ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು. ಈ ಶಾಲು ಎಷ್ಟು ಆರಾಮಾಗಿದ್ದಾಳೆ ಇಲ್ಲಿ. ಈ ಮಗನೂ ಅವಳಿಗೆ ಕೆಲಸಕ್ಕೆ ಸಹಾಯ ಮಾಡೋದು ಬೇರೆ…’ ಅಂತ ಗಂಗಮ್ಮನ ಅಳಲು. ಅದೊಂದು ದಿನ ಗಂಗಜ್ಜಿ ಬಚ್ಚಲು ಮನೆಯಲ್ಲಿ ಕಾಲುಜಾರಿ ಬಿದ್ದಳು. ಕಿರುಚಿಕೊಳ್ಳುತ್ತಲೇ ಶಾಲು ಓಡಿ ಬಂದಳು. ಅವಳ ಬಳಿ ಸೇವೆ ಮಾಡಿಸಿಕೊಳ್ಳಲು ಅದೇನೋ ಬಿಗುಮಾನ. 
ಅಂಜನಾ ಗಾಂವ್ಕರ್ ಬರೆದ ಕತೆ “ಶಾಲೂ”

 

ಗಂಟೆ ಅದಾಗಲೇ ಏಳಾಗಿತ್ತು. ಆಗ ಎದ್ದು ಅರ್ಜೆಂಟ್ ಅರ್ಜೆಂಟಲ್ಲಿ ಕೈಯ್ಯಲ್ಲೊಂದು ಒದ್ದೆ ಬಟ್ಟೆ, ಎಡಗೈಯಲ್ಲಿ ರಂಗೋಲಿ ತಟ್ಟೆ ಹಿಡಿದು ಪಟ್ ಪಟ್ ಅಂತ ರಂಗವಲ್ಲಿ ಹಾಕುವ ಶಬ್ದ. ಮನೆಯ ಗಡಿಬಿಡಿ ಸದ್ದು ಕೇಳಿ ಮಲಗಿದ್ದ ಗಂಗಮ್ಮನ ಕೋಪ ನೆತ್ತಿಗೇರಿತ್ತು, ಇದೇನು ಅವತಾರವೋ ಏನೋ, ಒಂದಿಷ್ಟು ಭಕ್ತಿಯಿಲ್ಲ, ಶ್ಲೋಕವಿಲ್ಲ, ಈ ತಟ್ಟೆ ಹಿಡಿದು ಥಟ್ಟನೆ ಹಾಕುವ ರಂಗೋಲಿಗೂ ಆಲಸಿತನ ಯಾಕೆಂದೂ. ನಮ್ಮ ಕಾಲದಲ್ಲಾದರೆ ಹೀಗಿರಲಿಲ್ಲ. ಮಣ್ಣಿನ ನೆಲ. ಬೆಳಿಗ್ಗೆ ಐದು ಗಂಟೆಗೆ ಎದ್ದು ಸಗಣಿ ತೆಗೆದು ಗೋಮಯ ತಂದು ಅಡಿಕೆ ಹಾಳೆ ಹಿಡಿದು ಬಳುಗ ಬೇಕು. ಮತ್ತೆ ಚೆಂದಾದ ರಂಗೋಲಿ ಇತ್ತು ಅರಸಿನ ಕುಂಕುಮ ಹಾಕಿ ಮಧ್ಯೆ ಹೂವಿಟ್ಟು ಬಾಯಲ್ಲಿ ಒಂದಿಷ್ಟು ಶ್ಲೋಕ, ನಾರಾಯಣ ನಾರಾಯಣ ಎಂದು ಪಠಣೆ. ಈಗಿನ ಕಾಲದಲ್ಲಿ ಸಿಮೆಂಟ್ ನೆಲಕ್ಕೆ ಒಂದ್ಸಲ ಬಟ್ಟೆಯಿಂದ ಒರೆಸಲೂ ಸರಿಯಾಗಿ ಆಗದಾ? ಅರಸಿನ ಕುಂಕುಮ ಬೇಡ, ರಂಗೋಲಿ ಹಾಕಲೂ ಪುರುಸೊತ್ತಿಲ್ಲವಾ? ಎಂದು ಮನ ಕೊರಗುತ್ತಿತ್ತು. ನಾನು ಏಳುವ ಹಾಗಿದ್ದರೆ ಎಲ್ಲಾ ಮುಗಿಸುತ್ತಿದ್ದೆ.

