50ರ ಮತ್ತು 60ರ ಸಂದರ್ಭವನ್ನು ಊಹಿಸಿನೋಡಿ. ಆ ದಶಕಗಳ ಬರೆದ ಕಥಾ ವಸ್ತುಗಳನ್ನು ನೋಡಿ. ಶಾಂತಿನಾಥರ ಸಾಹಿತ್ಯ ಆಗಿನ ಕಾಲಕ್ಕೂ ಹೊಸ ಮತ್ತು ಯಾರೂ ಪ್ರಯತ್ನಿಸಿರದ ಆಯಾಮಗಳನ್ನು ತೆರೆದಿಡುತ್ತಿತ್ತು ಎನ್ನುವುದು ನಿಜ. ಹೀಗೆ ಮಡಿವಂತಿಕೆಯೇ ಇಲ್ಲದೇ ಬರೆಯುತ್ತಿದ್ದ ಶಾಂತಿನಾಥರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ತಮ್ಮಷ್ಟಕ್ಕೆ ತಾವು ನಿರ್ಭಿಢೆಯಿಂದ ಬರೆದರು. ತಮ್ಮ ವಿಸ್ತಾರವಾದ ಸಾಹಿತ್ಯ- ಮಾನಸಶಾಸ್ತ್ರ – ಸಮಾಜಶಾಸ್ತ್ರ – ರಾಜಕೀಯದ ಓದು ಮತ್ತು ಒಳನೋಟಗಳ ಹಿನ್ನೆಲೆ ಅವರ ಕಥೆಯ ಕಟ್ಟುವಿಕೆಯಲ್ಲಿದೆ. ಆದರೆ ಆ ವಿಚಾರಗಳು ಕಥೆಯನ್ನು ಆಕ್ರಮಿಸಿಬಿಡುವುದಿಲ್ಲ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿ ಎಂ.ಎಸ್.ಶ್ರೀರಾಮ್ ಬರೆದ ಲೇಖನ ನಿಮ್ಮ ಓದಿಗೆ

ಶಾಂತಿನಾಥ ದೇಸಾಯಿ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿರುವ ಕಾಣಿಕೆಯನ್ನು ಗುರುತಿಸುವ ಗುರುತರ ಕೆಲಸವನ್ನು ಮುಗಳಿ, ಗಿರಡ್ಡಿ, ಆಮೂರ, ಅನಂತಮೂರ್ತಿ, ಪಿ.ಶ್ರೀನಿವಾಸ ರಾಯರಂತಹ ಹಿರಿಯರು ಸಶಕ್ತವಾಗಿ ಕೈಗೊಂಡಿದ್ದಾರೆ. ಒಬ್ಬ ಹಿರಿಯ ಲೇಖಕ, ಆತನ ಸಾಹಿತ್ಯ ಕೃತಿಗಳ ಆಂತರ್ಯವನ್ನು ಬಗೆದು ನೋಡಿರುವ ಅನೇಕ ಹಿರಿಯ ಸಾಹಿತಿಗಳು – ಈ ನಡುವೆ ಮುಂದಿನ ತಲೆಮಾರಿನ ನಾನು ಈ ಸಾಹಿತ್ಯಕ್ಕೆ ಪ್ರತಿಕ್ರಿಯಿಸಿ ಚರ್ಚೆಗೆ ಗ್ರಾಸವನ್ನೊದಗಿಸುವುದು, ಅಥವಾ ಹೊಸ ಒಳನೋಟಗಳನ್ನು ಕೊಡಮಾಡುವುದು ಸಾಧ್ಯವಿಲ್ಲದ ಮಾತು. ಆದರೂ ನಮಗೆ ಪ್ರಿಯವಾದದ್ದು ಸಿಕ್ಕಾಗ ಅದರ ರುಚಿಯನ್ನು ವರ್ಣಿಸುತ್ತಾ ಓಡಾಡುವುದಿಲ್ಲವೇ? ವಿದ್ಯಾರ್ಥಿ ಭವನದ ದೋಸೆಯಾಗಲೀ ಶಂಕರಮಠದ ಬಳಿಯಿರುವ ಬ್ರಾಹ್ಮಣರ ಕಾಫಿ ಬಾರ್‌ನ ಇಡ್ಲಿಯಾಗಲೀ, ಎಂ.