ಕಾವ್ಯ ಕೃತಿಗಳು ಬದುಕಿನ ಕ್ಷಣಗಳನ್ನು ಅನುಸರಿಸಿ ಕಟ್ಟಿದ್ದಾದ್ದರಿಂದ ಇವು ಚಿತ್ತವೃತ್ತಿಯನ್ನು ತನ್ಮಯತೆಯಿಂದ, ಆನಂದದಿಂದ, ನೋಡುಗ ಮತ್ತು ಓದುಗನಲ್ಲಿ ನೆಲೆ ನಿಲ್ಲುತ್ತದೆ. ಇದನ್ನೇ ಮೀಮಾಂಸಕರು ‘ರಸ’ವೆಂದು ಕರೆದಿದ್ದಾರೆ. ರಸ ಅನ್ನುವುದಕ್ಕೆ ಸೋಮರಸ, ಹಾಲು, ನೀರು ಎಂಬ ಅರ್ಥಗಳು ಇದ್ದರೂ ಅಧ್ಯಾತ್ಮಿಕ ಅರ್ಥದಲ್ಲಿ ‘ಆತ್ಮ ಸಾಕ್ಷಾತ್ಕಾರ’ ಅನ್ನುವುದನ್ನು ತಿಳಿಸುತ್ತದೆ. ಸಾಕ್ಷಾತ್ಕಾರಕ್ಕೆ ಬದುಕನ್ನು ಅನುಕರಿಸಿ ಕಟ್ಟಿದ ಕಾವ್ಯ, ನಾಟಕ ಕೃತಿಗಳು ಹಾದಿ ಮಾಡಿಕೊಡುತ್ತದೆ. ಇದಕ್ಕೇ ಮೀಮಾಂಸಕರು ‘ಕಾವ್ಯಂ ಆನಂದಾಯಾ’ ಎಂದು ಕರೆದಿರುವುದು.
ಆರ್ . ದಿಲೀಪ್ ಕುಮಾರ್ ಲೇಖನ

ಶೃಂಗಾರ ರಸ ವಿಚಾರ ೧

ಜೀವಂತವಾಗಿರುವ ಮನುಷ್ಯನಲ್ಲಿ ಪ್ರತಿಕ್ಷಣವೂ ಒಂದಲ್ಲಾ ಒಂದು ಭಾವ ಉಂಟಾಗುತ್ತಲೇ ಇರುತ್ತದೆ. ದೃಶ್ಯ- ಶ್ರವ್ಯ ಮಾಧ್ಯಮಗಳಿಂದ ಉಂಟಾದ ಅನುಭವ, ಭಾವದ ಆವಿರ್ಭಾದಿಂದ ಮನುಷ್ಯನ ಇರುವಿಕೆ, ಸ್ಥಿತಿ, ಚಿತ್ತವೃತ್ತಿಗಳನ್ನು ತಿಳಿಸುತ್ತಲೇ ಇರುತ್ತದೆ. ಭಾವದ ಆವಿರ್ಭಾವಕ್ಕೆ ಮನುಷ್ಯನ ಜೀವಂತ ಇರುವಿಕೆಯೇ ಕಾರಣ. ಇದು ಮನುಷ್ಯನ ಅಸ್ಥಿತ್ವವೂ ಹೌದು. ಕಾರ್ಯ ಕಾರಣದ ಸಂಬಂಧದಿಂದ ಸ್ಪಂದಿಸುವ ಜೀವಂತ ಮನುಷ್ಯನ ಚಿತ್ತ ಬಂಧವೂ ಹೌದು.

ಭಾವವು ಚಿತ್ತವೃತ್ತಿ, ಮಾನಸಿಕ ಕ್ರಿಯೆಯಾದ್ದರಿಂದ ಅಷ್ಟು ಬೇಗ ಒಳಗೆ ಉಂಟಾದ ಭಾವವನ್ನು ಅರಿಯಲು ಅಸಾಧ್ಯ. ಅದನ್ನರಿಯುವ ಹಾದಿ ಮನುಷ್ಯನ ವರ್ತನೆ. ಅವನ ಅಂಗಾಂಗಗಳ ಚಲನೆ, ಮುಖಭಾವದ ಬದಲಾವಣೆ, ಆಡುವ ಮಾತು ಇವೆಲ್ಲವೂ ಬಹಳ ಮುಖ್ಯವೆಂದೇ ಪರಿಗಣಿಸಬೇಕಾಗಿದೆ.

