ಭಾಷಾಂತರ ಅನ್ನುವುದು ಚಲನೆ ಮತ್ತು ಬದಲಾವಣೆ ಅನ್ನುವುದನ್ನ ಒಪ್ಪಿದರೂ ಮೂಲ ಪಠ್ಯನಿಷ್ಟವಾಗುವುದು ಎಲ್ಲಾ ಕಾಲದಲ್ಲೂ ಬಹಳ ಮುಖ್ಯವಾಗುತ್ತದೆ. ಚಲನೆ ಅರ್ಥಸ್ಥರದಲ್ಲಿ ಮಾತ್ರ ಆದಷ್ಟು ಉಪಯೋಗ. ಪರಿಚಯಾತ್ಮಕವಾಗಿ ಮೊದಲಬಾರಿಗೆ ನಮ್ಮ ಭಾಷೆಗೆ ಭಾಷಾಂತರ ಮಾಡುವಾಗಲಂತೂ ಚಲನೆ ಮತ್ತು ಬದಲಾವಣೆಯನ್ನು ಆದಷ್ಟು ತಡೆಹಿಡಿದು ಮಾಡುವುದು ಬಹಳ ಉತ್ತಮ. ಹೀಗೆ ಉತ್ತಮ ಅನಿಸುವುದಕ್ಕೆ ಮೊದಲುಗಳಾಗಿ ಬಂದ ಹಿಂದಿನ ಭಾಷಾಂತರಗಳ ಪಟ್ಟಿಯನ್ನೊಮ್ಮೆ, ಕವಿಗಳ ಕಾವ್ಯಗಳನ್ನೊಮ್ಮೆ ಸಾಕ್ಷಿಯಾಗಿ ಗಮನಿಸುವುದು ಉತ್ತಮ. ಆಧುನಿಕ ಕಾಲಘಟ್ಟದ ತಲ್ಲಣಗಳಿಗೆ ಮುಖಾಮುಖಿಯಾಗಿ ಕೃತಿರಚನೆ ಮಾಡುತ್ತಿದ್ದರೂ, ಭಾಷಾಂತರ ಕಾರ್ಯದಲ್ಲಿ ರಘುನಾಥರ ಶಿಸ್ತು ಬಹಳ ಮುಖ್ಯ ಮತ್ತು ಅನುಕರಣೀಯ ಅನಿಸುತ್ತದೆ.
ದಿಲೀಪ್ ಕುಮಾರ್ ಬರೆಯುವ ಅಂಕಣ

 

ಕಾವ್ಯ ಮೀಮಾಂಸೆಯಲ್ಲಿ ನವರಸಗಳ ಬಗೆಗೆ ನಡೆದ ಚರ್ಚೆಯನ್ನು ಮೊದಲ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಪ್ರಧಾನವಾಗಿ ಶೃಂಗಾರ ರಸ ವಿಚಾರದ ಚೆರ್ಚೆಗೆ ಅಂಕಣಗಳಲ್ಲಿ ಒತ್ತು ಕೊಡುವುದರಿಂದ ಅದನ್ನಷ್ಟೇ ಸೋದಾಹರಣವಾಗಿ ತಿಳಿಸಿದ್ದೇನೆ. ಅದರೊಂದಿಗೆ ಹತ್ತನೆಯ ರಸವಾಗಿ ಸೇರಿಸಲು ಪುರಾತನ ಭಾರತೀಯ ಕಾವ್ಯ ಮೀಮಾಂಸಕರು ಮತ್ತು ಆಧುನಿಕ ಮೀಮಾಂಸಕರು ತೆಗೆದಿರುವ ಚರ್ಚೆಯ ವಿಷಯಗಳನ್ನು ಹೇಳಿದ್ದೇನೆ.

ಕಾವ್ಯ ಮೀಮಾಂಸೆಯ ಬೆಳವಣಿಗೆಯಲ್ಲಿ ಎಲ್ಲಾ ಕಾಲದಲ್ಲಿಯೂ ಮುಖ್ಯವೆನಿಸುವ ಅಂಶವೇ ಇದು ಅನಿಸಿದೆ. ಯಾವ ಒಂದು ಭಾವವೂ ಜೀವನದ ಅನುಭವದಿಂದ ಬಂದು ಕಾವ್ಯಗಳಲ್ಲಿ ರಸವಾಗಿ ಮಾರ್ಪಡುವಾಗ ಓದುಗರು, ನೋಡುಗರು ಮತ್ತು ರಚನಕಾರರ ದೃಷ್ಟಿಯಿಂದ ಬಿಟ್ಟು ಹೋಗದೆ ಬದುಕನ್ನು ಅದರ ಎಲ್ಲಾ ಸಮಸ್ಯೆಗಳೊಂದಿಗೆ ವೈಶಾಲ್ಯತೆಯಿಂದ ಸವಿಯುವ ಕ್ರಮವನ್ನು ರಸಗಳ ಅಡಿಯಲ್ಲಿ ವಿವೇಚಿಸುವ, ಅಭಿವ್ಯಕ್ತಿಸುವ ಒಂದು ಕ್ರಮ ಪರಂಪರಾಗತವಾಗಿ ಬಂದಿ . ರಸದ ಅಡಿಯಲ್ಲಿ ವಿವೇಚಿಸಿಯೇ ಅದನ್ನು ಮೀರಿ “ಕಾವ್ಯಂ ಆನಂದಾಯ” ಅನ್ನುವುದರ ಜೊತೆಗೆ ಬದುಕಿನ ಆನಂದವನ್ನು ಹುಡುಕಿ ಸಾಧಿಸುವ ಹಾದಿಯದು. ಇದರಲ್ಲಿ ಮುಖ್ಯವಾಗಿ ನಡೆದಿರುವ ಹತ್ತನೆಯ ರಸದ ವಿಷಯ ಬಹಳ ಕುತೂಹಲ ಅನಿಸಿದೆ. ಕಾವ್ಯ ಮತ್ತು ಶಾಸ್ತ್ರಗಳ ಅಡಿಯಲ್ಲಿ ಆ ಚರ್ಚೆಯನ್ನು ಒಂದಷ್ಟು ಗಮನಿಸುವುದು ಉತ್ತಮ ಅನಿಸುತ್ತದೆ.

ನವರಸಗಳಲ್ಲಿಯೇ ಅತೀ ಹೆಚ್ಚು ಚರ್ಚೆ ನಡೆದಿರುವುದು ಶಾಂತ ರಸದ ಬಗೆಗೆ. ಅದಕ್ಕೆ ಮುಖ್ಯವಾದ ಕಾರಣಗಳನ್ನು ಮೀಮಾಂಸಕರು ಹೀಗೆ ಕೊಡುತ್ತಾರ .

೧ . ರಂಗದ ಮೇಲೆ ಶಾಂತ ರಸವನ್ನು ಅಭಿನಯಿಸಲು, ತರಲು ಸಾಧ್ಯವಿಲ್ಲ ಅನ್ನುವುದು. ಹಾಗೆ ನೋಡಿದರೆ ಯಾವ ರಸವನ್ನೂ ಸಂಪೂರ್ಣವಾಗಿ ರಂಗದ ಮೇಲೆ ತರಲು ಆಗುವುದಿಲ್ಲ .

೨ . ಶಾಂತರಸ ಎಲ್ಲರಿಗೂ ಆಸ್ವಾದ ಆಗಲಾರದು ಅನ್ನುವುದು ನಂತರದ ಅಂಶ. ಇಲ್ಲಿ ಎಲ್ಲರೂ ಅನ್ನುವಾಗ ಸಾಹಿತ್ಯ , ನಾಟ್ಯದ ನೋಡುಗ ವರ್ಗದ ಆಚೆಗಿನದನ್ನೂ ಬಳಸಿರುವುದು ಬಹಳ ಸ್ಪಷ್ಟ . ಆದರೆ ಬದುಕಿನ ಕೊನೆಯ ಬಯಕೆ ಶಾಂತವೇ ಅಲ್ಲವೇ?

