ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ ಎಂಬಂತೆ ಇರುತ್ತಿದ್ದರು. ಆಗೆಲ್ಲ ಅವಳಿಗೆ ಗಾಡಿ ಜರ್ಕ್ ಹೊಡೆದಂತೆ ಆಗುತ್ತಿತ್ತು. ಹೇಗಾದರೂ, ಕೆಲವೊಮ್ಮೆ, ಒಬ್ಬ ಒಳ್ಳೆಯ ವ್ಯಕ್ತಿ ಎಲ್ಲಿಯೂ ಇರುತ್ತಾನೆ. ಅವಳ ಕಷ್ಟವನ್ನು ನೋಡಿ, ಅಂಥವನೊಬ್ಬ ಸುತ್ತಲೂ ಬಂದು ತನ್ನ ಟೋಪಿಯನ್ನು ತೆಗೆದು ತಲೆ ಕೆಳಗೆ ಹಾಕಿ ‘ಸಹಾಯ ಮಾಡಬಹುದೇ’ ಎಂದು ಕೇಳುತ್ತಿದ್ದ.
ಆರ್ ವಿಜಯರಾಘವನ್  ಅನುವಾದಿಸಿದ ಎವನ್ ಎಸ್ ಕಾನಲ್ ಬರೆದ ಕತೆ

 

ಪಾರ್ಕಿಂಗ್

ಮಿಸ್ಟರ್ ಬ್ರಿಡ್ಜ್ ಅವಳ 47 ನೇ ಹುಟ್ಟುಹಬ್ಬದಂದು ಆಕೆಗೆ ನೀಡಿದ ಕಪ್ಪು ಲಿಂಕನ್ ತುಂಬಾ ಉದ್ದವಾಗಿತ್ತು. ಅವಳು ಅದನ್ನು ಸದಾ ರೈಲೊಂದನ್ನು ಓಡಿಸಿದಂತೆ ಎಚ್ಚರಿಕೆಯಿಂದ ಓಡಿಸುತ್ತಿದ್ದಳು. ಅವಳ ಹಿಂದೆ ವಾಹನ ಓಡಿಸುವ ಜನರು ಯಾವಾಗಲೂ ಅವಳ ನಿಧಾನಕ್ಕೆ ಬೇಸತ್ತು ಒಂದೇ ಸಮ ಹಾರನ್ ಗಳನ್ನು ಬಜಾಯಿಸುತ್ತಿದ್ದರು. ಹಾಗೆಯೇ ಅವರು ಅವಳನ್ನು ದಾಟಿ ಹೋಗುವಾಗ ತಲೆಯನ್ನು ಹೊರಹಾಕಿ ವಿಚಿತ್ರವಾಗಿ ಅವಳತ್ತ ನೋಡುತ್ತಿದ್ದರು. ಲಿಂಕನ್ ನ ಇಂಜಿನ್ನನ್ನು ತುಂಬಾ ನಿಧಾನವಾಗಿ ಐಡಲ್ ಆಗಲು ಹೊಂದಿಸಲಾಗಿತ್ತು. ಇದರ ಪರಿಣಾಮವಾಗಿ ಕೆಲವೊಮ್ಮೆ ಅವಳು ಇಂಟರ್ ಸೆಕ್ಷನ್ ನಲ್ಲಿ ಜೋರಾಗಿ ಪೆಡಲ್ ಒತ್ತಿದಾಗ ಇಂಜಿನ್ ನಿಂತುಹೋಗುತ್ತಿತ್ತು. ಅವಳ ಪತಿ ಮಿಸ್ಟರ್ ಬ್ರಿಡ್ಜ್ ಎಂದಿಗೂ ಲಿಂಕನ್ ಅನ್ನು ಬಳಸುತ್ತಿರಲಿಲ್ಲ. ಅವಳು ಅದನ್ನು ಎಲ್ಲಾ ವಾಹನಗಳ ಹಣೆಬರಹ ಎಂದು ಮಾತ್ರ ಭಾವಿಸಿದ್ದರಿಂದಲೇ ಐಡ್ಲಿಂಗ್ ವೇಗವನ್ನು ಎಂದಿಗೂ ಸರಿ ಹೊಂದಿಸಲಾಗಿರಲಿಲ್ಲ.

ಆಗಾಗ್ಗೆ ಅವಳು ಸ್ಟಾರ್ಟರ್ ಬಟನ್ ಅನ್ನು ತುಂಬಾ ಕಡಿಮೆ ಹೊತ್ತು ಅಥವಾ ತುಂಬಾ ದೀರ್ಘವಾಗಿ ಒತ್ತಿದಾಗ ಕಾರು ಚಾಲೂ ಆಗದೆ ಕಾರುಗಳು ಹಿಂದೆ ಸಾಲುಗಟ್ಟುತ್ತಿದ್ದವು. ತಾನು ವಾಹನ ಚಾಲನೆಯಲ್ಲಿ ಪರಿಣಿತಳಲ್ಲ ಎಂದು ತಿಳಿದುಕೊಂಡಿರುವುದರಿಂದ ದುರದೃಷ್ಟಕರವಾದ ಏನಾದರೂ ಸಂಭವಿಸಿದಾಗ ಅವಳು ಯಾವಾಗಲೂ ಕ್ಷಮೆಯಾಚಿಸುವುದಕ್ಕೆ ಸಿದ್ಧಳಿರುತ್ತಿದ್ದಳು. ಸರಿಯಾಗಿ ವಾಹನ ಚಲಾಯಿಸುವ ಎಲ್ಲರ ಮಾರ್ಗದಿಂದ ದೂರವಿರಲು ಪ್ರಯತ್ನ ಮಾಡುತ್ತಿದ್ದಳು. ಯಾವುದೇ ಬೆಟ್ಟದ ಶುರುವಿನಲ್ಲಿ ಅವಳು ಎರಡನೇ ಗೇರ್ ಗೆ ಬದಲಾಯಿಸುವಳು ಮತ್ತು ಅಗತ್ಯಕ್ಕಿಂತ ನಿಧಾನವಾಗಿ ಕೆಳಕ್ಕೆ ಇಳಿಯುವಳು.

ಸರ್ವೇಸಾಮಾನ್ಯವಾಗಿ ಅವಳು ಡೌನ್ಟೌನ್ ನಲ್ಲಿದ್ದ ಗ್ಯಾರೇಜಿನಲ್ಲಿ ಕಾರು ನಿಲುಗಡೆ ಮಾಡುತ್ತಿದ್ದಳು. ಅಲ್ಲಿ ಮಿಸ್ಟರ್ ಬ್ರಿಡ್ಜ್ ಅವಳಿಗೆ ಅಂತ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದ. ಅವಳು ಅಗಾಧವಾದ ಬಾಗಿಲುಗಳ ಗ್ಯಾರೇಜ್ ಮುಂದೆ ಹಾರನ್ ಬಜಾಯಿಸಬೇಕಿತ್ತು. ಆಗ ಮಾತ್ರ ಅದು ಕಿರ್ರನೆ ತೆರೆದುಕೊಳ್ಳುತ್ತಿತ್ತು. ಅವಳು ಕಾರನ್ನು ಒಳಕ್ಕೊಯ್ದಾಗ ಒಬ್ಬ ಸೇವಕ ಅವಳನ್ನು ‘ವೆಲ್ ಕಂ ಮಿಸೆಸ್ ಬ್ರಿಡ್ಜ್’ ಎಂದು ಸ್ವಾಗತಿಸುತ್ತಿದ್ದ. ಕಾರನ್ನು ಸರಿಯಾಗಿ ಪಾರ್ಕ್ ಮಾಡಲು ಅವಳಿಗೆ ಸಹಾಯ ಕೂಡ ಮಾಡುತ್ತಿದ್ದ.

ಸಾಮಾನ್ಯವಾಗಿ ಅವಳನ್ನು ಕೆಳಗಿಳಿಸಿದ ನಂತರ ಆ ಅಸಾಧಾರಣ ಭೂತಯಂತ್ರವನ್ನು ತಾನೇ ಸರಿಯಾಗಿ ನಿಲ್ಲಿಸುತ್ತಿದ್ದ. ಆದರೆ ಕಂಟ್ರಿ ಕ್ಲಬ್ ಜಿಲ್ಲೆಯಲ್ಲಿ ಅವಳು ಬೀದಿ ಬದಿಯಲ್ಲಿಯೇ ಕಾರನ್ನು ನಿಲುಗಡೆ ಮಾಡುತ್ತಿದ್ದಳು. ಅಡ್ಡ ಪಟ್ಟೆಗಳಿದ್ದರೆ ಅವಳು ತುಂಬಾ ಚೆನ್ನಾಗಿಯೇ ಪಾರ್ಕ್ ಮಾಡುತ್ತಿದ್ದಳು. ಆದರೆ ಪಾರ್ಕಿಂಗ್ ಸಮಾನಾಂತರವಾಗಿದ್ದರೆ ಆಕೆಗೆ ದೂರದಿಂದ ನಿಲುಗಡೆಯ ಸ್ಥಳವನ್ನು ನಿರ್ಣಯಿಸಲು ತೊಂದರೆಯಾಗುತ್ತಿತ್ತು. ಕಾರಿಳಿದು ಹೊರಗೆ ಹೋಗಿ ಸುತ್ತಲೂ ತಿರುಗಿ ನೋಡಿ ಮತ್ತೆ ಕಾರನ್ನೇರಿ, ಮತ್ತೆ ಪ್ರಯತ್ನಿಸಿ ಓಹ್!

ಲಿಂಕನ್ ಕಾರಿನ ಆಸನವು ತುಂಬಾ ಮೃದುವಾಗಿತ್ತು. ಶ್ರೀಮತಿ ಬ್ರಿಡ್ಜ್ ತುಂಬಾ ಕುಳ್ಳಗಿದ್ದು, ಮುಂದೆ ಏನಾಗುತ್ತಿದೆ ಎಂದು ನೋಡಲು ಅವಳು ಸೀಟಿನ ಮೇಲೆ ತುಂಬಾ ನೆಟ್ಟಗೆ ಕುಳಿತುಕೊಳ್ಳಬೇಕಾಗುತ್ತಿತ್ತು. ಅವಳು ತೋಳುಗಳನ್ನು ಮುಂದಕ್ಕೆ ಚಾಚಿ ಕೈಗಳನ್ನು ದೊಡ್ಡ ಸ್ಟಿಯರಿಂಗ್ ಚಕ್ರದ ಮೇಲೆ ಬಿಗಿಯಾಗಿ ಹಿಡಿದಿರುತ್ತಿದ್ದಳು. ಅವಳ ಪಾದಗಳು ಪೆಡಲ್ ಗಳನ್ನು ಒತ್ತಲು ಸಾಧ್ಯವಾಗುವಷ್ಟು ಉದ್ದ ಮಾತ್ರವೇ ಅವಳ ಕಾಲುಗಳಿದ್ದವು. ಆದರೂ ಅವಳು ಎಂದೂ ಗಂಭೀರವಾದ ಯಾವುದೇ ಅಪಘಾತವನ್ನು ಮಾಡಿರಲಿಲ್ಲ. ಆದರೆ ಆಗಾಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸಿನವರು ಅವಳೊಡನೆ ಕಾರಿನ ಬಗ್ಗೆ ಮಾತನಾಡುತ್ತಿದ್ದರು. ಅವರು ಎಂದಿಗೂ ಅವಳಿಗೆ ಏನನ್ನೂ ಮಾಡಲಿಲ್ಲ. ಏಕೆಂದರೆ ಅವರು ಅವಳನ್ನು ತಕ್ಷಣಕ್ಕೆ ಬಂಧಿಸಲು ಸಾಧ್ಯವಿರಲಿಲ್ಲ. ಮತ್ತೆ ಅವಳು ಎಲ್ಲವನ್ನೂ ಮಾಡಬೇಕಾದ ರೀತಿಯಲ್ಲಿಯೇ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ಅವರಿಗೆ ಮನವರಿಕೆಯಾಗಿತ್ತು.

ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ ಎಂಬಂತೆ ಇರುತ್ತಿದ್ದರು. ಆಗೆಲ್ಲ ಅವಳಿಗೆ ಗಾಡಿ ಜರ್ಕ್ ಹೊಡೆದಂತೆ ಆಗುತ್ತಿತ್ತು. ಹೇಗಾದರೂ, ಕೆಲವೊಮ್ಮೆ, ಒಬ್ಬ ಒಳ್ಳೆಯ ವ್ಯಕ್ತಿ ಎಲ್ಲಿಯೂ ಇರುತ್ತಾನೆ. ಅವಳ ಕಷ್ಟವನ್ನು ನೋಡಿ, ಅಂಥವನೊಬ್ಬ ಸುತ್ತಲೂ ಬಂದು ತನ್ನ ಟೋಪಿಯನ್ನು ತೆಗೆದು ತಲೆ ಕೆಳಗೆ ಹಾಕಿ ‘ಸಹಾಯ ಮಾಡಬಹುದೇ’ ಎಂದು ಕೇಳುತ್ತಿದ್ದ.

“ಓ, ತುಂಬಾ ಸಂತೋಷ” ಅವಳು ಬಿಡುಗಡೆ ದೊರೆತ ಧ್ವನಿಯಲ್ಲಿ ಹೇಳುತ್ತಿದ್ದಳು. ಅವನು ಬಾಗಿಲು ತೆರೆದ ನಂತರ ಅವಳು ಕಾರಿಳಿದು ಹೊರಬಂದು ಅವನು ಕಾರ್ ಪಾರ್ಕ್ ಮಾಡುವ ತನಕ ರಸ್ತೆಯ ದಂಡೆಯ ಮೇಲೆ ನಿಲ್ಲುತ್ತಿದ್ದಳು. ಅವನು ಟಿಪ್ಸ್ ಏನಾದರೂ ನಿರೀಕ್ಷಿಸಿದ್ದಾನೋ ಇಲ್ಲವೋ ಎಂದು ತಿಳಿಯುವುದು ಅವಳಿಗೆ ಒಂದು ಸಮಸ್ಯೆಯಾಗಿತ್ತು. ಬೀದಿಗಳಲ್ಲಿ ನಿಂತಿರುವ ಜನರಿಗೆ ಹಣದ ಅವಶ್ಯಕತೆಯಿದೆ ಎಂದು ಅವಳು ತಿಳಿದಿದ್ದಳು. ಆದರೂ ಅವಳು ಯಾರಿಗೂ ಅಪಮಾನ ಮಾಡಲು ಬಯಸುವುದಿಲ್ಲ. ಕೆಲವೊಮ್ಮೆ ಅವಳು ಕೇಳಲಿಕ್ಕೇ ಹಿಂಜರಿಯುತ್ತಾಳೆ: ಆತ ತಾನು ಕೊಡಲು ಬಯಸಿರುವ ಇಪ್ಪತ್ತೈದು-ಸೆಂಟ್ ಹಣ ಸ್ವೀಕರಿಸುತ್ತಾನೋ ಇಲ್ಲವೋ ಎಂದು. ಕೆಲವೊಮ್ಮೆ ಅವಳಿಗೆ ಹಾಗೆಲ್ಲ ಕೇಳಲಾಗುವುದಿಲ್ಲ. ಆಗ ಅವಳು ಅವನ ಮೇಲೆ ಕೃತಜ್ಞತೆಯ ಕಿರುನಗೆ ಬೀರುತ್ತಾ, “ತುಂಬಾ ಧನ್ಯವಾದಗಳು” ಎಂದು ಹೇಳುತ್ತಾಳೆ. ಲಿಂಕನ್ ನ ಬಾಗಿಲುಗಳನ್ನು ಲಾಕ್ ಮಾಡಿದ ನಂತರ ಅಂಗಡಿಗೆ ತೆರಳುತ್ತಾಳೆ.

