ಕಥೆ ಬರೆಯುವ. ಲಲಿತ ಪ್ರಬಂಧಗಳನ್ನು ಲೀಲಾಜಾಲವಾಗಿ ಬರೆಯುವ ಅನಿತಾ ನಮ್ಮ ಕನ್ನಡ ಸಾಹಿತ್ಯ ಜಗತ್ತಿಗೆ ದಕ್ಕಿದ ಸೊಗಸಾದ ಹಾಸ್ಯಪ್ರಜ್ಞೆ. ಅದು ಹಾಸ್ಯದ ಹೆಸರಿನ ಅಪಹಾಸ್ಯವಲ್ಲ. ಅದೊಂದು ದೃಷ್ಟಿಕೋನ. ಒಮ್ಮೊಮ್ಮೆ ಮನಸ್ಸು ಬಂದಾಗ ಕವಿತೆಯನ್ನೂ ಬರೆದು ಹುಬ್ಬು ಹಾರಿಸುವ ಅನಿತಾ ಇವೆಲ್ಲವುಗಳನ್ನೂ ಮೀರುವಂತೆ ಒಬ್ಬ ಅದ್ಭುತ ಪ್ರಕೃತಿ ಶಾಸ್ತ್ರಜ್ಞೆ . ಅವರು ನಿಂತಲ್ಲೇ ಧ್ಯಾನಸ್ಥರಾಗುವಷ್ಟು ಮೈಮರೆಯುತ್ತಾರೆ ಪ್ರಕೃತಿಯಲ್ಲಿ. ಮೈಮರೆಯುವುದೆಂದರೆ ಕ್ಷಣ ಹೊತ್ತು ನಾವು ಜಲಪಾತದ ಮುಂದೆ ನಿಂತಂತೆ. ಆಗುಂಬೆಯ ಸೂರ್ಯಾಸ್ತ ನೋಡಿದಂತೆ ಅಲ್ಲ.
ಈ ಭಾನುವಾರ ಬಿಡುಗಡೆಯಾಗಲಿರುವ ಅನಿತಾ ನರೇಶ್ ಮಂಚಿ ಅವರ ಅಂಕಣಗಳ ಪುಸ್ತಕದ ಕುರಿತು ಮಾಲಿನಿ ಗುರುಪ್ರಸನ್ನ.

 

ಅಂಕಣ ಬರಹಗಳ ಬಗ್ಗೆ ಮಾತನಾಡುವಾಗೆಲ್ಲಾ ನನಗೊಂದು ಬೆರಗು ಇದ್ದೇ ಇದೆ. ಅದು ಪ್ರತಿ ವಾರಕ್ಕೊಂದೋ ಹದಿನೈದು ದಿನಕ್ಕೊಂದೋ ತಿಂಗಳಿಗೊಂದೋ ನಮಗೆ ಐದರಿಂದ ಹತ್ತು ನಿಮಿಷಗಳ ಓದು ಅಷ್ಟೇ. ಆದರೆ ಒಂದು ಅಂಕಣವನ್ನು ವರ್ಷಗಟ್ಟಲೆ ತಿಂಗಳುಗಟ್ಟಲೆ ಬರೆಯುವವರಿಗೆ ಅದು ಅವರ ಜೀವನದಲ್ಲಿ ಪ್ರತಿಕ್ಷಣವೂ ಹಾಸುಹೊಕ್ಕಾಗಿಬಿಟ್ಟಿರುತ್ತದೆ. ಒಂದು ಅಂಕಣ ಬರೆದು ಕಳಿಸಿ ಮುಗಿಯಿತು ಅನ್ನುವಂತಿಲ್ಲ. ಮರುಕ್ಷಣದಿಂದಲೇ ಮುಂದಿನ ಅಂಕಣದ ಕುರಿತ ಯೋಚನೆ ಶುರುವಾಗಿರುತ್ತದೆ. ಅಂಕಣದಲ್ಲಿ ವರ್ತಮಾನಕ್ಕೆ ಸ್ಪಂದಿಸಬೇಕಾಗಿರುವುದರಿಂದ ಪ್ರತಿ ಘಟನೆಯೂ ಮನದಲ್ಲಿ ಅಚ್ಚಾಗಿ ತನ್ನನ್ನು ಅಂಕಣವನ್ನಾಗಿಸು ಎಂದು ಬೇಡುತ್ತಿರುತ್ತದೆ. ಹೀಗಾಗಿ ಅವರು ಪ್ರತಿಕ್ಷಣ ಎದುರಾಗುವ ಘಟನೆಗಳನ್ನೂ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾರೆ.