ಭಾವವು ರಸವಾಗಿ ಪರಿಗಣನೆಗೆ ಬರುವಾಗ ಮನುಷ್ಯನೇ ಕೇಂದ್ರ. ದೃಶ್ಯ ಮಾಧ್ಯಮದಲ್ಲಿಯಾದರೆ ನಾಟಕ, ಸಿನೆಮಾಗಳ ಮೂಲಕವೂ, ಶ್ರವ್ಯ ಮಾಧ್ಯಮದಲ್ಲಿ ಕಾವ್ಯ, ಸಂಗೀತಗಳ ಮೂಲಕವೂ ಅನುಭವಕ್ಕೆ ಬರುತ್ತದೆ. (ದೃಶ್ಯ ಶ್ರವ್ಯಗಳೆರಡೂ ಸೇರಿರುವುದೇ ವಾಙ್ಮಯ) ಈ ಎರಡೂ ಮಾಧ್ಯಮಗಳಲ್ಲಿ ಅನುಭವ ಕಂಡುಬಂದರೂ ನೋಡುಗ, ಓದುಗನಲ್ಲಿ ಸಂಸ್ಕಾರ (ಅವನಲ್ಲಿಯೂ ಆ ಅನುಭವಗಳು ಆಗಿದ್ದರೆ – ಮೀಮಾಂಸಕರು ವ್ಯುತ್ಪತ್ತಿ ಅನ್ನುವುದು ಇದನ್ನೇ, ಓದು – ಬದುಕಿನ ಅನುಭವಗಳ ಒಟ್ಟು ಮೊತ್ತವೇ, ಕೇವಲ ಓದೇ ಬಹುಜ್ಞತೆಯಲ್ಲ) ಇದ್ದರೆ ಜಾಗೃತಾವಸ್ಥೆ ಅವರ ಪ್ರತಿಸ್ಪಂದನೆಯಲ್ಲಿನ ನಡವಳಿಕೆಗಳ ಮೂಲಕ ತಿಳಿಯುತ್ತದೆ. ಕೆಲವು ಭಾವಗಳು ಮನುಷ್ಯನಲ್ಲಿ ಶಾಶ್ವತವಾಗಿ ಇರುತ್ತವೆ, ಅವುಗಳೇ ಸ್ಥಾಯಿ ಭಾವ. ಈ ಸ್ಥಾಯಿ ಭಾವದ ಜಾಗೃತತೆಗೆ ಕಾರಣವಾಗುವ ಕೆಲವು ಘಟನೆಗಳು ನಡೆದಾಗ ಅದು ಜಾಗೃತಾವಸ್ಥೆ ಪಡೆದು ಮುನ್ನೆಲೆಗೆ ಬಂದು ನಿಲ್ಲುತ್ತದೆ. ಜಾಗೃತವಾದ ಭಾವವು ಸ್ಥಾಯಿಯೋ ಸಂಚಾರಿಯೋ ಅನ್ನುವುದನ್ನು ಸಂದರ್ಭದ ಅಡಿಯಲ್ಲಿ ನೋಡಿದಾಗ ತಿಳಿಯುತ್ತದೆ.

ಉದಾಹರಣೆಗೆ ಶೃಂಗಾರ ರಸವನ್ನೇ ನೋಡುವುದಾದರೆ, ಹೆಣ್ಣು ಮತ್ತು ಗಂಡಿನ ಮನಸ್ಸಿನಲ್ಲಿ ರತಿ ಸ್ಥಾಯಿಭಾವವು ಶಾಶ್ವತವಾದದ್ದು. ಇದು ವಾಸನಾ ರೂಪದಲ್ಲಿ ಇರುತ್ತದೆ. ಈ ಶಾಶ್ವತವಾದ ಭಾವವು ಜಾಗೃತಗೊಳ್ಳಲು ಪುರುಷನಿಗೆ ಸ್ತ್ರೀಯು, ಅಥವಾ ಸ್ತ್ರೀಗೆ ಪುರುಷ ಮುಖಾಮುಖಿಯಾದಾಗ ಉದಿಸುವ ಭಾವ ರತಿಯು ಮೂಲವಾಗಿರುತ್ತದೆ. ಈ ಕ್ಷಣದಲ್ಲಿನ ಸ್ಥಾಯಿ ಭಾವದಲ್ಲಾದ ಉತ್ಕರ್ಷ ವರ್ತನೆಯಿಂದ ಕೆಲವರಲ್ಲಿ ಹೊರಗಡೆ ತೋರಗೊಡಬಹುದು, ಕೆಲವರಲ್ಲಿ ತೋರಗೊಡದಿರಬಹುದು ಮತ್ತೂ ಕೆಲವರಲ್ಲಿ ತೋರದೆಯೇ ಹಾಗೆ ಒಳಗೇ ಅದುಮಿಟ್ಟಿರಬಹುದು. ಹೀಗೆ ಮುಖಾಮುಖಿಯಾದಾಗ ಉತ್ಸಾಹ, ಹಾಸ, ಭಯ, ಆವೇಗ ಮುಂತಾದ ಭಾವಗಳು ಎರಡೂ ಬದಿಯಿಂದಲೂ ಉದಿಸುತ್ತವೆ. ಈ ಭಾವವೇ ಸ್ಥಾಯಿಗಳಾಗಿದ್ದರೂ ಒಂದು ಕಾರಣದಿಂದ ಉಂಟಾದ ಕಾರ್ಯವಾಗಿ ಹುಟ್ಟಿ ಲಯವಾಗುವುದು. ಕಲೆಯಲ್ಲಿ ಇವುಗಳನ್ನು ಹೊರಹಾಕಿದಾಗ ಭಾವದ ಕಾರಣಗಳನ್ನು ವಿಭಾವಗಳೆಂದು, ಅದರ ಕಾರ್ಯಗಳನ್ನು ಅನುಭಾವಗಳೆಂದು ಕರೆಯುವುದು ಮೀಮಾಂಸಕರ ಮತ. ಉದಿಸಿದ ಭಾವಕ್ಕೆ ಮೂಲ ಕಾರಣವೇ ಆಲಂಬನಾ ವಿಭಾವ (ಅವಳು ಅಥವಾ ಅವನು ಕಂಡಿದ್ದು) ಉದಿಸಿದ ಭಾವವನ್ನು ಗಟ್ಟಿಗೊಳಿಸುವುದೇ ಉದ್ದೀಪನ ವಿಭಾವವಾಗುತ್ತದೆ.

