ಸಾವಿನ ಶಹರದಲ್ಲೊಂದು ಸುತ್ತು

ಪುಂಗಿದಾಸರ ಪುಂಡಾಟಿಕೆ
ಜಗದ ತುಂಬೆಲ್ಲ ಜಾಹೀರು ಆಗಿರುವಾಗ
ಮುಚ್ಚಿಕೊಳ್ಳಲು ಉಳಿದಿರುವುದೇನು?

ಕೂಗುಮಾರಿಗಳಿಗೇನು ಗೊತ್ತು
ಕರುಳಬಳ್ಳಿಗಳ ಕಾರಿರುಳ ಸಂಕಟ
ಕೇಳುವ ಸುದ್ದಿಗಳು ಒತ್ತಟ್ಟಿಗಿರಲಿ
ಕನವರಿಸುವ ಕನಸುಗಳೆ
ಸಾವಿನ ಮನೆಯಂತಾಗಿವೆ

ಮೈಕಾಸುರರ
ಬಾಯಿ ಮಾತಿಗೆ ಮರುಳಾದ ಜನತೆ
ವಧಾಸ್ಥಾನದಲ್ಲಿ ನಿಂತು ಉಸಿರಾಡುವ ಕಾಲ ಬಂದಿದೆ
ಕ್ಷಣಗಣನೆ ಆರಂಭವಾಗಿ ದಿನಗಳುರುಳುತಿವೆ
ಸಾವಿನೂರಿಗೂ ಬದುಕುವ ದಾರಿಗೂ
ಮೈಲಿಗಲ್ಲುಗಳೆ ಕರೆಯುತ್ತಿವೆ

ಮಕ್ಕಳಿಂದ ಮುದುಕರವರೆಗೂ
ಕೇರಿಯಿಂದ ಶಹರದವರೆಗೂ
ಸಾಲುಗಟ್ಟಿವೆ ಚೀತ್ಕಾರದ ಚಿತಾಗಾರಗಳು
ಸಾವಿನ ದಲ್ಲಾಳಿಗಳು ಇಲ್ಲಿಯೂ ಚೌಕಾಶಿಗಿಳಿದಿರುವುದು
ಸುದ್ದಿಯಾಗುತ್ತಿದೆ
ದವಾಖಾನೆಯೇ ದುಖಾನುಗಳಾಗಿ ಬದಲಾದ ವೇಳೆಯಲಿ
ಫರಾಕು ಕೂಗುವ ಫೇಕುಗಳು
ಹಗಲಿನಲಿ ಬೆತ್ತಲಾಗಿದ್ದಾರೆ

ಗಾಂಧಿಚೌಕಿನ ಕಲ್ಲುಕಂಬದಲ್ಲಿ
ಕೆತ್ತಿದ ಮಾತು
ಮಹಾತ್ಮನ ಕೊನೆಯಂತೆ ನರಳಾಟಕ್ಕಿಳಿದಿದೆ
ಎಂ ಜಿ ರಸ್ತೆಯ ಮೂಲೆ ಮೂಲೆಯಲ್ಲೂ
ಜೈಕಾರವೆ ಕೇಳುತ್ತಿದೆ

ಶಿವಶಂಕರ ಸೀಗೆಹಟ್ಟಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿಯವರು
ಪ್ರಸ್ತುತ ದೇವದುರ್ಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
‘ಕರುಳಬಳ್ಳಿ ಮತ್ತು ಜೀವಕಾರುಣ್ಯʼ ಇವರ ಪ್ರಕಟಿತ ಕವನ ಸಂಕಲನ