೩ . ಶಾಂತವನ್ನು ರಸವೆಂದು ಕರೆಯುವಾಗ ಅಥವಾ ಶಾಂತ ಸ್ಥಿತಿಯು ರಸವಾಗುವಾಗ ಅದರ ಸ್ಥಾಯೀ ಭಾವದ ಮೇಲೆ ಅಪಾರವಾದ ಚರ್ಚೆ ನಡೆದಿದೆ. ತೃಷ್ಣಾಕ್ಷಯ ಸುಖ, ಚಿತ್ತವೃತ್ತಿ ಪ್ರಶಮನ, ಆತ್ಮಜ್ಞಾನ, ನಿರ್ವಿಶೇಷ ಚಿತ್ತವೃತ್ತಿ ಮುಂತಾಗಿ ಕರೆದಿದ್ದಾರೆ. ಇಷ್ಟಲ್ಲದೆ ರತಿಯ ಭಾವ ಆತ್ಮರತಿಯಾದರೆ ಶಾಂತವೆನ್ನುವ ಮಾತನ್ನೂ ಆಡಿದ್ದು ಕೊನೆಗೆ ಅಭಿನವ ಗುಪ್ತಪಾದರು “ಅಥ ಶಾಂತ ನಾಮ ಶಮಾಸ್ಥಾಯಿಭಾವಾತ್ಮಕಂ” ಎಂದು ಕರೆದು ಎಲ್ಲಾ ಚರ್ಚೆಗಳಿಗೆ ಕೊನೆಯನ್ನು ಮಾಡಿದ್ದಾರೆ. ಈ ಚರ್ಚೆಯ ಹಿಂದೆ ಬೌದ್ಧ ಮತ್ತು ಜೈನ ಧರ್ಮಗಳ ಪ್ರಭಾವ ಇರುವುದಂತೂ ಸತ್ಯವಾದದ್ದಾಗಿದೆ.

ಇದಾದ ನಂತರ ಹತ್ತನೆಯ ರಸದ ವಿಚಾರ ಚರ್ಚೆ ಬಹಳ ವಿಸ್ತಾರವಾಗಿ ಬೆಳೆದಿದ್ದು. ಕಾವ್ಯ ಮೀಮಾಂಸಕರು ಇದರ ಬಗೆಗೆ ಕೊನೆಯ ಮಾತನ್ನು ಅಭಿನವ ಗುಪ್ತಪಾದರು ಆಡಿದ ನಂತರವೂ ಆ ಪಟ್ಟಿ ಬೆಳೆಸಲು ನೋಡಿರುವುದು ಬಹಳ ಅದ್ಭುತ ಅನಿಸುತ್ತದೆ. ಅದರಲ್ಲಿ ಕೆಲವು ಚರ್ಚೆಯನ್ನು ಕೊಟ್ಟು ಕಾವ್ಯದ ಕಡೆ ಮುಖ ಮಾಡುವುದು ಒಳಿತೆನಿಸುತ್ತದೆ.

ರುದ್ರಟ ಎನ್ನುವ ಮೀಮಾಂಸಕ ತನ್ನ ಕಾವ್ಯಾಲಂಕಾರದಲ್ಲಿ “ಸ್ನೇಹ ಪ್ರವೃತ್ತಿ ಪ್ರೇಯಾನ್” ಎಂದು ಸ್ನೇಹವೇ ಅದರ ಸ್ಥಾಯೀ ಭಾವವೆಂದು ಕರೆದಿದ್ದಾನೆ.

೨ . ಭಕ್ತಿಗೆ ರಸದ ಸ್ಥಾನ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಭಕ್ತಿಯು ಪರಮ ಪ್ರೇಮದ ರೂಪ ಅನ್ನುವುದು ಈ ಮೀಮಾಂಸಕರ ವಾದವಾಗಿದೆ. ಪ್ರಕರ್ಷಾವಸ್ಥೆಯು ಭಕ್ತಿ ರಸದಲ್ಲಿ ಶ್ರವಣ, ಕೀರ್ತನೆ, ಸ್ಮರಣ, ಪಾದ ಸೇವನ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮ ನಿವೇದನೆಗಳ ರೂಪದಲ್ಲಿ ಬಂದು ‘ನವಧಾ ಭಕ್ತಿ’ ಎನಿಸಿಕೊಳ್ಳುತ್ತದೆನ್ನುವ ಚರ್ಚೆಯೂ ನಡೆದಿದೆ.

ಈ ಚರ್ಚೆಗೆ ಆ ಕಾಲದಲ್ಲಿ ಪ್ರಮುಖವಾಗಿದ್ದ ಚೈತನ್ಯ ಪಂಥ, ಭಕ್ತಿ ಚಳುವಳಿಯ ಕಾವೂ ಇದ್ದೇ ಇದೆ. ಅದರೊಂದಿಗೆ ಕರ್ನಾಟಕದಲ್ಲಿ ನಡೆದ ಶರಣ ಮತ್ತು ದಾಸ ಸಾಹಿತ್ಯದಲ್ಲಿನ ಭಕ್ತಿಯೂ ಬಹಳ ಮುಖ್ಯವಾದ ಅಂಶ ಅನ್ನುವುದನ್ನು ಗಮನಿಸಬಹುದು.

೩. “ವಾತ್ಸಲ್ಯ” ವನ್ನು ರಸವೆಂದು ಪ್ರತಿಪಾದಿಸಿ ವಾತ್ಸಲ್ಯವೇ ಅದರ ಸ್ಥಾಯೀ ಭಾವ ಎಂದಿದ್ದಾರೆ. ಯಶೋಧರೆಗೆ ಕೃಷ್ಣನಲ್ಲಿ, ತಂದೆ ತಾಯಿಗೆ ಮಕ್ಕಳಲ್ಲಿ ಇರುವುದು ಇದೇ ವಾತ್ಸಲ್ಯ ಅನ್ನುವ ಚರ್ಚೆ ನಡೆದಿದೆ.

೪ . ಇದಲ್ಲದೆ ಲೌಲ್ಯ (ಚಂಚಲತೆ ), ಮೃಗಯಾ (ಬೇಟೆ), ಅಕ್ಷ (ನಯನ ಚಲನೆ), ವ್ಯಸನ (ಶರಣ ಸಂಗ ವ್ಯಸನ – ಕುಮಾರವ್ಯಾಸ), ಸುಖ, ದುಃಖ, ಉದಾತ್ತ, ಕಾರ್ಪಣ್ಯ (ಬಡತನ, ಜಿಪುಣತನ) ಇಷ್ಟೆಲ್ಲಾ ಚರ್ಚೆಗಳು ನಡೆದಿದ್ದರೂ ಕೊನೆಯದಾಗಿ ಅದಕ್ಕೆ ತೆರೆ ಎಳೆದು ನಿಲ್ಲಿಸಿರುವುದು ಅಭಿನವ ಗುಪ್ತಪಾದನ ಸೂತ್ರವೇ.