‘ಅತ್ತೆ, ದೋಸೆ ಎರೆದಿಡಲಾ ಇಲ್ಲ ಆಮೇಲೆ ನೀವು ದೋಸೆ ಮಾಡ್ಕೋತೀರಾ?’, ಎಂದು ಶಾಲು ಕೇಳಿದಾಗ ಮತ್ತೆ ಅಬ್ಬೆ ಈ ಲೋಕಕ್ಕೆ ಆಗಮನ. ‘ಓಲೆ ಮೇಲೆ ಬಾಳೆ ಹಂದರದಿಂದ ಎರೆದರೆ ಕಾಗದದಂತಾ ದೋಸೆ, ಇಲ್ಲಾ ತೆಳ್ಳೆವ್ ಆದರೆ ಜೀವಕ್ಕೂ ಗನಾದು, ಈ ಸುಟ್ ಅದೆಂತದೋ ತವಾ ಮೇಲೆರದ್ದು ದೋಸೆ, ಕಡಿಗ್ ತಿಂದ್ರೆ ರಬ್ಬರ್ ಹಾಗೆಯಾ’ ಅಂತ ಯೋಚಿಸುತ್ತ, ‘ಇರು ಶಾಲು, ಬಂದೆ’ ಅಂತ ಎದ್ದಳು ಅಬ್ಬೆ.

ಪಾತ್ರೆಗೆಲ್ಲ ಅದೆಂತದೋ ವಿಮ್ ಶಾಬು ಹಾಕೋದು, ಬೂದಿ ಕತ್ ಸುಂಬು ಹಾಕ್ ತಿಕ್ಕಿರೆ ಎಷ್ಟು ಲಾಯ್ಕ್ ಆಗ್ತಿತ್ತು. ಮಸಿ ಎಲ್ಲ ಹೋಗ್ತಿತ್ತು, ಅದೇನೋ ಈ ಶಾಲು, ಕೈ ಹಾಳಾಗತ್ತೆ ಅಂತ ಅದನ್ನೆಲ್ಲ ಬಳಸೋದೆ ಇಲ್ಲ ಅಂತ ಅಬ್ಬೆಗೆ ಯೋಚನೆ ಬಂತು. ಏನಾದರೂ ಬಾಯ್ಬಿಟ್ ಹೇಳಿದ್ದರೆ ‘ಅತ್ತೆ, ನೀವೇ ತೊಳೆಯಿರಿ’ ಅಂದು ಬಿಟ್ಟಾಳು ಎನ್ನುವ ಭಯ. ಎಲ್ಲಾ ಕೆಲಸ ಮುಗಿಸಿ ಪಕ್ಕದ ಮನೆಗೆ ಹೋದರೆ ಅದೇನು ಹರಟೆಯೊ ಆ ಕಮಲಿ ಜೊತೆಗೆ. ಅದರ ಬದಲು ಒಂದಿಷ್ಟು ಹಪ್ಪಳ ಸಂಡಿಗೆ ಏನಾದರೂ ಮಾಡಬಾರದಾ? ಅಬ್ಬಿ ಒಲೆಗೆ ಕತ್ಕಡಿ, ಅಡಿಕೆ ಸಿಪ್ಪೆ, ಚಕ್ಕೆ ಏನಾದರೂ ತರಬೇಕೆಂಬ ಯೋಚನೆ ಇಲ್ಲ ಅವಳಿಗೆ, ಆಳುಗಳೇ ಮಾಡಲಿ ಎಂದು. ಸೌದಿ ಕಣ್ಣಿ ಬೇಗ ಖಾಲಿ ಆಗತ್ತೆ, ಮಳೆಗಾಲ ಮುಗಿದು ದೀಪಾವಳಿ ತನಕ ಬರತ್ತೆ ಎನ್ನುವ ಸಾಮಾನ್ಯ ತಿಳುವಳಿಕೆ ಇಲ್ಲ.

