ಕಡಲಪ್ರೀತಿ
*******
ಅಲೆಗಳೇಳಲಿ ಮೇಲೆ
ನಾವಲ್ಲೇ ಕೂರೋಣ
ಹೆಣೆದ ಕೈ ಬೆರಳುಗಳ ನಡುವೆ
ಪ್ರೀತಿಯೊಡನೆ
ಮರಳು, ಲವಣಗಳೂ ಸೇರಲಿ
ಪ್ರತಿ ಅಲೆ ಬಂದಾಗಲೂ
ಒಂದಷ್ಟು ಸೇರಲಿ

ಆಚೆದಡದಲಿ ಅವನು
ಬರುವವರೆಗೂ
ಹೀಗೆ ಶಿಲೆಗಳಂತೆ ಕೂರಬೇಕು
ಏಡಿಯ ನಡಿಗೆ,
ಮರಿ ಮೀನುಗಳ ಮುತ್ತು,
ಮುರಿದು ಹೋದ
ಕಪ್ಪೆ ಚಿಪ್ಪುಗಳ ರಾಶಿ
ಎಲ್ಲವೂ ಅನುಭವಕ್ಕಿರಲಿ

ನಿನಗೆ ಭಯವೇನೋ
ದೈತ್ಯದಲೆಗಳ ಕಂಡು
ಕೈ ಹಿಡಿತ ಸಡಿಲಿಸಿ ಏಳಬೇಡ
ಕಡಲಲ್ಲಿ ಕ್ಷಣಕೊಮ್ಮೆ
ಹುಟ್ಟಿಸಾಯುವ ನೀರಿನಾಕಾರ
ಎಲ್ಲ ಅಲೆಯೊಳಗೂ ಜೀವಂತಿಕೆಯಿದ

ಪಾದದ ಬಿರುಕುಗಳಿಗೆ,
ಉಪ್ಪು ತಾಕಿ ಉರಿದರೆ ಕ್ಷಮಿಸು
ನಿನಗೇನೋ ತೋರಿಸಬೇಕಿದೆ ನಾನು!
ಅಲೆಗಳೆತ್ತರ ಇನ್ನೂ ಏರಿತು
ಈಗ ನೋಡು,
ಆಚೆ ದಡದಂಚನು

‘ಪೂರ್ಣ ಚಂದಿರ ಅಲ್ಲಿ’
ಅಲೆಗಳಬ್ಬರ-ಹುಣ್ಣಿಮೆ ಚಂದಿರ
ನಡುವಣ ಬಂಧಕೊಂದು
ಹೆಸರಿಡೋಣ ನಾವು
ಅದು ವಿಜ್ಞಾನವೆಂದರೆ ತರ್ಕವೇ ಇಲ್ಲ;
ಪ್ರೀತಿಯೆಂದರೆ
ಬಗೆದಷ್ಟು, ಕಂಡಷ್ಟು, ತಿಳಿದಷ್ಟೂ ಆಳ…!

 

ಶಾಲಿನಿ ಭಂಡಾರಿ ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣದವರು.
ಪ್ರಸ್ತುತ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶಾಲಿನಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ಹವ್ಯಾಸಗಳು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)