ಒಬ್ಬ ಅಂಕಣಕಾರನ ಮನದಲ್ಲಿ ಅಚ್ಚಾಗುವ ಸಂಗತಿಗಳನ್ನು ಅವನೆಷ್ಟು ಒಳಗಿಳಿಸಿಕೊಳ್ಳುತ್ತಾನೆ, ಒಳಗಿಳಿಸಿಕೊಂಡಿದ್ದನ್ನು ಓದುಗನೊಳಗೆ ಹೇಗೆ ಇಳಿಸುತ್ತಾನೆ ಎಂಬುದರ ಮೇಲೆ ಒಂದು ಅಂಕಣದ ಯಶಸ್ಸು ತೀರ್ಮಾನವಾಗುತ್ತದೆ. ಓದುಗನಿಗೆ ಮುಟ್ಟಿಸುವುದೇ ಅಂಕಣಕಾರನ ಮುಖ್ಯ ಉದ್ದೇಶವಾದರೂ ಓದುಗನೊಳಗೆ ತನ್ನ ಹರಳುಗಟ್ಟಿದ ಅನುಭವಗಳನ್ನು ಇಳಿಸುವುದೇ ಗುರಿಯಾದರೂ ಆ ಘಟನೆಗಳು ಅವನನ್ನೂ ಬದಲಿಸುತ್ತಲೇ ಹೋಗುತ್ತವೆ. ಅಥವಾ ಮೊದಲಿಗಿಂತ ಅವನ ಗ್ರಹಿಕೆ, ದೃಷ್ಟಿಕೋನ, ನೋಟದ ಹಿಂದಿನ ಚಿತ್ರಗಳನ್ನು ಅರಿಯುವ ರೀತಿ ಮತ್ತೆ ಮತ್ತೆ ಚುರುಕಾಗುತ್ತಾ ಹೋಗುತ್ತದೆ. ಓದುಗನ ನಾಡಿಮಿಡಿತ ಬರೆಯುತ್ತಾ ಬರೆಯುತ್ತಾ ಅಂಕಣಕಾರನಿಗೆ ದಕ್ಕುವಂತೆಯೇ ಆ ಅಂಕಣಗಳನ್ನು ಸತತವಾಗಿ ಓದುವವನಿಗೆ ಅಂಕಣಕಾರನ ನಾಡಿಮಿಡಿತವೂ ಅರಿವಾಗಲೇಬೇಕು.

ಹೀಗೆ ಅಂಕಣವನ್ನು ಓದುತ್ತಾ ಓದುಗ ಅವನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿರುವಂತೆಯೇ ಒಬ್ಬ ಅಂಕಣಕಾರನೂ ಓದುಗನ ಜೊತೆಜೊತೆಗೇ ತನ್ನ ಅರಿವನ್ನೂ ವಿಸ್ತರಿಸಿಕೊಳ್ಳುತ್ತಿರುತ್ತಾನೆ. ಅದು ಒಂದು ರೀತಿ ಸಮಾನಾಂತರವಾಗಿ ನಡೆಯುವ ಪ್ರಕ್ರಿಯೆ. ಹೀಗೆ ಬೆಳೆಯುತ್ತ ಹೋಗುವ ಅಂಕಣಕಾರ ಮತ್ತು ಓದುಗನ ಸಂಬಂಧ ಪರಸ್ಪರ ಕೊಟ್ಟು ಪಡೆಯುವಂಥದ್ದು. ಹೀಗಾಗಿಯೇ ನಾನು ಅಂಕಣಗಳನ್ನು ಬೆರಗಿನಿಂದಲೇ ಓದುತ್ತೇನೆ. ಅವರು ಪ್ರತಿಬಾರಿಯೂ ವಿಷಯಗಳನ್ನು ಹೆಕ್ಕಿ ತರುವ ರೀತಿ ಅದನ್ನು ಮಂಡಿಸುವ ರೀತಿಯನ್ನು ಗಮನಿಸುತ್ತಲೇ ಇರುತ್ತೇನೆ. ಹೀಗೆ ಕುತೂಹಲದಿಂದ ಗಮನಿಸುವುದು ಅನಿತಾ ನರೇಶ್ ಮಂಚಿಯವರ ಅಂಕಣವನ್ನು.

ಅನಿತಾ ಯಾವತ್ತೂ ಅಂಕಣದ ವಸ್ತುವಿಗಾಗಿ ತಡಕಾಡುವವರೇ ಅಲ್ಲ. ಅವರದು ಬಹು ಸೂಕ್ಷ್ಮ ದೃಷ್ಟಿ. ಅವರ ಕಣ್ಣಿಂದ ಸಣ್ಣ ಸಣ್ಣ ಸಂಗತಿಗಳೂ ತಪ್ಪಿಸಿಕೊಳ್ಳಲಾಗದೆ ಅವರ ಬರಹಗಳಲ್ಲಿ ಹೊಸರೀತಿಯಲ್ಲಿ ಹೊಸ ಭಾವ ಹೊತ್ತು ಬೆರಗು ಮೂಡಿಸುತ್ತವೆ. ಅವರ ಅಂಕಣಗಳು ಬಹಳ ವಿಶಿಷ್ಟ ಎಂದೇ ನನಗೆ ಯಾವಾಗಲೂ ಅನ್ನಿಸುತ್ತಿರುತ್ತವೆ. ಬಹಳ ಮುಖ್ಯವಾಗಿ ಅವರು ಮಿಕ್ಕ ಅಂಕಣಕಾರರಿಗಿಂತ ಭಿನ್ನವಾಗಿ ಬರೆಯಲು ಪ್ರಯತ್ನಿಸುವುದಿಲ್ಲ. ಅವರೆಲ್ಲರಿಗಿಂತ ವಿಶಿಷ್ಟವಾಗಿ ಬರೆಯಲು ವಸ್ತುಗಳನ್ನು ಎಲ್ಲೆಲ್ಲಿಂದಲೋ ತಂದು ಗುಡ್ಡೆ ಹಾಕಿಕೊಳ್ಳುವುದಿಲ್ಲ. ತನ್ನ ಅಂಕಣದ ಬಗ್ಗೆ ವಿಶೇಷವಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ತುಂಬಾ ಸಹಜವಾಗಿಯೇ ಅವರು ತನ್ನ ಸುತ್ತಮುತ್ತ ಕಾಣಸಿಗುವ ಸಂಗತಿಗಳನ್ನೇ ಅಂಕಣದಲ್ಲಿ ಬರೆಯುತ್ತಾರೆ. ಅರೆ ಹೌದಲ್ಲಾ ಎನ್ನಿಸುವಂತೆ. ಇದನ್ನು ನಾನೇಕೆ ಗಮನಿಸಿರಲಿಲ್ಲ ಎನ್ನುವಂತೆ. ಒಂದು ಅಂಕಣದಲ್ಲಿ ಹೀಗೆ ಬರೆಯುತ್ತಾರೆ ನೋಡಿ.

