್ರೀ, ಪೂರ್ಣಿಮಾಶ್ರೀ. ಇವರೆಲ್ಲ ನಾನು ಹೈಸ್ಕೂಲು ಹಾಗೂ ಕಾಲೇಜು ಅಭ್ಯಾಸ ಮಾಡುತ್ತಿರುವಾಗ ಹುಟ್ಟಿದವರು. ಆಗ ನನ್ನ ಅಣ್ಣ ನನ್ನ ಮಾತಿಗೆ ಬೆಲೆ ಕೊಡುವಷ್ಟರ ಮಟ್ಟಿಗೆ ಸುಧಾರಿಸಿದ್ದ ಎನ್ನಬೇಕು.

ಮತ್ತೆ ಸ್ವಲ್ಪ ಪುನರಾವರ್ತನೆ ಆದರೂ ನನ್ನ ಅಣ್ಣನ ಹೊಟೇಲಿನ ವ್ಯವಹಾರಕ್ಕೆ ಬರೋಣ. ಏನಿದ್ದರೂ ನನ್ನ ಅಣ್ಣನ ಹೊಟೇಲ್ ಎಂದರೆ ಅದು ಹೆಚ್ಚು ಕಡಿಮೆ ಒನ್‍ಮ್ಯಾನ್ ಶೋ. ಜೊತೆಗೆ ಬ್ರಾಂಚು ಹೊಟೇಲುಗಳು ಬೇರೆ. ಅದರ ಒಳಗುಟ್ಟು ಬೇರಾರೂ ಅಲ್ಲಿ ಹೊಟೇಲು ತೆರೆಯಬಾರದು ಎಂಬುದಾಗಿತ್ತು ಎಂದು ಈಗ ನನಗನ್ನಿಸುತ್ತಿದೆ. ಪ್ರಧಾನ ಹೊಟೇಲು ಒಂದು ಕಡೆ ಇದ್ದರೆ ಒಂದೆರಡು ಬೆಂಚು ಟೇಬಲು ಹಾಕಿ ಯಾರಿಗಾದರೂ ಛಾರ್ಜು ಕೊಟ್ಟು ಬ್ರಾಂಚ್ ಹೊಟೇಲು ಅಣ್ಣ ನಡೆಸುತ್ತಿದ್ದ. ಇದಲ್ಲದೆ ಕೋಲ, ಬಯಲಾಟ, ಕಂಬಳ ಮುಂತಾದುವು ನಡೆಯುವಲ್ಲಿ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಬ್ರಾಂಚ್ ಹೊಟೇಲು ಮಡಲಿನ ತಟ್ಟಿಯ ಆವರಣದೊಳಗೆ ಸಿದ್ಧವಾಗಿ ಬಿಡುತ್ತಿತ್ತು. ಪ್ರಧಾನ ಹೊಟೇಲು ತೆರೆಯುವುದು ಬೇಗ, ಬೆಳ್ಳಿ ಮೂಡುವ ಹೊತ್ತಿಗೆ, ಮುಚ್ಚುವುದಕ್ಕೆ ಸಮಯ ಎಂಬುದಿಲ್ಲ. ಗಿರಾಕಿಗಳಿದ್ದರೆ ರಾತ್ರಿ ಒಂಭತ್ತು ಹತ್ತು ಗಂಟೆಯವರೆಗೂ ಪೆಟ್ರೋಮ್ಯಾಕ್ಸ್ ದೀಪ ಉರಿಯುತ್ತಿರುತ್ತದೆ. ಸಾಯಂಕಾಲ ಹೊಟೇಲು ಪ್ರೊಪ್ರೈಟರು ಸಾಮಾನ್ಯವಾಗಿ ಹೊಟೇಲಿನಲ್ಲಿ ಇರುವ ರಿವಾಜು ಇಲ್ಲ. ಆಗ ಅವರ ಕಾರುಬಾರು ಊರ ಹೊರಗೆ. ಬೆಳಿಗ್ಗೆ ಬಿಡಾರದಿಂದ ಬರುವಾಗಲೂ ತಡವಾಗುವುದುಂಟು. ಬೆಳಿಗ್ಗೆ ಹಾಗೂ ಸಂಜೆಯ ಪಾಳಿ ನನ್ನದು. ಸಪ್ಲಾಯಿಂದ ಹಿಡಿದು ಇಡ್ಲಿ ಬೇಯಿಸುವುದು, ಬಿಸ್ಕುಟಂಬೊಡೆ ಕರಿಯುವುದು, ಚಹಾ ಕಾಫಿ ತಯಾರಿಸುವುದಲ್ಲದೆ ಗ್ಲಾಸು, ತಟ್ಟೆ ತೊಳೆಯುವುದನ್ನೂ ನಾನು ಮಾಡಬೇಕಾಗುತ್ತಿತ್ತು. ಗ್ಲಾಸ್ ತಟ್ಟೆ ತೊಳೆಯುವುದರಿಂದ ಕೈಗಳಿಗೆ ಆಗಾಗ ನಂಜು ಆಗುವುದೂ ಇತ್ತು. ಅದಕ್ಕೂ ಅತ್ತಿಗೆ ಯಾವುದೋ ಬೇರನ್ನು ತಳೆದು ಹಚ್ಚುತ್ತಿದ್ದರು. ಆಗ ನಂಜು ಮಾಯವಾಗುತ್ತಿತ್ತು.

ಹೊಟೇಲಿನಲ್ಲಿ ಬೇರೆ ಕೆಲಸದವರು ಇಲ್ಲವೆಂದಲ್ಲ. ಕೆಲವೊಮ್ಮೆ ಇರುತ್ತಿದ್ದರು. ಮದುವೆಯೋ, ಮುಂಜಿಯೋ, ತಿಥಿಯೋ, ಪೂಜೆಯೋ ಎಂದು ನೆಪ ಹೇಳಿ, ಸ್ವಲ್ಪ ಮುಂಗಡ ಪಡೆದು ಹೋದವರು ಮರಳಿ ಬರುತ್ತಿರಲಿಲ್ಲ. ಸ್ವಲ್ಪ ದೀರ್ಘಕಾಲ ಇದ್ದವರೂ ತಿಂಡಿ ಮಾಡುವವರಾಗಿದ್ದರೆ, ಸಪ್ಲೈ ಮಾಡಲು ಬಿಲ್‍ಕುಲ್ ಒಪ್ಪುತ್ತಿರಲಿಲ್ಲ. ಸಪಾ್ಲೈ ಗೆಂದು ಇದ್ದವರು ಇಡ್ಲಿ ಅಟ್ಟೆಯ ಬೆಂಕಿಯನ್ನು ಮಂದಗೊಳಿಸುವ ಉಸಾಬರಿಗೇ ಹೋಗುತ್ತಿರಲಿಲ್ಲ. ಹೀಗಾಗಿ ಹೊಟೇಲಿನ ಸಕಲ ಕಲಾ ಪಾರಂಗತ ನಾನೇ ಆಗಿಬಿಟ್ಟಿದ್ದೆ. ಅಡುಗೆಯಾದರೂ ಅಷ್ಟೇ. ಪಲ್ಯ, ಸಾರು, ಸಾಂಬಾರು ಎಲ್ಲ ಮಾಡುತ್ತಿದ್ದೆ. ಉಪ್ಪಿಟ್ಟಿನಿಂದ ಹಿಡಿದು ರವಾ ಹೋಳಿಗೆಯವರೆಗೆ ಎಲ್ಲ ತಿಂಡಿಗಳನ್ನು ತಯಾರಿಸುತ್ತಿದ್ದೆ. ನಾನು ಮಾಡುತ್ತಿದ್ದ ಮಸಾಲೆ ದೋಸೆಯಂತೂ ತುಂಬ ಖಾಯಿಶಿಯದಾಗಿತ್ತು. ಈ ಪಾಕಶಾಸ್ತ್ರ ಪ್ರಾವೀಣ್ಯತೆಯಿಂದ ಮುಂದೆ ಅಮೇರಿಕೆಯಲ್ಲಿ ಜನಪ್ರಿಯನಾಗಿ ಬಿಟ್ಟ ಕಥೆ ಅಲಾಯಿದ.