ಟಿ.ಆರ್‌ನಲ್ಲಿ ಸಿಗುವ ರವೆಇಡ್ಲಿ-ಬಾದಾಮಿ ಹಲ್ವದ ರುಚಿಯನ್ನು ಚಪ್ಪರಿಸುತ್ತಾ ಮೆಚ್ಚುವ ಮಾತುಗಳನ್ನು ಗ್ರಾಹಕರು ತಮ್ಮದೇ ಮಾತಿನಲ್ಲಿ ಹೇಳುವಂತೆ, ಅದಕ್ಕೆ ನಕ್ಷತ್ರಗಳ ಮಾಪನವನ್ನು ಕೊಡುವಂತೆ ನನ್ನ ಈ ಕೆಲಸವೂ ಆಗಿದೆ. ತೆಲುಗಿನಲ್ಲಿ ಒಂದು ಗಾದೆಯಿದೆ. ಜಗಮೆರಗಿನ ಬ್ರಾಹ್ಮಣುಡಿಕಿ ಜಂಧ್ಯಮೇಲ – ಜಗದ್ವಿಖ್ಯಾತ ಬ್ರಾಹ್ಮಣನಿಗೆ ಜನಿವಾರವೇಕೆ? ಹೀಗಿದ್ದೂ ಶಾಂತಿನಾಥ ದೇಸಾಯಿಯವರ ಕಥಾಲೋಕದ ಮುಕುಟಕ್ಕೆ ಮತ್ತೊಂದು ಗರಿಯನ್ನು ಸೇರಿಸುವ ಸಾಹಸವನ್ನು ನಾನು ಮಾಡುತ್ತಿದ್ದೇನೆ. ಇದರಿಂದ ಮುಕುಟದ ಮಹತ್ವ ಹೆಚ್ಚುವುದಿಲ್ಲವಾದರೂ ಅದರಲ್ಲಿ ನನ್ನದೂ ಒಂದು ಗರಿಯಿದೆಯೆಂಬ ವಿಚಿತ್ರ ಸಮಾಧಾನ ನನಗೆ ಉಂಟಾಗುತ್ತದೆ. ಹೀಗಾಗಿ ಶಾಂತಿನಾಥರ ಬಗ್ಗೆ ಬರೆಯುವುದು ನನ್ನ ಸ್ವಾರ್ಥದ ಮಾತೇ.

ಈ ಲೇಖನದಲ್ಲಿ ನಾನು ಅವರನ್ನು ದೇಸಾಯಿ ಎಂದು ಕರೆಯದೇ ಶಾಂತಿನಾಥರೆಂದೇ ಕರೆಯುತ್ತೇನೆ. ನನ್ನ ಮಟ್ಟಿಗೆ ವೈಯಕ್ತಿಕವಾಗಿ ಪರಿಚಿತರಿದ್ದ ಹೈದರಾಬಾದಿನ ಗುರುಸಮಾನರಾದ ಭೀಮರಾವ್ (ಬಿಟಿ) ದೇಸಾಯಿ, ನಿಜಕ್ಕೂ ಮಾಸ್ತರೆಂದು ಕರೆಸಿಕೊಂಡ ದೇಸಾಯಿಯವರು. ನಂತರ ಬಿ.ಸಿ.ದೇಸಾಯಿಯವರ ಸಾಹಿತ್ಯವೂ ನಮ್ಮ ಮುಂದಿದೆ. ಆದರೆ ಶಾಂತಿನಾಥರನ್ನು ದೇಸಾಯಿ ಎಂದು ಕರೆಯುವ ಆಯ್ಕೆಯನ್ನು ನಾನು ಬಿಟ್ಟುಕೊಡುವುದಕ್ಕೆ ಒಂದು ಕಾರಣವಿದೆ. ಶಾಂತಿನಾಥರು ಗಿರಡ್ಡಿಯ ವಾರಗೆಯವನರಾಗಿದ್ದ ನಮ್ಮ ಹೈದರಾಬಾದಿನ ಬಿಟಿ ದೇಸಾಯಿಮಾಸ್ತರ ಗುರುಗಳಾಗಿರಲಿಕ್ಕೂ ಸಾಕು. ವಯಸ್ಸಿನಲ್ಲಿ ಹಿರಿಯರೂ ಪ್ರಬುದ್ಧರೂ, ಘನವಾದ ಕುಲಪತಿಗಳ ಸ್ಥಾನದಲ್ಲಿ ಕುಳಿತ ಆಡಳಿತಗಾರರೂ ಆಗಿರಬಹುದು. ಅನೇಕ ಸಂಶೋಧನಾ ಮಹಾಪ್ರಬಂಧಗಳ ಗೈಡಾಗಿರಬಹುದು. ಭಾಷಾ ಶಾಸ್ತ್ರಜ್ಞರೂ, ನಮ್ಮ ಕಾಲದ ಪ್ರಖರ ಬುದ್ಧಿಜೀವಿಯಾದ ಗಣೇಶ ದೇವಿಯವರ ಗುರುಗಳಾಗಿರಬಹುದು. ಆದರೆ ಅವರ ಸಾಹಿತ್ಯವನ್ನು ಅಭ್ಯಾಸ ಮಾಡಿದರೆ ಶಾಂತಿನಾಥರು ಪಕ್ಕದಲ್ಲಿ ಕುಳಿತು ಗೆಳೆಯರ ಹಾಗೆ ವಿಚಾರವಿನಿಮಯ ಮಾಡುತ್ತಿರುವಂತೆ, ನನ್ನ ವಾರಗೆಯ ಗೆಳೆಯರಂತೆ ಕಂಡುಬರುತ್ತಾರೆ. ನಾನು ಅವರೊಂದಿಗಿನ – ಅವರ ಸಾಹಿತ್ಯದೊಂದಿಗಿನ ಸಂಬಂಧವನ್ನು ಒಬ್ಬ ಗೆಳೆಯನಂತೆ ನೋಡಲು ಅವರು ಪ್ರೇರೇಪಿಸುತ್ತಾರೆ. ಈ ವೈಶಿಷ್ಟ್ಯತೆ ಅಥವಾ ನಮ್ಮ ಬೆಂಗಳೂರಿನ ಭಾಷೆಯಲ್ಲಿ ಹೇಳಬೇಕೆಂದರೆ – ಒಬ್ಬ ಲೇಖಕನ ಜೊತೆ ಸದರ ತೆಗೆದುಕೊಳ್ಳಲು ಸಾಧ್ಯವಾಗುವ ಅಪರೂಪದ ಅವಕಾಶವನ್ನು ಶಾಂತಿನಾಥರು ಒದಗಿಸಿಕೊಡುತ್ತಾರೆ. ಎಂದೂ ನೋಡಿಲ್ಲದ, ಮಾತನಾಡಿಸಿಲ್ಲದ, ಒಡನಾಟವಿಲ್ಲದ, ಹಿರಿಯ ತಲೆಮಾರಿನ ಒಬ್ಬ ಪ್ರಖರ ಲೇಖಕರ ಜೊತೆ ಈ ಸದರ ನಾನು ತೆಗೆದುಕೊಳ್ಳಲು ಸಾಧ್ಯವಾಗುವುದು ಅವರ ಸಾಹಿತ್ಯದಲ್ಲಿರುವ ಒಂದು ಆಪ್ಯಾಯಮಾನತೆಯ ಗುಣದಿಂದಾಗಿ. ಈ ಸದರ ತೆಗದುಕೊಳ್ಳಬಹುದಾದ ಸಾಧ್ಯತೆಯನ್ನು ಅನಂತಮೂರ್ತಿಯವರು, ಚಿತ್ತಾಲರು, ಲಂಕೇಶರು ಒದಗಿಸಿಕೊಡುವುದಿಲ್ಲ. ಯಾಕೆ ಹೀಗಿರಬಹುದೆನ್ನುವ ಚರ್ಚೆಯನ್ನು ಮಾಡುತ್ತಲೇ ನಾನು ಶಾಂತಿನಾಥರ ಸಾಹಿತ್ಯದ ವೈಶಿಷ್ಟ್ಯತೆಯನ್ನು ಗುರುತಿಸಲು ಪ್ರಯತ್ನಿಸುತ್ತೇನೆ.

