“ಇಲ್ಲಿ ಪ್ರತಿಯೊಂದು ಪಾತ್ರದ ನಡುವಳಿಕೆ ಹಠಾತ್ ಆಗಿ ಬಂದಿಲ್ಲ, ಸಹಜವಾಗಿ ಬೆಳೆಯುತ್ತಾ ಬಂದಿದೆ. ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವಾಗ ಗಂಡ ಆಕೆಯ ವ್ಯಾನಿಟಿ ಬ್ಯಾಗನ್ನು ಹಿಡಿದುಕೊಳ್ಳುವುದರಿಂದ ಹಿಡಿದು, ಪಕ್ಕದ ಬೆಡ್ ನ ಹುಡುಗಿಯ ಪ್ರೇಮ, ಪೇಂಟ್ ಮಾಡುವವನ ಸಿಡುಕು, ಜನಜಂಗುಳಿಯಲ್ಲಿ ಕೆಲಸ ಮಾಡುವ ನರ್ಸ್ ಸಿಟ್ಟು ಎಲ್ಲವೂ ಮುಖ್ಯ ಕತೆಗೆ ಪೂರಕವಾಗಿ ಬಂದಿದೆ. ‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ. ಅವುಗಳ ಉಪಸ್ಥಿತಿ ನಮಗೆ ಅರಿವಾಗುವುದೆ ಅವುಗಳ ಅನುಪಸ್ಥಿತಿಯಲ್ಲಿ.” ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸ್

 

ಬಳೆಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿಟ್ಟ ಹಾಗಿರುವ ಸುರಳಿಯಾಕಾರದ ಸ್ಪ್ರಿಂಗ್, ಒತ್ತಿ ಹಿಡಿದು ಬಿಟ್ಟರೆ ಹಾವಿನಂತೆ ಚಿಮ್ಮುತ್ತದೆ, ಕ್ಷಣಕ್ಕೊಂದು ರೂಪ ತಾಳುತ್ತದೆ, ಬೆರಗಾಗಿಸುತ್ತದೆ, ಭಯ ಹುಟ್ಟಿಸುತ್ತದೆ, ಆದರೆ ಹೆಣಿಗೆ ಬಿಟ್ಟುಕೊಳ್ಳುವುದಿಲ್ಲ…. ಈ ಚಿತ್ರ ಸಹ ಹಾಗೆಯೇ. ಎಷ್ಟು ಸಲ ರೂಪ ಬದಲಾಯಿಸಿದರೂ ಆ ಎಲ್ಲಾ ಸುರುಳಿಗಳೂ ಒಂದಕ್ಕೊಂದು ಹೇಗೆ ಹೆಣೆದುಕೊಂಡಿರುತ್ತವೆ ಎನ್ನುವುದರಲ್ಲಿ ನಿರ್ದೇಶಕನ ಕಲೆಗಾರಿಕೆ ಇದೆ. ಎಲ್ಲೂ ಅದು ಹೊರಳಿಕೊಳ್ಳುವುದಿಲ್ಲ, ಗಂಟಾಗುವುದಿಲ್ಲ, ಬಿಟ್ಟುಕೊಳ್ಳುವುದೂ ಇಲ್ಲ. ಆಸ್ಪತ್ರೆ ಎಂದರೆ ಆತಂಕ, ಹೆದರಿಕೆ, ಕಳೆದುಕೊಳ್ಳುವಿಕೆ, ಕೈಗಳಿಗೆ ಕೈಗಳ ಬಿಗಿ ಹಿಡಿತ, ಭರವಸೆ ಎಲ್ಲವೂ ಹೌದು. ಈ ಹಿನ್ನೆಲೆಯಲ್ಲಿ ನಡೆಯುವ ಇರಾನಿ ಚಿತ್ರ ಅಪೆಂಡಿಕ್ಸ್. ಒಬ್ಬ ಅಸಹಾಯಕತೆಯಿಂದ ಹೇಳುವ ಒಂದು ಸುಳ್ಳು ಒಂದೊಂದಾಗಿ ಸುತ್ತಲಿನವರ ಮುಖವಾಡಗಳನ್ನು ಕಳಚುತ್ತಾ ಹೋಗುತ್ತದೆ.

