ಅಂತೂ ಎಂದಿಗಿಂತ ಸ್ವಲ್ಪ ಬೇಗನೆ ರೈಲು ಇಳಿದರೂ ಸ್ಟೇಷನ್ ಹೊರಗಡೆ ರಿಕ್ಷಾ ಹಿಡಿಯಲು ಕ್ಯೂ ಬೇರೆ. ಎಂದಿಗಿಂತಲೂ ಕ್ಯೂ ಸ್ವಲ್ಪ ಹೆಚ್ಚೇ ಇತ್ತು. ತೀರಾ ಅಗತ್ಯದ ಸಾಮಾನುಗಳನ್ನು ಹಿಡಿದುಕೊಂಡು ಮನೆಗೆ ಬಂದರೆ ಆಗಲೇ ಚಿಕ್ಕಪ್ಪ, ಚಿಕ್ಕಮ್ಮ ಮನೆಗೆ ಬಂದಿದ್ದರು. “ಹೇಗಿದ್ದೀರಿ? ಪ್ರಯಾಣ ಕಷ್ಟವಾಯಿತಾ…..?” ಇತ್ಯಾದಿ ಔಪಚಾರಿಕವಾಗಿ ವಿಚಾರಿಸಿ ವಿಜಯೇಂದ್ರ ಸ್ನಾನಕ್ಕೆ ಹೋದ. ಸಹನಾ ಎಲ್ಲರಿಗೂ ರಾತ್ರಿಯ ಊಟಕ್ಕೆ ತಯಾರಿ ನಡೆಸಿದಳು. ಇವಳು ಹಪ್ಪಳ ಕಾಯಿಸಿದರೆ ಎಲ್ಲಾ ಅಡುಗೆ ಮುಗಿದಂತೆ ಎಂದು ಚಿಕ್ಕಮ್ಮನಲ್ಲಿ ಹೇಳಿದ. ಚಿಕ್ಕಮ್ಮ ಅವನಿಗಾಗಿ ತಂದಿದ್ದ ಹಪ್ಪಳ, ಉಪ್ಪಿನಕಾಯಿಯನ್ನು ಸಹನಾಳಲ್ಲಿ ಕೊಟ್ಟರು.
ಶ್ರೀನಿವಾಸ ಜೋಕಟ್ಟೆ ಬರೆದ ಕತೆ ‘ಗುಡ್ಡ’, ನಿಮ್ಮ ಈ ಭಾನುವಾರದ ಓದಿಗೆ

 

“ಕಳೆದ ಎಲ್ಲ ದಿನಗಳ ಅನುಭವ, ನೋವು, ಸಂತಸ, ಮೈಮುದುಡಿಸುವ ಪೆಟ್ಟು, ಬೇರಾದ ಕ್ಷಣಗಳು, ದೂರಾಗಿ ಬಿಟ್ಟ ಭಾವನೆ ಎಲ್ಲವೂ ಬದುಕಿಗೆ ಶ್ರೀಮಂತಿಕೆ ಸೌಂದರ್ಯ ತುಂಬುತ್ತವೆ” – ಜಿಡ್ಡು ಕೃಷ್ಣಮೂರ್ತಿ.

ಬೆಳಿಗ್ಗೆ ಸ್ನಾನಕ್ಕೆ ಗೀಜರ್ ಆನ್ ಮಾಡಿ, ಇತ್ತ ಟಿವಿ ಆನ್ ಮಾಡುವುದು ಎರಡೂ ಏಕಕಾಲಕ್ಕೇ ಎನ್ನುವಂತೆ ಇವತ್ತೂ ವಿಜಯೇಂದ್ರ ಅದೇ ಉತ್ಸಾಹದಲ್ಲಿ ಸ್ನಾನಕ್ಕೆ ರೆಡಿ ಮಾಡಿ ಬಂದ. ಟಿವಿ ಆನ್ ಮಾಡಿ ನೀರು ತುಂಬುವ ತನಕ ತನ್ನ ಇಷ್ಟದ ಚ್ಯಾನಲ್ ಒಂದಿಷ್ಟು ಹೊತ್ತು ವೀಕ್ಷಿಸಿದ. ತನ್ನ ರಾಶಿಭವಿಷ್ಯ ಕೇಳಿಯೇ ಆತ ಸ್ನಾನಕ್ಕೆ ಹೊರಡೋದು. ಕೇಳಿದ ನಂತರ ತನ್ನ ಹೆಂಡತಿ ಸಹನಾ ಬಳಿ, “ಇವರೆಲ್ಲಾ ಏನೇನೋ ಹೇಳ್ತಾರೆ, ನಾಳೆಯಿಂದ ಕೇಳೋದೆ ಬೇಡ” ಎನ್ನುತ್ತಾ ಸ್ನಾನಕ್ಕೆ ಒಳಹೋಗಿ ಬಿಡುತ್ತಾನೆ. ಆತ ಸ್ನಾನಕ್ಕೆ ಇಳಿದಂತೆ ಇತ್ತ ಸಹನಾ ತನ್ನ ರಾಶಿಯ ಬಗ್ಗೆ ಕುತೂಹಲಗೊಂಡು ಟಿವಿ ಎದುರು ನಿಂತುಬಿಡುತ್ತಾಳೆ. ಆಗ ಗ್ಯಾಸ್ ಮೇಲಿಟ್ಟ ಹಾಲು ಉಕ್ಕಿ ಕೆಳಗೆ ಬೀಳುವುದೋ ಅಥವಾ ಕಾವಲಿ ಮೇಲೆ ಹಾಕಿದ ದೋಸೆ ಕಪ್ಪಾಗಿ ಹೋಗೋದೋ ಅದು ಮಾಮೂಲಿ ಸಂಗತಿ. ಗಂಡ ಸ್ನಾನ ಮಾಡಿ ಬರೋದಕ್ಕಿಂತ ಮೊದಲು ಆ ಕಪ್ಪಾದ ದೋಸೆಯನ್ನು ಕಸದ ಬುಟ್ಟಿಯೊಳಗೆ ಹಾಕಿಬಿಟ್ಟು ಏನೂ ಆಗದಂತೆ ಇರುವ ಜಾಣ್ಮೆ ಅವಳಿಗೆ ತಿಳಿದಿತ್ತು. ಭವಿಷ್ಯ ಹೇಳುವವರು ಹೇಳುತ್ತಲೇ ಇದ್ದರು…

“ಸಹನಾ, ಟಿವಿ ಬಂದ್ ಮಾಡು. ಯಾರುಯಾರೋ ಅಳುವುದು, ಅವರ ಕಷ್ಟಗಳನ್ನು ಕೇಳುವುದು ನನಗೆ ಸರಿಯಾಗಿ ಪೂಜೆ ಮಾಡಲು ಆಗ್ತಿಲ್ಲ…….” ಅನ್ನುತ್ತಾನೆ ವಿಜಯೇಂದ್ರ. ಸಹನಾ ಟಿವಿ ಆಫ್‌ ಮಾಡಲು ಹೋಗುತ್ತಿದ್ದಂತೆ ಕರೆಂಟ್ ಕೂಡಾ ಕೈಕೊಡುತ್ತದೆ. ಇದು ದಿನಚರಿಯೇ ಆಗಿಬಿಟ್ಟಿದೆ. ಮತ್ತೆ ನಿಶ್ಶಬ್ದ ಆವರಿಸುತ್ತದೆ. ವಿಜಯೇಂದ್ರನ ಮಂತ್ರೋಚ್ಛಾರ ಮಾತ್ರ ಕೇಳುತ್ತದೆ.

ಪೂಜೆ, ತಿಂಡಿ ಎಂದೆಲ್ಲಾ ಮುಗಿಸಿ ತನ್ನ ಖಾಯಂ ರೈಲನ್ನು ಹಿಡಿಯಲು ರಿಕ್ಷಾಸ್ಟಾಂಡ್‌ಗೆ ನಡೆದ ವಿಜಯೇಂದ್ರ. ಸಂಜೆ ಸಂಘದಲ್ಲಿ ಉಪನ್ಯಾಸಕ್ಕೆ ಬೇರೆ ಹೋಗಬೇಕು. ಬೇಗನೆ ಆಫೀಸ್ ತಲುಪಿದರೆ ಸಂಜೆ ಕೂಡಾ ಬೇಗ ಹೊರಡಬಹುದು. ಉಪನ್ಯಾಸ ನೀಡುವವರು ಉಡುಪಿಯಿಂದ ಬಂದವರು. ಸಾಹಿತ್ಯದ ಬಗ್ಗೆ ಚೆನ್ನಾಗಿ ಮಾತಾಡಬಲ್ಲವರು ಎಂದೆಲ್ಲಾ ಗೆಳೆಯ ಮೋಹನ ಹೇಳಿದ್ದ. ‘ಬಹಳ ದಿನವಾಗಿದೆ ನಾವೆಲ್ಲಾ ಒಟ್ಟಾಗಿ. ಈ ಉಪನ್ಯಾಸದ ನೆಪದಲ್ಲಾದರೂ ನಾವೆಲ್ಲಾ ಒಟ್ಟಾಗಿ ಚಹ ಕುಡಿಯೋಣ ಎಂದು ಇನ್ನಿತರ ಸ್ನೇಹಿತರನ್ನೂ ನಾನು ಬರಹೇಳಿದ್ದೇನೆ. ನೀನೂ ಬೇಗನೆ ಬಾ’ ಎಂದು ಮೋಹನ ಬೇರೆ ಒತ್ತಾಯಿಸಿದ್ದ.

ಆಫೀಸ್‍ಗೆ ಬಂದರೆ ಎಂದಿನಂತೇ ಕಿರಿಕಿರಿ. ನಿನ್ನೆಯಷ್ಟೇ ಎಲ್ಲರೂ ಸರಿಯಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂದು ಮಾಲಕರ ಕ್ಯಾಬಿನ್‌ಗೆ ಕುಳಿತಲ್ಲೇ ತಿಳಿದು ಬರಲು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಹಾಗಾಗಿ ನಿನ್ನೆಯಿಂದ ಆ ಕಡೆ ರೂಮಿನವರು ಇತ್ತ ಬರುವುದು ಕಡಿಮೆಯಾಗಿದೆ. ಅಗತ್ಯವಿರುವಾಗ ಮಾತ್ರ ಬರುತ್ತೇವೆ ಅಂದಿದ್ದಾರೆ ಆ ಕಡೆಯ ಸ್ನೇಹಿತರು.

