ಮುಂಬಯಿಯಲ್ಲಿ ನೋಡಲು ಅನೇಕ ಜಾಗಗಳಿವೆ. ನಾನು ಈ ಸರಣಿಯಲ್ಲಿ ನನ್ನ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಜಯಂತ ಕಾಯ್ಕಿಣಿ ಕಾಣಿಸಿದ ಮತ್ತೊಂದು ಮುಂಬಯಿಯ ಬಗ್ಗೆ. ಆದರೆ ಕೆಲವು ವಿಶಿಷ್ಟ ಸಂಸ್ಥೆಗಳೂ ಮುಂಬಯಿಯಲ್ಲಿವೆ. ರಿಜರ್ವ್ ಬ್ಯಾಂಕು ನಡೆಸುವ ಮಾನೆಟರಿ ಮ್ಯೂಸಿಯಂ ಅಂಥ ಒಂದು ಆಸಕ್ತಿಕರ ಸಂಸ್ಥೆಗಳಲ್ಲಿ ಒಂದು. ಬಹುಮಹಡಿಯ ರಿಜರ್ವ್ ಬ್ಯಾಂಕಿನ ಕಟ್ಟಡದ ಎದುರಿನ ಗಲ್ಲಿಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ, ಫಿರೋಜ್ ಷಾ ಮೆಹತಾ ಮಾರ್ಗದಲ್ಲಿ ಅಮರ್ ಬಿಲ್ಡಿಂಗ್ ಎನ್ನುವ ಪುಟ್ಟ ಜಾಗದಲ್ಲಿ ದುಡ್ಡಿನ ಚರಿತ್ರೆಯನ್ನು ಕಾಣಿಸುವ ಮಾನಿಟರಿ ಮ್ಯೂಸಿಯಂ ಇದೆ. ಪುಟ್ಟ ಜಾಗವಾದರೂ ಇದು ತುಂಬಾ ಆಸಕ್ತಿಕರವಾದ ಜಾಗ. ಅಲ್ಲಿ ತಿಳಿದ ಕೆಲವು ಆಸಕ್ತಿಯ ವಿಷಯಗಳು ಇಲ್ಲಿವೆ.

ಭಾರತೀಯ ನೋಟುಗಳನ್ನು ನಾಲ್ಕು ಜಾಗಗಳಲ್ಲಿ ಮುದ್ರಿಸಲಾಗುತ್ತದೆ. ನಾಸಿಕ್ ಮತ್ತು ದೇವಾಸ್‍ನಲ್ಲಿರುವ ಮುದ್ರಣಾಲಯಗಳು ಭಾರತ ಸರಕಾರಕ್ಕೆ ಸೇರಿದವು. ಮೈಸೂರು ಮತ್ತು ಸಲ್ಬೋನಿಯಲ್ಲಿರುವ ಮುದ್ರಣಾಲಯಗಳನ್ನು ನಡೆಸುವುದು ಭಾರತೀಯ ನೋಟ್ ಮುದ್ರಣ್ ಇಂಡಿಯಾ ಪ್ರಾಯಿವೇಟ್ ಲಿಮಿಟೆಡ್ ಎನ್ನುವ ಕಂಪನಿ. ಇದರ ಮಾಲೀಕತ್ವ ರಿಜರ್ವ್ ಬ್ಯಾಂಕಿನದ್ದು.

ನಾಣ್ಯಗಳನ್ನು ಅಚ್ಚುಹಾಕುವುದು ಸರಕಾರೀ ಟಂಕಸಾಲೆಯಲ್ಲಿ. ಭಾರತದಲ್ಲಿ ಇಂಥ ನಾಲ್ಕು ಟಂಕಸಾಲೆಗಳಿವೆ. ಪ್ರತಿ ನಾಣ್ಯದ ಮೇಲೂ ಇಸವಿಯ ಕೆಳಗೆ ಇರುವ ಪುಟ್ಟ ಗುರುತಿನಿಂದ ನಾಣ್ಯ ಯಾವ ಟಂಕಸಾಲೆಯಲ್ಲಿ ಅಚ್ಚಾಗಿದೆ ಅನ್ನುವುದನ್ನು ಕಂಡುಕೊಳ್ಳಬಹುದು. ಹೈದರಾಬಾದಿನ ಟಂಕಸಾಲೆಯಲ್ಲಿ ಅಚ್ಚಾದವು ಒಂದು ನಕ್ಷತ್ರವನ್ನು ಹೊಂದಿರುತ್ತವೆ; ಮುಂಬಯಿಗೆ ಡೈಮಂಡ್ ಆಕಾರ; ಕೋಲ್ಕತಾಗೆ ಚುಕ್ಕೆ; ಮಿಕ್ಕವು ನೋಯಿಡಾದಲ್ಲಿ ಅಚ್ಚಾದವು.