ಚಿತ್ರ ಶುರುವಾಗುವಾಗ ಲೈಲಾ ತನ್ನದೊಂದು ರಿಪೋರ್ಟ್ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿರುತ್ತಾಳೆ. ಅವಳ ಗಂಡ ಮೊಹ್ಸೆನ್ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ‘ರಿಪೋರ್ಟ್ ತಡವಾಗುತ್ತದೆ, ನಿನ್ನ ಗಂಡನ ಕೈಲಿ ಕಳಿಸುತ್ತೇವೆ’ ಎಂದಾಗ ಬಿಲ್ಕುಲ್ ನಿರಾಕರಿಸಿ ತಾನೇ ಕಾದು ತೆಗೆದುಕೊಂಡು ಹೋಗುತ್ತೇನೆ ಅನ್ನುತ್ತಾಳೆ. ಅದೇ ಸಮಯಕ್ಕೆ ಅವಳ ಹಳೆಯ ಗೆಳತಿ ಝರಿ ಮತ್ತು ಗಂಡ ರೆಝಾ ಬರುತ್ತಾರೆ. ಝರಿಯ ಆರೋಗ್ಯ ವಿಮೆ ಮುಗಿದಿರುತ್ತದೆ, ರೆಝಾ ಕೆಲಸ ಹೋಗಿ ಮೂರು ತಿಂಗಳಾಗಿರುತ್ತದೆ. ಇನ್ಶೂರೆನ್ಸ್ ನವೀಕರಣಕ್ಕೆ ಇವನಲ್ಲಿ ಹಣವಿಲ್ಲ. ಹಾಗಾಗಿ ವಿಧಿ ಇಲ್ಲದೆ ಲೈಲಾಳ ಇನ್ಶೂರೆನ್ಸ್ ದಾಖಲೆಯನ್ನು ಕಡವಾಗಿ ಪಡೆಯುತ್ತಾನೆ. ಅದಕ್ಕೆ ತನ್ನ ಹೆಂಡತಿಯ ಫೋಟೋ ಅಂಟಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಚಿತ್ರದ ಕಥೆ. ಝರಿಗೆ ಅಪೆಂಡಿಕ್ಸ್, ಸರ್ಜರಿ ಆಗಬೇಕು, ಲೈಲಾ ಹೆಸರಿನಲ್ಲೇ ಅದು ಆಗುತ್ತದೆ. ಈ ನಡುವೆ ಝರಿಯ ಫೋನ್ ಸದ್ದಾಗುತ್ತದೆ, ರೆಝಾ ಅದನ್ನು ಎತ್ತಿಕೊಳ್ಳುತ್ತಾನೆ. ಹೆಂಡತಿಗೆ ಆತಂಕ. ಲೈಲಾಳ ಬಳಿ ಹೇಗಾದರೂ ಆ ಫೋನ್ ವಾಪಸ್ ತೆಗೆದುಕೋ ಎನ್ನುತ್ತಾಳೆ. ಲೈಲಾ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂಥಾದ್ದು ಏನಿದೆ ಆ ಫೋನಿನಲ್ಲಿ?