ಕಾವ್ಯ ಕೃತಿಗಳು ಬದುಕಿನ ಕ್ಷಣಗಳನ್ನು ಅನುಸರಿಸಿ ಕಟ್ಟಿದ್ದಾದ್ದರಿಂದ ಇವು ಚಿತ್ತವೃತ್ತಿಯನ್ನು ತನ್ಮಯತೆಯಿಂದ, ಆನಂದದಿಂದ, ನೋಡುಗ ಮತ್ತು ಓದುಗನಲ್ಲಿ ನೆಲೆ ನಿಲ್ಲುತ್ತದೆ. ಇದನ್ನೇ ಮೀಮಾಂಸಕರು ‘ರಸ’ವೆಂದು ಕರೆದಿದ್ದಾರೆ. ರಸ ಅನ್ನುವುದಕ್ಕೆ ಸೋಮರಸ, ಹಾಲು, ನೀರು ಎಂಬ ಅರ್ಥಗಳು ಇದ್ದರೂ ಅಧ್ಯಾತ್ಮಿಕ ಅರ್ಥದಲ್ಲಿ ‘ಆತ್ಮ ಸಾಕ್ಷಾತ್ಕಾರ’ ಅನ್ನುವುದನ್ನು ತಿಳಿಸುತ್ತದೆ. ಸಾಕ್ಷಾತ್ಕಾರಕ್ಕೆ ಬದುಕನ್ನು ಅನುಕರಿಸಿ ಕಟ್ಟಿದ ಕಾವ್ಯ, ನಾಟಕ ಕೃತಿಗಳು ಹಾದಿ ಮಾಡಿಕೊಡುತ್ತದೆ. ಇದಕ್ಕೇ ಮೀಮಾಂಸಕರು ‘ಕಾವ್ಯಂ ಆನಂದಾಯಾ’ ಎಂದು ಕರೆದಿರುವುದು.

ಮಹಿಮಭಟ್ಟನೆಂಬ ಮೀಮಾಂಸಕನು ತನ್ನ ಕಾವ್ಯ ಕೌತುಕ ಕೃತಿಯಲ್ಲಿ ಹೇಳುವ ಹಾಗೆ

ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ I
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಂ II

ಅನುಭಾವ ವಿಭಾವಗಳನ್ನು ವರ್ಣಿಸುವುದನ್ನು ಕಾವ್ಯವೆಂದು ಕರೆಯಲಾಗುತ್ತದೆ. ಇದು ನಾಟ್ಯ ಮತ್ತು ಗೀತೆಯಲ್ಲಿ ಪ್ರಯೋಗಮಾಡಿದಾಗ ರಂಜನೆಯನ್ನು ಕೊಡುತ್ತದೆ.

