ಬೆಳಗಿನ ಉಗುರುಬೆಚ್ಚಗಿನ ಹವೆಯಲ್ಲಿ ಕಾಫಿ ಅಂಗಡಿಯ ಹೊರಗೆ ಕೂತಿದ್ದೆವು. ನನ್ನೊಡನೆ ಒಂದಿಬ್ಬರು ಗೆಳೆಯರಿದ್ದರು. ಕಾಫಿ ಕುಡಿದು ಮುಗಿದಿದ್ದರೂ ಎದ್ದು ಹೋಗಲು ನಮಗಾರಿಗೂ ಮನಸ್ಸಿದ್ದಂತಿರಲಿಲ್ಲ. ಅಥವಾ ಇನ್ನೇನೋ ಆಗುವುದಕ್ಕೆ ಕಾಯುತ್ತಿರುವಂತೆ ಇತ್ತು.

ಆ ಕಾಫಿ ಅಂಗಡಿ ಮಾಲ್‌ನಂತ ಅಂಗಡಿಗಳ ಸೆಂಟರಿನಲ್ಲಿ ಇದೆ. ನಡುವೆ ನಾಕು ಮಹಡಿ ಎತ್ತರದ ಗಾಜಿನ ಮಾಡಿನಿಂದ ಬಿಸಿಲು ಒಳಗೆ ಕೆಳಗಿನವರೆಗೂ ಬೀಳುವಂತೆ ಮಾಡಿದ್ದಾರೆ. ತಲೆಯೆತ್ತಿ ನೋಡಿದರೆ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಯ ಮೋಡ ಬಿಸಿಲಿಗೆ ಹೊಳೆಯುತ್ತಾ ಇತ್ತು. ಸೆಂಟರಿನಲ್ಲೂ ಹೆಚ್ಚು ಜನರಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಯ ಸುಮಾರಾದ್ದರಿಂದ ಒಂದಿಬ್ಬರು ಅಲೆಯುತ್ತಿದ್ದರು ಅಷ್ಟೆ. ಕೊಳ್ಳುವುದಕ್ಕಿಂತ ವಿಂಡೋ ಶಾಪಿಂಗ್ ಮಾಡುತ್ತಾ ಹೊತ್ತು ಕೊಲ್ಲುವವರೇ ಎಲ್ಲರೂ. ಮನಸ್ಸು ಏನೂ ಹೇಳದೇ ಇರದ್ದರಿಂದ ಕಾಲು ಕರೆದೊಯ್ದತ್ತ ಅಲೆದಾಡುತ್ತಿರುವಂತೆ ಕಾಣುತ್ತಿದ್ದರು.

ನಮ್ಮ ಮಾತುಗಳು ಎಂದಿನಂತೆ ದೀರ್ಘ ಮೌನಗಳ ನಡುವೆ ತುಂಡುತುಂಡಾಗಿ ಎತ್ತೆತ್ತಲೋ ಜಿಗಿಯುತ್ತಿತ್ತು. ಎಳೆ ಬಿಸಿಲಿನಲ್ಲಿ ಅಂಗಳವೆಲ್ಲ ಕುಣಿಯುವ ಕರು – ತುಂಬಾ ಹೊತ್ತು ಏನನ್ನೋ ದಿಟ್ಟಿಸಿ, ತಟ್ಟನೆ ಜಿಗಿದು ಮತ್ತೆ ತಟಸ್ಥವಾಗಿ ನಿಲ್ಲುವಂತೇ ಇತ್ತು. ನಾವು ಕಳೆಯುವ ದಿನಗಳಲ್ಲಿ ಇಂತಹ ಗಳಿಗೆಗಳು ನಮ್ಮೊಳಗೆ ನಾವು ಇಳಿಯಲು ಆಗುವಂತವು.