ಈ ಆಪ್ಯಾಯಮಾನತೆ ಎಲ್ಲಿಂದ ಬರುತ್ತದೆ ಎನ್ನುವುದು ಆಸಕ್ತಿಯ ವಿಷಯ. ಶಾಂತಿನಾಥರು ಕನ್ನಡಕ್ಕೆ ನಗರದ ಆಯಾಮಗಳನ್ನು ತಂದರು ಎನ್ನುವ ಟಿಪ್ಪಣಿಯನ್ನೂ ನವ್ಯರ ಕಾಲದಲ್ಲಿದ್ದ ಅರ್ಬನ್ ಬರಹಗಾರರಲ್ಲಿ ಚಿತ್ತಾಲ ಮತ್ತು ಶಾಂತಿನಾಥರ ಹೆಸರುಗಳನ್ನು ಉಲ್ಲೇಖಿಸಿರುವುದನ್ನೂ ನೋಡಿದ್ದೇನೆ. ಆದರೆ ನಿಜಕ್ಕೂ ಬಗೆದು ನೋಡಿದರೆ ಶಾಂತಿನಾಥರನ್ನು ಅರ್ಬನ್ ಸಂವೇದನೆಯ ಲೇಖಕರೆಂದು ಸ್ಲಾಟ್ ಮಾಡುವುದು ಸರಿಯಲ್ಲ ಅನ್ನಿಸುತ್ತದೆ. ಅವರ ಕಥೆಗಳಲ್ಲಿ ನಗರದ ಜೊತೆಗಿನ ಸೆಣೆಸಾಟ, (ಚಿತ್ತಾಲ, ಕಾಯ್ಕಿಣಿ ಮುಂಬಯಿಯನ್ನು ನಿಭಾಯಿಸುವಂತೆ) ಅಲ್ಲಿನ ಸಾಮಾಜಿಕತೆ ಕಾಣುವುದಿಲ್ಲ. ಅವರ ಕಥೆಗಳು ನಡೆಯುವ ಸ್ಥಳದ ವಿವರಗಳೇ ವಿರಳ – ಅದು ಹೊರಗಿನ ಇಕೋಸಿಸ್ಟಂ ಜೊತೆ ಸಂವಾದ ನಡೆಸುವುದಿಲ್ಲ. ಅವರ ಕಾಲದಲ್ಲಿ ಬರೆದ ಅನೇಕರು ಬಿಚ್ಚಿಟ್ಟ ಗ್ರಾಮ ನಗರಗಳ ಘರ್ಷಣೆಯೂ ಕಾಣುವುದಿಲ್ಲ.

ಅದೇ ರೀತಿಯಲ್ಲಿ ಶಾಂತಿನಾಥರ ಒಂದೆರಡು ಕಥೆಗಳನ್ನು ಬಿಟ್ಟರೆ ವರ್ಗ ಸಂಘರ್ಷ, ಬಡತನ, ಜಾತಿವ್ಯವಸ್ಥೆಯ ತಲ್ಲಣಗಳು, ಯಾವುವೂ ನಮಗೆ ಕಾಣುವುದಿಲ್ಲ. ಹೆಚ್ಚಿನ ಸದ್ದುಗದ್ದಲವಿಲ್ಲದ ಆರ್ಭಟವಿಲ್ಲದ, ಭಾಷಾ ಸಂಭ್ರಮ ಪದಗಳ ಲಾಲಿತ್ಯವನ್ನು ಉಪಯೋಗಿಸದ, ಕಾವ್ಯಾತ್ಮಕವಲ್ಲದ – ಘನ ಎಂದು ತೋರದ ಅವರ ಕಥಾಲೋಕ ನಿಜಕ್ಕೂ ಸಾಧಾರಣದ್ದು ಎನ್ನುವಂತೆ ಕಂಡರೂ ಅದರಲ್ಲಿರುವ ಆಕರ್ಷಣೆ ಮತ್ತು ಸಾಧ್ಯತೆಗಳು ತೆರೆದುಕೊಳ್ಳುವುದು ಬೇರೆಯೇ ಒಂದು ಮಟ್ಟದಲ್ಲಿ. ಹೀಗಾಗಿಯೇ ಅವರನ್ನು ತಿಳಿದ ಹಾಗೂ ಒಪ್ಪಿತವಾದ ಪಡಿಯಚ್ಚಿಗೆ ಇಳಿಸಲು ಸಾಧ್ಯವಿಲ್ಲ.