ಸಲಿಂಗ ರತಿ ವಿಶ್ವದ ಹಲವೆಡೆ ಈಗ ಕಾನೂನು ಸಮ್ಮತಿ ಪಡೆದಿದೆ. ನನಗರಿ ವಿಲ್ಲದೆಯೇ ನಾನು ಏಕಪಕ್ಷೀಯವಾಗಿ ಒಮ್ಮೆ ಇದಕ್ಕೆ ಬಲಿಯಾಗಿ ಬಿಟ್ಟೆ. ಇದು ನಡೆದದ್ದು ನಮ್ಮ ಹೊಟೇಲಲ್ಲೆ. ಎಂ. ಜಿ. ಆರ್. ಮತ್ತು ವೀರಪ್ಪನ್‍ರ ತಲವಾರ್ ಫೈಟಿಂಗ್‍ನ ಕನಸು ಕಾಣುತ್ತ, ತಗಣೆಗಳ ಪೆಟ್ಟು ತಿನ್ನುತ್ತ ಮಲಗಿದವನಿಗೆ ಉಚ್ಚೆ ಮಾಡುವ ಜಾಗವನ್ನು ಯಾರೋ ಚೀಪುತ್ತಿರುವ ಅನುಭವವಾಯಿತು. ಸೇಂಕುತ್ತಿರುವ ಆ ವ್ಯಕ್ತಿ ಅಂಗಾತ ಮಲಗಿದ್ದ ನನ್ನನ್ನು ಕವುಚಿ ಮಲಗಿಸಲು ಯತ್ನಿಸಿದಾಗ, ನಿದ್ದೆಗಣ್ಣಲ್ಲೂ ವ್ಯಕ್ತಿಗೆ ಬಲವಾಗಿ ಒದ್ದುಬಿಟ್ಟೆ. ಕೆಟ್ಟ ದನಿ ತೆಗೆಯುತ್ತ ಆ ವ್ಯಕ್ತಿ, ತನ್ನ ಗೋಣಿತಟ್ಟಿನ ಸುಪ್ಪತ್ತಿಗೆಯತ್ತ ನಡೆಯಿತು. ಮರುದಿನ ತಿಂಡಿ ಭಟ್ಟ `ನನ್ನ ಸಂಬಳ ಚುಕ್ತಾ ಮಾಡಿ’ ಎಂದು ಅಣ್ಣನಿಂದ ಹಣ ಪಡೆದು ಗಾಡಿ ಬಿಟ್ಟಿತು.

ಆ ಕಾಲದಲ್ಲಿ ಎಂಟನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಇತ್ತು. ನನ್ನ ಬಳಿ ಪೆನ್ ಇರಲಿಲ್ಲ. ಹೀಗಾಗಿ ಜಾಂಬಳಿ ಶಾಯಿ ಇರುವ ಬುತ್ತಿಗೆ, ಹ್ಯಾಂಡಲ್‍ಗೆ ನಿಬ್ಬು ಜೋಡಿಸಿದ ಲೆಕ್ಕಣಿಕೆಯನ್ನು ಅದ್ದಿ, ಅದ್ದಿ, ಬ್ಲಾಟಿಂಗ್ ಪೇಪರ್‍ನಿಂದ ಬರೆದ ಅಕ್ಷರಗಳನ್ನು ಒತ್ತಿ ಒಳ್ಳೆಯ ಮಾರ್ಕು ಗಳಿಸಿ ಎಂಟನೇ ತರಗತಿ ಪಾಸಾಗಿ ಬಿಟ್ಟೆ. ಆದರೂ ಪೆನ್ನು ಇದ್ದಿದ್ದರೆ ಇನ್ನೂ ಹೆಚ್ಚು ಮಾಕ್ರ್ಸ್ ಗಳಿಸಬಹುದಾಗಿತ್ತು ಎನ್ನುವ ಚಿಂತೆ ನನ್ನನ್ನು ಕುಟುಕುತ್ತಿತ್ತು. ಆಗ ಪೆನ್ನು ಅಪರೂಪದ ವಸ್ತುವಾಗಿತ್ತು. ಒಂದು ಪೆನ್ನಂತೂ ಪ್ರತಿಷ್ಠೆಯ ಸಂಕೇತವಾಗಿತ್ತು. ಕೇವಲ ಜಿಲ್ಲಾ ಕಲೆಕ್ಟರರೋ, ತಾಲೂಕು ತಹಶೀಲ್ದಾರರೋ, ಮಣೆಗಾರರೋ ಎಲ್ಲರಿಗೂ ಕಾಣುವಂತೆ ಇದನ್ನು ಜೇಬಿನಲ್ಲಿರಿಸಿಕೊಳ್ಳುತ್ತಿದ್ದರು. ಸಾಮಾನ್ಯ ಪೆನ್ನುಗಳು ಲೀಕ್ ಆಗಿ ಜೇಬಿನಲ್ಲಿ ಕಲೆ ಮಾಡುತ್ತಿದ್ದುವು. ಇವುಗಳಿಗಿಂತ ಹ್ಯಾಂಡಲ್ ಲೆಕ್ಕಣಿಕೆಯಲ್ಲೇ ಬರೆಯುವುದು ವಾಸಿ ಎಂದು ನನ್ನನ್ನು ನಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದೆ. ಇದಲ್ಲದೆ ಲೆಕ್ಕಣಿಕೆಯನ್ನು ಶಾಯಿಯಲ್ಲಿ ಅದ್ದಿ ಬರೆದರೆ ಅಕ್ಷರಗಳು ಮುದ್ದಾಗಿರುತ್ತವೆ ಎನ್ನುವ ಅಪ್ಪಯ್ಯನ ತಾಕೀತು ಬೇರೆ.

ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಕಲ್ಲಿನ ಹಾದಿಯಲ್ಲಿ ನಡೆದು ಕೆಲವೊಮ್ಮೆ ಹಿಮ್ಮಡಿಯಲ್ಲಿ ರಕ್ತ ಬರುವುದೂ ಇತ್ತು. ರಾಮಚಂದ್ರಣ್ಣ ಆಗಷ್ಟೇ ಶಂಕರ ವಿಠಲ್ ಮೋಟಾರು ಸರ್ವಿಸ್‍ನಲ್ಲಿ ಕೆಲಸಕ್ಕೆ ಸೇರಿ, ಕಂಪನಿಯ ಬಸ್ಸುಗಳು ಓಡುತ್ತಿದ್ದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಮುಂತಾದೆಡೆಯಲ್ಲಿ ಅಮ್ಮನ ಮುಗ್ಧ ಮಾತಿನಲ್ಲಿ `ಚಾಕಿಂಗ್ ಇನ್ಸ್‍ಪಟ್ಲೆರ್’ (ಚೆಕ್ಕಿಂಗ್ ಇನ್ಸ್‍ಪೆಕ್ಟರ್) ಎನ್ನುವ ದೊಡ್ಡ (!) ಹುದ್ದೆಯಲ್ಲಿ ದುಡಿಯುತ್ತಿದ್ದ. ಹೈಸ್ಕೂಲಿನ ಫೀ ತುಂಬುತ್ತಿದ್ದ ಆತ ನಾನು ಬರಿಗಾಲಲ್ಲಿ ನಡೆಯುವ ಕಷ್ಟ ನೋಡಲಾರದೆ, ತನ್ನ ಕೈ ಮೀರಿದ್ದಾದರೂ ಉಡುಪಿಯ ಫೇಮಸ್ ಶೂ ಮಾರ್ಟ್‍ನಲ್ಲಿ ಮಿರಿ ಮಿರಿ ಹೊಳೆಯುವ ಚಪ್ಪಲಿ ತೆಗೆಸಿಕೊಟ್ಟ. ಭರಾಮಿನಿಂದ ಅದನ್ನು ಹಾಕಿಕೊಂಡು `ದರಿದ್ರದ್ದು, ಅಪ್ಪಯ್ಯನ ಜೋಡಿನ ಹಾಗೆ ಸದ್ದು ಮಾಡುವುದಿಲ್ಲ’ ಎಂದು ಶಾಲೆಯಲ್ಲಿ ನಾಲ್ಕೊಪ್ಪತ್ತು ರೈಸಿದ್ದಾಯಿತು. ಮಡಿಗೆ ತೊಂದರೆಯಾಗುತ್ತದೆ ಹಾಗೂ ಹೊಸ ಚಪ್ಪಲಿ ಕಳ್ಳರ ಕಣ್ಣಿಗೆ ಬೀಳಬಾರದು ಎನ್ನುವ ಉದ್ದೇಶದಿಂದ ಚಪ್ಪಲಿಗಳನ್ನು ಶಾಲೆಯಿಂದ ಮರಳಿದೊಡನೆ ಮಳೆ ಮಾಡಿನ ತಟ್ಟಿಗೆ ಸಿಕ್ಕಿಸಿಡುತ್ತಿದ್ದೆ. ಹೀಗೆ ಸಿಕ್ಕಿಸಿದ ಹೊಸ ಚರ್ಮದ ಚಪ್ಪಲಿಯ ನಾಲಗೆ ನೀರೂರಿಸುವ ಮಧುರ ವಾಸನೆಯನ್ನು ತಡೆದುಕೊಳ್ಳಲು ತೀರ ಅಸಮರ್ಥವಾದ ಮನೆಯ ದಾಸುನಾಯಿ ಚಪ್ಪಲಿಯ ಗುರುತೇ ಸಿಗದಂತೆ ಅದನ್ನು ಚಂಪಣಚೂರು ಮಾಡಿಬಿಟ್ಟಿತು. ನನಗಾದರೋ ದುಃಖ ಹಾಗೂ ಸಿಟ್ಟಿನಿಂದ ದಾಸುವನ್ನು ಕೊಂದೇ ಬಿಡಬೇಕು ಎಂದನ್ನಿಸಿತು. ಅದನ್ನು ಅಟ್ಟಿಸಿಕೊಂಡು ಹೋದೆ. ದಾಸುವಿಗೆ ಧಿಮಾಕು ಸ್ವಲ್ಪ ಜಾಸ್ತಿ. ಈ ಪುಳಿಚಾರು ಮಾಣಿ ಏನೂ ಮಾಡಲಿಕ್ಕಿಲ್ಲ ಎಂದು ತನ್ನ ವಿಚಿತ್ರವಾದ ಮೋಹಕ ದನಿ ಬೀರುತ್ತಿತ್ತು. ಹೊಡೆಯಲು ಬಾರುಕೋಲು ಝಳಪಿಸಿದರೆ ಪೆಟ್ಟು ಬೀಳುವ ಮೊದಲೇ ತಾರಕ ಸ್ವರದಲ್ಲಿ `ಕುಂಯ್ಯೋ’ ಅನ್ನುತ್ತಿತ್ತು. ಅಂತೂ ಅದನ್ನು ಅಟ್ಟಿಸಿಕೊಂಡು ಹೋಗುವಾಗ ಆಯತಪ್ಪಿ ಕೆಸರುಗದ್ದೆಯಲ್ಲಿ ಬಿದ್ದುಬಿಟ್ಟೆ. ಹೈಲಾದ ನನ್ನ ಸ್ಥಿತಿಯನ್ನು ಕಂಡ ದಾಸು, ಹತ್ತಿರ ಬಂದು ತನ್ನ ಮೂಕ ಭಾಷೆಯಲ್ಲಿ `ಪೆಟ್ಟಾಯಿತಾ?’ `ಕ್ಷೇಮವಷ್ಟೇ’ ಎಂದು ವಿಚಾರಿಸಿದಾಗ ನನ್ನ ಕೋಪವೆಲ್ಲ ಇಳಿದುಹೋಯಿತು. ಆದರೇನು ಬಂದ ಹಾಗೆ? ಬರಿಗಾಲ ನಡಿಗೆ-ಅದೂ ಕಲ್ಲು ದಾರಿಯಲ್ಲಿ-ನನಗೆ ತಪ್ಪಲಿಲ್ಲ.

