ಪೊಸತು ವರುಷವಿದು
ಬಾಳ ಪಯಣದ ಬುತ್ತಿ ಗಂಟಿನ
ಪೌಳಿಯೊಳಗಡೆಯೊಂದು ದಾಳವು
ಪಾಳಿ ಕಳೆದಿದೆಯೆಂದು ಹೋಯಿತು ತೀರ ದೂರವಿರೆ||
ಕಾಲ ಸಮಯಕೆ ಕರ್ಮವೆನ್ನುತ
ಕಾಲ ಮೆದ್ದಿಹ ಜೀವ ನೆನೆಯುತ
ತಾಳ ಮೇಳವ ಗುಣಿಸಿ ಮಣಿಸುತ ರಾಗ ಪಾಡುತಿರೆ|
ಮಳೆಯ ಕಳೆದೊಡೆ ಬಿಸಿಲು ಬಾರದೆ
ಬೆಳಕು ಮೂಡಿದೊಡಿರುಳು ಕಾಣದೆ
ತಳಕು ಬಳುಕಿನ ಬದುಕು ತಿಳಿಸದೆ ದೂರ ಸರಿಯುವುದೆ
ಕಳೆದುದೆಲ್ಲವ ಮರೆಯಬೇಕಿದೆ
ಕಳೆದು ಕೂಡಲು ಮರೆವ ಮದ್ದಿದೆ
ಹೊಳೆವ ವಜ್ರಕೆ ಮೆರುಗು ಬಳಿಯಲು ಕಾಲ ಕಾಯುತಿದೆ
ಉಸಿರ ನೀಯಲು ನಮ್ಮ ಭಾವಕೆ
ಪಸಿರು ತುಂಬುತ ಜಲವನುಳಿಸುತೆ
ಕೆಸರಿನೊಂದಿಗೆ ಪಯಣ ಮುಗಿಸಿತೆ ಕಳೆದ ಕಾಲವದು|
ಹಸಿವಿನುದರಕೆ ಬೋನ ಹೊಂಚಲು
ಕೆಸರು ಕಡೆಯುತ ಮೊಸರುಗೈದೊಡೆ
ಪೆಸರು ಮೂಡುವುದೆಂದು ಪೇಳಿತು ಪೊಸದು ವರುಷವಿದು||