ನನ್ನ ದೃಷ್ಟಿಯಲ್ಲಿ ಹಬ್ಬವೆಂದರೆ ಮನೆಮಂದಿಯ ಬದುಕನ್ನೆಲ್ಲ ಪೋಣಿಸುವ ಒಂದು ಎಳೆಯಷ್ಟೇ. ನಮ್ಮ ನಮ್ಮದೇ ಬದುಕಲ್ಲಿ ಕಳೆದುಹೋದಂತೆ ಬದುಕುವ ಮನೆಯ ಜನರೆಲ್ಲ ಅವತ್ತು ಒಂದಾಗಿ ಸೇರುವ, ಕಲೆಯುವ, ಊಟ ಮಾಡುವ ಆ ಸುಂದರ ಘಳಿಗೆಗಳನ್ನು ನಮ್ಮದಾಗಿಸುತ್ತದೆ ಹಬ್ಬವೆನ್ನುವ ನೆಪ. ಹಿಂದೂ ಧರ್ಮದಲ್ಲಿ ವರ್ಷಕ್ಕೆ ಎಷ್ಟೊಂದು ಹಬ್ಬಗಳು ಬರುತ್ತವಾದರೂ ನನಗೆ ಮುಂಚಿನಿಂದಲೂ ಸಂಕ್ರಾಂತಿ, ಯುಗಾದಿ ಮತ್ತು ದೀಪಾವಳಿ ಹಬ್ಬಗಳೆಂದರೆ ತುಂಬ ಪ್ರೀತಿ … ಆ ಹಬ್ಬಗಳಲ್ಲಿ ಪೂಜೆ, ಶಾಸ್ತ್ರ, ಮಂತ್ರ ಅಂತೆಲ್ಲ ಹೆಚ್ಚು ಇರೋದಿಲ್ಲ ಅನ್ನುವುದೊಂದೇ ಕಾರಣಕ್ಕೆ! ಉಳಿದ ಹಬ್ಬಗಳಲ್ಲಿ ಬೆಳಿಗ್ಗೆ ಎದ್ದಾಗಿನಿಂದ ನೈವೇದ್ಯ, ಪುರೋಹಿತರು, ಆರತಿ, ಬೆಳ್ಳಿ ಸಾಮಾನು, ಏಕಾರತಿ ದೀಪ ಅಂತೆಲ್ಲ ಸಿದ್ಧ ಮಾಡಿಕೊಳ್ಳುವುದರಲ್ಲಿ ಮತ್ತು ಅದನ್ನೆಲ್ಲ execute ಮಾಡುವ ಆ processನಲ್ಲಿ ಹಬ್ಬದ ಸಂಭ್ರಮ ಕಳೆದುಹೋಗಿ ಸುಸ್ತೇ ಹೆಚ್ಚು ಆವರಿಸಿ ಬಿಡುತ್ತದೆ. ಜೊತೆಗೆ ಘಂಟೆಗಟ್ಟಳೆ ಕುಳಿತು ಮಾಡುವ ಪೂಜೆಗಳು – ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಕುಳಿತು ಮಾಡಬೇಕಾದ ಪೂಜೆಗಳು ನನ್ನ ತಾಳ್ಮೆ ಕೆಡಿಸಿ, ಕೊನೆಕೊನೆಗೆ ಮಂಗಳಾರತಿ ಮುಗಿಯುವಷ್ಟರಲ್ಲಿ ಮನಸ್ಸು ದೇವರಲ್ಲಿ ಉಳಿಯದೇ, ಅಡಿಗೆ ಮನೆಯ ಕಡೆ ಓಡಿಬಿಡುವ ಹಾಗೆ ಮಾಡಿಬಿಡುತ್ತದೆ. ಆದರೆ ದೀಪಾವಳಿ, ಯುಗಾದಿ ಮತ್ತು ಸಂಕ್ರಾಂತಿ ದಿನ ಪೂಜೆಯ process ತುಂಬ ಕಡಿಮೆ. ಹಾಗಾಗಿ ಅವುಗಳು ನನಗೆ ತುಂಬ ಪ್ರಿಯವೆನ್ನಿಸುತ್ತವೆ.

ದೀಪಾವಳಿಯ ಪಟಾಕಿಗಳಿಂದ ನಾನು ಯಾವತ್ತೂ ದೂರವೇ. ದೀಪಾವಳಿಯೆಂದರೆ ನನಗಂತೂ ಮಣ್ಣಿನ ಹಣತೆ ಮತ್ತು ಆಕಾಶಬುಟ್ಟಿ ಅಷ್ಟೇ. ಇನ್ನು ಯುಗಾದಿ ಎಂದರೆ ಒಬ್ಬಟ್ಟು ಅನ್ನುವುದನ್ನು ಬಿಟ್ಟರೆ ವಿಶೇಷ ಆಕರ್ಷಣೆಯೇನೂ ಇಲ್ಲ. ಆದರೆ ಸಂಕ್ರಾಂತಿ ಹಬ್ಬ ಮಾತ್ರ ಎಳ್ಳು, ಸಕ್ಕರೆ ಅಚ್ಚು, ಕಬ್ಬು, ಕುಸುರಿಕಾಳು, ಬಣ್ಣ ಬಣ್ಣದ ಜೀರಿಗೆ ಪೆಪ್ಪರ್‌ಮಿಂಟುಗಳಿಂದಾಗಿ ತುಂಬ ಪ್ರಿಯವೆನ್ನಿಸುತ್ತದೆ.