ಬಹಳ ವಿಶೇಷ ಅನಿಸುವುದು ಕನ್ನಡದ ಸರ್ವಕಾಲಿಕ ಶ್ರೇಷ್ಠ ಬಹುಶ್ರುತ ವಿದ್ವಾಂಸ, ಕವಿ, ಕನ್ನಡದಲ್ಲಿ “ಭಾರತೀಯ ಕಾವ್ಯ ಮೀಮಾಂಸೆ” ಯನ್ನು ಬರೆದು ಭಾರತದಲ್ಲಿಯೇ ನಡೆದಿರುವ ಮೀಮಾಂಸೆಯ ಚರ್ಚೆಯನ್ನು ಒಂದು ಕಡೆ ಕಟ್ಟಿಕೊಟ್ಟು ಸರ್ವಕಾಲಿಕ ಅತ್ಯುತ್ಕೃಷ್ಟ ಗ್ರಂಥ ಕೊಟ್ಟ ಹೆಗ್ಗಳಿಕೆಗೆ ಪಾತ್ರರಾದ ಆಚಾರ್ಯ ತಿ . ನಂ . ಶ್ರೀಕಂಠಯ್ಯನವರು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರಸದ ಬಗೆಗೆ ವಿಚಾರ ಮಾಡುತ್ತಾ – ಪ್ರೇಯಾನ್ , ವಾತ್ಸಲ್ಯ ಮತ್ತು ಭಕ್ತಿಯನ್ನು ಸ್ವತಂತ್ರ ರಸಗಳೆಂದು ಪರಿಗಣಿಸಬಹುದು ಅನ್ನುವ ಅಭಿಪ್ರಾಯವನ್ನು ನೀಡಿದ್ದಾರೆ. ಹಾಗೆ ಮಾಡಿದರೆ ಅಭಿನವ ಗುಪ್ತಪಾದ ಕಟ್ಟಿರುವ ನವರಸದ ಜೊತೆಗೆ ಇದೂ ಸೇರಿ ಒಟ್ಟೂ ಹನ್ನೆರಡು ರಸಗಳಾಗುತ್ತದೆ. (ಭಾರತೀಯ ಕಾವ್ಯ ಮೀಮಾಂಸೆ – ತಿ. ನಂ. ಶ್ರೀ – ಪುಟ ೩೧೧)

ಇಷ್ಟೆಲ್ಲಾ ಚರ್ಚೆಗಳು ನಡೆದಿರುವುದು ಪಂಡಿತರ ವಲಯದಲ್ಲಿ. ಅದನ್ನು ಗಮನಿಸಿಯೋ ಗಮನಿಸದೆಯೋ ಒಬ್ಬ ಕವಿ ಹತ್ತನೆಯ ರಸದ ಬಗೆಗೆ ತನ್ನ ನಾಮ ಸಂಕೀರ್ತನೆಯಲ್ಲಿ ಮಾತನಾಡುತ್ತಾನೆ ಅನ್ನುವುದು ಬಹಳ ವಿಶೇಷ. ಆ ಕೀರ್ತನೆ ತೆಲುಗಿನ ಶ್ರೇಷ್ಟ ದಾಸವರೇಣ್ಯ ಅನ್ನಮಾಚಾರ್ಯರದು ಮತ್ತು ಕನ್ನಡಕ್ಕೆ ಭಾಷಾಂತರ ಮಾಡಿದವರು ಶ್ರೀ ಸ. ರಘುನಾಥರು.

ಆ ಕೃತಿಯನ್ನು ನೋಡುವುದಕ್ಕೆ ಮುಂಚಿತವಾಗಿ ಒಂದಷ್ಟು ತೆಲುಗು ಭಾಷೆ, ಸಾಹಿತ್ಯ ಚರಿತ್ರೆಯನ್ನು ನೋಡುವುದು ಉತ್ತಮವಾದದ್ದು. ಮಧ್ಯ ದ್ರಾವಿಡ ಭಾಷೆಗಳಲ್ಲಿ ತೆಲುಗು ಸಹಾ ಒಂದು. ತೆನ್ – ಅನ್ನುವ ಧಾತುವಿನಿಂದ ಈ ಭಾಷೆ ಬಂದಿದ್ದೆನ್ನುವರು. ಆಲಿಸುವಾಗ ಜೇನು ಅನಿಸುವುದು ಹೇಗೋ ಹಾಗೇ ತೆಂಕಣನಾಡು ಅನ್ನುವುದಕ್ಕೆ ಪರ್ಯಾಯವಾಗಿ ಇದನ್ನು ಬಳಸುತ್ತಾರೆ. ನಾಡಿನೊಂದಿಗೇ ಭಾಷೆಯನ್ನು ಗುರುತಿಸುವ ವಾಡಿಕೆ ಇರುವುದರಿಂದ ಆಂಧ್ರ – ತೆಲುಗು ಎರಡೂ ಸಮಾನವಾಗಿ ಬಳಸಲ್ಪಡುತ್ತಿದೆ. ‘ಋಗ್ವೇದ’ ಮತ್ತು ‘ಐತರೇಯ ಬ್ರಾಹ್ಮಣ’ ದಿಂದ ಈ ನಾಡಿನ ಇರುವಿಕೆಯ ಬಗೆಗೆ ಸಾಕ್ಷಿಗಳು ಸಿಕ್ಕುತ್ತದೆ. ‘ಪ್ಲಿನಿ’ ಎಂಬ ಲೇಖಕ ತನ್ನ ಕೃತಿಯಲ್ಲಿ ‘Andre’ ಅನ್ನುವ ಪದವನ್ನು ಬಳಸಿದ್ದಾನೆ, ‘ಹುಯನ್ ತ್ಸಾಂಗ್’ ಮಧ್ಯ ಭಾರತದ ಭಾಷೆಗಿಂತ ಭಿನ್ನವಾದ ಭಾಷೆ ಇದು ಅಂದಿದ್ದಾನೆ. ‘ಕುಮಾರಿಲಭಟ್ಟ’ ನು ತೆಲುಗಿಗೆ ‘ದ್ರಾವಿಡ’ ಅಂದಿದ್ದಾನೆ. ಇಷ್ಟೆಲ್ಲಾ ಇತಿಹಾಸವಿರುವ ಭಾಷೆಯು ಕನ್ನಡ ತಮಿಳು ಭಾಷೆಯನ್ನು ಬಿಟ್ಟರೆ ಮಲೆಯಾಳಂ ಗೆ ಸರಿಸಮನಾಗಿ ನಿಲ್ಲಬಲ್ಲ ಭಾಷೆ ಅನಿಸಿದೆ.

ಇದರ ಮೊದಲ ಶಾಸನ ಸಿಕ್ಕಿರುವುದು ಚೋಳರಾಜನಾದ ‘ಪುಣ್ಯಕುಮಾರ’ ನ ಆಡಳಿತ ಕಾಲದ ಕಡಪ ಜಿಲ್ಲೆಯ “ತಿಪ್ಪಲೂರು ಶಾಸನ” ( ಕ್ರಿ ಶ ೬-೭ ನೇ ಶತಮಾನ ). ಇವರಲ್ಲದೆ ಶಾತವಾಹನ, ಪಲ್ಲವ, ಇಕ್ಷ್ವಾಕು, ಆಂಧ್ರಗೋತ್ರೀಯರ ಕಾಲದವರೆವಿಗೂ ಇದರ ಇತಿಹಾಸ ಹೋಗುತ್ತದೆ. ಪೂರ್ವ ಚಾಲುಕ್ಯರ ಕಾಲದಲ್ಲಿ ಇದನ್ನು ಆಡಳಿತ ಭಾಷೆಯಾಗಿ ತಂದರು. ನಂತರ ರಾಜರಾಜ ನರೇಂದ್ರನ ಕಾಲದಲ್ಲಿ “ಆಂಧ್ರ ಮಹಾಭಾರತಮು” ರಚನೆಯಾಯಿತು. ಇದು ಅಲ್ಲಿನ ಮೊದಲ ಕಾವ್ಯವಾಗಿದೆ.