ಸರ್ಜರಿಯ ನಂತರ ರೆಝಾ, ‘ಝರಿ’ ಹೇಗಿದ್ದಾಳೆ ಎಂದು ನರ್ಸ್ ಅನ್ನು ಕೇಳಿದ್ದರಿಂದ ಅವಳಿಗೆ ಅನುಮಾನ ಬರುತ್ತದೆ. ಆಸ್ಪತ್ರೆಯ ದಾಖಲೆಯ ಪ್ರಕಾರ ಸರ್ಜರಿ ಆಗಿರುವುದು ಲೈಲಾಗೆ. ಆಸ್ಪತ್ರೆಯ ತನಿಖಾಧಿಕಾರಿಯ ಬಳಿ ರೆಝಾ ಹೋಗಬೇಕಾಗುತ್ತದೆ. ಅವಳಲ್ಲಿ ಇನ್ನೊಂದು ಕತೆ. ಆ ಇನ್ಶೂರೆನ್ಸ್ ನಲ್ಲಿ ಮೊಹ್ಸೆನ್ ಹೆಸರಿದೆ. ಅವನು ಇವಳನ್ನು ಪ್ರೀತಿಸುತ್ತಿದ್ದವನು, ಬಿಟ್ಟು ಬೇರೆ ಮದುವೆಯಾದವನು. ಅವಳಿಗೆ ಆ ಸಿಟ್ಟಿನ್ನೂ ಉಳಿದಿದೆ. ಇದನ್ನು ಕೊಟ್ಟವನಿಗೆ ನಾನು ಮೇಲಧಿಕಾರಿಗಳಿಗೆ ರಿಪೋರ್ಟ್ ಮಾಡುತ್ತೇನೆ ಎಂದು ಹೇಳು ಎನ್ನುತ್ತಾಳೆ. ಆದರೆ ರೆಝಾನಿಗೆ ನೆನಪಿರುವ ಹಾಗೆ ಲೈಲಾಳ ಗಂಡನ ಹೆಸರು ಬೇರೆ. ಏನೆಂದು ಕೇಳಿದಾಗ, ಗಂಡ ಸತ್ತು ಎರಡು ವರ್ಷಗಳಾಗಿರುವುದಾಗಿಯೂ, ನಂತರ ತಾನು ಗಂಡನ ತಮ್ಮನನ್ನು ಮದುವೆ ಆಗಿದ್ದಾಗಿಯೂ, ಅವನೇ ಮೊಹ್ಸೆನ್ ಎಂದೂ ಲೈಲಾ ಹೇಳುತ್ತಾಳೆ. ಮೊಹ್ಸೆನ್ ನನ್ನು ಸಂಪರ್ಕಿಸಿ ಈ ತೊಡಕಿನಿಂದ ಬಿಡಿಸಿಕೊಳ್ಳಲು ಸಹಾಯ ಮಾಡಲು ಕೇಳುತ್ತಾರೆ. ರೆಝಾ ಬಳಿ ಇನ್ನೊಂದು ಉಪಾಯ ಇದೆ, ಝರಿ ಮೊಹ್ಸೆನ್ ಹೆಂಡತಿ ಲೈಲಾ ಎಂದುಬಿಡೋಣ ಎನ್ನುತ್ತಾನೆ. ಮೊದಲು ಮೊಹ್ಸೆನ್ ನಿರಾಕರಿಸಿದರೂ, ವಿಧಿ ಇಲ್ಲದೆ ಒಪ್ಪಬೇಕಾಗುತ್ತದೆ. ರೆಝಾ ರೋಗಿಯ ಅಣ್ಣ ಎನ್ನುತ್ತಾರೆ. ತನಿಖಾಧಿಕಾರಿಣಿ ಝರಿಗೆ ಪ್ರಜ್ಞೆ ಬಂದ ಮೇಲೆ ಅವಳನ್ನು ಮಾತನಾಡಿಸಿ ವರದಿ ಕೊಡುತ್ತೇನೆ ಎನ್ನುತ್ತಾಳೆ.

ಝರಿಗೆ ಅಪೆಂಡಿಕ್ಸ್, ಸರ್ಜರಿ ಆಗಬೇಕು, ಲೈಲಾ ಹೆಸರಿನಲ್ಲೇ ಅದು ಆಗುತ್ತದೆ. ಈ ನಡುವೆ ಝರಿಯ ಫೋನ್ ಸದ್ದಾಗುತ್ತದೆ, ರೆಝಾ ಅದನ್ನು ಎತ್ತಿಕೊಳ್ಳುತ್ತಾನೆ. ಹೆಂಡತಿಗೆ ಆತಂಕ. ಲೈಲಾಳ ಬಳಿ ಹೇಗಾದರೂ ಆ ಫೋನ್ ವಾಪಸ್ ತೆಗೆದುಕೋ ಎನ್ನುತ್ತಾಳೆ. ಲೈಲಾ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂಥಾದ್ದು ಏನಿದೆ ಆ ಫೋನಿನಲ್ಲಿ?

