‘ಕ್ಯಾನ್ವಾಸ್’

ತನ್ನ ಅಡುಗೆ ಮುಗಿದ ಮೇಲೆ
ಧ್ಯಾನಕ್ಕೆ ಕೂರಿಸಿದ್ದಾಳೆ
ಬುದ್ಧನನ್ನು,
ಎಲೆಯುದುರಿದ್ದ ಬೋಧಿ
ವೃಕ್ಷಕ್ಕೀಗ ಹಕ್ಕಿಗಳು
ವಲಸೆ ಬರುತ್ತವೆ ಮತ್ತೆ

ಹೊರಗೆ ಬೆಣ್ಣೆ ಚೆಲ್ಲಿ
ಖಾಲಿಯಾದ ಮಡಕೆ
ಮೇಲೆ ತುಂಟ ಕೃಷ್ಣ ನೋಡಲ್ಲಿ
ಬಚ್ಚಿಟ್ಟಿದ್ದಾಳೆ ಮೊದಲೇ
ತನ್ನ ಮನೆಯ ಮುದ್ದೆ
ಕಣ್ಣುಹುಬ್ಬು ಹಾರಿಸಿದರೂ
ಕೃಷ್ಣ ಗಮನಿಸಲಿಲ್ಲ;
ಆಚೆ ಈಚೆ ಹುಡುಕುತ್ತಲೇ ಇರುವನು

ರಾಮನಿಗೆ ಇನ್ನೂ
ತುತ್ತು ಉಣಿಸಬೇಕು
ಬೇಗ ಬಾ ಚಂದ್ರ;
ಅರ್ಧ ಮೋಡ ಕರಗಿಸುವಳು..
ಬಾಗಿಲಾಚೆ ನಿಂತು
ಇಣುಕಿ ಇಣುಕಿ ನೋಡುವ
ಪುರುಷೋತ್ತಮನಿನ್ನೂ ಪುಟ್ಟ ಕಂದ

ಕೂತಲ್ಲಿ ಕೂರುವುದಿಲ್ಲ
ಕೃಷ್ಣ, ಒಮ್ಮೆ ನೋಡಿಕೊಳ್ಳಿ
ಅಂತ ಬುದ್ಧನಿಗೆ ಹೇಳುವ ಹಾಗೂ ಇಲ್ಲ
ಊಟ ಮುಗಿಸಿ ಹಾಡುವ
ಜೋಗುಳಕ್ಕೆ ಕಾಯುತ್ತಿದ್ದಾನೆ ರಾಮ
ಒಮ್ಮೆ ಅತ್ತರೆ ಮತ್ತೆ
ಸುಮ್ಮನಿರಿಸುವುದು ಕಷ್ಟ

ಎಲ್ಲರನ್ನೂ ಒಂದೇ ಕ್ಯಾನ್ವಾಸಿನ
ಬೇರೆ ಬೇರೆ ಮೂಲೆಗಳಲ್ಲಿ
ಕೂರಿಸಿ ಪೆನ್ಸಿಲ್ಲು ಬದಿಗಿಟ್ಟು ನಡೆದಳು
ರೇಖೆಗಳ ಮುಖದಲ್ಲಿ
ಚೆಂದದ ಮಂದಹಾಸ..
ಊಟದ ಬಟ್ಟಲಲ್ಲಿ ಅನ್ನ ಸಾಂಬಾರು
ಮಜ್ಜಿಗೆ ಉಪ್ಪಿನಕಾಯಿ
ದೇವರಿಗೆ ಆಕಾರ ಕೊಟ್ಟ
ಕೈಗಳೀಗ ಮನುಷ್ಯ ಲೋಕದ
ಹಸಿವು ಇಂಗಿಸುತ್ತವೆ.

ನಾಳೆ ಮತ್ತೆ ಅವಳು ಪೆನ್ಸಿಲ್ಲು
ಹಿಡಿಯುವುದನ್ನೇ ಕಾಯುತ್ತಾ
ರಾತ್ರಿ ಕಳೆಯುತ್ತಾರೆ
ಧ್ಯಾನದ ಬುದ್ಧ,
ಬೆಣ್ಣೆಯ ಕೃಷ್ಣ,
ಜೋಗುಳದ ರಾಮ…