ಇಷ್ಟರಲ್ಲಿ ಇನ್ನೊಂದು ರೌಂಡು ಸಂಚಾರ ಮುಗಿಸಿ, ಅಲ್ಲಲ್ಲೇ ಹೊಟೇಲು ತೆರೆದು ಅದನ್ನು ಮುಳುಗಿಸಿ, ನನ್ನ ಹಿರಿಯಣ್ಣ ಊರಿಗೇ ಬಿಜಯಂಗೈದು ಕೆಮ್ಮಣ್ಣಿನಲ್ಲಿ ಹೊಟೇಲು ಸ್ಥಾಪಿಸಿದ. ಅದು ಚೆನ್ನಾಗಿ ನಡೆಯುತ್ತಲೂ ಇತ್ತು. ಕೆಮ್ಮಣ್ಣಿನಿಂದ ಕಲ್ಯಾಣಪುರ ಶಾಲೆಗೆ ಹೋಗುವುದು ಸುಲಭ. ಕಲ್ಲು ಮುಳ್ಳುಗಳ ದಾರಿಯಲ್ಲ. ನಡೆಯುವಾಗ ತೆಂಗಿನಮರಗಳ ತುಯ್ದಾಟದ ತಂಪು, ಹುಣಿಯ ದಾರಿ. ನದಿಗುಂಟ ನಡೆದರಾಯಿತು, ಸರಿ. ಅಣ್ಣನನ್ನು ಸೇರಿಕೊಂಡೆ. ಯಥಾಪ್ರಕಾರ ನಾನು ಹೊಟೇಲ್‍ನಲ್ಲಿ ಗಲ್ಲದ ಚಾರ್ಜ್ ಮಾತ್ರವಲ್ಲದೆ, ಆಯಾ ಕೆಲಸಗಾರರು ಇಲ್ಲದಾಗ ಎಲ್ಲವನ್ನು ನಿಭಾಯಿಸಿಕೊಂಡು ಕಲ್ಯಾಣಪುರ ಶಾಲೆಗೆ ಹೋಗಿ ಬರುತ್ತಿದ್ದೆ. ಕೆಲವು ತಿಂಗಳುಗಳಲ್ಲಿ ರಾಮಚಂದ್ರಣ್ಣ ಕೆಲಸ ಮಾಡುವ ಕಂಪನಿಯ ಬಸ್ಸು ಕೆಮ್ಮಣ್ಣಿನಿಂದ ಉಡುಪಿಗೆ ಓಡಲಾರಂಭಿಸಿತು. ಅಣ್ಣ ಅದರಲ್ಲಿ ಪಯಣಿಸಲು ಪಾಸ್ ಮಾಡಿಕೊಟ್ಟ. ಅದರಲ್ಲಿ ನೇಜಾರಿನ ವರೆಗೆ ಹೋಗಿ ಅಲ್ಲಿ ಇಳಿದು ಹೆಚ್ಚು ದೂರವಿಲ್ಲದ ಕಲ್ಯಾಣಪುರ ಶಾಲೆಗೆ ಸುಲಭವಾಗಿ ನಡೆದು ಹೋಗುವ ಸೌಲಭ್ಯ ನನಗೆ ಪ್ರಾಪ್ತವಾಯಿತು.

ನನ್ನ ಯಕ್ಷಗಾನ ಬಯಲಾಟದ ಗೀಳಿಗೆ ನೀರೆರೆದು ಪೋಷಿಸಿದವರು ಸಾಲಿಕೇರಿ ಮಾಸ್ತರರು. `ನಡೆದಾಡುವ ಯಕ್ಷಗಾನ ಭಂಡಾರ’ ಎಂದು ಖ್ಯಾತಿ ಗಳಿಸಿದ ತೋನ್ಸೆ ಕಾಂತಪ್ಪ ಮಾಸ್ತರರು. ನಮ್ಮ ಹೊಟೇಲಿನ ಖಾಯಮ್ ಗಿರಾಕಿ. ಯಕ್ಷಗಾನ ಬಯಲಾಟದ ಎಲ್ಲ ವಿಭಾಗಗಳಲ್ಲೂ ಪರಿಣತರಾದ ಇವರು ಸೊಗಸಾಗಿ ಅರ್ಥ ಹೇಳುವುದಲ್ಲದೆ ಒಳ್ಳೆಯ ಭಾಗವತಿಕೆ ಮಾಡುತ್ತಿದ್ದರು. ಚಂಡೆ, ಮದ್ದಳೆಗೂ ಸೈ. ಕೊಡವೂರಿನ ನಮ್ಮ ತರಬೇತಿ ಶಿಬಿರಕ್ಕೂ ಬಂದು ನಮಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸಿದ್ದರು.

ಪ್ರಧಾನ ಹೊಟೇಲು ತೆರೆಯುವುದು ಬೇಗ, ಬೆಳ್ಳಿ ಮೂಡುವ ಹೊತ್ತಿಗೆ, ಮುಚ್ಚುವುದಕ್ಕೆ ಸಮಯ ಎಂಬುದಿಲ್ಲ. ಗಿರಾಕಿಗಳಿದ್ದರೆ ರಾತ್ರಿ ಒಂಭತ್ತು ಹತ್ತು ಗಂಟೆಯವರೆಗೂ ಪೆಟ್ರೋಮ್ಯಾಕ್ಸ್ ದೀಪ ಉರಿಯುತ್ತಿರುತ್ತದೆ. ಸಾಯಂಕಾಲ ಹೊಟೇಲು ಪ್ರೊಪ್ರೈಟರು ಸಾಮಾನ್ಯವಾಗಿ ಹೊಟೇಲಿನಲ್ಲಿ ಇರುವ ರಿವಾಜು ಇಲ್ಲ. ಆಗ ಅವರ ಕಾರುಬಾರು ಊರ ಹೊರಗೆ. ಬೆಳಿಗ್ಗೆ ಬಿಡಾರದಿಂದ ಬರುವಾಗಲೂ ತಡವಾಗುವುದುಂಟು. ಬೆಳಿಗ್ಗೆ ಹಾಗೂ ಸಂಜೆಯ ಪಾಳಿ ನನ್ನದು.

ಕಾಂತಪ್ಪ ಮಾಸ್ತರರ ಬಗಲಲ್ಲಿ ಒಂದು ತೂಗುಚೀಲ. ಅದರಲ್ಲಿ ಬಡಗುತಿಟ್ಟಿನ ಯಕ್ಷಗಾನದ ತಾಳಗಳ ಜೊತೆಗೆ ಗೆಜ್ಜೆ ಸದಾಕಾಲ ಇರುತ್ತಿತ್ತು. ನಾವು ಕೊಡವೂರಿನ ಶನಿವಾರ ಮೇಳ ಸುರು ಮಾಡಿದ್ದು, ಈಗ ವೃತ್ತಿಪರ ಮೇಳವಾಗಿತ್ತು. ಆ ಕುರಿತು ಕಾಂತಪ್ಪ ಮಾಸ್ತರರಿಗೆ ಕಿಂಚಿತ್ತು ಬೇಸರವೂ ಇತ್ತು ಎಂದು ನನ್ನೆಣಿಕೆ.