ಇದ್ದಕ್ಕಿದ್ದಂತೆ ಪಕ್ಕದ ಅಂಗಡಿಯೊಂದರಲ್ಲಿ ಜೋರಾಗಿ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡಳು. ಚೂರಿ ಇರಿತದಂತಹ ಆ ದನಿಗೆ ಅಲ್ಲಿ ಕೂತಿದ್ದವರೆಲ್ಲಾ ಕುರ್ಚಿಯಿಂದ ಜಿಗಿದೆದ್ದರು. ನನ್ನ ಜತೆಗಿದ್ದ ಇಬ್ಬರಲ್ಲಿ ಒಬ್ಬ ಕೂಗು ಬಂದತ್ತ ಹೋದ. ಇನ್ನೊಬ್ಬನ ಜತೆ ನಾನು ನಿಂತಲ್ಲೇ ಗರ ಬಡಿದವನಂತೆ ನಿಂತು ನೋಡಿದೆ. ನಮ್ಮಿಂದ ಮೂರನೆಯ ಮೂಲೆ ಅಂಗಡಿಯಿಂದ ಒಂದಷ್ಟು ಜನ ಹೊರಗೆ ಓಡಿಬಂದರು. ಅವರ ನಡುವಲ್ಲೇ ಪುಟ್ಟ ಮಗುವನ್ನು ದರದರ ಎಳೆದುಕೊಂಡು ಒಬ್ಬ ತಾಯಿಯೂ ಓಡಿದಳು. ಅಷ್ಟರಲ್ಲಿ ಅಂಗಡಿಯೊಳಗಿಂದ ಬ್ಯಾಕ್ ಪಾಕ್ ಹೆಗಲಿಗೆ ಏರಿಸಿಕೊಂಡ ಒಬ್ಬ ಹುಡುಗ ರಸ್ತೆ ಕಡೆಗೆ ಓಡಿದ. ಏನಾಗುತ್ತಿದೆ ಎಂಬಷ್ಟರಲ್ಲಿ ಇನ್ನೊಂದು ದಿಕ್ಕಿಂದ ಇಬ್ಬರು ಸೆಕ್ಯುರಿಟಿ ಗಾರ್ಡುಗಳು ಓಡಿ ಬಂದರು.

ಅಂಗಡಿಯತ್ತ ಹೋಗಿದ್ದ ಗೆಳೆಯ ವಾಪಸು ಬಂದು ಅಂಗಡಿಯ ಗಲ್ಲಾದಿಂದ ಹುಡುಗನೊಬ್ಬ ದುಡ್ಡು ಕಸಿದುಕೊಂಡು ಓಡಿದ ಎಂದು ವರದಿ ಮಾಡಿದ. ಅಂಗಡಿಯ ಒಳಗೆ ನೆಲಕ್ಕೆ ಬಿದ್ದಿದ್ದ ಹುಡುಗಿಯೊಬ್ಬಳ ಮುಖವೆಲ್ಲಾ ರಕ್ತವಾಗಿತ್ತು, ನಡುಗುತ್ತಿದ್ದಳು ಅಂದ. ಅಷ್ಟು ಹೊತ್ತಿಗೆ ಬಂದ ಸೆಕ್ಯುರಿಟಿಯವರು ಅಂಗಡಿಯ ಬಳಿಗೆ ಯಾರನ್ನೂ ಬರದಂತೆ ತಡೆದುಬಿಟ್ಟರು.

ಸುಖವೆನಿಸುತ್ತಿದ ಬೆಳಗು ಇದ್ದಕ್ಕಿದ್ದ ಹಾಗೆ ನುಚ್ಚುನೂರಾದಂತೆ ಅನಿಸಿತು. ತಲೆಯೆತ್ತಿ ನೋಡಿದರೆ ಇದಾವುದರ ಪರವೇ ಇಲ್ಲದಂತೆ ಮೋಡ ಬಿಸಿಲಿಗೆ ಹೊಳೆಯುತ್ತಲೇ ಇತ್ತು. ಏಳಲೇ ಮನಸ್ಸಿಲ್ಲದ ನಮಗೆ ಬೇಗ ಹೊರಡೋಣ ಅನಿಸತೊಡಗಿತು.ಇನ್ನು ಆಂಬ್ಯುಲೆನ್ಸ್, ಪೋಲೀಸ್ ಎಲ್ಲ ಗದ್ದಲ ಹೆಚ್ಚುವ ಮುಂಚೆ ಹೊರಟುಬಿಡುವ ಎಂದು ಎದ್ದು ಕಾಫಿಗೆ ದುಡ್ಡುಕೊಟ್ಟು ಹೊರಟೆವು.