“ರಾತ್ರೋರಾತ್ರಿ ಕಸವನ್ನು ತಂದು ಊರ ಹೊರಗೆ ಸುರಿಯುತ್ತಿದ್ದ ವಂಚಕರನ್ನು ಹಿಡಿದು ಆ ಕಸವನ್ನು ಮರಳಿ ಅವರ ವಾಹನಕ್ಕೇ ತುಂಬುವಂತೆ ಮಾಡಿ ಅವರನ್ನು ಓಡಿಸಿದ ಗ್ರಾಮಸ್ಥರ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದಿತ್ತು. ಆ ಕಸವನ್ನು ಅವರೇನು ಮಾಡಿರಬಹುದು? ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿರಬಹುದೇ? ಅಥವಾ ಇನ್ನೊಂದು ನಿರ್ಜನ ಪ್ರದೇಶವನ್ನು ಹುಡುಕಿ ಎಸೆದಿರಬಹುದೇ? ನಾವು ಯಾಕೆ ಹೀಗೆ?”
ಗ್ರಾಮಸ್ಥರು ಓಡಿಸಿದ್ದರ ಬಗ್ಗೆ ಬರೆಯುವ ಪತ್ರಿಕೆಗೆ ಅದನ್ನು ಓದುವ ನಮಗೆ ನಂತರ ಆ ಕಸವೇನಾಯಿತು ಎಂಬ ಬಗ್ಗೆ ಯೋಚನೆ ಮೂಡುವುದಿಲ್ಲ. ಗ್ರಾಮಸ್ಥರ ಬಗ್ಗೆ ಖುಷಿ ಪಟ್ಟು ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗಬೇಕು ಎಂಬ ಮಾತೊಗೆದು ಸುಮ್ಮನಾಗುತ್ತೇವೆ.

ಹೊರಗಿನ ಕಸದ ಬಗ್ಗೆ ಹೀಗೆ ಬರೆಯುವ ಸಮಸ್ಯೆಯ ಮೂಲಕ್ಕಿಳಿಯುವ ಅನಿತಾ ಮನದೊಳಗಿನ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವಲ್ಲೂ ಸಿದ್ಧ ಹಸ್ತರು. ತನ್ನ ಸುತ್ತಲಿನ ಜನರ ಕಾಳಜಿಯನ್ನು ಅರ್ಥಮಾಡಿಕೊಳ್ಳದೆ ಸುಖಾಸುಮ್ಮನೆ ಕೊರಗುವ ಸಂಕಟಕ್ಕೆ ಅವರು ಹೇಳಿದ್ದು ಹೀಗೆ-
“ನಮ್ಮ ಇರುವಿಕೆಯೇ ಮುಖ್ಯ, ಅದಿಲ್ಲದೇ ಇದ್ದರೆ ಇಲ್ಲೇನೂ ನಡೆಯದು ಎಂಬುದು ನಮ್ಮ ಭಾವನೆ. ಇದು ಮನೆಯಲ್ಲಿ ಅಂತಲ್ಲ, ಎಲ್ಲ ಕಡೆಯೂ ನಡೆಯುವಂಥದ್ದೇ. ನಾವಿಲ್ಲದಿದ್ದರೂ ಪ್ರಪಂಚ ನಡೆಯುತ್ತದೆ ಎಂಬ ಸತ್ಯವನ್ನು ಹೊತ್ತುಕೊಂಡೇ ಕರ್ತವ್ಯ ನಿಭಾಯಿಸಿದರೆ ನಮ್ಮ ಅಹಂ ಕೊಂಚ ತಗ್ಗಬಹುದೇನೋ.”