ನಾವು ಸಣ್ಣವರಿರುವಾಗ ಸಂಕ್ರಾಂತಿಯ ಎಳ್ಳು ಮನೆಯಲ್ಲೇ ತಯಾರಾಗುತ್ತಿದ್ದುದರಿಂದ ಆ ಸಂಭ್ರಮವೇ ಬೇರೆ. ಈಗಿನಂತೆ ರೆಡಿ ಯಾವುದೂ ಸಿಗುತ್ತಿರಲಿಲ್ಲ. ಅಮ್ಮ ಕಡಲೆಕಾಯಿ ಬೀಜ, ಹುರಿಗಡಲೆ, ಬೆಲ್ಲದ ಅಚ್ಚು, ಕೊಬ್ಬರಿ ಗಿಟುಕು, ಎಳ್ಳು ಎಲ್ಲವನ್ನೂ ತಂದು ಟೇಬಲ್ಲಿನ ಮೇಲೆ ಜೋಡಿಸಿಟ್ಟ ಕೂಡಲೇ ಸಂಕ್ರಾಂತಿ ಹತ್ತಿರವಾಗುತ್ತಿದೆ ಅಂತ ಗೊತ್ತಾಗುತ್ತಿತ್ತು ಸಣ್ಣವಳಿರುವಾಗ! ಆಗಿನ ನನ್ನ ಅಮ್ಮನ ಸಂಭ್ರಮ ನೋಡಬೇಕು.

ನಾವಿದ್ದ ಹಳ್ಳಿಗಳಲ್ಲಿ ನಮ್ಮ ವಾಸ ಯಾವಾಗಲೂ PWD ಕಾಲೋನಿಯಲ್ಲೇ. ಅಬ್ಬಬ್ಬಾ ಎಂದರೆ 15-20 ಮನೆ ಇರುತ್ತಿದ್ದ ಕಾಲೋನಿಯಲ್ಲಿ ಹೆಂಗಸರೆಲ್ಲ ಮಧ್ಯಾಹ್ನ ಊಟವಾದ ಮೇಲೆ ಒಂದು ಮನೆಯಲ್ಲಿ ಸೇರಿ ಹರಟುವುದು ಮಾಮೂಲು. ನಾವೆಲ್ಲರೂ ಕೂಡಾ ಅಂದಿನ ದಿನ ಯಾವ ಮನೆಯಲ್ಲಿ ಈ ಸಭೆ ಇರುತ್ತಿತ್ತೋ ಆ ಮನೆಗೆ ಸ್ಕೂಲಿನಿಂದ ಬಂದ ಕೂಡಲೇ ಹೋಗಿ ಸೇರುತ್ತಿದ್ದೆವು. ಸಾಧಾರಣವಾಗಿ ಮಣಿಗಳಲ್ಲಿ ಟೇಬಲ್, ಗೊಂಬೆ ಮುಂತಾದವನ್ನು ಮಾಡುವ ಮತ್ತು ವಯರಿನಲ್ಲಿ ಬುಟ್ಟಿ ಹೆಣೆಯುವ ಗುಡಿ ಕೈಗಾರಿಕೆಯಲ್ಲಿ ಎಲ್ಲರೂ ತೊಡಗುತ್ತಿದ್ದುದು ಮಾಮೂಲು. ಆದರೆ ಸಂಕ್ರಾಂತಿ ಬಂದಾಗ ಮಣಿ ಮತ್ತು ವಯರ್ ಬೀರುವಿನೊಳಕ್ಕೆ ಸೇರಿ ಹೋಗಿ, ಎಲ್ಲರ ಕೈಲೂ ಬೆಲ್ಲವಿರುವ ತಟ್ಟೆ, ಅದನ್ನು ಸಣ್ಣದಾಗಿ ಕತ್ತರಿಸಲು ಅಡಕೆ ಕತ್ತರಿ ಮತ್ತು ಕರಿಯ ಸಿಪ್ಪೆಯನ್ನೆಲ್ಲ ತುರಿದು ಹಾಕಿದ ನಂತರದ ಐಶ್ವರ್ಯಾ ರೈ, ಕರೀನಾ ಕಪೂರ್ ಥರ ಬೆಳ್ಳಗೆ ಹೊಳೆಯುವ ಕೊಬ್ಬರಿ ಗಿಟುಕುಗಳು! ಮಧ್ಯಾಹ್ನ ಹರಟೆ ಹೊಡೆಯುವ ಸಮಯದಲ್ಲಿ ಎಲ್ಲ ಹೆಂಗಸರೂ ಬೆಲ್ಲ ಮತ್ತು ಕೊಬ್ಬರಿ ಕತ್ತರಿಸಿ ಮುಗಿಸಿಕೊಂಡು ಬಿಡುತ್ತಿದ್ದರು.

ನನ್ನ ಪಾಲಿನ ಹಬ್ಬವೆಂದರೆ ಅದು! ಸಂಕ್ರಾಂತಿಯ ಸಂತೋಷ ಆಗಲೇ ಶುರುವಾಗುತ್ತಿತ್ತು….