ಅಷ್ಟರಲ್ಲಿ ಜನ ಹೋ!ಹೋ! ಎಂದು ಮತ್ತೆ ಕೂಗಲು ತೊಡಗಿದರು. ಈಗೇನಪ್ಪಾ ಎಂಬಂತೆ ಜನ ಕೈತೋರುತ್ತಿದ್ದ ಕಡೆ ನೋಡಿದರೆ ಯಾರೋ ಓಡುವುದು ಕಂಡಿತು. ಅವನ ಹಿಂದೆ ಒಂದಿಬ್ಬರು ಸೆಕ್ಯುರಿಟಿಯವರು ಅಟ್ಟಿಸಿಕೊಂಡು ಹೋಗುತ್ತಿದ್ದರು. ಒಂದತ್ತ ಇದ್ದ ಎಸ್ಕಲೇಟರ್‍ ಹತ್ತಿ ಓಡಿದ ಹುಡುಗ ಮೊದಲ ಮಹಡಿಯಲ್ಲಿ ಅಡ್ಡವಾಗಿ ನಮ್ಮ ಕಣ್ಣೆದುರೇ ಓಡಿದ. ಆದರೆ, ಅವನು ಓಡುತ್ತಿದ್ದ ದಿಕ್ಕಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಮಗೆಲ್ಲಾ ಗೊತ್ತಿತ್ತು. ಮೂಲೆಯಲ್ಲಿ ಒಂದು ಮೆಟ್ಟಿಲಷ್ಟೇ ಇದೆ. ಅಲ್ಲಿಂದ ಇಳಿದರೆ ಕೆಳಗೆ ಜನ ಕಾಯುತ್ತಿದ್ದಾರೆ. ಪೆದ್ದು ಹುಡುಗ ಅಂತ ಒಂದಿಬ್ಬರು ಲೊಚಗೊಟ್ಟಿದ್ದರು.

ಅವನು ಹೊರಗೆ ಓಡಿದವ ಹಾಗೇ ಓಡಿ ಹೋಗದೆ ಇನ್ನೊಂದು ಕಡೆಯಿಂದ ಇತ್ತ ಯಾಕೆ ಬಂದ. ಹೊರಗೆ ಪಕ್ಕದ ರಸ್ತೆ ಹಿಡಿದಿದ್ದರೆ ಯಾರ ಕೈಗೂ ಸಿಕ್ಕುತ್ತಿರಲಿಲ್ಲವಲ್ಲ ಎಂದೆಲ್ಲಾ ಚರ್ಚೆ ಶುರುವಾಯಿತು. ಅಷ್ಟರಲ್ಲಿ ಅವನು ಮೆಟ್ಟಲಿಳಿದು ಕೆಳಗೆ ಬರುತ್ತಲೇ ಅಲ್ಲಿದ್ದ ಸೆಕ್ಯುರಿಟಿ ಅವನನ್ನು ಅಡ್ಡಗಟ್ಟಿ ತಡೆದರು. ಏದುಸಿರು ಬಿಡುತ್ತಾ ತನ್ನ ಬ್ಯಾಗನ್ನು ನೆಲಕ್ಕೆ ಒಗೆದ. “ಹುಡುಕಿಕೊಳ್ಳಿ ಬೇಕಾದರೆ. ನನ್ನನ್ನ ಯಾಕೆ ಅಟ್ಟಿಸಿಕೊಂಡು ಬರುತ್ತಿದ್ದೀರ?” ಎಂದು ಒದರುತ್ತಿದ್ದ. ನೋಡಿದರೆ ಎಳೆಯ ಆಫ್ರಿಕನ್ ಹುಡುಗನಂತೆ ಕಾಣುತ್ತಿದ್ದ. ಅವನನ್ನು ಒಂದು ಮೂಲೆಗೆ ನಿಲ್ಲಿಸಿ ಅವನಿಂದ ಸೆಕ್ಯುರಿಟಿಯವರು ಒಂದಡಿ ದೂರ ನಿಂತಿದ್ದರು.