ನಮ್ಮ ಹೊಟೇಲಲ್ಲಿ ಸಿಂಗಲ್ ಚಾ ಕುಡಿಯಲು ಕಾಂತಪ್ಪ ಮಾಸ್ಟರರು ಬಂದರೆಂದರೆ ನನಗೆ ಸಂಭ್ರಮವೋ ಸಂಭ್ರಮ. `ಏ ಮಾಣಿ, ಯುದ್ಧದ ಕುಣಿತ ಕಾಣಿಸು’ ಎಂದು ಅವರು ಹೇಳುತ್ತ ಯಾವುದೋ ಆಖ್ಯಾನದ ಪದ್ಯ ಹೇಳಬೇಕು. ನಾನು ಕುಣಿಯಬೇಕು. ಗಿರಾಕಿಗಳೇ ಪ್ರೇಕ್ಷಕರು. ಕುಣಿತ ಸರಿಯಾಗಿಲ್ಲದಿದ್ದರೆ ನನ್ನ ಕಾಲುಗಳಿಗೆ ತಾಳದಿಂದ ಸಣ್ಣ ಪೆಟ್ಟು ಕೊಟ್ಟಾರು. ಮತ್ತೆ ತಾನೇ ಕುಣಿದು ತೋರಿಸಿಯಾರು.

ಯಾವುದಾದರೋ ಪ್ರಸಂಗದ ಪದ್ಯ ಹೇಳಿ ಅದಕ್ಕೆ ಹೇಗೆ ಹೆಜ್ಜೆ ಹಾಕಬೇಕು, ಎಲ್ಲಿ ಭಾಗವತರ ಪದ್ಯ ಎತ್ತುಗಡೆ ಮಾಡಿ ಅದೇ ಶ್ರುತಿಯಲ್ಲಿ ಹಾಡಬೇಕು, ಆಗ ಹೇಗೆ ಹೆಜ್ಜೆ ಹಾಕಬೇಕು ಎನ್ನುವ ಪ್ರಾತ್ಯಕ್ಷಿಕೆ ಕಾಂತಪ್ಪ ಮಾಸ್ತರರಿಂದ ನಮ್ಮ ಹೊಟೇಲಲ್ಲಿ ನಡೆಯುತ್ತಿತ್ತು.

ಊರಿನ ಸುತ್ತಮುತ್ತ ನಡೆಯುತ್ತಿದ್ದ ಬಯಲಾಟಗಳ ಪ್ರಾಮಾಣಿಕ ವಿಮರ್ಶೆಯನ್ನೂ ಕಾಂತಪ್ಪ ಮಾಸ್ಟರರು ಮಾಡುತ್ತಿದ್ದರು. ಹನುಮಂತ ಎಂದರೆ ಮಾರ್ವಿ ಹೆಬ್ಬಾರರದು. ಅದಕ್ಕೆ ಸಮಕಟ್ಟುವ ವೇಷಧಾರಿ ಹುಟ್ಟಿಯೇ ಇಲ್ಲ. ಹಾರಾಡಿ ರಾಮನಿಗೆ ಸರಿಗಟ್ಟುವ ಮುಂಡಾಸಿನ ಕರ್ಣ ಮೂರು ಲೋಕದಲ್ಲೂ ಇಲ್ಲ. ಕೊಕ್ಕರ್ಣೆ ನರಸಿಂಹ ಕಮ್ತಿ ಬಿಟ್ಟರೆ `ಬಬ್ರುವಾಹನ’ದ ಸುಭದ್ರೆಗೆ ಹಾರಾಡಿ ನಾರಾಯಣನೇ ಸೈ. ವೀರಭದ್ರ ನಾಯ್ಕರ ಗತ್ತು ಗಾಂಭೀರ್ಯ ಯಾವ ಮಗನಿಗೂ ಇಲ್ಲ. ಎಂದೆಲ್ಲ ಅವರ ಟಿಪ್ಪಣಿಗಳು ಹೊರಬೀಳುತ್ತಿದ್ದವು. ಎಲ್ಲಿ ಯಾವ ಆಟ ಪುಸ್ಕಾಯಿತು ಎಂದು ಅವರು ನುಡಿದದ್ದು ಅಂತಿಮ ತೀರ್ಮಾನವಾಗುತ್ತಿತ್ತು. “ಮೂಗಿನವರೆಗೆ ಕುಡಿದು ಕುಣ್‍ಚಟ್ ಹಾಕಲು ಆಗುತ್ತದೆಯೇ? ಬಬ್ರುವಾಹನ ಎಂದರೆ ಬೆಳ್ಕಳೆ ಮಾಣಿಯದ್ದು (ಸುಬ್ಬಣ್ಣಯ್ಯ). ಅದು ಬಿಟ್ಟರೆ ಬೇರೆ ಉಂಟೆ’’ ಎಂದೆಲ್ಲ ಅವರು ಹೇಳುವಾಗ ಬೆರಗುಗಣ್ಣು ಬಿಟ್ಟುಕೊಂಡು ಅವರ ಮಾತು ಕೇಳುತ್ತಿದ್ದೆ. `ಏಯ್ ಮಾಣಿ, ಸಿಂಹಾಸನಾರೂಢನಾಗುವುದಕ್ಕೂ ಒಂದು ಕ್ರಮವುಂಟು. ಮುಖಭಾವ ಉಂಟು’ ಎನ್ನುತ್ತ ಗಕ್ಕನೆ ಟೇಬಲಿನ ಮೇಲೆ ಕೂತು ಬಿಲ್ಲು ಹಿಡಿದು ಕುಳಿತ ರಾಜನ ಪೋಸು ಕೊಡುತ್ತಿದ್ದರು. ಯಕ್ಷಗಾನದ ಕುರಿತು ಹಲವಾರು ವಿಷಯಗಳನ್ನು ಅರಿಯುವ ಸೌಭಾಗ್ಯ ನನ್ನದಾಯಿತು.

*****

ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲು, ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲು ಹಾಗೂ ಬೋರ್ಡ್ ಹೈಸ್ಕೂಲುಗಳು ಉತ್ತಮ ಬೋಧನೆ, ಆಟೋಟ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದವು. ನಮ್ಮ ಮಿಲಾಗ್ರಿಸ್ ಹೈಸ್ಕೂಲಿಗೆ ಬಾರ್ಕೂರು, ಸಾಲಿಗ್ರಾಮ, ಬ್ರಹ್ಮಾವರ, ಉಪ್ಪೂರು, ಹೇರೂರು, ಅರೂರುಗಳಿಂದ ವಿದ್ಯಾರ್ಥಿಗಳ ದಂಡು ಬರುತ್ತಿತ್ತು. ಉಡುಪಿಯ ಬೋರ್ಡ್ ಹೈಸ್ಕೂಲ್ ಮತ್ತು ಕ್ರಿಶ್ಚಿಯನ್ ಹೈಸ್ಕೂಲಿಗೆ ಕಟಪಾಡಿ, ಕಾಪು, ಪಡುಬಿದ್ರೆ, ಮೂಲ್ಕಿಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಕಾರಣ ಆ ಕಾಲದಲ್ಲಿ ಬೇರೆ ಹೈಸ್ಕೂಲುಗಳು ಇರಲಿಲ್ಲ.