ಶಾಂತಿನಾಥರ ವ್ಯಕ್ತಿತ್ವವೇ ಗೆಳೆತನ ಮತ್ತು ಕುಶಾಲಿನದ್ದಾಗಿತ್ತು ಎಂದು ಅವರನ್ನು ಅರಿತವರು ಹೇಳುತ್ತಾರೆ. ಸರಳ ಭಾಷೆಯ ಅವರ ಕಥೆಗಳಲ್ಲಿ ಅವರು ತರೆದಿಡುವ ಸಾಧ್ಯತೆಗಳು ಮತ್ತು ಪ್ರಶ್ನೆಗಳು ಬಹಳ ಗಹನವಾದವು. ಸಾಮಾನ್ಯವಾಗಿ ಗಂಡು ಹೆಣ್ಣಿನ ಸಂಬಂಧವನ್ನು ಪಾರಂಪರಿಕ ಸಮಾಜಕ್ಕೆ ಒಪ್ಪಿತವಾದ ಬಂಧನದಲ್ಲಿ ನೋಡಿ, ಅದರಿಂದ ಬಿಡುಗಡೆ ಹೊಂದುವ ಪರಿ ಮತ್ತು ಅದಕ್ಕೊಂದು ದೈಹಿಕ ಸಂಬಂಧದ ಆಯಾಮವನ್ನು ಕೊಡುವುದು (ಹೆಚ್ಚಿನೆಲ್ಲ?)

ಎಲ್ಲ ಬರಹಗಾರರೂ ಉಪಯೋಗಿಸುವ ತಂತ್ರ. ಆದರೆ ಶಾಂತಿನಾಥರ ಕಥೆಗಳಲ್ಲಿ, ನಾಟಕೀಯ ಅಂಶಗಳು ಬಂದಾಗಲೂ ಅವು ಸಹಜ ಮತ್ತು ಪ್ರಾಮಾಣಿಕ ಎನ್ನಿಸುತ್ತದೆ. ಸಾಮಾನ್ಯವಾಗಿ ಮದುವೆ, ಗೆಳೆತನ, ದೈಹಿಕ ಸಂಬಂಧ, ವಿಶ್ವಾಸ-ನಂಬಿಕೆಗಳನ್ನು ಮುರಿಯುವ ವಂಚನೆ-ಮೋಸ, ವಿವಾಹದಾಚೆಗಿನ ಸಂಬಂಧಗಳು ಮತ್ತು ವಿಚ್ಛೇದನದ ಸರಣಿಯನ್ನು ನಾವು ಆಧುನಿಕ ಸಾಹಿತ್ಯದಲ್ಲಿ ಕಂಡಿದ್ದೇವೆ. ಇವೆಲ್ಲವೂ ಸಾಮಾಜಿಕವಾಗಿ ಒಪ್ಪಿತವಾಗಿರುವ ನೈತಿಕ ನೆಲೆಯಲ್ಲಿ ನಿಕಷಕ್ಕೊಳಗಾಗುತ್ತವೆ. ಆದರೆ ಶಾಂತಿನಾಥರು ಅದನ್ನು ಮಾನವ ಸಂಬಂಧಗಳಲ್ಲಿ ದೈಹಿಕ, ಮಾನಸಿಕ ಅವಶ್ಯಕತೆ ಮತ್ತು ಅದರಲ್ಲಿ ಉಂಟಾಗುವ ಸಾಧ್ಯತೆಗಳನ್ನು ಮೊದಲಿಗೆ ಪರೀಕ್ಷಿಸಿ ಅದರ ಮೇಲೆ ಕಟ್ಟುಪಾಡುಗಳ ಪದರಗಳ ಲೇಪನವನ್ನು ಹಚ್ಚುತ್ತಾರೆ. ಹೀಗಾಗಿಯೇ ಅವರುಗಳ ಪಾತ್ರದಲ್ಲಿ ಹೆಚ್ಚಿನ ಸಾಂಪ್ರದಾಯಿಕವಾಗಿ ರೇಖಾಂಕಿತ ಮಾಡಿರುವ ನೈತಿಕ ದ್ವಂದ್ವಗಳು ಕಾಡುವುದಿಲ್ಲ. ಮನುಷ್ಯ ಸಂಬಂಧಗಳನ್ನು ಅಪ್ಪಟ ಸಾಚಾತನದಲ್ಲಿ ನೋಡುವ ಅವರ ದೃಷ್ಟಿ ಆಗಿನ ಕಾಲಕ್ಕೂ ಈಗ್ಗೂ ಹೊಸತನದಿಂದ ಕೂಡಿದೆ.