ಅವರೆಲ್ಲರಿಗಿಂತ ವಿಶಿಷ್ಟವಾಗಿ ಬರೆಯಲು ವಸ್ತುಗಳನ್ನು ಎಲ್ಲೆಲ್ಲಿಂದಲೋ ತಂದು ಗುಡ್ಡೆ ಹಾಕಿಕೊಳ್ಳುವುದಿಲ್ಲ. ತನ್ನ ಅಂಕಣದ ಬಗ್ಗೆ ವಿಶೇಷವಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ತುಂಬಾ ಸಹಜವಾಗಿಯೇ ಅವರು ತನ್ನ ಸುತ್ತಮುತ್ತ ಕಾಣಸಿಗುವ ಸಂಗತಿಗಳನ್ನೇ ಅಂಕಣದಲ್ಲಿ ಬರೆಯುತ್ತಾರೆ. ಅರೆ ಹೌದಲ್ಲಾ ಎನ್ನಿಸುವಂತೆ. ಇದನ್ನು ನಾನೇಕೆ ಗಮನಿಸಿರಲಿಲ್ಲ ಎನ್ನುವಂತೆ.

ನಡೆಯುವ ಘಟನೆಗಳನ್ನು ನೋಡುವ ರೀತಿಯೇ ಮುಖ್ಯ ಎಂಬುದು ಇವರ ನಿಲುವು. ಶಾಲೆಯ ಅಧ್ಯಾಪಕರು ಕೊಟ್ಟ ಸರ್ಪ್ರೈಸ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಅದಕ್ಕಾಗಿ ಅಧ್ಯಾಪಕರನ್ನೇ ದೂಷಿಸಿದಾಗ ಅವರು ಹೇಳುವ ಮಾತುಗಳು ಬದುಕಿಗೆ ಬಹುಮುಖ್ಯವೆನ್ನಿಸಿಬಿಡುತ್ತದೆ.

“ಪರೀಕ್ಷೆಗಳು ಬಂದಾಗ ಓದಿ ಅದನ್ನು ಪರೀಕ್ಷೆಯ ದಿನ ಬರೆದು ಅಂಕ ಗಿಟ್ಟಿಸಿಕೊಳ್ಳುವುದೇ ಸಫಲತೆ ಅಲ್ಲ. ಪ್ರತಿದಿನ ಸನ್ನದ್ಧರಾಗಿರಬೇಕು ಎಂಬುದಕ್ಕೆ ಈ ಪರೀಕ್ಷೆ. ಬದುಕು ಯಾವ ಪರೀಕ್ಷೆಯನ್ನೂ ಮುಂಚಿತವಾಗಿ ಹೇಳಿ ಮಾಡುವುದಿಲ್ಲ. ಆಗ ಬರುವ ನಿಮ್ಮ ಮಾರ್ಕ್ ಗಳ ಮೇಲೆ ನಿಮ್ಮ ಜೀವನ ಹೇಗೆ ನಡೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ನೀವು ಎಲ್ಲರೊಡನೆ ಹೇಗೆ ಕನೆಕ್ಟ್ ಆಗಿರುತ್ತೀರಿ ಎಂಬುದರ ಮೇಲೆ ಅಂಕಗಳು ಲಭಿಸುತ್ತ ಹೋಗುತ್ತವೆ”

ಹೀಗೆ ಸಣ್ಣ ಪುಟ್ಟ ಘಟನೆಗಳನ್ನೇ ಅಂಕಣವಾಗಿಸುತ್ತಾ ಅವುಗಳೊಳಗೆ ಟೆಲಿಸ್ಕೋಪ್ ಇಟ್ಟು ಇದು ಮೇಲ್ನೋಟಕ್ಕೆ ಕಾಣುವ ಹಾಗಲ್ಲ.. ಇದರೊಳಗೆ ಹೀಗೂ ಇದೆ ನೋಡಿ ಎಂದು ತೋರಿಸುತ್ತಾ ಹೋಗುವ ಅನಿತಾ ಬರಹಗಳು ಬಹಳ ಸರಳವಾಗಿ ಕಂಡರೂ ಅದರೊಳಗೆ ಅವರು ಕಾಣಿಸುವ ಭಾವಗಳು ಸರಳವಲ್ಲವೇ ಅಲ್ಲ. ಒಂದೊಂದು ಅಂಕಣಗಳೂ ಕಾಡುತ್ತಲೇ ಇರುವಷ್ಟು ನಮಗೆ ಹತ್ತಿರವಾಗುತ್ತವೆ.