ಅಮ್ಮನ ಪಕ್ಕ ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಳ್ಳುವ ಮಕ್ಕಳ ಆ ನಿಮಿಷದ ಪ್ರಾರ್ಥನೆಯೆಂದರೆ, ಅಮ್ಮ ಕತ್ತರಿಸುವ ಸಣ್ಣದೊಂದು ಬೆಲ್ಲದ ತುಂಡು ಅಥವಾ ಕೊಬ್ಬರಿ ತುಂಡು ನೆಲಕ್ಕೆ ಬಿದ್ದು ಅವುಗಳು ನಮ್ಮ ಪಾಲಿಗೆ ಸೇರಲಿ ಎನ್ನುವುದು! ಅಮ್ಮ ನೆಲಕ್ಕೆ ಬೀಳದ ಹಾಗೆ ಒಂದು ಪೇಪರ್ ಹರಡಿ ಅದರ ಮೇಲಿಟ್ಟು ಹೆಚ್ಚುತ್ತಿದ್ದರಿಂದ ನಮಗೆ ಆ ತುಂಡು ಸಿಗುವ ಲಕ್ಷಣವೂ ಕಾಣದೇ ಹೋದಾಗ ‘ಅಮ್ಮ ಒಂದ್ ತುಂಡ್ ಬೆಲ್ಲ ಕೊಡೇ’ ಅಂತ ‘ಅಮ್ಮಾ … ತಾಯೀ …’ ಸ್ಟೈಲಿನಲ್ಲಿ ಕರುಣಾಜನಕವಾಗಿ ಕೇಳಲು ಶುರು ಮಾಡುತ್ತಿದ್ದೆವು. ಆದರೆ ಸದಾ ಪ್ರೀತಿ ವಾತ್ಸಲ್ಯ ತೋರುವ ಅಮ್ಮಂದಿರು ಸಂಕ್ರಾಂತಿ ಸಮಯದಲ್ಲಿ ಮಾತ್ರ ತುಂಬ ಕಠಿಣ ಹೃದಯಿಗಳಾಗಿ ಬಿಡುತ್ತಿದ್ದರು. ನಾವು ಎಷ್ಟೇ ಬೇಡಿದರೂ ಒಂದೇ ಒಂದು ತುಂಡು ಕೈಗಿಡದೇ ನಮ್ಮ ಮಾತು ಕಿವಿಗೇ ಬೀಳಲಿಲ್ಲವೇನೋ ಅನ್ನುವ ಹಾಗೆ ಗೆಳತಿಯರ ಜೊತೆ ಮಾತಿನಲ್ಲಿ ಮಗ್ನರಾಗಿರುವ ಹಾಗೆ ನಟಿಸುತ್ತಿದ್ದರು! ಅದರ ಕಾರಣವೂ ನಮಗೆ ಗೊತ್ತಿತ್ತು … ಒಂದು ತುಂಡು ಕೊಟ್ಟರೆ ಎರಡನೆಯದಕ್ಕೆ ಮತ್ತೆ ಅಮ್ಮಾ … ಅಂತ ಶುರು ಮಾಡುತ್ತಿದ್ದೆವು ಅನ್ನುವ ಕಾರಣಕ್ಕೆ ಮೊದಲನೆಯದನ್ನೇ ಕೊಡದಿರುವ ಕಠಿಣ ನಿರ್ಧಾರ ಮಾಡಿರುತ್ತಿದ್ದರು ಅನ್ನುವುದು ನಮಗೇ ಗೊತ್ತಿದ್ದ ವಿಷಯವೇ. ಆದರೂ ಒಂದೇ ಒಂದು ವರ್ಷವೂ ನಮ್ಮ ಪ್ರಯತ್ನವನ್ನಂತೂ ನಾವು ನಿಲ್ಲಿಸುತ್ತಿರಲಿಲ್ಲ. ಕರ್ಮಣ್ಯೇ ವಾಧಿಕಾರಸ್ತೆ ಅನ್ನುವ policy ನಮ್ಮದು! ಕೊನೆಗೆ ಕೊಬ್ಬರಿ, ಬೆಲ್ಲ ಕತ್ತರಿಸುವ ಕಾರ್ಯ ಜನ-ಗಣ-ಮನ ಹಂತಕ್ಕೆ ಬಂದಾಗ ಮಾತ್ರ ಮಾತೃಹೃದಯ ಕರಗಿ, ಒಂದು ಸಣ್ಣ ತುಂಡು ಕೊಬ್ಬರಿ, ಸಣ್ಣಾತಿಸಣ್ಣ ಬೆಲ್ಲದ ತುಂಡು ಕೈಗಿಟ್ಟು ನಾವು ಅದನ್ನು ಬಾಯಿಗೆ ಹಾಕಿಕೊಂಡು ತಲ್ಲೀನರಾಗಿ ಸವಿದು ಕಣ್ಣು ಬಿಡುವಷ್ಟರಲ್ಲಿ ಕತ್ತರಿಸಿಟ್ಟ ಕೊಬ್ಬರಿ-ಬೆಲ್ಲದ ಸಮೇತ ಅಮ್ಮ ಮಾಯವಾಗಿರುತ್ತಿದ್ದಳು.

