ಬಾಲ್ಕನಿಯಲ್ಲಿ ಚಳಿ

ರೆಸಾರ್ಟ್ ರೂಮಿನ ಬಾಲ್ಕನಿಯಲ್ಲಿ
ನಿಂತು
ನಸುಕಿನಲ್ಲಿ ಮಂಜಿನೊಳಗೆ ಮಸುಕಾಗಿ
ಕಣ್ಣುಜ್ಜುತ್ತಾ ಎಚ್ಚರಗೊಳ್ಳುತ್ತಿದ್ದ
ದೂರದ ನಗರದ ಅಸ್ಪಷ್ಟ ಚಿತ್ರವನ್ನು
ಸವಿಯುತ್ತಿದ್ದೆ
ಬಿಸಿ ಆರದ ಒಂದು ಕಪ್ ಕಾಫಿಯೊಂದಿಗೆ

ಉಸಿರು ಬಿಟ್ಟರೆ ಬಾಯೊಳಗಿನ
ಹೊಗೆ
ಬಿಸಿ ಕಾಫಿಯ ಹೊಗೆಯನ್ನೂ ಮೀರಿಸಿ
ಹೊರಡುತ್ತದೆ
ಇರುವುದೆಲ್ಲವ ಹೊತ್ತು
ನಿಲ್ಲೆನುವಂಥ ಚಳಿ
ಕೈಯಲ್ಲೇ ನಡುಗುತ್ತ ನಗುವ ಕಪ್

ಮಂಜಿನ ಹನಿಗಳು ಮೇಲಿಂದ ಕೆಳಗೆ
ನಿರಾಯಾಸವಾಗಿ ಟಪ್ ಎಂದು ಬೀಳುತ್ತವೆ
ಕೆಳಗಡೆ ನಿಲುಗಡೆಗೊಂಡ ಕಾರಿನ
ಮೈಯ ಮೇಲೆ

ಹೈವೇ ಪಕ್ಕದ ಫುಟ್ ಪಾತಿನಲ್ಲಿ
ಚಳಿಕೋಟು ತೊಟ್ಟು
ಬಿರುಸಿನಿಂದ ನಡೆವ
ನಡುವಯಸ್ಸಿನ ದಂಪತಿ
ರೈಲ್ವೆ ಸ್ಟೇಷನ್ನಿನ ದಾರಿ ಕಳಚಿ ಬಂದ
ಬ್ಯಾಗಿನವರ ಬೆನ್ನು ಬೀಳುವ
ದುಪ್ಪಟ್ಟು ರೇಟಿನ ರಿಕ್ಷಾ ಚಾಲಕರು

ಏನೂ ಕಾಣದ ಹಾಗೆ
ಅಡ್ಡಲಾಗಿ ಬಂದು ನಿಂತಿದೆ
ಇಂಗ್ಲಿಷ್ ಮೀಡಿಯಂ
ಸ್ಕೂಲ್ ನ ಮಿನಿ ವ್ಯಾನು
ದೊಡ್ಡ ಬ್ಯಾಗಿನ ಸಣ್ಣ ಮಕ್ಕಳು
ಹತ್ತುತ್ತಾರೆ
ಬಾಹ್ಯಾಕಾಶಕ್ಕೆ ಹೊರಟವರಂತೆ

ಕಾಫಿ ಕಪ್ ಹಗುರವಾಗಿದೆ
ಗೊತ್ತೇ ಆಗದೆ
ಹೀರಿದ್ದು ಬೆಳಗು
ಚಳಿಯ ನಡುವಿನಲ್ಲೆ
ತಣ್ಣನೆಯ ಗಾಳಿ ಬೀಸತೊಡಗಿದೆ
ಮೈ ಅಲ್ಲಾಡಿಸುವಂತೆ
ಬೆನ್ನ ಹಿಂದಿನಿಂದ ಸದ್ದಿಲ್ಲದೆ
ಬಂದವಳು
ಬಿಗಿಯಾಗಿ ಬೆಚ್ಚನೆ ಅಪ್ಪಿ
ನಿಂತೇ ಮಲಗಿದ್ದಾಳೆ
ಗಾಳಿಯೊಂದೆ ಅಲ್ಲ ಚಳಿಯೂ ನಾಚುವಂತೆ
ನನ್ನನ್ನು ಹೊದ್ದಳೋ ನಾನೇ ಹೊದ್ದೆನೋ

ಆರದೆ ಏರಿ ಅವಳುಸಿರಾಟದ ಬಿಸಿ
ಬೆಳಗು ಬರಿದಾಗದಂತೆ
ಮಸುಕು ಸರಿದು ಮಂಜು ಹರಿಯದಂತೆ
ನನ್ನ ಆವರಿಸಿ ಅಮಲೇರಿಸಿದಂತೆ
ಬೆನ್ನ ಮೇಲೆ ನರ್ತಿಸುತ್ತ

ಬಾಲ್ಕನಿಯ ಬಾಗಿಲು‌ ಮುಚ್ಚಿದೆ
ಈಗ ಬಾಳ್ ಕನಿಯಲ್ಲಿ ನಾನು ಅವಳು ಮತ್ತು ಚಳಿ.

ಷರೀಫ್‌ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದಾರೆ
‘ಕನಸಿನೂರಿನ ದಾರಿ’ ಪ್ರಕಟಿತ ಕವನ ಸಂಕಲನ
ಓದು, ಬರಹ, ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ಸದ್ಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