ಭಾನುವಾರ ಬಂದರೆ ಸಾಕು ‘ರೀ ಸಂತೆಗೆ ಹೋಗಿ ತರಕಾರಿ ತರೋಣ’ ಅಂತಾಳೆ. ಅಲ್ಲಿ ಆ ಹೊಲ್ಸ್ ಪಾನಿಪುರಿ ಮತ್ತೊಂದು ಮಗದೊಂದ್ ತಿಂಬುದು, ಅದರ ಬದಲಿಗೆ ಒಂದಿಷ್ಟು ಪಾಯಸಾವೋ, ಕಡುಬು, ಇಲ್ಲಾ ರವೆ ಲಡ್ಡು ಏನಾರು ಮಾಡಿದ್ರೆ ನಾನು ತಿನ್ನಬಹುದು, ಈ ವಯಸ್ಸಿನಲ್ಲಿ ಪೇಟೆಗೆ ಹೋಗಲೂ ಆಗದು, ಮನೆಲೆ ಒಂದಿಷ್ಟು ಮೊಗೆಹಾಳಿ, ಬಡನೆಹಾಳಿ ಮಾಡಿದ್ದರೆ ಆಗಿತ್ತು. ಏನಾರು ಮಾಡಿಕೊಳ್ಳಲಿ ಎಂದು ಎದ್ದು ಹೋದಳು ಗಂಗಮ್ಮ.

ಅವತ್ತು ಮಗಳು ಸುಜಲಾ ಬರುತ್ತೇನೆಂದು ಕರೆ ಮಾಡಿದ್ದಳು. ಏಳಲಾಗದ ಗಂಗಜ್ಜಿ ಅದೇನೋ ಸಂಭ್ರಮ. ಈ ಹಾಳು ತಳಮಳ ಹೊರಗೆ ಹಾಕಬಹುದು ಎಂಬ ಲವಲವಿಕೆ. ಬೆಳಿಗ್ಗೆಯೇ ಅಕ್ಕಿ ನೆನೆ ಹಾಕಿದ್ದಳು. ಶಾಲು ‘ಅದ್ಯಾಕೆ ಅತ್ತೆ ನಾನು ಪಲಾವ್ ಮಾಡೋಣ ಅಂತಿದ್ದೆ’ ಎಂದಾಗ ಸಿಟ್ಟು ಬಂದರೂ ‘ನಿನ್ನ ನಾದಿನಿಗೆ ಅಕ್ಕಿವಡೆ ಅಂದರೆ ಪ್ರೀತಿ. ಅದಿಕ್ಕೆ ಮಾಡೋಣ ಅಂತ. ನೀನು ಕಲಿತುಕೊ ನಾಳೆ ನಾ ಸತ್ತರೆ ಉಪಯೋಗಕ್ಕೆ ಬರತ್ತೆ’ ಅಂದಾಗ ಶಾಲೂ ಕೇಳದಂತೆ ಹೊರಟೇ ಬಿಟ್ಟಳು ಕಮಲಿ ಮನೆಗೆ.

ಅಕ್ಕಿಯ ಜೊತೆಗೆ ಸೌತೆಕಾಯಿ ರುಬ್ಬಿ ವಡೆ ತಯಾರಿಸಿದಳು ಗಂಗಜ್ಜಿ.. ಸುಜಲಾ ‘ಆಯಿ ಇದ್ಯಾಕೆ ಮಾಡಿದೆ’ ಅಂತ ಅಲವತ್ತುಕೊಂಡೆ ತಿಂದಳು. ರಾತ್ರಿಗೆ ಶಾಲು ಪಲಾವ್ ಮಾಡಿದಾಗ ಅಣ್ಣ ತಂಗಿ ಚೆನ್ನಾಗಿ ನಗುತ್ತಾ ತಿಂದಿದ್ದು ನೋಡಿ ಸ್ವಲ್ಪ ಸಿಟ್ಟು ಬಂತು.