ಯಾವುದೇ ಹೊಸ ರೀತಿಯಲ್ಲಿ ಹಣವನ್ನು ಚಲಾವಣೆ ಮಾಡಬೇಕಾದರೆ – ಜನರಿಗೆ ಅಭ್ಯಾಸವಾಗುವವರೆಗೂ ಹಳೆಯದರ ನಂಟನ್ನು ಮುಂದುವರೆಸಬೇಕು. ಹೀಗಾಗಿ ಹೈದರಾಲಿ ಟಂಕಿಸಿದ ನಾಣ್ಯಗಳಲ್ಲಿ ವಿಜಯನಗರ, ಮೈಸೂರು ಸಂಸ್ಥಾನದವರು ಉಪಯೋಗಿಸುತ್ತಿದ್ದ ಶಿವ-ಪಾರ್ವತಿಯರ ಚಿತ್ರ ಒಂದು ಬದಿಗೆ, ತನ್ನ ಹೆಸರು ಇನ್ನೂಂದು ಬದಿಗೆ ಬರುವಂತೆ ಟಂಕಿಸಿದ್ದ. ಟಿಪ್ಪುವಿನ ನಾಣ್ಯಗಳಲ್ಲಿ ಕನ್ನಡವಿರಲಿಲ್ಲ!

ನಾಣ್ಯಗಳಲ್ಲಿ ಆಕಾರಕ್ಕಿಂತ ತೂಕ ಮುಖ್ಯವಾಗಿತ್ತಂತೆ. ಹೀಗಾಗಿ ಹಳೆಯ ನಾಣ್ಯಗಳಲ್ಲಿ ತೂಕ ಸರಿಯಾಗಿರಲೆಂದು ತುಸು ವಕ್ರವಾಗಿ ನಾಣ್ಯಗಳನ್ನು ತುಂಡರಿಸುತ್ತಿದ್ದುದುಂಟು. ಆದರೆ ಈಗ ತೂಕವೂ ಆಕಾರವೂ ಎಲ್ಲನಾಣ್ಯಗಳ ನಡುವೆ ಸಮಾನವಾಗಿರುವಂತೆ ಅಚ್ಚು ಹಾಕುವ ಯಂತ್ರಗಳಿವೆ!

