‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ ಮುಂಜಾನೆ ಒಂದು ಗಂಟೆ. ಕಥೆ ಮುಗಿಸಿದ್ದು ಮುಂಜಾನೆ ಐದು ಗಂಟೆಗೆ! ಆಗ ಬಾನಲ್ಲಿ ಸೂರ್ಯ ಎದ್ದು ಕೂತು ಮೈ ಮುರಿಯಲಾರಂಭಿಸಿದ್ದ.
ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಹೊಸ ಕಥಾಸಂಕಲನ “ವರ್ಜಿನ್ ಮೊಹಿತೋ” ಕೃತಿಗೆ ಅವರೇ ಬರೆದ ಮುನ್ನುಡಿ

 

ಆಷಾಢ, ಆಗಸದಲ್ಲಿ ಕವಿದಿರುವ ದಟ್ಟ ಮೋಡಗಳು, ಸುಯ್ಯೆಂದು ಬೀಸುವ ಗಾಳಿ, ಧುಯ್ಯೆಂದು ಸುರಿವ ಮಳೆ, ಮನೆಯ ಸುತ್ತಲೂ ಮಾರ್ಧನಿಸುವ ನವಿಲುಗಳ ಕೂಗು, ಎದುರಿನ ಪಶ್ಚಿಮ ಘಟ್ಟಗಳ ನಡುವೆ ಧುಮ್ಮಿಕ್ಕುವ ಜಲಪಾತಗಳ ಸಾಲು, ತುಂಬಿ ಉಕ್ಕುವ ಹೊಳೆ, ಸ್ವಲ್ಪ ದೂರದಲ್ಲಿ ಬೋರ್ಗರೆಯುವ ಸಮುದ್ರದ ಅಲೆಗಳು, ಕೈಯಲ್ಲಿನ ಬಿಸಿಯುಕ್ಕುವ ಚಹಾದ ಕಪ್ಪಿಗೂ… ಕಥೆಗಳಿಗೂ ಏನು ಸಂಬಂಧ!? ಬೇರೆಯವರ ಪಾಲಿಗೆ ಇವುಗಳ ನಡುವೆ ಯಾವುದೇ ಸಂಬಂಧ ಕಾಣದೇ ಹೋಗಬಹುದು ಅಥವಾ ಕಾಣಲೂಬಹುದು!

ಆದರೆ ಕಳೆದ ಮೂವ್ವತ್ತು ವರ್ಷಗಳ ಅವಧಿಯಲ್ಲಿ ನನ್ನೆದೆಯಲ್ಲಿ ಹುಟ್ಟಿದ ಕಥೆಗಳ ಪೈಕಿ ಒಂದನ್ನು ಬಿಟ್ಟು ಉಳಿದೆಲ್ಲವೂ ಆಷಾಢದ ಮಳೆ ಹನಿಗಳಿಗೆ ನೇರವಾಗಿ ಥಳಕು ಹಾಕಿಕೊಂಡಿದೆ. ಮೂವ್ವತ್ತು ವರ್ಷಗಳ ಹಿಂದೆ ಮೊದಲ ಕಥೆ ‘ಅರ್ಥ’ ಹುಟ್ಟಿದ್ದು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದು ಸುರಿವ ಮಳೆಯ ನಡುವೆಯೇ! ನಂತರ ‘ಬೇರು’ ಬರೆದಿದ್ದು ಸುರಿವ ಮಳೆಯ ನಡುವೆಯೇ! ಆ ಕಥೆಗೆ ‘ಪ್ರಜಾವಾಣಿ’ ದೀಪಾವಳಿ ಪ್ರಶಸ್ತಿ ಬಂತು. ಅದಾದ ಮರು ವರ್ಷವೇ ‘ಮರ’ ಕೂಡ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯ ಮೂಲಕ ಬೆಳಕಿಗೆ ಬಂತು.

