ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ. ಯಾವುದೇ ಸಂಬಂಧದಲ್ಲೂ ಬಿರುಕು ಮೂಡಿದರೆ ಕಂದಕವಾಗುವವರೆಗಿನ ಕಥನ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

“ಕೆಲವು ಪದಾರ್ಥಗಳಿಗೆ, ಔಷಧಿಗಳಿಗೆ ಇದ್ದಂತೆ ಸಂಬಂಧಗಳಿಗೂ ಇರುವ ಕೊನೆಯ ದಿನಾಂಕ ತಿಳಿದಿರುತ್ತಿದ್ದರೆ, ಕಡೇಪಕ್ಷ ಈ ಸುಂದರ ಬಂಧವೂ ಒಮ್ಮೆ ಕೊನೆಯಾಗುವುದೆಂಬ ವಾಸ್ತವದ ಅರಿವು ಇದ್ದುಬಿಟ್ಟರೆ ಇಷ್ಟೆಲ್ಲ ವಿಷಾದದ ಅಧ್ಯಾಯಗಳೇ ಇರುತ್ತಿರಲಿಲ್ಲವೇನೋ… ಪ್ರತಿ ಏಟು ನಮ್ಮನ್ನು ಗಟ್ಟಿಗೊಳಿಸಿಯೇ ಹೋಗುತ್ತೆ ಎನ್ನುವಂತಿಲ್ಲ ನೋಡು. ಕೆಲವೊಮ್ಮೆ ಏಟಿನ ಮೇಲೆ ಏಟು ಬಿದ್ದಾಗ ಮೃದುವಾಗುತ್ತಾ ಸಾಗುತ್ತೇವೆ.” ಹಾಗೆಂದು ಅವಳು ಮಾತು ಮುಗಿಸಿದಾಗ, ಮುಗಿದಿದ್ದು ಮಾತು ಮಾತ್ರ.

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ. ಯಾವುದೇ ಸಂಬಂಧದಲ್ಲೂ ಬಿರುಕು ಮೂಡಿದರೆ ಕಂದಕವಾಗುವವರೆಗಿನ ಕಥನ.