ಅಷ್ಟು ಹೊತ್ತಿಗೆ ಅಂಗಡಿಯಿಂದ ಬಂದ ಹೆಂಗಸು “ಇವನೇ, ಇವನೇ. ಆ ಹುಡುಗಿಯ ಮೈಮೇಲೆ ಕೈಮಾಡಿದ. ಬಿಡಬೇಡಿ. ಪೋಲೀಸಿಗೆ ಫೋನ್ ಮಾಡಿದೀನಿ. ಬರ್ತಿದಾರೆ” ಎಂದು ಮತ್ತೆ ಅಂಗಡಿ ಕಡೆಗೆ ಓಡಿದಳು. ಅವನು ತನ್ನ ಅಂಗಿ ಸರಿಮಾಡಿಕೊಳ್ಳುತ್ತಾ ನಿಂತಿದ್ದ. ಒಂದು ಕ್ಷಣದ ಹಿಂದೆ ಆಳದಲ್ಲೆಲ್ಲೋ ಇವನು ತಪ್ಪಿಸಿಕೊಳ್ಳಬೇಕು ಎಂದು ನಮಗ್ಯಾಕೆ ಅನಿಸಿತು. ಹಾಗೆ ಓಡಬೇಕಿತ್ತು, ಹೀಗೆ ಓಡಬೇಕಿತ್ತು ಎಂದು ಮಾತಾಡಿಕೊಂಡಿದ್ದೆವಲ್ಲಾ. ಅಥವಾ ಸದ್ಯ ಆ ದಿಕ್ಕಲ್ಲಿ ಓಡಲಿಲ್ಲ ಎಂದು ಹೇಳುವುದನ್ನು ಹೀಗೆ ಹೇಳುತ್ತಿದ್ದೇವ ಎಂದು ಅನುಮಾನವೂ ಆಯಿತು.

ಆ ಆಫ್ರಿಕನ್ ಕರಿಯ ಹುಡುಗನ ಮುಖದಲ್ಲಿ ದುಗುಡ, ಆತಂಕ ಕುಣಿದಾಡುತ್ತಿತ್ತು. “ನಾನೇನು ಮಾಡಿದ್ದೇನೆ ಹೇಳಿ” ಎಂದು ಅರೆ ಆತಂಕ, ಅರೆ ಧಿಮಾಕಿನಲ್ಲಿ ಕೇಳುತ್ತಲೇ ಇದ್ದ. ಅವನನ್ನು ತಡೆಗಟ್ಟಿದ್ದ ಸೆಕ್ಯುರಿಟಿಯವರು ಏನೂ ಹೇಳದೆ ಪೋಲೀಸರಿಗೆ ಕಾಯುತ್ತಿದ್ದರು. ಯಾರೋ ‘ಆಫ್ರಿಕದಂತೆ ಇಲ್ಲಿಯೂ ಕದಿಯಬಹುದು ಅಂದುಕೊಂಡಿದ್ದಾನೆ ಪೆದ್ದ’ ಎಂದದ್ದು ಕೇಳಿ ವಿಚಿತ್ರ ಕಸಿವಿಸಿ ಆವರಿಸಿತು. ಅವನು ಕದ್ದದ್ದು ಹೌದೆ? ಅಥವಾ ಹುಡುಗಿಯ ಮೈಮೇಲೆ ಕೈ ಮಾಡಿದನೆ? ಕೆಂಪಾಗಿದ್ದ ಹುಡುಗಿಯ ಮುಖ ರಕ್ತದಂತೆ ಕಂಡಿತಷ್ಟೆಯೆ? ಅಲ್ಲಿ ನಡೆದದ್ದು ಕಳವೆ ಅಥವಾ ಲೈಂಗಿಕ ಕೆಣಕಾಟವೆ? ಸಂಗತಿಗಳೆಲ್ಲಾ ಗೋಜಲಾಗುವ ಹೊತ್ತದು. ಅವರನ್ನೆಲ್ಲಾ ಅಲ್ಲಿಯೇ ಬಿಟ್ಟು ಹೊರಟಾಗ ತಲೆಯಲ್ಲಿ ಏನೇನೋ ಸಂಗತಿಗಳು ಕೊತಕೊತ ಅನ್ನುತ್ತಿದ್ದವು.