ಕಥೆ ಬರೆಯುವ. ಲಲಿತ ಪ್ರಬಂಧಗಳನ್ನು ಲೀಲಾಜಾಲವಾಗಿ ಬರೆಯುವ (ಅನಿತಾ ನಮ್ಮ ಕನ್ನಡ ಸಾಹಿತ್ಯ ಜಗತ್ತಿಗೆ ದಕ್ಕಿದ ಸೊಗಸಾದ ಹಾಸ್ಯಪ್ರಜ್ಞೆ. ಅದು ಹಾಸ್ಯದ ಹೆಸರಿನ ಅಪಹಾಸ್ಯವಲ್ಲ. ಅದೊಂದು ದೃಷ್ಟಿಕೋನ. ಟಿ.ಸುನಂದಮ್ಮ , ಭುವನೇಶ್ವರಿ ಹೆಗಡೆಯವರ ನಂತರ ಅದೇ ಮಟ್ಟವನ್ನು ಕಾಯ್ದುಕೊಳ್ಳಬಲ್ಲ ಹಾಸ್ಯಲೇಖಕಿ ) ಒಮ್ಮೊಮ್ಮೆ ಮನಸ್ಸು ಬಂದಾಗ ಕವಿತೆಯನ್ನೂ ಬರೆದು ಹುಬ್ಬು ಹಾರಿಸುವ ಅನಿತಾ ಇವೆಲ್ಲವುಗಳನ್ನೂ ಮೀರುವಂತೆ ಒಬ್ಬ ಅದ್ಭುತ ಪ್ರಕೃತಿ ಶಾಸ್ತ್ರಜ್ಞೆ . ಅವರು ನಿಂತಲ್ಲೇ ಧ್ಯಾನಸ್ಥರಾಗುವಷ್ಟು ಮೈಮರೆಯುತ್ತಾರೆ ಪ್ರಕೃತಿಯಲ್ಲಿ. ಮೈಮರೆಯುವುದೆಂದರೆ ಕ್ಷಣ ಹೊತ್ತು ನಾವು ಜಲಪಾತದ ಮುಂದೆ ನಿಂತಂತೆ. ಆಗುಂಬೆಯ ಸೂರ್ಯಾಸ್ತ ನೋಡಿದಂತೆ ಅಲ್ಲ.