ಅಕೌಂಟ್ ಸೆಕ್ಷನ್‌ನ ಹರೀಶ್‍ಕುಮಾರ್ ಒಳಬಂದವನೇ “ವಿಜಯ್, ನಮ್ಮ ರಾಮದಾಸ್‌ರು ಅವರ ಮಗಳ ಮದುವೆ ವಿಷಯದಲ್ಲಿ ತುಂಬಾ ಚಿಂತೆಗೀಡಾಗಿದ್ದಂತೆ ಕಾಣುತ್ತದೆ. ಒಂದು ವರ್ಷದಿಂದ ವರನ ಹುಡುಕಾಟ ನಡೆಸಿದ್ದರೂ ಇನ್ನೂ ಯಶಸ್ಸು ಪಡೆದಿಲ್ಲ. ಮೊನ್ನೆ ಅವರ ಮಗಳು ಹೇಳಿದಳಂತೆ – ‘ಅಪ್ಪಾ, ನೀವು ನನ್ನ ಮದುವೆ ಚಿಂತೆ ಬಿಟ್ಟುಬಿಡಿ. ನಾನೇ ವರನ ಆಯ್ಕೆ ಮಾಡುವೆ’ ಅಂದಳಂತೆ. ಅನಂತರ ಇವರ ಚಿಂತೆ ಇನ್ನೂ ಹೆಚ್ಚಾಗಿದೆಯಂತೆ. ಬೇರೆ ಜಾತಿ ಹುಡುಗನ ಬಳಿ ಅವಳ ಓಡಾಟದ ಸುದ್ದಿ ಬಂದಿದೆಯಂತೆ… ಏನು ಮಾಡಬೇಕೋ ತೋಚುತ್ತಿಲ್ಲ ಎನ್ನುತ್ತಿದ್ದಾರೆ. ಇವತ್ತಿನಿಂದ ಒಂದು ವಾರ ರಜೆ ಹಾಕಿದ್ದಾರೆ. ನಮಗೆಲ್ಲ ಇನ್ನೂಹೆಚ್ಚು ಕೆಲಸ ಮಹಾರಾಯ…..” ಎಂದ. ವಿಜಯೇಂದ್ರನಿಗೆ ಬೆಳಗ್ಗೆ ಟಿವಿ ಚ್ಯಾನಲ್‌ನಲ್ಲಿ ಗುರೂಜಿಯವರ ಬಳಿ ಫೋನ್‍ ಕರೆ ಮಾಡಿದವರು ಕಷ್ಟಸುಖ ಹಂಚಿಕೊಳ್ಳುತ್ತಿದ್ದ ದೃಶ್ಯ ಮತ್ತೆ ಎದುರಾಯಿತು……. ಈ ಲವ್, ಮದುವೆ ಎಂದಾಗ ತನ್ನ ಹಳೆಯ ದಿನಗಳು ನೆನಪಾಗುತ್ತದೆ ವಿಜಯೇಂದ್ರನಿಗೆ. ಇದೇ ಆಫೀಸ್‌ನಲ್ಲಿದ್ದ ರೇಖಾ ತನ್ನನ್ನು ಆಕರ್ಷಿಸಿದ್ದ ಆ ದಿನಗಳು ಒಂದು ಕ್ಷಣ ವಿಜಯೇಂದ್ರನ ಮನಸ್ಸಿನಲ್ಲಿ ಹಾದುಹೋಯಿತು. ತನ್ನ ಮದುವೆಗಿಂತ ಮೊದಲಿನ ಸಂಗತಿಯದು. ರೇಖಾ ಒಳ್ಳೆಯ ಮನಸ್ಸಿನ ಹುಡುಗಿ ಆಗಿದ್ದಳು. ಈಗ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿದ್ದಾಳೆ. ಅವಳ ವಿವಾಹಕ್ಕೂ ಎಷ್ಟು ಕಷ್ಟಪಡುತ್ತಿದ್ದರು ಅವಳ ಮನೆಯವರು. ಕೊನೆಗೂ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಇಂಜಿನಿಯರ್ ಹುಡುಗ ಸಿಕ್ಕೇಬಿಟ್ಟ ಅವಳಿಗೆ. ಕಷ್ಟಗಳೇ ಕಾಣದ ಯಾವುದಾದರೂ ಆಫೀಸ್ ಎನ್ನುವುದಿದೆಯೇ….? ರೇಖಾ ಎನ್ನುವ ಆ ಹುಡುಗಿಯನ್ನು ನೆನಪಿಸಿದರೆ…

*****

ಇಷ್ಟಾದರೂ ಇದು ಪೂರ್ತಿ ಲವ್‌ಕತೆ ಹೌದೋ ಅಲ್ಲವೋ ಗೊತ್ತಿಲ್ಲ. ಲವ್‌ಕತೆ ಅಂದರೆ ಸುಳ್ಳು ಕೂಡಾ ಆಗಿರಬಹುದು. ಓದುಗರನ್ನು ಸೆರೆಹಿಡಿದು ಪೂರ್ತಿ ಓದಿಸುವ ಒಂದು ತಂತ್ರವೂ ಯಾಕಾಗಬಾರದು? ಆಲೋಚನೆ ಮಾಡಬೇಕು. ಪ್ರತಿಕ್ರಿಯೆ ಬರಬೇಕು. ಹುಡುಗಿಯೊಬ್ಬಳು ಪ್ರತಿಕ್ರಿಯೆ ನೀಡಿದರೆ ಮಾತ್ರ ಮುಂದಿನ ಕತೆ ತಾನೆ! ಗೊತ್ತು – ಭಯ, ಸಂಕೋಚ ಮಾತು ಕಡಿಮೆ ಮಾಡಿಸಬಹುದು, ಆದರೆ ಪ್ರೀತಿಯನ್ನಲ್ಲ ಎಂದು. ಅವನಿಗೂ ಮದುವೆ ವಯಸ್ಸು. ಕಂಡವರೆಲ್ಲ ಸುಂದರಿಯರ ಹಾಗೆಯೇ ಕಾಣುವುದೂ ತಪ್ಪಲ್ಲ! ಆಗ ತಾನೆ ಆಫೀಸ್‌ಗೆ ಹೊಸತಾಗಿ ಸೇರಿದ ರೇಖಾ ವಿಜಯೇಂದ್ರನನ್ನು ಆಕರ್ಷಿಸಿದ್ದಳು. ನಮ್ಮಲ್ಲಿನ ಖಾಲಿತನ ಮೊದಲು ತುಂಬಿಸಿಕೊಳ್ಳಬೇಕು. ಆಗಲೇ ಜೀವನದ ಮೌಲ್ಯಗಳು ಒಂದಷ್ಟು ಬದಲಾಗುವುದಕ್ಕೆ ಸಾಧ್ಯ. ಆದರೆ ಆಕೆ ಹೆಚ್ಚು ಮಾತೇ ಆಡುವುದಿಲ್ಲ. ಸಂಕೋಚವೇ ಅಥವಾ ತಿರಸ್ಕಾರವೇ…..? ರೇಖಾಳ ಪ್ರವೇಶದಿಂದ ದಿನಚರಿಯಲ್ಲಿ ಪರಿವರ್ತನೆ ಆಗುತ್ತಿರುವುದು ವಿಜಯೇಂದ್ರನ ಗಮನಕ್ಕೂ ಬರುತ್ತಿತ್ತು……

ಆ ದಿನಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಇರಲಿಲ್ಲ ಎನ್ನುವುದೇ ಬಹುದೊಡ್ಡ ಖುಷಿಯಾಗಿತ್ತು ಅಂತ ಈಗ ವಿಜಯೇಂದ್ರನಿಗೆ ಅನ್ನಿಸುತ್ತದೆ. ಒಂದು ದಿನ ದೇವರಿಗೆ ತಾನೇ ಏರಿಸಿದ್ದ ಮಂಗಳೂರ ಮಲ್ಲಿಗೆಯನ್ನು ಫೋಟೋದಿಂದ ತೆಗೆದು ರೇಖಾಳಿಗೆ ಕೊಟ್ಟಿದ್ದ. ‘ಅಯ್ಯೋ, ದೇವರಿಗೆ ಬೇಡವೇ?’ ಎಂದಳು. “ದೇವರಿಗೆ ಇಟ್ಟು ತೆಗೆದಿದ್ದು. ಇದೀಗ ನೈರ್ಮಲ್ಯ. ಇದು ಇನ್ನೊಂದು ದೇವರಿಗೆ” ಅಂದ ವಿಜಯೇಂದ್ರ. ಅವಳು ನಕ್ಕಳು. ಮುದ್ದಾಗಿ ಕಂಡಳು. ಅಷ್ಟು ಹೊತ್ತಿಗೆ ಇನ್ನೂ ಕೆಲವರು ಆಫೀಸ್‌ಗೆ ಬಂದದ್ದರಿಂದ ಹೆಚ್ಚೇನೂ ಮಾತನಾಡಲಾಗಲಿಲ್ಲ! ಪರಿಚಯ ಈಗ ಕೆಲವು ದಿನಗಳದ್ದಾಗಿದೆ. ಅವಳೊಡನೆ ಸಂಜೆ ಎಲ್ಲಾದರೂ ತಿರುಗಾಡೋಣ ಅಂದರೆ… ಸಂಕೋಚ. ಆದರೆ ಡ್ಯೂಟಿ ಟೈಮಲ್ಲೂ ಕನಸು ಕಾಣುತ್ತಿದ್ದ.

ಇದ್ದಕ್ಕಿದ್ದಂತೆ ಒಂದು ದಿನ ರೇಖಾಳು ಆಫೀಸಿಗೆ ರಾಜೀನಾಮೆ ಕೊಡೋ ಸುದ್ದಿ ಮುಟ್ಟಿಸಿದಳು. ಮದುವೆಯಂತೆ, ವರ ದೂರದ ಆಸ್ಟ್ರೇಲಿಯಾದಲ್ಲಿದ್ದಾನಂತೆ. ವಿಜಯೇಂದ್ರನಿಗೆ ಊಹಿಸುವುದಕ್ಕೂ ಆಗಲಿಲ್ಲ. ಅವಳು ಕುಳಿತ ಕುರ್ಚಿ, ಅವಳ ನಗು, ಕೆಲಸದ ಅಚ್ಚುಕಟ್ಟುತನ, ಅದ್ಭುತ ನಿಷ್ಠೆ… ತಾನು ಪ್ರೀತಿಸಿದ್ದು ಅವಳನ್ನೋ ಅಥವಾ ಕೆಲಸದ ಅಚ್ಚುಕಟ್ಟುತನವನ್ನೋ..? ವಿಜಯೇಂದ್ರ ಮರುವಿಮರ್ಶೆ ಮಾಡಲು ಹೊರಟರೆ ಅವಳು ಆಗಲೇ ವಿದಾಯ ಹೇಳಿಯಾಗಿತ್ತು.