ನಮ್ಮ ಮಿಲಾಗ್ರಿಸ್ ಹೈಸ್ಕೂಲು ಚರ್ಚಿನ ಬದಿಗೇ ಇತ್ತು. ಫಾದರ್ ಟೆಲ್ಲಿಸ್ ಮುಖ್ಯೋಪಾಧ್ಯಾಯರು. ಫಾದರ್ ರೆಬೆಲ್ಲೋ ಉಪ ಮುಖ್ಯೋಪಾಧ್ಯಾಯರು. ಫಾದರ್ ಟೆಲ್ಲಿಸ್ ಕನ್ನಡ ಮಾತಾಡುವಾಗ ಟಿಪ್ಪು ಸುಲ್ತಾನ್ ನಾಟಕದ ಕಾರ್ನವಾಲಿಸ್ ಪಾತ್ರಧಾರಿಯಂತೆ ಮಾತಾಡುತ್ತಿದ್ದರು. ಕಾರಣ, ಕೊಂಕಣಿ ಮಾತೃಭಾಷೆಯಾಗುಳ್ಳ ಮಂಗಳೂರಿನ ಫಾದರ್ ಟೆಲ್ಲಿಸ್ ಭಾರತಕ್ಕಿಂತ ಇಟಲಿಯಲ್ಲಿದ್ದುದೇ ಹೆಚ್ಚು ಕಾಲ. ಫಾದರ್ ರೆಬೆಲ್ಲೋ ಮಾತ್ರ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದರು. ಈ ಈರ್ವರು ಪಾದ್ರಿಗಳು ಹಾಗೂ ಮೊರಲ್ ಸಾಯನ್ಸ್ ಪಾಠ ಮಾಡುತ್ತಿದ್ದ ಸಿಸ್ಟರ್ ಮರಿಯಮ್‍ರನ್ನು ಹೊರತುಪಡಿಸಿ ಹೆಚ್ಚಿನ ಬೇರೆಲ್ಲ ಅಧ್ಯಾಪಕರೂ ಲೆಕ್ಕ ಹೇಳಿಕೊಡುತ್ತಿದ್ದ ಡೆನಿಸ್ ಡಿಸಿಲ್ವರನ್ನುಳಿದು ಕ್ರಿಶ್ಚಿಯನ್ ಮತಸ್ಥರಾಗಿರಲಿಲ್ಲ. ಕುಕ್ಕಿಲ್ಲಾಯ ಮಾಸ್ಟ್ರು, ಅನಂತ ರಾಮ ಉಪಾಧ್ಯರು, ಕೃಷ್ಣಮೂರ್ತಿ ಕೆದ್ಲಾಯರು, ನಾರಾಯಣ ಆಚಾರ್ರು, ಸೋಮನಾಥ ರಾಯರು. ಜಿ. ಶ್ರೀನಿವಾಸ ರಾಯರು, ತೌಡ ಶೆಟ್ಟರು, ವಾದಿರಾಜ ಶೆಟ್ಟರು, ಶ್ರೀನಿವಾಸ ಭಟ್ಟರು ಹೀಗೆ ಒಬ್ಬರಿಂದೊಬ್ಬ ಮಿಗಿಲೆನಿಸುವ ಶಿಕ್ಷಕ ವೃಂದವನ್ನು ಹೊಂದಿದ್ದ ಮಿಲಾಗ್ರಿಸ್ ಹೈಸ್ಕೂಲ್ ದೂರ ದೂರದ ಊರಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ವಿದ್ಯಾಕೇಂದ್ರ ವಾಗಿತ್ತು. ಸಮೀಪವೇ ಆಕರ್ಷಕ ಚರ್ಚ್. ಕ್ರಿಶ್ಚಿಯನ್ ವಿದ್ಯಾರ್ಥಿಗಳು ಚರ್ಚ್ ಅನ್ನು ವಾರದಲ್ಲಿ ಒಮ್ಮೆಯಾದರೂ ಸಂದರ್ಶಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಬೇಕೆಂಬ ನಿಯಮವಿತ್ತಾದರೂ, ಇತರರಿಗೆ ಈ ಕಟ್ಟಳೆ ಅನ್ವಯಿಸುತ್ತಿರಲಿಲ್ಲ. ಮಾರಲ್ ಸಾಯನ್ಸ್ ಐಚ್ಛಿಕ ಪಾಠವಾಗಿತ್ತು. ಇದರಲ್ಲಿ ಬೈಬಲ್ ಪಾಠವೂ ಇದ್ದುದರಿಂದ ಈ ಕ್ಲಾಸಿನ ಬದಲಾಗಿ ವಿದ್ಯಾರ್ಥಿಗಳು ತೌಡಪ್ಪ ಮಾಸ್ತರು ನಡೆಸುವ ತೋಟಗಾರಿಕೆ ಪಾಠವನ್ನು ಕಲಿಯಬಹುದಾಗಿತ್ತು. ತೌಡಪ್ಪ ಮಾಸ್ತರರ ತೋಟಗಾರಿಕೆಯ ಕ್ಲಾಸ್ ನಮಗೆಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ಕೃಷಿ ವಿಜ್ಞಾನದ ಒಳಹೊರಗನ್ನು ತಮ್ಮ ಅಪೂರ್ವ ಅನುಭವದೊಂದಿಗೆ ಅವರು ಹಂಚಿಕೊಳ್ಳುತ್ತಿದ್ದುದೇ ಅಲ್ಲದೆ ನಮ್ಮಿಂದಲೇ ಹೂಗಿಡಗಳು, ಸಣ್ಣಪುಟ್ಟ ತರಕಾರಿಗಳು, ಅಡುಗೆಗೆ ಬಳಸುವ ಸೊಪ್ಪು ತರಕಾರಿಗಳು ಇತ್ಯಾದಿಗಳನ್ನು ನಮ್ಮ ಕೈಯಾರೆ ಬೆಳೆಸುವಂತೆ ಮಾಡಿ ಶಾಲೆಯ ಆವರಣದಲ್ಲೇ ಸುಂದರ ತೋಟವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಒಮ್ಮೆ ನಮ್ಮ ಹೂದೋಟದಲ್ಲಿನ ಒಂದು ಗುಲಾಬಿ ಹೂವನ್ನು ಅದರ ಚೆಲುವಿಗಾಗಿ ನಾನು ಕೊಯ್ದಾಗ ಅದನ್ನು ಕಂಡ ನಮ್ಮ ಹೆಡ್‍ಮಾಸ್ಟರ್ ಫಾದರ್ ಟೆಲ್ಲಿಸ್ ಅವರು `ಹೂಕೀಳುವುದು ತಪ್ಪೆಂದು ನಿನಗೆ ಗೊತ್ತಿಲ್ಲವೆ’ ಎಂದು ಮೆತ್ತಗೆ ಗದರಿ ಫುಟ್‍ರೂಲರ್‍ನಲ್ಲಿ ನನಗೆ ನೋವಾಗದಂತೆ ಒಂದು ಪೆಟ್ಟು ಕೊಟ್ಟುದನ್ನು ನಾನು ಎಂದೂ ಮರೆಯಲಾರೆ.

ಆಗ ಹೈಸ್ಕೂಲಿನಲ್ಲಿ ನಾಲ್ಕನೆ, ಐದನೇ ಹಾಗೂ ಆರನೇ ಫಾರ್ಮ್‍ಗಳಿದ್ದವು. ನಾಲ್ಕನೇ ಫಾರ್ಮ್ ಈಗಿನ ಒಂಭತ್ತನೇ ಕ್ಲಾಸಿಗೆ ಸಮ. ಹಾಗೆಯೇ ಫಿಪ್ತ್ ಫಾರ್ಮ್ ಎಂದರೆ ಹತ್ತನೆಯ ಕ್ಲಾಸಿಗೆ ಸಮ. ಆರನೆಯ ಫಾರ್ಮ್ ಅಂದರೆ ಹನ್ನೊಂದನೆಯ ಕ್ಲಾಸು ಅತ್ಯಂತ ಮಹತ್ವದ್ದು. ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ಎನ್ನುವ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ `ಎಸ್‍ಎಸ್‍ಎಲ್‍ಸಿ’ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು. ಆಮೇಲಷ್ಟೇ ಕಾಲೇಜಿಗೆ ಪ್ರವೇಶಿಸಬಹುದಾಗಿತ್ತು. ನಾನು ಇರುವಾಗ ಎಸ್.ಎಸ್.ಎಲ್.ಸಿ ಬೋರ್ಡ್ ಮದ್ರಾಸಿನದಾಗಿತ್ತು. ಏಕೆಂದರೆ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮದರಾಸು ಪ್ರಾಂತ್ಯದ ಭಾಗವಾಗಿತ್ತು.