“ಎಲ್ಲ ಕಡೆ ಚಳಿಗಾಲ ತನ್ನ ಚಾದರ ಹಾಸಿ ಪಶು ಪಕ್ಷಿ ಪ್ರಾಣಿಗಳನ್ನು ಗಡಗಡ ನಡುಗುವಂತೆ ಮಾಡುವ ಕಾಲ ಬಂದಾಗ ಹಕ್ಕಿಗಳು ಬೆಚ್ಚಗಿನ ವಾತಾವರಣ ಅರಸಿ ವಲಸೆ ಹೋಗುವುದು ಸಹಜ. ನಾವಿರುವ ದಕ್ಷಿಣ ಕನ್ನಡ ಜಿಲ್ಲೆ ಪ್ರದೇಶ ಕಡಿಮೆ ಚಳಿ ಹೊಂದಿದ ಕಾರಣ ಸಹಜವಾಗಿಯೇ ಚಳಿಗಾಲದಲ್ಲಿ ಎಲೆ ಕಳಚುವ ಮರಗಳ ಸಂಖ್ಯೆಯೂ ಕಡಿಮೆಯೇ. ಬೆಚ್ಚನೆಯ ಸ್ಥಳ ಅರಸಿ ಬರುವ ಹಕ್ಕಿಗಳಿಗೆ ನಮ್ಮೂರ ಹಸಿರುಕ್ಕುವ ಮರಗಳು ಆಕರ್ಷಣೀಯವಾಗಿ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಹತ್ತು ಹಲವು ಹಕ್ಕಿಗಳು ನಮ್ಮ ಕಡೆಗೆ ಹಾರಿ ಬರುತ್ತವೆ. ಒಂದಿಷ್ಟು ದಿನ ನಮ್ಮ ಪರಿಸರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮುಗಿದ ಕೂಡಲೇ ಮಾಯವಾಗುತ್ತವೆ. ಹಾಗೆ ಬರುವ ಹಕ್ಕಿಗಳಲ್ಲಿ ಇಂಡಿಯನ್ ಪಿಟ್ಟ (ನವರಂಗ) ಎಂಬ ಹಕ್ಕಿಯೂ ಒಂದು. ಹೆಚ್ಚಾಗಿ ಡಿಸೆಂಬರ್ ಜನವರಿಯಲ್ಲೇ ಕಾಣಿಸಿಕೊಳ್ಳುವ ಈ ಹಕ್ಕಿ ಈ ವರ್ಷ ಇನ್ನೂ ಕಾಣಿಸಿಲ್ಲ ಯಾಕೆ ಎಂಬ ಚಿಂತೆ ನನ್ನದಾಗಿತ್ತು. ಪರಿಸರದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳು ನಮ್ಮ ಕಣ್ಣಿಗೆ ಕಾಣಿಸದಿದ್ದರೂ ಪ್ರಾಣಿ ಪಕ್ಷಿಗಳು ಅದನ್ನು ಗ್ರಹಿಸುತ್ತವೆ. ಸುರಕ್ಷಿತ ಎಂಬ ಭಾವನೆ ಅವುಗಳಲ್ಲಿ ಮೊಳೆಯುವವರೆಗೂ ಯಾವುದೇ ಜಾಗವನ್ನು ತಮ್ಮದಾಗಿಸಿಕೊಳ್ಳವು. ನಾನು ನಮ್ಮ ಪರಿಸರದಲ್ಲಿ ಈ ಹಕ್ಕಿಯನ್ನು ಗುರುತಿಸಿ ನಾಲ್ಕು ವರ್ಷಗಳಾಗಿತ್ತು.

ಸಣ್ಣ ಪುಟ್ಟ ಘಟನೆಗಳನ್ನೇ ಅಂಕಣವಾಗಿಸುತ್ತಾ ಅವುಗಳೊಳಗೆ ಟೆಲಿಸ್ಕೋಪ್ ಇಟ್ಟು ಇದು ಮೇಲ್ನೋಟಕ್ಕೆ ಕಾಣುವ ಹಾಗಲ್ಲ.. ಇದರೊಳಗೆ ಹೀಗೂ ಇದೆ ನೋಡಿ ಎಂದು ತೋರಿಸುತ್ತಾ ಹೋಗುವ ಅನಿತಾ ಬರಹಗಳು ಬಹಳ ಸರಳವಾಗಿ ಕಂಡರೂ ಅದರೊಳಗೆ ಅವರು ಕಾಣಿಸುವ ಭಾವಗಳು ಸರಳವಲ್ಲವೇ ಅಲ್ಲ.

ಛೇ ಈ ವರ್ಷ ಪಿಟ್ಟ ಕಾಣಲಿಲ್ಲ ಎಂದರೆ ನಮ್ಮ ಪರಿಸರ ಅದಕ್ಕೆ ಬೇಕಾದ ರಕ್ಷಣೆಯನ್ನು ಕೊಡುವಲ್ಲಿ ಸಫಲವಾಗಿಲ್ಲವೇನೋ ಎಂಬ ನೋವಿನೆಳೆ ನನ್ನೊಳಗೆ ಕಾಡತೊಡಗಿತ್ತು.”