ಮುಹಮ್ಮದ್ ಬಿನ್ ತುಘಲಕ್ ಚರ್ಮದ ಹಣವನ್ನು ಜಾರಿಮಾಡಿದ್ದನೆಂಬ ಕಥೆಯನ್ನು ನಾನು ಕೇಳಿದ್ದೆ. ಆದರೆ ಆ ಬಗ್ಗೆ ಯಾವುದೂ ಪುರಾವೆಯಿಲ್ಲವಂತೆ. ಅಕಸ್ಮಾತ್ ಜಾರಿ ಮಾಡಿದ್ದರೂ ಅದು ಈ ದಿನದವರೆಗೆ ಕಾಯ್ದಿಟ್ಟಿರಬಹುದಾದ ಸಾಧ್ಯತೆ ಇಲ್ಲ ಎಂದು ಅಲ್ಲಿನ ಕ್ಯುರೇಟರ್ ಹೇಳಿದರು. ಆದರೆ ಆತ ಬೆಳ್ಳಿಗೆ ಬದಲು ತಾಮ್ರದ ನಾಣ್ಯಗಳನ್ನು ಜಾರಿ ಮಾಡಿ ಇದನ್ನು ಬೆಳ್ಳಿಗೆ ಸಮಾನ ಎಂದು ಪರಿಗಣಿಸಬೇಕೆಂದು ಫರ್ಮಾನು ನೀಡಿದ್ದು ನಿಜವಂತೆ. ಹೀಗಾಗಿ ಜನ ತಮ್ಮದೇ ತಾಮ್ರದ ನಾಣ್ಯಗಳನ್ನು ಟಂಕಿಸಿ ವಿಪರೀತ ಜಾಲಿ ನಾಣ್ಯಗಳುಂಟಾಗಿದ್ದರಿಂದ ಈ ನಾಣ್ಯಗಳನ್ನು ಹಿಂದೆಗೆದುಕೊಳ್ಳಬೇಕಾಯಿತು ಅನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆಯಂತೆ. ಬ್ರಿಟಿಷರು ಬಂದ ನಂತರ, ಲೋಕಲ್ ರಾಜರು ತಮ್ಮ ನಾಣ್ಯಗಳನ್ನು ತಾವೇ ಟಂಕಿಸಿದರೂ ಬ್ರಿಟನ್ನಿನ ರಾಣಿಯ ಚಿತ್ರಗಳನ್ನು ಅಚ್ಚುಹಾಕುವುದು ಪರಿಪಾಠವಾಗಿತ್ತು. ಕೆಲ ಬುದ್ಧಿವಂತರು ಕೇವಲ ಲಂಡನ್ನಿನ ದೋಸ್ತರೆಂದು ಹೇಳಿಕೊಂಡು ಚಿತ್ರ ಹಾಕುವುದನ್ನು ತಪ್ಪಿಸಿದರು.

ಮೊದಲಿಗೆ ಬ್ರಿಟಿಷ್ ರಾಜನ ಚಿತ್ರದ ಜಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹಾಕಬೇಕೆಂದು ಯೋಜನೆ ತಯಾರಿಸಿದರೂ ಹಾಕಿದ್ದು ಅಶೋಕನ ಸಿಂಹಗಳನ್ನು! ಆ ನಂತರ ತಂಜಾವೂರಿನ ದೇವಸ್ಥಾನದ ಚಿತ್ರದ ಸಾವಿರ ರೂಪಾಯಿನ ನೋಟು, ಗೇಟ್‍ವೇ ಚಿತ್ರವಿದ್ದ ಐದು ಸಾವಿರ ರೂಪಾಯಿನ ನೋಟನ್ನು ಛಾಪಿಸಲಾಯಿತು. ಮಹಾತ್ಮಾ ಗಾಂಧಿಯ ಚಿತ್ರ ಹಾಕಿ ನೋಟುಗಳನ್ನು ಮೊದಲ ಬಾರಿಗೆ ಛಾಪಿಸಿದಾಗ ಅನೇಕರು ಅದನ್ನು ನಿಜವಾದ ರೂಪಾಯಿಗಳೆಂದು ಒಪ್ಪಲಿಲ್ಲವಂತೆ! ಅದು ನಿಜಕ್ಕೂ ಜಾಲಿ ನೋಟಲ್ಲ ಎನ್ನುವ ಪ್ರಚಾರವನ್ನು ಸರಕಾರ ಕೈಗೊಳ್ಳಬೇಕಾಯಿತು.

ಈಗ ಪ್ರತೀ ನೋಟಿನ ಮೇಲೂ ಭಾರತ ಸಂವಿಧಾನ ಗುರುತಿಸುವ ಅಷ್ಟೂ ಭಾಷೆಗಳಲ್ಲಿ ಅದರ ಮೊಬಲಗನ್ನು ಹಿಂಬದಿಯಲ್ಲಿ ಬರೆಯಲಾಗಿರುತ್ತೆ. ೧೯೧೭ರ ಕಾಲದಲ್ಲಿ ಬ್ರಿಟಿಷರು ಛಾಪಿಸಿದ ನೋಟುಗಳಲ್ಲಿ ಹಿಂಬದಿಯಲ್ಲಿದ್ದದ್ದು ಎಂಟು ಭಾಷೆಗಳು ಮಾತ್ರ. ಅದರಲ್ಲಿ ಕನ್ನಡವೂ ಇತ್ತು! ಆದರೆ ಮಲೆಯಾಳ ಇರಲಿಲ್ಲ!