‘ಆಯಿ, ನಮ್ಮ ಅತ್ತೆ ಅದೆಷ್ಟು ಹಳೆ ಕಾಲದವರ ಥರಾ ಮಾಡ್ತಾರೆ ಗೊತ್ತಾ? ನಾನಂತೂ ಅದೆಷ್ಟೋ ಸಲ ಜಗಳ ಆಡಿದ್ದೇನೆ. ನನ್ನ ಕಂಡರೆ ಖಾಯಿಲೆ ಹಿಡಿದು ಬಿಡತ್ತೆ. ನಿನಗೆ ಪರವಾಗಿಲ್ಲ ಅತ್ತಿಗೆ ಒಳ್ಳೆಯವಳು. ಸುಮ್ಮನಿರ್ತಾಳೆ. ಮತ್ತೇನು ಸುದ್ದಿ, ನನ್ನ ಸಣ್ಣ ಕೈತೋಟ ಎಷ್ಟು ಚೆನ್ನಾಗಿದೆ ಗೊತ್ತಾ ಆಯಿ, ನಿನ್ನ ಕೈ ಗುಣದ ಹಾಗೆ ಸೌತೆಕಾಯಿ, ಬದನೆಕಾಯಿ, ಒಂದೆಲಗ, ಲೋಳೆಸರ, ಮಲ್ಲಿಗೆ ದಾಸವಾಳ ಎಲ್ಲಾ ಇದೆ. ಆದರೆ ಕೆಲಸಕ್ಕೆ ಹೋಗಬೇಕು, ನೋಡುಕೊಳ್ಳೋದೇ ಕಷ್ಟ, ಅತ್ತೆ ಅಂತೂ ಒಂದು ಹನಿ ನೀರು ಹಾಕಲ್ಲ’ ಅನ್ನುತ್ತಿದ್ದಳು. ರಜಾ ಮುಗಿಸಿ ಹೊರಟಳು.

ಪಕ್ಕದ ಮನೆಯ ಸುನಂದಾ ಬಂದು ಕಷ್ಟ ಸುಖ ವಿಚಾರಿಸುತ್ತಿದ್ದಾಗ ‘ಅದೇನೇ ನಿನ್ನ ಸೊಸೆ ಆ ಕಮಲಿ ಜೊತೆಗೆ ಕಡಿದು ಕಟ್ಟಾಕೋದು? ಇಬ್ರು ಏನ್ ಮಾತಾಡ್ತಾರೆ? ನಿನ್ನ ಸುದ್ದಿ ಹೇಳ್ತಾರಾ?’ ಎಂದು ಗಂಗಜ್ಜಿಗೆ ಹುಳ ಬಿಟ್ಟರು. ಅಷ್ಟರಲ್ಲಿ ಮನೆಗೆ ಮರಳುವ ಶಾಲು ಕಂಡು ‘ಸುನಂದಾ ನನ್ನ ಮಗಳು ಎಷ್ಟು ಜಾಣೆ ಗೊತ್ತಾ, ಕೆಲಸದ ಜೊತೆಗೆ ಹಿತ್ತಲ ಹಾಳಿ ಎಲ್ಲಾ ಮಾಡಿದ್ದಾಳೆ’ ಎಂದರು. ಶಾಲು ನಕ್ಕು ಒಳಗೆ ಹೋದಳು. ಗಂಗಜ್ಜಿಗೆ ಪೆಚ್ಚಾಯಿತು. ಇದೇನು ಇವಳು ಜಗಳಾನು ಆಡಲ್ಲ, ಮಾತೂ ಇಲ್ಲ, ಅವಳಷ್ಟಕ್ಕೆ ಅವ್ಳಿರ್ತಾಳೆ ಎಂದು.