“ಏನು ಕೊಡಲಿ?” ಅಂತ ವಿಜಯೇಂದ್ರ ಸಂಕೋಚ ಬಿಟ್ಟು ಕೊನೆಯ ದಿನ ಕೇಳಿದ್ದಕ್ಕೆ ರೇಖಾಳು “ನೀನು ನಿರ್ಮಲ ಮನಸ್ಸಿನಿಂದ ಶುಭಹಾರೈಸು, ಸಾಕು” ಅಂದಿದ್ದಳು. “ಮದುವೆಗೆ ನೀವು ಬರಲೇಬೇಕು. ಆಮಂತ್ರಣ ಕೊಡಲು ಮತ್ತೊಮ್ಮೆ ಬರುವೆ” ಅಂದಳು. “ಎಲ್ಲಾದರೂ ಇರು, ನೀನು ಸುಖವಾಗಿರು….” ವಿಜಯೇಂದ್ರನಿಗೆ ಅಷ್ಟೇ ಹೇಳಲು ಸಾಧ್ಯವಾದದ್ದು ಆಕೆಯ ಎದುರಿಗೆ! ಆಮೇಲೆ ಅವನ ಲವ್‌ಕತೆ ಪುನರಾವರ್ತನೆ ಆಗಲೇ ಇಲ್ಲ.

ವಿಜಯೇಂದ್ರನಿಗೆ ಎಲ್ಲೋ ಓದಿದ್ದು ನೆನಪಿಗೆ ಬಂದು ಧೈರ್ಯ ತಳೆದ. “ಹುಡುಗಿಯರಿಗೆ ಬದಲಿ ಇವೆ, ಪುಸ್ತಕಗಳಿಗೆ ಇಲ್ಲ. ಆಯಾಯ ಪುಸ್ತಕಗಳ ಖುಷಿ ಬೇರೆ ಪುಸ್ತಕಗಳು ನೀಡಲಾರವು.”.

ರೇಖಾಳ ವಿದಾಯ, ಮದುವೆ, ಆಸ್ಟ್ರೇಲಿಯಾ ಪ್ರಯಾಣದ ನಡುವೆ… ವಿಜಯೇಂದ್ರ ಒಂದಷ್ಟು ದಿನ ಗೊಂದಲದಲ್ಲೇ ಇದ್ದ. “ಎಲ್ಲಾ ನಮ್ಮೊಳಗೇ, ನೀವೇ ಎಲ್ಲಾ” ಸಂತರೊಬ್ಬರ ಮಾತು ನೆನೆದು ಎಲ್ಲವನ್ನೂ ಮರೆತ. ಮನುಷ್ಯನಿಗೆ ದೊರೆತ ಪ್ರಕೃತಿಯ ಬಹುದೊಡ್ಡ ಉಡುಗೊರೆ ಎಂದರೆ ‘ಮರೆವು’! ಇಲ್ಲವಾದರೆ ತನ್ನ ತಂದೆ ಸಾವನ್ನಪ್ಪಿರುವ ಘಟನೆ ವಿಜಯೇಂದ್ರನನ್ನು ಈಗಲೂ ತುಂಬಾ ಕಾಡಬೇಕಾಗಿತ್ತು. ದಿನಗಳು ಉರುಳಿದಂತೆ ಬೇಸರದ ಘಟನೆ ಮಾಸುತ್ತಾ ಹೋಗುವ “ಮರೆವು” ಮನುಷ್ಯನಿಗೆ ಆ ದೇವರು ಕೊಟ್ಟ ಅತ್ಯಪೂರ್ವ ಉಡುಗೊರೆ. ಯಾವ ನೋವೂ ಶಾಶ್ವತವಲ್ಲ, ಕೆಲವು ದಿನಗಳ ತನಕ ಮಾತ್ರ. ಈ ರೇಖಾಳ ವಿದಾಯವೂ ಅದಕ್ಕೆ ಹೊರತಾಗಿಲ್ಲ. ಆಕೆ ದೂರಕ್ಕೆ ಹೊರಟುಹೋಗಿದ್ದಳು.

*****

ಮದುವೆ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ಏನಾದರೂ ಅಚ್ಚಳಿಯದ ನೆನಪನ್ನು ತರಿಸಬಹುದು. ಇತ್ತೀಚಿನ ದಿನಗಳಲ್ಲಿ ವಧುಗಳ ತೀವ್ರ ಕೊರತೆ. ಆಧುನಿಕ ಸೌಕರ್ಯಗಳು ಸಾಕಷ್ಟಿವೆಯಾದರೂ ವಿವಾಹದ ಗೊಂದಲಗಳು ಆಗಾಗ ಎಲ್ಲಾದರೂ ಪ್ರಕಟವಾಗುತ್ತಲೇ ಇವೆಯಲ್ಲಾ? ಇತ್ತ ವಿಜಯೇಂದ್ರನಿಗೂ ಮನೆಯಲ್ಲಿ ಮದುವೆ ಪ್ರಸ್ತಾವ ಬಂದಿತ್ತು. ತನ್ನ ಅಕ್ಕ ವಿಮಲಾ ನೋಡಿ ನಿಶ್ಚಯಿಸಿದ್ದ ಸಹನಾಳನ್ನು ಮೆಚ್ಚಿ ವರಿಸಿದ್ದ ವಿಜಯೇಂದ್ರ.

ಅಂದು ಸಂಜೆ ಸಂಘಕ್ಕೆ ಹೋಗಿ ಉಪನ್ಯಾಸ ಮುಗಿದ ಬಳಿಕ, “ವಿಜಯ್, ಉಪನ್ಯಾಸಕರನ್ನು ಊಟಕ್ಕೆ ಕರೆದೊಯ್ಯಿರಿ, ನೀವೂ ಅವರ ಜೊತೆಯಲ್ಲೇ ಊಟ ಮಾಡಿರಿ” ಎಂದು ಪ್ರಕಾಶ್ ಸರ್ ಹೇಳಿದಾಗ – ವಿಜಯೇಂದ್ರ ಕಿಸೆಯಿಂದ ದೊಡ್ಡ ಚೀಟಿ ತೆಗೆದು ತೋರಿಸುತ್ತಾ, ‘ಇವತ್ತು ಅತಿಥಿಗಳನ್ನು ಬೇರೆಯವರು ಊಟಕ್ಕೆ ಕರೆದೊಯ್ಯಲಿ, ನನಗೆ ಇಷ್ಟೊಂದು ಸಾಮಾನುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಇಲ್ಲವಾದರೆ ಮನೆಯಲ್ಲಿ ಹೆಂಡತಿಯ ‘ಉಪನ್ಯಾಸ’ ಕೇಳಬೇಕಾಗುತ್ತದೆ’ ಎಂದ ವಿಜಯೇಂದ್ರ ತಕ್ಷಣ ರೈಲು ಹಿಡಿಯಲು ಹೊರಟೇ ಬಿಟ್ಟ ಸ್ಟೇಷನ್ ಕಡೆಗೆ.

ಚಿಕ್ಕಂದಿನಲ್ಲಿ ಅಜ್ಜಿ ಮನೆಗೋ, ದೇವಸ್ಥಾನಕ್ಕೋ, ರಾತ್ರಿ ಯಕ್ಷಗಾನಕ್ಕೋ ಎರಡು ಮೈಲು ನಡೆದು ಕರಡಿಅಣೆಯನ್ನು ಹತ್ತಿ ಬಸ್ಸು ಹಿಡಿಯುವಾಗ ಏನೂ ಆಗದ ಕಷ್ಟ ಈಗ ಮುಂಬಯಿಯಲ್ಲಿ ಸಂಜೆಗೆ ಲೋಕಲ್ ರೈಲು ಹಿಡಿಯುವಾಗ- ವಿಜಯೇಂದ್ರನಿಗೆ ಆಗುತ್ತಿತ್ತು. ಆಫೀಸ್‌ಗೆ ಹೋಗುವಾಗ, ಅಥವಾ ಆಫೀಸ್‌ನಿಂದ ಮನೆಗೆ ಬರುವಾಗ ದಿನಾ ತನ್ನ ಖಾಯಂ ರೈಲು ಹಿಡಿಯಲು ಮರೆಯುತ್ತಿರಲಿಲ್ಲ. ಇಲ್ಲವಾದರೆ ರೈಲಿನೊಳಗೆ ನುಗ್ಗುವುದು ಕಷ್ಟವಾದ ಸಂಗತಿಯಾಗುತ್ತಿತ್ತು. ವಿಜಯೇಂದ್ರನ ಪರಿಸ್ಥಿತಿ ಕಂಡು, ಸಾಹಿತಿಯೊಬ್ಬರು “ನಿಮ್ಮ ಹೆಗಲಿನ ಬ್ಯಾಗ್‌ಗೆ ಜಯವಾಗಲಿ, ಕುಳಿತ ಸೀಟಿಗೆ ಜಯವಾಗಲಿ” ಎಂದು ಮೊಬೈಲಿಗೆ ಮೆಸೇಜ್ ಮಾಡಿದಾಗ ಒಂದಿಷ್ಟು ಖುಷಿ, ಉತ್ಸಾಹಗೊಳ್ಳುತ್ತಿದ್ದ. ಅದರೆ ರವಿವಾರದ ಹೊರತು ಇತರ ದಿನಗಳಲ್ಲಿ ವಿಜಯೇಂದ್ರನಿಗೆ ರೈಲ್‌ನಲ್ಲಿ ಕೂರಲು ಸೀಟು ಸಿಗುತ್ತಿದ್ದುದೇ ಅಪರೂಪ.

ರೈಲು ಹಿಡಿದು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿದ ವಿಜಯೇಂದ್ರ ದಾರಿಯಲ್ಲಿ ಪರಿಚಯದವರೊಬ್ಬರು ಎದುರಾದರೂ ಇನ್ನೊಂದುಕಡೆ ನೋಡುತ್ತಾ ಅವರಿಂದ ತಪ್ಪಿಸಿಕೊಂಡು ಮನೆಯ ಒಳಗೆ ಬರುವ ಹೊತ್ತಿಗೆ ಸಾಕುಸಾಕಾಗಿತ್ತು. ಯಾವುದೋ ಅತ್ತೆ-ಸೊಸೆ ಧಾರವಾಹಿಯಲ್ಲಿ ಮಗ್ನಳಾಗಿದ್ದ ಹೆಂಡತಿ ಸಹನಾ ಬಾಗಿಲು ತೆರೆಯುತ್ತಿದ್ದಂತೆ “ನಾನು ಹೇಳಿದ ಸಾಮಾನುಗಳು ಬಂದಿವೆ ತಾನೇ?” ಎಂದು ಪತಿಯ ಕೈಯಲ್ಲಿದ್ದ ಚೀಲ ಕಂಡು ಸಮಾಧಾನ ಪಟ್ಟು ತನ್ನ ಕೈಗೆ ತೆಗೆದುಕೊಂಡು ಒಳಗಿಟ್ಟಳು.

