ನಿನ್ನುಸಿರು

ತಿರುಗಿ ತಿರುಗಿ ನಿನ್ನಲ್ಲಿಗೇ
ಬಂದಿದ್ದೇನೆ ನಾನು
ಒಪ್ಪಿಬಿಡು ಈಗಲಾದರೂ
ಹುಚ್ಚೆದ್ದ ಸುಳಿಗಾಳಿಯಂತೆ
ಎಲ್ಲೆಲ್ಲೋ ಅಲೆದೆ
ದಣಿದಿದ್ದೇನೆ ಬಹಳ
ಒಪ್ಪಿಬಿಡು ಬೇಗ!

ಗುಬ್ಬಿ, ಗೀಜಗ, ಕಾಗೆ
ಕಾಜಾಣದ ಗೂಡುಗಳು
ಮುರಿದು ಬಿದ್ದಾಗಿದೆ
ಗಾಳಿ ಹೊಡೆತಕ್ಕೆ;
ಗರಿಕೆ ಹುಲ್ಲುಗಳೆಲ್ಲ
ಅಡ್ಡ ಅಡ್ಡವಾಗಿ
ಬೋರಲು ಮಲಗಿವೆ

ಜ್ವಾಲಾಮುಖಿಯೆದ್ದ ನೆಲದಂತೆ
ಉರಿಯೊಡಲು ನನ್ನದು,
ನನ್ನಲ್ಲಿ ಬೆಳೆದದ್ದೆಲ್ಲವೂ
ನನ್ನಲ್ಲೇ ಸುಡುತ್ತಿದೆ
ಕಾವಡರಿದ ಮುಗಿಲಲ್ಲಿ
ಕ್ಷಣಕೊಂದು ಬಣ್ಣ
ಕಣ್ಣಿಂದ ಗುರುತು ಹಿಡಿಯಲಾಗುತಿಲ್ಲ ಅದನು;

ಬಿರುಕು ಬಿಡುತ್ತಿದೆ ಅಲ್ಲಲ್ಲಿ
ಕೈಕಾಲು ಮುಖಗಳ ಮೇಲೆ
ಕಾಯುವಿಕೆಯ ಮಿತಿ ಮೀರಿದ
ಕೋಡಿಯೊಡೆದ ಕೆರೆಯಂಥಾ ಕೋಪ
ದಹಿಸಿದ ಪರಿಣಾಮಕೆ
ಭಸ್ಮವಾಗುತಿದೆ ಎಲ್ಲವೂ
ಪ್ರೀತಿ ತಣ್ಣಗಿದೆ ಎದೆಯೊಳಗೆ!

ನಿನ್ನುಸಿರು ತಾಕಿಸು ಬೇಗ
ಕಾವು ತಾಕುವ ಮುನ್ನ ಎದೆಗೆ
ತಿಳಿ ಪ್ರೇಮದುಸಿರಿಗೆ
ತಂಪಾಗಿಹೋಗಲಿ ನಾನು
ಮಳೆಗಾಲಕೆ ಏಳುವ ಕುಡಿಯಂತೆ
ಮತ್ತೆ ಹಸಿರಾಗಲೆಲ್ಲವೂ…!

 

 

 

 

 

 

 

ಬಂಧಿ

ಉತ್ಸಾಹದ ಚಿಲುಮೆಗೆ
ನೂರಾರು ಮೈಲಿಗಳು ಲೆಕ್ಕವೇ ಅಲ್ಲ
ನಾಲ್ಕು ಗೋಡೆಯ ನಡುವೆ
ಕನಸುಗಳೇ ಇಲ್ಲ;
ಬೇಡಿ ಬಿದ್ದಿದೆ ಇಲ್ಲಿ
ಪಾದರಸದಂಥ ಪಾದಗಳಿಗೆ
ಇನ್ನೊಂದು ಕ್ಷಣವೂ ನಿಲ್ಲಲಾಗುವುದಿಲ್ಲ
ಹುಣ್ಣುಗಳೇಳುತ್ತಿವೆ ಹೃದಯದಲ್ಲಿ,
ಇನ್ನೂ ಪ್ರಯತ್ನಿಸಬೇಡ
ಬಿಟ್ಟು ಬಿಡು ಈಗ
ಸ್ನೇಹ, ಪ್ರೀತಿ, ಪ್ರೇಮ
ಯಾವ ಬಂಧದ ಬಂಧನವೂ
ಸಿಹಿಯಾಗಿಲ್ಲ ನನಗೆ
ನಿಂತಲ್ಲೇ ನಿಂತು ಮರಗಟ್ಟಿ
ಮಂಜುಗಡ್ಡೆಯಾಗುವ ಬಯಕೆಯಲ್ಲ
ನನದು, ಹಾರಾಡುವ, ಈಜಾಡುವ
ಜಗದ ಕಣ ಕಣವೂ ನಾನಾಗುವಾಸೆ
ಇನ್ನಾದರೂ ಕೈ ಸಡಿಲಿಸು
ಸಮುದ್ರದ ಮೊರೆತಗಳ
ಬಿಸ್ಲೆರಿ ಬಾಟಲಿಯಲ್ಲಿಡುವ ಯತ್ನ ಬೇಡ
ಬಿಗಿ ಹಿಡಿತದಲ್ಲಿ ಅಲೆಗಳೇಳುವುದಿಲ್ಲ…!

ಶಾಲಿನಿ ಭಂಡಾರಿ ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣದವರು.
ಪ್ರಸ್ತುತ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶಾಲಿನಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ಹವ್ಯಾಸಗಳು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)