“ನಾನು ಮದುವೆಯಾಗಿ ಬಂದಾಗ ಅವಳು ಮೂರು ವರ್ಷದ ಹುಡುಗಿ. ಬೆಳದಿಂಗಳಿನಂತಹ ನಗು, ಚಿನಕುರುಳಿ ಮಾತು, ಕಣ್ಣಲ್ಲಿ ನೀಹಾರಿಕೆ ಪ್ರತಿಫಲಿಸುತ್ತಿದ್ದ ಕಿನ್ನರಿ. ನೋಡಿದಾಕ್ಷಣ ಮುದ್ದುಕ್ಕಿ ಎದೆಗವಚಿಕೊಂಡು ಬೆಳೆಸಿದೆ. ಅವಳ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಆಗಷ್ಟೇ ಮದುವೆಯಾಗಿ ತುಂಬು ಕುಟುಂಬದ ಸೊಸೆಯಾಗಿ ಬಂದ ನನಗೆ ದೊಡ್ಡವರ ಪ್ರಪಂಚಕ್ಕಿಂತ, ಪುಟ್ಟ ಹುಡುಗಿಯೊಂದಿಗೆ ಕಾಲಕಳೆಯುವುದು ಸುಲಭವಾಗಿ ತೋರಿತ್ತು. ಮದುವೆ, ಬಸುರಿ, ಬಾಣಂತಿ ಅಂತ ವರ್ಷಗಳು ಕಳೆದುಹೋಯಿತು. ನನ್ನ ಇಬ್ಬರು ಗಂಡು ಮಕ್ಕಳಿಗಿಂತ, ಕುತ್ತಿಗೆ ತಬ್ಬಿ ಮುದ್ದುಗರೆಯುತ್ತಾ ಬೆಳೆದ ಅವಳ ಮೇಲೆ ವ್ಯಾಮೋಹ. ನನ್ನ ಮಕ್ಕಳಿಗಿಂತ ಒಂದು ಕೈ ಮೇಲಾಗಿ ಹಚ್ಚಿಕೊಂಡಿದ್ದೆ. ಪ್ರೀತಿ, ವಿಶ್ವಾಸವನ್ನು ಆಡಿ ತೋರದ ಗಂಡು ಪ್ರಪಂಚಕ್ಕಿಂತ, ನಗು ಅಳು ಉಲ್ಲಾಸದಲ್ಲಿ ಮುಕ್ತವಾಗಿ ಬಯಲಾಗುವ ಮಗಳು ಪ್ರಿಯವಾಗಿದ್ದು ಆಶ್ಚರ್ಯವೇನಲ್ಲ. ಆದರೆ ಕೂಡು ಕುಟುಂಬ ಒಡೆದಾಗ, ಇಪ್ಪತ್ತು ವರ್ಷದ ಬಂಧವನ್ನು ಏನೇನೂ ಅಲ್ಲವೆಂಬಂತೆ ಅವಳು ತೊರೆದು ಹೋದಳು. ಮದುವೆಯಾಯಿತಂತೆ. ಒಂದು ಕರೆಯೂ ಇಲ್ಲ. ಇಷ್ಟು ವರ್ಷ ನನ್ನ ಮಕ್ಕಳಿಗೆ ಕೊಡಬಹುದಾದ ಪ್ರೀತಿಯನ್ನು ಅಲ್ಲಿ ಪೋಲು ಮಾಡಿ, ದ್ರೋಹ ಮಾಡಿದೆನಾ? ಅವತ್ತಿಗೆ ಅದು ಸರಿ. ಇವತ್ತಿಗೆ ಇದೇ ಸತ್ಯ ಎಂದು ಒಪ್ಪಿಕೊಳ್ಳುವುದು ಅಷ್ಟು ಸುಲಭವಿದೆಯಾ? ಆಯಾ ಹೊತ್ತಿನ ಪ್ರೀತಿ, ವಿಶ್ವಾಸ, ಆತ್ಮೀಯತೆಗಳು ಪರಸ್ಪರ ವಿನಿಮಯವಾದ ಮೇಲೆ, ಮುಂದೆಯೂ ಅವರು ಸ್ಮರಿಸಲಿ ಎಂದು ಅಪೇಕ್ಷಿಸುವುದೇ ತಪ್ಪಲ್ಲವಾ? ಹೀಗೆ ವಿರುದ್ಧ ದಿಕ್ಕಿನ ಆಲೋಚನೆಗಳು ಹೈರಾಣಾಗಿಸುತ್ತಿವೆ. ಜೀವನದಲ್ಲಿ ಇರುವುದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದನ್ನು ಕಲಿಯುವುದೇ ದೊಡ್ಡ ಸಾಹಸ ಕಣೆ” ಅವಳ ಕಣ್ಣಲ್ಲಿ ನೀರೊಡೆದಿತ್ತು. ಗಂಟಲು ಭಾರ. ಆದರೂ ಆಡಿ ಮುಗಿಸಿದರೆ ನಿರಾಳವಾಗಬಹುದೆಂಬ ಆಸೆಯಲ್ಲಿ ಗೊತ್ತಿರುವ ಕಥೆಯನ್ನೇ ಹೊಸ ವಿವರಗಳೊಂದಿಗೆ ಹೊಂದಿಸಿ ಹೇಳುತ್ತಿದ್ದಳು. ಇಪ್ಪತ್ತು ವರ್ಷದ ನೆನಪುಗಳ ಅಲೆಗೆ ವಿರುದ್ಧವಾಗಿ ಈಜಿ ಗೆಲ್ಲುವುದು ನಿಜವೇ? ಅಸಲಿಗೆ ಈ ಸನ್ನಿವೇಶದಲ್ಲಿ ಸೋಲು-ಗೆಲುವಿನ ನಿಖರತೆ ಎಲ್ಲಿದೆ?