ಮಿನಿಸ್ಟರ್ ಅವರ ಪುಸ್ತಕ

ಶ್ರೀಮತಿ ಬ್ರಿಡ್ಜ್ ಒಂದು ಪುಸ್ತಕವನ್ನು ಏನಾದರೂ ಖರೀದಿಸಿದರೆ ಅದು ಯಾವಾಗಲೂ ಮೂರು ವಿಷಯಗಳಲ್ಲಿ ಒಂದನ್ನು ಕೇಂದ್ರವಾಗಿ ಒಳಗೊಂಡಿರುತ್ತದೆ: ಎಲ್ಲಾ ಮಳಿಗೆಗಳಲ್ಲಿ ಅವಳು ಕೇಳಿದ ಅಥವಾ ನೋಡಿದ ಅತಿ ಹೆಚ್ಚು ಮಾರಾಟವಾಗುತ್ತಿರುವ ಪುಸ್ತಕ, ಸ್ವಯಂ-ಸುಧಾರಣಾ ಪುಸ್ತಕ, ಅಥವಾ ಕನ್ಸಾಸ್ ನ ಕುರಿತ ಅಥವಾ ಕನ್ಸಾಸ್ ನಗರದ ಲೇಖಕರ ಪುಸ್ತಕ – ಅದರ ಹೂರಣ ಏನೇ ಇರಲಿ. ಈ ಎರಡನೆಯ ಬಗೆಯದು ವಿರಳವಾಗಿತ್ತು. ಆದರೆ ಈಗಲೋ ಆಗಲೋ ಯಾರಾದರೂ ಕನ್ಸಾಸ್ / ಕನ್ಸಾಸ್ ನಗರದ ಮಧ್ಯೆ ಅಂತರ್ಯುದ್ಧದ, ಇತಿಹಾಸದ ಅಥವಾ ಓಲ್ಡ್ ವೆಸ್ಟ್ಪೋರ್ಟ್ ಲ್ಯಾಂಡಿಂಗ್ ಬಗ್ಗೆ ಏನಾದರೂ ಬರೆದು ಸ್ಫೋಟಿಸುತ್ತಿದ್ದರು. ಆಗಲೂ ಸ್ಥಳೀಯ ಪ್ರಕಾಶನ ಸಂಸ್ಥೆಗಳಿಂದ ಸಾಮಾನ್ಯವಾಗಿ ಮುದ್ರಿತವಾದ ಪದ್ಯ ಮತ್ತು ಪ್ರಬಂಧಗಳ ಸಪೂರ ಸಂಪುಟಗಳು ಇದ್ದವು. ಗೋಲ್ಡ್ ಪೇಂಟೆಡ್ ಲೆದರ್ ನಲ್ಲಿರುವ ದಿ ಬ್ರದರ್ಸ್ ಕರಮಾಜೋವ್ ನ ಅತ್ಯಂತ ಹಳೆಯ ಎರಡು-ಸಂಪುಟಗಳ ಸೆಟ್ ಹೊರತುಪಡಿಸಿ ಬೇರೆ ಯಾವುದೇ ಪುಸ್ತಕಗಳಿಗಿಂತಲೂ ಹೆಚ್ಚು ಕಾಲ ಕೋಣೆಯನ್ನು ಆಶ್ರಯಿಸಿರುವ ಮಳಿಗೆಗಳಲ್ಲಿ ಇದೂ ಒಂದು. ದಿ ಬ್ರದರ್ಸ್ ಕರಮಾಜೋವ್ ಅನ್ನು ಅಂತೂ ಮನೆಯಲ್ಲಿ ಯಾರೂ ಓದಿರಲಿಲ್ಲ. ಅದನ್ನು ಶ್ರೀಯುತ ಬ್ರಿಡ್ಜ್ ನ ಸಹೋದರ ಪುರಾತನ ವಸ್ತುಗಳನ್ನು ಮಾರುವ ಆ್ಯಂಟಿಕ್ ವ್ಯಾಪಾರಿಗಳಿಂದ ಖರೀದಿಸಿದ್ದ. ಈ ಸೆಟ್ ಭಾರತೀಯ ಅರಸರ ಕಂಚಿನ ಜೋಡಿ ಪ್ರತಿಮೆಗಳ ನಡುವಿನ ಶೆಲ್ಫಿನಲ್ಲಿ ಇದ್ದುಬಿಟ್ಟಿತ್ತು. ಇದು ಶ್ರೀಮತಿ ಬ್ರಿಡ್ಜ್ ಬಳಸಿದ ಸೋದರಸಂಬಂಧಿ ಲುಲುಬೆಲ್ಲೆ ವಾಟ್ಸ್ ಅವರ ಏಕೈಕ ಕೊಡುಗೆಯಾಗಿತ್ತು. ವಾರಕ್ಕೊಮ್ಮೆ ಹ್ಯಾಜೆಲ್ ನವಿಲುಗರಿಗಳ ಡಸ್ಟರಿನಿಂದ ಅದರ ಮೇಲಿನ ಧೂಳು ಹೊಡೆಯುತ್ತಿದ್ದಳು.

ದಿ ಬ್ರದರ್ಸ್ ಕರಮಾಜೋವ್ ಸಂಪುಟಗಳ ಬಳಿಕ ಎರಡನೆಯ ಸ್ಥಾನದಲ್ಲಿದ್ದ ಸಂಪುಟವು ಸ್ಥಳೀಯ ಮಂತ್ರಿ ಡಾ. ಫೋಸ್ಟರ್ ಅವರ ಆಲೋಚನೆಗಳ ಸಂಗ್ರಹವಾಗಿತ್ತು. ಡಾ. ಫೋಸ್ಟರ್ ಗಿಡ್ಡ ಮನುಷ್ಯ. ಸ್ನೇಹಮಯಿ ಮತ್ತು ಹಾಸ್ಯಮಯವಾದ ಮನುಷ್ಯ. ಅತನಿಗೆ ಮೃದುವಾದ ಚಿನ್ನದ ಹಾಗೆ ಹೊಳೆವ ಬಿಳಿ ಕೂದಲಿತ್ತು. ಅದನ್ನು ಅವನು ಉದ್ದವಾಗಿ ಬೆಳೆಯಲು ಬಿಟ್ಟಿದ್ದ. ಹಿಂದಕ್ಕೆ ತಾನು ಒಂದಿಂಚು ಎತ್ತರ ಕಾಣುವಂತೆ ಕೂದಲನ್ನು ಬಾಚಿಕೊಳ್ಳುತ್ತಿದ್ದ. ಅವನು ಈ ಪ್ರಬಂಧಗಳನ್ನು ಹಲವಾರು ವರ್ಷಗಳ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶದಿಂದ ಬರೆದಿದ್ದು. ಕಾಲಕಾಲಕ್ಕೆ ಅವುಗಳ ಜೊತೆ ತನ್ನ ನೆನಪುಗಳ ದಾಖಲೆಯಂತೆ ಸಂಭಾಷಿಸುತ್ತಾ ನಗುತ್ತಿದ್ದ. ಖಂಡಿತವಾಗಿಯೂ ಅವನು ತಾನು ಸಾಯುವವರೆಗೂ ಅದನ್ನು ತನ್ನಲ್ಲಿಯೇ ಇಟ್ಟುಕೊಳ್ಳಬಾರದು ಎಂದು ಜನರು ಉದ್ಗರಿಸುತ್ತಿದ್ದರು. ಆ ಸಮಯದಲ್ಲಿ ಆ ಮಾತನ್ನು ಅಂದವನ ತೋಳನ್ನು ಸ್ಪರ್ಶಿಸುವ ಡಾ. ಫೋಸ್ಟರ್, ಹೃತ್ಪೂರ್ವಕವಾಗಿ ನಗುತ್ತಾ, “ನಾವು ಅದನ್ನು ಕುರಿತು ಯೋಚಿಸುತ್ತೇವೆ, ನಿಜಕ್ಕೂ ನಾವು ಅದನ್ನು ಕುರಿತು ಯೋಚಿಸುತ್ತೇವೆ ಎಂದು ಗಂಟಲನ್ನು ತೆರವುಗೊಳಿಸಿಕೊಳ್ಳುತ್ತಿದ್ದ.

ಕೊನೆಗೆ, ಅವರು ಕನ್ಸಾಸ್ ನಗರದಲ್ಲಿ ಹದಿನೇಳು ವರ್ಷಗಳಿಂದ ಉಪದೇಶ ಮಾಡುತ್ತಿದ್ದಾಗ, ಅವನ ಹೆಸರು ಪ್ರಖ್ಯಾತವಾದಾಗ, ಅವನ ಹೆಸರನ್ನು ದಿ ಟ್ಯಾಟ್ಲರ್ ಪತ್ರಿಕೆಯಲ್ಲಿ ಯಾವಾಗಲೂ ಮತ್ತು ಸಿಟಿ ಪೇಪರ್ನಲ್ಲಿ ಕೆಲವೊಮ್ಮೆ ಉಲ್ಲೇಖಿಸಲಾಗುತ್ತಿತ್ತು. ಸಿಟಿ ಪೇಪರ್ ಒಂದು ಸಣ್ಣ ಪ್ರಕಾಶನ ಸಂಸ್ಥೆ. ಅದು ಈ ಪ್ರಬಂಧಗಳನ್ನು ಪ್ರಕಟಣೆಗೆ ತೆಗೆದುಕೊಂಡಿತ್ತು. ಸದ್ದಿಲ್ಲದೆ ಅವನ್ನು ಸಿಟಿ ಪೇಪರ್ಗೆ ಡಾ. ಫೋಸ್ಟರ್ ಈ ಮೊದಲೇ ಹಲವಾರು ಬಾರಿ ಕಂತುಗಳಲ್ಲಿ ಸಲ್ಲಿಸಿದ್ದ. ಕಪ್ಪು ರಕ್ಷಾಕವಚದಲ್ಲಿ ಪುಸ್ತಕವು ಹೊರಬಂದಿತ್ತು. ನೋಡಲು ಗಂಭೀರವೆನಿಸುವ ಬೂದು ಮತ್ತು ನೇರಳೆ ಬಣ್ಣದ ಧೂಳಿನ ಜಾಕೆಟ್ಟಿನೊಂದಿಗೆ ಅದು ಪ್ರಕಟವಾಗಿತ್ತು, ಅದು ಅವನ ಅಧ್ಯಯನದ ಕಿಟಕಿಯಿಂದ ಮುಸ್ಸಂಜೆಯಲ್ಲಿ ಏಕಾಗ್ರಚಿತ್ತದಲ್ಲಿ ನಗುತ್ತಿರುವ ಭಾವಚಿತ್ರವನ್ನು ಒಳಗೊಂಡಿತ್ತು. ಚಿತ್ರದಲ್ಲಿ ಅವನ ಕೈಗಳು ಅವನ ಬೆನ್ನಿನ ಹಿಂದೆ ಕಟ್ಟಿವೆ ಮತ್ತು ಒಂದು ಅಡಿ ಮುಂದಕ್ಕೆ ಮೊಣಕೈಗಳಿವೆ ಎಂದು ತೋರುತ್ತಿತ್ತು.

ಆ ಪುಸ್ತಕದ ಮೊದಲ ಪ್ರಬಂಧವು ಪ್ರಾರಂಭವಾಗುವುದು: “ನಾನು ಈಗ ನನ್ನ ಮೇಜಿನ ಮುಂದೆ ಕುಳಿತಿದ್ದೇನೆ. ಹಲವು ವರ್ಷಗಳಿಂದ ಈ ಮೇಜು ನನಗೆ ಆರಾಮ ಮತ್ತು ಸ್ಫೂರ್ತಿಯ ಮೂಲವಾಗಿದೆ. ಆ ರಾತ್ರಿಯಾಗುವುದನ್ನು ನಾನು ನೋಡುತ್ತಿದ್ದೇನೆ. ಸಣ್ಣ ಆದರೆ (ನನ್ನ ಕಣ್ಣುಗಳಿಗೆ) ಸುಂದರವಾದ ನನ್ನ ಉದ್ಯಾನವನದ ಮೇಲೆ ನೆರಳುಗಳು ನಿಧಾನವಾಗಿ ತೆವಳುತ್ತಿವೆ. ಅಂತಹ ಸಮಯದಲ್ಲಿ ನಾನು ಮಾನವಕುಲದ ಸ್ಥಿತಿಯನ್ನು ಹೆಚ್ಚಾಗಿ ಧ್ಯಾನಿಸುತ್ತೇನೆ.” ಎಂದು.

ಶ್ರೀಮತಿ ಬ್ರಿಡ್ಜ್ ಡಾ. ಫೋಸ್ಟರ್ ಪುಸ್ತಕ ಓದಿದಳು. ಅದರ ಮೇಲೆ ಅವರು ಸ್ವ ಅಕ್ಷರದಲ್ಲಿ ಸಹಿಮಾಡಿದ್ದರು. ಅವರು ಬಹಳ ಧ್ಯಾನಶೀಲ ವ್ಯಕ್ತಿ ಎಂದು ಆಕೆಗೆ ಕಂಡುಬಂತು. ಆಕೆ ಆಶ್ಚರ್ಯಚಕಿತರಾದಳು. ಸೂರ್ಯೋದಯಕ್ಕೆ ಆತ ತುಂಬಾ ಸಂವೇದನಾಶೀಲನಾಗಿರುವುದನ್ನು, ಅದನ್ನು ಕಾಣಲೆಂದು ಅವನು ಆಗಾಗ ಬೇಗನೆ ಎದ್ದು ಕಾಯುತ್ತಿದ್ದನೆಂದು ಕಂಡುಬಂದು ಮತ್ತಷ್ಟು ಅಚ್ಚರಿಗೊಂಡಳು. ಅವಳು ಪುಸ್ತಕದ ಹಲವೆಡೆಗಳಲ್ಲಿ ಸಾಲುಗಳ ಕೆಳಗೆ ಅಡಿಗೆರೆ ಎಳೆದಿದ್ದಳು. ಆ ಸಾಲುಗಳು ಅವಳಿಗೆ ನಿರ್ದಿಷ್ಟವಾದ ಅರ್ಥವನ್ನು ತೋರುತ್ತಿದ್ದವು. ಓದು ಪೂರ್ಣಗೊಂಡಾಗ ಅವಳು ಅದನ್ನು ತನ್ನ ಸ್ನೇಹಿತರೊಂದಿಗೆ ಚರ್ಚಿಸಲು ಅಡಿಗೆರೆಗಳು ಒದಗಿಬಂದವು. ಅವರೂ ಅದನ್ನು ಓದುತ್ತಿದ್ದರು. ಕೆಲವು ಪುಟಗಳನ್ನು ಓದಲು ಕೊನೆಗೂ ಒಪ್ಪಿದ ಗ್ರೇಸ್ ಬ್ಯಾರನ್ ಗೆ ಅವಳು ಅದನ್ನು ಬಲವಾಗಿ ಶಿಫಾರಸು ಮಾಡಿದಳು.

ಎಲ್ಲೆಲ್ಲೂ ಯುದ್ಧದ ಬಗ್ಗೆ, ಕಮ್ಯುನಿಸ್ಟರು ಮತ್ತು ವಿಕೃತ ಮನಸ್ಸುಗಳ ಬಗ್ಗೆ ಕೊಳಕು, ನಕಾರಾತ್ಮಕ ಪುಸ್ತಕಗಳು ನಿರಂತರವಾಗಿ ಬುಕ್ ಕೌಂಟರ್ ಗಳನ್ನು ಪ್ರವಾಹದಂತೆ ತುಂಬುತ್ತಿರುವಾಗ ಈ ಪುಸ್ತಕವು ಆಲಿವ್ ಶಾಖೆಯಂತೆ ಅವಳ ಬಳಿಗೆ ಬಂದಿತು. ಜೀವನವು ಎಲ್ಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ಅವಳು ಯಾವುದೇ ತಪ್ಪು ಮಾಡುತ್ತಿಲ್ಲ ಮತ್ತು ಜನರಿಗೆ ಅವಳ ಅವಶ್ಯಕತೆಯಿದೆ ಎಂದು ಅದು ಭರವಸೆ ನೀಡಿತು. ಆದ್ದರಿಂದ, ದೋಸ್ಟೊಯೆವ್ಸ್ಕಿಯ ನೆರಳಿನಲ್ಲಿ, ಡಾ. ಫೋಸ್ಟರ್ ಅವರ ಆಹ್ಲಾದಕರ ಧ್ಯಾನ-ಚಿಂತನೆಗಳು ಅವರ ಲಿವಿಂಗ್ ರೂಮಿನ ವಿವಿಧ ಸ್ಥಾನಗಳಲ್ಲಿವೆ.

