ಬದುಕಲು
ಬಡವಿ ನಾನು, ಗೊತ್ತು ಮಹಲು ಕಟ್ಟಿಸಲು ಅವನಲ್ಲೂ ಹಣವಿಲ್ಲ
ಸಾಕು ಕುಚಲಕ್ಕಿ ಗಂಜಿ, ನಂಜಲು ಸುಟ್ಟ ಒಣಮೀನು ಬದುಕಲು
ಕನಸಲ್ಲೂ ಹತ್ತಿರ ಸುಳಿಯುವುದಿಲ್ಲ ತಾಜ್ ಮಹಲಿನ ನೆರಳು
ಸಾರಿಸಿದ ಹಟ್ಟಿಗಿಂತ ಬೇಕೆ ಪ್ರೀತಿಯ ಪವನು ಬದುಕಲು
ಹೇಳದೇ ಹೊರಟು ಬಿಡಬೇಡ, ದಾರಿ ಕಾಯುತ್ತೇನೆ
ಮಾತೇನೂ ಬೇಕಿಲ್ಲ ಕಣ್ಣಂಚಿನ ನೋಟ ಸಾಕು ನಾನು ಬದುಕಲು
ವಸ್ತ್ರ ಒಡವೆ ಚಿನ್ನ ಬೆಳ್ಳಿ ಬೇಕಂದು ಕುರುಬುವುದಾದರೂ ಏಕೆ
ಯಾರೂ ಕಾಣದಂತೆ ಕೆನ್ನೆಗಿತ್ತ ಮುತ್ತಿನ ಬೆಲೆ ಕಡಿಮೆಯೇನು ಬದುಕಲು
ತಾಳೆ ಮರದಡಿ ಕುಳಿತು ಮಜ್ಜಿಗೆಯ ಕನಸು ಕಾಣಬೇಡ
ಮದಿರೆಯ ಹೊರತಾಗಿ ಮತ್ತೇನೂ ಬೇಡ ಅವನು ಬದುಕಲು
ಬಿಳಿಯ ಮೋಡವೊಂದು ತೇಲು ಬಂದಿದೆ ನಿನ್ನೂರಿಂದ
ಗರ್ಭದೊಳಗೆ ಮೊಳೆತ ಬಣ್ಣದ ಕನಸನು ಬದುಕಲು
ಬದುಕಿರುವ ನಾಕು ದಿನವಾದರೂ ಜೊತೆಗೆ ಹೆಜ್ಜೆಯಿಡು
ತಂದು ಕೊಡಲು ಕೇಳುವುದಿಲ್ಲ ಜಗ ಬೆಳಗುವ ಭಾನು ಬದುಕಲು
ಚೆಂದ ಇದೆ ಮೇಡಂ
ಥ್ಯಾಂಕ್ಯೂ