ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ ತೊಡಗಿರುತ್ತದೆ. ಬಂಡೆಯ ಮೇಲೆಯೇ ಸಾಷ್ಟಾಂಗವೆರಗುವ ಇಲ್ಲವೇ ಕೈಯೆತ್ತಿ ನಮಿಸುತ್ತಿರುವ ಭಕ್ತರ ಚಿತ್ರಗಳನ್ನೂ ಶಿವನನ್ನು ಸ್ತುತಿಸುವ ಬರೆಹವನ್ನೂ ಅಲ್ಲಲ್ಲಿ ಕಾಣಬಹುದು.
ಟಿ.ಎಸ್.‌ ಗೋಪಾಲ್‌ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತಾರನೆಯ ಕಂತು

 

ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಪಟ್ಟಣಗಳಲ್ಲೊಂದಾದ ಶಿರಸಿ ಮಾರಿಕಾಂಬೆಯ ನೆಲೆಯೆಂಬ ಕಾರಣಕ್ಕೂ ಹೆಸರು ಪಡೆದಿದೆ. ಇಲ್ಲಿಂದ ಯಲ್ಲಾಪುರಕ್ಕೆ ಸಾಗುವ ಹೆದ್ದಾರಿಯಲ್ಲಿ ಹದಿನೇಳು ಕಿಲೋಮೀಟರ್ ದೂರ ಸಾಗಿದರೆ ಬೈರುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಗೋಳ ಗ್ರಾಮ ಸಿಗುತ್ತದೆ. ಇಲ್ಲೇ ಎರಡು ಕಿಲೋಮೀಟರ್ ದೂರದ ಒಳದಾರಿ ನಿಮ್ಮನ್ನು ಶಾಲ್ಮಲೀ ನದಿಯ ತೀರಕ್ಕೆ ಒಯ್ಯುತ್ತದೆ. ನಾವು ಪರಿಚಯಿಸುತ್ತಿರುವ ಸಹಸ್ರಲಿಂಗ ಇರುವುದು ಇಲ್ಲಿಯೇ.

ಶಾಲ್ಮಲಿ- ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲೊಂದು. ಬಹುತೇಕ ನದಿಗಳಂತೆ ಶಾಲ್ಮಲಿಗೂ ಪೌರಾಣಿಕ ಸಂಬಂಧವುಂಟು. ಲೋಕದ ಪಾಪ ತೊಳೆಯಲು ಅವತರಿಸಿದ ಗಂಗೆಯನ್ನು ತಡೆದ ಪಾಪ ಜಹ್ನು ಋಷಿಯನ್ನು ಆವರಿಸಿಕೊಂಡಾಗ, ಆತನು ದಕ್ಷಿಣಕ್ಕೆ ಬಂದು ಶಾಲ್ಮಲಿಯ ದಡದಲ್ಲಿ ದೀರ್ಘ ತಪಸ್ಸು ಮಾಡಿ ಗಂಗೆಯ ವರದಿಂದಲೇ ಪಾಪಮುಕ್ತನಾದನಂತೆ. ಗಂಗೆಯ ನಿಮಿತ್ತ ದೊರೆಕೊಂಡ ಪಾಪವನ್ನೇ ಹೋಗಲಾಡಿಸುವ ಶಕ್ತಿಯಿದ್ದ ಮೇಲೆ ಶಾಲ್ಮಲಿಯ ಪಾವಿತ್ರ್ಯವೇನು ಕಡಿಮೆಯೇ? ಸೋಂದೆಯ ಅರಸರು ರಾಜ್ಯಭಾರ ನಡೆಸಿದ್ದು ಇದೇ ನದಿಯ ತೀರದಲ್ಲಿ.


ಮಾಧ್ವಸಂಪ್ರದಾಯದ ಪ್ರಸಿದ್ಧ ಯತಿವರ್ಯರಾದ ಶ್ರೀ ವಾದಿರಾಜರ ಜೀವನಸಾಧನೆಗಳೊಡನೆ ಶಾಲ್ಮಲೀನದಿಯ ಹರಿವು ಹಾಸುಹೊಕ್ಕಾಗಿದೆ. ಸೋದೆ ವಾದಿರಾಜಮಠ, ಸ್ವರ್ಣವಲ್ಲೀ ಮಠ, ಜೈನ ಮಠವೇ ಮೊದಲಾದ ಧಾರ್ಮಿಕ ಸಂಸ್ಥೆಗಳು ಶಾಲ್ಮಲಿಯ ದಡವನ್ನೇ ಆಶ್ರಯಿಸಿ ಅಧ್ಯಾತ್ಮದ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ.