ಮದ್ರಾಸ್ ನಿಂದ ಸೇವಕಿ

ಬ್ರಿಡ್ಜ್ ದಂಪತಿಗಳು ಕಾಕ್ಟೈಲ್ ಪಾರ್ಟಿಯನ್ನು ನೀಡಿದ್ದು ಅವರು ಜನರ ಗುಂಪಿನೊಂದಿಗೆ ಕಾಕ್ಟೈಲ್ ಹೊಂದಲು ಬಯಸಿದ್ದರಿಂದ ಅಲ್ಲ. ಬದಲಿಗೆ ಅದು ಅವರು ಪಾರ್ಟಿ ನೀಡುವ ಸಮಯವಾಗಿತ್ತು. ಒಟ್ಟಾರೆ ಎಂಭತ್ತಕ್ಕೂ ಹೆಚ್ಚು ಜನರು ಬೆಟ್ಟದ ಪಕ್ಕದಲ್ಲಿ ನಿಂತ ಲೋಯಿರ್ ವ್ಯಾಲಿ ಚೇಟೌ ಶೈಲಿಯಲ್ಲಿದ್ದ ಮನೆಯ ಸುತ್ತ ನಲಿದಾಡಿದರು. ಗ್ರೇಸ್ ಮತ್ತು ವರ್ಜಿಲ್ ಬ್ಯಾರನ್ ಅಲ್ಲಿದ್ದರು. ಮ್ಯಾಡ್ಜ್ ಮತ್ತು ರಸ್ ಅರ್ಲೆನ್, ಹೇವುಡ್ ಡಂಕನ್ ಗಳು ಸಹ. ವಿಲ್ಹೆಲ್ಮ್ ಮತ್ತು ಸುಸಾನ್ ವ್ಯಾನ್ ಮೀಟರ್ ಸ್ಥಳದಿಂದ ಹೊರಗೆ ನೋಡುತ್ತಿದ್ದರೆ, ಲೋಯಿಸ್ ಮತ್ತು ಸ್ಟುವರ್ಟ್ ಮಾಂಟ್ಗೊಮೆರಿ, ಪ್ರಾಚೀನ ಮಣಿಗಳ ನಿಲುವಂಗಿಯಲ್ಲಿರುವ ಬೆಕರ್ಲ್ ಸಹೋದರಿಯರು ಶ್ರೀಮತಿ ಬ್ರಿಡ್ಜ್ ಅವರು ಕಣಕಾಲುಗಳಲ್ಲಿ ಕಿಂಕಿಣಿ ತೊಟ್ಟು ರಂಜಿಸಿದ ಕ್ಷಣವನ್ನು ಮರೆತುಹೋದಂತೆ ಕಾಣುತ್ತಿರಲಿಲ್ಲ.

ನೋಯೆಲ್ ಜಾನ್ಸನ್ ಅವರು ಬಳಲಿಕೆಯಿಂದ ಹಾಸಿಗೆ ಹಿಡಿದಿದ್ದ ಕಾರಣ, ಮಾಬೆಲ್ ಇಹೆ ಗಂಭೀರ ಚರ್ಚೆಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರು. ಡಾ. ಮತ್ತು ಶ್ರೀಮತಿ ಬ್ಯಾಚೆಲರ್ ಅವರ ಆಸ್ಟ್ರಿಯನ್ ನಿರಾಶ್ರಿತ ಅತಿಥಿಗಳು ಈಗ ಲಾಸ್ ಏಂಜಲೀಸ್ ನ ಪೌರರಾಗಿದ್ದರು. ಡಾ. ಫೋಸ್ಟರ್ ಸಹ ಸಹನೆಯ ಮೂರ್ತಿಯೇ ಆಗಿ ನಗುತ್ತಾ, ಭಾನುವಾರದ ಗಾಲ್ಫ್ ಬಗ್ಗೆ ಹಲವಾರು ಪುರುಷರನ್ನು ಕುಶಾಲಿನ ಮೊನೆಯಿಂದ ಚುಚ್ಚುತ್ತಾ ವಿಸ್ಕಿ ಮತ್ತು ಸಿಗರೆಟ್ ಗಾಗಿ ಸೇರಿಕೊಂಡರು. ಬೀಚಿ ಮಾರ್ ಎಂಬ ಆಟೋ ಸೇಲ್ಸ್ ಮ್ಯಾನ್ ಟುಕ್ಸೆಡೊ ಬದಲಿಗೆ ಡಬಲ್-ಬ್ರೆಸ್ಟ್ ನ ಪಿನ್-ಸ್ಟ್ರೈಪ್ ಬಿಸಿನೆಸ್ ಸೂಟ್ ನಲ್ಲಿ ಮೊದಲೇ ಆಗಮಿಸಿದ್ದ. ತನ್ನ ತಪ್ಪಿನ ಬಗ್ಗೆ ಮುಜುಗರಕ್ಕೊಳಗಾದ ಅವನು ಮನೋರಂಜನೆ ಎಂದು ಭಾವಿಸುವ ಎಲ್ಲವನ್ನೂ ಮಾಡುತ್ತಿದ್ದ. ಅವನೇನು ಅವರ ಆಪ್ತ ಸ್ನೇಹಿತನಲ್ಲ ಆದರೂ ಅವನನ್ನು ಇತರರೊಂದಿಗೆ ಆಹ್ವಾನಿಸುವುದು ಅಗತ್ಯವಾಗಿತ್ತು.

ಶ್ರೀಮತಿ ಬ್ರಿಡ್ಜ್ ಕಣ್ಣು ಕೋರೈಸುವಂತೆ ಬೆಳಗಿದ್ದ ಮನೆಯ ತಪಾಸಣೆಯನ್ನು ಮಾಡುತ್ತಾ, ಎಲ್ಲವೂ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ, ಹಾಗೆಯೇ ಇದೆಯಾ ಎಂದು ಖಚಿತಪಡಿಸಿಕೊಳ್ಳಲು ಮನೆಯಿಡೀ ಅಡ್ಡಾಡಿದಳು. ಅವಳು ಐದೈದು ನಿಮಿಷಕ್ಕೂ ಬಚ್ಚಲು ಮನೆಗಳತ್ತ ದೃಷ್ಟಿ ಹಾಯಿಸುತ್ತಾ ಬಣ್ಣದ ಕರವಸ್ತ್ರಗಳನ್ನು ಹೋಲುವ ಅತಿಥಿ ಟವೆಲ್ ಗಳು ಚೂರೂ ಕೊಳೆಯಾಗದೆ ಇನ್ನೂ ಒಂದರ ಮೇಲೊಂದು ಕಪಾಟಿನಲ್ಲೇ ಇರುವುದನ್ನು ಗಮನಿಸಿಕೊಂಡಳು. ಸಂಜೆಯ ಕೊನೆಯಲ್ಲಿ ಕೇವಲ ಮೂರು ಟವೆಲ್ಲುಗಳು ಮಾತ್ರ ವ್ಯಸ್ತವಾಗಿದ್ದವು. ಒಮ್ಮೆ ಮಾತ್ರ ಅವಳು ಅಡುಗೆಮನೆಗೆ ಪ್ರವೇಶಿಸಿದ್ದು. ಆಳು ಹುಡುಗಿ, ಹ್ಯಾಝೆಲ್ ಗೆ ಸಹಾಯ ಮಾಡಲು ನೇಮಕಗೊಂಡವಳು ತೊಟ್ಟಿದ್ದ ಸ್ಟಾರ್ಚ್ ಮಾಡಿದ ಸಮವಸ್ತ್ರದ ಇರುಕಿನಲ್ಲಿ ಕಾಣುತ್ತಿದ್ದ ಸ್ತನಗಳ ಮೇಲಿನ ಸಂದಿಯನ್ನು ಪಿನ್ ಹಾಕಿ ತಾನೇ ಮುಚ್ಚಿದಳು.

ಬೆಳ್ಳಿಯ ದೀಪ ಮತ್ತು ಪುಟ್ಟ ಪುಟ್ಟ ಟರ್ಕಿ ಸ್ಯಾಂಡ್ವಿಚ್ ಗಳ ನಡುವೆ ಶ್ರೀಮತಿ ಬ್ರಿಡ್ಜ್ ಎಲ್ಲರೊಡನೆ ಒಂದು ಕ್ಷಣ ಸುಂದರವಾಗಿ ನಗುತ್ತಾ, ಹರಟೆ ಹೊಡೆಯುತ್ತಾ, ಹೊಗೆಯನ್ನು ಹೊರಹಾಕಲು ಸದ್ದಿಲ್ಲದೆ ಕಿಟಕಿಗಳನ್ನು ತೆರೆಯುತ್ತಾ, ಮಹೋಗನಿ ಟೇಬಲ್ ಮೇಲಿನಿಂದ ಬಳಸಿದ ಲೋಟಗಳನ್ನು ತೆಗೆಯುತ್ತಾ ಹೋದಳು. ಒಮ್ಮೆ ಅಲ್ಲಿಂದ ತೆರಳಿ, ನಂತರ ಓನಿಕ್ಸ್ ಆಶ್ ಟ್ರೇಗಳನ್ನು ಖಾಲಿ ಮಾಡಲು ಮರಳಿದಳು. ಅವನ್ನು ಅವಳು ಖರೀದಿಸಿ ಮನೆಯಾದ್ಯಂತ ಇರಿಸಿದ್ದಳು.

ಬೀಚಿ ಮಾರ್ ಕುಡಿದು ಬಿಟ್ಟಿದ್ದಾನೆ. ಅವನು ಜನರ ಭುಜದ ಮೇಲೆ ಹೊಡೆದ. ಜೋಕ್ ಹೇಳಿದ. ಜೋರಾಗಿ ನಕ್ಕ. ಕೆನ್ನೇರಳೆ ಬಣ್ಣದ ಸ್ಟಬ್ ಗಳನ್ನು ಆಶ್ ಟ್ರೇಗಳಿಂದ ಖಾಲಿ ಮಾಡಿಕೊಂಡು ಸುತ್ತಲೂ ಸುತ್ತಿದ. ಇದೆಲ್ಲಾ ಮಾಡುತ್ತಿರುವಾಗಲೂ ಬೆವರಿನಿಂದ ತೇವಗೊಂಡ ಶರ್ಟ್ ಕಾಲರ್ ನ ಅಂಚುಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಹೆಣಗುತ್ತಿದ್ದ. ಅದು ನೆಂದು ಕೊಂಬುಗಳ ರೀತಿ ಗಾಳಿಯಲ್ಲಿ ಮೇಲೆದ್ದಿತ್ತು. ಶ್ರೀಮತಿ ಬ್ರಿಡ್ಜ್ ಅವರನ್ನು ಕಾರ್ಪೆಟ್ ಹಾಸಿದ ಮೆಟ್ಟಿಲುಗಳ ಅರ್ಧದಾರಿಯವರೆಗೂ ಕ್ರಮಿಸಿ ಅವನು ಆಶಾದಾಯಕವಾಗಿ ಹೇಳಿದ, “ಮದ್ರಾಸ್ ನಿಂದ ಒಬ್ಬ ಯುವ ಸೇವಕಿ ಬಂದಿದ್ದಾಳೆ. ಅವಳಿಗೆ ದಿವಿನಾದ ಕುಂಡೆ ಇದೆ. ಬಹುಶಃ ನೀವು ಯೋಚಿಸಿದಂತೆ ದುಂಡಾಗಿಯೂ ಇಲ್ಲ, ಗುಲಾಬಿ ಬಣ್ಣದ್ದಾಗಿಯೂ ಇಲ್ಲ. ಇವಳು ಬೂದು ಬಣ್ಣ. ಉದ್ದವಾದ ಕಿವಿ ಇವೆ. ಮತ್ತಿದು ಹುಲ್ಲು ತಿನ್ನುತ್ತದೆ.” “ಅಯ್ಯೋ ದೇವರೇ” ಎಂದು ಉದ್ಘರಿಸಿದ ಶ್ರೀಮತಿ ಬ್ರಿಡ್ಜ್, ಅವಳ ಭುಜದ ಮೇಲಿಂದ ಅವನತ್ತ ಸಭ್ಯ ನಗುವಿನೊಂದಿಗೆ ನೋಡುತ್ತಲೇ ಮೆಟ್ಟಿಲುಗಳನ್ನು ಏರುತ್ತಿದ್ದಳು. ಆಟೋ ಸೇಲ್ಸ್ ಮ್ಯಾನ್ ತನ್ನ ಕಾಲರ್ ನ ಶೋಚನೀಯವಾಗಿ ಕಿತ್ತುಕೊಂಡ.

ಹಿತ್ತಿಲಲ್ಲಿ ಅಗಸಗಿತ್ತಿ

ಪ್ರತಿ ಬುಧವಾರ ಅಗಸಗಿತ್ತಿ ಬರುತ್ತಿದ್ದಳು, ಬಸ್ ಮಾರ್ಗವು ಬ್ರಿಡ್ಜ್ ಅವರ ಮನೆಯಿಂದ ಹಲವಾರು ಬ್ಲಾಕ್ ಗಳಷ್ಟು ದೂರದಲ್ಲಿರುವುದರಿಂದ ಯಾರಾದರೂ ಖಂಡಿತ ಬೆಳಿಗ್ಗೆ ಅವಳ ಬಸ್ ಅನ್ನು ಕಾಣುತ್ತಿದ್ದರು. ವರ್ಷಗಳಿಂದಲೂ ಅಗಸಗಿತ್ತಿ ಬ್ಯೂಲಾ ಮಾ ಎಂಬ ಮುದುಕಿ ಕಪ್ಪು ಹೆಂಗಸು. ಅವಳು ತುಂಬ ಬುದ್ಧಿವಂತಳು. ಕೆಂಪು ಸ್ಕಾರ್ಫ್ ಮತ್ತು ಬಣ್ಣಬಣ್ಣದ ಆಸ್ಪತ್ರೆಯ ನಿಲುವಂಗಿಯನ್ನು ಹೋಲುವ ಉಡುಪನ್ನು ಧರಿಸುತ್ತಿದ್ದಳು. ಶ್ರೀಮತಿ ಬ್ರಿಡ್ಜ್ ಬ್ಯೂಲಾ ಮಾಳನ್ನು ತುಂಬಾ ಇಷ್ಟಪಡುತ್ತಿದ್ದಳು. ಅವಳನ್ನು “ಒಳ್ಳೆಯ ಮುದಿ ಮನಸ್ಸು” ಎಂದು ಕರೆಯುತ್ತಿದ್ದಳು. ಆಗಾಗ್ಗೆ ಅವಳಿಗೆ ಸ್ವಲ್ಪ ಹೆಚ್ಚುವರಿ ಹಣ ಅಥವಾ ಹಳೆಯದಾದಂತೆ ಕಾಣುವ ಸಂಜೆಯ ಉಡುಪುಗಳನ್ನು ಕೊಡುತ್ತಿದ್ದಳು. ಹುಡುಗಿಯ ಸ್ಕೌಟ್ಸ್ ಮತ್ತು ವಿವಿಧ ದತ್ತಿಗಳಿಗೆ ನೆರವಾಗಲು ಅವಳು ಕೊಂಡ ರಾಫೆಲ್ ಟಿಕೆಟ್ ಗಳನ್ನು ನೀಡುತ್ತಿದ್ದಳು. ಆದರೆ ಒಂದು ದಿನ ಬ್ಯೂಲಾ ಮಾಗೆ ಬಟ್ಟೆ ಒಗೆದು ಒಗೆದು ಸಾಕಾಯಿತು. ಹೆಚ್ಚುವರಿ ಉಡುಗೊರೆಗಳು ಬೇಡವಾದವು. ತನ್ನ ಯಾವುದೇ ಗ್ರಾಹಕರಿಗೆ ಒಂದು ಮಾತನ್ನೂ ಹೇಳದೆ ಅವಳು ಸಮುದ್ರ ತೀರದಲ್ಲಿ ತನ್ನ ಜೀವನವನ್ನು ಸಾಗಿಸಲು ಕ್ಯಾಲಿಫೋರ್ನಿಯಾಗೆ ಬಸ್ ಹತ್ತಿದಳು. ಹಲವಾರು ವಾರಗಳವರೆಗೆ ಶ್ರೀಮತಿ ಬ್ರಿಡ್ಜ್ ಅಗಸಗಿತ್ತಿ ಇಲ್ಲದೆ ಆ ಕೆಲಸವನ್ನು ತಾನೇ ಮಾಡಬೇಕಾಯಿತು. ಕೊನೆಗೆ ಅವಳಿಗೆ ಬೇರೊಬ್ಬರು ಸಿಕ್ಕಿದರು. ಅವಳು ಅತ್ಯಂತ ದಢೂತಿ ದುಃಖಿ ಸ್ವೀಡಿಷ್ ಮಹಿಳೆ. ಅಡುಗೆಮನೆಯಲ್ಲಿ ನಡೆದ ಸಂದರ್ಶನದಲ್ಲಿ ತನ್ನ ಹೆಸರು ಇಂಗ್ರಿಡ್ ಎಂದೂ, ಹದಿನೆಂಟು ವರ್ಷಗಳಿಂದ ತಾನು ಮಸಾಜ್ ಮಾಡುತ್ತಿದ್ದೆ ಎಂದೂ ಹೇಳಿದಳು. ಅಗಸಗಿತ್ತಿ ಆಗುವುದಕ್ಕೆ ಹೆಚ್ಚು ಇಷ್ಟಪಟ್ಟಳು.