ತೆಲುಗು ಭಾಷಾ ಸಾಹಿತ್ಯ ಅಧ್ಯಯನದ ಉದ್ದೇಶಕ್ಕಾಗಿ ವಿದ್ವಾಂಸರು ಮಾಡಿರುವ ಈ ಸಾಹಿತ್ಯ ಚರಿತ್ರೆಯ ವಿಭಾಗಕ್ರಮಗಳು ಮುಖ್ಯವಾಗಿದೆ.

೧ . ನನ್ನಯ್ಯ ಪೂರ್ವಯುಗ
೨ . ಪುರಾಣ ಮತ್ತು ಭಾಷಾಂತರ ಯುಗ
೩ . ಪ್ರಬಂಧ ಯುಗ
೧ . ಶ್ರೀಕೃಷ್ಣದೇವರಾಯನ ಯುಗ
೨ . ದಕ್ಷಿಣಾಂದ್ರ ಸಾಹಿತ್ಯ ಯುಗ
೪ . ಪುನರಾವರ್ತಿತ ಪ್ರಬಂಧ ಯುಗ
೫ . ಆಧುನಿಕ ಯುಗ
೧ . ಭಾವ ಕವಿತ್ವಯುಗ
೨ . ಆಧುನಿಕೋತ್ತರ ಯುಗ

ಈ ವಿಭಾಗ ಕ್ರಮದಲ್ಲಿರುವ ತೆಲುಗು ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ರಸದ ವಿಚಾರವಾಗಿ ರಚನೆಯಾಗಿರುವ ಅನ್ನಮಾಚಾರ್ಯರ ಕೃತಿಯು ಬರುವುದು ಪ್ರಬಂಧ ಯುಗವೆಂದು ಕರೆಯುವ ಶ್ರೀಕೃಷ್ಣದೇವರಾಯನ ಯುಗದಲ್ಲಿ.

ಜಯದೇವ ಕವಿಯ ನಂತರ ಭಜನ ಪದ್ಧತಿಯಲ್ಲಿ ಕೀರ್ತನೆಗಳನ್ನು ರಚಿಸಿದವರು ಅನ್ನಮಾಚಾರ್ಯ. ೧೪ ನೇ ಶತಮಾನ ಬಹಳ ಮುಖ್ಯ ಅನಿಸುವುದು ಸಾಹಿತ್ಯ ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ.

ಅನ್ನಮಾಚಾರ್ಯರು ತೆಲುಗು ದಾಸ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು. ಸಂತ ಶ್ರೇಷ್ಠ ತ್ಯಾಗರಾಜ ಮಹಾನುಭಾವರಿಗೂ ಮೊದಲು ಬಂದಂತವರು. ಪುರಂದರ ದಾಸರೂ ಅನ್ನಮಾಚಾರ್ಯರು ಭೇಟಿ ಮಾಡಿದ್ದರು, ಆ ಭೇಟಿಯ ನಂತರ ಅನ್ನಮಾಚಾರ್ಯರು ಕಾಲವಾದರು ಅನ್ನುವ ಒಂದು ದಂತಕಥೆಯೂ ಚಾಲ್ತಿಯಲ್ಲಿದೆ. ಆಂಧ್ರನಾಡಿನ ಕಡಪ ಜಿಲ್ಲೆಯ ಒಂದು ಗ್ರಾಮ. ತಾಳಪಾಕಂ ಮನೆತನದಲ್ಲಿನ ನಂದವಾರಿಕಾ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ, ತಾಯಿ ಲಕ್ಷ್ಮಮ್ಮ. ಅನ್ನಮಾಚಾರ್ಯರಿಗೆ ಇಬ್ಬರು ಹೆಂಡತಿಯರು, ಒಬ್ಬಳು ತೆಲುಗಿನಲ್ಲಿ “ಸುಭದ್ರಾ ಕಲ್ಯಾಣಮ್” ಅನ್ನುವ ಮಹಾಕಾವ್ಯ ಬರೆದ ‘ತಿಮ್ಮಕ್ಕ’ ಮತ್ತೊಬ್ಬಳು ‘ಅಕ್ಕಲಮ್ಮ’. ಇವರ ಮಕ್ಕಳಾದ ಪೆದ್ದತಿರುಮಲೆ ಅಯ್ಯಂಗಾರ್ ಮತ್ತು ಮೊಮ್ಮಕ್ಕಳಾದ ಚಿನ್ನತಿರುಮಲೆ ಅಯ್ಯಂಗಾರ್ ಇಬ್ಬರೂ ಕೀರ್ತನೆಗಳನ್ನು, ಕೃತಿಗಳನ್ನು ರಚಿಸಿದ್ದಾರೆ. ವಿಷ್ಣುಸ್ವಾಮಿ ಅನ್ನುವ ಶ್ರೀವೈಷ್ಣವ ಬ್ರಾಹ್ಮಣರಿಂದ ಶ್ರೀವೈಷ್ಣವ ದೀಕ್ಷೆ ಪಡೆದು ನಂತರ ಅಹೋಬಲ ಮಠದ ಮೂಲ ಪುರುಷರಾದ ಶ್ರೀಶಠಕೋಪ ಯತೀಂದ್ರರಲ್ಲಿ ಶ್ರೀರಾಮಾನುಜ ಸಿದ್ಧಾಂತದ ರಹಸ್ಯಗಳ ಉಪದೇಶ ಪಡೆದರು. ಅನ್ನಮಾಚಾರ್ಯರು ಶ್ರೀವೈಷ್ಣವ ಸಂಪ್ರದಾಯದ ನಾಲಾಯಿರ ದಿವ್ಯ ಪ್ರಬಂಧದಲ್ಲಿ ಅದ್ವಿತೀಯ ಜ್ಞಾನವನ್ನು ಪಡೆದರು. ಇವರನ್ನು ಬಹಳ ಪ್ರೀತಿ ಮತ್ತು ಗೌರವಾದರದಿಂದ ಅಣ್ಣಮಾಚಾರ್ಯ, ಅಣ್ಣಮಾರ್ಯ, ಅಣ್ಣಮಯ್ಯ, ಅಣ್ಣಮಯ್ಯಂಗಾರ್, ಅನ್ನಮಾಚಾರ್ಯ ಎಂದು ಇಂದಿಗೂ ಕರೆಯುತ್ತಾರೆ.

ಸಂಕೀರ್ತನಾಚಾರ್ಯ, ದ್ರಾವಿಡಗಾನ ಸಾರ್ವಭೌಮ, ಪದಕವಿತಾ ಪಿತಾಮಹ ಎಂಬ ಬಿರುದುಗಳು ಇವರಿಗಿವೆ. ಪದಕವಿತಾ ಪ್ರಕಾರವನ್ನ ತೆಲುಗಿನಲ್ಲಿ ಮೊದಲ ಬಾರಿಗೆ ರಚನೆ ಮಾಡಿ ಮುಂದಿನವರಿಗೆ ಹಾದಿ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಂತರ ಆ ಪ್ರಕಾರವನ್ನು ಹೆಚ್ಚು ದುಡಿಸಿಕೊಂಡವರು ಭದ್ರಾಚಲ ರಾಮದಾಸರು. ಟಂಗಟೂರಿನ ಸಾಳುವ ನರಸಿಂಗರಾಯನು ಅನ್ನಮಾಚಾರ್ಯರನ್ನು ತನ್ನ ಆಸ್ಥಾನದಲ್ಲಿ ಕೆಲವುಕಾಲ ಇಟ್ಟುಕೊಂಡಿದ್ದನು. ಕಾಲನಂತರ ಅಲ್ಲಿಂದ ತಾವೇ ಹೊರಬಂದರು.