ಈ ಶಾಲ್ಮಲೀ ನದಿಯ ಹರವಿನಲ್ಲಿ ಹುದುಗಿದ ನೂರಾರು ಕಪ್ಪುಬಂಡೆಗಳನ್ನು ಕಂಡಾಗ ಸೋಂದೆಯ ಅರಸ ಸದಾಶಿವರಾಯನಿಗೆ (1678-1718) ಅವೆಲ್ಲವೂ ಶಿವಸ್ವರೂಪಿಗಳಂತೆ ತೋರಿರಬೇಕು. ಹೀಗಾಗಿ ಅರಸನು ಈ ಬಂಡೆಗಳ ಮೇಲೆ ಅವಕಾಶವಿರುವೆಡೆಗಳಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ. ಶಿವನ ಮುಂದೆ ಜಾಗವುಳಿದ ಕಡೆ ನಂದಿಗೂ ಅವಕಾಶವನ್ನು ಕಲ್ಪಿಸಲಾಯಿತು. ಬಹುಶಃ ಮುಂದಿನ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ಮುಂದುವರೆದು ನೂರಾರು ಲಿಂಗಗಳು ಪ್ರತಿಷ್ಠಾಪನೆಗೊಂಡುವೆಂದು ತೋರುತ್ತದೆ.

ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ ತೊಡಗಿರುತ್ತದೆ. ಬಂಡೆಯ ಮೇಲೆಯೇ ಸಾಷ್ಟಾಂಗವೆರಗುವ ಇಲ್ಲವೇ ಕೈಯೆತ್ತಿ ನಮಿಸುತ್ತಿರುವ ಭಕ್ತರ ಚಿತ್ರಗಳನ್ನೂ ಶಿವನನ್ನು ಸ್ತುತಿಸುವ ಬರೆಹವನ್ನೂ ಅಲ್ಲಲ್ಲಿ ಕಾಣಬಹುದು.

ಈ ಕ್ಷೇತ್ರಕ್ಕೆ ಸಹಸ್ರಲಿಂಗವೆಂಬ ಹೆಸರಿದ್ದರೂ ಸಾವಿರಸಂಖ್ಯೆಯ ಲಿಂಗಗಳೇ ಇಲ್ಲಿ ಇದ್ದಿರಬೇಕೆಂದಿಲ್ಲ. ನೂರಾರು ಸಂಖ್ಯೆಯಲ್ಲಂತೂ ಕಂಡುಬರುವ ಈ ಲಿಂಗಗಳು ತಮ್ಮನ್ನು ಸ್ಥಾಪಿಸಲಾಗಿರುವ ಬಂಡೆಯ ವಿಸ್ತಾರಕ್ಕೆ ತಕ್ಕಂತೆ ರೂಪದಲ್ಲಿ ಚಿಕ್ಕವೋ ದೊಡ್ಡವೋ ಆಗಿ ತೋರುತ್ತವೆ. ಕೆಲವು ಲಿಂಗಗಳಿಗೆ ಪಾಣಿಪೀಠವನ್ನೂ ಬಿಡಿಸಿರುವಂತೆ ಚಿತ್ರಣವಿದ್ದರೆ ಇನ್ನು ಕೆಲವು ಲಿಂಗಗಳು ಗುಬುಟುಗಳ ರೂಪದಲ್ಲಿ ಮೇಲೆದ್ದು ಕಾಣುತ್ತವೆ. ಒಟ್ಟಿನಲ್ಲಿ ಅಂದಾಜು ನೂರು ಮೀಟರುಗಳಷ್ಟು ಹರವಿನಲ್ಲಿ ಜಲಸ್ಥಿತವಾದ ನೂರಾರು ಶಿವಲಿಂಗಗಳು ನಿರಂತರವಾಗಿ ಶಾಲ್ಮಲಿಯ ಸೇವೆಯನ್ನು ಸ್ವೀಕರಿಸುವ ದೃಶ್ಯ ಭಕ್ತರಿಗೆ ರೋಮಾಂಚವುಂಟುಮಾಡುತ್ತದೆ. ದಡದಿಂದ ನೀರಿಗಿಳಿದು ಬರಲು ಸೋಪಾನಗಳ ವ್ಯವಸ್ಥೆಯಿದ್ದು ಸನಿಹದಲ್ಲೇ ಪ್ರಾತಿನಿಧಿಕವಾಗಿ ಶಿವಲಿಂಗವೊಂದಕ್ಕೆ ನಿಮ್ಮಿಂದ ನೇರವಾಗಿ ಸಾಂಪ್ರದಾಯಿಕ ಪೂಜೆಸಲ್ಲುವುದಕ್ಕೆ ನೆರವಾಗುವ ಅರ್ಚಕರೂ ಇದ್ದಾರೆ.