ಮೊದಲ ದಿನ ಬೆಳಿಗ್ಗೆ ಶ್ರೀಮತಿ ಬ್ರಿಡ್ಜ್ ಬಸ್ ಮಾರ್ಗಕ್ಕೆ ಬಂದಾಗ ಇಂಗ್ರಿಡ್ ಆಕೆಗೆ ಶೋಕಪೂರಿತ ನಮಸ್ಕಾರ ಮಾಡಿ ಪ್ರಯಾಸಪಟ್ಟು ಮುಂಭಾಗದ ಸೀಟಿನಲ್ಲಿ ಕೂತಳು. ಅದು ರೂಢಿಯ ಪದ್ಧತಿಯಾಗಿರಲಿಲ್ಲ. ಆದರೆ ಅಂತಹ ವಿಷಯವನ್ನು ವಿವರಿಸಲು ಕಷ್ಟಕರವಾಗಿತ್ತು. ಏಕೆಂದರೆ ಶ್ರೀಮತಿ ಬ್ರಿಡ್ಜ್ ಯಾರೊಬ್ಬರ ಭಾವನೆಗಳನ್ನು ಘಾಸಿಗೊಳಿಸಲು, ಅವರನ್ನು ಕೀಳಾಗಿ ಕಂಡು ನೋಯಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಆಕೆ ಇದರ ಬಗ್ಗೆ ಏನನ್ನೂ ಹೇಳಲಿಲ್ಲ. ಮುಂದಿನ ವಾರದ ವೇಳೆಗೆ ನೆರೆಹೊರೆಯಲ್ಲಿರುವ ಇತರ ಅಗಸಗಿತ್ತಿಯರು ಇಂಗ್ರಿಡ್ ಗೆ ಹೇಳಿಯಾರು ಎಂದು ಆಕೆಗೆ ಅನ್ನಿಸಿತ್ತು.

ಆದರೆ ಮುಂದಿನ ವಾರ ಅವಳು ಮತ್ತೆ ಬಸ್ಸಿಗೆ ಮುಂದಿನ ಬಾಗಿಲಲ್ಲಿ ಹತ್ತಿಕೊಂಡಳು. ಮತ್ತೆ ಶ್ರೀಮತಿ ಬ್ರಿಡ್ಜ್ ಎಲ್ಲವೂ ಸರಿ ಇದೆ ಎಂಬಂತೆ ನಟಿಸಿದಳು. ಆದರೆ ಮೂರನೆಯ ಬೆಳಿಗ್ಗೆ ಅವರು ಮನೆಯ ಕಡೆಗೆ ವಾರ್ಡ್ ಪಾರ್ಕ್ ವೇಯಲ್ಲಿ ಹೋಗುತ್ತಿದ್ದಾಗ ಶ್ರೀಮತಿ ಬ್ರಿಡ್ಜ್, “ನಾನು ಬ್ಯೂಲಾ ಮಾಗೆ ತುಂಬಾ ಹೊಂದಿಕೊಂಡಿದ್ದೆ. ಅವಳ ಮನಸಿನಲ್ಲಿ ಇದ್ದ ಹಳೆಯ ಅನುಭವವನ್ನು ಅವಳು ಕಳಚಿಕೊಳ್ಳಲಿಲ್ಲ” ಎಂದಳು.

ಶ್ರೀಮತಿ ಬ್ರಿಡ್ಜರನ್ನು ನೋಡಲು ಇಂಗ್ರಿಡ್ ತಣ್ಣಯ ದೊಡ್ಡ ಹಳದಿ ತಲೆಯನ್ನು ತಿರುಗಿಸಿದಳು. ಆ ನೋಟ ಕಲ್ಲಿನಂತಿತ್ತು. ಅವರು ಡ್ರೈವ್ ವೇನಲ್ಲಿ ನಡೆಯುತ್ತಿದ್ದಂತೆ ಇಂಗ್ರಿಡ್ ಮಾತನಾಡಿದಳು: “ಆದ್ದರಿಂದ ನಾನು ಹಿಂಭಾಗದಲ್ಲಿ ಕುಳಿತುಕೊಳ್ಳಬೇಕೆಂದು ನೀವು ಬಯಸುತ್ತೀರಿ.”

“ಓಹ್, ದೇವರೇ! ನಾನು ಅದನ್ನು ಬಯಸಲಿಲ್ಲ,” ಶ್ರೀಮತಿ ಬ್ರಿಡ್ಜ್ ಉತ್ತರಿಸಿದಳು, ಇಂಗ್ರಿಡ್ ನ ಮಾತಿಗೆ ಮುಗುಳುನಗುತ್ತಾ. “ನೀನು ಬಯಸಿದರೆ ಇಲ್ಲಿಯೇ ಕುಳಿತುಕೊಳ್ಳಲು ನಿನಗೆ ಸಂಪೂರ್ಣವಾಗಿ ಸ್ವಾಗತವಿದೆ.”

ಇಂಗ್ರಿಡ್ ಈ ವಿಷಯದ ಬಗ್ಗೆ ಹೆಚ್ಚು ಹೇಳಲಿಲ್ಲ. ಮುಂದಿನ ವಾರ ಅದೇ ಭವ್ಯ ವಿಷಣ್ಣತೆಯೊಂದಿಗೆ ಹಿಂದಿನ ಸೀಟಿನಲ್ಲಿ ಪ್ರಯಾಣ ಮಾಡಿದಳು.

ಹಾಳಾದ ಕಫ್ಸ್

ಸಾಮಾನ್ಯವಾಗಿ ಶ್ರೀಮತಿ ಬ್ರಿಡ್ಜ್ ಲಾಂಡ್ರಿಯಿಂದ ಬಂದ ಬಟ್ಟೆಗಳನ್ನು ಪರೀಕ್ಷಿಸುತ್ತಿದ್ದಳು. ಆದರೆ ಅವಳು ಶಾಪಿಂಗ್ ಮಾಡುವಾಗ ಅಥವಾ ಸಭೆ ನಡೆಸಿದಾಗ, ಆ ಕೆಲಸವು ಹ್ಯಾಜೆಲ್ ಪಾಲಿಗೆ ಬೀಳುತ್ತಿತ್ತು. ಹ್ಯಾಜೆಲ್ ಎಂದಿಗೂ ಕಾಣೆಯಾದ ಗುಂಡಿಗಳು ಅಥವಾ ಸಡಿಲವಾದ ಎಲಾಸ್ಟಿಕ್ ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಹಾಗಾಗಿ ಶ್ರೀಮತಿ ಬ್ರಿಡ್ಜ್ ಡೌಗ್ಲಾಸ್ ಹಾಳಾಗಿದ್ದ ಕಫ್ ನೊಂದಿಗೆ ಶರ್ಟ್ ಧರಿಸಿರುವುದನ್ನು ಕಾಣಬೇಕಾಗಿ ಬಂದಿತ್ತು.

“ಅಯ್ಯೋ, ದೇವರೇ!” ಅವಳು ಉದ್ಗಾರವೆತ್ತಿ ಅವನ ತೋಳನ್ನು ಹಿಡಿದುಕೊಂಡಳು. “ನಾಯಿಯೇನಾದರೂ ಅದನ್ನ ಅಗಿಯುತ್ತಿತ್ತಾ?”

ಅವನು ದಾರದ ಎಳೆಗಳನ್ನು ಹಿಂದೆಂದೂ ನೋಡಿಲ್ಲವೆಂಬಂತೆ ನೋಡಿದ.

“ಖಂಡಿತವಾಗಿಯೂ ನೀವು ಆ ಅಂಗಿಯನ್ನು ಧರಿಸುವ ಉದ್ದೇಶ ಹೊಂದಿರಲಿಲ್ಲ, ಅಲ್ಲವೇ?”

“ಇದು ನನಗೇನೋ ಚೆನ್ನಾಗಿಯೇ ಇದೆ ಎಂದು ತೋರುತ್ತದೆ,” ಡೌಗ್ಲಾಸ್ ಹೇಳಿದ.

“ಆ ಕಫ್ ಗಳನ್ನು ನೋಡಿ! ನಾವು ಪೂರ್ ಹೌಸಿಗೆ ಹೋಗುತ್ತಿದ್ದೇವೆ ಎಂದು ಯಾರಾದರೂ ಭಾವಿಸುತ್ತಾರೆ.”

“ಹಾಗಾದರೆ ಬಡವರಾಗಿರುವುದು ನಾಚಿಕೆಗೇಡು ವಿಚಾರವೇ?”

“ಇಲ್ಲ!” ಅವಳು ಪ್ರತಿಭಟಿಸಿದಳು. “ಆದರೆ ನಾವು ಬಡವರಲ್ಲ!”

ಸಮಾನತೆ

ಶ್ರೀಮತಿ ಬ್ರಿಡ್ಜ್ ಸಮಾನತೆಯ ಪರಿಕಲ್ಪನೆಯನ್ನು ಅಂಗೀಕರಿಸಿದವಳು. ಪತ್ರಿಕೆಗಳಲ್ಲಿ ನೋಡಿದಾಗ ಅಥವಾ ಕಾರ್ಮಿಕ ಸಂಘಗಳು ಮತ್ತೊಂದು ವಿಜಯವನ್ನು ಸಾಧಿಸಿವೆ ಎಂದು ರೇಡಿಯೊದಲ್ಲಿ ಕೇಳಿದಾಗ ಆಕೆ ಅಂದುಕೊಳ್ಳುತ್ತಿದ್ದುದು: “ಅವರಿಗೆ ಅದರಿಂದ ಒಳ್ಳೆಯದು!” ಎಂದು. ವಿವಿಧ ರಾಜ್ಯಗಳ ಪ್ರತ್ಯೇಕತಾ ನೀತಿಗಳು ಹೆಚ್ಚು ಹೆಚ್ಚು ನಾಗರಿಕ ಸಮುದಾಯಗಳಿಂದ ಮತ್ತು ಫೆಡರಲ್ ಸರ್ಕಾರದಿಂದ ಟೀಕೆಗೆ ಗುರಿಯಾಗುತ್ತಿದ್ದಂತೆ, ಇದು ತಪ್ಪುಗಳನ್ನು ತಿದ್ದಿಕೊಳ್ಳಲು ಸರಿಯಾದ ಸಮಯ ಎಂದು ಅವಳು ಭಾವಿಸುತ್ತಿದ್ದಳು. ತಾರತಮ್ಯವು ಅದು ಹೇಗೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವಳು ಪ್ರಯತ್ನಿಸುತ್ತಿದ್ದಳು. ಈ ಬಗ್ಗೆ ಅವಳಲ್ಲಿ ಎಷ್ಟು ಪ್ರಬಲವಾದ ಭಾವನೆಗಳಿದ್ದರೂ ಅವಳು ಹೇಳುವ ವಿಷಯದ ಬಗ್ಗೆ ಜಾಗರೂಕಳಾಗಿರುತ್ತಿದ್ದಳು. ಏಕೆಂದರೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ಪ್ರಯತ್ನದಿಂದ ಅವಳು ಹೊಂದಿದ್ದ ಎಲ್ಲ ಅಭಿಪ್ರಾಯವೂ ತನ್ನದಾಗಿದೆಯೆಂದು ಅವಳು ತಿಳಿದಿದ್ದಳು: ಅದು ಅವಳ ಪತಿ.

ಶ್ರೀಯುತ ಬ್ರಿಡ್ಜ್ ಅವರು ಎಲ್ಲಾ ಜನರೂ ಸಮಾನರಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ತನ್ನ ನಿರ್ಣಾಯಕ ರೀತಿಯಲ್ಲಿ ಮಾತನಾಡುವಾಗ, ಅವಳು ಅಂತಹ ವಿಷಯದ ಬಗ್ಗೆ ಸಹ ವಿಚಾರ ಮಾಡಬೇಕೆಂದು ಕೋಪದಿಂದಲೇ ಹೇಳುತ್ತಿದ್ದರು. “ನೀವು ಭೂಮಿಯ ಮೇಲಿನ ಎಲ್ಲ ಜನರನ್ನು ಕರೆಯಿರಿ ಮತ್ತು ಎಲ್ಲವನ್ನೂ ಸಮವಾಗಿ ಹಂಚಿರಿ. ಕೇವಲ ಆರು ತಿಂಗಳಲ್ಲಿ ಪ್ರತಿಯೊಬ್ಬರೂ ಈಗ ಇರುವಷ್ಟನ್ನು ಮಾತ್ರ ಹೊಂದಿರುತ್ತಾರೆ. ಅಬ್ರಹಾಂ ಲಿಂಕನ್ ಬಯಸಿದ್ದು ಸಮಾನ ಹಕ್ಕುಗಳು, ಸಮಾನ ಸಾಮರ್ಥ್ಯವಲ್ಲ.”

ಅನೇಕ ಜನರಿಗೆ ಸಮಾನ ಹಕ್ಕುಗಳಿಲ್ಲ. ಯಾವಾಗಲೂ ಅವನಿಗೆ ಆಕೆ ಸೂಚಿಸಲು ಪ್ರಯತ್ನಿಸುತ್ತಿರುವುದು ಇದನ್ನೇ ಎನ್ನುವುದು ನಿಖರವಾಗಿ ಕಾಣುತ್ತದೆ. ಆದರೆ ಕೆಲವು ನಿಮಿಷಗಳ ಚರ್ಚೆಯ ನಂತರ ಅವಳು ತನ್ನಲ್ಲಿ ಎಂಥದೋ ಕೊರತೆಯುಂಟೆಂಬ ವಿಷಣ್ಣ ಭಾವನೆಯಲ್ಲಿ ಮುಳುಗುತ್ತಾಳೆ; ಅದರಿಂದಲೇ ಗೊಂದಲಕ್ಕೊಳಗಾಗಲು ಪ್ರಾರಂಭಿಸುತ್ತಾಳೆ. ಆ ಸಮಯದಲ್ಲಿ ಅವನು ಅವಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇರುವ ವಸ್ತುವನ್ನು ನೋಡುವಂತೆ ಒಂದು ಕ್ಷಣ ದಿಟ್ಟಿಸಿ ನಂತರ ಅವನು ಏನು ಮಾಡುತ್ತಿದ್ದನೋ ಅದನ್ನು ಪುನರಾರಂಭಿಸುತ್ತಾನೆ.

ಸೇರುತ್ತಿದ್ದ ಯಾವುದೇ ಸಭೆಯಲ್ಲಾದರೂ ಸರಿ, ಅವಳು ಅಲ್ಪಸಂಖ್ಯಾತರ ಗುಂಪುಗಳ ಸದಸ್ಯರಿಗೆ ಸದಾ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಹೋದಳು.

“ನಾನು ಇಂಡಿಯಾ ಬ್ರಿಡ್ಜ್,” ಆಕೆ ಸ್ನೇಹಪರವಾಗಿ ಹೇಳುತ್ತಿದ್ದಳು. ಜನರನ್ನು ನನ್ನ ಮನೆಗೆ ಆಹ್ವಾನಿಸಲು ಸಾಧ್ಯವಿದೆ ಎಂದು ಭಾವಿಸುತ್ತಿದ್ದಳು. ಯಾವುದೇ ಅಸಾಮಾನ್ಯ ವಿಚಾರಗಳನ್ನು ನೀಡಲಾಗದ ನೆರೆಹೊರೆಯ ಜನರನ್ನು ಅವಳು ಬಹಳ ಸಮಯದಿಂದ ತಿಳಿದಿದ್ದಳು. ಕೆಲವು ವರ್ಗಗಳ ಹೆಚ್ಚಿದ ಆದಾಯದ ಬಗ್ಗೆ ಚರ್ಚಿಸಿದಾಗ ಆಕೆ ಹೇಳುತ್ತಿದ್ದದ್ದು “ಅವರು ಟಿವಿ ಮತ್ತು ವಾಹನಗಳನ್ನು, ಅಷ್ಟೇಕೆ ಬೇಕಿರುವ ಎಲ್ಲವನ್ನೂ ಹೊಂದಿರುವುದು ಒಳ್ಳೆಯದಲ್ಲವೇ” ಎಂದು.

ಪಟ್ಟಣದ ಉತ್ತರದಲ್ಲಿ ನೀಗ್ರೋ ದಂಪತಿಗಳು ಬಿಳಿಯರ ನೆರೆಹೊರೆಯಲ್ಲಿ ಕಿರಾಣಿ ಅಂಗಡಿಯೊಂದನ್ನು ತೆರೆದರು. ಆ ರಾತ್ರಿಯೇ ಅಂಗಡಿಯ ಕಿಟಕಿಗಳನ್ನು ಒಡೆದುಹಾಕಲಾಯಿತು. ಅಂಗಡಿಯು ಬೆಂಕಿಗೆ ಆಹುತಿಯಾಯಿತು. ವರ್ತಮಾನ ಪತ್ರಿಕೆಗಳು ಹಾಳಾದ ಆಸ್ತಿಯ, ನಗುತ್ತಿರುವ ಇಬ್ಬರು ಪೊಲೀಸರ ಮತ್ತು ತಮ್ಮ ಜೀವಮಾನದ ಸಂಪೂರ್ಣ ಉಳಿತಾಯವನ್ನು ಕಳೆದುಕೊಂಡಿರುವ ನೀಗ್ರೋ ದಂಪತಿಗಳ ಛಾಯಾಚಿತ್ರಗಳನ್ನು ಪ್ರಕಟಿಸಿದವು. ಪತಿ ಕೆಲಸಕ್ಕೆ ತೆರಳಿದ ಹಲವು ಗಂಟೆಗಳ ನಂತರ ಶ್ರೀಮತಿ ಬ್ರಿಡ್ಜ್ ಈ ಕಥೆಯನ್ನು ಸ್ವತಃ ಓದುತ್ತಿದ್ದಳು. ಅವಳು ಯುವ ನೀಗ್ರೋ ಮತ್ತು ಅವನ ಹೆಂಡತಿಯ ಶೋಚನೀಯ ಮುಖಗಳನ್ನು ಅಧ್ಯಯನ ಮಾಡುವಂತೆ ತದೇಕಚಿತ್ತಳಾಗಿ ಕಡುದುಃಖದಿಂದಲೇ ನೋಡಿದಳು.