ಝರಿಗೆ ಪ್ರಜ್ಞೆ ಬಂದಿದೆ. ರೆಝಾ ಅವಳಿಗೆ ಪರಿಸ್ಥಿತಿ ವಿವರಿಸುತ್ತಾನೆ. ಅವಳಿಗೆ ಫೋನಿನ ಚಿಂತೆ, ಸರ್ಜರಿಯ ನೋವು, ಈಗ ಈ ಹೊಸ ತಲೆನೋವು. ತನಿಖಾಧಿಕಾರಿಣಿಯ ಎದುರಿಗೆ ಹೇಗೋ ಸಂಭಾಳಿಸುತ್ತಾರೆ. ಅಷ್ಟರಲ್ಲಿ ಝರಿಯನ್ನು ಲೈಲಾ ಫೋನ್ ವಿಷಯ ಕೇಳುತ್ತಾಳೆ. ಅವಳು ನಿರುದ್ಯೋಗಿ ಗಂಡನ ಕೆಲಸದ ಬಗ್ಗೆ ಮಾತನಾಡಲು ಅವನ ಮೇಲಧಿಕಾರಿಗೆ ಮೆಸೇಜ್ ಮಾಡಿರುತ್ತಾಳೆ. ಆಗಿಂದ ಅವನು ಇವಳ ಬೆನ್ನುಬಿದ್ದು ಕಾಡುತ್ತಿರುತ್ತಾನೆ. ಆ ಮೆಸೇಜ್ ಗಂಡ ನೋಡಿದರೆ ಏನು ಗತಿ ಎಂದು ಝರಿಯ ಆತಂಕ. ಈ ನಡುವೆ ಅವಳ ಫೋನ್ ರಿಂಗ್ ಆಗುತ್ತಲೇ ಇದೆ, ಗಂಡ ಫೋನ್ ತೆಗೆದರೆ ಆಚಿನವರು ಮಾತನಾಡುತ್ತಿಲ್ಲ. ಮಾತನಾಡುವಾಗ ಲೈಲಾ ಝರಿಯನ್ನು ಸಮಾಧಾನ ಮಾಡಲು ಹೇಳಿದ ಮಾತೊಂದು ರೆಝಾನನ್ನು ಕೆರಳಿಸಿ, ‘ಹೌದು ನನಗೆ ಮಗು ಆಗಲ್ಲ, ನನ್ನಲ್ಲಿ ಆ ಸಾಮರ್ಥ್ಯ ಇಲ್ಲ’ ಎಂದು ಸಿಡುಕುತ್ತಾನೆ. ಅಷ್ಟರಲ್ಲಿ ಲೈಲಾಗೆ ಯಾವುದೋ ಫೋನ್ ಬರುತ್ತದೆ. ಮೊಹ್ಸೆನ್ ನೋಡುತ್ತಾನೆ, ಫೋನ್ ನ ವಾಲ್ ಪೇಪರ್ ಲೈಲಾಳ ಮೊದಲ ಗಂಡನದ್ದು, ಇವನ ಅಣ್ಣನದ್ದು. ಅವನದ್ದು ಮೂಕಸಂಕಟ. ಅವನ ಸಂಕಟವನ್ನು ಸಿಟ್ಟಿನಿಂದ ಹೊರಗೂ ಹಾಕುವಂತಿಲ್ಲ.

ಈ ನಡುವೆ ಆಸ್ಪತ್ರೆಯ ಮುಖ್ಯಸ್ಥ ಮೊಹ್ಸೆನ್ ‘ಹೆಂಡತಿ’ಯನ್ನು ನೋಡಲು ಬರುತ್ತಾನೆ. ಅದೊಂದು ವಿಪರೀತವಾಗಿ, ತಾನು ಕೆಲಸ ಮಾಡುವ ಸ್ಥಳದಲ್ಲಿ ಮರ್ಯಾದೆ ಹೋಯಿತು ಎಂದು ಮೊಹ್ಸೆನ್ ಸಿಡುಕುತ್ತಾನೆ. ಝರಿಗೆ ಆಪರೇಷನ್ ಮಾಡಿದ್ದ ವೈದ್ಯರು ಅವನನ್ನು ಕರೆದು, ಆಕೆಗೆ ಅಬಾರ್ಷನ್ ಆಗಿದ್ದಕ್ಕೆ ಏನಾದರೂ ಔಷದಿ ತೆಗೆದುಕೊಳ್ಳುತ್ತಿದ್ದಳಾ ಎಂದು ಕೇಳುತ್ತಾರೆ. ಇವನು ಗೊತ್ತಿಲ್ಲ ಎಂದು ರೆಝಾನಲ್ಲಿ ಕೇಳುತ್ತಾನೆ. ರೆಝಾ ಕಾಲ ಕೆಳಗಿನ ನೆಲ ಕುಸಿಯುತ್ತದೆ. ಹಾಗಾದರೆ ಹೆಂಡತಿಗೆ ಈಗ ಬರುತ್ತಿರುವ ಕರೆಗಳು….? ಸಿಟ್ಟು ತಡೆಯಲಾರದೆ ದಿಂಬಿನಿಂದ ಝರಿಯ ಮುಖ ಒತ್ತಿ ಉಸಿರುಗಟ್ಟಿಸುತ್ತಾನೆ, ಅವಳು ಕೋಮಾಗೆ ಹೋಗುತ್ತಾಳೆ.