ತಮ್ಮ ೧೬ ನೇ ವಯಸ್ಸಿನಲ್ಲಿ ಕೀರ್ತನೆಗಳ ರಚನೆಗೆ ತೊಡಗಿ ಕ್ರಿ ಶ ೧೫೦೩ ರ ವರೆವಿಗೂ ಮುಂದುವರೆಸಿದರು. ಸುಮಾರು ತೊಂಬತೈದು ವರ್ಷಗಳು ಬಾಳಿ ಬದುಕಿದ ಈ ಹಿರಿಯ ಕೀರ್ತನಕಾರ ೭೯ ವರ್ಷಗಳಷ್ಟು ಸುದೀರ್ಘ ಕಾಲ ಭಕ್ತಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ರಚನೆಗಳಲ್ಲಿ ಬಹಳ ಮುಖ್ಯವಾಗಿ ನಾಲಕ್ಕು ಬಗೆಗಳಿವೆ.

೧ . ಅಧ್ಯಾತ್ಮ ಸಂಕೀರ್ತನಾಲು – ಭಕ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಶ್ರೀವೆಂಕಟೇಶ್ವರನನ್ನು ಕೊಂಡಾಡುವುದು.

೨ . ಶೃಂಗಾರ ಕೀರ್ತನಮು – ಇಲ್ಲಿ ನಾಯಿಕೆಯಾಗಿ ತಾವೇ ಇದ್ದು, ನಾಯಕನಾಗಿ ತಿರುಪತಿಯ ಶ್ರೀವೆಂಕಟೇಶ್ವರ ಇದ್ದಾನೆ.

೩ . ಶೃಂಗಾರ ಮಂಜರಿ – ಶ್ರೀವೆಂಟಕೇಶ್ವರನಲ್ಲಿ ಒಬ್ಬ ತರುಣಿಯ ನಿಷ್ಕಲ್ಮಷವಾದ ಪ್ರೇಮ, ಅವಳ ಸಖಿಯರ ಮಧ್ಯಸ್ಥಿಕೆಯಿಂದ ಆ ಪ್ರೇಮ ಯಶಸ್ವಿಯಾಗಿ ಕೊನೆಗೊಳ್ಳುತ್ತದೆ.

೪ . ವೆಂಕಟಾಚಲಮಹಾತ್ಮೆ – ಶ್ರೀವೆಂಕಟೇಶನ ಕುರಿತ ಕೃತಿಗಳು.

ಇವರ ಎಲ್ಲಾ ಸಿಕ್ಕಿರುವ ಕೀರ್ತನೆಗಳು ತಾಮ್ರಶಾಸನದಲ್ಲಿ ಬರೆಸಿ ತಿರುಪತಿ ದೇವಾಲಯ ಮತ್ತು ಅಹೋಬಲ ನೃಸಿಂಹ ದೇವಾಲಯದಲ್ಲೂ ಇಡಿಸಿದರು. ಅವುಗಳಲ್ಲಿ ಸಿಕ್ಕಿರುವುದು ಹನ್ನೆರೆಡುಸಾವಿರಕ್ಕೂ ಹೆಚ್ಚು ಕೀರ್ತನೆಗಳು. ಇವರ ಮೊಮ್ಮಗ ಪ್ರಸಿದ್ಧ ಕವಿ ಚಿಕ್ಕ ತಿರುವೆಂಕಟನಾಥರು ಹೇಳುವಂತೆ ಒಟ್ಟೂ ಇವರ ಕೃತಿಗಳ ಸಂಖ್ಯೆ ಮೂವತ್ತೆರೆಡುಸಾವಿರ ಇದೆಯಂತ . ರಾಗಗಳನ್ನು ಮಾತ್ರ ತಾಮ್ರಪಟದಲ್ಲಿ ಹೆಸರಿಸಲಾಗಿದೆ. ಅಲ್ಲೆಲ್ಲೂ ತಾಳಗಳ ಗುರುತನ್ನು ಮಾಡಲಾಗಿಲ್ಲ. ಮೈಸೂರು ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕ ಮತ್ತು ಸಂಗೀತ ವಿದ್ವಾನ್ ಗಾನಕಲಾಸಿಂಧು ಶ್ರೀಮಾನ್ ರಾಳಪಳ್ಳಿ ಅನಂತಕೃಷ್ಣಶರ್ಮ ತಿರುಪತಿಯ ದೇವಾಲಯದ ಆಶ್ರಯದಲ್ಲಿ ಇದುವರೆವಿಗೂ ಅನ್ನಮಾಚಾರ್ಯರ ನೂರಾ ಎಂಟು ಕೀರ್ತನೆಗಳಿಗೆ ಸ್ವರಸಂಯೋಜನೆ ಮಾಡಿ ಪ್ರಕಟಿಸಿದ್ದಾರೆ.

ಇಷ್ಟೆಲ್ಲಾ ಚರ್ಚೆಗಳು ನಡೆದಿರುವುದು ಪಂಡಿತರ ವಲಯದಲ್ಲಿ. ಅದನ್ನು ಗಮನಿಸಿಯೋ ಗಮನಿಸದೆಯೋ ಒಬ್ಬ ಕವಿ ಹತ್ತನೆಯ ರಸದ ಬಗೆಗೆ ತನ್ನ ನಾಮ ಸಂಕೀರ್ತನೆಯಲ್ಲಿ ಮಾತನಾಡುತ್ತಾನೆ ಅನ್ನುವುದು ಬಹಳ ವಿಶೇಷ. ಆ ಕೀರ್ತನೆ ತೆಲುಗಿನ ಶ್ರೇಷ್ಟ ದಾಸವರೇಣ್ಯ ಅನ್ನಮಾಚಾರ್ಯರದು ಮತ್ತು ಕನ್ನಡಕ್ಕೆ ಭಾಷಾಂತರ ಮಾಡಿದವರು ಶ್ರೀ ಸ. ರಘುನಾಥರು.

ಹಿಂದಿನ ಮೀಮಾಂಸಕರ ತಾತ್ವಿಕ ಚಿಂತನೆಗಳು, ತೆಲುಗು ಸಾಹಿತ್ಯ ಚರಿತ್ರೆ, ಅನ್ನಮಾಚಾರ್ಯರ ಬಗೆಗಿನ ಪೀಠಿಕೆಯೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ನೇರವಾಗಿ ಕೀರ್ತನೆಯ ಕಡೆ ಮುಖಮಾಡುವುದು ಇನ್ನಾದರೂ ಒಳಿತು. ಮೂಲ ಕೃತಿಯು ಕೇದಾರಗೌಳ ರಾಗದಲ್ಲಿದೆ. ಮೊದಲೇ ಹೇಳಿದಂತೆ ತಾಳದ ಬಗೆಗೆ ಯಾವ ವಿವರವೂ ಕೀರ್ತನೆಗಳಲ್ಲಿ ದೊರೆತಿಲ್ಲ. (ಕೀರ್ತನೆಯ ಅನುಗುಣವಾಗಿ ಇದಕ್ಕೆ ಆದಿತಾಳ, ರೂಪಕ ಮತ್ತು ಅಟ್ಟತಾಳಗಳನ್ನು ಹಾಕಬಹುದು ಎಂದು ನನ್ನ ಗ್ರಹಿಕೆ) ಈಗ ಮೂಲವನ್ನು ಮತ್ತು ಕನ್ನಡದ ಭಾಷಾಂತರದ ಪಠ್ಯವನ್ನು ನೋಡಬಹುದು.