ವೃತ್ತಪತ್ರಿಕೆಯಾದ್ಯಂತ ಬೆಳಿಗ್ಗೆಯ ಸೂರ್ಯನ ಬೆಚ್ಚಗಿನ ಕಿರಣ ಬಿದ್ದಿತ್ತು. ಸೂರ್ಯ ಬೆಚ್ಚಗೆ, ಹರ್ಷಚಿತ್ತದಿಂದ ಓರೆಯಾದ. ಅಡುಗೆಮನೆಯಲ್ಲಿ ಹ್ಯಾಜೆಲ್ ಸ್ತುತಿಗೀತೆಗಳನ್ನು ಹಾಡಿಕೊಂಡು ಆಪಲ್ ಪೈಗಾಗಿ ಸೇಬುಗಳ ಸಿಪ್ಪೆ ತೆಗೆಯುತ್ತಿದ್ದಳು. ಅವಳ ಕಿಟಕಿಯಿಂದ ನೋಡಿದರೆ ಭೂಮಿಯೆಲ್ಲವೂ ಸಮಾಧಾನಗೊಂಡಂತೆ ತೋರುತ್ತಿತ್ತು. ಆದರೂ ಅಂತಹ ವಿಷಯಗಳು ಇನ್ನೂ ಮನಸ್ಸಿಗೆ ಬಂದವು. ಕೈಯಲ್ಲಿ ಬೆಣ್ಣೆ ಹಚ್ಚಿದ ಟೋಸ್ಟಿನ ತುಂಡು ಹಿಡಿದು ತನ್ನ ಉಪಾಹಾರದ ಮೂಲೆ ಸೇರಿದ ಶ್ರೀಮತಿ ಬ್ರಿಡ್ಜ್ ಗೆ ತಡೆಯಲಾಗದ ಬಯಕೆಯೊಂದು ಉಂಟಾಯಿತು. ಅವಳು ಈ ದುರದೃಷ್ಟಕರ ಜನರನ್ನು ತನ್ನ ಎದೆಗೆ ಒತ್ತಿ ಹಿಡಿದು ತನಗೆ ನೋಯುವುದರ ಅರ್ಥವೇನೆಂದು ತಿಳಿದಿದೆ. ಎಲ್ಲವೂ ಸರಿಹೋಗುತ್ತದೆ ಎಂದು ಹೇಳಬೇಕು ಎನ್ನುವುದದು.

ಅವಳು ಐದೈದು ನಿಮಿಷಕ್ಕೂ ಬಚ್ಚಲು ಮನೆಗಳತ್ತ ದೃಷ್ಟಿ ಹಾಯಿಸುತ್ತಾ ಬಣ್ಣದ ಕರವಸ್ತ್ರಗಳನ್ನು ಹೋಲುವ ಅತಿಥಿ ಟವೆಲ್ ಗಳು ಚೂರೂ ಕೊಳೆಯಾಗದೆ ಇನ್ನೂ ಒಂದರ ಮೇಲೊಂದು ಕಪಾಟಿನಲ್ಲೇ ಇರುವುದನ್ನು ಗಮನಿಸಿಕೊಂಡಳು. ಸಂಜೆಯ ಕೊನೆಯಲ್ಲಿ ಕೇವಲ ಮೂರು ಟವೆಲ್ಲುಗಳು ಮಾತ್ರ ವ್ಯಸ್ತವಾಗಿದ್ದವು.

ಗವುಸುಗಳು

ಅವಳು ಯಾವಾಗಲೂ ತನ್ನ ಸ್ನೇಹಿತರೊಂದಿಗೆ ಕೂಡಿ ಗಮನಾರ್ಹವಾದ ದಾನ ಧರ್ಮ ಕಾರ್ಯವನ್ನು ಮಾಡಿದ್ದಳು. ವಿಶೇಷವಾಗಿ ಒಂಭತ್ತನೇ ಬೀದಿಯಲ್ಲಿರುವ ಒಂದು ಸಣ್ಣ ಅಂಗಡಿಯಲ್ಲಿ ಡ್ರೈವ್ ಗಳಲ್ಲಿ ಸಂಗ್ರಹಿಸಿದ ಬಳಸಿದ ಬಟ್ಟೆಗಳನ್ನು ಇಟ್ಟು ವಿತರಿಸುತ್ತಿದ್ದಳು. ಈ ಅಂಗಡಿಯಲ್ಲಿ ಎರಡು ಕೋಣೆಗಳಿದ್ದವು. ಮುಂಭಾಗದಲ್ಲಿ ಒಂದು ಸಾಲಿನ ಇಸ್ಪೇಟಾಟದ ಟೇಬಲ್ ಗಳನ್ನು ಒಟ್ಟಿಗೆ ಇರಿಸಲಾಗಿತ್ತು. ಅದರ ಹಿಂದೆ ಚಾರಿಟಿ ಕಾರ್ಮಿಕರು ನಿಂತು ಏನನ್ನಾದರೂ ಧರಿಸಲು ಬಯಸುವ ಜನರಿಗೆ ಸಹಾಯ ಮಾಡಬೇಕಾಗಿತ್ತು. ಹಿಂದಿನ ಕೋಣೆಯಲ್ಲಿ ಇನ್ನೂ ಹಲವಾರು ಇಸ್ಪೇಟಾಟದ ಟೇಬಲ್ ಗಳು ಮತ್ತು ಮಡಚಿ ಇಡಬಹುದಾದ ಮರದ ಕುರ್ಚಿಗಳು ಇದ್ದವು. ಶ್ರೀಮತಿ ಬ್ರಿಡ್ಜ್ ಮತ್ತು ಅವಳ ಸಹ ಕೆಲಸಗಾರರು ತಮ್ಮ ಊಟವನ್ನು ಇಲ್ಲೇ ಮಾಡುತ್ತಿದ್ದರು ಅಥವಾ ಮುಂದಿನ ಕೋಣೆಯ ಕರ್ತವ್ಯದಲ್ಲಿ ಇರದಿದ್ದಾಗ ವಿಶ್ರಾಂತಿ ಪಡೆಯುತ್ತಿದ್ದರು.

ಅವಳು ಸಾಮಾನ್ಯವಾಗಿ ಮ್ಯಾಡ್ಜ್ ಅರ್ಲೆನ್ ಜೊತೆ ಅಲ್ಲಿಗೆ ಹೋಗುತ್ತಿದ್ದಳು. ಒಂದು ವಾರ ಅವರು ಆರ್ಲೆನ್ಸರ ಕ್ರಿಸ್ಲರ್ ನಲ್ಲಿ, ಮುಂದಿನ ವಾರ ಶ್ರೀಮತಿ ಬ್ರಿಡ್ಜ್ ಳ ಲಿಂಕನ್ ನಲ್ಲಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಬ್ರಿಡ್ಜ್ ತನ್ನ ಪಾರ್ಕಿಂಗ್ ಸ್ಟಾಲ್ ಬಾಡಿಗೆಗೆ ಪಡೆದ ಗ್ಯಾರೇಜ್ ನ ಮುಂದೆ ಯಾವಾಗಲೂ ನಿಲ್ಲಿಸುತ್ತಿದ್ದಳು. ನಿಲ್ಲಿಸಿ ಜೋರಾಗಿ ಹಾರ್ನ್ ಮಾಡುತ್ತಿದ್ದಳು. ಯಾರಾದರೂ ದೃಷ್ಟಿಗೆ ಬಿದ್ದರೆ ಅವಳು ಸನ್ನೆ ಮಾಡಿ ಕರೆಯುತ್ತಿದ್ದಳು. ಸಾಮಾನ್ಯವಾಗಿ ಜಾರ್ಜ್ ಎಂಬ ಹೆಸರಿನ ಒಬ್ಬ ಪರಿಚಾರಕ ತನ್ನ ಜಾಕೆಟ್ ಬಟನ್ ಹಾಕಿಕೊಳ್ಳುತ್ತಾ ಹೊರಬರುತ್ತಿದ್ದ. ಅವನು ಹಿಂದಿನ ಸೀಟಿನಲ್ಲಿ ಕುಳಿತ ಮೇಲೆ ಬಟ್ಟೆ ಅಂಗಡಿಗೆ ಸವಾರಿ ಹೊರಡುತ್ತಿತ್ತು. ಅಲ್ಲಿ ಅವನು ಹೊರಗೆ ಜಿಗಿದು ಶ್ರೀಮತಿ ಬ್ರಿಡ್ಜ್ ಅವರಿಗಾಗಿ ಬಾಗಿಲನ್ನು ತೆರೆಯುತ್ತಿದ್ದ. ಅದರ ನಂತರ ಲಿಂಕನ್ ನನ್ನು ಮತ್ತೆ ಗ್ಯಾರೇಜ್ ಗೆ ಮರಳಿಸಲಾಗುತ್ತಿತ್ತು, ಏಕೆಂದರೆ ಅಂತಹ ನೆರೆಹೊರೆಯಲ್ಲಿ ಕಾರನ್ನು ಬೀದಿಯಲ್ಲಿ ಬಿಡುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ.

“ಜಾರ್ಜ್, ಆರು, ಅಥವಾ ಆರು-ಹದಿನೈದರ ಸುಮಾರಿಗೆ ನೀನು ಇಲ್ಲಿಗೆ ಬರಬಹುದೇ?” ಎಂದು ಅವರು ಕೇಳುತ್ತಿದ್ದರು.

ಅವನು ಯಾವಾಗಲೂ “ಸಂತೋಷವಾಗಿ” ಎಂದು ಉತ್ತರಿಸುತ್ತಿದ್ದ, ತನ್ನ ಕ್ಯಾಪಿನ ಮುಂಚಾಚನ್ನು ಮುಟ್ಟಿ ಕಾರ್ ಓಡಿಸಲು ಮೊದಲಿಡುತ್ತಿದ್ದ.

ಇಬ್ಬರೂ ತಮ್ಮ ಅಂಗಡಿಗೆ ಕಾಲಿಡುತ್ತಿರುವಾಗ ಶ್ರೀಮತಿ ಅರ್ಲೆನ್ ಹೇಳಿದರು “ಅವರು ನೋಡಲು ತುಂಬಾ ಒಳ್ಳೆಯವರಾಗಿ ಕಾಣುತ್ತಾರೆ”.

“ಓಹ್, ಅವನು! ನಿಜಕ್ಕೂ” ಶ್ರೀಮತಿ ಬ್ರಿಡ್ಜ್ ಶ್ರೀಮತಿ ಅರ್ಲೆನ್ ಅವರ ಮಾತನ್ನು ಒಪ್ಪಿದಳು. “ಅವನು ನಮ್ಮ ಹತ್ತಿರ ಇದ್ದ ಗ್ಯಾರೇಜ್ ಪುರುಷರಲ್ಲಿಯೇ ಉತ್ತಮ”

“ನೀವು ಎಷ್ಟು ದಿನದಿಂದ ಅಲ್ಲಿ ಕಾರ್ ಪಾರ್ಕ್ ಮಾಡುತ್ತಿದ್ದೀರಿ?”

“ಬಹಳ ಸಮಯದಿಂದಲೂ. ಮೊದಲು ನಾವು ವಾಲ್ನಟ್ ನಲ್ಲಿ ಆ ಭಯಂಕರವಾದ ಸ್ಥಳದಲ್ಲಿ ಪಾರ್ಕ್ ಮಾಡುತ್ತಿದ್ದೆವು.”

“ಆ ಪಾಪ್ಕಾರ್ನ್ ಮೆಶೀನ್ ಇಟ್ಟುಕೊಂಡಿದ್ದಾನಲ್ಲ? ಅಲ್ಲಿಯಾ? ದೇವರೇ, ಅದು ಚಿಕ್ಕದಲ್ಲವೇ?”

“ಇಲ್ಲ, ಆ ಸ್ಥಳವಲ್ಲ. ಇಟಾಲಿಯನ್ನರ ಒಂದು ಜಾಗ. ನನ್ನ ಗಂಡನ ಅಭಿಪ್ರಾಯ ಇಟಾಲಿಯನ್ನರ ಬಗ್ಗೆ ಹೇಗೆ ಇದೆ ಎಂದು ನಿಮಗೆ ತಿಳಿದಿದೆ. ಸರಿ, ಅದು ಅವರಿಗೆಲ್ಲ ಪ್ರಧಾನ ಕಚೇರಿಯಂತೆ ಕಾಣುತ್ತದೆ. ಅವರು ತಮ್ಮ ಸ್ಯಾಂಡ್ವಿಚ್ ತಿನ್ನಲು ಮತ್ತು ನ್ಯೂಯಾರ್ಕ್ ನಿಂದ ಪ್ರಸಾರವಾಗುವ ಒಪೆರಾ ಕೇಳಲು ಅಲ್ಲಿಗೆ ಬಂದವರು. ಅಲ್ಲಿ ನಿಲ್ಲಿಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಅಂತಿಮವಾಗಿ ವಾಲ್ಟರ್, ‘ನಾನು ಗ್ಯಾರೇಜ್ ಬದಲಾಯಿಸಲಿದ್ದೇನೆ.’ ಅಂದರು. ಹಾಗೇ ಮಾಡಿದ್ದೇವೆ.

ಅವರು ಕೊಳೆಯಾದ ಮತ್ತು ಹುಳಿಯಿಂದ ತೊಳೆಯದ ಬಟ್ಟೆಗಳಿಂದ ತುಂಬಿದ್ದ ಇಸ್ಪೇಟ್ ಟೇಬಲ್ ಗಳ ಸಾಲನ್ನು ದಾಟಿ ಹಿಂಬದಿಯ ಕೋಣೆಗೆ ಹೋದರು. ಅಲ್ಲಿ ಕೆಲವರು ಮುಂಚಿತವಾಗಿ ಬಂದವರು ಕಾಫಿ ಮತ್ತು ಎಕ್ಲೇರ್ ಗಳನ್ನು ಸೇವಿಸುತ್ತಿದ್ದರು. ಶ್ರೀಮತಿ ಬ್ರಿಡ್ಜ್ ಮತ್ತು ಶ್ರೀಮತಿ ಅರ್ಲೆನ್ ತಮ್ಮ ಕೋಟುಗಳನ್ನು ನೇತುಹಾಕಿ ಕಾಫಿ ಕುಡಿದು ಕೆಲಸಕ್ಕೆ ಸಿದ್ಧರಾದರು. ಸುಧಾರಣಾ ಶಾಲೆಯು ಸಹಾಯ ಮಾಡಲು ತಮ್ಮ ಕೆಲವು ಹುಡುಗರನ್ನು ಕಳುಹಿಸಿತ್ತು. ಅವರನ್ನು ಇತ್ತೀಚಿಗಿನ ಬಳಸಿದ ಬಟ್ಟೆಯ ಚೀಲಗಳನ್ನು ಬಿಚ್ಚಿ ಹೊರಗೆ ಹಾಕುವ ಕೆಲಸಕ್ಕೆ ಹಚ್ಚಲಾಯಿತು.

ಎರಡು ಗಂಟೆಯ ಹೊತ್ತಿಗೆ ಎಲ್ಲವೂ ದಿನದ ವಿತರಣೆಗೆ ಸಿದ್ಧವಾಯಿತು. ಬಾಗಿಲುಗಳ ಚಿಲಕ ತೆಗೆದು ಕಾದಿದ್ದ ಬಡವರಲ್ಲಿ ಮೊದಲನೆಯವರು ಕೌಂಟರ್ ಬಳಿ ನಿಂತಿದ್ದವರು ಶ್ರೀಮತಿ ಬ್ರಿಡ್ಜ್ ಮತ್ತು ಇನ್ನಿಬ್ಬರ ಮುಂದೆ ನಿಂತರು. ಉತ್ತೇಜಿಸುವ ನಗೆಯೊಂದಿಗೆ ನಿಂತಿದ್ದ ಈ ಮೂವರೂ ಕೈಗವಸು ಧರಿಸಿದ್ದರು.