ಪಾತ್ರೆಗೆಲ್ಲ ಅದೆಂತದೋ ವಿಮ್ ಶಾಬು ಹಾಕೋದು, ಬೂದಿ ಕತ್ ಸುಂಬು ಹಾಕ್ ತಿಕ್ಕಿರೆ ಎಷ್ಟು ಲಾಯ್ಕ್ ಆಗ್ತಿತ್ತು. ಮಸಿ ಎಲ್ಲ ಹೋಗ್ತಿತ್ತು, ಅದೇನೋ ಈ ಶಾಲು, ಕೈ ಹಾಳಾಗತ್ತೆ ಅಂತ ಅದನ್ನೆಲ್ಲ ಬಳಸೋದೆ ಇಲ್ಲ ಅಂತ ಅಬ್ಬೆಗೆ ಯೋಚನೆ ಬಂತು. ಏನಾದರೂ ಬಾಯ್ಬಿಟ್ ಹೇಳಿದ್ದರೆ ‘ಅತ್ತೆ, ನೀವೇ ತೊಳೆಯಿರಿ’ ಅಂದು ಬಿಟ್ಟಾಳು ಎನ್ನುವ ಭಯ.

‘ರೀ ಮನೆಗೆ ನೆಟ್ ಹಾಕಿಸಬೇಕಿತ್ತು.’ ಎಂದಾಗ ಮಗ ಮರು ಮಾತನಾಡದೆ ಹಾಕಿಸಿದ್ದ. ಈಗ ಮೊಬೈಲ್ ಹಿಡಿದು ಕುಳಿತಿದ್ದಳು ಶಾಲು. ‘ಇದು ಬೇರೆ…’ ಎಂದು ಗಂಗಜ್ಜಿ ಬೈದುಕೊಂಡರು. ಸೊಸೆಯ ಮೇಲಿನ ಕೋಪ ಹೆಚ್ಚಾಗುತ್ತಿತ್ತು ಅವಳಿಗೆ. ಶಾಲು ಮಾತ್ರ ಯಾವುದನ್ನೂ ಗಮನಿಸುತ್ತಿಲ್ಲ. ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತಿದ್ದಳು.

ಗಂಗಜ್ಜಿಗೆ ದಿನೇ ದಿನೇ ಸೊಸೆಯ ಮೇಲೆ ಸಿಟ್ಟು ಏರುತ್ತಿತ್ತು. ಅದೇನು ಮಾಡುತ್ತಾಳೆ ಮುಂದೆ ಎಂದು. ಮನದ ದುಗುಡ ಹೇಳಲು ಯಾರೂ ಇಲ್ಲ. ತಾನು ಕೆಲಸ ಮಾಡದಿದ್ದರೂ ಅವಳೇ ಮುಗಿಸಿ ಮತ್ತೆ ಆ ಕಮಲಿ ಜೊತೆಗೆ ಅದೇನೊ….

ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು. ಈ ಶಾಲು ಎಷ್ಟು ಆರಾಮಾಗಿದ್ದಾಳೆ ಇಲ್ಲಿ. ಈ ಮಗನೂ ಅವಳಿಗೆ ಕೆಲಸಕ್ಕೆ ಸಹಾಯ ಮಾಡೋದು ಬೇರೆ…’ ಅಂತ ಗಂಗಮ್ಮನ ಅಳಲು.

ಅದೊಂದು ದಿನ ಗಂಗಜ್ಜಿ ಬಚ್ಚಲು ಮನೆಯಲ್ಲಿ ಕಾಲುಜಾರಿ ಬಿದ್ದಳು. ಕಿರುಚಿಕೊಳ್ಳುತ್ತಲೇ ಶಾಲು ಓಡಿ ಬಂದಳು. ಅವಳ ಬಳಿ ಸೇವೆ ಮಾಡಿಸಿಕೊಳ್ಳಲು ಅದೇನೋ ಬಿಗುಮಾನ. ಆದರೆ ಶಾಲು ಯಾರಿಗೋ ಫೋನ್ ಮಾಡಿ ಗಾಡಿ ತರಿಸಿದ್ದಳು. ಆಸ್ಪತ್ರೆಗೆ ಹೋಗಿ ಎಕ್ಸರೆ ಮಾಡಿಸಿದಾಗ ಸ್ವಲ್ಪ ಬಿರುಕು ಬಂದಿದೆ ಎಂದು ಗೊತ್ತಾಗಿತ್ತು. ಶಾಲು ಎ. ಟಿ. ಎಮ್ ಗೆ ಹೋಗಿ ಹಣ ತಂದಳು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಯೋಚಿಸಿದಳು ಗಂಗಜ್ಜಿ.