ಸಂಕ್ರಾಂತಿಯ ಎಳ್ಳಿನ ಕೆಲಸದಲ್ಲಿ ಅತ್ಯಂತ ಸಾಧಾರಣ ಕೆಲಸವೆಂದರೆ ಹುರಿಗಡಲೆಯದ್ದು. ಹುರಿಗಡಲೆಯಲ್ಲಿ ಕಪ್ಪು ಸಿಪ್ಪೆ ಮತ್ತು ಒಡೆದು ಹೋದ ತುಂಡುಗಳನ್ನು ಆರಿಸುವುದು ಬಿಟ್ಟರೆ ಮತ್ತೇನೂ ಹೆಚ್ಚಿನ ಕೆಲಸ ಇರುತ್ತಿರಲಿಲ್ಲ. ಆ ನಂತರ ಒಂದು ದಿನ ಬಿಸಿಲಿಗೆ ಹಾಕಿಟ್ಟರೆ ಮುಗಿದ ಹಾಗೇ. ಹೀಗಾಗಿ ಕಡಲೆ ನಮ್ಮನ್ನು ಹೆಚ್ಚು ಆಕರ್ಷಿಸುತ್ತಿರಲಿಲ್ಲ. ಅದು ಬಿಟ್ಟರೆ ಉಳಿದೆಲ್ಲ ಹಂತವೂ ಅತ್ಯಂತ ರೋಮಾಂಚಕ.

ಮುಂದಿನ ಕೆಲಸ ಕತ್ತರಿಸಿದ ಬೆಲ್ಲ, ಕೊಬ್ಬರಿ ಮತ್ತು ಆರಿಸಿದ ಹುರಿಗಡಲೆಯನ್ನು ಬಿಸಿಲಿಗಿಟ್ಟು ಒಣಗಿಸುವುದು. ಆಗೆಲ್ಲ ಲಕ್ಷ್ಮಣ್‌ರೇಖಾ ಅನ್ನುವ ಮಾಯಾ ಚಾಕ್‌ಪೀಸ್ ಇನ್ನೂ ಸೃಷ್ಟಿಯಾಗಿರಲಿಲ್ಲ. ಹಾಗಾಗಿ ಇರುವೆಗಳಿಂದ ಇವುಗಳನ್ನು ಹುಲುಮಾನವರೇ ರಕ್ಷಿಸಬೇಕಾಗುತ್ತಿತ್ತು. ತಾರಸಿಯ ಮೇಲಿಟ್ಟ ತಟ್ಟೆಗಳನ್ನು ಆಗೀಗ ಹೋಗಿ ನೋಡಿ, ಇರುವೆ ಬಂದಿಲ್ಲವೆಂದು ಖಾತರಿ ಪಡಿಸಿಕೊಂಡು ಅಮ್ಮನಿಗೆ ವರದಿ ಕೊಡುವಂತ ಕ್ಷುದ್ರ ಕೆಲಸಗಳೆಲ್ಲ ನಮ್ಮ ಪಾಲಿಗೆ ಬೀಳುತ್ತಿದ್ದವು. ಆದರೆ ನಾವೂ ಎಂಥ ನಿಯತ್ತಿನ ಜನರಿದ್ದೆವು ನೋಡಿ! ಹಾಗೆ ನೋಡಲು ಹೋದಾಗ ಕದ್ದು ಒಂದಿಷ್ಟನ್ನು ಬಾಯಿಗೆ ಹಾಕಿಕೊಳ್ಳುವುದು ಕಷ್ಟವಿರಲಿಲ್ಲವಾದರೂ ಆ ರೀತಿ ಮಾಡುತ್ತಲೇ ಇರಲಿಲ್ಲ. ಅಮ್ಮ ಕೊಟ್ಟರೆ ಮಾತ್ರ ನಮ್ಮದು ಅನ್ನುವ ನಿಯತ್ತು ನಮ್ಮದು! ಆ ಸಮಯದಲ್ಲಿ ಕಾಗೆ ಕೂಡಾ ನಮ್ಮ ಪಾಲಿನ ದೇವರಾಗಿಬಿಡುತ್ತಿತ್ತು. ಅದು ಬಂದು ಹೆಕ್ಕಿ ಹಾರುವ ಗಾಭರಿಯಲ್ಲಿ ಒಂದೆರಡು ತುಂಡನ್ನು ಕೆದರಿ ನೆಲಕ್ಕೆ ಬೀಳಿಸಿ ಬಿಡುತ್ತಿತ್ತು. ನಾವು ಎಲ್ಲೆಲ್ಲೋ ಕೂತು, ಏನೆಲ್ಲ ಕೆದಕಿರುತ್ತಿದ್ದ ಕಾಗೆಯ ಕಾಲು, ಕೊಕ್ಕು ಸೋಕಿದ ಬೆಲ್ಲ-ಕೊಬ್ಬರಿ-ಕಡಲೆಯನ್ನು ಬಟ್ಟೆಯಲ್ಲಿ ಒರೆಸಿ ಶುದ್ಧವಾಗಿಸಿ ಮಹಾಪ್ರಸಾದ ಅನ್ನುವ ಹಾಗೆ ಸ್ವೀಕರಿಸುತ್ತಿದ್ದೆವು!

