ಒಂದು ಹಳೆಯ ರೇಡಿಯೋ ಹಾಡು

ಹಳೆಯ ರೇಡಿಯೋಗಳಲ್ಲಿ ಬರುವ ದುಃಖದ
ಹಾಡುಗಳನ್ನು ಅನುಗಾಲವೂ ಕೇಳಬಾರದು
ಜೋರು ಮಳೆ ಬಂದಾಗ
ಮೈ ಮುರುಟಿದ ಹಳೆಯ ಮುದುಕಿ ಕಂಡಾಗ
ಚಿತ್ರವೊಂದನ್ನ ಬಿಡಿಸಲು ಕೂತಾಗಲೇ ಪೆನ್ಸಿಲ್ಲಿನ ಕಪ್ಪು ಮೂತಿಯ ಲೆಡ್ಡು ಮುರಿದು ಬಿದ್ದಾಗ
ಮೈ ಕೊರೆಯುವ ಚಳಿಯಲ್ಲಿ ಮತ್ತಷ್ಟು ಮೈ‌ ನಡುಗಿಸುವ ಕೋಲ್ಡ್ ಕಾಫಿ ಎದುರಿದ್ದಾಗ
ಕಳೆದು ಹೋಗುವುದರಿಂದಲೇ ಕವಿತೆ ಬರೆಯುವ ಪಾಪದಿಂದ ವಿಮೋಚನೆ ಅನುಗ್ರಹಿಸುವ
ಪೆನ್ನು
ಖಾಲಿ ಹಾಳೆಗಳು ವಿಪರೀತ ನೆನಪಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು

ರೇಡಿಯೋನ ಯಾವುದೋ ಅಜ್ಞಾತ ಮೂಲೆಯಲ್ಲಿ ಕೂತು ಟ್ರಾನ್ಸಿಸ್ಟರು ಸ್ಪೀಕರು ಅದಕ್ಕಂಟಿದ ಮ್ಯಾಗ್ನೆಟ್ಟಿಗೂ ನೋವಾಗುವಂತೆ ಹಾಡುವ ಹಾಡುಗಾರನ
ಮನೆಯ ಬಾಡಿಗೆ ಎಷ್ಟು ತಿಂಗಳು ಬಾಕಿ ಇರಬಹುದು

ಎಲ್ಲರ ನೋವು ನೆನಪಾಗುವಂತೆ ಹಾಡು ಬರೆದವನು ನಿಜದಲ್ಲೂ ಅದೆಷ್ಟು ನೊಂದಿರಬಹುದು
ಅವರಿಬ್ಬರ ಸಂಕಟದ ಒಂದು ಸಣ್ಣ ಅಂದಾಜು ಸಿಕ್ಕಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು

ಬೆರಳ ಸಂದಿಯ ಒಂದೇ ಅಗುಳನ್ನು ಬಟ್ಟಲಿಗಿಟ್ಟು
ಅಕ್ಷಯ ಮಾಡಿ ಪರೀಕ್ಷಿಸುವವರಿಗೂ ಹಸಿವು ನೀಗಿಸಿದನಲ್ಲ ಯಾದವಸುತ
ಅವನ ಪವಾಡ ಆ ಕ್ಷಣಕ್ಕೆ ಮಾತ್ರ
ತಿಂದವರಿಗೆ ಮತ್ತೆ ಹಸಿವಾಗುತ್ತದೆ
ಅಂದು ಉಂಡವರ ಹಸಿವೂ ಇಂದು ಅರಿವಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು

ಹಣ್ಣು ತರಕಾರಿಗಳನು ಮಾರುವವನ ಮಗು
ಅಪೌಷ್ಟಿಕತೆಯಿಂದಲೇ ಅಸುನೀಗಿದಾಗ
ಕಪ್ಪುಕೋಟು ತೊಟ್ಟಿದ್ದಕ್ಕೆ ಅಪ್ಪನೇ ಮಗಳ ವಿಚ್ಚೇದನದ ಅರ್ಜಿಗೆ
ವಾದ ಮಂಡಿಸುವಾಗ
ಸುರುಸುರುಳಿಯಾಗಿ ಸುತ್ತುತ್ತಲೇ ಇರುತ್ತದಲ್ಲ,
ಅಳಲಸುಳಿ ಅದರ ದರ್ಶನವಾದರೆ ಮಾತ್ರ
ಕೇಳಬೇಕು ಹಳೆಯ ಹಾಡುಗಳನು

ಈಗೀಗ ಅಂದುಕೊಳ್ಳುತ್ತೇನೆ ನಮಗೆ ನಾವೇ ಆರೋಪಿಸಿಕೊಂಡ ಸಂಸ್ಕಾರದ ಉಪದೇಶಗಳು ಎಷ್ಟು ಹೆಣಭಾರ
ಸೊಫೆಸ್ಟಿಕೇಟಡ್ ಗಳ ತುಂಬು ಬೀದಿಯ ಮಗ್ಗಲಿನ
ಉಡಾಳನೊಬ್ಬನ ಬೀದಿ ಅದೆಷ್ಟು ಸಭ್ಯ
ಬಣ್ಣವಿಲ್ಲ ಚಂದವಿಲ್ಲ ಮೂರ್ತಾಮೂರ್ತಗಳಿಲ್ಲ
ಆದರೆ ಆ ಬೀದಿಯಲ್ಲಿ
ಹಳೆಯ ಹಾಡುಗಳು ನಿತ್ಯವೂ ಕೇಳುತ್ತವೆ

ನಾನು ಈಗೀಗ ಹಳೆಯ ಹಾಡುಗಳನ್ನು ಕೇಳುತ್ತೇನೆ

 

ಸಂದೀಪ್ ಈಶಾನ್ಯ  ಮೂಲತ‍ಃ ಮೈಸೂರಿನವರು .ಸುದ್ದಿ ವಾಹಿನಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ.
ಇವರ “ಮೆಟ್ರೋ ರೈಲಿನ ಹುಡುಗಿ” ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

 

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)