ನೂರು ಕಿಲೋ ಧನ್ಯವಾದ

ನಿನ್ನೆಯಷ್ಟೇ ಎದ್ದೆ
ರೋಗದ ಹಾಸಿಗೆಯಿಂದ
ಮುಗಿದಂತಾಯ್ತು
ಒಂದು ಯುಗ
ಎಲ್ಲಾ ಕತ್ತಲಾಗಿತ್ತು
ಬದುಕು ಬಯಲಾಗಿತ್ತು

ರೋಗದ ಆರಂಭ
ನನ್ನೊಳಗಿತ್ತೋ?
ಅವನಿಂದಾಗಿತ್ತೋ?
ಹುಡುಕಿದಷ್ಟು
ಅಸ್ಪಷ್ಟ !
ತಡಕಿದಷ್ಟು
ಇನ್ಸ್ಪೆಕ್ಷನ್ ಹೆಚ್ಚುತಿತ್ತು
ಸಹಿಸಿಕೊಂಡೆ
ಅಸಹಜವಾದ ನೋವು

ಮತ್ತೆ ಮತ್ತೆ ಅವನು
ಬರುತ್ತಿದ್ದ ; ಅವನೂ
ನನ್ನ ಎದೆಯನ್ನೇ
ಮುಟ್ಟುತ್ತಿದ್ದ
ಡಾಕ್ಟರ್

ಇವನಿಗೇನು ಅರ್ಥವಾದೀತು?
ಅವನ ನೆನಪೆಂದರೆ
ನನಗೆ ಹೃದಯ
ಕೊರೆಯುವ ಕ್ಯಾನ್ಸರ್ ಬೀಜ
ಬೀಜದ ಸುತ್ತ ಗ್ರಹಗತಿ
ಹುಚ್ಚಿನ ದಿನಚರಿ

ಯಾರಪ್ಪಣೆಗೂ ಕಾಯದೇ
ತಲ್ಲಣಿಸುತಿತ್ತು ಕಡಲು
ನೂರು ಕಿಲೋ ಧನ್ಯವಾದ!
ಪೇನ್ ಕಿಲ್ಲರ್ ಗೋ…
ಅವನ ನೆನಪುಗಳಿಗೋ…

ವಿಚಿತ್ರವಾದ ಸತ್ಯ!
ಒಂದಕ್ಕೊಂದು ತಾಕುತ್ತಲೇ
ವಿಷ ಮತ್ತು ಅಮೃತದೊಳಗೆ
ತರ್ಪಣ ಹಾಗೂ ಅರ್ಪಣ!

 

ಡಾ. ಶೋಭಾ ನಾಯಕ ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸಧ್ಯ ಬೆಳಗಾವಿಯಲ್ಲಿ ವಾಸ್ತವ್ಯ.
ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಅನೇಕ ಕಡೆಗಳಲ್ಲಿ ಭಾಷಣ, ಚಿತ್ರಕಲಾ ಪ್ರದರ್ಶನ ಹಾಗೂ ಬಾನುಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.