‘ಇಲ್ಲಿ ನನ್ನ ಗೌರವ ಏನಾಗುತ್ತದೆ ಎನ್ನುವುದಕ್ಕಿಂತ ದೊಡ್ಡ ಸಮಸ್ಯೆ, ಆಕೆ ಸತ್ತರೆ ನಿನ್ನ ಹೆಸರಿನಲ್ಲಿ ಡೆತ್ ಸರ್ಟಿಫಿಕೇಟ್ ಆಗುತ್ತದೆ, ನಿನ್ನ ದಾಖಲೆಗಳೆಲ್ಲವನ್ನೂ ಅಳಿಸಲಾಗುತ್ತದೆ’ ಎಂದು ಮೊಹ್ಸೆನ್ ಲೈಲಾಳಲ್ಲಿ ಆತಂಕ ಹಂಚಿಕೊಳ್ಳುತ್ತಾನೆ. ಡಾಕ್ಟರ್ ಲೈಲಾಳ ಬಳಿಯೂ ರೋಗಿಯ ದಾಖಲೆಯ ಪ್ರಕಾರ ಆಕೆಗೆ ಅಬಾರ್ಷನ್ ಆಗಿರುವುದಾಗಿಯೂ, ಆ ಮಾತ್ರೆಗಳಿಂದ ಏನಾದರೂ ಪರಿಣಾಮ ಆಗಿರಬೇಕೆಂದೂ ಹೇಳುತ್ತಾರೆ. ಅಷ್ಟರಲ್ಲಿ ಪೋಲೀಸರು ರೆಝಾನನ್ನು ಹಿಡಿದಿದ್ದಾರೆ. ರೆಝಾನ ಸಿಟ್ಟಿನ ಕಾರಣ ಈಗ ಲೈಲಾಳಿಗೆ ಅರಿವಾಗುತ್ತದೆ. ಲೈಲಾ ಕಂಗಾಲಾಗುತ್ತಾಳೆ. ಆ ಅಬಾರ್ಷನ್ ಅವಳು ಮಾಡಿಸಿಕೊಂಡಿರುತ್ತಾಳೆ. ಮೊಹ್ಸೇನ್ ನನ್ನು ಪತಿ ಎಂದು ಅವಳಿಗೆ ಇನ್ನೂ ಒಪ್ಪಿಕೊಳ್ಳಲಾಗಿರುವುದಿಲ್ಲ. ಒದ್ದಾಡಿ, ಕಡೆಗೆ ತಡೆಯಲಾರದೆ ಗಂಡನ ಬಳಿ ಆ ಅಬಾರ್ಶನ್ ತಾನು ಮಾಡಿಸಿಕೊಂಡಿದ್ದು ಎಂದು ಹೇಳಿಬಿಡುತ್ತಾಳೆ. ಇದುವರೆವಿಗೂ ಹೇಗೋ ಎಲ್ಲವನ್ನೂ ನಿಭಾಯಿಸುತ್ತಾ ಬಂದಿದ್ದ ಮೊಹ್ಸಿನ್ ನಮ್ಮೆದುರಲ್ಲೇ ಪುಡಿಪುಡಿಯಾಗಿಬಿಡುತ್ತಾನೆ. ಕೂಗಾಡುವುದಿಲ್ಲ, ಸಿಟ್ಟಾಗುವುದಿಲ್ಲ, ‘ಹಾಗಾದರೆ ನೀನು ನನ್ನನ್ನು ಎಂದೂ ಪ್ರೀತಿಸಲೇ ಇಲ್ಲ, ನನ್ನ ಮಗುವನ್ನು ಏಕೆ ಕೊಂದೆ ಲೈಲಾ’ ಎಂದು ಕೇಳುತ್ತಾನೆ. ಅವನ ಸಂಕಟದ ಆಳ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.