ರಾಬೆರ್ಯಾಟ್ ಹೆವುಡ್ ಡಂಕನ್ಸ್ –

ಹೇವುಡ್ ಡಂಕನ್ಸರ ಮನೆಯಲ್ಲಿ ನಡೆದ ಕಾಕ್ಟೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿರುವಾಗಲೇ ಬ್ರಿಡ್ಜ್ ದಂಪತಿಗಳನ್ನು ಬಹುತೇಕ ದೋಚಲಾಯಿತು. ಅದು ರಾತ್ರಿ ಹತ್ತು ಗಂಟೆಯ ನಂತರ. ಅವಳು ಬಫೆ ಟೇಬಲ್ ನಿಂದ ಉಪ್ಪು ಮೀನು-ಆಂಚೊವಿ ಕ್ರ್ಯಾಕರ್ ತೆಗೆದುಕೊಳ್ಳುತ್ತಿದ್ದಂತೆಯೇ ನಾಲ್ಕು ಮಂದಿ ಪುರುಷರು ರಿವಾಲ್ವರ್ ಗಳೊಂದಿಗೆ ಬಾಗಿಲಲ್ಲಿ ಕಾಣಿಸಿಕೊಂಡರು. ಅವರು ಗುರುತು ಸಿಗದಂತೆ ಹಾರ್ನ್-ರಿಮ್ಡ್ ಗ್ಲಾಸ್ ಗಳಿಗೆ ಜೋಡಿಸಲಾದ ಪ್ಲಾಸ್ಟಿಕ್ ಮೂಗುಗಳನ್ನು ಧರಿಸಿದ್ದರು. ಅವರಲ್ಲಿ ಒಬ್ಬ, “ಆಲ್ ರೈಟ್, ಎಲ್ಲರೂ ಕೇಳಿ. ನಾವು ದರೋಡೆಗೆ ಬಂದಿದ್ದೇವೆ!” ಎಂದು ಅರಚಿದ. ಅವರಲ್ಲಿ ಮತ್ತೊಬ್ಬ – ಶ್ರೀಮತಿ ಬ್ರಿಡ್ಜ್ ಆ ನಂತರ ಪೋಲೀಸರಿಗೆ ಅವನನ್ನು ವಿವರಿಸಿದ್ದು ಅವನು ಟೈ ಧರಿಸಿರಲಿಲ್ಲ ಎಂದು. ಅವನು ಪಿಯಾನೋ ಬೆಂಚ್ ಮೇಲೆ ಹತ್ತಿ, ಅಲ್ಲಿಂದ ಪಿಯಾನೋ ಮೇಲಕ್ಕೆ ಹತ್ತಿ ನಿಂತು ತನ್ನ ಗನ್ ಅನ್ನು ವಿವಿಧ ಜನರ ಕಡೆಗೆ ತೋರಿಸಿದ. ಮೊದಲಿಗೆ ಎಲ್ಲರೂ ಇದು ತಮಾಷೆಯೆಂದು ಭಾವಿಸಿದ್ದರು. ಆದರೆ ಅದು ತಮಾಷೆ ಅಲ್ಲ. ಏಕೆಂದರೆ ದರೋಡೆಕೋರರು ನಮ್ಮ ತಲೆಯ ಮೇಲೆ ಕೈಗಳ ಹೊತ್ತು ಗೋಡೆಯತ್ತ ಮುಖ ಮಾಡಿಕೊಂಡಿರುವಂತೆ ಮಾಡಿದರು. ಅವರಲ್ಲಿ ಒಬ್ಬ ಮೇಲಕ್ಕೆ ಓಡಿ ತನ್ನ ತೋಳುಗಳ ತುಂಬ ತುಪ್ಪಳದ ಕೋಟುಗಳು ಮತ್ತು ಪರ್ಸುಳೊಂದಿಗೆ ಇಳಿದು ಬಂದ. ಇನ್ನೂ ಇಬ್ಬರು ಕೋಣೆಯ ಸುತ್ತಲೂ ಪುರುಷರ ಜೇಬಿನಿಂದ ನೋಟುಗಳನ್ನು ಸೆಳೆಯಲು ಮತ್ತು ಮಹಿಳೆಯರ ಬೆರಳುಗಳಿಂದ ಉಂಗುರಗಳನ್ನು ಕೀಳಲು ಪ್ರಾರಂಭಿಸಿದರು. ಡಾ. ಫೋಸ್ಟರ್ ಮತ್ತು ಅರ್ಲೆನ್ಸ್ ನಡುವೆ ನಿಂತಿದ್ದ ಮಿಸ್ಟರ್ ಅಥವಾ ಮಿಸೆಸ್ ಬ್ರಿಡ್ಜ್ ಬಳಿಗೆ ಅವರು ಹೋಗುವ ಮೊದಲು ಏನೋ ಅವರನ್ನು ಭಯಭೀತಗೊಳಿಸಿತು. ಪಿಯಾನೋ ಮೇಲೆ ನಿಂತಿದ್ದವನು ಕರ್ಕಶ ಧ್ವನಿಯಲ್ಲಿ ಕಿರುಚಿದ್ದ, “ಆ ನೀಲಿ ಬಣ್ಣದ ಕ್ಯಾಡಿಲಾಕ್ ನ ಕೀ ಯಾರ ಹತ್ತಿರ ಇದೆ?”

ಅದೇ ಸಮಯದಲ್ಲಿ ಶ್ರೀಮತಿ ರಾಲ್ಫ್ ಪೋರ್ಟರ್ ಕಿರುಚಿಕೊಂಡಳು, “ನೀನು ಅವನಿಗೆ ಹೇಳಬೇಡ, ರಾಲ್ಫ್!”

ಆದರೆ ಡಕಾಯಿತರು ಬಿಡದೆ ಮಿಸ್ಟರ್ ಪೋರ್ಟರ್ ನ ಕೀಗಳನ್ನು ಎತ್ತಿಕೊಂಡರು. ಮೂವತ್ತು ನಿಮಿಷಗಳ ಕಾಲ ಯಾರೂ ಅಲ್ಲಾಡಬಾರದೆಂದು ಎಲ್ಲರಿಗೂ ಎಚ್ಚರಿಸಿ ಅವರು ಮುಂಬಾಗಿಲ ಮೂಲಕ ಓಡಿಹೋದರು.

ಇದು ಪತ್ರಿಕೆಯ ಮೊದಲ ಪುಟದಲ್ಲಿಯೇ ಪ್ರಕಟವಾಯಿತು. ಎಂಟನೇ ಪುಟದಲ್ಲಿ ಘಟನೆಯ ಚಿತ್ರಗಳನ್ನು ಹಾಕಲಾಗಿತ್ತು. ಗೀರುಗೀರಾದ ಪಿಯಾನೋದ ಹತ್ತಿರದ ಚಿತ್ರವೂ ಸೇರಿದಂತೆ. ಪತಿ ಕೆಲಸಕ್ಕೆ ಹೋದ ನಂತರ ಮರುದಿನ ಬೆಳಿಗ್ಗೆ ಉಪಾಹಾರ ಕೋಣೆಯಲ್ಲಿ ಕುಳಿತು ವರದಿಯನ್ನು ಓದಿದ ಶ್ರೀಮತಿ ಬ್ರಿಡ್ಜ್, ಸ್ಟುವರ್ಟ್ ಮಾಂಟ್ಗೊಮೆರಿ ಕೇವಲ $2.14 ಅನ್ನು ಹೊಂದಿದ್ದರು ಮತ್ತು ಶ್ರೀಮತಿ ನೋಯೆಲ್ ಜಾನ್ಸನ್ ಅವರ ಉಂಗುರವು ಜಿರ್ಕಾನ್ ಆಗಿತ್ತು ಎನ್ನುವುದನ್ನು ತಿಳಿದು ಆಶ್ಚರ್ಯಚಕಿತರಾದರು.

ಮನೆಯವರೆಗೂ ನನ್ನನ್ನು ಹಿಂಬಾಲಿಸಿ

ಹಲವಾರು ಮಹಿಳೆಯರು, ಅವರಲ್ಲಿ ಒಬ್ಬರು ಮ್ಯಾಡ್ಜ್ ಅರ್ಲೆನ್ ರಿಗೆ ಸಾಕಷ್ಟು ಆಪ್ತರಾಗಿದ್ದವರು ಹೇಳಿದ್ದರ ಪ್ರಕಾರ ವಾರ್ಡ್ ಪಾರ್ಕ್ ವೇ ಅನತಿದೂರದಲ್ಲಿಯೇ ಹಲ್ಲೆಗೊಳಗಾದ ಯಾರೋ ಒಬ್ಬರ ಹೆಸರು ಅವರಿಗೆ ತಿಳಿದಿತ್ತು. ಆದರೂ ಹೆದರಿಕೆ ನಿಜಕ್ಕೂ ಹೇಗೆ ಪ್ರಾರಂಭವಾಯಿತು ಎಂಬುದು ಯಾರಿಗೂ ತಿಳಿದಿರಲಿಲ್ಲ.

ಇದು ಪ್ಲಾಜಾ ಬಳಿ ಸಂಭವಿಸಿದೆ ಎಂದು ಕೆಲವರು ಭಾವಿಸಿದರು, ಇತರರು ಅದಕ್ಕಿಂತ ದಕ್ಷಿಣಕ್ಕೆ ದೂರದಲ್ಲಿ ಎಂದುಕೊಂಡಿದ್ದರು ಇದು ತಡರಾತ್ರಿಯಲ್ಲಿ ಸಂಭವಿಸಿದೆ ಎಂದು ಎಲ್ಲರೂ ಸಾಮಾನ್ಯವಾಗಿ ಒಪ್ಪಿಕೊಂಡರು. ಕಥೆ ಹೇಗೆಂದರೆ, ಪ್ರಸಿದ್ಧ ಕುಟುಂಬದ ಒಬ್ಬ ಮಹಿಳೆ ಒಬ್ಬಂಟಿಯಾಗಿ ಮನೆಗೆ ಕಾರು ಓಡಿಸುತ್ತಿದ್ದಳು. ಅವಳು ಇಂಟರ್ಸೆಕ್ಷನ್ ಒಂದರಲ್ಲಿ ನಿಧಾನ ಮಾಡಿದ್ದಾಗ ಒಬ್ಬ ವ್ಯಕ್ತಿ ಯಾವುದೋ ಪೊದೆಯ ಹಿಂದಿನಿಂದ ಜಿಗಿದು ಬಾಗಿಲು ಜಗ್ಗಿದ್ದ. ದಾಳಿಯು ಪ್ರಯೋಜನಕಾರಿಯಾಗಿತ್ತೋ ಇಲ್ಲವೋ ಎಂಬುದನ್ನು ಆ ಕಥೆ ಹೇಳಲಿಲ್ಲ. ಪ್ರಸಂಗದ ಪ್ರಮುಖ ಭಾಗವೆಂದರೆ ಒಬ್ಬ ಮನುಷ್ಯನಿದ್ದ, ಅವನು ಜಿಗಿದು ಕಾರಿನ ಬಾಗಿಲು ಜಗ್ಗಿ ತೆರೆದ ಎಂಬುದಷ್ಟೇ. ಅದರ ಬಗ್ಗೆ ಪತ್ರಿಕೆಯಲ್ಲಿ ಏನೂ ಇರಲಿಲ್ಲ, ಅಥವಾ ದಿ ಟ್ಯಾಟ್ಲರ್ ನಲ್ಲಿ ಅಹಿತಕರವಾದ ಯಾವುದನ್ನೂ ಮುದ್ರಿಸುವುದಿಲ್ಲವಾಗಿ ಹಾಗೆ ಆಗಿದ್ದೀತು. ಇವೇ ಕಾರಣಗಳಿಂದ ಹಲ್ಲೆಯ ದಿನಾಂಕವನ್ನು ನಿರ್ಧರಿಸಲಾಗಿರಲಿಲ್ಲ. ಖಚಿತವಾದ ವಿಚಾರವೆಂದರೆ ಅದು ಅನತಿಕಾಲದ ಹಿಂದೆ ಕತ್ತಲೆಯ ರಾತ್ರಿಯಲ್ಲಿ ನಡೆದಿತ್ತು.

ಈ ಕಥೆಯು ಪ್ರಚಾರಕ್ಕೆ ಬಂದ ಬಳಿಕ ಯಾವುದೇ ಮಾಟ್ರಾನ್ ಗಳು ಸೂರ್ಯಾಸ್ತದ ನಂತರ ಎಲ್ಲಿಗಾದರೂ ಸರಿಯೆ ಏಕಾಂಗಿಯಾಗಿ ಕಾರು ಓಡಿಸಲು ಬಯಸಲಿಲ್ಲ. ಅದರೆ ಅವರ ಗಂಡಂದಿರು ಕಚೇರಿಯಲ್ಲಿ ತಡವಾಗಿ ಕೆಲಸ ಮಾಡುತ್ತಿದ್ದರಿಂದ ಅಥವಾ ದಣಿದು ಮಲಗಿ ಓದಿಕೊಂಡಿರಲು ಬಯಸಿದ್ದರಿಂದ ಅವರು ಸ್ವತಃ ಕಾಕ್ಟೈಲ್ ಪಾರ್ಟಿಗೆ ಅಥವಾ ರಾತ್ರಿಯ ಭೋಜನ ಕೂಟಕ್ಕೆ ತಾವೇ ಕಾರು ಚಲಾಯಿಸಿಕೊಂಡು ಆತಂಕದಿಂದಲೇ ಹೋಗಬೇಕಾಗಿತ್ತು. ಕಾರಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ಅವರು ಹೋಗುತ್ತಿದ್ದರು. ಪತಿ-ಆತಿಥೇಯರು ತಮ್ಮ ವಾಹನವನ್ನು ಸಂಜೆಯಲ್ಲಿ ಗ್ಯಾರೇಜ್ ನಿಂದ ಹೊರತೆಗೆಯುವುದು ಮತ್ತು ಮಾಟ್ರಾನ್ ಗಳನ್ನು ಅವರು ಮನೆಗಳಿಗೆ ಹಿಂತಿರುಗುವ ತನಕ ಅನುಸರಿಸುವುದು ವಾಡಿಕೆಯಾಯಿತು. ಆದ್ದರಿಂದ ಕಂಟ್ರಿ ಕ್ಲಬ್ ಜನವಸತಿ ಜಿಲ್ಲೆಯ ಬೌಲೆವಾರ್ಡ್ ಗಳಲ್ಲಿ ಕಾರುಗಳು ಎಚ್ಚರಿಕೆಯಿಂದ ಅಂತ್ಯಕ್ರಿಯೆಯ ಮೆರವಣಿಗೆಗಳಂತೆ ಚಲಿಸುತ್ತಿರುವುದನ್ನು ಕಾಣಬಹುದಾಗಿತ್ತು.

ಗಂಡ ಸಮಯಕ್ಕೆ ಸರಿಯಾಗಿ ಕಚೇರಿಯಿಂದ ಹಿಂತಿರುಗದಿದ್ದಾಗ, ಅಥವಾ ಅವನು ತುಂಬಾ ದಣಿದು ಹಾಸಿಗೆಗೆ ಒರಗಿ ರಜೆಯ ಜಾಹೀರಾತುಗಳನ್ನು ಓದುತ್ತ ಮಲಗಲು ಆದ್ಯತೆ ನೀಡಿದಾಗ ಶ್ರೀಮತಿ ಬ್ರಿಡ್ಜ್ ಆ ಮಹಿಳೆಯರು ಬರುತ್ತಿದ್ದಂತೆ ಮನೆಗೆ ಬರುತ್ತಿದ್ದಳು. ಅವಳ ಮನೆಯ ಡ್ರೈವ್ ಹಾದಿಯಲ್ಲಿ ಮೆರವಣಿಗೆ ಸ್ಥಗಿತಗೊಳ್ಳುತ್ತಲಿತ್ತು. ಅವಳು ಗ್ಯಾರೇಜ್ ಗೆ ಗಾಡಿ ಓಡಿಸಿ, ನಿಲ್ಲಿಸಿ ಹೊರಬಂದು ಮುಂಬಾಗಿಲಿನಿಂದ ಮನೆ ಬೀಗ ತೆಗೆದು ಒಳಪ್ರವೇಶಿಸುವವರೆಗೂ ನಿರಂತರವಾಗಿ ಅವಳು ಗೋಚರಿಸುತ್ತಿರುವಂತೆ ಎಂಜಿನ್ ಗಳು ಐಡಲ್ ಆಗುತ್ತಿದ್ದವು. ಇಷ್ಟು ಮಾಡಿದ ನಂತರ ಅವಳು ಒಳಗೆ ಹೆಜ್ಜೆ ಹಾಕುತ್ತಿದ್ದಳು. ಹಾಲ್ ನ ದೀಪಗಳನ್ನು ಆನ್ ಮಾಡುತ್ತಿದ್ದಳು ಮತ್ತು “ನಾನು ಮನೆಗೆ ಬಂದಿದ್ದೇನೆ” ಎಂದು ಗಂಡನಿಗೆ ಕೂಗಿ ಹೇಳುತ್ತಿದ್ದಳು. ಅವನು ಉತ್ತರವಾಗಿ ಕೆಲವು ಶಬ್ದಗಳನ್ನು ಮಾಡುತ್ತಿದ್ದ. ನಂತರವೇ ಅವಳು ಕೆಲವು ಬಾರಿ ಅಂಗಳದ ದೀಪಗಳನ್ನು ಮಿನುಗಿಸುತ್ತಿದ್ದಳು. ಅವಳು ಸುರಕ್ಷಿತ ಎಂದು ಹೊರಗೆ ಕಾಯುತ್ತಿರುವ ಸ್ನೇಹಿತರಿಗೆ ತೋರಿ, ನಂತರವೇ ಅವರೆಲ್ಲರೂ ರಾತ್ರಿಯ ಕತ್ತಲಿನ ಒಳಕ್ಕೆ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು.