ಒಂಭತ್ತನೆಯ ಕ್ಲಾಸಿನಲ್ಲೇ ನನ್ನ ಪ್ರತಿಭೆಯನ್ನು ಗುರುತಿಸಿದ ಕುಕ್ಕಿಲ್ಲಾಯ ಮಾಸ್ಟ್ರು ನನ್ನನ್ನು ಶಾಲಾ ದೈನಿಕದ ಸಂಪಾದಕನಾಗಿ ನಿಯುಕ್ತಿಗೊಳಿಸಿದರು. ಆಗ ಪ್ರಕಟವಾಗುತ್ತಿದ್ದ ಮಂಗಳೂರಿನ `ನವಭಾರತ’ ಪತ್ರಿಕೆಯ ಅತ್ಯಂತ ಮಹತ್ವದ ಸುದ್ದಿಗಳನ್ನು ದೊಡ್ಡ ಕರಿಹಲಗೆಯಲ್ಲಿ ಬರೆಯುವುದಲ್ಲದೆ, ದೇಶ ವಿದೇಶಗಳ ರಾಜಧಾನಿ, ಪ್ರಧಾನಿ, ಅಧ್ಯಕ್ಷ, ವಿದೇಶಾಂಗ ಸಚಿವ ಇವೆಲ್ಲ ಮಾಹಿತಿಯನ್ನು ನಾನು ಚಾಕ್ ಉಪಯೋಗಿಸಿ ಕರಿಹಲಗೆಯಲ್ಲಿ ಬರೆಯುತ್ತಿದ್ದೆ. ಪತ್ರಿಕೆ ಓದಲು ಪುರುಸೊತ್ತು ಇಲ್ಲದ ರೆಬೆಲ್ಲೋ, ವಾದಿರಾಜ ಮಾಸ್ಟರಿಗೆಲ್ಲ ಈ ಕರಿಹಲಗೆಯ ಪ್ರಕಟಣೆ ಅಚ್ಚುಮೆಚ್ಚಿನದಾಗಿತ್ತು. ಫಾದರ್ ಟೆಲ್ಲಿಸ್ ಕೂಡ ನನಗೆ ಪ್ರೋತ್ಸಾಹದ ನುಡಿಗಳನ್ನಾಡಿದ್ದರು. ನನ್ನ ಈ ಸಂಪಾದಕ ವೃತ್ತಿ ಹೈಸ್ಕೂಲ್ ಬಿಡುವವರೆಗೂ ಮುಂದುವರಿದು ವಿದ್ಯಾರ್ಥಿಗಳು, ಅಧ್ಯಾಪಕರುಗಳು ನನ್ನನ್ನು ಮೆಚ್ಚುವಂತಾಗಿತ್ತು. ಕೆಲವು ಹುಡುಗಿಯರು ನನ್ನತ್ತ ಬೆರಳು ಮಾಡಿ, ತಮ್ಮ ತಮ್ಮಲ್ಲೇ ಏನೋ ಮಾತಾಡಿಕೊಂಡಾಗ ಪುಳಕಿತಗೊಳ್ಳುತ್ತಿದ್ದೆ. ಆದರೆ ಕ್ಲಾಸಿನ ಅಥವಾ ಇತರ ಹೆಣ್ಣುಮಕ್ಕಳೊಂದಿಗೆ ಮಾತಾಡಲು ಬಿಲ್‍ಕುಲ್ ಸಾಧ್ಯವಾಗುತ್ತಿರಲಿಲ್ಲ. ಏನೋ ಭಯ, ಆಳುಕು, ನಾಚಿಕೆ ಎಲ್ಲ.

ಕೆಮ್ಣಣ್ಣಿನ ಅಣ್ಣನ ಹೊಟೇಲಿನಲ್ಲಿ ಮುಂಜಾನೆ ಬೇಗ ಎದ್ದು, ಪೆಟ್ರೋಮ್ಯಾಕ್ಸ್ ಹೊತ್ತಿಸಿ ಹೊಟೇಲು ತೆರೆದು, ಎಂಟೂವರೆಯ ತನಕ ಹೊಟೇಲಲ್ಲಿ ದುಡಿದು, ಮಧ್ಯಾಹ್ನದ ಊಟಕ್ಕಾಗಿ ಬುತ್ತಿ ಹೊತ್ತು ಶಾಲೆಗೆ ಬರುವುದು ನನ್ನ ದಿನಚರಿಯಾಗಿತ್ತು. ಬುತ್ತಿಯಲ್ಲಿ ಹೆಚ್ಚಾಗಿ ಅವಲಕ್ಕಿ ಮೊಸರು ಅಥವಾ ಮೊಸರನ್ನ, ಒಂದು ಚೂರು ಉಪ್ಪಿನಕಾಯಿ ಇರುತ್ತಿತ್ತು. ಈ ಬುತ್ತಿಯನ್ನು ಶಾಲೆಯ ಸಮೀಪದ ರಂಗರಾಯರೆಂಬ ಸದ್ಗೃಹಸ್ಥರ ಹೊಟೇಲಿನಲ್ಲಿ ಇರಿಸುತ್ತಿದ್ದೆ. ಮಧ್ಯಾಹ್ನ ಊಟದ ಬಿಡುವಿನಲ್ಲಿ ನನ್ನ ಬುತ್ತಿ ಸೇವನೆ ಇಲ್ಲೇ ನಡೆಯುತ್ತಿತ್ತು. ಅಪರೂಪಕ್ಕೊಮ್ಮೊಮ್ಮೆ ಕಲ್ಯಾಣಪುರದ ಧನ್ವಂತರಿ ಎನಿಸಿದ ಡಾ. ಗೋವಿಂದ ಆಚಾರ್ಯರು ರಂಗರಾಯರ ಹೊಟೇಲಿಗೆ ಚಾ ಕುಡಿಯಲು ಬಂದಾಗ ಒತ್ತಾಯದಿಂದ ಅವರ ಲೆಕ್ಕದಲ್ಲೇ ನನಗೆ ಚಾ ಕುಡಿಸುವುದಿತ್ತು.

ಸಾಯಂಕಾಲ ಹೊಟೇಲಿಗೆ ಹಿಂತಿರುಗಿದ ಬಳಿಕ ಹೊಟೇಲಿನ ಕೆಲಸ. ಅಣ್ಣನ ಸರ್ಕೀಟು ಇದ್ದಲ್ಲಿ ಕೆಮ್ಮಣ್ಣಿನ ಟೂರಿಂಗ್ ಟಾಕೀಸಿನ ಸೆಕೆಂಡ್ ಶೋ ಮುಗಿಯುವ ತನಕ ಹೊಟೇಲು ಚಾರ್ಜ್ ನಾನು ವಹಿಸಿಕೊಳ್ಳಬೇಕಿತ್ತು. ಅಣ್ಣ ಇದ್ದಲ್ಲಿ ರಾತ್ರಿ ಹತ್ತು ಗಂಟೆಗೆಲ್ಲ ಹೊಟೇಲು ಮುಚ್ಚುತ್ತಿದ್ದೆ. ಆ ಬಳಿಕ ನನ್ನ ಓದು. ಅದು ಕೂಡ ಬೀದಿ ದೀಪದ ಅಡಿಯಲ್ಲಿ. ಏಕೆಂದರೆ ಹೊಟೇಲು ಮುಚ್ಚಿದ ಬಳಿಕ ಪೆಟ್ರೊಮ್ಯಾಕ್ಸ್ ಕೂಡ ನಂದಿಸಲ್ಪಡುತ್ತಿತ್ತು. ಬೀದಿ ದೀಪದ ಕೆಳಗೆ ಓದುವಾಗ ನನಗೆ ಕಂಪನಿ ನೀಡುತ್ತಿದ್ದವನೆಂದರೆ ನನ್ನದೇ ತರಗತಿಯ ಪೀಟರ್ ಪೌಲ್ ಫೆರ್ನಾಂಡಿಸ್ ಎಂಬಾತ. ಆತ ಈಗ ಕೆನಡಾದ ಪ್ರಜೆಯಾಗಿದ್ದಾನೆ. ಆಗಾಗ ದಾಯ್ದ ನಾಯ್ಕನೂ ನಮಗೆ ಕಂಪನಿ ಕೊಡುತ್ತಿದ್ದ. ಅವನ ಕಂಪನಿ ನಮಗೆ ಕಣ್ಣು ಕೂರಿದಾಗ ತುಂಬ ಸಹಾಯಕವಾಗುತ್ತಿತ್ತು. ಅವನ ಗೊರಕೆಗೆ ಅಂತಹ ತಾಕತ್ತು ಇತ್ತು.

ಈ ದಾಯ್ದ ಮಹಾಶಯನು ತೆಂಕನಿಡಿಯೂರು, ಬಡಾ ನಿಡಿಯೂರು, ತೊಟ್ಟಾಮು, ವಡಭಾಂಡೇಶ್ವರ ಮುಂತಾದ ಕಡೆಗಳಲ್ಲಿ ತೆಂಗಿನಮರದಿಂದ ತೆಂಗಿನಕಾಯಿ ಇಳಿಸುವುದೋ, ಅಕ್ಕಿ, ಉದ್ದು, ಹೆಸರುಗಳಂತಹ ಧಾನ್ಯಗಳನ್ನು ಮುಡಿಕಟ್ಟುವುದೋ, ಚಪ್ಪರಕ್ಕೆ ಮಡಲು ಏರಿಸುವುದೋ ಮುಂತಾದ ಕಾರ್ಯಗಳನ್ನು ಪೂರೈಸಿ ತನ್ನ ಮಧ್ಯಾಹ್ನದ ಪಾಲಿನ ಸೆರೆ ಇಳಿಸಿ, ವಡಭಾಂಡೇಶ್ವರದ ಕಡಲ ಕಿನಾರೆಯಲ್ಲಿ ಗಾಳಿಮರ ಹಾಗೂ ತೆಂಗಿನಮರಗಳು ಹೊಯ್ದಾಡುತ್ತ ಸೃಷ್ಟಿಸುವ ವಾಯುಗಾನದಲ್ಲಿ ಲೀನನಾಗಿ ಹೊಯ್‌ಗೆಯಲ್ಲೇ ಪವಡಿಸುತ್ತಿದ್ದ. ಒಂದೆರಡು ಗಂಟೆಗಳ ಶಯನೋತ್ಸವ ಮುಗಿಸಿ, ಊರಿನ ಯಾರ ಮನೆಗಾದರೂ ಬಂದು ಒಂದು ಒಣಕೆಮ್ಮು ಬಿಟ್ಟನೆಂದರೆ ದಾಯ್ದನ ಸವಾರಿ ಮನೆಬಾಗಿಲಿಗೆ ಐತಂದಿದೆ ಎಂದೇ ಅರ್ಥ. ಊರಿಗೆಲ್ಲ ಬೇಕಾದ ಈ ಪರ್ಬುವಿಗೆ ಅನ್ನ ನೀಡದವರು ಇಲ್ಲವೇ ಇಲ್ಲ. ನೇಸರು ಆಗಸದಲ್ಲಿ ವಾರೆಯಾಗಿದ್ದೇ ತಡ ದಾಯ್ದ ಕೆಮ್ಮಣ್ಣಿನತ್ತ ಗಾಡಿ ಬಿಡುತ್ತಾನೆ. ಅಲ್ಲಿ ಪೀಂತ ನಾಯ್ಕರ ಕಾನೂನು ಬಾಹಿರವಾದ ಕಳ್ಳಭಟ್ಟಿ ಗಡಂಗಿನಲ್ಲಿ ವಾಟೀಸು ಇಳಿಸಿ ನಮ್ಮ ಹೊಟೇಲಿನಲ್ಲಿ ನಾಲ್ಕಾಣೆಯ ಪ್ಲೇಟ್ ಮೀಲ್ಸ್ ಕತ್ತರಿಸಿ, ಮತ್ತೊಂದು ಗ್ಯಾಸ್ ವಾಟೀಸ್ ಹಾಕಿ ಹಬೆರುತ್ತ ಲೈಟು ಕಂಬದ ಬಳಿ ಮಲಗುವುದು ಅವನ ರೂಢಿ.