ಆಮೇಲೆ ಕಡಲೆಕಾಯಿ ಬೀಜ ಹುರಿಯುವ ಕೆಲಸ ಶುರುವಾಗುತ್ತಿತ್ತು. ಕಡಲೆಕಾಯಿಯನ್ನು ನೇರವಾಗಿ ಬಾಣಲೆಗೆ ಹಾಕಿದರೆ ಸೀದುಹೋಗುತ್ತದೆ ಎಂದು ಅಮ್ಮ ಮರಳಿನ ಜೊತೆ ಹುರಿಯುತ್ತಿದ್ದಳು. ಆಗಲೂ ಯಥಾಪ್ರಕಾರ ಅವಳ ಪಕ್ಕದಲ್ಲೇ ಬೀಡು ಬಿಟ್ಟಿರುತ್ತಿದ್ದ ನಾವು ‘ದೇವರೇ! ಒಂದು .. ಒಂದೇ ಒಂದು ಒಬ್ಬೆ ಕಡಲೆಕಾಯಿಯಾದರೂ ತುಂಬ ಕೆಂಪಾಗಿ ಹೋಗಿ ನಮಗೆ ತಿನ್ನೋದಕ್ಕೆ ಸಿಗಲಪ್ಪಾ’ ಅಂತ ಬೇಡಿಕೆ ಸಲ್ಲಿಸುತ್ತಾ ಕೂತಿರುತ್ತಿದ್ದೆವು! ಬೆಲ್ಲ-ಕೊಬ್ಬರಿ ವಿಷಯದಲ್ಲಿ ಅಷ್ಟು ಕಠಿಣನಾಗಿರುತ್ತಿದ್ದ ದೇವರು ಕಡಲೆಕಾಯಿ ವಿಷಯದಲ್ಲಿ ಮಾತ್ರ ತುಂಬ ದಯಾಮಯನಾಗಿರುತ್ತಿದ್ದ! ಎಷ್ಟೇ ಗಮನವಿಟ್ಟು ಹುರಿದರೂ ಒಂದು ಒಬ್ಬೆಯಾದರೂ ಕೆಂಪಾಗಿ ಹೋಗಿ, ಅದನ್ನು ಎಳ್ಳಿನ ಜೊತೆ ಮಿಕ್ಸ್ ಮಾಡಿದರೆ ಅಸಹ್ಯವಾಗಿ ಕಾಣುತ್ತದೆ ಅಂತ ಅಮ್ಮ ತೀರ್ಮಾನಿಸುತ್ತಿದ್ದಳು. ಅದನ್ನೂ ಪೂರ್ತಿಯಾಗಿ ನಮ್ಮ ಪಾಲಾಗಿಸದೇ, ಇದ್ದಿದ್ದರಲ್ಲಿ ಬೆಳ್ಳಗಿನದ್ದೆಲ್ಲ ಆರಿಸಿ ಉಳಿದವನ್ನು ನಮಗೆ ದಯಪಾಲಿಸುತ್ತಿದ್ದಳು. ಆಬ್ಬಬ್ಬಾ! ಆ ಘಳಿಗೆ ಎಂಥ ಮಧುರವಾಗಿರುತ್ತಿತ್ತು! ಆಮೇಲೆ ಕಡಲೆಕಾಯಿಯನ್ನು ಮೊರದಲ್ಲಿಟ್ಟು ಉಜ್ಜಿ, ಸಿಪ್ಪೆ ತೆಗೆದು, ಕೇರಿ, ಒಡೆದು ಎರಡಾಗಿಸಿ, ಆರಿಸಿ … ನಂತರ? ನಂತರ ಇನ್ನೇನು …. ಯಥಾಪ್ರಕಾರ ಯಾವುದೋ ಮಾಯಾಡಬ್ಬದಲ್ಲಿ ಅಡಗಿಸಿ ಇಡುತ್ತಿದ್ದಳು. ಇನ್ನು ಹಬ್ಬದ ಹಿಂದಿನ ದಿನದವರೆಗೂ ಅವುಗಳ ದರ್ಶನಭಾಗ್ಯವಿಲ್ಲ.