ಸಹನಾ ರೆಡಿಮಾಡಿಟ್ಟ ಬಿಸಿನೀರಲ್ಲಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿದ. ಊಟಕ್ಕೆ ಕೂರುವ ಮೊದಲು ಟಿವಿ ಚ್ಯಾನಲ್ ಚೇಂಜ್ ಮಾಡುತ್ತಾ ಎನಿಮಲ್ ಪ್ಲಾನೆಟ್ ನೋಡಿದ. ಹುಲಿಯೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ತಕ್ಷಣ ಚ್ಯಾನಲ್ ಮತ್ತೆ ಬದಲಾಯಿಸಿ ಸಂಸ್ಕಾರ್, ಆಸ್ಥಾ…. ದಲ್ಲಿ ಬರುತ್ತಿರುವ ಪ್ರವಚನ, ಭಜನೆಯನ್ನು ಆಲಿಸಿದ. ಯಾಕೋ ಮನಸ್ಸು ಹಗುರವೆನಿಸಿತು ಈಗ ಅವನಿಗೆ.

ಊಟದ ನಂತರ ಸಹನಾ “ನಿಮಗೊಂದು ವಿಷಯ ಹೇಳಬೇಕಿದೆ. ಇಂದು ಸಂಜೆ ನಿಮ್ಮ ಮೊಬೈಲ್ ಆಫ್ ಇತ್ತು ಯಾಕೆ?”ಎಂದು ಮುಖ ನೋಡಿದಳು.

“ಅದೇ, ಉಪನ್ಯಾಸ ಕೇಳಲು ಹೋಗಲಿಕ್ಕಿದೆ ಎಂದು ಹೇಳಿದ್ದೆನಲ್ಲಾ ಬೆಳಿಗ್ಗೆ, ನಾನು ಮುಂದಿನ ಸಾಲಲ್ಲಿ ಕುಳಿತಿದ್ದೆ. ತೊಂದರೆಯಾಗಬಾರದೆಂದು ಸ್ವಿಚ್ ಆಫ್‌ ಮಾಡಿದ್ದೆ. ಯಾಕೆ?’

“ಅಲ್ಲರೀ, ನಿಮ್ಮ ಚಿಕ್ಕಪ್ಪ, ಚಿಕ್ಕಮ್ಮ ನಾಡಿದ್ದು ಇಲ್ಲಿಗೆ ಬರುತ್ತಿದ್ದಾರೆ. ಪನ್ವೇಲ್‌ನಲ್ಲಿ ಏನೋ ಕೆಲಸವಿದೆಯಂತೆ. ಅದನ್ನು ಮುಗಿಸಿ ನಮ್ಮಲ್ಲಿಗೆ ಬರ್ತಾರಂತೆ. ಮತ್ಸ್ಯಗಂಧದಲ್ಲಿ ಹೊರಟಿದ್ದಾರೆ. ನಿಮ್ಮ ಮೊಬೈಲ್ ಸ್ವಿಚ್‌ಆಫ್ ಇತ್ತು ಅಂತ ನನಗೆ ಕಾಲ್ ಮಾಡಿ ತಿಳಿಸಿದರು.”

“ಹೌದೇ! ಒಳ್ಳೆಯದಾಯ್ತು, ಅವರು ಬಂದರೆ ಊರಿನ ಉಪ್ಪಿನಕಾಯಿ ಮತ್ತು ಹಪ್ಪಳ ತೆಗೆದುಕೊಂಡು ಬರುತ್ತಾರೆ. ಮತ್ತೆ ಆಸ್ತಿ ಪಾಲು ಮಾತನಾಡುವುದಿದೆಯೋ ಏನೋ?… ಈ ಅಣ್ಣ ತಮ್ಮಂದಿರ ಜಗಳ ಈ ಜನ್ಮದಲ್ಲಿ ಸಮಾಪ್ತಿಯಾದರೆ ಸಾಕಿತ್ತು. ಏನು ಬೇಕಾದರೂ ಅವರೇ ಇಟ್ಟುಕೊಳ್ಳಲಿ. ಅಪ್ಪ ಇದ್ದಾಗಲೂ ನಾನೊಮ್ಮೆ ಹಾಗೇ ಹೇಳಿದ್ದೆ. ಆ ಗುಡ್ಡಕ್ಕೂ ಬೆಲೆ ಬಂದಿದೆ ಅಂತ ಗೊತ್ತಾದ ನಂತರವೇ ಎಲ್ಲಾ ದೃಶ್ಯಗಳು ಬದಲಾದದ್ದು. ಗುಡ್ಡ ನೀನು ಇಟ್ಟುಕೋ, ಗುಡ್ದ ಅವನು ಇಟ್ಟುಕೊಳ್ಳಲಿ.. ಹೀಗೆಲ್ಲಾ ಹೇಳುತ್ತಿದ್ದ ಚಿಕ್ಕಪ್ಪನೇ ಈಗ ಗುಡ್ಡದ ಹಿಂದೆ ಬಿದ್ದಿದ್ದಾರೆ. ಅದರ ಇತ್ಯರ್ಥಕ್ಕೆ ಬಂದರೋ ಏನೋ….?” ವಿಜಯೇಂದ್ರನಿಗೆ ಸ್ವಲ್ಪ ಕಿರಿಕಿರಿಯೂ ಆಗತೊಡಗಿತು.

ಇವನ ಕಸಿವಿಸಿಯನ್ನು ಗಮನಿಸಿದ ಸಹನಾ “ನಿಮ್ಮ ಆ ‘ಗುಡ್ಡ’ದ ವಿಷಯವೋ, ಅಥವಾ ಅವರ ಮಗಳ ವಿವಾಹದ ವಿಚಾರದಲ್ಲಿ ಮಾತನಾಡಲೆಂದೋ ಪನ್ವೇಲ್‌ಗೆ ಬಂದದ್ದಿರಬೇಕು. ನೀವು ಒಮ್ಮೆಲೆ ‘ಗುಡ್ಡ ಗುಡ್ಡʼ ಅಂತ ಅದನ್ನೇ ಹೇಳುತ್ತಾ ಇರಬೇಡಿ” ಎಂದಳು.
“ಯಾವುದಕ್ಕೂ ಬರ್ತಾರಲ್ಲ. ನಾನು ಆಫೀಸ್‌ನಿಂದ ಬೇಗ ಹೊರಡ್ತೇನೆ ಆ ದಿನ. ನಾಳೆ ಚಿಕ್ಕಪ್ಪನಿಗೆ ಫೋನ್ ಮಾಡಿ ಎಷ್ಟು ಹೊತ್ತಿಗೆ ಬರ್ತಾರೆ ಅಂತ ವಿಚಾರಿಸ್ತೇನೆ. ಆಫೀಸ್‌ನಲ್ಲೂ ಇತ್ತೀಚೆಗೆ ವಿಪರೀತ ಕೆಲಸ. ಕೆಲವರು ರಜೆ ಹಾಕಿ ಊರಿಗೆ ಅಂತ ಹೋಗಿದ್ದಾರೆ. ನಾಳೆ ಬೇಗ ಹೊರಡ್ತೇನೆ……” ಎಂದ ವಿಜಯೇಂದ್ರ ಮಲಗುವ ತಯಾರಿ ನಡೆಸಿದ.

ಮನುಷ್ಯನಿಗೆ ದೊರೆತ ಪ್ರಕೃತಿಯ ಬಹುದೊಡ್ಡ ಉಡುಗೊರೆ ಎಂದರೆ ‘ಮರೆವು’! ಇಲ್ಲವಾದರೆ ತನ್ನ ತಂದೆ ಸಾವನ್ನಪ್ಪಿರುವ ಘಟನೆ ವಿಜಯೇಂದ್ರನನ್ನು ಈಗಲೂ ತುಂಬಾ ಕಾಡಬೇಕಾಗಿತ್ತು.

ಮರುದಿನ ಬೆಳಿಗ್ಗೆ ಪೂಜೆಗೆ ಹೂ ತರಲು ಬಿಲ್ಡಿಂಗ್‌ನ ಮೆಟ್ಟಿಲಿಳಿದು ಕೆಳಗೆ ಗಾರ್ಡನ್‌ನತ್ತ ಹೋಗಿ ವಾಪಾಸು ಬಂದರೆ ಮೆಟ್ಟಿಲಲ್ಲಿ ಒಂದು ಹೆಗ್ಗಣ ಮೇಲೆ ಬಂದಿತ್ತು. ಅದು ವಿಜಯೇಂದ್ರನನ್ನು ನೋಡಿ ಗುರ್…… ಗುರ್….. ಅಂದಾಗ ಭಯಪಟ್ಟ. ಎಲ್ಲಾದರೂ ಅದು ಗ್ರಹಚಾರಕ್ಕೆ ಕಚ್ಚಿಬಿಟ್ಟರೆ….? ಅಲ್ಲಿ ಹತ್ತು ನಿಮಿಷಗಳ ಕಾಲ ಕಾದು ಕಾದು ಹೇಗಾದರೂ ಶ್ರಮವಹಿಸಿ ಮೆಟ್ಟಿಲಿನಿಂದ ಅದನ್ನು ಹೊರಗೆ ಕಳಿಸಿ ರೂಮಿಗೆ ಬರುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇತ್ತ ಸಹನಾ ಸ್ವಲ್ಪ ಸಿಟ್ಟಿನಿಂದ “ಹೂ ಕೊಯ್ದು ತರಲು ನಿಮಗೆಷ್ಟು ಹೊತ್ತು? ನಾನು ಮೈನ್‌ಡೋರ್ ತೆಗೆದೇ ಇಟ್ಟಿದ್ದೆ. ನೀವು ಬರೋದು ಇಷ್ಟು ತಡ ಆಗುವುದಿದ್ದರೆ ಬಾಗಿಲು ಹಾಕಿಕೊಳ್ಳುತ್ತಿದ್ದೆ.” ವಿಜಯೇಂದ್ರನಿಗೆ ಹೆಗ್ಗಣ ಎಷ್ಟು ಭಯ ತರಿಸಿತ್ತೆಂದರೆ, ಅದೇನಾದರೂ ಮೆಟ್ಟಿಲೇರಿ ತನ್ನ ಮನೆಯೊಳಗೆ ಬಂದಿದ್ದರೆ.. ಮತ್ತೆ ಹೊರಕಳಿಸುವುದು ಅಷ್ಟು ಸುಲಭವಿತ್ತೇ…? ಇನ್ನೊಂದು ಫ್ಲೋರ್ ಅದು ಏರಿದ್ದರೆ…? ಸಹನಾಳಿಗೆ ಆ ಹೆಗ್ಗಣದ ಕತೆ ಹೇಳಿ ಅದರಿಂದ ತಡವಾಯಿತು ಅಂದು, ತಂದಿದ್ದ ಹೂವನ್ನು ತಟ್ಟೆಯಲ್ಲಿರಿಸಿ, ಸ್ನಾನಕ್ಕೆ ಇಳಿದ. ಅನಂತರ ಪೂಜೆ, ತಿಂಡಿ ಮುಗಿಸಿ ಆ ದಿನ ಸ್ವಲ್ಪ ಬೇಗನೆ ಆಫೀಸ್‌ಗೆ ಹೊರಟು ಬಿಟ್ಟ. ಚಿಕ್ಕಪ್ಪನಿಗೆ ಕಾಲ್ ಮಾಡಬೇಕು ಎನ್ನುವುದೂ ಅವನ ತಲೆಯಲ್ಲಿತ್ತು.