“ನಾನು ಮರೆತಿದ್ದೇನೆ. ಆ ದಿನಗಳ ಸಿಹಿನೆನಪನ್ನು ಮಾತ್ರ ಜೊತೆಗಿರಿಸಿಕೊಂಡು, ಯಾವುದೇ ಕಹಿಯುಳಿಸಿಕೊಳ್ಳದೆ ನಿರ್ಮಲವಾಗಿದ್ದೇನೆ ಅಂದುಕೊಂಡಿದ್ದೆ. ಆದರೆ ಈ ಕಥೆ ಓದುವಾಗ, ಹೃದಯದ ಮೇಲೆ ಬಂಡೆಗಲ್ಲು ಎಳೆದಂತಿತ್ತು. ಓದಲು ಎಷ್ಟು ಲವಲವಿಕೆಯ, ತಮಾಷೆಯ ಕಥೆ. ಆದರೆ ಇದಕ್ಕೆ ಹತ್ತುಪಟ್ಟು ಚೆಂದವಿದ್ದ ನಮ್ಮ ಸಂಬಂಧದ ನೆನಪು ಕಣ್ಣೆದುರಿಗೆ ಬರುತ್ತಲೇ ಇತ್ತು. ಓದಿ ಮುಗಿಸಿದ್ದೇ ಸಾಹಸವೆನನ್ನಿಸಿತು. ದಯವಿಟ್ಟು ಹಿನ್ನಲೆ ಸಂಗೀತದಿಂದಲೋ, ಮತ್ತೇನಾದರೂ ತಾಂತ್ರಿಕ ಸಹಾಯದಿಂದಲೋ ನನ್ನ ಧ್ವನಿಯಲ್ಲಿ ಸುಳಿದಿರಬಹುದಾದ ವಿಷಾದದ ಛಾಯೆ ಗುರುತು ಸಿಗದಂತೆ ಮಾಡಿ. ನಮಸ್ಕಾರ.” ಎಂದು ಧ್ವನಿಕಲಾವಿದರೊಬ್ಬರು ಸಂದೇಶ ಕಳುಹಿಸಿದ್ದರು. ಮುಗಿಯಿತು ಎಂದುಕೊಂಡ ಅಧ್ಯಾಯವೊಂದು ಹೊಸ ಪಾತ್ರ, ಸನ್ನಿವೇಶದೊಂದಿಗೆ ಮುಂದುವರೆಯುವ ರೀತಿಯೇ ಸೋಜಿಗ.

ಗೇಣು ಬಿಟ್ಟರೆ, ಮಾರು ಬಿಡುವ ಜನ ನಾವು ಎಂದು ಹೊರಗೆ ಖಡಕ್ ಮುಖವಾಡ ಧರಿಸಿದವರೇ ಇರಲಿ. ನಾನು ಇಷ್ಟಪಟ್ಟವರೆಲ್ಲ ದೂರವಾದರೆಂದು ಭೋರೆಂದು ಅಳುವವರೇ ಇರಲಿ. ಹೃದಯವಿರುವ ಎಲ್ಲರಿಗೂ ಈ ಅಕಾಲ ವಿದಾಯಗಳು ಕೊಡುವ ಪೆಟ್ಟು ಬಲವಾದದ್ದು. ಇಂತಹ ಪೆಟ್ಟುಗಳೆಷ್ಟು ಬಿದ್ದರೂ, ಮತ್ತೆ ಶುದ್ಧ ಮನಸ್ಸಿನಿಂದ ಪ್ರೀತಿಸುವ, ಹಚ್ಚಿಕೊಳ್ಳುವ, ಮಿಡಿಯುವ ಮನಸ್ಸು ನಮ್ಮದಾಗಲಿ. ಅಷ್ಟಕ್ಕೂ ಪ್ರೀತಿಯೆಂಬ ಮಾಯೆಗೆ ಏನೆಲ್ಲವನ್ನೂ ಎದುರಿಸುವ ತಾಕತ್ತಿದೆ. ಈ ಜಗತ್ತನ್ನು ಸುಂದರವಾಗಿ ತೋರುವ ಪ್ರೀತಿಯನ್ನೇ ಮರೆತ ಬರಡು ಬಾಳಿಗಿಂತ, ಹಚ್ಚಿಕೊಂಡು ಹಂಚಿಕೊಂಡು ಬದುಕುವುದು ಚೆಂದವಲ್ಲವೆ? ಓಹ್. ಇದು ಹೃದಯದ ಮಾತು. ಬುದ್ಧಿವಂತಿಕೆಗಿಲ್ಲಿ ಕೆಲಸವಿಲ್ಲ.