ಆ ನಂತರ ಸಕ್ಕರೆ ಅಚ್ಚಿನ ಕಾರ್ಯಕ್ರಮ. ತಿಂಡಿಪೋತಿಯಾದ ನಾನು ಹರುಕು ಮುರುಕು ತಿಂಡಿಯಾಸೆಗೆ ಇಂಥ ಕೆಲಸಗಳಿಗೆಲ್ಲ ಅಮ್ಮನ assistant ಆಗುತ್ತಿದ್ದೆ. ಅಮ್ಮ ಕೆಟ್ಟಾಕೊಳಕ ಬಣ್ಣದ ಸಕ್ಕರೆಯನ್ನು ಬೆಳ್ಳನೆಯ ಪಾಕವಾಗಿಸುವ ಮಹತ್ಕಾರ್ಯದಲ್ಲಿ ತೊಡಗುತ್ತಿದ್ದಳು. ಸಕ್ಕರೆ ಪಾಕವನ್ನು ಹಾಲು ಹಾಕಿ ಹಾಕಿ ಕುದಿಸಿ, ಮತ್ತೆ ಮತ್ತೆ ಸೋಸಿ ಕೊಳೆಯ ಬಣ್ಣ ತೆಗೆದು, ಹಾಲು ಬಿಳುಪಿನ ಬಣ್ಣಕ್ಕೆ ತರಿಸುವುದು ಸಾಮಾನ್ಯದ ಮಾತಲ್ಲ. ಅದು ತುಂಬ ರೇಜಿಗೆಯ ಕೆಲಸ. ಪಾಕ ಸಿದ್ದವಾದ ನಂತರ, ಚೂರು ಚೂರು ಪಾಕವನ್ನು ಕಾಯಿಸಿ ಹದಕ್ಕೆ ತರಿಸುವ ಕೆಲಸ. ಪಾಕ ಹದಕ್ಕೆ ಬಂದ ಮೇಲೆ ತುಂಬ ಬೇಗ ಹರಳುಗಟ್ಟಿ ಬಿಡುತ್ತದೆ. ಹಾಗಾಗಿ ಬೇಗನೇ ಅವುಗಳನ್ನು ಅಚ್ಚಿನೊಳಗೆ ಸುರಿಯಬೇಕು. ಹಾಗಾಗಿ ಬೃಂದಾವನ, ಮಂಟಪ, ಕೊಕ್ಕರೆ, ಬಾತುಕೋಳಿ, ಕೋಳಿ, ನವಿಲು, ಸಿಂಹ ಎಲ್ಲ ವೆಜ್ ಮತ್ತು ನಾನ್‌ವೆಜ್ ಸಕ್ಕರೆ ಅಚ್ಚುಗಳ mouldಗಳಿಗೆ ರಬ್ಬರ್ ಬ್ಯಾಂಡ್ ಹಾಕಿ ರೆಡಿಯಾಗಿ ಇಡುವುದು ನನ್ನ ಕೆಲಸ. ತಮಿಳುನಾಡಿನ mould ತುಂಬ ಚೆಂದಕ್ಕಿರುತ್ತದೆ ಅನ್ನುವುದು ಮುಂಚೆ ತಮಿಳುನಾಡಿಗೆ ಸೇರಿದ್ದ ಕೊಳ್ಳೆಗಾಲದವಳಾದ ಅಮ್ಮನ ನಂಬಿಕೆ ಅಥವಾ ಅದು ತವರುಮನೆ ವ್ಯಾಮೋಹವೋ!

ಪಾಕ ಎರಡೇ ಕ್ಷಣದಲ್ಲಿ ಗಟ್ಟಿಯಾಗಿಬಿಡುತ್ತಿದ್ದರಿಂದ ಅಚ್ಚುಗಳಲ್ಲಿ ಪಾಕ ಸುರಿದ ತಕ್ಷಣ ನಾಜೂಕಾಗಿ ಅದನ್ನು ಕುಟ್ಟದಿದ್ದರೆ ಪಾಕ ಎಲ್ಲ ಸಣ್ಣ ಪುಟ್ಟ ಸಂದಿಗಳಿಗೆ ಹೋಗದೇ ವಿಕಲಾಂಗ ಕೋಳಿ, ಸಿಂಹ, ಬಾತುಗಳೆಲ್ಲ ಸೃಷ್ಟಿಯಾಗಿ ಬಿಡುತ್ತಿದ್ದವು. ಹಾಗಾಗಿ ಅದನ್ನು ಬೇಗ ಬೇಗ ಕುಟ್ಟಿ ಎಲ್ಲ ಕಡೆ ಪಾಕ ಇಳಿಯುವಂತೆ ನೋಡಿಕೊಳ್ಳುವ ಕೆಲಸವೂ ನನ್ನ ಪಾಲಿಗೆ ಬೀಳುತ್ತಿತ್ತು. ಕೊನೆಯಲ್ಲಿ ಅರೆಬರೆ ಗಟ್ಟಿಯಾಗಿ ಹೋದ ಪಾಕವನ್ನು ಬೆಲ್ಲದ ಅಚ್ಚಿನ mouldಗೆ ಸುರಿಯುತ್ತಿದ್ದಳು. ಅದು open mould ಆದ್ದರಿಂದ ಪಾಕದ ಹದ ಅಷ್ಟೇನೂ ಲೆಕ್ಕಕ್ಕೆ ಬರುತ್ತಿರಲಿಲ್ಲ. ಒಂದೈದು ನಿಮಿಷದ ನಂತರ ರಬ್ಬರ್ ಬ್ಯಾಂಡ್ ತೆಗೆದು ಮೋಹಕ ಸಕ್ಕರೆ ಅಚ್ಚುಗಳನ್ನು, ನಿಧಾನವಾಗಿ ಮೌಲ್ಡ್‌ನಿಂದ ಬೇರ್ಪಡಿಸಿ ಜೋಡಿಸುವ ಕೆಲಸ. ಕೂಡಲೇ ಮತ್ತೆ ಉಸಿರಾಡಲೂ ಪುರುಸೊತ್ತಿಲ್ಲದಂತೆ ಅಚ್ಚುಗಳನ್ನು ಜೋಡಿಸಿ ರಬ್ಬರ್ ಬ್ಯಾಂಡ್ ಹಾಕುವ ಕೆಲಸ.