ಆಫೀಸ್ ತಲುಪಿದ ವಿಜಯೇಂದ್ರ ಮಧ್ಯಾಹ್ನ ಲಂಚ್ ಟೈಮ್‍ನಲ್ಲಿ ಚಿಕ್ಕಪ್ಪನಿಗೆ ಫೋನ್ ಮಾಡಿದ. “ಚಿಕ್ಕಪ್ಪ, ನಾಳೆ ಎಷ್ಟು ಹೊತ್ತಿಗೆ ನೀವು ಬರುತ್ತೀರಿ ಮನೆಗೆ? ಅಂದ. ಅದಕ್ಕೆ ಅವರು “ವಿಜಯ್, ನಮ್ಮ ಬಂದ ಕೆಲಸ ಮುಗಿಯಿತು. ನಾನೂ, ಚಿಕ್ಕಮ್ಮ ಇವತ್ತು ಸಂಜೆಗೇ ನಿಮ್ಮ ಮನೆಗೆ ಬರುತ್ತೇವೆ, ಆಗಬಹುದೇ? ಮನೆಯಲ್ಲಿ ಸಹನಾ ಇದ್ದಾಳಲ್ಲಾ?” ಅಂದಾಗ – ‘ಆಯ್ತು ಚಿಕ್ಕಪ್ಪ, ಇವತ್ತೇ ಬನ್ನಿ. ಸಹನಾಳು ಮನೆಯಲ್ಲೇ ಇರುತ್ತಾಳೆ. ಎಲ್ಲಿಗೂ ಹೋಗೋದಿಲ್ಲ. ಆದ್ರೆ ನೀವಿಬ್ಬರೂ ಸ್ವಲ್ಪ ಬೇಗನೆ ಹೊರಟು ಬನ್ನಿ. ಮತ್ತೆ ರೈಲು ಹಿಡಿಯಲು ನಿಮಗೆ ಕಷ್ಟವಾದೀತು.’ ಅಂದವನೇ ತಕ್ಷಣ ಮನೆಗೆ ಫೋನ್ ಮಾಡಿ,
“ಸಹನಾ, ಚಿಕ್ಕಪ್ಪನವರು ಇವತ್ತು ರಾತ್ರಿಗೇ ನಮ್ಮನೆಗೆ ಬರುತ್ತಾರಂತೆ, ಅವರು ಬಂದ ಕೆಲಸ ಮುಗಿಯಿತಂತೆ. ಪನ್ವೇಲ್‌ನಿಂದ ಸಂಜೆ ಹೊರಟು ನಮ್ಮಲ್ಲಿಗೆ ಬರುತ್ತಾರೆ. ನೀನು ಅಂಗಡಿ, ತರಕಾರಿ ಅಂತ ಹೊರಗಡೆ ಎಲ್ಲೂ ಹೋಗ್ಬೇಡ. ಅಗತ್ಯವಿದ್ದ ಸಾಮಾನುಗಳನ್ನು ನಾನೇ ಬರುವಾಗ ತರುತ್ತೇನೆ” ಎಂದು ಸೂಚನೆ ಕೊಟ್ಟ. ಸಂಜೆ ತಾನೂ ಬೇಗನೆ ಹೊರಡಬೇಕು ಎಂದು ಆಫೀಸ್‌ನ ಅಗತ್ಯದ ಕೆಲಸಗಳನ್ನು ಬೇಗ ಬೇಗನೇ ಮಾಡತೊಡಗಿದ.

ಸಂಜೆ ಡ್ಯೂಟಿ ಮುಗಿಸಿ ಮತ್ತೆ ರೈಲು ಹಿಡಿದ ವಿಜಯೇಂದ್ರನಿಗೆ ಈಗ ಚಿಕ್ಕಪ್ಪನವರು ಮನೆಗೆ ಬಂದಿರಬಹುದು ಅನಿಸಿತು. ರೈಲೊಳಗೆ ಹಲವು ಕರೆಗಳು ಬಂದಿದ್ದರೂ ಮೊಬೈಲ್ ಎತ್ತಿಕೊಳ್ಳಲಿಲ್ಲ. ಈ ಸಿಮ್‌ಗೆ ಸರಿಯಾಗಿ ರೇಂಜ್ ಸಿಗೋದಿಲ್ಲ. ಹಲೋ ಹೇಳುವಾಗಲೇ ಕಟ್ ಆಗ್ತದೆ. ಆಫೀಸ್‌ನಲ್ಲೂ ಈಗೀಗ ರೇಂಜ್ ಸಿಗೋದಿಲ್ಲ. ಪ್ರಾಮುಖ್ಯತೆ ಇರುವ ಕರೆಗಳು ಬಂದಾಗಲೆಲ್ಲ ಕ್ಯಾಬಿನ್‌ನಿಂದ ಹೊರಗಡೆ ಹೋಗಿ ಮಾತನಾಡಿ ಬರುವ ಸ್ಥಿತಿ ಇದೆ. ‘ರೇಂಜ್ ಸರಿ ಸಿಗುತ್ತಿಲ್ಲ” ಅಂದ್ರೆ “ಏನ್ರೀ ವಿಜಯ್, ಬೇರೆ ಕಂಪೆನಿಯ ಸಿಮ್ ಹಾಕಿಸಿ, ನಿಮಗೆ ಯಾವಾಗಲೂ ಕಾಲ್ ಮಾಡಿದ್ರೆ ಇದೇ ಪರಿಸ್ಥಿತಿ. ನಮ್ಮ ಮೊಬೈಲ್ ನೋಡಿ ಎಲ್ಲೂ ರೇಂಜ್ ಸಿಗ್ತದೆ.. ನೀವೂ ಇದೇ ಕಂಪನಿಯದ್ದು ಹಾಕಿಸಿಕೊಳ್ಳಿ…..” ಇತ್ಯಾದಿ ಸಲಹೆ ಕೊಡುವವರು ಈಗ ಹೆಚ್ಚಾಗಿದ್ದಾರೆ. ಒಮ್ಮೆ ಸಹನಾ ಕೂಡಾ ವಿಜಯೇಂದ್ರನಲ್ಲಿ ಅರ್ಜೆಂಟ್ ಮಾತಾಡಬೇಕೆಂದು ಅಫೀಸ್‌ಗೆ ಫೋನ್ ಮಾಡಿದಾಗ, ಅವನ ಮೊಬೈಲ್‌ನಲ್ಲಿ ರೇಂಜ್ ಸಿಗದೆ ಅವನ ಫೋನ್ ಕಟ್ ಆಗಿದ್ದಕ್ಕೆ ಕೋಪಿಸಿ, ಅವನ ಜೊತೆ ಮುಖ ಊದಿಸಿದ್ದಳು. ಅವಳನ್ನು ಸಮಾಧಾನ ಪಡಿಸಲು ವಿಜಯೇಂದ್ರ ತುಂಬಾ ಸಾಹಸಪಡಬೇಕಾಯಿತು. ಈಗೀಗ ದಿನಾ ಆಫೀಸ್ ತಲುಪಿದ ಬಳಿಕ 3 – 4 ಬಾರಿ ಕ್ಯಾಬಿನ್‌ನಿಂದ ಹೊರ ಬಂದು ಸಹನಾಳಿಗೆ ಕಾಲ್ ಮಾಡುತ್ತಿರುತ್ತಾನೆ. ಕಳೆದ ಅನೇಕ ವರ್ಷಗಳಿಂದ ಇದೇ ನಂಬರ್ ಇರೋದು ಕೂಡ ವಿಜಯೇಂದ್ರನಿಗೆ ನಂಬರ್ ಚೇಂಜ್ ಮಾಡಲು ಹಿಂದೇಟು ಹಾಕುವಂತಾಗಿದೆ.

ಅಂತೂ ಎಂದಿಗಿಂತ ಸ್ವಲ್ಪ ಬೇಗನೆ ರೈಲು ಇಳಿದರೂ ಸ್ಟೇಷನ್ ಹೊರಗಡೆ ರಿಕ್ಷಾ ಹಿಡಿಯಲು ಕ್ಯೂ ಬೇರೆ. ಎಂದಿಗಿಂತಲೂ ಕ್ಯೂ ಸ್ವಲ್ಪ ಹೆಚ್ಚೇ ಇತ್ತು. ತೀರಾ ಅಗತ್ಯದ ಸಾಮಾನುಗಳನ್ನು ಹಿಡಿದುಕೊಂಡು ಮನೆಗೆ ಬಂದರೆ ಆಗಲೇ ಚಿಕ್ಕಪ್ಪ, ಚಿಕ್ಕಮ್ಮ ಮನೆಗೆ ಬಂದಿದ್ದರು. “ಹೇಗಿದ್ದೀರಿ? ಪ್ರಯಾಣ ಕಷ್ಟವಾಯಿತಾ…..?” ಇತ್ಯಾದಿ ಔಪಚಾರಿಕವಾಗಿ ವಿಚಾರಿಸಿ ವಿಜಯೇಂದ್ರ ಸ್ನಾನಕ್ಕೆ ಹೋದ. ಸಹನಾ ಎಲ್ಲರಿಗೂ ರಾತ್ರಿಯ ಊಟಕ್ಕೆ ತಯಾರಿ ನಡೆಸಿದಳು. ಇವಳು ಹಪ್ಪಳ ಕಾಯಿಸಿದರೆ ಎಲ್ಲಾ ಅಡುಗೆ ಮುಗಿದಂತೆ ಎಂದು ಚಿಕ್ಕಮ್ಮನಲ್ಲಿ ಹೇಳಿದ. ಚಿಕ್ಕಮ್ಮ ಅವನಿಗಾಗಿ ತಂದಿದ್ದ ಹಪ್ಪಳ, ಉಪ್ಪಿನಕಾಯಿಯನ್ನು ಸಹನಾಳಲ್ಲಿ ಕೊಟ್ಟರು.