(ಫೋಟೋಗಳು: ಲೇಖಕರವು)

ಸಹಸ್ರಲಿಂಗ ದರ್ಶನಕ್ಕೆ ಬರುವ ಭಕ್ತರೂ ಪ್ರವಾಸಿಗರೂ ಶಾಲ್ಮಲೀ ನದಿಯ ಹರಿವಿನ ಪ್ರಮಾಣವನ್ನು ನೋಡಿಕೊಂಡೇ ಇಲ್ಲಿಗೆ ಬರುವ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ನೆನಪಿರಲಿ, ಈ ಕ್ಷೇತ್ರವಿರುವುದು ಮಳೆಯ ನಾಡಿನಲ್ಲಿ. ಮಳೆಗಾಲದಲ್ಲಿ ಶಾಲ್ಮಲೀನದಿಯ ಹರಿವು ಉಕ್ಕಿ ಮೇಲುಮೆಟ್ಟಿಲಿನವರೆಗೂ ತಲುಪುವುದರಿಂದ ಸಹಸ್ರಲಿಂಗಗಳನ್ನು ಕಾಣುವ ಸಾಧ್ಯತೆಯಿಲ್ಲ. ಪ್ರವಾಹದ ರಭಸವೇನೂ ಇರದ ನವೆಂಬರ್ ಮತ್ತು ಮುಂದಿನ ತಿಂಗಳುಗಳು ಇಲ್ಲಿಗೆ ಬರಲು ಸರಿಯಾದ ಕಾಲ. ಶಿವರಾತ್ರಿಯ ಸಂದರ್ಭದಲ್ಲಂತೂ ಸಹಸ್ರಲಿಂಗದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವೇ. ಇಲ್ಲೇ ಅನತಿದೂರದಲ್ಲಿ ಸೋಂದೆಯ ಹಲವು ಮಠಗಳೂ ಗುಡಿಗಳೂ ಇದ್ದು ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಲು ಅನುಕೂಲವಾಗುವಂತೆ ನಿಮ್ಮ ಪ್ರವಾಸವನ್ನು ನಿಗದಿಪಡಿಸಿಕೊಳ್ಳಿ.

ಒಂದು ಕಂಬದ ಮೇಲೆ ರಾಮ ಮೂಡಿದ್ದಾನೆ. ಹನುಮನೂ ಕೈಮುಗಿದು ನಿಂತು ಭಕ್ತಿಯನ್ನು ತೋರ್ಪಡಿಸುತ್ತಿದ್ದಾನೆ. ಅಂಬೆಗಾಲು ಕೃಷ್ಣ, ಅಶ್ವಾರೂಢ ಕಲ್ಕಿ – ಇನ್ನಿತರ ವಿಶೇಷ ಶಿಲ್ಪಗಳು. ತ್ರಿವಿಕ್ರಮದೇವರನ್ನು ಇಲ್ಲಿಗೆ ಬಿಜಯಮಾಡಿಸಿದ ಭೂತರಾಜನಿಗೂ ಈ ಸಂಕೀರ್ಣದಲ್ಲಿ ಪ್ರತ್ಯೇಕ ಸ್ಥಾನವಿದೆ.