ಅನ್ನುವಾಗ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳನ್ನು ಏಕತ್ರಗೊಳಿಸುವುದರ ಜೊತೆಗೆ ಅದರ ವಿಶೇಷತೆಯನ್ನು ಹೇಳುತ್ತಲೇ ನಾಟಕ ಮತ್ತು ಕಾವ್ಯ ಪ್ರಕಾರಗಳ ಭೇದ ಹಾಗೂ ಆ ಕಾಲದಲ್ಲಿ ನಡೆದ ಚರ್ಚೆಗಳನ್ನು ಲೆಕ್ಕಿಸದೆ ಒಂದೇ ಎನ್ನುವ ಧ್ವನಿಯನ್ನು ಹೊರಡಿಸುತ್ತಾನೆ.

ಭರತ ಮುನಿಯಿಂದ ಆದಿಯಾಗಿ ದಂಡಿಯ ಕಾವ್ಯಾದರ್ಶದವರೆಗೂ ಮೀಮಾಂಸಕರು ಎಂಟು ರಸಗಳನ್ನು ಹೇಳಿದ್ದಾರೆ. ನಾಟ್ಯಶಾಸ್ತ್ರದಲ್ಲಂತೂ ಎಂಟು ಸ್ಥಾಯಿ ಭಾವಗಳನ್ನೂ ಅದರಿಂದುಂಟಾಗುವ ಎಂಟು ರಸಗಳನ್ನು ಸ್ಪಷ್ಟವಾಗಿ ಭರತ ಹೇಳಿದ್ದಾನೆ.

ರತಿರ್ಹಾಸಶ್ಚ ಶೋಕಶ್ಚ ಕ್ರೋಧೋತ್ಸಾಹೌ ಭಯಂ ತಥಾ l
ಜಿಗುಪ್ಸಾ ವಿಸ್ಮಯಶ್ಚೇತಿ ಸ್ಥಾಯಿಭಾವಾಃ ಪ್ರಕೀರ್ತಿತಾಃ ll

ಶೃಂಗಾರ ಹಾಸ್ಯ ಕರುಣ ರೌದ್ರ ವೀರ ಭಯಾನಕಾಃ l
ಭೀಭತ್ಸಾದ್ಭುತಸಂಜ್ಞೌ ಚೇತ್ಯಷ್ಟೌ ನಾಟ್ಯೇ ರಸಾಃ ಸ್ಮೃತಾಃ ll

ಇವುಗಳ ನಂತರ ಬಂದ ಮೀಮಾಂಸಕ ಉದ್ಭಟನು ತನ್ನ ಕೃತಿಯಾದ ‘ಕಾವ್ಯಾಲಂಕಾರಸಾರ ಸಂಗ್ರಹ’ದಲ್ಲಿ ಒಂಭತ್ತನೆಯ ರಸವನ್ನು ಸೇರಿಸುತ್ತಾನೆ. ಇದಕ್ಕೆ ಜೈನ ಧರ್ಮದ ಪ್ರಭಾವವೂ ಇರುವುದು ನಿಚ್ಚಳವಾಗಿ ಗೋಚರಿಸುತ್ತದೆ.

ಶೃಂಗಾರ ಹಾಸ್ಯ ಕರುಣ ರೌದ್ರ ವೀರ ಭಯಾನಕಾಃ l
ಬೀಭತ್ಸಾದ್ಭುತ ಶಾಂತಾಶ್ಚ ನವ ನಾಟ್ಯೇ ರಸಾಃ ಸ್ಮೃತಾಃ ll

ಇದಲ್ಲದೇ ರುದ್ರಟ ಅನ್ನುವ ಮೀಮಾಂಸಕನು ತನ್ನ ಕಾವ್ಯಾಲಂಕಾರ ಎಂಬ ಕೃತಿಯಲ್ಲಿ ‘ಪ್ರೇಯಾನ್’ ಅನ್ನುವ ಹತ್ತನೇ ರಸವನ್ನು ಸೇರಿಸುತ್ತಾನೆ. ‘ಸ್ನೇಹ ಪ್ರಕೃತಿಃ ಪ್ರೇಯಾನ್’ ಎಂದು ಇದಕ್ಕೆ ಸ್ಥಾಯಿಭಾವ ‘ಸ್ನೇಹ’ ವೇ ಎಂದಿದ್ದಾನೆ. ಇವೆಲ್ಲವುಗಳಂತೆ ಕಾಲಾನಂತರ ಭಕ್ತಿಯನ್ನು ಸೇರಿಸಿದ್ದಾರೆ, ಪರಮ ಭಕ್ತಿಯೇ ಅದರ ಸ್ಥಾಯಿ ಎಂದಿದ್ದಾರೆ. ಈ ಎಲ್ಲಾ ಚರ್ಚೆಗಳು ಏನೇ ಇರಲಿ ಒಟ್ಟು ಒಂಭತ್ತು ರಸವೆಂದು ನೋಡುವುದು ಒಳಿತು. ಏಕೆಂದರೆ ಉಳಿದೆಲ್ಲವೂ ಇದರಲ್ಲಿಯೇ ಒಂದಲ್ಲಾ ಒಂದು ಸ್ಥಾಯಿಯಾಗಿರುವುದರಿಂದ ಆಲಂಬನೆಯಲ್ಲಿ ಉತ್ಕರ್ಷವಾಗಿ ಪ್ರಕಟವಾಗುತ್ತದೆ.