ವಿಜಯೇಂದ್ರ ಅವರ ಜೊತೆಯಲ್ಲಿ ಊಟ ಮಾಡುತ್ತಾ “ನೀವು ಪನ್ವೇಲ್‌ನಲ್ಲಿ ಎಲ್ಲಿ ಉಳಕೊಂಡಿರಿ….?” ಕೇಳಿದಾಗ ಚಿಕ್ಕಪ್ಪ ತಾನು ಬಂದ ವಿಷಯ ತಿಳಿಸಿದರು. ಮಗಳಿಗೆ ಮದುವೆಯ ಮಾತುಕತೆ ನಡೆದಿತ್ತು ಊರಲ್ಲಿ. ಹಾಗೆ ಅಂತಿಮ ನಿರ್ಧಾರ ತಳೆಯುವ ಮೊದಲು ವರನ ಮನೆ ನೋಡಲು ಪನ್ವೇಲ್‌ಗೆ ಬಂದಿದ್ದರು. ಹುಡುಗನ ಕಡೆಯವರು ಚಿಕ್ಕಮ್ಮನಿಗೆ ದೂರದ ಸಂಬಂಧಿ ಕೂಡಾ. “ಸದ್ಯಕ್ಕೆ ಹುಡುಗ ಆಗಬಹುದು ಎಂದು ನಿರ್ಧರಿಸಿದ್ದೇವೆ. ಇನ್ನು ಊರಿಗೆ ಹೋದ ಮೇಲೆ ನಿಶ್ಚಯಿಸುತ್ತೇವೆ.” ಎಂದರು ಚಿಕ್ಕಪ್ಪ.

“ನಾವೂ ಇದೇ ವಿಷಯ ಇರಬಹುದೆಂದು ಊಹಿಸಿದ್ದೆವು ಚಿಕ್ಕಪ್ಪಾ.” ಎಂದ ವಿಜಯೇಂದ್ರ. ಈಗ ಚಿಕ್ಕಪ್ಪ ಮಾತು ಮುಂದುವರಿಸಿ, “ನಾವು ನಿನ್ನಲ್ಲಿಗೆ ಬಂದ ಉದ್ಧೇಶ ಬೇರೆ ಇದೆ ವಿಜಯ್. ಆ ಬಗ್ಗೆ ನಾಳೆ ಸವಿಸ್ತಾರವಾಗಿ ಮಾತನಾಡೋಣ” ಎಂದಾಗ ವಿಜಯ್ ಮತ್ತು ಸಹನಾ ಇಬ್ಬರೂ ಇದು ಜಾಗದ ವಿಷಯವೇ ಇರಬೇಕೆಂದು ಊಹಿಸಿದರು. ಊಟದ ಬಳಿಕ ಸಹನಾ ಹಾಲ್ ವರೆಸಿ ಕ್ಲೀನ್ ಮಾಡಿ, ಚಿಕ್ಕಪ್ಪ, ಚಿಕ್ಕಮ್ಮನವರಿಗೆ ಹಾಸಿಗೆ ಹಾಸಿ ಕೊಟ್ಟಳು. ವಿಜಯ್‌ಗೆ ಸುಸ್ತಾಗಿದ್ದರಿಂದ ನಿದ್ದೆ ಆವರಿಸಿದಂತಾಗಿ ಮಲಗುವ ತಯಾರಿ ನಡೆಸಿದ. ಸಹನಾ ಮತ್ತೆ ಟಿ,ವಿ. ಆನ್ ಮಾಡಿ ಸ್ವಲ್ಪ ಹೊತ್ತು ಹಳೆಯ ಹಿಂದಿ ಸಾಂಗ್ಸ್ ನೋಡಲು ಕುಳಿತಳು.

*****

ಮರುದಿನ ವಿಜಯೇಂದ್ರ ಆಫೀಸ್‍ಗೆ ಫೋನ್ ಮಾಡಿ ‘ಸ್ವಲ್ಪ ಅಗತ್ಯದ ಕೆಲಸವಿದೆ, ಇಂದು ಬರಲಾಗುವುದಿಲ್ಲʼವೆಂದು ಇನ್‍ಚಾರ್ಜ್‍ಗೆ ತಿಳಿಸಿದ. ಚಿಕ್ಕಪ್ಪ, ಚಿಕ್ಕಮ್ಮ ಅಂದು ರಾತ್ರಿಯ ಟ್ರೈನ್‌ಗೆ ಮಂಗಳೂರಿಗೆ ಹೊರಡುತ್ತಿದ್ದಾರೆ. ಅಲ್ಲದೆ ಅವರನ್ನು ವಿ.ಟಿ. ಸ್ಟೇಷನ್ ತನಕ ಬಿಟ್ಟುಬರಬೇಕು, ಚಿಕ್ಕಪ್ಪ ಬೇರೆ ಮಾತನಾಡಲಿಕ್ಕಿದೆ ಎಂದು ಹೇಳಿದ್ದಾರೆ ಎಂದೆಲ್ಲಾ ಯೋಚಿಸಿ ರಜೆ ಮಾಡಿದ್ದ.

ಬೆಳಗ್ಗಿನ ಸ್ನಾನ, ಪೂಜೆ, ತಿಂಡಿ.. ಇತ್ಯಾದಿಗಳು ಮುಗಿದು ಚಿಕ್ಕಪ್ಪ ಹಾಲ್‌ನಲ್ಲಿ ಕುಳಿತರು. ಸಹನಾ ಮತ್ತು ಚಿಕ್ಕಮ್ಮ ಕಿಚನ್‌ನಲ್ಲಿ ವಿವಿಧ ರೀತಿಯ ಅಡುಗೆಯ ಬಗ್ಗೆ ಚರ್ಚಿಸುತ್ತಿದ್ದರು.

ಚಿಕ್ಕಪ್ಪ ದೈನಿಕ ಓದುತ್ತಿದ್ದರು. ವಿಜಯ್‌ಗೆ ಕಣ್ಣೆದುರು ಮತ್ತೆ ಊರಿನ ಆ ಗುಡ್ಡದ ದೃಶ್ಯ ಕಾಣಿಸಿತು. ಅದು ಪಾಲಾದರೆ ತುಂಡಾದ ಗುಡ್ಡದ ಚಿತ್ರಣ ಹೇಗಿರಬಹುದು…? ಎಂದು ಊಹಿಸುತ್ತಿದ್ದ.

ವಿಜಯೇಂದ್ರನಿಗೆ ಆ ಗುಡ್ಡದ ಮೇಲಂತೂ ಅಪಾರ ಪ್ರೀತಿ, ಸೆಳೆತ. ಆ ಗುಡ್ಡಕ್ಕೆ ತನ್ನದೇ ಆದ ಸ್ಥಾನ ಊರಲ್ಲಿದೆ. ಹರಕೆ ಬಯಲಾಟದ ದಿನ ‘ದೇವೀ ಮಹಾತ್ಮೆ’ ಪ್ರಸಂಗ ಇದ್ದರೆ ‘ಮಹಿಷಾಸುರ’ ಪಾತ್ರಧಾರಿ ಆ ಗುಡ್ಡದಿಂದ ಇಳಿದು ಬರುತ್ತಿದ್ದ ದೃಶ್ಯ ಅದ್ಭುತವಾಗಿತ್ತು. ‘ಹಿರಣ್ಯಾಕ್ಷ ವಧೆ’ಯಲ್ಲಿ ‘ವರಾಹ’ ಪಾತ್ರವೂ ಆ ಗುಡ್ಡದಿಂದಲೇ ಇಳಿದು ರಂಗಸ್ಥಳಕ್ಕೆ ಬರುತ್ತಿದ್ದ ಕಾಲವೊಂದಿತ್ತು. ಮಡಲಿನ ಪಂಜು ಹಿಡಿದ ಊರಿನ ಮಕ್ಕಳೆಲ್ಲಾ ಆ ‘ವರಾಹ’ ಪಾತ್ರಧಾರಿಯೊಂದಿಗೆ ತಾವೂ ಕುಣಿಯುತ್ತಾ ರಂಗಸ್ಥಳದತ್ತ ಬರುತ್ತಿದ್ದ ದೃಶ್ಯವನ್ನೂ ವಿಜಯ್ ಕಣ್ಣೆವೆಮುಚ್ಚದೇ ನೋಡುತ್ತಾ ಪುಳಕಗೊಳ್ಳುತ್ತಿದ್ದ. ಆ ಗುಡ್ದವೊಂದು ಈ ಅಸುರ ಪಾತ್ರಧಾರಿಗಳಿಗೆ ‘ಶೋಭೆ’ ಹೆಚ್ಚಿಸುತ್ತಿತ್ತು. ತಾನು ಚಿಕ್ಕವನಿದ್ದಾಗ ಮನೆಗೆ ಬಂದ ನೆಂಟರ ಮಕ್ಕಳ ಜೊತೆಯಲ್ಲಿ ಆ ಗುಡ್ಡ ಏರಿ ಗೇರುಹಣ್ಣು, ಕರಂಡೆ, ಕೇಪಳ ಹಣ್ಣು ಇತ್ಯಾದಿಗಳನ್ನು ಮುಷ್ಠಿತುಂಬಾ ಕೊಯ್ದು, ತೊಟ್ಟೆಗೆ ಹಾಕಿ ಎಲ್ಲರೂ ಹಂಚಿ ತಿನ್ನುತ್ತಿದ್ದುದನ್ನು ಮರೆತಿಲ್ಲ. ಅಲ್ಲಿನ ನಿಶ್ಶಬ್ದ, ಪ್ರಶಾಂತ ವಾತಾವರಣ, ಗುಡ್ದದೆತ್ತರದ ನೀಲಿ ಆಗಸದಲ್ಲಿ ತರತರದ ಹಿಂಡು ಹಕ್ಕಿಗಳ ಹಾರಾಟವನ್ನು, ಸಂಜೆ ಸೂರ್ಯಾಸ್ತದ ತನಕ ಅಲ್ಲೇ ಕುಳಿತು ದೂರದಲ್ಲಿ ಹರಿಯುವ ನದಿಯ ಸೊಬಗನ್ನೂ ವೀಕ್ಷಿಸುತ್ತಿದ್ದರು. ಒಟ್ಟಿನಲ್ಲಿ ವಿಜಯೇಂದ್ರ ಆ ಗುಡ್ಡ ತನಗೇ ಸಂಬಂಧಪಟ್ಟಂತೆ ಸಂಭ್ರಮಿಸುತ್ತಿದ್ದ ಆ ದಿನಗಳಲ್ಲಿ.