ಇದು ಅನಿತಾರ ಪರಿಸರ ಪ್ರೀತಿ. ಅವರು ಅದನ್ನು ಪ್ರತಿಕ್ಷಣ ಅನುಭವಿಸುತ್ತಾರೆ.

ಹಿಂದೊಮ್ಮೆ ನಾನು ಅವರಿಗೆ ಅಡಿಗರ ಸಾಲನ್ನು ಮೈಮರೆತು ಹೇಳುತ್ತಿದ್ದಾಗ ನಡುವೆಯೇ ಕತ್ತರಿಸಿ “ಯಾರು ಹೇಳಿದ್ದು ತೇಗಕ್ಕೆ ಹೂವಿಲ್ಲ ಎಂದು? ಉಂಟು ” ಎಂದಿದ್ದರು. ಅದರಿಂದ ಉಪಯೋಗವಿಲ್ಲ ಎಂದೇನಾದರೂ ಅಡಿಗರು ಹೇಳಿರಬಹುದೇ ಎಂದು ನಾನು ಅನುಮಾನಿಸುತ್ತಿದ್ದಾಗ ಬಹಳ ಸ್ಪಷ್ಟವಾಗಿ ಒಂದು ಮಾತು ನುಡಿದಿದ್ದರು. “ನಮಗನ್ನಿಸಬಹುದು ಹಾಗೆ. ಆದರೆ ಪ್ರಕೃತಿಯ ಯಾವ ವಸ್ತುಗಳೂ ನಿರುಪಯೋಗಿಯಲ್ಲ . ಅವುಗಳ ಮಟ್ಟಿಗೆ ಅವು ಪ್ರಯೋಜನಕಾರಿಯೇ. ನಮಗೆ ಉಪಯೋಗವಿಲ್ಲ ಎಂದ ಮಾತ್ರಕ್ಕೆ ಅವು ಉಪಯುಕ್ತವಲ್ಲ ಎಂದು ಭಾವಿಸಬಾರದು ಎಂದೇ ಅಡಿಗರು ಹೇಳಿರಬಹುದು”. ಅಂತಹುದೇ ಮಾತನ್ನು ತಮ್ಮ ಇತ್ತೀಚಿನ ಅಂಕಣದಲ್ಲಿ ಬರೆದಿದ್ದಾರೆ.

“ಪರಿಸರವನ್ನು ಇದ್ದಂತೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಈ ನೀರು ಈ ಗಾಳಿ ಈ ನೆಲ ನಮ್ಮದೆಷ್ಟೋ ಅಷ್ಟೇ ನಮ್ಮ ಸಹವಾಸಿಗಳಾದ ಇತರ ಜೀವಿಗಳದ್ದು ಕೂಡ. ಆ ಸತ್ಯವೇ ಆನಂದದ ಮೂಲ.”

ಇದು ಬದುಕಿಗೆ ಬೇಕಾದ ದೃಷ್ಟಿಕೋನ. ಆರೋಗ್ಯಕರವಾದದ್ದು ಕೂಡ. ಅನಿತಾ ಬರೆದ ಈ ಅಂಕಣಗಳನ್ನೊಳಗೊಂಡ ಶ್ರೀನಿವಾಸ ಪುಸ್ತಕ ಪ್ರಕಾಶನ ಪ್ರಕಟಿಸುತ್ತಿರುವ “ಮಹತಿ” ಈ ನವೆಂಬರ್ ಇಪ್ಪತ್ತೈದನೇ ತಾರೀಕಿನಂದು ಅವರ ಸ್ವಗೃಹದಲ್ಲೇ ಬಿಡುಗಡೆಯಾಗಲಿದೆ. ಜೊತೆಜೊತೆಗೆ ಅವರ “ನೈಲಾ” ಕಥಾಸಂಕಲನವೂ. ಇದು ನಿಜಕ್ಕೂ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.