ಕೆಲವು ಭಾವಗಳು ಮನುಷ್ಯನಲ್ಲಿ ಶಾಶ್ವತವಾಗಿ ಇರುತ್ತವೆ, ಅವುಗಳೇ ಸ್ಥಾಯಿ ಭಾವ. ಈ ಸ್ಥಾಯಿ ಭಾವದ ಜಾಗೃತತೆಗೆ ಕಾರಣವಾಗುವ ಕೆಲವು ಘಟನೆಗಳು ನಡೆದಾಗ ಅದು ಜಾಗೃತಾವಸ್ಥೆ ಪಡೆದು ಮುನ್ನೆಲೆಗೆ ಬಂದು ನಿಲ್ಲುತ್ತದೆ. ಜಾಗೃತವಾದ ಭಾವವು ಸ್ಥಾಯಿಯೋ ಸಂಚಾರಿಯೋ ಅನ್ನುವುದನ್ನು ಸಂದರ್ಭದ ಅಡಿಯಲ್ಲಿ ನೋಡಿದಾಗ ತಿಳಿಯುತ್ತದೆ.

ಭರತ ಮುನಿ ಮತ್ತು ಉದ್ಭಟರಿಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಯಾದ ಮೇಲೆ ಕಾಣಿಸಿದ ಶ್ಲೋಕಗಳ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೊದಲ ರಸವಾಗಿ ಶೃಂಗಾರದಿಂದ ಅವು ಪ್ರಾರಂಭವಾಗಿರುವುದು ತಿಳಿಯುತ್ತದೆ. ಭರತನಲ್ಲಿ ಶೃಂಗಾರ ಅದ್ಭುತದಲ್ಲಿ ಕೊನೆಯಾದರೆ, ಉದ್ಭಟನಲ್ಲಿ ಶೃಂಗಾರ ಶಾಂತದಿಂದ ಕೊನೆಯಾಗುತ್ತದೆ. ಜೊತೆಗೆ ಮನುಷ್ಯನ ಮನಸ್ಸಿನ ಮೂಲವನ್ನು ನೋಡಿದರೆ ತಿಳಿಯುವುದು ರತಿ ಸ್ಥಾಯಿಯಿಂದ ಬಂದ ಶೃಂಗಾರವೇ ಬಹಳ ಪ್ರಮುಖವಾದ ರಸವೆಂದು (ಸಿಗ್ಮಂಡ್ ಫ್ರಾಯ್ಡ್ ನ ಲಿಬಿಡೋ ಇದನ್ನೇ ತಿಳಿಸುತ್ತದೆ) ಮೀಮಾಂಸಕರಂತೂ ರಸ ರಾಜ ಎಂದು ಶೃಂಗಾರವನ್ನು ಕರೆದು ಗೌರವಿಸಿದ್ದಾರೆ.

ಆನಂದವರ್ಧನನು ತನ್ನ ‘ಧ್ವನ್ಯಾಲೋಕ’ ಕೃತಿಯಲ್ಲಿ ರತೀ ಭಾವ ಮತ್ತು ಕವಿಯ ಬಗೆಗೆ ಮಾತಾಡುವ ಮಾತು ಬಹಳ ಮುಖ್ಯವಾದುದು.

ಶೃಂಗಾರೀ ಚೇತ್ ಕವಿಃ ಕಾವ್ಯೇ ಜಾತಂ ರಸಮಯಂ ಜಗತ್ I
ಸ ಏವ ವೀತರಾಗೇಶ್ವೇತ್ ನೀರಸಂ ಸರ್ವಮೇವ ತತ್ II

ಕವಿಯು ರಸಿಕನಾಗಿದ್ದರೆ ಕಾವ್ಯದಲ್ಲಿನ ವಿಶ್ವವೇ ರಸಮಯವಾಗಿರುತ್ತದೆ. ಅವನು ವಿರಕ್ತನಾದರೆ ಜಗತ್ತಿನೊಡನೆ ಕಾವ್ಯವೂ ನೀರಸವಾಗುತ್ತದೆ.