ಮಾನವ ಸಂಬಂಧಗಳಲ್ಲಿ ಇರುವ ಅನೇಕ ಪದರಗಳನ್ನು ನವಿರಾಗಿ ಬಿಡಿಸುತ್ತ ಹೊಸ ಆಯಾಮಗಳನ್ನು ತೋರಿಸುವ ಅವರ ಕಥನದಲ್ಲಿ ನಮಗೆ ಯಾವಗಲೂ ಗೋಜಲುಗಳ ರಾದ್ಧಾಂತ ಕಾಣುವುದಿಲ್ಲ. ಹೀಗಾಗಿಯೇ ಶಾಂತಿನಾಥರು ನಮಗೆ ಆಘಾತವನ್ನು ಉಂಟಮಾಡಬಹುದಾದ ಕ್ರಾಂತಿಕಾರಿ ಆಯಾಮಗಳನ್ನು ಪ್ರಸ್ತುತ ಪಡಿಸಿದಾಗಲೂ ಅದು ಸಹಜವಾಗಿ ಯಾವ ಆರ್ಭಟವಿಲ್ಲದೇ ಮೂಡಿಬರುತ್ತದೆ. ಇದರಲ್ಲಿ ಕಥೆಗಾರ ಟಿಪ್ಪಣಿಗಳನ್ನು ಮಾಡುತ್ತಿದ್ದರೂ ಅದು ಪಾತ್ರದ ಟಿಪ್ಪಣಿ ಮತ್ತು ದ್ವಂದ್ವದಂತೆ ಕಾಣುತ್ತದೆಯೇ ಹೊರತು ಹೊರಗೆ ನಿಂತ ನಿರೂಪಕನ ಒಣ ವಿವರಣೆಯಂತೆ ಕಾಣುವುದಿಲ್ಲ.

ಒಟ್ಟಾರೆ ಶಾಂತಿನಾಥರು ಬರೆದ ಕಥೆಗಳ ಸಂಖ್ಯೆ 49. ಅವರ ಮೊದಲ ಕಥೆ ಪ್ರಕಟವಾದದ್ದು 1952ರಲ್ಲಿ. ಕಡೆಯ ಕಥೆ ಪ್ರಕಟವಾದದ್ದು 1997ರಲ್ಲಿ. ನಲವತ್ತೈದು ವರ್ಷಗಳ ಈ ದೀರ್ಘಪ್ರಯಾಣದಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಆಯಾಮಗಳನ್ನು ಕೇಂದ್ರಬಿಂದುವಾಗಿಟ್ಟುಕೊಳ್ಳದ ಕಥೆಗಳು ಎರಡು ಅಥವಾ ಮೂರು ಮಾತ್ರವಿರಬಹುದು. ಮಿಕ್ಕವೆಲ್ಲಾ ಮಾನವ ಸಂಬಂಧಗಳನ್ನು ಒಂದು ನೆಲೆಯಲ್ಲಿ ಅನೇಕ ಸಂದರ್ಭಗಳಲ್ಲಿ ಪರಿಕ್ಷಿಸುತ್ತಾ ಬಂದವೇ ಆಗಿವೆ. ಅವರ ಕಥನದಲ್ಲಿ ಒಂದು ಕನ್ಸಿಸ್ಟೆನ್ಸಿಯಿದೆ. ಯಾವುದೇ ವಿಚಾರಧಾರೆಯ ಸೋಂಕು ಅವುಗಳಲ್ಲಿರುವಂತೆ ಕಾಣುವುದಿಲ್ಲ. ಹಾಗೂ ನವ್ಯ, ನವೋದಯ, ದಲಿತ, ಬಂಡಾಯ ಚಳುವಳಿಗಳ ಕಾಲದಲ್ಲಿ ಬರೆದ ಅವರ ಸಾಹಿತ್ಯದಲ್ಲಿ ಈ ಯಾವುದೇ ಅಲೆಗಳಿಗೆ ಪ್ರತಿಸ್ಪಂದಿಸಬೇಕೆನ್ನುವ ತುರ್ತು ಅವರಿಗೆ ಕಂಡಂತೆ ಅನ್ನಿಸುವುದಿಲ್ಲ. ಯಾವುದೇ ಸೋಗಿಲ್ಲದ ಪ್ರಾಮಾಣಿಕ ಬರವಣಿಗೆಯು ಆಪ್ತವೂ ಆಗುತ್ತದೆ.