ತೆಲುಗು ಮೂಲ – ಶ್ರೀ ತಾಳ್ಳಪಾಕ ಅನ್ನಮಾಚಾರ್ಯ
ಕಡಪ, ಆಂಧ್ರಪ್ರದೇಶ

ನವರಸಮುಲದೀ ನಳಿನಾಕ್ಷಿ
ಜವಕಟ್ಟಿ ನೀಕುನ್ ಜವಿಚೇಸೀನಿ

ಶೃಂಗಾರರಸಮು ಚೆಲಿಯ ಮೊಕಂಬುನ
ಸಂಗತಿ ವೀರರಸಮು ಗೋಳ್ಳ
ರಂಗಕು ಕರುಣರಸಮು ಪೆದವುಲನು
ಅಂಗಪುನ್ ಗುಚಮುಲನದ್ಭುತರಸಮು

ಚೆಲಿ ಹಾಸ್ಯರಸಮು ನೆಲವುಲ ನಿಂಡಿ
ಪಲುಚೆನಿ ನಡುಮುನ ಭಯರಸಮು
ಕಲಿಕಿವಾಡುನ್ ಗನ್ನುಲ ಭೀಭತ್ಸರಸಮು
ಅಲಬೊಮ ಜಂಕೆನಲದೆ ರೌದ್ರಂಬು

ಸತಿಪತಿ ಮರಪುಲ ಶಾಂತರಸಂಬದೆ
ಅತಿಮೋಹಮು ಪದಿಯವರಸಮು
ಇತವುಗ ಶ್ರೀವೆಂಕಟೇಶ ಕೊಡತಿವಿ
ಸತಮೈಯೀಪಕು ಸಂತೋಷರಸಮು

ಕನ್ನಡ ಭಾಷಾಂತರ – ಶ್ರೀ ಸ ರಘುನಾಥ
ಶ್ರೀನಿವಾಸಪುರ

ನವರಸದವಳೀ ನಳಿನಾಕ್ಷಿ
ಜೊತಗೂಡಿ ನಿನಗೆ ಸವಿನೀಡೆ

ಶೃಂಗಾರರಸವು ಪ್ರಿಯೆ ಮುಖದೊಳು
ಸಂಗಮ ವೀರರಸವು ಉಗುರಿನಲಿ
ಚೆಂದದಿ ಕರುಣರಸವು ತುಟಿಗಳಲಿ
ಅಂದದಿಹ ಮೊಲೆಗಳಲಿ ಅದ್ಭುತರಸವು

ನಲ್ಲೆ ಹಾಸ್ಯರಸವು ಸೊಬಗಿನಲಿ ತುಂಬಿ
ತೆಳು ನಡುವಿನಲಿ ಭಯರಸವು
ಸೊಬಗಿನಲಿ ಕಂಗಳಲಿ ಮೊನಚು ಭೀಭತ್ಸರಸವು
ಹುಬ್ಬಿನಲಿ ಬೆದರಿಕೆ ಅದೆ ರೌದ್ರವು

ಸತಿರತಿ ಮರೆವಿನ ಶಾಂತರಸವದೆ
ಅತಿಮೋಹವು ಹತ್ತನೆಯರಸವು
ಹಿತದೊಳು ಶ್ರೀವೆಂಕಟೇಶನ ಕೂಡಿದೆ
ಸತತವು ಈಕೆಗೆ ಸಂತೋಷರಸವು

ಮೊದಲೇ ಹೇಳಿರುವಂತೆ ಅನ್ನಮಾಚಾರ್ಯರ ಕೀರ್ತನೆಗಳ ಬಗೆಯಲ್ಲಿ ಇದು “ಶೃಂಗಾರ ಕೀರ್ತನಮು…” ಭಾಗಕ್ಕೆ ಸೇರಿಸಬಹುದಾಗಿದೆ. ಇಲ್ಲಿನ ನಾಯಕ ನಾಯಕಿ ತಿರುಮಲದ ವೆಂಕಟೇಶ ಮತ್ತು ಲಕ್ಷ್ಮೀ ಅಂದಿಟ್ಟುಕೊಂಡರೂ ಅದರ ಒಳ ಭಾವ ಅನ್ನಮಾಚಾರ್ಯರೇ.

ಕಾವ್ಯದ ಪ್ರಾರಂಭದ ಸಾಲೇ “ನವರಸ” ಅನ್ನುವುದನ್ನು ನೇರವಾಗಿ ಹೇಳುತ್ತಿದೆ. “ನವರಸದವಳೀ” ಅನ್ನುವಾಗ ಅವಳು ಸಹಜವಾಗಿ ಹೊಂದಿರುವ ಅನ್ನುವ ಅರ್ಥವನ್ನ ನೇರವಾಗಿ ಪ್ರಸ್ತಾಪಿಸುತ್ತಿದೆ. ಆ ನಂತರದ ಭಾಗಗಳಲ್ಲಿ ಒಂದೊಂದು ರಸವನ್ನು ವಿವರಿಸುವ ಬಗೆಯಿಲ್ಲಿದೆ.

ನವರಸಗಳನ್ನು ಹೆಣ್ಣಿನ ದೇಹದ ಒಂದೊಂದು ಭಾಗಕ್ಕೆ ಸಮಾನವಾಗಿ ಸಮೀಕರಿಸಿ ಬಳಸಿರುವುದು ಮುಂದಿನ ಮೂರು ಭಾಗಗಳಲ್ಲಿ ತಿಳಿಯುತ್ತದೆ. ದೇಹದ ಒಂದೊಂದು ಭಾಗಕ್ಕೂ ಒಂದೊಂದು ರಸವನ್ನು ಇಟ್ಟು ನೋಡುವಾಗ ಅದು ಸಾಧಿಸಿರುವ ಸಹಜ ಸಂಬಂಧ ಬಹಳ ಮುಖ್ಯ ಅನಿಸುತ್ತಿದೆ. ದೇಹದ ಭಾಗಗಳು ಮತ್ತು ರಸ ಅನ್ನುವಾಗ ಮೂರ್ತದಿಂದ ಅಮೂರ್ತಕ್ಕೆ ನಡೆವ ಚಲನ ಕ್ರಿಯೆ ಇದೆ. ಸಾಮಾನ್ಯವಾಗಿ ಕೀರ್ತನೆಗಳೆಲ್ಲವೂ ಈ ಕ್ರಮದಿಂದಲೇ ತನ್ನ ಯಶಸ್ಸನ್ನ ಸಾಧಿಸುತ್ತದೆ. (ಅಲ್ಲಿರುವುದು ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಅನ್ನುವುದನ್ನು ಗಮನಿಸಿದಾಗ ಇಲ್ಲಿಂದಲೇ ಅಲ್ಲಿಗೆ ಕನೆಕ್ಟ್ ಆಗುವಲ್ಲಿ ಪ್ರವಹಿಸಬೇಕಾಗುವಲ್ಲಿನ ಕ್ರಮದ ಬಗೆಗೆ ಮಾಹಿತಿಗಳೇ ಅದಾಗಿರುತ್ತದೆ) ಕೀರ್ತನೆಯ ಹಿಂದೆ ಒಂದು ಚಕ್ರಗತಿ ಚಲನೆಯ ಕಾರ್ಯ ನಡೆಯುತ್ತದೆ. ಮೊದಲ ಎರಡು ಭಾಗಗಳನ್ನು ಗಮನಿಸಿ – ಇಲ್ಲಿ ದೇಹದ ಭಾಗವಾದ ಮುಖದಿಂದ ಪ್ರಾರಂಭಗೊಂಡು ಹುಬ್ಬಿನಲಿ ಕೊನೆಯಾಗಿದೆ. ಅದರ ಮಧ್ಯ ಉಳಿದ ದೇಹದ ಭಾಗಗಳು ಬಂದರೂ ಅದು ಅಲ್ಲೆ ಚಕ್ರಗತಿಯಲ್ಲಿ ಚಲನೆ ಪಡೆದಿದೆ. ಅಥವಾ ಇನ್ನೊಂದು ಹಾದಿಯಲ್ಲಿ ಹೇಳುವುದಾದರೆ ನೇರವಾಗಿ ಮೇಲಿನಿಂದ ಕೆಳಗೆ ಬರದೆ ಮೇಲೆ ಮತ್ತು ಕೆಳಗಿನ ದೇಹ ಭಾಗಗಳ ಒಂದು ಸಮನ್ವಯತೆ ಇದೆ. ಕೊನೆಯ ಭಾಗದಲ್ಲಿ ಸೊಬಗು, ಸತಿರತಿ, ಮತ್ತು ಶಾಂತದಿಂದ ಈ ಕೀರ್ತನೆ ಕೊನೆಯಾಗುತ್ತದೆ. ಅಂದರೆ ಮೂರ್ತದಿಂದ ಬಿಡುಗಡೆ ಹೊಂದಿ ಅಮೂರ್ತದ ಭಾವದಲ್ಲಿ ತನ್ನ ಯಶಸ್ಸನ್ನು ಸಾಧಿಸುತ್ತದೆ. ಕೀರ್ತನೆಯ ಮೊದಲ ಸಾಲಿನ ಪದವನ್ನು ಗಮನಿಸಿ “ನವರಸ” ದಿಂದ ಪ್ರಾರಂಭ ಆಗಿ ಕೊನೆಯ ಭಾಗದ ಮೊದಲ ಸಾಲಿನ ಕೊನೆಯ ಪದ “ಶಾಂತರಸಂಬದೆ” ಅನ್ನುವ ಸ್ಪಷ್ಟ ಗ್ರಹಿಕೆಯ ಕ್ರಮದಲ್ಲಿ ಕೊನೆಯಾಗಿದೆ.