ಅನ್ನುವಾಗ ಜಗತ್ತು, ಕಾವ್ಯ, ಕಾವ್ಯ ಜಗತ್ತಿನೊಂದಿಗೆ ಸಂಬಂಧವನ್ನು ಹೊಂದುವಾಗ ಕವಿಯ ಹಾದಿಯನ್ನು ಬಹಳ ಸ್ಪಷ್ಟವಾಗಿ ಹೇಳುತ್ತಾನೆ.

ಕನ್ನಡದ ಕವಿ ‘ನಾಗಚಂದ್ರ’ ನಂತೂ ತನ್ನ ‘ಲೀಲಾವತೀ’ ಕಾವ್ಯದಲ್ಲಿ…

ಸ್ತ್ರೀ ರೂಪಮೆ ರೂಪಂ ಶೃಂ
ಗಾರಮೆ ರಸಮತುಳ ಸುರತ ಗಂಧಮೇ ಗಂಧಂ l
ಸಾರಸ್ಪರ್ಶಂ ಗುರುಕುಚ
ಭಾರಸ್ಪರ್ಶಂ ಗಳಪ್ರಶಬ್ದಮೇ ಶಬ್ದಂ ll

ಹೀಗೆ ಹೇಳುವುದರ ಜೊತೆಗೆ ತನ್ನನ್ನು ‘ಶೃಂಗಾರ ಕಾರಾಗೃಹ’ ಎಂದು ಎಂದು ಅಲ್ಲೆ ಬಂಧಿಸಿಕೊಂಡಿದ್ದಾನೆ.

ಶೃಂಗಾರ ರಸದಲ್ಲಿ ವಿಪ್ರಲಂಭ ಶೃಂಗಾರ ಮತ್ತು ಸಂಭೋಗ ಶೃಂಗಾರವೆಂಬ ಎರಡು ಪ್ರಭೇದಗಳಿವೆ. ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಹಾಗು ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ರಸಗಳಲ್ಲಿ ಇದೂ ಒಂದು. ಮಹಾಭಾರತ ಮತ್ತು ರಾಮಾಯಣಗಳಲ್ಲಿಯೇ ಈ ರಸವು ಪ್ರಾರಂಭವಾಗಿ ಕಾಳಿದಾಸನಂತಹಾ ಸರ್ವಶ್ರೇಷ್ಟ ಕವಿಯ ಕಾವ್ಯಗಳಲ್ಲಿ ಸಾರ್ಥಕವಾಗಿ ಬಂದಿದೆ. ಭಾರತೀಯ ಸಾಹಿತ್ಯ ಬೆಳವಣಿಗೆಯ ಬೇರೆ ಬೇರೆ ರೂಪ, ಭಾಷೆ, ಕಾಲಘಟ್ಟಗಳೆಲ್ಲದರಲ್ಲೂ ಇದರ ಬಳಕೆ ಅತೀಹೆಚ್ಚಾಗಿರುವುದು ತಿಳಿಯುತ್ತದೆ.

ಸಂಭೋಗ ಶೃಂಗಾರ

ದೇಹದ ಮನಸ್ಸಿನ ಕುಡುವಿಕೆಯನ್ನ ತಿಳಿಸುವುದು ಈ ಪ್ರಕಾರದ ಶೃಂಗಾರವಾಗಿದೆ. ದೇಹದ ಚಲನವಲನ, ಮಾನಸಿಕ ಸ್ಥಿತಿ, ಉಸಿರಿನ ಏರಿಳಿತ, ದೇಹದ ಅಂಗಾಂಗಗಳ ಅದುರುವಿಕೆ ಇವುಗಳನ್ನು ತಿಳಿಸುತ್ತದೆ. ಪ್ರಿಯರ ದರ್ಶನ, ಸಲ್ಲಾಪ, ಸಮಾಗಮಗಳೇ ಮೊದಲಾದ ಕಾರ್ಯಗಳು ಇಲ್ಲಿ ಸೇರುತ್ತದೆ. ಸಂಭೋಗ ಶೃಂಗಾರದ ವರ್ಣನೆ ಕಾಮಶಾಸ್ತ್ರದ ವಿವರಣೆಯಲ್ಲ, ಸಮಾಗಮದ ಆನಂದವನ್ನು ಧ್ವನಿಪೂರ್ಣವಾಗಿ ಸೂಚಿಸಿ, ಸಾಧಾರಣಗೊಳಿಸಿ ನಿರ್ಲಿಪ್ತವಾಗಿ ಆಸ್ವಾದನೆಗೆ ಮಾಡುವಲ್ಲಿ ಕವಿ ಹಾದಿ ಮಾಡಿದರೆ ಅದು ಸಂಭೋಗ ಶೃಂಗಾರ ರಸವಾಗಿ ನಿಲ್ಲುತ್ತದೆ. ಹಾಗಾಗದ ಪಕ್ಷದಲ್ಲಿ ಕಾಮಶಾಸ್ತ್ರದ ಆರಂಭಕ್ಕೆ ಹಾದಿಯಾಗುತ್ತದೆ. ಕಾಮಶಾಸ್ತ್ರಕ್ಕೂ ಶೃಂಗಾರ ರಸಕ್ಕೂ ಇರುವ ಸೂಕ್ಷ್ಮತೆಯಿದು.