ಅಪರಿಚಿತ ಪುರುಷರನ್ನು ಎಂದಿಗೂ ಮಾತನಾಡಿಸಬೇಡಿ

ಡೌನ್ಟೌನ್ ಬೀದಿಯಲ್ಲಿನ ಡಿಪಾರ್ಟ್ಮೆಂಟ್ ಸ್ಟೋರ್ಸಿನ ಹೊರಗೆ ಒಬ್ಬ ವ್ಯಕ್ತಿ ಅವಳಿಗೆ ಏನನ್ನೋ ಹೇಳಿದ. ಅವಳು ಅವನನ್ನು ಕಡೆಗಣಿಸಿದಳು. ಆದರೆ ಆ ಕ್ಷಣದಲ್ಲಿ ಜನಸಮೂಹ ಅವರನ್ನು ಒಟ್ಟಿಗೆ ಸುತ್ತುವರಿಯಿತು.

“ಹೇಗಿದ್ದೀರಿ?” ಅವನು ನಗುತ್ತಾ ತನ್ನ ಹ್ಯಾಟ್ ಮುಟ್ಟಿಕೊಂಡ.
ಅವನು ಸುಮಾರು ಐವತ್ತು ವಯಸ್ಸಿನವ. ಬೆಳ್ಳಿಯ ಕೂದಲು ಮತ್ತು ಪಿಶಾಚಿಯ ಕಿವಿ ಹೊಂದಿದ್ದಾನೆಂದು ಅವಳು ಗಮನಿಸಿದಳು. ಅವನ ಮುಖ ಕೆಂಪಾಯಿತು. ಅವನು ವಿಚಿತ್ರವಾಗಿ ನಕ್ಕ.

“ನಾನು ಗ್ಲಾಡಿಸ್ ಶ್ಮಿಟ್ ಅವರ ಪತಿ.”

“ಓಹ್, ದೇವರೇ!” ಶ್ರೀಮತಿ ಬ್ರಿಡ್ಜ್ ಉದ್ಗರಿಸಿದಳು. “ನಾನು ನಿಮ್ಮನ್ನು ಗುರುತಿಸಲಿಲ್ಲ.”

ಕಾನ್ರಾಡ್

ಒಂದು ಬೆಳಿಗ್ಗೆ ಸುಮ್ಮನೆ ಪುಸ್ತಕಗಳ ಮೇಲಿನ ಧೂಳೊರೆಸುವಾಗ ಅವಳು ಕ್ಷಣ ಪುಸ್ತಕಗಳ ಶೀರ್ಷಿಕೆಗಳನ್ನು ಓದತೊಡಗಿದಳು. ಕಾನ್ರಾಡ್ ನ ಹಳೆಯ ಕೆಂಪು-ಚಿನ್ನದ ರಕ್ಷಾಕವಚದ ಪುಸ್ತಕವನ್ನ ಕಂಡಳು. ಅದನ್ನು ವರ್ಷಾನುವರ್ಷಗಳಿಂದ ಯಾರೂ ಮುಟ್ಟಿರಲಿಲ್ಲ. ಅಲ್ಲಿಗೆ ಅದು ಹೇಗೆ ಬಂತು ಎಂದು ಅವಳಿಗೆ ತೋಚಲಿಲ್ಲ. ಅದನ್ನು ಕೈಗೆ ತೆಗೆದುಕೊಂಡು ಅವಳು ಮೊದಲ-ಕೊನೆಯ ಖಾಲಿ ಹಾಳೆಯನ್ನು ನೋಡಿದಳು. ಅಲ್ಲಿದ್ದ ಒಕ್ಕಣೆ: Ex Libris Thomas Bridge.

ನೈಟ್ ಕ್ಲಬ್ ಎಂಟರ್ಟೈನರ್ ಒಬ್ಬಳನ್ನು ಮದುವೆಯಾಗಿದ್ದ ನಂತರ ಮೆಕ್ಸಿಕೊದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದ ತನ್ನ ಗಂಡನ ಸಹೋದರನ ಮರಣದ ನಂತರ ಅವರು ವಿಚಿತ್ರ ಮನುಷ್ಯನ ಕೆಲವು ಪುಸ್ತಕಗಳು ಮತ್ತು ಚಾರ್ಟ್ ಗಳನ್ನು ಆನುವಂಶಿಕವಾಗಿ ಪಡೆದಿದ್ದನ್ನು ಅವಳು ನೆನಪಿಸಿಕೊಂಡಳು.

ಆ ದಿನ ಬೆಳಿಗ್ಗೆ ಏನೂ ಮಾಡಲಿಕ್ಕೆ ಇಲ್ಲದ ಅವಳು ಮುಟ್ಟಿದರೆ ಹರಿವಂತೆ ಪೆಡಸಾಗಿದ್ದ, ಹಳದಿ ಬಣ್ಣದ ಪುಟಗಳನ್ನು ತಿರುಗಿಸಲು ಪ್ರಾರಂಭಿಸಿ ನಿಧಾನವಾಗಿ ಅದರತ್ತ ಆಕರ್ಷಿತಳಾದಳು. ಸುಮಾರು ಹತ್ತು ನಿಮಿಷಗಳ ಕಾಲ ಪುಸ್ತಕದ ಅಲ್ಮೇರಾದ ಪಕ್ಕದಲ್ಲಿ ನಿಂತ ಅವಳು ನಂತರ ಇನ್ನೂ ಓದುತ್ತಲೇ ಲಿವಿಂಗ್ ರೂಮಿಗೆ ಹೋದಳು. ಅಲ್ಲಿ ಪುಸ್ತಕದಿಂದ ತಲೆ ಮೇಲೆತ್ತದೆ ಊಟದ ಸಮಯವನ್ನು ಘೋಷಿಸಲು ಹ್ಯಾಜೆಲ್ ಬರುವವರೆಗೂ ಓದುತ್ತಲೇ ಇದ್ದಳು. ಒಂದು ಕಥೆಯ ಮಧ್ಯೆ ಒಂದು ಕಾಲದಲ್ಲಿ ಅಡಿಗೆರೆ ಹಾಕಲ್ಪಟ್ಟ ಒಂದು ಪ್ಯಾರಾವರೆಗೂ ಬಂದಿದ್ದಳು. ಸ್ಪಷ್ಟವಾಗಿ ಅದನ್ನು ಮಾಡಿದ್ದಿದ್ದು ಟಾಮ್ ಬ್ರಿಡ್ಜ್. ಅಲ್ಲಿ ಬರೆದಿದ್ದುದು ಇದು: ‘ಬದುಕಿರುವ ವರ್ಷಗಳಲ್ಲಿ ಕೆಲವರು ಲೋಳೆಯ ಮೇಲೆ ಜಾರಿದಂತೆ ಕಾಲ ಕಳೆಯುತ್ತಾರೆ. ಹಾಗೇ ಜಾರಿ ಗೋರಿಯಲ್ಲಿ ಬೀಳುತ್ತಾರೆ, ಏನೂ ಅರಿತುಕೊಳ್ಳದೆ. ಜೀವನದ ಬಗ್ಗೆ ಅಜ್ಞಾನ ಕೊನೆಯವರೆಗೆ. ಅದರಲ್ಲಿರುವ ಎಲ್ಲವನ್ನು ನೋಡಲು ಎಂದಿಗೂ ಪ್ರಯತ್ನ ಮಾಡದೆ ಹೋಗಿಬಿಡುತ್ತಾರೆ.’ ಮತ್ತಷ್ಟು ಓದುವಾಗಲೂ ಅವಳು ಈ ತುಣುಕಿನ ಮೇಲೆ ನೋಡುತ್ತಲೇ ಸಂಭ್ರಮಿಸಿದಳು. ಅಂತಿಮವಾಗಿ ಮತ್ತೆ ಅದರತ್ತ ತಿರುಗಿದಳು. ಹ್ಯಾಜೆಲ್ ಪ್ರವೇಶಿಸಿದಾಗ ಅವಳು ಕಾರ್ಪೆಟ್ ಅನ್ನು ದಿಗ್ಭ್ರಮೆಗೊಳಿಸುವ ಅಭಿವ್ಯಕ್ತಿಯೊಂದಿಗೆ ನೋಡುತ್ತಿದ್ದಳು.

ಶ್ರೀಮತಿ ಬ್ರಿಡ್ಜ್ ಈ ಗ್ರಹಿಕೆಯ ಮನುಷ್ಯನನ್ನು ಹೆಚ್ಚು ಓದುವ ಉದ್ದೇಶದಿಂದ ಪುಸ್ತಕವನ್ನು ಮಾಂಟೆಲ್ ಮೇಲೆ ಇಟ್ಟಳು. ಆದರೆ ಮಧ್ಯಾಹ್ನದ ಸಮಯದಲ್ಲಿ ಹ್ಯಾಜೆಲ್ ಯಾಂತ್ರಿಕವಾಗಿ ಕಾನ್ರಾಡ್ ಅನ್ನು ಮತ್ತೆ ಕಪಾಟಿನಲ್ಲಿ ಇರಿಸಿಬಿಟ್ಟಳು. ಶ್ರೀಮತಿ ಬ್ರಿಡ್ಜ್ ಅವನ ಬಗ್ಗೆ ಮತ್ತೆ ಯೋಚಿಸಲಿಲ್ಲ.

ಮತದಾನ

ಕೃಷಿ ಹೆಚ್ಚುವರಿ ಮತ್ತು ವಿದೇಶಿ ಸಬ್ಸಿಡಿಗಳಂತಹ ವ್ಯವಹಾರಗಳ ಬಗ್ಗೆ ಗಂಡಸರ ರೀತಿಯಲ್ಲಿ ಮಾತನಾಡಲು ಸಮರ್ಥರಾದ ಕೆಲವು ಮಹಿಳೆಯರು ಮಾಡಿದ ರೀತಿಯಲ್ಲಿ ಅವಳು ರಾಜಕೀಯಕ್ಕೆ ಹೋಗಿರಲಿಲ್ಲ. ಉಪನ್ಯಾಸ ಭೋಜನ ಅಥವಾ ವೃತ್ತ ಸಭೆಗಳಲ್ಲಿ ಈ ವಿಷಯಗಳು ಬಂದಾಗ ಅವಳು ಯಾವಾಗಲೂ ಗಮನವಿರಿಸಿ ಕೇಳುತ್ತಿದ್ದಳು; ಅವಳಿಗೆ ತನ್ನ ಜ್ಞಾನದ ಕೊರತೆಯ ಅನುಭವವಾಗುತ್ತಿತ್ತು. ಅದರಿಂದಲೇ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಿದ್ದಳು. ಅಷ್ಟೇ ಅಲ್ಲ, ಪಟ್ಟಾಗಿ ಕುಳಿತು, ಓದಿ ಗಂಭೀರ ಅಧ್ಯಯನಕ್ಕೆ ಇಳಿಯುವ ಉದ್ದೇಶವನ್ನು ಹೊಂದಿದ್ದಳು. ಆದರೆ ಅನೇಕ ವಿಷಯಗಳು ಪುಟಿದೇಳುತ್ತಿದ್ದವು. ಹಾಗಾಗಿ ಪ್ರಾರಂಭಿಸುವುದೇ ಕಷ್ಟವಾಗಿತ್ತು. ನಂತರವೂ ಅವಳಿಗೆ ಕಲಿಯಲು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲಿಲ್ಲ. ಕೆಲವೊಮ್ಮೆ ಅವಳು ತನ್ನ ಗಂಡನನ್ನು ಪ್ರಶ್ನಿಸಲು ಪ್ರಾರಂಭಿಸುತ್ತಿದ್ದಳು. ಆದರೆ ಅವನು ಅವಳೊಂದಿಗೆ ಹೆಚ್ಚು ವಿಚಾರ ಮಾಡಲು ನಿರಾಕರಿಸಿದ. ಆದ್ದರಿಂದ ಅವಳು ಈ ವಿಷಯದಲ್ಲಿ ಒತ್ತಾಯ ಮಾಡುವುದಿಲ್ಲ. ಏಕೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಅವಳು ಸ್ವತಃ ಸಾಧಿಸುವಂಥದು ಏನೂ ಇರಲಿಲ್ಲ.

ಗಂಡ ಹೇಗೆ ಮತ ಚಲಾಯಿಸಬೇಕು ಎಂದು ಹೇಳಿದ ಮಾಹಿತಿಯನ್ನು ಅಜಾಗರೂಕತೆಯಿಂದ ಬಾಯಿ ತಪ್ಪಿ ಅವಳು ಮಾಬೆಲ್ ಇಹೆಗೆ ಹೇಳಿಬಿಟ್ಟಳು. ಆ ಬಳಿಕ ತನ್ನನ್ನು ತಾನು ಮೇಲಿನಂತೆ ಸಮರ್ಥಿಸಿಕೊಂಡಳು.

ಮಾಬೆಲ್ ಇಹೆ ಹದಿಹರೆಯದವಳಂತೆ ಸಮತಟ್ಟಾಗಿದ್ದಳು. ಆದರೆ ಕಾಣುವುದಕ್ಕಿಂತ ಹೆಚ್ಚು ಗಟ್ಟಿಮುಟ್ಟಾಗಿದ್ದಳು. ಅವಳ ಮೈಕಟ್ಟು ಎಂದಿಗೂ ತೆರೆಯಲು ಸಾಧ್ಯವಾಗದ ಮೊಗ್ಗಿನಂತಿತ್ತು. ಅವಳು ಟ್ವೀಡ್ ಕೋಟುಗಳನ್ನು ಧರಿಸುತ್ತಿದ್ದಳು. ಕೂದಲನ್ನು ಕತ್ತರಿಸಿದ್ದಳು. ಆಗಾಗ್ಗೆ ತನ್ನ ಕೈಗಳನ್ನು ಪಕ್ಕದ ಜೇಬಿನಲ್ಲಿ ಆಳವಾಗಿ ತೂರಿಸಿ ಗಂಡಸಿನಂತೆ ನಿಲ್ಲುತ್ತಿದ್ದಳು. ಸಣ್ಣ ಸಣ್ಣ ಆದರೆ ಭರವಸೆಯ ಮಾತನಾಡುತ್ತಿದ್ದಳು. ಕೆಲವೊಮ್ಮೆ ಸಿವಿರೆದ್ದ ಬಿದಿರನ್ನು ನೆನಪಿಸುವ ಧ್ವನಿಯೊಂದಿಗೆ ನಗಲು ತೊಡಗುತ್ತಿದ್ದಳು, ತಲೆಯನ್ನು ಹಿಂದಕ್ಕೆ ಚಾಚಿ. ಬಂಡವಾಳಶಾಹಿಯನ್ನು ಕುರಿತು ಅವಳು ಅನೇಕ ಅವಲೋಕನಗಳನ್ನು ಮಾಡಿದ್ದಳು, ಅದು ಕಹಿಯಾಗಿತ್ತು. ಹೆರಿಗೆಯ ಸಮಯದಲ್ಲಿ ಸಾಯುತ್ತಿರುವ ಮಹಿಳೆಯರ ಬಗ್ಗೆ ಪ್ರಶ್ನಾತೀತ ಮೂಲಗಳಿಂದ ಅವಳು ಕೇಳಿದ್ದ ಸತ್ಯಕಥೆಗಳನ್ನು ಅದಕ್ಕೆ ಹೊಂದಿಸಿ ಮಾತನಾಡುತ್ತಿದ್ದಳು. ಅವರು ಆಸ್ಪತ್ರೆಗೆ ದಾಖಲಾದಾಗ ತಗುಲುವ ಹೆಚ್ಚಿನ ವೆಚ್ಚವನ್ನು ಭರಿಸಲಾಗದೆ ಅಥವಾ ವಿಮಾ ಯೋಜನೆಗಳ ಕಂತುಗಳ ವೆಚ್ಚವನ್ನು ಸಹ ಭರಿಸಲಾಗದೆ ಸಾವನ್ನಪ್ಪುತ್ತಿದ್ದುದು ಅವಳ ಸಂಕಟಕ್ಕೆ ಕಾರಣವಾಗಿತ್ತು.