ಪ್ರತೀ ವರ್ಷವೂ ಅದೇ mould ಮತ್ತು ಅದೇ ಸಕ್ಕರೆ ಅಚ್ಚಾದರೂ ಅಮ್ಮ ಅವುಗಳನ್ನೆಲ್ಲ ಪ್ರೀತಿಯಿಂದ ನೋಡುತ್ತ ‘ಅಬ್ಬಾ! ಈ ಮಂಟಪ ನೋಡೇ ಅದೆಷ್ಟು ಮಾಟವಾಗಿದೆ’ ಅಂತಲೋ ‘ಈ ಬೃಂದಾವನ ಒಡ್ಡೊಡ್ಡು ಕಣೇ’ ಅಂತಲೋ running commentary ಶುರು ಮಾಡುತ್ತಿದ್ದಳು. ಅಷ್ಟೆಲ್ಲ ಕುಟ್ಟಿ, ತಟ್ಟಿದರೂ ಕೆಲವೊಂದು ಅಚ್ಚುಗಳು ಊನವಾಗಿರುತ್ತಿದ್ದವು. ನಾನು ಎಂದಿನ ಆಶಾವಾದದಲ್ಲಿ ಅದಾದರೂ ನನಗೆ ಸಿಗುತ್ತೇನೋ ಅಂತ ಕಾದರೆ ಅಮ್ಮ ಅವುಗಳನ್ನೆಲ್ಲ ಮತ್ತೆ ಮುಂದಿನ ಒಬ್ಬೆಯ ಪಾಕದ ಜೊತೆಗೆ ಸೇರಿಸಿಕೊಂಡು ಬಿಡುತ್ತಿದ್ದಳು. ಕೊಟ್ಟಕೊನೆಯಲ್ಲಿ ಉಳಿಯುವ ಮೂರು ನಾಲ್ಕು ಮುರುಕಲು, ಹರಕಲು ತುಂಡುಗಳು ನನ್ನ ಪಾಲಿಗೆ.

ಹಬ್ಬದ ಹಿಂದಿನ ದಿನ ನೈಲಾನ್ ಎಳ್ಳು ಹುರಿದು, ಮಾಯಾಡಬ್ಬದಿಂದ ಕತ್ತರಿಸಿದ್ದ ಕೊಬ್ಬರಿ, ಬೆಲ್ಲ, ಕಡಲೆಬೀಜ, ಹುರಿಗಡಲೆ ಮಿಕ್ಸ್ ಮಾಡುವ ಘಳಿಗೆ ಬಂದಾಗ ಎದೆ ಬಡಿತ ತಾರಕಕ್ಕೇರಿರುತ್ತಿತ್ತು! ಮರುದಿನ ಅದನ್ನು ಬಾಯಿಗೆ ಹಾಕಿಕೊಳ್ಳುವ ಖುಷಿಗೆ ರಾತ್ರಿಯೆಲ್ಲ ಕನಸಿನಲ್ಲಿ ಎಳ್ಳು ಬೆಲ್ಲವೇ! ಬೆಳಿಗ್ಗೆ ಅಂತೂ ಇಂತೂ ಪೂಜೆಗೆ ಮುನ್ನ ಅಮ್ಮ ದೊಡ್ಡದೊಂದು ಪೇಪರ್ ಹಾಸಿ ಅದರ ಮೇಲೆ ಎಲ್ಲವನ್ನೂ ಸುರಿದು ಮಿಕ್ಸ್ ಮಾಡಿ ಅಂತೂ ಕೊನೆಗೆ ಎಳ್ಳು, ಸಕ್ಕರೆ ಅಚ್ಚು ನಮ್ಮ ಕೈಗಿಟ್ಟಾಗ, ಅವಳು ಎಂದಿಗಿಂತ ವಾತ್ಸಲ್ಯಮಯಿಯಾಗಿ ಕಾಣಿಸುತ್ತಿದ್ದಳು.

ಅದಾದ ನಂತರ ಎಳ್ಳು ಬೀರುವ ಕೆಲಸ. ಎಲ್ಲರ ಮನೆಗೂ ಎಳ್ಳು, ಸಕ್ಕರೆ ಅಚ್ಚು, ಕಬ್ಬು, ಕಿತ್ತಳೆಹಣ್ಣು, ಬಾಳೆಹಣ್ಣು ತೆಗೆದುಕೊಂಡು ಹೋಗಿ ‘ಬೀರಿ’, ಅವರು ಕೊಟ್ಟಿದ್ದನ್ನು ವಾಪಸ್ ತೆಗೆದುಕೊಂಡು ಬಂದು ಮನೆ ಸೇರುತ್ತಿದ್ದೆವು. ಅಮ್ಮ ಬೇರೆಯ ಮನೆಯವರ ಎಲ್ಲ ಪ್ಯಾಕೆಟ್‌ಗಳನ್ನೂ inspect ಮಾಡಿ ‘ಅಬ್ಬಾ! ಅವರ ಮನೆಯವರು ಅದೆಷ್ಟು ಕರೀಈಈಈ ಬೆಲ್ಲ ಹಾಕಿದಾರೆ’ ಅಂತಲೋ ‘ಅಬ್ಬಾ ಕಡಲೆಕಾಯಿ ಸೀಯಿಸಿಬಿಟ್ಟಿದ್ದಾರೆ’ ಅಂತಲೋ, ‘ಕೊಬ್ಬರಿ ಒಣಗಿಸಿಯೇ ಇಲ್ಲ. ಹಸಕಲು ವಾಸನೆ’ ಅಂತಲೋ commentary ಕೊಡುತ್ತಾ ಚೆಂದಕ್ಕಿರುವುದನ್ನು ಮಾತ್ರ ನಮ್ಮ ಮನೆ ಎಳ್ಳಿನ ಜೊತೆ ಮಿಕ್ಸ್ ಮಾಡಿ ಉಳಿದವನ್ನು ಹಾಗೆ ಹೊರಗಿಟ್ಟು ಬಿಡುತ್ತಿದ್ದಳು. ನಾವು ಬಟ್ಟಲುಗಟ್ಟಳೆ ಎಳ್ಳು ತಿನ್ನುವುದರೊಂದಿಗೆ ಆ ವರ್ಷದ ಸಂಕ್ರಾಂತಿ ಸಂಭ್ರಮ ಮುಗಿಯುತ್ತಿತ್ತು.