ನಮ್ಮ ಶನಿವಾರ ಮೇಳದಲ್ಲಿ ಸ್ತ್ರೀ ವೇಷ ಮಾಡುವುದು ನಡೆದೇ ಇತ್ತು. ಹೈಸ್ಕೂಲಿನ ನಾಟಕಗಳಲ್ಲೂ ಪ್ರಧಾನ ಸ್ತ್ರೀ ಪಾತ್ರ ನನ್ನದೇ ಆಗಿರುತ್ತಿತ್ತು. ನಮ್ಮ ನಾಟಕಗಳ ನಿರ್ದೇಶಕರು ಕುಕ್ಕಿಲ್ಲಾಯ ಮಾಸ್ತರರು. ಅವರ ನಿರ್ದೇಶನದಲ್ಲಿ ಒಮ್ಮೆ ಬ್ಯಾಡ್ಮಿಂಟನ್ ಆಡುವ ಮಾಡರ್ನ್ ಬೆಡಗಿ ಪಾತ್ರ ನಾನು ಮಾಡಬೇಕಿತ್ತು. ಅದಕ್ಕೆ ಮೊಣಗಂಟಿನವರೆಗೆ ಬರುವ ಸ್ಕರ್ಟ್, ಬಿಳಿಯ ಶರ್ಟ್‍ನ ಅಗತ್ಯವಿತ್ತು. ಇದನ್ನು ಎಲ್ಲಿಂದ ತರಲಿ ಎಂದು ಪೇಚಾಡಿದೆ. ಆಗ ಫಾದರ್ ರೆಬೆಲ್ಲೋ ಸರ್ ನನ್ನ ಸಮಸ್ಯೆಯನ್ನು ಪರಿಹರಿಸಿದರು. ನಮ್ಮ ಹೈಸ್ಕೂಲಿನಲ್ಲೇ ಮಹಾ ಧಿಮಾಕಿನ ಹುಡುಗಿ ಎಂದೇ ಖ್ಯಾತಳಾದ ಹೆಲೆನ್‍ಳ ಡ್ರೆಸ್ಸನ್ನು ನನಗೆ ಕೊಡಿಸಿದರು. ನಾಟಕ ಯಶಸ್ವಿಯಾಯಿತು. ಡ್ರೆಸ್ ಹಿಂದಿರುಗಿಸುವಾಗ ನನ್ನ ಕ್ಲಾಸಿನವಳೇ ಆದ ಆಕೆಗೆ ಥ್ಯಾಂಕ್ಸ್ ಹೇಳುವಷ್ಟರಲ್ಲಿ ಬೆವತು ಹೋಗಿದ್ದೆ. ಆಕೆ ನನ್ನ ಅವಸ್ಥೆ ನೋಡಿ ನಕ್ಕದ್ದನ್ನು ಎಂದೂ ಮರೆಯಲಾರೆ.

ಹೈಸ್ಕೂಲಿನಲ್ಲಿ ನಮ್ಮ ಶಾಲಾ ವಾರ್ಷಿಕೋತ್ಸವದಂದು ಏರ್ಪಡಿಸಲಾದ `ಮೇವಾಡ ಪತನ’ ಎನ್ನುವ ಐತಿಹಾಸಿಕ ನಾಟಕದಲ್ಲಿ ನನ್ನದು ಮಾನಸಿಯ ಪಾತ್ರ. ಡ್ರೆಸ್ ಸರಬರಾಜು, ಸ್ಟೇಜ್ ಪರಿಕರಗಳು, ಮೇಕ್ ಅಪ್ ಎಲ್ಲ ಆಗ ಖ್ಯಾತನಾಮರಾಗಿದ್ದ ಬುಡಾನ್ ಸಾಹೇಬರದ್ದು. ಈ ನಾಟಕ ಅದೆಷ್ಟು ಯಶಸ್ವಿಯಾಯಿತೆಂದರೆ ಟಿಕೆಟ್ ಇಟ್ಟು ಎರಡು ಮೂರು ಬೆನಿಫಿಟ್ ಶೋಗಳೂ ಆದುವು. ಆದರೆ ನಾಟಕಗಳಲ್ಲಿ ಹೀರೋ ಆಗಬೇಕು ಎನ್ನುವ ನನ್ನ ಮಹದಾಸೆ ಕೈಗೂಡಲೇ ಇಲ್ಲ.

ಕೋಳಿ ಅಂಕ, ಕಂಬಳ, ಬಯಲಾಟ, ಚೆನ್ನೆಮಣೆ, ಪಗಡೆಯಾಟ ಇತ್ಯಾದಿಗಳನ್ನು ಹೊರತುಪಡಿಸಿ ಬೇರೆ ಮನರಂಜನೆ ಇಲ್ಲದ ಆ ಕಾಲದಲ್ಲಿ ಕುಕ್ಕಿಲ್ಲಾಯ ಮಾಸ್ಟ್ರು ಸಂಘಟಿಸುತ್ತಿದ್ದ ನಮ್ಮ ನಾಟಕಗಳನ್ನು ಜನ ಮುಗಿಬಿದ್ದು ನೋಡುತ್ತಿದ್ದರು. ಕೆಲ ಜವ್ವನಿಗರು ಮರಹತ್ತಿ ಕುಳಿತು ನಾಟಕ ವೀಕ್ಷಿಸುತ್ತಿದ್ದರು.

ತರಗತಿಯಲ್ಲಿ ಕಲಿಯುವುದರಲ್ಲೂ ಮುಂದಿದ್ದ ನಾನು ಆರನೇ ಫಾರ್ಮ್‍ನಲ್ಲಿರುವಾಗ ಸ್ಕೂಲ್ ಪ್ಯುಪಿಲ್ ಲೀಡರ್ (SPL) ಆಗಿ ಆಯ್ಕೆಯಾಗಿದ್ದಲ್ಲದೆ, ಶಾಲಾ ವಿದ್ಯಾರ್ಥಿಗಳ ಪಾರ್ಲಿಮೆಂಟ್‍ನಲ್ಲಿ ಮಂತ್ರಿಯೂ ಆದೆ. ಪ್ರಖರ ವಾಗ್ಮಿಯಾಗಿದ್ದ ನಮ್ಮ ಶ್ರೀನಿವಾಸ ಭಟ್ ಮಾಸ್ಟರರ ಮಗ ಚಿತ್ತರಂಜನ್ ನಮ್ಮ ಪಾರ್ಲಿಮೆಂಟ್‍ನ ವಿಪಕ್ಷ ನಾಯಕನಾಗಿದ್ದ. ಶಾಲೆಯ ಸ್ವಚ್ಛತೆ, ಹಾಜರಿ (Attendance), ಶಿಸ್ತುಪಾಲನೆ, ಸಮಯ ಪಾಲನೆ, ಹೂದೋಟದ ಆರೈಕೆ ಇತ್ಯಾದಿ ಎಲ್ಲ ನಮ್ಮ ಅಣಕು ಪಾರ್ಲಿಮೆಂಟಿನಲ್ಲಿ ಚರ್ಚಿಸಲ್ಪಡು ತ್ತಿದ್ದವು. ಈ ಚಿತ್ತರಂಜನ್ ಮುಂದೆ ವೈದ್ಯನಾಗಿ ಭಟ್ಕಳದಲ್ಲಿ ಅತ್ಯಂತ ಜನಪ್ರಿಯನಾಗಿದ್ದಲ್ಲದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಶಾಸಕನಾದ. ಆದರೆ ಆತ ವಿದ್ರೋಹಿಗಳ ಗುಂಡಿಗೆ ಬಲಿಯಾದುದು ನಮ್ಮ ಕರಾವಳಿಯ ಒಂದು ದುರಂತ ಅಧ್ಯಾಯವಾಗಿದೆ.