ಮನೆಗೆ ಹೋಗಿ ಸುಜಲಾಗೆ ಫೋನ್ ಮಾಡಿ ಒಂದಿಷ್ಟು ದಿನ ಬಾ ಎಂದಾಗ ‘ಹೋಗು ಆಯಿ, ನನ್ನ ಅತ್ತೆ ಸೇವೆ ಮಾಡಿ ಸುಸ್ತಾಗಿದೆ. ಇನ್ನು ನಿನ್ನ ಗೋಳು ಬೇರೆ, ರಜಾ ಇಲ್ಲಾ.’ ಅಂದಳು. ಆದರೆ ಶಾಲು ಮಾತ್ರ ಎದ್ದೇಳದೇ ಇದ್ದ ಗಂಗಜ್ಜಿಗೆ ಮಗಳಿಗಿಂತ ಹೆಚ್ಚಾಗಿ ಸೇವೆ ಮಾಡಿದಳು. ಆದರೆ ಕಮಲಿ ಮನೆಗೆ ಹೋಗುವಾಗ ಮಾತ್ರ ಗಂಡನಿಗೆ ಅತ್ತೆಯ ನೋಡಿಕೊಳ್ಳಲು ಹೇಳುತ್ತಿದ್ದಳು.

ಗಂಗಜ್ಜಿಗೆ ಅದೇನೋ ಕುತೂಹಲ ತಡೆಯಲಾರದೆ ಮಗನ ಕೇಳಿದಳು. ‘ಅದೇನೋ ರಾಮು, ಆ ಕಮಲಿ ಮನೇಲಿ ಅದೇನಿದೆ, ಆವತ್ತು ನೀನಿಲ್ಲದಾಗ ಶಾಲುಗೆ ಆಸ್ಪತ್ರೆಗೆ ಕೊಡಲು ಹೇಗೆ ಹಣ ಬಂತು?’ ಎಂದು.

‘ಆಯಿ ಶಾಲು ಮತ್ತೆ ಕಮಲಿ ಸೇರಿ ಅದೇನೊ ವುಲನ್ ಸ್ವೇಟರ್, ಅದು ಇದು ಮಾಡಿ ಮೊಬೈಲಿನಲ್ಲಿ ಮಾರ್ತಾರೆ, ಅದರಿಂದಾಗಿ ಒಂದಿಷ್ಟು ಹಣ ಅವರ ಬ್ಯಾಂಕ್ ಖಾತೆಯಲ್ಲಿ ಬರತ್ತೆ. ಅದಕ್ಕೆ ನೆಟ್ ಹಾಕಿಸಿದ್ದು.’ ಅಂದಿದ್ದ.

ಗಂಗಜ್ಜಿಗೆ ಸೊಸೆಯ ಹೊಸ ಮುಖ ಕಂಡಿತ್ತು. ಆವತ್ತು ಶಾಲೂ ಜೊತೆಗೆ ಕಮಲಿಯು ಗಂಗಜ್ಜಿ ಮನೆಗೆ ಬಂದಿದ್ದಳು. ‘ಹೇಗಿದ್ದೀರಾ ಅಮ್ಮ? ಶಾಲೂಗೆ ನಿಮ್ಮದೇ ಚಿಂತೆ. ನಾವು ಮಾಡುವ ವ್ಯಾಪಾರ ಚೆನ್ನಾಗಿ ನಡೀತಿದೆ. ಅವಳು ಮೊಬೈಲ್ ನಲ್ಲಿ ಎಲ್ಲಾ ಫೋಟೋ ಹಾಕ್ತಾಳೆ. ನಂಗೆ ಆ ಇಂಗ್ಲಿಷ್ ಅಷ್ಟು ಬರಲ್ಲ. ಅದಕ್ಕೆ ನಿಮ್ಮ ಈ ಸ್ಥಿತಿಯಲ್ಲಿ ಬಿಟ್ಟು ಬಂದಳು. ಕ್ಷಮಿಸಿ, ನಿಮ್ಮ ಬಗ್ಗೆ ಅದೆಷ್ಟು ಹೊಗಳುತ್ತಾಳೆ. ಅಂದಹಾಗೆ ಸುಜಲಾ ಬರಲಿಲ್ವಾ ನಿಮ್ಮನ್ನ ನೋಡೋಕೆ?’ ಅಂದಾಗ ಗಂಗಜ್ಜಿಗೆ ದಿಗಿಲಾಯಿತು.