ಆವಾಗ ಊರಿಗೆ ಬಸ್ಸು ಹೆಚ್ಚು ಬರುತ್ತಿರಲಿಲ್ಲ. ಗುಡ್ಡದ ಇನ್ನೊಂದು ಬದಿಗೆ ನಡೆದು ಹೋಗಬೇಕು. ಅಲ್ಲಿ ಗಂಟೆಗೊಂದು ಬಸ್ಸು ಮಂಗಳೂರಿಗೆ ಓಡುತ್ತಿತ್ತು. ಕೆಲವೊಮ್ಮೆ ಗುಡ್ಡದ ತುದಿಯಲ್ಲಿದ್ದಾಗ ಬಸ್ಸು ಹೋಗುತ್ತಿದ್ದುದನ್ನು ನೋಡುವಾಗ “ಛೇ, ಇನ್ನು ಎಷ್ಟು ಹೊತ್ತು ಕಾಯಬೇಕಲ್ಲಾ ಇನ್ನೊಂದು ಬಸ್ಸಿಗಾಗಿ? ಎಂದು ಕಸಿವಿಸಿಯಾಗುತ್ತಿತ್ತು. ಈಗ ಹಾಗೇನಿಲ್ಲ. ಊರಿನ ಅಂಗಡಿಗಳ ನಡುವೆಯೇ ಹದಿನೈದು ನಿಮಿಷಗಳಿಗೊಂದು ಬಸ್ಸು ಹಾದುಹೋಗುತ್ತದೆ. ಯಾರೂ ಹೆಚ್ಚು ನಡೆಯಬೇಕಾಗಿಲ್ಲ. ಗುಡ್ಡಕ್ಕೂ ಬೇಲಿ ಬಿದ್ದಿದೆ. ಆ ಕಡೆ ಬಹುರಾಷ್ಟ್ರೀಯ ಕಂಪೆನಿ ಬಂದದ್ದರಿಂದ ಈಗೀಗ ಊರವರೆಲ್ಲಾ ಬಾಡಿಗೆ ರೂಮುಗಳನ್ನು ಕಟ್ಟಿಸುವುದೊಂದೇ ಕೆಲಸದಲ್ಲಿ ನಿರತರಾಗಿದ್ದಾರೆ. ಊರಲ್ಲೆಲ್ಲಾ ಉತ್ತರಭಾರತದ ಅಪರಿಚಿತರು ತುಂಬಿ ಹೋಗಿದ್ದಾರೆ. ಶೌಚದ ನೀರು ಗದ್ದೆಗಳಲ್ಲಿ ಹರಿದು ಹೋಗುತ್ತಿವೆ. ಹೇಗೂ ಕೃಷಿ ಇಲ್ಲ, ಇದ್ದ ಗದ್ದೆಗಳಲ್ಲೆಲ್ಲ, ತಾತ್ಕಾಲಿಕ ಶೆಡ್‌ಗಳು! ಕಂಪೆನಿಯ ಕೆಲಸಗಾರರಿಗೆಲ್ಲಾ ಅದೇ ರೂಮುಗಳು ಸಾಕಾಗುತ್ತಿವೆ. ಈಗ ಎಲ್ಲರ ಕಣ್ಣು ಆ ‘ಗುಡ್ಡʼದ ಮೇಲೆ. ಅಲ್ಲೊಂದಿಷ್ಟು ರೂಮು ಕಟ್ಟಿಬಿಟ್ಟರೆ ಒಳ್ಳೆಯ ಆದಾಯ ತಿಂಗಳು ತಿಂಗಳು ಬರುಬಹುದಾಗಿದೆ. ಹಾಗೆ ಅನೇಕರು ಈಗ ಆ ‘ಗುಡ್ಡ’ವನ್ನು ಮಾರುತ್ತೀರಾ?” ಅಂತ ಕೇಳಲು ಶುರುಮಾಡಿದ್ದಾರೆ…

ತನ್ನ ಬಾಲ್ಯದ ದಿನಗಳ ‘ಗುಡ್ಡ’ದ ಮೇಲಿನ ಸೆಳೆತವನ್ನು ವಿಜಯೇಂದ್ರ ಮೆಲುಕು ಹಾಕುತ್ತಿದ್ದರೆ, ಇತ್ತ ಚಿಕ್ಕಪ್ಪ ಗುಡ್ಡ ದ ಈಗಿನ ಕತೆಯನ್ನು ಹೇಳುತ್ತಿದ್ದರು. ಕತೆ ಕೇಳಿಸಿಕೊಂಡ ವಿಜಯೇಂದ್ರನಿಗೆ ಗುಡ್ಡದ ಈಗಿನ ಅಸ್ತಿತ್ವವೇನು? ಎಂಬ ಬಗ್ಗೆ ಗೊಂದಲವೇ ಆಯಿತು. “ಅಲ್ಲಿ ರೂಮುಗಳನ್ನು ಕಟ್ಟಿಸಲು ಬಿಲ್ಡರ್‍ಗೇ ಅದನ್ನು ಮಾರುವುದೋ? ಅಥವಾ ಕೇವಲ ರೂಮುಗಳನ್ನು ಕಟ್ಟಿಸಿ ನಾವೇ ಬಾಡಿಗೆಗೆ ಕೊಡುವುದೋ? ಅಣ್ಣನಿಲ್ಲದ್ದರಿಂದ ನಿನ್ನಲ್ಲೂ ಒಂದು ಮಾತು ಕೇಳುತ್ತಿದ್ದೇನೆ. ಮೈಸೂರ್ ಚಿಕ್ಕಪ್ಪ ನಿನ್ನಲ್ಲೇ ಕೇಳಲು ಹೇಳಿದ್ದಾನೆ. ಏನೆನ್ನುವೆ ವಿಜಯ್?” ಕೇಳಿದರು ಚಿಕ್ಕಪ್ಪ.

‘ಚಿಕ್ಕಪ್ಪಾ ನೀವು ಹೇಗೆ ನಿರ್ಧಾರಕ್ಕೆ ಬರುತ್ತೀರೋ ಹಾಗೆ. ಆದರೆ ಆ ಬಾಡಿಗೆ ರೂಮುಗಳಿಗೆ ಯಾರ್ಯಾರು ಬರ್ತಾರೊ..? ಅವರಲ್ಲಿ ಅಪರಾಧ ಪ್ರವೃತ್ತಿಯವರಿದ್ದರೆ ಹೇಗೆ ಪತ್ತೆ ಹಚ್ಚುವುದು…? ಅದೆಲ್ಲಾ ಸ್ವಲ್ಪ ರಿಸ್ಕ್‌ನ ಕೆಲಸವೆಂದೇ ನನಗನಿಸುವುದು. ನಾವು ಗುಡ್ಡವನ್ನು ಬಿಲ್ಡರ್‍ಗೆ ಮಾರುವುದೇ ಒಳ್ಳೆಯದೆಂದು ನನಗನಿಸುತ್ತದೆ…”ಎಂದರೂ ವಿಜಯೇಂದ್ರನಿಗೆ ಮನಸ್ಸಿನಲ್ಲಿ ಆ ಗುಡ್ಡ ಬೇರೆಯವರದ್ದಾಗುತ್ತದಲ್ಲಾ ಎಂಬ ಬೇಸರವೂ ಬಂತು..

“ಏನೇ ಆಗಲಿ, ಮುಂದಿನವಾರ ಈ ಬಗ್ಗೆ ಸರಿಯಾಗಿ ನಿರ್ಧರಿಸುವಾ. ನೀನೊಮ್ಮೆ ಊರಿಗೆ ಬಂದು ಹೋಗಬೇಕು. ಮೈಸೂರ್ ಚಿಕ್ಕಪ್ಪ ಕೂಡ ಬರ್ತಾರಂತೆ. ಆಸ್ತಿ ಪಾಲು ಮಾಡಿಬಿಡೋಣ ಈ ಸಲ. ನನಗೂ ಮಗಳು ರಜನಿಯ ಮದುವೆಗೆ ಸ್ವಲ್ಪ ಹಣದ ಅಗತ್ಯವಿದೆ. ಗುಡ್ಡವನ್ನು ಬಿಲ್ಡರ್‍ಗೇ ಮಾರೋಣ…” ಮಾತುಕತೆ ಮುಂದುವರಿಯುತ್ತಿದ್ದಂತೆ ಮಧ್ಯಾಹ್ನವಾಯಿತು.

ಸಹನಾ ಸ್ಪೆಷಲ್ ಆಗಿ ತಯಾರಿಸಿದ ಬೋಂಡಾ, ಹಾಗೂ ಗೋಧಿ ಪಾಯಸದ ಜೊತೆ ರುಚಿಯಾದ ಊಟ ಬಡಿಸಿದಳು. ಚಿಕ್ಕಪ್ಪ, ಚಿಕ್ಕಮ್ಮ ಅವಳ ಅಡುಗೆಯನ್ನು ತುಂಬಾ ಹೊಗಳಿದರು. ಚಿಕ್ಕಪ್ಪ ವಿಜಯ್‌ನೊಂದಿಗೆ, “ಸಂಜೆ ನಾವು ಬೇಗ ಹೊರಡುತ್ತೇವೆ. ವಿ.ಟಿ.ಯಲ್ಲಿ ನಾವು ಟ್ರೈನ್ ಹಿಡಿಯಬೇಕು.” ಎಂದರು. ವಿಜಯ್ “ಚಿಕ್ಕಪ್ಪಾ ನಾನೂ ನಿಮ್ಮನ್ನು ಬಿಡಲು ವಿ.ಟಿ. ಸ್ಟೇಷನ್ ತನಕ ಬರುತ್ತೇನೆ. ರಾತ್ರಿಗೆ ಇಲ್ಲಿಯ ಲೋಕಲ್ ಟ್ರೈನ್ ಹಿಡಿದು ನೀವಿಬ್ಬರೇ ಅಲ್ಲಿಯ ತನಕ ಹೋಗೋದು ಬೇಡ.” ಎಂದ. ಮಾತಿನ ನಡುವೆ ಬೇಗನೆ ಸಂಜೆಯಾಯ್ತು.