ಇಲ್ಲೊಂದು ಬಹಳ ಮುಖ್ಯವಾದ ಅಂಶವನ್ನು ಗಮನಿಸಿ. ನಾನು ಮೊದಲ ಲೇಖನದಲ್ಲಿ ರಸ ವಿಚಾರವಾಗಿ ಉದಾಹರಣೆಯಾಗಿ ಕೊಟ್ಟ ಉದ್ಭಟನ ಕಾವ್ಯಾಲಂಕಾರದ ಶ್ಲೋಕವನ್ನು ನೆನಪುಮಾಡಿಕೊಳ್ಳಿ.

ಶೃಂಗಾರ ಹಾಸ ಕರುಣ ರೌದ್ರವೀರ ಭಯಾನಕಾ l
ಬೀಭತ್ಸಾದ್ಭುತ ಶಾಂತಶ್ಚ ನವನಾಟ್ಯೇ ರಸಾಃಸ್ಮೃತಾಃ ll

ಅನ್ನುವ ಲೊಲ್ಲಟನ ಸಂಕ್ಷೇಪಣೆಗೆ, ರಸ ವಿವರಣೆಗೆ ಬಹಳ ಹತ್ತಿರ ಬರುತ್ತಿದೆ ಈ ಕೀರ್ತನೆ. ಕೀರ್ತನೆ ಇಲ್ಲಿಗೆ ಅಷ್ಟೆ ನಿಂತಿದ್ದರೆ ಇದರ ಚರ್ಚೆ, ಓದು ಮೀಮಾಂಸಾ ವಿಚಾರದ ಅಡಿಯಲ್ಲಿ ಸಾರ್ಥಕ್ಯ ಅನಿಸಬಹುದಿತ್ತು. ಆದರೆ ನಂತರ ಬರುವ ಸಾಲು ಬಹಳ ಮುಖ್ಯವಾದದ್ದು.

“ಅತಿ ಮೋಹಮು ಪದಿಯವ ರಸಮು”

ಎಂದಿದೆ. ಇಲ್ಲಿ ಹತ್ತನೆಯ ರಸವಾಗಿ ಅನ್ನಮಾಚಾರ್ಯರು ಒಂದು ಭಾವವನ್ನ ಸೇರಿಸುತ್ತಿದ್ದರೂ ಅದು ಎಲ್ಲಾ ರಸ ಭಾವದ ಮೂಲವಾಗಿ ಮೀರಿಸಿದ “ಅತಿ” ಅನ್ನುವುದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ಇಲ್ಲಿನ “ಅತಿ” ಪದವು ಕಾವ್ಯದ ಒಟ್ಟೂ ಭಾವವನ್ನು ವಿಶೇಷವಾಗಿ ನೋಡುತ್ತಲೇ ಬಿಡದ ಹಾಗೆ ಬಂಧ ಬೆಸೆವ ಮಾನಸಿಕ ಸಾಯುಜ್ಯ ಸಂಬಂಧವನ್ನು ಸ್ಥಾಪಿಸುತ್ತದೆ.

(ಸ. ರಘುನಾಥ)

ಶಾಂತರಸದ ನಂತರ ಬಂದಿರುವುದು ಕಾವ್ಯದಲ್ಲಿ ಬಹಳ ಮುಖ್ಯವಾದದ್ದಾಗಿದೆ. ಶಾಂತದ ನಂತರ ಬೇರಾವುದೇ ಬಂದರೂ ಅದು ದೈವೀ ನೆಲೆಯ, ಮುಗ್ದ ಸ್ಥಿತಿಯ ಅನಾವರಣವಲ್ಲದೇ ಮತ್ತಿನ್ನೇನೂ ಅಲ್ಲ. ಸೃಜನಶೀಲ ಬರಹಗಾರನೊಬ್ಬ ತನ್ನ ಪ್ರತಿಭೆಯ ಮಿತಿ ಮತ್ತು ವ್ಯಾಪ್ತಿಯಿಂದಲೇ ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕ ಮೀಮಾಂಸೆಯಂತಹಾ ತಾತ್ವಿಕ ವಿಚಾರಗಳನ್ನು ಮಾಡಿದ ಮುಂದುವರಿಕೆಯಿದು ಅನಿಸುತ್ತದೆ.

ಕೊನೆಯದಾಗಿ ಯಶಸ್ವಿ ಭಾಷಾಂತರದ ಬಗೆಗೆ ಮಾತಾಡುವುದು ಬಹಳ ಉತ್ತಮ ಅನಿಸುತ್ತದೆ. ಈ ಮೇಲಿನ ಭಾಷಾಂತರವನ್ನು ಮಾಡಿರುವವರು ಶ್ರೀ ರಘುನಾಥರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ಕವಿ, ಕಥೆಗಾರ, ಪ್ರಖರ ವಿಮರ್ಶಕ ಮತ್ತು ಭಾಷಾಂತರಕಾರರಾಗಿ ತೆಲುಗು ಮತ್ತು ಕನ್ನಡ ಭಾಷೆಯ ಸೇತುವೆಯಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವವರು. ಇದುವರೆವಿಗೂ ೪೫ ಕ್ಕೂ ಹೆಚ್ಚು ಕೃತಿಗಳು ಅವರ ಹೆಸರಿನಲ್ಲಿವೆ.