ವಿಪ್ರಲಂಭ ಶೃಂಗಾರ

ಈ ಪ್ರಕಾರದಲ್ಲಿ ನಲ್ಲ-ನಲ್ಲೆಯರ ಅಗಲಿಕೆಯ ನೋವಿನ ಚಿತ್ರಣವಿರುತ್ತದೆ. ಕೆಲವೊಮ್ಮೆ ಇಬ್ಬರೂ ಕೂಡುವ ಆಸೆ ಮತ್ತು ಸಾಧ್ಯತೆಗಳು ಸೂಚಿತವಾಗುವುದರಿಂದ ಇದೂ ಸಂಭೋಗ ಶೃಂಗಾರದಂತೆಯೇ ಭಾಸವಾಗುತ್ತದೆ. ಕೆಲವೊಮ್ಮೆ ಸಮಾಗಮದ ಆಸೆ ಅಳಿಯದಂತೆ ಉಳಿದು ಶೋಕವಾಗಿ ಕರುಣಾ ರಸಕ್ಕೆ ತಿರುಗುವ ಸಾಧ್ಯತೆಯೂ ಇದೆ. ದೇಹದ ಕಾಮನೆಗಳು ಮೇಲೆದ್ದು ಬರುವುದು. ಪ್ರೇಮಿಗಳ ಹಾವ, ಭಾವ, ಮಾತು, ಸಂಧಿಸಿದ್ದಾಗ ನಡೆದ ಕ್ರಿಯೆಗಳು ನೆನಪಿಗೆ ಬರುವುದು. ಆದ್ರತೆ ಇದರಲ್ಲಿ ಹೆಚ್ಚಾಗಿರುತ್ತದೆ. ಸಂಭೋಗ ಶೃಂಗಾರಕ್ಕಿಂತ ವಿಪ್ರಲಂಭದಲ್ಲಿ ತೀವ್ರತೆ ಹೆಚ್ಚು ಅನ್ನುವುದು ಕಾವ್ಯ ರಸಿಕರಿಗೆ ತಿಳಿಯದ ವಿಷಯವೇನೂ ಅಲ್ಲ.

ಈ ಮೇಲಿನ ರೀತಿಯಲ್ಲಿ ಶೃಂಗಾರ ರಸವನ್ನು ಒಳಗೊಂಡು ಎಲ್ಲಾ ರಸಗಳನ್ನು ವರ್ಣಿಸುವಾಗ ವರ್ಣಿತವಾಗುತ್ತಿದ್ದ ಭಾವವೊಂದು ಯಾವ ಆಭಾಸವೂ ಇಲ್ಲದೆ ಪೂರ್ಣಗೊಂಡಿತು ಎಂದರೆ ಭಾವಶಾಂತಿಯೆಂದು, ವರ್ಣನೆಯ ಕಾಲದಲ್ಲಿ ಹೊಸದೊಂದು ಭಾವ ಹುಟ್ಟಿದರೆ ಅದಕ್ಕೆ ಭಾವೋದಯವೆಂದೂ, ಎರಡೆರಡು ಭಾವಗಳು ಸಮಾನವಾಗಿ ವರ್ಣನೆಯ ಸಮಯದಲ್ಲಿ ಬಂದರೆ ಅದಕ್ಕೆ ಭಾವಸಂಧಿಯೆಂದೂ, ವರ್ಣಿಸುತ್ತಿದ್ದ ಭಾವವೊಂದನ್ನು ಮೀರಿಸುವಂತೆ ಭಾವೋದಯವಾದಿಂದ ಉದಿಸಿದ ಮತ್ತೊಂದು ಭಾವ ಹಿಂದಿನದನ್ನು ಮುಚ್ಚಿ ಹೊಸ ಭಾವಗಳು ಬಂದರೆ ಅದಕ್ಕೆ ಭಾವಶಬಲತೆ ಎಂದು ಕರೆದಿದ್ದಾರೆ.

