ಜೊತೆಗಿರು

ಹೇಳುತ್ತೇನೆ ಮತ್ತೆ ಮತ್ತೆ ಜೊತೆಗಿರು
ಸಂತೆಯ ನಡುವೆಯೂ ಒಂಟಿ ಎನಿಸಿದಾಗ
ಸುತ್ತೆಲ್ಲ ಗೆಳತಿಯರು
ಯಾರಿಗೂ ಕೇಳದಂತೆ ಪಿಸುಮಾತಲ್ಲಿ
ತಮ್ಮ ಸಂಸಾರದ ಗುಟ್ಟುಗಳ ಬಿಚ್ಚಿಟ್ಟು
ಕಿಸಿಕಿಸಿ ನಗುವಾಗ
ಗುಟುಕರಿಸುವಾಗ ಹಳೆಯ ಗೆಳೆಯರೆಲ್ಲ ಸೇರಿ‌
ಕೇ ಕೇ ಹಾಕುತ್ತ ಬೈಟೂ ಚಹಾ
ಕಿಬ್ಬೊಟ್ಟೆಯಲಿ ನೋವು ಅಲೆಅಲೆಯಾಗಿ ಉಕ್ಕಿ
ತಿಂಗಳ ಮಾಮೂಲನ್ನು ವಸೂಲು ಮಾಡುವ
ತಾಳಲಾಗದ ನೋವನ್ನು ಅವಡುಗಚ್ಚಿ
ಒಮ್ಮೆ ನಿನ್ನ ಮಡಿಲಲ್ಲಿ ತಲೆಯಿಟ್ಟು
ಸಂತೈಸಿಕೊಳ್ಳ ಬೇಕೆನಿಸಿದಾಗ
ಕೆಲಸದ ನಡುವೆ ಹಿಂಬದಿಯ ಸೊಂಟ ಬಳಸಿ
ಪಿಸುಮಾತು ಕಿವಿಯಂಚಲಿ
ಬಿಸಿಯಾಗಿ ಕೇಳಿದಂತಾದಾಗ
ಹೆಚ್ಚಿದ ತರಕಾರಿಯ ಜೊತೆ
ಬೆರಳೂ ತರಿದು,
ರಕ್ತ ತುದಿಯಿಂದ ಬೆರಳಗುಂಟ ಧಾರೆಯಾದಾಗ
ಮೀನು ಮುಳ್ಳು ಸರಕ್ಕನೆ ನುಗ್ಗಿ
ಉಸಿರು ನಿಂತು ಹೋದಂತಾದಾಗ
ಬಿಸಿ ಎಣ್ಣೆಯ ಕಾವಲಿಗೆ ಕೈ ತಾಗಿ
ಚುರುಕ್ ಎಂದಾಗ
ಮನದಲ್ಲೇ ನಿನ್ನ ನೆನೆಸುತ್ತ
ನನಗೆ ನಾನೇ ಹೇಳಿಕೊಳ್ಳುವ ಜಪದಂತೆ
ಜೊತೆಗಿರು ಎನ್ನುತ್ತೇನೆ

ಇತ್ತೀಚಿಗಂತೂ ಜೊತೆಗಿರು ಎನ್ನುವ ಮಾತು
ನನಗೆ ನಾನೇ ಪಠಿಸುತ್ತೇನೆ
ಕೇಳುವುದು ಕ್ಲೀಷೆಯಾಗುವಂತೆ
ವಿಷ್ಣು ಸಹಸ್ರ ನಾಮ,
ಲಕ್ಷ್ಮಿ ಸಹಸ್ರ ನಾಮದಂತೆ‌
ಜೊತೆಗಿರು ಎಂಬುದು ಆರಾಧನೆಗೊಳಪಡುತ್ತದೆ
ನಿನ್ನ ಹೆಸರಾಗಿ
ಮನದೊಳಗೆ ಪ್ರತಿಷ್ಟಾಪನೆಗೊಂಡು

ಇಷ್ಟಾದರೂ ಇಲ್ಲ ನನಗೆ
ನಾನು ಜೊತೆಗಿರು ಎಂದುಕೊಳ್ಳುವುದು
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ
ಎನ್ನುವ ಯಾವ ನಂಬಿಕೆಯೂ
ಆದರೂ ಮೈದುಂಬಿ ಸುಖಿಸುತ್ತದೆ
ಹಾಗೆಂದಾಗ ನೀನು ಜೊತೆಗಿರುವ
ಅಮೂರ್ತ ಅನುಭವ
ಕೆಲವೊಮ್ಮೆ ನಾನು ಜೊತೆಗಿರು ಎಂದಾಗ
ನಿನ್ನ ಕಿವಿಗೆ ತಲುಪಿ
ಇದ್ದೇನಲ್ಲ ಸದಾ ಜೊತೆಗೆ
ಯಾಕೆ ಮತ್ತೆ ಮತ್ತೆ ಅದೇ ಮಾತು
ನೀನು ಮಾತು ಮುಗಿಸಿ ಬಿಡುವುದೂ
ಹೊಸ ವಿಷಯವೇನೂ ಅಲ್ಲ ನನಗೆ

ಇಷ್ಟಾಗಿಯೂ ಹೆಚ್ಚಿನ ಸಲ
ಜೊತೆಗಿರು ಎಂಬ ನನ್ನ ಗೋಗರೆತದ ದನಿ
ನಿನ್ನ ಮೆದುಳು ತಲುಪಿ
ಪ್ರತಿಕ್ರಿಯೆ ಬಂದೇ ಬರುತ್ತದೆಂಬ ನಂಬಿಕೆಯೇನಿಲ್ಲ

ಆದರೂ ಹೇಳುತ್ತೇನೆ
ಹೇಳುತ್ತಲೇ ಇರುತ್ತೇನೆ
ಹೇಳುತ್ತ ಹೇಳುತ್ತಲೇ ಉಸಿರು ನಿಲ್ಲಿಸುತ್ತೇನೆ
ಜೊತೆಗಿರು, ಕೊನೆಯ ಉಸಿರಿರುವವರೆಗೆ