ವಿ.ಟಿ.ಗೆ ಸಂಜೆ ಏಳಕ್ಕೇ ಹೊರಟರು. ಸಹನಾ ರಾತ್ರಿಯ ಊಟದ ಬದಲಿಗೆ ಅವರಿಗೆ ಚಪಾತಿ, ಹಾಗೂ ಪಲ್ಯದ ಪ್ಯಾಕೆಟ್ ಕಟ್ಟಿಕೊಟ್ಟಳು. “ಇದನ್ನು ನಾವು ರಾತ್ರಿ ರೈಲಲ್ಲಿ ತಿನ್ನುತ್ತೇವೆ. ಇಷ್ಟು ಬೇಗ ಬೇಡ” ಎಂದಿದ್ದರು ಚಿಕ್ಕಮ್ಮ. ವಿ.ಟಿ. ಸ್ಟೇಷನ್‌ನಲ್ಲಿ ಅವರನ್ನು ಮಂಗಳೂರು ರೈಲು ಹತ್ತಿಸಿದ ವಿಜಯೇಂದ್ರ ವಾಪಾಸು ಮನೆಗೆ ಬರುವಾಗ ಗಂಟೆ ಹನ್ನೊಂದು ದಾಟಿತ್ತು.

*****

ವಾರ ಕಳೆಯಿತು. ವಿಜಯೇಂದ್ರ ‘ನಾನೊಮ್ಮೆ ಊರಿಗೆ ಹೋಗಿಬರುತ್ತೇನೆ ಸಹನಾ. ಬೇಕಾದ್ರೆ ನೀನೂ ಜೊತೆಗೆ ಬಾ” ಎಂದ. “ನಿಮಗೆ ಈಗಲೇ ಯಾಕೆ ಇಷ್ಟೊಂದು ಆತುರ? ನಿಮ್ಮ ಚಿಕ್ಕಪ್ಪ ಮೊನ್ನೆಯಷ್ಟೇ ಊರಿಗೆ ಹೋಗಿದ್ದಾರೆ. ಅವರು ವಿಷಯ ಏನೆಲ್ಲಾ ಆಯಿತು? ಎಷ್ಟೆಲ್ಲಾ ಮುಂದುವರಿಯಿತು? ಎಂದು ತಿಳಿಸಿದ ಮೇಲಷ್ಟೇ ಹೊರಡಬಾರದೇ? ಅವರೊಂದು ನಿರ್ಧಾರಕ್ಕೆ ಬರಲಿ. ಅವಸರವೇನು ನಿಮಗೆ?” ಎಂದಳು. ಸ್ವಲ್ಪ ಹೊತ್ತು ಬಿಟ್ಟು “ಸರಿ. ನಾನೂ ನಿಮ್ಮೊಡನೆ ಊರಿಗೆ ಬರುತ್ತೇನೆ. ನನಗೆ ಅಮ್ಮನನ್ನು ಕಾಣಬೇಕು. ತುಂಬಾ ದಿನಗಳಾಗಿವೆ. ನೀವು ಎಲ್ಲಾ ವಿಲೇವಾರಿ ಆದ ನಂತರ ಅಮ್ಮನ ಮನೆಗೆ ಬಂದರೆ ಸಾಕು….” ವಿಜಯೇಂದ್ರ ಹೆಂಡತಿಯ ಮುಖ ನೋಡಿದ.

ವಾರ ಕಳೆಯುವಷ್ಟರಲ್ಲಿ ಚಿಕ್ಕಪ್ಪ ಹೇಳಿದಂತೆಯೇ ಕಾಲ್ ಮಾಡಿದರು. “ನಮ್ಮ ಗುಡ್ಡವನ್ನು ಬಿಲ್ಡರ್‍ಗೆ ಮಾರುವ ಅಗತ್ಯವೇ ಇಲ್ಲ. ಅದನ್ನು ಬಹುರಾಷ್ಟ್ರೀಯ ಕಂಪೆನಿಯವರೇ ಖರೀದಿಸುತ್ತಿದ್ದಾರೆ. ಹಾಗಾಗಿ ಒಳ್ಳೆಯ ರೇಟ್ ಸಿಗಲಿದೆ. ರಗಳೆ ಇಲ್ಲ. ವಾರದೊಳಗೆ ಎಲ್ಲ ಇತ್ಯರ್ಥವಾಗುವುದು. ನೀನು ತಕ್ಷಣ ಹೊರಟು ಬಾ” ಎಂದರು.

ಅಂದು ರಾತ್ರಿ ವಿಜಯೇಂದ್ರ ಬಹಳ ಹೊತ್ತು ನಿದ್ರಿಸಲಿಲ್ಲ. ಬೆಳಗ್ಗೆ ಎದ್ದೊಡನೆ ಸಹನಾಳ ಬಳಿ “ನಾವು ನಾಳೆನೇ ಊರಿಗೆ ಹೊರಡೋಣ, ನಾನು ಒಂದು ವಾರ ರಜೆ ಹಾಕುತ್ತೇನೆ. ಇಂದೇ ಸೀಟ್ ರಿಸರ್ವೇಷನ್ ಮಾಡಿಸಿ ಬರುತ್ತೇನೆ” ಎಂದ. ಸಹನಾಗೆ ವಿಸ್ಮಯ. “ನಿಮ್ಮನ್ನು ಚಿಕ್ಕಪ್ಪ ಮುಂದಿನ ವಾರ ಬರಹೇಳಿದ್ದು. ಇಷ್ಟು ಬೇಗ ಹೋಗುವ ಅಗತ್ಯವಿದೆಯೇ? ನಿಮಗೆ ಆಫೀಸ್‌ನಲ್ಲಿ ಕೆಲಸದ ಒತ್ತಡ ಹೆಚ್ಚಿದೆ ಅಂದಿದ್ದೀರಿ. ರಜೆ ಸಿಗುತ್ತದಾ? ಯಾಕೆ ನಿಮಗೆ ಇಷ್ಟೊಂದು ಆತುರ?” ಒಂದೂ ತಿಳಿಯದೆ ಕೇಳಿದಳು.

“ಸಹನಾ, ನನಗೆ ಆದಷ್ಟು ಬೇಗ ಊರಿಗೆ ಹೋಗಲೇ ಬೇಕು. ಒಮ್ಮೆ ಆ ಗುಡ್ಡವನ್ನು ಹತ್ತಬೇಕು. ಅದರ ತುದಿಯಲ್ಲಿ ನಿಂತು ಇಡೀ ಊರನ್ನೊಮ್ಮೆ ಕಾಣಬೇಕು. ಆ ‘ಗುಡ್ಡ’ ವನ್ನು ಕಂಪೆನಿಯವರು ಖರೀದಿಸುತ್ತಾರಂತೆ. ನಂತರ ಅದಕ್ಕೆ ದೊಡ್ಡ ಗೋಡೆ ಕಟ್ಟುತ್ತಾರೆ. ಅದನ್ನು ನೆಲಸಮ ಮಾಡುತ್ತಾರೆ. ನಾನು ಊರಿಗೆ ಹೋಗುವುದು ತಡವಾದರೆ ಮತ್ತೆ ನನಗೆ ಆ ‘ಗುಡ್ಡ’ ಹತ್ತುವ ಭಾಗ್ಯ ಸಿಗಲಾರದು…. ನಾನು ಆದಷ್ಟು ಬೇಗ ಹೋಗಿ ಆ ‘ಗುಡ್ಡ’ ಹತ್ತಿ ತುಂಬಾ ಹೊತ್ತು ಅಲ್ಲಿದ್ದು ಬರಬೇಕು…… ಅಲ್ಲಿನ ಕರಂಡೆ, ಕೇಪಳ ಹಣ್ಣು, ಗೇರುಹಣ್ಣು ಕಿತ್ತು ಮತ್ತೊಮ್ಮೆ ತಿಂದು ಬರಬೇಕು…” ಎಂದೆಲ್ಲಾ ಹೇಳುತ್ತಲೇ ಹೋದ ವಿಜಯೇಂದ್ರ. ಸಹನಾ ಒಮ್ಮೆಗೇ “ರೀ… ನಾನೂ ನಿಮ್ಮೊಂದಿಗೆ ‘ಗುಡ್ಡ’ಕ್ಕೆ ಬರುತ್ತೇನೆ. ನನಗೂ ನಿಮ್ಮೂರಿನ ಚಂದ ನೋಡುವ ಆಸೆಯಾಗಿದೆ. ಇವತ್ತೇ ಟಿಕೆಟ್ ತನ್ನಿ…” ಎಂದಳು.

ವಿಜಯೇಂದ್ರ ಬೇಗ ಆಫೀಸ್‌ಗೆ ಹೋದ. ರಜೆ ಮಾಡೋದನ್ನು ತಿಳಿಸಿದ. ರೈಲು ಟಿಕೇಟ್ ಪಡೆಯಬೇಕಿದೆ. ಮಧ್ಯಾಹ್ನ ಆಸ್ರ್ಟೇಲಿಯಾದಿಂದ ರೇಖಾಳ ಕಾಲ್ ಇಡೀ ಆಫೀಸ್‌ನಲ್ಲಿ ಸುದ್ದಿ. ನಾಳೆ ಮುಂಬಯಿಗೆ ಬರ್ತಿದ್ದಾಳಂತೆ. ಒಂದು ವಾರ ಇರ್ತಾಳಂತೆ. ನಾಡದು ಆಫೀಸ್‌ಗೆ ಬರ್ತಾಳಂತೆ… ಕೆಲವರು ವಿಜಯೇಂದ್ರನ ಮುಖ ನೋಡಿದರು.

ವಿಜಯೇಂದ್ರ ಪುಳಕಗೊಳ್ಳಲಿಲ್ಲ. ಅವನಿಗೆ ಗುಡ್ಡ ನೋಡೋದೇ ಮಹತ್ವವಾಗಿತ್ತು. ಆತ ರೈಲ್ ಟಿಕೇಟ್‌ಗಾಗಿ ಯಾರಿಗೋ ಕಾಲ್ ಮಾಡುತ್ತಿದ್ದ…’ ನಾಳೆಗೆ ಎರಡು ಸೀಟ್ ಬೇಕು’ ಎಂದು.