ಹೊಸದಾರಿ…

ಒಂದು ಅನಿರೀಕ್ಷಿತ ತಿರುವಿನಲ್ಲಿ
ಮತ್ತೆ ಭೇಟಿಯಾದೆವು..,
ಬದಲಾದ ನಮ್ಮ ಚಹರೆಗಳ
ದಿಟ್ಟಿಸಿ ನೋಡಿಕೊಂಡೆವು..,
ತುಸು ಸಾವರಿಸಿಕೊಂಡು
ಹತ್ತಿರ ಬಂದೆವು..,
ಉಸಿರು ಕಟ್ಟಿಸುವಷ್ಟು
ಮಾತುಗಳಿದ್ದರೂ
ಮಾತಾಡದೇ ಕಣ್ಣ ಬೆರೆಸಿ
ಸುಮ್ಮನೆ ನಿಂತೆವು..,
ನಡೆದು ಬಂದ ಹಾದಿಯ
ಹಿಂದೆ ತಿರುಗಿ ನೋಡಿಕೊಂಡೆವು..,
ನಮ್ಮದೇ ಸಣ್ಣತನಗಳ ಗಾಯಗಳು
ಗುರುತು ಬಿಟ್ಟುಹೋದಲ್ಲೆಲ್ಲಾ
ಕುಬ್ಜರಂತೆ ಹೆಜ್ಜೆ ಇಟ್ಟೆವು..,
ಕ್ಷುಲ್ಲಕತೆಯಲಿ ಕಳೆದುಕೊಂಡ
ಭಾವದ ಅವಶೇಷಗಳ
ನಡುಗುವ ಕೈಗಳಿಂದ
ಸ್ಪರ್ಶಿಸಿದೆವು..,
ಇನ್ನೂ ಅಲ್ಲಿ ನಿಲ್ಲಲಾಗಲಿಲ್ಲ
ಹೊರಟೇ ಬಿಟ್ಟೆವು
ಪರಸ್ಪರ ಬೆನ್ನುಹಾಕಿ..,
ಆ ಹಾದಿಯಲ್ಲಿ
ಒಂದೊಂದೇ ಹೆಜ್ಜೆ ಇಟ್ಟಂತೆಲ್ಲಾ
ಹೊಸ ಬೆಳಕು ಮೂಡುತಿತ್ತು,
ಕಂದಕಗಳೆಲ್ಲವ ದಾಟುವ
ಜಾಗರೂಕತೆ ಒಲಿದಿತ್ತು..,
ಏರಿಳಿತಗಳಲ್ಲಿ
ಸಮತೋಲನ ಸಿಕ್ಕಿತ್ತು,
ಕಪಟಗಳ ಕಳಚಿದ
ಹಗುರ ಭಾವ
ತುಂಬಿಕೊಂಡಿತ್ತು..,
ಈಗ ಸ್ಪಷ್ಟವಾಗುತಿದೆ
ವಿರುದ್ಧ ದಿಕ್ಕಿಗೆ ಚಲಿಸಿದರೂ
ನಾವು ಅಂತರಂಗದಲ್ಲಿ
ಜೊತೆ ಜೊತೆಗೇ ಹೆಜ್ಜೆ ಹಾಕುತ್ತಿದ್ದೆವು….

ಆಗಬೇಕು…

ಆಗಬೇಕು..,
ಒಳಗೊಳಗೇ ಕಟ್ಟಿಕೊಂಡ
ಕೀವು ಕಳಚಿ
ಸೋರಬೇಕು,
ಗೂಡು ಖಾಲಿಯಾಗಿ,
ಗೋಡೆ ಕರಗಿಹೋಗಿ,
ಕುರುಹು ಮರೆಯಾಗಿ,
ಕೆಂಡ ಆರಿದ ಒಲೆಯ
ಹಗುರ ಬೂದಿಯಾಗಬೇಕು,
ಗುರುತು ಸಿಗದ ಹಾಗೆ
ತೇಲಬೇಕು…..
ಆಗಬೇಕು..,
ಮಾತಿನ ಹೊಳಪು
ಮಾಸಬೇಕು,
ದನಿಯ ಗಡಸು
ಮೆದುವಾಗಬೇಕು,
ಶಬ್ಧಗಳ ಪರಿದಿ ದಾಟಿ
ಕತ್ತಲ ಕೋಣೆಯ
ಮೌನವಾಗಬೇಕು,
ಕಿಂಡಿಯೊಳು ತೂರುವ
ಬೆಳಕ ಬಿಂದುವಾಗಬೇಕು…
ಆಗಬೇಕು..,
ಬಯಲಿಗೆ ಸುರಿದ
ಬೆಳದಿಂಗಳೋ,
ಬಚ್ಚಲೊಳಗಿನ ಬೆತ್ತಲೆಯೋ,
ಕೆಚ್ಚಲೊಳಗಿನ ಹಾಲೋ,
ದುಗುಡ ತುಂಬಿದ ಮೋಡವೋ,
ಹದವಾಗಿ ಬಿದ್ದ ಮಳೆಯೋ,
ಮಣ್ಣ ಪರಿಮಳವೋ,
ಆಗಬೇಕು,
ಹಿಡಿಯಲಾರದ….,
ತಡೆಯಲಾರದ….,
ಆಳದಲಿ
ಪುಟ್ಟ ಮೀನಾಗಬೇಕು….

ಸಚಿನ್  ಅಂಕೋಲಾದವರು.
ಉಡುಪಿಯ ವಾಸಿಯಾಗಿರುವ ಸಚಿನ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್..
“ನಾನೂ ಹೆಣ್ಣಾಗಬೇಕಿತ್ತು” ಇವರ ಪ್ರಕಟಿತ ಕವನ ಸಂಕಲನ..

 

(ಕಲೆ:ರೂಪಶ್ರೀ ಕಲ್ಲಿಗನೂರ್)