ಶಾಂತಿನಾಥರ ಸಾಹಿತ್ಯ ಪ್ರಪಂಚವನ್ನು ಅರ್ಬನ್ ಅಥವಾ ನಗರಕೇಂದ್ರಿತ ಸಂವೇದನೆಯಿಂದ ಹುಟ್ಟಿದ್ದು ಎಂದರೆ ಅವರ ಸಾಹಿತ್ಯಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಅವರ ಪ್ರಪಂಚ ಅರ್ಬೇನ್ ಪ್ರಪಂಚ. ಅಂದರೆ ಅದರಲ್ಲಿ ಒಂದು ಘನತೆ ಮತ್ತು ಶಿಷ್ಟತೆ ಇರುತ್ತದೆ. ಶಾಂತಿನಾಥರು ಕೈಗೊಂಡ ಮೂಲ ವಸ್ತು ಮತ್ತು ವಿಚಾರಗಳನ್ನು ಹಿಡಿದು ಹೊರಟರೆ ಅದು ಲೈಂಗಿಕ ನೆಲೆ ಮತ್ತು ಹಾದರದ ಹಾದಿಯನ್ನು ಹಿಡಿಯಬಹುದಿತ್ತು. ಲೈಂಗಿಕತೆಯನ್ನು ದಟ್ಟವಾಗಿ ವಿವರಿಸಬಹುದಾದ ಅನೇಕ ಸಾಧ್ಯತೆಗಳು – ಸಂದರ್ಭಗಳು ಅವರ ಕಥೆಗಳಲ್ಲಿ ಬಂದರೂ ಅದರ ಪ್ರಲೋಭನೆಗೆ ಅವರು ಒಳಗಾಗುವುದಿಲ್ಲ. ಅದರಲ್ಲಿರುವ ಘನತೆ ಶಿಷ್ಟತೆ ಮತ್ತು ಸಭ್ಯತೆಯನ್ನು ಅರ್ಬೇನ್ ಎಂದು ಕರೆಯಬಹುದು.

(ಎಂ.ಎಸ್.ಶ್ರೀರಾಮ್)

50ರ ಮತ್ತು 60ರ ಸಂದರ್ಭವನ್ನು ಊಹಿಸಿನೋಡಿ. ಆ ದಶಕಗಳ ಬರೆದ ಕಥಾ ವಸ್ತುಗಳನ್ನು ನೋಡಿ. ಶಾಂತಿನಾಥರ ಸಾಹಿತ್ಯ ಆಗಿನ ಕಾಲಕ್ಕೂ ಹೊಸ ಮತ್ತು ಯಾರೂ ಪ್ರಯತ್ನಿಸಿರದ ಆಯಾಮಗಳನ್ನು ತೆರೆದಿಡುತ್ತಿತ್ತು ಎನ್ನುವುದು ನಿಜ. ಹೀಗೆ ಮಡಿವಂತಿಕೆಯೇ ಇಲ್ಲದೇ ಬರೆಯುತ್ತಿದ್ದ ಶಾಂತಿನಾಥರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ತಮ್ಮಷ್ಟಕ್ಕೆ ತಾವು ನಿರ್ಭಿಢೆಯಿಂದ ಬರೆದರು. ತಮ್ಮ ವಿಸ್ತಾರವಾದ ಸಾಹಿತ್ಯ- ಮಾನಸಶಾಸ್ತ್ರ – ಸಮಾಜಶಾಸ್ತ್ರ – ರಾಜಕೀಯದ ಓದು ಮತ್ತು ಒಳನೋಟಗಳ ಹಿನ್ನೆಲೆ ಅವರ ಕಥೆಯ ಕಟ್ಟುವಿಕೆಯಲ್ಲಿದೆ. ಆದರೆ ಆ ವಿಚಾರಗಳು ಕಥೆಯನ್ನು ಆಕ್ರಮಿಸಿಬಿಡುವುದಿಲ್ಲ. ಬದಲಿಗೆ ಕಥೆಯಲ್ಲಿ ಅದೂ ಸಹಜವಾದ ಒಂದು ಪಾತ್ರವನ್ನು, ಒಂದು ಪಾತ್ರದ ವಿಚಾರ ಮಂಡನೆಯ ಮೂಲಕ ಪ್ರವೇಶಿಸುತ್ತದೆ. ನವ್ಯ ಸಂವೇದನೆಯಂತೆ ಮೇಲಿಂದ ಮೇಲಕ್ಕೆ ಶಾಂತಿನಾಥರ ಸಾಹಿತ್ಯ ಕಂಡರೂ ಅದು ನಿಜಕ್ಕೂ ನವ್ಯವನ್ನು ಮೀರಿದ ಆಧುನಿಕ ವಿಚಾರಧಾರೆಯನ್ನು ಹೊತ್ತಿತ್ತು ಎಂದು ಹೇಳಬಹುದೇನೋ. ಆಧುನಿಕತೆಯಲ್ಲಿ ಇರುವ ಒಂದು ವಿಚಾರ ವೈಶಾಲ್ಯ, ಉದಾರವಾದಿ ಮನಸ್ಥಿತಿಯು ಕಥೆಗಳಲ್ಲಿ ಕಷ್ಟದ, ಬಿಡಿಸಲಾಗದ, ದ್ವಂದ್ವದ ಬಿಕ್ಕಟ್ಟನ್ನು ಉಂಟುಮಾಡುವುದಿಲ್ಲ. ಬದಲಿಗೆ ಆ ಬಿಕ್ಕಟ್ಟಿಗೂ ಇರಬಹುದಾದ ಬಂಧನಗಳನ್ನು ಕಳಚಿದರೆ, ನಮ್ಮನ್ನು ಆಕ್ರಮಿಸಿರುವ ಪೂರ್ವಗ್ರಹಗಳನ್ನು ಕಳಚಿದರೆ ಕಾಣುವ ಸಹಜ ಮತ್ತು ಸರಳ ಸಾಧ್ಯತೆಗಳನ್ನು ಅವರು ತೋರಿಸಿಕೊಡುತ್ತಾರೆ.

ಹೀಗಾಗಿಯೇ ಅವರ ಕಥೆಗಳನ್ನು ಓದಿದಾಗ ನಮ್ಮ ಕಾಲಕ್ಕೂ ಮತ್ತು ಮುಂದಿನ ಪೀಳಿಗೆಗೂ ಪ್ರಸ್ತುತವೆನ್ನಿಸುವ ಗೆಳೆಯನೊಬ್ಬನ ಜೊತೆ ಸಂವಾದ ನಡೆಸಿದಂತೆ ಅನ್ನಿಸುತ್ತದೆ. ಈ ಗುಣ ಕನ್ನಡ ಸಾಹಿತ್ಯದ ಓದಿನಲ್ಲಿ ನನಗೆ ಬೇರೆಲ್ಲೂ ಕಂಡಿಲ್ಲವೆಂದೇ ಹೇಳಬೇಕು. ಅವರ ಸಾಹಿತ್ಯವನ್ನು ಓದಿದಾಗ ಮನಸ್ಸಿಗೆ ಬರುವುದು ಒಂದೇ ವಿಚಾರ. ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದು ಒಂದಿಷ್ಟು ಒಡನಾಟವಿದ್ದಿದ್ದರೆ ನಿಜಕ್ಕೂ ವಯಸ್ಸಿನಂತರವನ್ನು ಹೈರಾರ್ಕಿಗಳನ್ನೂ ನಡುವಿನಲ್ಲಿಡದ ವ್ಯಕ್ತಿಯ ಗೆಳೆತನ ಸಿಗುತ್ತಿತ್ತು ಅನ್ನಿಸುತ್ತದೆ. ಕೆಲ ಲೇಖಕರ ಘನವಾದ ಕೃತಿಗಳನ್ನು ಓದಿದಾಗ ಅವರ ಮೇಲೆ ಗೌರವವುಂಟಾಗುತ್ತದೆ. ಕೆಲವರ ಭಾಷಾಪ್ರಯೋಗದಿಂದ ದಂಗಾಗಿ ಅವರನ್ನು ಮೆಚ್ಚುತ್ತೇವೆ. ಆದರೆ ಆಡಂಬರವಿಲ್ಲದ, ಸಾಚಾ ಸಹಜ ಬರವಣಿಗೆಯ ಶಾಂತಿನಾಥರ ಜೊತೆಗೊಂದು ಚಹಾ, ಅಥವಾ ದಿನದ ಸಮಯವನ್ನನುಸರಿಸಿ ಸ್ಕಾಚ್ ಕುಡಿಯಬೇಕು ಅನ್ನಿಸುವುದಕ್ಕೆ ಅವರ ಸಹಜ ಬರವಣಿಗೆಯೇ ಕಾರಣವಿರಬಹುದು.