ಮಾತನಾಡುವಾಗ ಲೈಲಾ ಝರಿಯನ್ನು ಸಮಾಧಾನ ಮಾಡಲು ಹೇಳಿದ ಮಾತೊಂದು ರೆಝಾನನ್ನು ಕೆರಳಿಸಿ, ‘ಹೌದು ನನಗೆ ಮಗು ಆಗಲ್ಲ, ನನ್ನಲ್ಲಿ ಆ ಸಾಮರ್ಥ್ಯ ಇಲ್ಲ’ ಎಂದು ಸಿಡುಕುತ್ತಾನೆ. ಅಷ್ಟರಲ್ಲಿ ಲೈಲಾಗೆ ಯಾವುದೋ ಫೋನ್ ಬರುತ್ತದೆ. ಮೊಹ್ಸೆನ್ ನೋಡುತ್ತಾನೆ, ಫೋನ್ ನ ವಾಲ್ ಪೇಪರ್ ಲೈಲಾಳ ಮೊದಲ ಗಂಡನದ್ದು, ಇವನ ಅಣ್ಣನದ್ದು. ಅವನದ್ದು ಮೂಕಸಂಕಟ. ಅವನ ಸಂಕಟವನ್ನು ಸಿಟ್ಟಿನಿಂದ ಹೊರಗೂ ಹಾಕುವಂತಿಲ್ಲ.

ಕಡೆಗೆ ಮೊಹ್ಸೆನ್ ಆಸ್ಪತ್ರೆ ಅಧಿಕಾರಿಗಳಿಗೆ ಸತ್ಯ ಹೇಳಿಬಿಡುತ್ತಾನೆ. ಆದರೆ ಅಷ್ಟರಲ್ಲಿ ಅದು ಸಮಸ್ಯೆಯೇ ಅಲ್ಲ ಎನ್ನುವಷ್ಟು ಸಮಸ್ಯೆಗಳನ್ನು ಬದುಕು ಎದುರಿಗಿಟ್ಟಿರುತ್ತದೆ. ಲೈಲಾಗೆ ಮೊಹ್ಸಿನ್ ಗೆ ತಾನು ಮಾಡುತ್ತಿರುವ ಅನ್ಯಾಯದ ಅರಿವಾಗುತ್ತದೆ. ಇಷ್ಟೆಲ್ಲಾ ಆದರೂ ತನ್ನ ಮೇಲೆ ಕೂಗಾಡದೆ, ಜೊತೆಯಲ್ಲಿ ನಿಂತ ಅವನ ಒಳ್ಳೆಯತನಕ್ಕೆ ಅವಳು ಸೋಲುತ್ತಾಳೆ. ತನ್ನ ಮೊಬೈಲ್ ಗೋಡೆಯ ಮೇಲಿನಿಂದ ಮೊದಲ ಗಂಡನ ಫೋಟೋ ತೆಗೆದು, ಮೊಹ್ಸೆನ್ ಫೋಟೋ ಹಾಕಿಕೊಳ್ಳುತ್ತಾಳೆ.

ಇಲ್ಲಿ ಪ್ರತಿಯೊಂದು ಪಾತ್ರದ ನಡುವಳಿಕೆ ಹಠಾತ್ ಆಗಿ ಬಂದಿಲ್ಲ, ಸಹಜವಾಗಿ ಬೆಳೆಯುತ್ತಾ ಬಂದಿದೆ. ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವಾಗ ಗಂಡ ಆಕೆಯ ವ್ಯಾನಿಟಿ ಬ್ಯಾಗನ್ನು ಹಿಡಿದುಕೊಳ್ಳುವುದರಿಂದ ಹಿಡಿದು, ಪಕ್ಕದ ಬೆಡ್ ನ ಹುಡುಗಿಯ ಪ್ರೇಮ, ಪೇಂಟ್ ಮಾಡುವವನ ಸಿಡುಕು, ಜನಜಂಗುಳಿಯಲ್ಲಿ ಕೆಲಸ ಮಾಡುವ ನರ್ಸ್ ಸಿಟ್ಟು ಎಲ್ಲವೂ ಮುಖ್ಯ ಕತೆಗೆ ಪೂರಕವಾಗಿ ಬಂದಿದೆ. ನಿರ್ದೇಶಕ ಹುಸೆನ್ ನಮಾಝಿಯದೇ ಚಿತ್ರಕತೆ.

ಬದುಕಿಗೆ ಎಷ್ಟು ಪದರಗಳು, ಅದಕ್ಕೆಷ್ಟು ಆಯಾಮಗಳು. ಝರಿಯ ಆತಂಕ, ರೆಝಾನ ಹತಾಶೆ, ಲೈಲಾಳ ತಳ್ಳಂಕ, ಮೊಹ್ಸೆನ್ ನ ನಿರಾಶೆ ಯಾವುದು ದೊಡ್ಡದು, ಯಾವುದು ಚಿಕ್ಕದು? ‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ. ಅವುಗಳ ಉಪಸ್ಥಿತಿ ನಮಗೆ ಅರಿವಾಗುವುದೆ ಅವುಗಳ ಅನುಪಸ್ಥಿತಿಯಲ್ಲಿ. ಕೆಲವನ್ನು ಕಳೆದುಕೊಂಡಾಗಲೇ ಅವು ನಮ್ಮ ಬಳಿ ಇತ್ತು ಎನ್ನುವುದರ ಅರಿವಾಗುವುದು. ಮೊಹ್ಸೆನ್ ದೂರಾಗಬಹುದು ಎನ್ನುವ ಕ್ಷಣ ಬಂದಾಗ ಲೈಲಾಗೆ ಅವನು ತನ್ನ ಬಾಳಿಗೆ ಎಷ್ಟು ಮುಖ್ಯವಾಗಿದ್ದ ಎನ್ನುವುದರ ಅರಿವಾಗುತ್ತದೆ. ಅಪೆಂಡಿಕ್ಸ್ ನಮಗೆ ಬೇಕಿಲ್ಲ ಎಂದರೆ ಬಹುಶಃ ಅದರ ಅಗತ್ಯದ ಅರಿವು ನಮಗೆ ಈಗ ಗೊತ್ತಿಲ್ಲ ಎಂದು ಮಾತ್ರ..

ಕಣ್ಣೆದುರಿನ ಮುಖ ಕೊಡುವ ಸಂತಸ ದೊಡ್ಡದೋ ಅಥವಾ ದೂರಾದಾಗ ಕಂಡ ಬೆನ್ನು ಕೊಡುವ ನೋವು ದೊಡ್ಡದೋ? ಒಂದಕ್ಕಿಂತ ಒಂದು ದೊಡ್ಡ ಸಮಸ್ಯೆ. ಆದರೆ ಕಡೆಗೆ ಮುಖ್ಯವಾಗುವುದು ನಮ್ಮ ಬದುಕಿನಲ್ಲಿ ಏನೋ ಆಗಿರುವವರ ಬದುಕಿನಲ್ಲಿ ನಾವು ಏನಾಗಿದ್ದೇವೆ ಎನ್ನುವುದು. ಅಲ್ಲಿ ಹೊಡೆತ ತಿಂದರೆ ಬೆನ್ನಿಗೇರುವ ಸೋಲು ಸುಲಭಕ್ಕೆ ಇಳಿಯುವುದಿಲ್ಲ. ಚಿತ್ರ ನೋಡಿದ ಕೂಡಲೇ ಆವರಿಸಿದ ಸ್ಥಬ್ಧತೆಯನ್ನು ಸುಲಭಕ್ಕೆ ಕೊಡವಿಕೊಳ್ಳಲಾರೆ.


(ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ಬರಹದ ವಿಸ್ತೃತ ರೂಪ)

ಸಂಧ್ಯಾ ಟಾಕೀಸಿನಲ್ಲಿ ಚಿಲಿಯ ಚಿತ್ರ ‘ಫೆಂಟಾಸ್ಟಿಕ್ ವುಮನ್’ ಓದಲು ಇಲ್ಲಿ ಕ್ಲಿಕ್ ಮಾಡಿ