ನಮ್ಮ ಹೈಸ್ಕೂಲಿನ ಹಲವಾರು ಶಿಕ್ಷಕರು ನೆನಪಾಗುತ್ತಾರೆ. ಒಂಭತ್ತನೆಯ ಮತ್ತು ಹತ್ತನೆಯ ತರಗತಿಯ ನಮ್ಮ ಡಿವಿಜನಿಗೆ ಜಿ. ಶ್ರೀನಿವಾಸರಾಯರು ಸಾಯನ್ಸ್, ಶ್ರೀನಿವಾಸ ಭಟ್ಟರು ಗಣಿತ, ಪಾದರ್ ರೆಬೆಲ್ಲೋ ಇಂಗ್ಲಿಷ್, ಲಕ್ಷ್ಮೀನಾರಾಯಣ ಕುಕ್ಕಿಲ್ಲಾಯರು ಸೋಶಿಯಲ್ ಸ್ಟಡೀಸ್, ಕೃಷ್ಣಮೂರ್ತಿ ಕೆದ್ಲಾಯರು ಕನ್ನಡ ಬೋಧಿಸುತ್ತಿದ್ದರು. ನಾರಾಯಣ ಆಚಾರ್ಯರು ಇನ್ನೊಂದು ಡಿವಿಜನ್‍ಗೆ ಗಣಿತ ಕಲಿಸುತ್ತಿದ್ದರು. ಸಿಕ್ಸ್ತ್ ಫಾರ್ಮ್ (11ನೇ ಕ್ಲಾಸು)ಗೆ ಬಂದಾಗ ವಾದಿರಾಜ ಶೆಟ್ರು ಸೋಶಿಯಲ್ ಸ್ಟಡೀಸ್, ಡಿಸಿಲ್ವ ಮಾಸ್ಟ್ರು ಗಣಿತ, ಫಾದರ್ ಟೆಲ್ಲಿಸ್ ಇಂಗ್ಲಿಷ್, ಸೋಮನಾಥ ರಾಯರು ಸಾಯನ್ಸ್, ಅನಂತ ರಾಮ ಉಪಾಧ್ಯರು ಕನ್ನಡ ಪಾಠ ಮಾಡುತ್ತಿದ್ದರು. ಡಿಸಿಲ್ವ ಮಾಸ್ಟರರ ಗಣಿತ ಹಾಗೂ ಫಾದರ್ ಟೆಲ್ಲಿಸರ ಇಂಗ್ಲಿಷ್ ಹೊರತುಪಡಿಸಿದರೆ ಕಲಿಕೆಯ ಮಾಧ್ಯಮ ಕನ್ನಡವೇ ಆಗಿತ್ತು. ಡಿಸಿಲ್ವರು ಕೂಡ ಮಕ್ಕಳಿಗೆ ಅರ್ಥವಾಗದ ರೇಖಾಗಣಿತವನ್ನು ಕನ್ನಡದಲ್ಲಿ ವಿವರಿಸುತ್ತಿದ್ದರು. ಕೆದ್ಲಾಯರು, ಉಪಾಧ್ಯರು, ನಾರಾಯಣ ಆಚಾರ್ಯರು ಕಚ್ಚೆಪಂಚೆ, ತುಂಬು ತೋಳಿನ ಪೈರನ್, ಹೆಗಲ ಮೇಲೊಂದು ಮಡಿಚಿದ ಅಂಗವಸ್ತ್ರ ಭೂಷಿತರಾಗಿ ಬರುತ್ತಿದ್ದರೆ ಉಳಿದವರೆಲ್ಲ ಮುಂಡು, ಶರಟಿನಲ್ಲೇ ವಿರಾಜಮಾನರಾಗು ತ್ತಿದ್ದರು. ಇದಕ್ಕೆ ಅಪವಾದವೆಂದರೆ ಡಿಸಿಲ್ವ ಮಾಸ್ಟ್ರು ಮಾತ್ರ. ಅವರದು ಖಡಕ್ ಇಸ್ತ್ರಿಯ ಪ್ಯಾಂಟು ಶರಟು.

ಈ ಎಲ್ಲ ಮಾಸ್ಟರರನ್ನು ಬಿಟ್ಟರೆ ಎಲ್ಲ ಡಿವಿಜನ್ನುಗಳಿಗೂ ಕ್ಲಾಸುಗಳಿಗೂ ಮಾಸ್ಟರ ರಾಗಿದ್ದವರು ತೋಟಗಾರಿಕೆಯ ಶಿಕ್ಷಕ ತೌಡ ಶೆಟ್ಟರು ಹಾಗೂ ಡ್ರಿಲ್ ಮಾಸ್ಟರ್ ಆಗಿದ್ದ ಅನಂತಕೃಷ್ಣ ರಾಯರು. ತೌಡ ಶೆಟ್ಟರದು ಖಾದಿಯ ಮುಂಡು, ಖಾದಿಯ ನಸು ಕೇಸರಿಯ ಪೈರನ್. ಸದಾ ಮುಗುಳು ನಗೆ ಮಾಸದ ಮೊಗವುಳ್ಳ ಈ ಮಾಸ್ತರರನ್ನು ಎಲ್ಲ ವಿದ್ಯಾರ್ಥಿಗಳೂ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಅನಂತಕೃಷ್ಣ ರಾಯರು ಮುಂಡು ಶರಟಿನೊಂದಿಗೆ ಶಾಲೆಗೆ ಬಂದರೂ ಡ್ರಿಲ್ ಮಾಡಿಸುವಾಗ ಮೊಣಕಾಲಿನ ಸ್ವಲ್ಪ ಕೆಳಗೆ ಬರುವ ದೊಗಳೆ ಶಾಟ್ರ್ಸ್ ಮತ್ತು ಬಿಳಿಯ ಅಂಗಿ ತೊಡುತ್ತಿದ್ದರು. ಅವರ ಶರಟಿನ ಕಿಸೆಯಲ್ಲಿ ವಿಶಲ್ ಸದಾ ಪವಡಿಸಿರುತ್ತಿತ್ತು.

ಅನಂತಕೃಷ್ಣ ಮಾಸ್ತರರು ನಮ್ಮಿಂದ ಡ್ರಿಲ್ ಮಾಡಿಸುತ್ತಿದ್ದುದಲ್ಲದೆ, ಬೇಸ್ ಬಾಲ್, ಫುಟ್‍ಬಾಲ್ ಹಾಗೂ ಕ್ರಿಕೆಟ್ ಟೀಮನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ತರಬೇತಿಯಿಂದ ನಮ್ಮ ತರಗತಿಯ ಮಚಾದೊ ಎಂತಹ ವೇಗದ ಬೌಲರ್ ಆಗಿದ್ದನೆಂದರೆ ಉಡುಪಿಯ ಬೋರ್ಡ್ ಹೈಸ್ಕೂಲ್ ಹಾಗೂ ಕ್ರಿಶ್ಚನ್ ಹೈಸ್ಕೂಲ್‍ನ ಕ್ರಿಕೆಟ್ ಟೀಮ್‍ಗಳಿಗೆ ಸಿಂಹಸ್ವಪ್ನನಾಗಿದ್ದ.

ಈ ಕ್ರೀಡೆಗಳಿಗೆ ತರಬೇತಿ ಎಲ್ಲ ಶಾಲಾ ಸಮಯದ ಬಳಿಕ ನಡೆಯುತ್ತಿದ್ದುದರಿಂದ, ನನಗೆ ತುಂಬ ಮನಸ್ಸಿದ್ದರೂ ಭಾಗವಹಿಸಲಾಗಲಿಲ್ಲ. ಏಕೆಂದರೆ ಶಾಲೆಯ ಪಾಠ ಮುಗಿದೊಡನೆ ನಾನು ಅಣ್ಣನ ಹೊಟೇಲಿನ ಛಾರ್ಜ್ ವಹಿಸಿಕೊಳ್ಳಬೇಕಾಗಿತ್ತು. ಆದರೂ ಒಮ್ಮೆ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿ ದಾಂಡಿಗ ಬೀಸಿದ ಚೆಂಡಿನ ದಾಳಿಗೆ ಪಕ್ಕಾಗಿ ಹಣೆ ಊದಿಸಿಕೊಂಡ ಅನುಭವವಷ್ಟೇ ನನ್ನ ಕ್ರೀಡಾ ಹವ್ಯಾಸಕ್ಕೆ ಹಿಡಿದ ಕನ್ನಡಿಯಾಗಿತ್ತು.

(ಕೃತಿ: ಎಳೆದ ತೇರು (ಆತ್ಮಕಥನ), ಲೇಖಕರು: ವ್ಯಾಸರಾವ್‌ ನಿಂಜೂರ್‌, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)