ಬೇಲಿಗಳ ದಾಟುವುದು
ತುಟಿಬೇಲಿ ದಾಟಿ
ಹೊರಬಿದ್ದ ನಗುವೊಂದು
ಹಾಗೇ ಅಲೆದಾಡಲು ಹೋಯಿತು
ತರಚಿದ ಮೈ ಕೈಗಳ
ನೇವರಿಸಿ ಸಂತೈಸಿ
ಗಾಳಿಗೆದೆಯೊಡ್ಡಿ ನಿಂತಿತು
ಹಾಗೆ ನೋಡಿದರೆ ಎಷ್ಟೊಂದು
ಬೇಲಿಗಳಿವೆ ಇಲ್ಲಿ
ದಾಟಿ ಬರಲಾಗದೆ ಸೊರಗುವ
ಮುಗುಳುಗಳಿವೆ
ಬೇಲಿ ದಾಟಲೂ ಬೇಕು
ಮುಳ್ಳುಗಳು ತಾಗದೆ ಗೀರದೆ
ಉಪಾಯವಾಗಿ ನುಣುಚಿಕೊಳುವ
ಛಾತಿ ಧೈರ್ಯ ಬಂಡತನ
ಹೀಗೆ ಏನಾದರೆನ್ನಿ
ಹೌದು ಯಾರು ಹಾಕಿದರು ಈ
ಇಷ್ಟೆಲ್ಲ ಬೇಲಿಗಳ
ಗರಗಸದ ಮುಳ್ಳುಗಳ ಪೋಣಿಸಿ
ನಿಜವಾಗಲು ಅವರಿಗೆ
ಗೊತ್ತಿಲ್ಲ ಎಲ್ಲ
ಎಲ್ಲ ಬೇಲಿಗಳನೂ ದಾಟಬಹುದು
ಒಳದನಿಗೊಂದು ಏಣಿ ಸಿಕ್ಕರೆ
ತುಟಿಬೇಲಿ ದಾಟಿದ
ನಗುವೊಂದು ಹಾಗೇ
ಅಲೆದಾಡಲು ಹೋಯಿತು
ಬರಿದೆ ಬೇಲಿಗಳ ನೋಡಿ
ತರಚಿದ ಮೈಕೈಗಳ ಜಾಡಿಸಿತು
ರೆಕ್ಕೆಮೂಡಿಸಿಕೊಂಡು
ಹಾಗೇ ಹಾರಿಹೋಯಿತು
ಬೇಲಿಗಳು ಹಾಗೇ ಉರುಳಿದವು
ಈಗ ಅಲ್ಲೆಲ್ಲ ಹೂಗಳದೇ ಮುಗುಳು
ಇಬ್ಬಂದಿ
ಉರಿವ ಜ್ವಾಲೆಗೂ ಕಸಿವಿಸಿ
ಎಣ್ಣೆ ಬತ್ತಿ ಮತ್ತೆ ಹಣತೆ ಹಂಗು
ಗಾಳಿಗೆ ನುಲಿದಾಗಲೆಲ್ಲ
ಕಾಡುವ ಅಭದ್ರತೆ
ಬೆಳಕಿನಳಲ ದನಿ ಕೇಳುವುದಿಲ್ಲ
ಹರಿವ ನೀರಿಗೂ ಭಯವಿದೆ
ಗುಪ್ತಗಾಮಿನಿಯಾಗಿಸುವ
ಭೂಮಿಯ ಸಂಚಿಗೆ
ಕಳವಳಿಕೆಗೆ ಸಾಂತ್ವನವಿಲ್ಲ
ನದಿಯ ಕಣ್ಣೀರು ಕಾಣುವುದಿಲ್ಲ
ಮಿಡಿವ ನಾಡಿಗೂ ಆತಂಕವಿದೆ
ಗರಣೆಗಟ್ಟುವ ಧಮನಿಗಳ
ಕುತಂತ್ರಕೆ ಹೃದಯವೂ
ಜೊತೆಯಾಗಿ ನೋವ ಬಿತ್ತಿದರೆ
ನಾಡಿ ಬಿಕ್ಕಿದ್ದಕ್ಕೆ ಸಾಂತ್ವನದ ಕೈಗಳಿಲ್ಲ
ಕಣ್ಣಹನಿಗೂ ಮುಜುಗರವಿದೆ
ತೆರೆದ ರೆಪ್ಪೆಗಳು ಬಾಗಿಲ ಹಾಕಿ
ಒಳಗಿದ್ದರೆ ಹೊರಲಾರದ ಭಾರ
ಹೊರ ಹರಿದರೆ ದುರುಗುಟ್ಟವ ಜಗ
ಕಣ್ಣೀರಿನ ಕಣ್ಣೀರು ಹೊರಹರಿಯುವುದಿಲ್ಲ
ಬದುಕಿಗೂ ಆಯಾಸವಿದೆ
ಬೆನ್ನುಹತ್ತಿದ ವಿಧಿಗೆ ಜೂಟಾಟ
ಗೆದ್ದರೂ ಮುಗಿಯದ ಓಟ
ಸೋತರೆ ಸೂತ್ರ ಹರಿದ ಪಟ
ನಕ್ಕಂತೆ ನಟಿಸಿದ್ದು ತಿಳಿವ ಜಗವಿಲ್ಲ