ಪ್ರತಿಯೊಂದು ರಸಕ್ಕೂ ತನ್ನದೇ ಆದ ವಿಶಿಷ್ಟತೆಯಿದೆ. ಮತ್ತೊಂದು ರಸದೊಡನೆ ಕುಡಿದಾಗ ವರ್ಣಿತವಾಗುತ್ತಿದ್ದ ಭಾವಕ್ಕೆ ಮೆರುಗು ಬರುವ ಹಾಗೆ, ಕೆಲವೊಮ್ಮೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದನ್ನೇ ಮೀಮಾಂಸಕರು ರಸಗಳ ಶತ್ರುತ್ವ, ರಸಗಳ ಮಿತ್ರತ್ವವೆಂದು ಕರೆದಿದ್ದಾರೆ. ರಸಗಳಲ್ಲಿ ಇರುವುದು ಶೃಂಗಾರ, ವೀರ, ರೌದ್ರ, ಬೀಭತ್ಸ ಎಂದುದೇ ಪ್ರಧಾನರಸಗಳೆಂಬ ಮಾತೂ ಇದೆ. ಇವುಗಳನ್ನು ಜನ್ಯಗಳೆಂದು ಕರೆದು ಶೃಂಗಾರದಿಂದ ಹಾಸ್ಯ, ವೀರದಿಂದ ಅದ್ಭುತ, ರೌದ್ರದಿಂದ ಕರುಣ ಮತ್ತು ಬೀಭತ್ಸದಿಂದ ಭಯಾನಕಗಳು ಬರುತ್ತವೆಂದು ಮೀಮಾಂಸಕರ ಅಭಿಪ್ರಾಯವಾಗಿದೆ.

ಶೃಂಗಾರ ರಸಕ್ಕೆ ಮಿಶ್ರರಸಗಳ ಜೋಡಿ ಯನ್ನು ಹೀಗೆ ಕೊಡುತ್ತಾರೆ..
ಶೃಂಗಾರ – ವೀರ, ಶೃಂಗಾರ ಹಾಸ್ಯ, ಶೃಂಗಾರ – ಅದ್ಭುತಗಳು ಜೊಡಿಯಾದರೆ. ಶತ್ರುರಸವಾಗಿ ಶೃಂಗಾರ – ಭೀಭತ್ಸ, ಶೃಂಗಾರ – ಕರುಣ, ಶೃಂಗಾರ – ಶಾಂತಗಳು ನಿಲ್ಲುತ್ತವೆ.

ಕೊನೆಯದಾಗಿ ರಸಾಭಾಸದ ವಿಷಯವನ್ನು ಹೇಳದೆ ಇದ್ದರೆ ಇದು ಮುಕ್ತಾಯವೇ ಅಲ್ಲ. ಅಭಾಸ ಅಂದರೆ ತೋರಿಕೆ, ರಸವಾಗಿ ಯಶಸ್ವಿಯಾಗದೆ ತೋರಿಕೆಯಾಗಿ ಕಾಣುವ, ಸೃಷ್ಟಿಯಾಗುವ ಸನ್ನಿವೇಷವು ರಸಾಭಾಸವಾಗಿದೆ. ಯಾವ ಭಾವದ ವರ್ಣನೆಯು, ಯಾವ ಪಾತ್ರದ ವರ್ತನೆಯು, ಅದರ ಗುಣ ಸ್ವಭಾವವು ನೋಡುಗ, ಓದುಗರಲ್ಲಿ ಅನುಚಿತ ಎಂಬ ಭಾವವನ್ನು – ಬುದ್ದಿಯನ್ನು ನೋಡುತ್ತಿದ್ದಂತೆ ತಕ್ಷಣದಲ್ಲಿ ಉಂಟುಮಾಡುತ್ತದೋ ಅದುವೇ ರಸಾಭಾಸ.

ಮುಂದಿನ ಲೇಖನಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಕಾವ್ಯಗಳಲ್ಲಿ ಬಂದಿರುವ ಶೃಂಗಾರ ರಸದ ವರ್ಣನೆಗಳನ್ನು ಅವುಗಳು ಕಾವ್ಯ ಸಂದರ್ಭದೊಂದಿಗೆ ಸಾಧಿಸುವ ಯಶಸ್ವಿ ಮತ್ತು ಅಯಶಸ್ವಿಯನ್ನು ಹಾಗೂ ಕನ್ನಡ ನೆಲದ ಜಾಯಮಾನಕ್ಕೆ ತಕ್ಕ ಹಾಗೆ ಬಂದಿದೆಯೇ ಅನ್ನುವುದನ್ನು ಸೂಕ್ಷ್ಮವಾಗಿ ನೋಡುವುದು ಉದ್ದೇಶವಾಗಿದೆ.