ಮೊನ್ನೆ ಮೊನ್ನೆಯವರೆಗೆ, ಅಂದರೆ ಮೂರ್ನಾಲ್ಕು ವರ್ಷದ ಕೆಳಗೆ ಕೂಡಾ ನಾನು ಮನೆಯಲ್ಲಿ ಇದೆಲ್ಲವನ್ನೂ ಮಾಡುತ್ತಿದ್ದೆ. ಪೂಜೆಯ ವಿಷಯದಲ್ಲಿ ಸಿಕ್ಕಾಪಟ್ಟೆ ಮೈಗಳ್ಳಿಯಾದ ನನಗೆ ಎಳ್ಳಿನ ಕೆಲಸ ಮಾತ್ರ ಸಿಕ್ಕಾಪಟ್ಟೆ ಇಷ್ಟದ್ದು. ಆದರೆ ನನಗೂ, ಅಮ್ಮನಿಗೂ ಇದ್ದ ವ್ಯತ್ಯಾಸವೆಂದರೆ ಅಮ್ಮ ಗುಟ್ಟಾಗಿ ಡಬ್ಬಿಯಲ್ಲಿ ಹಾಕಿ ಎತ್ತಿಡುತ್ತಿದ್ದಳು, ನಾನು ಮಾತ್ರ ಮಗನಿಗೆ ಯಾವತ್ತು ರೆಡಿಯಾದರೆ ಅವತ್ತೇ ತಿನ್ನಲು ಕೊಟ್ಟು, ನಾನೂ ಒಂದಿಷ್ಟು ತಿಂದು ಮುಗಿಸುತ್ತಿದ್ದೆ. ಅದೊಂದೇ ಬಿಟ್ಟರೆ ಉಳಿದೆಲ್ಲ ಡಿಟ್ಟೋ ಡಿಟ್ಟೋ.

ಆದರೆ ಈಗ ಎಲ್ಲ ಬದಲಾಗಿಹೋಗಿದೆ ನನ್ನ ಮನೆಯಲ್ಲಿ. ಅಂಗಡಿಗೆ ಹೋಗಿ ಪ್ಯಾಕೆಟ್‌ಗಳಲ್ಲಿ ಹೆಚ್ಚಿ, ಕ್ಲೀನ್ ಮಾಡಿ, ಒಣಗಿಸಿ ಇಟ್ಟವನ್ನು ಒಂದಕ್ಕೆ ಮೂರರಷ್ಟು ಬೆಲೆ ಕೊಟ್ಟು ತಂದು ಮಿಕ್ಸ್ ಮಾಡಿ ಒಂದಿಷ್ಟು ಬಾಯಿಗೆ ಹಾಕಿಕೊಳ್ಳುವುದರೊಂದಿಗೆ ಸಂಕ್ರಾಂತಿ ಹಬ್ಬದ ಮುಗಿದೇ ಹೋಗಿರುತ್ತದೆ. ಅಷ್ಟೇ! ಆಚರಣೆಗಳನ್ನು ಬರಿಯ ಆಚರಣೆಯ ಮಟ್ಟಕ್ಕೆ ತಂದರೆ ಬದುಕು ಆಗುವುದೇ ಹೀಗೆ. ಗಮ್ಯದ ಜೊತೆ ಜೊತೆಗೆ ಆ ಪ್ರಯಾಣವನ್ನು ಕೂಡಾ ನಾವು ಮೋಹಿಸಿದರೆ ಮಾತ್ರ ಬದುಕಿನಲ್ಲಿ ಬೆರಗು ಇರುತ್ತದೆ. ಗಮ್ಯಕ್ಕಾಗಿ ಗಮ್ಯ ಅನ್ನುವ ಸ್ಥಿತಿ ತಲುಪಿದ ಕೂಡಲೇ ಪ್ರಯಾಣದ ಮೋಹಕತೆ ಕರಗಿಹೋಗುತ್ತದೆ. ಬದುಕಿನೆಡೆಗಿನ ಬೆರಗು ಯಾವತ್ತೂ ಕಳೆದುಕೊಳ್ಳಬಾರದು …