ಈ ಭಾಷಾಂತರವನ್ನು ಒಮ್ಮೆ ಗಮನಿಸಿ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿನ ಕೀರ್ತನೆಯ ರೂಪ ಮತ್ತು ಅದು ಹೊರಸೂಸುವ ಆಕೃತಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಅನ್ನುವುದು ಬಹಳ ಮುಖ್ಯ ಅಂಶ. ಇತ್ತೀಚಿನ ಭಾಷಾಂತರಗಳು ರೂಪ ವ್ಯತ್ಯಾಸವಾಗಿ ಬರುತ್ತಿರುವಾಗ ಮೂಲ ಕೀರ್ತನೆಯ ರೂಪದಲ್ಲಿಯೇ ಮಾಡುವುದು ಬಹಳ ಕಷ್ಟದ ಕಾರ್ಯ. ಭಾಷಾಂತರ ಅನ್ನುವುದೇ ಭಾಷೆಯಿಂದ ಭಾಷೆಯ ಚಲನೆಯನ್ನು ಸೂಚಿಸುವುದಾದರೂ ಈ “ಇಂಟರ್ ಟ್ರಾನ್ಸ್ಲೇಷನ್” ಯಶಸ್ವಿ ಅನ್ನುವುದು ತಿಳಿಯುತ್ತದೆ.

ಭಾಷಾಂತರ ಅನ್ನುವುದು ಚಲನೆ ಮತ್ತು ಬದಲಾವಣೆ ಅನ್ನುವುದನ್ನ ಒಪ್ಪಿದರೂ ಮೂಲ ಪಠ್ಯನಿಷ್ಟವಾಗುವುದು ಎಲ್ಲಾ ಕಾಲದಲ್ಲೂ ಬಹಳ ಮುಖ್ಯವಾಗುತ್ತದೆ. ಆ ಚಲನೆ ಅರ್ಥಸ್ಥರದಲ್ಲಿ ಮಾತ್ರ ಆದಷ್ಟು ಉಪಯೋಗ. ಪರಿಚಯಾತ್ಮಕವಾಗಿ ಮೊದಲಬಾರಿಗೆ ನಮ್ಮ ಭಾಷೆಗೆ ಭಾಷಾಂತರ ಮಾಡುವಾಗಲಂತೂ ಈ ಚಲನೆ ಮತ್ತು ಬದಲಾವಣೆಯನ್ನು ಆದಷ್ಟು ತಡೆಹಿಡಿದು ಮಾಡುವುದು ಬಹಳ ಉತ್ತಮ. ಹೀಗೆ ಉತ್ತಮ ಅನಿಸುವುದಕ್ಕೆ ಮೊದಲುಗಳಾಗಿ ಬಂದ ಹಿಂದಿನ ಭಾಷಾಂತರಗಳ ಪಟ್ಟಿಯನ್ನೊಮ್ಮೆ, ಕವಿಗಳ ಕಾವ್ಯಗಳನ್ನೊಮ್ಮೆ ಸಾಕ್ಷಿಯಾಗಿ ಗಮನಿಸುವುದು ಉತ್ತಮ.

ಆಧುನಿಕ ಕಾಲಘಟ್ಟದ ತಲ್ಲಣಗಳಿಗೆ ಮುಖಾಮುಖಿಯಾಗಿ ಕೃತಿರಚನೆ ಮಾಡುತ್ತಿದ್ದರೂ, ಭಾಷಾಂತರ ಕಾರ್ಯದಲ್ಲಿ ರಘುನಾಥರ ಶಿಸ್ತು ಬಹಳ ಮುಖ್ಯ ಮತ್ತು ಅನುಕರಣೀಯ ಅನಿಸುತ್ತದೆ. ಭಾಷಾಂತರಿಸುವಾಗ ಮೂಲಕ್ಕೆ ಯಾವುದೇ ಧಕ್ಕೆ ಮಾಡದೆ, ಸೃಜನಶೀಲ ರಚನೆಗೆ ಮುಂದಾಗುವಾಗ ಸೂಕ್ಷ್ಮವಾಗಿ ಮತ್ತು ನಿರ್ಭಿಡೆಯಿಂದ ಕಾವ್ಯದ ರಚನೆ ಮಾಡುತ್ತಿರುವ ಇವೆರಡೂ ಅಂಶಗಳು ಬಹಳ ಮುಖ್ಯ ಅನಿಸುತ್ತದೆ. ಹಾಗೆ ನೋಡಿದರೆ ಭಾಷಾಂತರವೂ ಸೃಜನಶೀಲತೆ ಅನ್ನುವುದಾದರೂ ಅಲ್ಲೊಂದು ಅನುಶೀಲನಾ ಚಲನೆ ಇದೆ. ಆ ಅನುಶೀಲನಾ ಚಲನೆ ಮೂಲ ಪಠ್ಯದ ಭಾವ, ಭಾಷೆ, ಸೌಂದರ್ಯ, ಅದರ ಕಲಾಕುಸುರಿತನ ಇವುಗಳನ್ನು ಗಮನಿಸಿದಾಗ ತಿಳಿಯುತ್ತದೆ.

ಈ ಎಲ್ಲಾ ಕಾರ್ಯಗಳ ಅಡಿಯಲ್ಲಿ ಉತ್ತಮ ಭಾಷಾಂತರವಾಗಿ ಈ ಕೀರ್ತನೆಯು ನಿಲ್ಲುತ್ತದೆ. ಉತ್ತಮ ಅನ್ನುವಾಗಲೂ ಒಮ್ಮೆ ಗಮನಿಸಿ; ಮೇಲಿನ ತೆಲುಗು ಕೀರ್ತನೆಯ ರಸದ ಮತ್ತು ದೇಹಭಾಗದ ಸ್ಥಾನಪಲ್ಲಟ ಮಾಡಿ ಅನ್ನಮಾಚಾರ್ಯರ ಕೃತಿಯನ್ನು ಕನ್ನಡಕ್ಕೆ ಕೊಟ್ಟಿದ್ದರೆ ಏನಾಗುತ್ತಿತ್ತು? ಏಕೆ ಹಾಗೆ ಕೊಡಲಿಲ್ಲ? ಇದೆಲ್ಲದಕ್ಕೂ ಉತ್ತರವೊಂದೇ ರಘುನಾಥರಲ್ಲಿರುವ ಪರಂಪರೆ ನಿಷ್ಟ, ಕೃತಿನಿಷ್ಟ, ಪ್ರೀತಿಯುತ ಭಾಷಾಂತರ ಕಾರ್ಯವಲ್ಲದೆ ಮತ್ತಿನ್ನೇನೂ ಅಲ್ಲ.

ಈ ಎಲ್ಲಾ ಮೇಲಿನ ಮೀಮಾಂಸೆಯ ಚರ್ಚೆಗಳ ಅಂಶಗಳು ಗಮನದಲ್ಲಿದ್ದೋ ಗಮನದಲ್ಲಿಲ್ಲದೆಯೋ ಹತ್ತನೆಯ ರಸವಾಗಿ ಅನ್ನಮಾಚಾರ್ಯರು ಕೊಟ್ಟಿದ್ದು, ಅದನ್ನು ಹಾಗೆಯೇ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಹಸ್ತಾಂತರ ಮಾಡಿದ್ದು, ಮೊದಲಿನಿಂದ ಅಂಕಣಬರಹ ಲೇಖನಗಳನ್ನು ಗಮನಿಸಿ ಈ ಕೀರ್ತನೆಯಲ್ಲಿನ ರಸ ಚರ್ಚೆಯ ಕಡೆಗೆ ನನ್ನ ಗಮನವನ್ನು ಸೆಳೆದು ಈ ಲೇಖನ ನನ್ನಲ್ಲಿ ಮೂಡಲು ಕಾರಣರಾದ ಸ ರಘುನಾಥರಿಗೆ ಧನ್ಯವಾದ ಹೇಳುತ್ತಾ ಲೇಖನವನ್ನು ಇಲ್ಲಿಗೆ ನಿಲ್ಲಿಸುತ್ತೇನೆ.