“ನಾನು ಎಂದಾದರೂ ಮಗುವನ್ನು ಹೊಂದುವುದಿದ್ದರೆ” ಅವಳು ಈ ರೀತಿ ಮಾತನ್ನು ಪ್ರಾರಂಭಿಸುವುದನ್ನು ಇಷ್ಟಪಡುತ್ತಿದ್ದಳು. ನಂತರ ವೈದ್ಯಕೀಯ ಶುಲ್ಕದ ವಿಚಾರಕ್ಕೆ ಬರುತ್ತಿದ್ದಳು. ಅವಳು ಶ್ರೀಮತಿ ಬ್ರಿಡ್ಜ್ ಳನ್ನು ಒತ್ತಾಯಿಸಿದಳು: “ನಿಮಗೆ ನಿಮ್ಮ ಸ್ವಂತ ಮನಸ್ಸು ಇಲ್ಲವೇ? ಗ್ರೇಟ್ ಸ್ಕಾಟ್, ಮಹಿಳೆ, ನೀವು ವಯಸ್ಕರಾಗಿದ್ದೀರಿ. ಮಾತನಾಡಿ! ನಾವು ವಿಮೋಚನೆ ಪಡೆದಿದ್ದೇವೆ.” ಅಶುಭಸೂಚಕವೋ, ಭಯಗ್ರಸ್ತಳೋ, ಅವಳು ತನ್ನ ಹಿಮ್ಮಡಿಯಿಂದ ಕಾಲ್ಬೆರಳುಗಳವರೆಗೆ ಹಿಂದಕ್ಕೆ ಮುಂದಕ್ಕೆ ಊದಲು ಪ್ರಾರಂಭಿಸಿದಳು. ಆಕ್ಸಿಲರಿ ಕ್ಲಬ್ಹೌಸ್ ನ ಕಾರ್ಪೆಟ್ ನ ಕಂಡು ಕೆಂಡಾಮಂಡಲವಾದ ಅವಳು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡಿದ್ದಳು.

“ನೀವು ಹೇಳಿದ್ದು ಸರಿ,” ಶ್ರೀಮತಿ ಬ್ರಿಡ್ಜ್ ಕ್ಷಮೆಯಾಚಿಸಿದಳು, ಮಾಬೆಲ್ ಇಹೆ ಅವಳ ಮತ್ತು ತಮ್ಮ ನಡುವಿನ ಜಾಗದಲ್ಲಿ ಊದಿದ ಹೊಗೆಯನ್ನು ವಿವೇಚನೆಯಿಂದ ತಪ್ಪಿಸಿಕೊಳ್ಳುತ್ತಾ. “ಏನು ಯೋಚಿಸಬೇಕು ಎಂದು ತಿಳಿಯುವುದು ತುಂಬಾ ಕಷ್ಟ. ತುಂಬಾ ಹಗರಣ ಮತ್ತು ವಂಚನೆ ಇದೆ. ಇನ್ನು ಪತ್ರಿಕೆಗಳು, ಅವರು ನಮಗೆ ಏನು ತಿಳಿಯಬೇಕಾಗಿದೆ ಎಂದು ಭಾವಿಸುತ್ತವೋ ಅದನ್ನು ಮಾತ್ರ ಮುದ್ರಿಸುತ್ತವೆ” ಎಂದಳು. ಬಳಿಕ ಅವಸರಿಸುತ್ತ ಕೇಳಿದಳು, “ನೀವು ಯಾವ ನಿಲುವಿಗೆ ಬರುತ್ತೀರಿ?”

ಮಾಬೆಲ್ ಇಹೆ ಸಿಗರೆಟ್ ಹೋಲ್ಡರನ್ನು ತನ್ನ ಸಣ್ಣ ಶಾಂತ ತುಟಿಗಳಿಂದ ಹೊರತೆಗೆದಳು. ಅಂತಹ ಮುಗ್ಧ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂಬುದರ ಬಗ್ಗೆ ವಿಚಾರಿಸುತ್ತಿರುವಂತೆ ಅವಳು ಸೀಲಿಂಗ್ ಮತ್ತು ನಂತರ ಕಾರ್ಪೆಟ್ ಅನ್ನು ಪರಿಶೀಲಿಸಿದಳು. ಅಂತಿಮವಾಗಿ ಶ್ರೀಮತಿ ಬ್ರಿಡ್ಜ್ ಕೆಲವು ಪುಸ್ತಕಗಳನ್ನು ಉದ್ದೇಶಪೂರ್ವಕವಾಗಿ ಓದುವ ಮೂಲಕ ಮೂಲಭೂತ ಅಂಶಗಳನ್ನು ಗ್ರಹಿಸಲು ಪ್ರಾರಂಭಿಸಬಹುದು ಎಂದು ಸೂಚಿಸಿದಳು. ಅದನ್ನು ಅವಳು ಟ್ಯಾಲಿ ಕಾರ್ಡ್ ನ ಮಾರ್ಜಿನ್ ನಲ್ಲಿ ಬರೆದುಕೊಂಡಳು. ಶ್ರೀಮತಿ ಬ್ರಿಡ್ಜ್ ಈ ಪುಸ್ತಕಗಳ ಪೈಕಿ ಒಂದನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಕೇಳಿರಲಿಲ್ಲ. ಇದಕ್ಕೆ ಕಾರಣ ಅದರ ಲೇಖಕನ ವಿಚಾರದಲ್ಲಿ ತನಿಖೆ ಮಾಡಲಾಗುತ್ತಿತ್ತು, ಆದರೂ ಅವಳು ಅದನ್ನು ಹೇಗಾದರೂ ಓದಲು ನಿರ್ಧರಿಸಿದಳು.

ಸಾರ್ವಜನಿಕ ಗ್ರಂಥಾಲಯದಲ್ಲಿ ಇದಕ್ಕಾಗಿ ಕಾಯುವವರ ಪಟ್ಟಿಯೇ ಇತ್ತು. ಆದರೆ ಅವಳು ಅದನ್ನು ಬಾಡಿಗೆ ಗ್ರಂಥಾಲಯದಲ್ಲಿ ಪಡೆದುಕೊಂಡಳು. ಮಾಬೆಲ್ ಇಹೆ ಸಲಹೆ ನೀಡಿದ ಉದ್ದೇಶದಿಂದಲೇ ಅದನ್ನು ಓದಲು ಮೊದಲಿಟ್ಟಳು. ಆ ಲೇಖಕರ ಹೆಸರು ಜೋಕೊಲೋಫ್, ಖಂಡಿತವಾಗಿಯೂ ಅದು ಹೆದರಿಕೆಯೊಡ್ಡಿತ್ತು. ಮೊದಲ ಅಧ್ಯಾಯವೇ ಸಕ್ರ್ಯೂಟ್ ಕೋರ್ಟ್ ಗಳಲ್ಲಿ ಲಂಚದ ಬಗ್ಗೆ ಇತ್ತು. ಶ್ರೀಮತಿ ಬ್ರಿಡ್ಜ್ ಅದರ ಬಹುಪಾಲು ಓದಿ ಅದರ ಬಗ್ಗೆ ಮಾತನಾಡುವ ಸಾಮರ್ಥ್ಯ ಬಂತೆಂದಾಗ ಅದನ್ನು ಸಾಕಷ್ಟು ಧೈರ್ಯದಿಂದ ಹಾಲ್ ಟೇಬಲ್ ಮೇಲೆ ಬಿಟ್ಟಳು. ಆದರೆ ಶ್ರೀಯುತ ಬ್ರಿಡ್ಜ್ ಅದನ್ನು ಮೂರನೇ ಸಂಜೆಯವರೆಗೂ ಗಮನಿಸಲಿಲ್ಲ. ಅದನ್ನು ಕಂಡದ್ದೇ ಅವನು ತನ್ನ ಮೂಗಿನ ಹೊಳ್ಳೆಗಳನ್ನು ಹಿಗ್ಗಿಸಿಕೊಂಡ. ಪುಸ್ತಕ ಬಿಡಿಸಿ ಮೊದಲ ಪ್ಯಾರಾಗ್ರಾಫ್ ಅನ್ನು ಓದಿದ. ಒಮ್ಮೆ ಗೊಣಗಿ ಅದನ್ನು ಮತ್ತೆ ಹಾಲ್ ನ ಟೇಬಲ್ ಮೇಲೆ ಇಳಿಸಿದ. ಇದು ನಿರಾಶಾದಾಯಕವಾಗಿತ್ತು. ವಾಸ್ತವವಾಗಿ, ಈಗ ಯಾವುದೇ ಅಪಾಯವಿಲ್ಲದ ಕಾರಣ, ಪುಸ್ತಕವನ್ನು ಮುಗಿಸಲು ಆಕೆಗೆ ತೊಂದರೆಯಾಯಿತು. ಮ್ಯಾಗಜೀನ್ ಡೈಜೆಸ್ಟ್ ನಲ್ಲಿ ಇದನ್ನು ಓದುವುದು ಉತ್ತಮವೆಂದು ಅವಳು ಭಾವಿಸಿದಳು. ಕೊನೆಗೆ ಅವಳು ಅದನ್ನು ಬಾಡಿಗೆ ಗ್ರಂಥಾಲಯಕ್ಕೆ ಹಿಂದಿರುಗಿಸಿದಳು. ಅದರ ಮಾಲೀಕರಿಗೆ, “ಎಲ್ಲವನ್ನೂ ಒಪ್ಪುತ್ತೇನೆ ಎಂದು ನಾನು ಪ್ರಾಮಾಣಿಕವಾಗಿ ಹೇಳಲಾರೆ. ಆದರೆ ಅವನಲ್ಲಿ ಖಂಡಿತವಾಗಿಯೂ ಉತ್ತಮ ಮಾಹಿತಿ ಇದೆ” ಎಂದು ಹೇಳಿದಳು.

ಜೊಕೊಲಾಫ್ ಅವರ ಕೆಲವು ವಾದಗಳು ಅವಳೊಂದಿಗೆ ಉಳಿದುಕೊಂಡವು. ಅವಳು ಅವರ ಬಗ್ಗೆಯೆ ಹೆಚ್ಚು ಸಮಯ ಯೋಚಿಸುವುದರಿಂದ ಅವರು ಹೆಚ್ಚು ಆಳಕ್ಕೆ ಇಳಿಯತೊಡಗಿದ್ದರು. ಅವರು ತಾರ್ಕಿಕರಾದವರು ಎಂದು ಅವಳು ಕಂಡುಕೊಂಡಳು; ಅವರು ಸರ್ಕಾರದ ಬದಲಾವಣೆಗೆ ಸಮಯ ಎಂದು ಒತ್ತಾಯಿಸಿದ್ದು ಖಂಡಿತವಾಗಿಯೂ ನಿಜ ಅನ್ನಿಸಿತು. ಮುಂದಿನ ಚುನಾವಣೆಯಲ್ಲಿ ಉದಾರವಾದಿ ಪಕ್ಷಕ್ಕೆ ಮತ ಚಲಾಯಿಸಲು ನಿರ್ಧರಿಸಿದಳು. ಚುನಾವಣೆಯ ಸಮಯ ಸಮೀಪಿಸುತ್ತಿದ್ದಂತೆ ಅವಳಲ್ಲಿ ಉತ್ಸಾಹ ಮತ್ತು ಆತಂಕ ತುಂಬಿಕೊಂಡಿತು. ಎಷ್ಟೆಂದರೆ ಅವಳು ತಮ್ಮ ಪತಿಯೊಂದಿಗೆ ಸರ್ಕಾರದ ವಿಚಾರವನ್ನು ಚರ್ಚಿಸಲು ತುಂಬಾ ಬಯಸುತ್ತಿದ್ದಳು. ಅವನ ಅಭಿಮತವನ್ನು ಬದಲಾಯಿಸಲು ಅವನ ಮನವೊಲಿಸಬಹುದೆಂದು ಅವಳು ನಂಬಲು ಪ್ರಾರಂಭಿಸಿದ್ದಳು. ನಿಜವಾಗಿಯೂ ರಾಜಕೀಯಕ್ಕೆ ಯಾವುದೇ ರಹಸ್ಯವಿಲ್ಲ ಎಂಬುದೆಲ್ಲವೂ ಅವಳಿಗೆ ಸ್ಪಷ್ಟವಾಗಿತ್ತು. ಆದರೆ ಅವಳು ಅವನನ್ನು ಚರ್ಚೆಗೆ ಕರೆದಾಗ ಅವನು ವಿಶೇಷ ಆಸಕ್ತಿಯನ್ನೇನೂ ತೋರಲಿಲ್ಲ. ವಾಸ್ತವವಾಗಿ ಅವನು ಉತ್ತರಿಸಲಿಲ್ಲ. ಅವನು ಟೆಲಿವಿಷನ್ನಲ್ಲಿ ಬರುತ್ತಿದ್ದ ಬಾಟಲಿಯಲ್ಲಿ ಹೆಬ್ಬೆರಳಿಟ್ಟು ಅದರ ಮೇಲೆ ನಿಲ್ಲುವವನ ದೊಂಬರಾಟ ನೋಡುತ್ತಿದ್ದ. ಕಿರಿಕಿರಿಯ ಅಭಿವ್ಯಕ್ತಿಯೊಂದಿಗೆ ಕ್ಷಣಾರ್ಧ ಮಾತ್ರ ಅವಳನ್ನು ನೋಡಿದ್ದ. ಮರುದಿನ ಸಂಜೆ ಟಿವಿ ಮುಗಿವ ತನಕ ಅವಳು ಅದನ್ನು ಬಿಟ್ಟುಬಿಟ್ಟಳು. ಈ ಸಮಯದಲ್ಲಿ ಅವನು ಅವಳನ್ನು ಕುತೂಹಲದಿಂದ, ಸಾಕಷ್ಟು ತೀವ್ರವಾಗಿ, ಅವಳ ಮನಸ್ಸನ್ನು ಪರೀಕ್ಷಿಸುತ್ತಿದ್ದಂತೆ ನೋಡಿದ. ತದನಂತರ ಅವನು ಒಮ್ಮೆ ಅಸಮ್ಮತಿ ಹಾಗೂ ಸಿಟ್ಟಿನಿಂದ ಬುಸುಗುಟ್ಟಿದ.

ಚುನಾವಣಾ ಮುನ್ನಾದಿನದಂದು ಅದರ ಬಗ್ಗೆ ಒತ್ತಾಯದ ಚರ್ಚೆಯನ್ನು ಮಾಡಲು ಅವಳು ನಿಜವಾಗಿಯೂ ಉದ್ದೇಶಿಸಿದ್ದಳು. ಅವಳು ಚರ್ಚೆಯಲ್ಲಿ ಜೊಕೊಲೋಫ್ ಪುಸ್ತಕದಿಂದ ಉಲ್ಲೇಖಿಸಲಿದ್ದಳು. ಆದರೆ ಅವನು ತುಂಬಾ ತಡವಾಗಿ ಮನೆಗೆ ಬಂದ. ತುಂಬಾ ದಣಿದಂತೆ ಕಂಡ. ಅವಳಿಗೆ ಅವನನ್ನು ಅಸಮಾಧಾನಗೊಳಿಸುವ ಮನಸ್ಸಾಗಲಿಲ್ಲ. ಅವನು ಯಾವಾಗಲೂ ಮಾಡಿದ್ದಂತೆಯೇ ಮತ ಚಲಾಯಿಸಲು ಬಿಡುವುದು ಉತ್ತಮ ಎಂದು, ಇನ್ನು ತಾನು ಬಯಸಿದಂತೆ ತಾನು ಮಾಡುವುದೆಂದೂ ಅವಳು ತೀರ್ಮಾನಿಸಿದಳು. ಕಂಟ್ರಿ ಕ್ಲಬ್ ಶಾಪಿಂಗ್ ಜಿಲ್ಲೆಯಲ್ಲಿ ಅನುಕೂಲಕರವಾಗಿ ವ್ಯವಸ್ಥೆ ಮಾಡಿರುವ ಮತದಾನ ಕೇಂದ್ರಕ್ಕೆ ಬಂದ ನಂತರ ಅವಳಲ್ಲಿ ಯಾಕೋ ಅನುಮಾನ ಹುಟ್ಟಿದಂತೆ ಅನಿಸಿ ಸ್ವಲ್ಪ ಆತಂಕಕ್ಕೊಳಗಾದಳು. ಆ ಕ್ಷಣ ಅಂತಿಮವಾಗಿ ಬಂದೇ ಬಿಟ್ಟಾಗ ಅವಳು ಪ್ರಪಂಚವು ಹಾಗೆಯೇ ಇರಬೇಕೆಂಬ ತನ್ನ ಆಸೆಯನ್ನು ದಾಖಲು ಮಾಡುವ ಲಿವರ್ ಅನ್ನು ಎಳೆದಳು.