ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ

ಬಿಟ್ಟ ಜಾಗ ಭರ್ತಿ ಮಾಡುವುದು
ಅಷ್ಟು ಸುಲಭವಲ್ಲ,
ಸರತಿಯಲ್ಲಿ ನಿಂತು
ಬ್ಯಾಂಕಿನ ಚಲನ್ ತುಂಬಿದಂತಲ್ಲ.
ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು,
ಸಂದರ್ಭದೊಡನೆ ಬೆರೆತು,
ಹೊಂದಿಕೊಳ್ಳುವ ಪದವ
ರಿಕ್ತ ಗೆರೆಯ ಮೇಲೆ ಬರೆಯಬೇಕು.
ತುಂಬಬೇಕು ಏಕಾಗ್ರತೆಯಿಂದ
ತುಳುಕದಂತೆ ಎಣ್ಣೆ ಹಣತೆಗೆ.

ಗುಂಪಿನಲ್ಲಿ ಎಗರಾಡಿ
ಸುತ್ತಲೂ ತಳ್ಳಾಡಿ
ಕಿಟಕಿಗೆ
ಕರವಸ್ತ್ರ ತೂರಿಸಿ ಎಸೆದು
ಬಸ್ಸಿನಲ್ಲಿ ಹಿಡಿದಂತಲ್ಲ ಸೀಟು ,
ಖಾಲಿ ಇದ್ದರೆ ಸೀಟು
ಯಾರು ಬೇಕಾದರೂ ಕೂರಬಹುದು
ಅದು ಮೀಸಲಾಗದ ಹೊರತು.
ಹೃದಯಕ್ಕೆ ಹಾಗೆಲ್ಲ
ಎಲ್ಲರನ್ನೂ ಕೂರಿಸಿಕೊಳ್ಳಲಾಗದು.
ದೇವರಿಗಷ್ಟೆ ಗರ್ಭಗುಡಿ
ದೇವರಿದ್ದರಷ್ಟೇ ಅದು ಗರ್ಭಗುಡಿ.

ಹೊಂದಿಸಿ ಬರೆಯಿರಿ ಎಂದರೇ
ಹೇಗೋ ಅಂದಾಜಿಸಿ ಬರೆದು ಬಿಡಬಹುದು.
ಖಾಲಿ ಜಾಗವನ್ನು ಭರ್ತಿ ಮಾಡುವುದು
ಬಿಟ್ಟ ಸ್ಥಳ ತುಂಬುವುದು ಒಂದೇ ಅನಿಸಿದರೂ
ಅಪ್ಪ ಅಮ್ಮನಷ್ಟೇ ಬೇರೆ ಬೇರೆ.
ಬಿಟ್ಟ ಸ್ಥಳ ಭರ್ತಿಮಾಡುವುದು ಸುಲಭದ ಮಾತಲ್ಲ
ಬಿಟ್ಟು ಹೋದ ಬಳಿಕ.

ಬಿಟ್ಟು ಹೋದ ಪದ
ಅದೆಲ್ಲಿಗೆ ಬಿಟ್ಟು ಹೋಯಿತೋ..
ಕಳೆದ ಉಂಗುರ ಕೈ ಬೆರಳಲಿ
ಗುರುತು ಉಳಿಸಿದಂತೆ,
ಕರವಸ್ತ್ರದ ಎಳೆ ಎಳೆಯಲಿ
ನೆನಪು ಮಿಳಿತಂತೆ.

ಬಿಟ್ಟು ಹೋಗಿರುವ ಪದವೆಂದರೆ
ಕೆಂಡಸಂಪಿಗೆಯಲ್ಲಿನ ಕೆಂಡ
ಅಮ್ಮನ ಹಣೆಯ ಸಿಂಧೂರ
ನೆನಪಾಗದ ಕನಸಿನ ಅಸ್ಪಷ್ಟ ವೃತ್ತಾಂತ.
ಶಂಖದೊಳಗಿನ ಹುಳು
ಮೌನದ ಮೌನ
ದೇಹದೊಳಿಗನ ಆತ್ಮ.

 

ಶರತ್ ಪಿ.ಕೆ. ಹಾಸನದವರು.
ನಗರ ಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಗುಂಪಿಗೆ ಸೇರದ ಪದಗಳು” ಇವರ ಪ್ರಕಟಿತ ಕವನ ಸಂಕಲನ.