ಬ್ರಿಟಿಷರ ಕಾಲದಲ್ಲಿ ಬಂದಿದ್ದ ಅನೇಕ ನಾಣ್ಯಗಳಲ್ಲಿ ಒಂದು ಹದಿನೈದು ರೂಪಾಯಿಯ ನಾಣ್ಯವೂ ಉಂಟು. ಇಲ್ಲ ಇದನ್ನು ಕುಂಬಕೋಣದಲ್ಲಾಗಲೀ, ಕೊಯಂಬತ್ತೂರಿನಲ್ಲಾಗಲೀ ಟಂಕಿಸಲಿಲ್ಲ! ಮೊದಲಿಗೆ ಎಲ್ಲಕ್ಕಿಂತ ಹೆಚ್ಚಿನ ಮೊಬಲಗಿನ ನೋಟೆಂದರೆ ಹತ್ತುಸಾವಿರ ರೂಪಾಯಿಗಳದ್ದು. ೧೯೭೮ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದಾಗ ಹತ್ತು, ಐದು, ಮತ್ತು ಒಂದು ಸಾವಿರ ರೂಪಾಯಿನ ನೋಟುಗಳನ್ನು ಹಿಂದೆಗೆದುಕೊಳ್ಳಲಾಯಿತು. ಕಪ್ಪು ಹಣವನ್ನು ಈ ರೀತಿಯಿಂದ ಚಲಾವಣೆಮುಕ್ತ ಮಾಡಬಹುದೆಂದು ಆಗಿನ ಯೋಚನೆಯಾಗಿತ್ತಂತೆ. ಆ ಕಾಲದಲ್ಲಿ ತಿರುಪತಿ ಹುಂಡಿಯಲ್ಲಿ ಈ ನೋಟುಗಳು ಅನೇಕ ಬಿದ್ದುವೆಂದು ಪ್ರತೀತಿ.

ಕಪ್ಪು ಹಣವನ್ನು ಆ ತಿಮ್ಮಪ್ಪನ ಮಾಯದಿಂದ ಬಿಳಿಯಾಗಿಸಿ ಪಾಪವನ್ನೂ ತೊಳೆದುಕೊಂಡವರು ಅನೇಕರಿರಬಹುದು. ಇತ್ತೀಚಿನವರೆಗೂ ನೂರು ರೂಪಾಯಿನ ನೋಟೇ ಅತ್ಯಧಿಕ ಮೌಲ್ಯದ್ದಾಗಿತ್ತು. ೧೯೮೭ರಲ್ಲಿ ಐನೂರು ರೂಪಾಯಿಯ ನೋಟಿನ ಮುದ್ರಣ ಪ್ರಾರಂಭವಾಯಿತು. ಈಗ ಸಾವಿರ ರೂಪಾಯಿನ ನೋಟುಗಳೂ ಚಲಾವಣೆಯಲ್ಲಿವೆ – ಇದೇ ಅತ್ಯಧಿಕ ಮೌಲ್ಯದ ನೋಟು.

ಈಗಿನ ರಿಜರ್ವ್ ಬ್ಯಾಂಕಿನ ಚಿನ್ಹೆ ಈಸ್ಟ್ ಇಂಡಿಯಾ ಕಂಪನಿಯ ಚಿನ್ಹೆಯ ಬೇರೊಂದು ರೂಪ. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಇದ್ದ ಸಿಂಹದ ಜಾಗದಲ್ಲಿ ರಿಜರ್ವ್ ಬ್ಯಾಂಕು ಹುಲಿಯನ್ನು ಭರ್ತಿ ಮಾಡಿದೆ ಅಷ್ಟೇ. ಮುಂಬಯಿಗೆ ಹೋದವರು ಈ ಮ್ಯೂಜಿಯಂ ನೋಡಬಹುದು. ಹೋಗಲಾಗದವರು ವೆಬ್ ‍ನಲ್ಲಿರುವ ಈ ತಾಣಕ್ಕೆ ಹೋಗಬಹುದು. ಆದರೆ ಈ ತಾಣದಲ್ಲಿ ಓಡಾಡುವುದು ತುಸು ಕಿರಿಕಿರಿಯ ಮಾತು!