ವಿಕ್ಷಿಪ್ತ ಕನಸಿನ ಗೋರಿಯೊಳಗೆ

ಅಂದುಕೊಳ್ಳುತ್ತೇನೆ ಎಷ್ಟೋ ಸಲ
ಹೀಗೆಲ್ಲ ಕನಸು ಕಾಣಬಾರದು
ಅದರಲ್ಲೂ ನಿನ್ನ ಕುರಿತಾಗಿ
ವಿಕ್ಷಿಪ್ತ ಕನಸು ಕಾಣುವುದೂ ಮಹಾಪಾಪ
ಎಂದುಕೊಳ್ಳುತ್ತಿರುವಾಗಲೇ ಮತ್ತೆ ಕನಸು
ತಡರಾತ್ರಿ ಹನ್ನೆರಡು ಗಂಟೆಯ
ತಡೆಯಲಾಗದ ಚಳಿಗೆ
ಮಲಗಿರುವಾಗ ಮುಖಕ್ಕೂ ಮುಸುಕಿಕ್ಕಿ
ಕಳ್ಳ ಬೆಕ್ಕಿನಂತೆ ಕೋಣೆಗೆ ಬಂದು
ಮುಸುಕೆಳೆದು ತುಟಿಗೆ ತುಟಿಯಿಟ್ಟರೆ
ನಿನ್ನ ತುಟಿಗಂಟಿದ ಮದಿರೆಯೆಲ್ಲ
ನನ್ನ ತುಟಿಗೆ ದಾಟಿ ಮತ್ತೇರಿದಂತೆ
ಎರಡು ಕ್ಷಣ ಆಸ್ವಾದಿಸಿ ಕಣ್ಬಿಟ್ಟರೆ
ನೀನು ಎದುರಿಗಿಲ್ಲ
ಇದೆಂತಹ ಕನಸು ಎಂದು
ಸುಲಭಕ್ಕೆ ತಳ್ಳಿಹಾಕಲು ಬಿಡುತ್ತಿಲ್ಲ
ಕೋಣೆಯ ತುಂಬೆಲ್ಲ ಆವರಿಸಿದ
ನೀನು ಕುಡಿದ ಸುರಾಹಿಯ ಘಮ
ಬಿಡು, ರಾತ್ರಿ ದೆವ್ವ ನಡೆದಾಡುವ
ಕಾರಿರುಳ ನಡುರಾತ್ರಿಯ ಮಾತು

ನಿಗಿನಿಗಿ ಕೆಂಡದಂತೆ ಸುಡುವ
ಹಗಲಿನ ಕಥೆ ಹೇಳುತ್ತೇನೆ ಕೇಳು
ಅದಾವುದೋ ಜನಜಂಗುಳಿಯ ನಡುವೆ
ಮೆತ್ತಗೆ ಸೊಂಟಕ್ಕೆ ಕೈ ತಾಗಿದಂತೆ
ಬೆಚ್ಚಿ ಬೀಳುವ ಅಗತ್ಯವೇನಿಲ್ಲ
ಆ ಬೆರಳ ಸಂವೇದನೆ
ಪರಿಚಿತವಿದೆ ದೇಹದ ಕಣಕಣಕ್ಕೂ
ಕಣ್ಮುಚ್ಚಿ ದೀರ್ಘ ಉಸಿರೆಳೆದು
ನಿಧಾನವಾಗಿ ಕಣ್ಣು ಬಿಟ್ಟರೆ
ದೂರದಲ್ಲಿ ಗೆಳೆಯರೊಡನೆ
ಗಹನ ಚರ್ಚೆಯಲ್ಲಿ ಮುಳುಗಿರುವ ನೀನು
ಯಾರೂ ಕಾಣದಂತೆ ಕಣ್ಣು ಮಿಟುಕಿಸಿದಾಗ
ಕನಸೋ ನಿಜವೋ ಅರಿಯದೆ ಕಂಗಾಲಾಗಿದ್ದೇನೆ

ಅದೋ ಆ ಇಳಿ ಸಂಜೆಯಲ್ಲಿ
ಏಳು ಹೆಜ್ಜೆಯಿಡಬೇಕಿತ್ತು
ಜ್ವಾಲೆಯನ್ನು ಎದುರಿಗಿಟ್ಟು
ಪ್ರಜ್ವಲಿಸುವ ಅಗ್ನಿಮಂಡಲ
ದಿಗ್ಗನೆ ಗೋರಿಗಳಾಗಿ
ಸಪ್ತಪದಿಯ ಶಾಸ್ತ್ರ ಮುಗಿಸಿ
ಸಿಂಧೂರವಿಡುವಾಗ ಹರಿಸಿದ್ದು
ಗೋರಿಯಿಂದೆದ್ದ ನನ್ನದೇ ಆತ್ಮ

ನಿರ್ಧರಿಸಿ ಬಿಟ್ಟಿದ್ದೇನೆ
ಇನ್ನೆಂದೂ ಕನಸು ಕಾಣಬಾರದೆಂದು
ಕಣ್ಮುಚ್ಚಿದರೂ, ತೆಗೆದರೂ ವ್ಯತ್ಯಾಸ ಕಾಣದ
ವಿಕ್ಷಿಪ್ತ ಹಳಹಳಿಕೆಗೆ