ಈಗ್ಗೆ ಐದಾರು ವರ್ಷದ ಹಿಂದಿಂದ ಆಫ್ರಿಕದ ಬೇರೆಬೇರೆ ದೇಶಗಳಿಂದ ನಿರಾಶ್ರಿತರು ಆಸ್ಟ್ರೇಲಿಯಾಕ್ಕೆ ಬರುತ್ತಿದ್ದಾರೆ. ಮತ್ತೆ ಎಲ್ಲ ಹಳೆಯ ಕತೆಯಂತೆ ಹೆಂಡತಿ-ಮಕ್ಕಳನ್ನು ಕಾಪಾಡಿಕೊಳ್ಳಲು ಗುಳೆ ಏಳಬೇಕಾದ ಮಂದಿಯಿವರು. ಆಶ್ರಯ ಕೊಡುತ್ತೇವೆಂದು ಜಾಗತಿಕ ಟ್ರೀಟಿಗಳನ್ನು ಸಹಿಮಾಡಿದ ದೇಶಗಳಲ್ಲಿ ಹೋಗಿ ತಮ್ಮ ಮುರಿದು ಬಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಇವರೆಲ್ಲಾ ಹೆಣಗುತ್ತಾರೆ. ಆ ಕಟ್ಟಿಕೊಳ್ಳುವ ಹಾದಿಯಲ್ಲಿ ಅವರು ಮೊದಲು ಎದುರಿಸಬೇಕಾದ್ದು – ವಯ್ಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಬಂದೆರಗುವ- ಸಂದೇಹ, ಅನುಮಾನಗಳನ್ನು. ಆಸ್ಟ್ರೇಲಿಯಾದಲ್ಲಿ ಚೈನೀಸರಿಂದ ಹಿಡಿದು ಎರಡನೇ ಮಹಾಯುದ್ಧದ ನಂತರದ ಗ್ರೀಕರು, ಇಟಾಲಿಯನ್ನರು, ಅವರ ಹಿಂದೆಯೇ ಬಂದ ವಿಯಟ್ನಮೀಸರು, ಆಮೇಲೆ ನಡು-ಏಶಿಯಾದ ಮಂದಿ, ಪೂರ್ವ-ಐರೋಪ್ಯರು, ಮತ್ತು ಈಗ ಬಹುಶಃ ಆಫ್ರಿಕದ ದೇಶಗಳವರು.

ಬಿಳಿಯರೂ ಸೇರಿದಂತೆ ಬೇರೆ ಯಾವುದೇ ಸಮುದಾಯದವರೂ ಇಂತಹ ಘಟನೆಗೆ ಜವಾಬ್ದಾರರಾಗಿರಬಹುದು. ಕ್ರೈಮ್ ಯಾವುದೇ ಸಮುದಾಯದ ಸ್ವತ್ತಲ್ಲ. ಆದರೆ ಇವರು ಹೊಸಬರಾದ್ದರಿಂದ ಹಾಗು ಭಿನ್ನವಾಗಿ ಕಾಣುವುದರಿಂದ ಇಡೀ ಸಮುದಾಯಕ್ಕೇ ಮಸಿ ಬಳಿಯುವುದು ಮಾಧ್ಯಮಗಳಿಗೆ ಯಾವಾಗಲೂ ಸಲೀಸು. ಅದೆಲ್ಲವನ್ನೂ ದಾಟಿ, ದಾಟಿದ ಮೇಲೂ ತಮ್ಮ ವಿಶಿಷ್ಟ ಚಹರೆಯನ್ನು ಉಳಿಸಿಕೊಳ್ಳುವ ಸವಾಲು ಎಲ್ಲಾ ಸಮುದಾಯಗಳಿಗೂ ಕಟ್ಟಿಟ್ಟದ್ದೇ. ಆದರೆ ಆ ಸವಾಲು ತುಸುತುಸುವೇ ಕ್ಷೀಣುಸುತ್ತಿರುವುದು ಒಳ್ಳೆಯ ಕುರುಹು, ಬೇರೆ ಸ್ತರಗಳಿಗೆ ಸರಿಯುತ್ತಿರುವುದು ಕೆಟ್ಟ ದಿಗಿಲು ಹುಟ್ಟಿಸುವಂತ ಸಂಗತಿ.