‘ಅರೇ ಇದೇನಾಯಿತು. ನನ್ನ ಮಗಳು ಮಾತ್ರ ಹಳ್ಳಿಯ ಕೆಲಸ ಮಾಡಬಾರದು ಅಂತ ನಗರಕ್ಕೆ ಕಳುಹಿಸಿದ್ದೆ. ಆದರೆ ನನ್ನ ಸೊಸೆ ಮಾತ್ರ ಎಲ್ಲಾ ಕೆಲಸ ಮಾಡಲಿ ಎಂದು ಬಯಸಿದೆ. ನಾನೇ ಎಷ್ಟೋ ಸಲ ಅವಳ ಸುದ್ದಿಗಳನ್ನು ಪಕ್ಕದ ಸುನಂದಾ ಜೊತೆಗೆ ಹೇಳಿದಿನಿ. ಅದು ಇವಳ ಕಿವಿಗೆ ಬಿದ್ದಿರತ್ತೆ. ಆದರೆ ಒಂದೇ ಒಂದು ದಿನ ನನ್ನಲ್ಲಿ ಅನಾದರ ತೋರಲಿಲ್ಲ ಇವಳು’ ಅಂದುಕೊಂಡಳು.

ಅವತ್ತು ಶಾಲು‘ಅತ್ತೆ ಇದೋ ಹೊಸ ಸೀರೆ ನಿಮಗಾಗಿ, ಕಮಲಿಯಿಂದ ಸ್ವೇಟರ್ ಕಾಲುಚೀಲ, ಮಕ್ಕಳ ಟೊಪ್ಪಿ ಎಲ್ಲ ಕಲಿತೆ. ಈಗ ನಮ್ಮ ಬಿಸಿನೆಸ್ ಶುರುವಾಗಿದೆ. ಒಂದಿಷ್ಟು ಹಣವೂ ಕೈಗೆ ಬಂತು. ಅದಕ್ಕೆ ಮೊದಲ ಗಿಫ್ಟ್ ನಿಮಗೇ’ ಎಂದಳು.

ಅವತ್ತೊಂದಿನಾ ಮಗಳಿಗೆ ಚೆಂದದ ಸೀರೆ ತಂದು ಇವಳಿಗೆ ಸಾದಾ ಸೀರೆ ತಂದಿದ್ದು ನೆನಪಾಯಿತು ಗಂಗಜ್ಜಿಗೆ. ತಾನು ಕಾಳು ಪೆಟ್ಟುಮಾಡಿಕೊಂಡ ಸುದ್ದಿ ಗೊತ್ತಿದ್ದರೂ ಮಗಳು ಒಂದೇ ಒಂದ್ ಫೋನ್ ಸಹ ಮಾಡಲಿಲ್ಲ, ಹುಷಾರ್ ಆಯಿತಾ ಎಂದು…

ಗಂಗಜ್ಜಿಗೆ ಈಗ ಕಾಲು ನೋವು ಸ್ವಲ್ಪ ಸುಧಾರಿಸಿತ್ತು.

‘ಶಾಲು ಇವತ್ತು ನಾನೇ ದೋಸೆ ಹುಯ್ದು ಕೋಡ್ತೆ. ನೀ ಬೇಗ ಹೋಗಬಹುದು ಕಮಲಿ ಮನೆಗೆ, ಮಧ್ಯಾಹ್ನ ಅಡುಗೆ ನಾನೇ ನಿಧಾನವಾಗಿ ಮಾಡುತ್ತೇನೆ, ಆದರೆ ಆದಷ್ಟು ಬೇಗ ಬಾ’. ಎಂದು ಗಂಗಜ್ಜಿ ಅಂದಾಗ ಶಾಲುಗೆ ಆಶ್ಚರ್ಯ ಕಾದಿತ್ತು…..