ಬೇರೆ ಕಥೆಗಾರರ ಮನದಲ್ಲಿ, ಎದೆಯಲ್ಲಿ ಕಥೆ ಹೇಗೆ ಹುಟ್ಟುತ್ತದೆ ಎನ್ನುವ ಅರಿವು ನನಗಿಲ್ಲ. ಆದರೆ, ನನ್ನೆದೆಯಲ್ಲಿ ಕಥೆ ಹುಟ್ಟುವ ಪರಿ ಹಲವು ಬಾರಿ ನನ್ನನ್ನೇ ಅಚ್ಚರಿಯ ಸಾಗರದೊಳಗೆ ಮುಳುಗಿಸಿ ಬಿಟ್ಟಿದೆ. ಕೆಲವೊಮ್ಮೆ ರಸ್ತೆಯ ಬದಿ, ಆಸ್ಪತ್ರೆಯೊಳಗೆ, ಮಾಲ್ ನ ಮೂಲೆಯಲ್ಲಿ, ಕಾಫಿ ಡೇಯ ಕುರ್ಚಿಯಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗ, ವಿಮಾನದಲ್ಲಿ ಹಾರುತ್ತಿರುವಾಗ, ಕೈಯಲ್ಲಿ ಬೇರೊಂದು ಪುಸ್ತಕ ಹಿಡಿದಾಗ, ದಟ್ಟ ಕಾನನದ ನಡುವೆ ಒಂಟಿಯಾಗಿ ನಿಂತಾಗ… ಎದೆಯಲ್ಲಿ ಕಥೆಯ ಬೀಜ ಬಿದ್ದು ಬಿಡುತ್ತದೆ. ಆ ಬೀಜ ಮನದಲ್ಲಿಯೇ ಮೊಳಕೆಯೊಡೆದು, ಸಸಿಯಾಗಿ, ಚಿಗುರೊಡೆದರೂ ಸಂಪೂರ್ಣವಾಗಿ ಅಕ್ಷರ ರೂಪ ತಾಳುವುದು ಮಾತ್ರ ಮಳೆಯ ಹನಿಗಳ ಸದ್ದಿನ ನಡುವೆಯೇ. ಅದೂ ಮೊದಲ ಮಳೆಯ ಹನಿ ಭುವಿಯನ್ನು ಚುಂಬಿಸಿ, ಘಮ್ಮೆನ್ನುವ ಮಣ್ಣಿನ ಸುವಾಸನೆ ಮೂಗಿಗೆ ಬಡಿದ ಮೇಲೆ ಕಥೆಗಳು ಅಕ್ಷರ ರೂಪ ತಾಳುವ ಪ್ರಕ್ರಿಯೆ ಆರಂಭವಾಗುತ್ತದೆ.

ಬೆಂಗಳೂರಿನ ಯಾರಿಗೋ ಸೇರಿದ ಎಂಟನೇ ಮಹಡಿಯ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ನಿಂತು; ಕೆಲವೊಮ್ಮೆ ಉಜಿರೆಯ ನಮ್ಮ ಮನೆಯ ಬಾಲ್ಕನಿಯಲ್ಲಿನ ತೂಗುಯ್ಯಾಲೆಯಲ್ಲಿ ಕೂತು; ಯಾವಾಗಲೋ ಒಮ್ಮೆ ಚಪ್ಪರಿಕೆ ಮನೆಯ ಅಂಗಳದಲ್ಲಿ ಒದ್ದೆಯಾಗಿ ನಿಂತಾಗ; ಹೊಸಾಡಿನ ಹೊಸ ಮನೆಯ ಮುಂದಿನ ಜಗಲಿಯಲ್ಲಿ ಕೂತು ಎದುರಿದ್ದ ಹಸಿರನ್ನು ಕಣ್ತುಂಬಿಕೊಳ್ಳುವಾಗ; ಶಿರಾಡಿ, ಚಾರ್ಮಾಡಿ, ಆಗುಂಬೆ, ಊಟಿ, ಪೋಖ್ರಾದ ಘಾಟಿಗಳಲ್ಲಿ ಸಾಗುವಾಗ ಸುರಿವ ಮಳೆಯನ್ನು ಆಸ್ವಾದಿಸಿದ ಮೇಲೆ ಎದೆಯೊಳಗಿನ ಕಥೆಗಳು ಉಕ್ಕಲಾರಂಭಿಸುತ್ತವೆ.

(ಸತೀಶ್ ಚಪ್ಪರಿಕೆ)

ಅದು ಹೇಗೆಂದರೆ ಮಳೆಗಾಲದ ಸಂದರ್ಭದಲ್ಲಿ ಘಾಟಿಯ ಗುಡ್ಡಗಳ ಮೇಲಿಂದ ಎಗ್ಗಿಲ್ಲದೇ ಜಲಧಾರೆ ಉಕ್ಕಿ ಧುಮ್ಮಿಕ್ಕಿದ ಹಾಗೆ. ಹಾಗೆ ಧುಮ್ಮಿಕ್ಕುವಾಗ ಆ ಜಲಧಾರೆಯ ನಡುವೆ ನಾನೇ ಕಳೆದುಹೋಗುವ, ಸೃಜನಶೀಲ ಸ್ಖಲನದ ಸುಃಖ ಅನುಭವಿಸುವ ಸಂದರ್ಭ! ಮನದಲ್ಲಿ ಕಥೆ ರೂಪುಗೊಳ್ಳುವ ಪರಿ ಅನನ್ಯ. ಮಿದುಳಿನ ನರ-ನರದಲ್ಲಿ ಕಥೆ ಹುಟ್ಟಿ ಹರಿಯುವಾಗ ಆಗುವ ಆ ಆನಂದ ವರ್ಣಿಸಲಸಾಧ್ಯ. ಒಮ್ಮೆ ಮಿದುಳಲ್ಲಿ ಹರಿದಾಡಿ, ಹೃದಯದಲ್ಲಿ ಗಟ್ಟಿಯಾದ ಕಥೆ ಎಂದೂ ನನ್ನನ್ನು ಬಿಟ್ಟು ಹೋಗುವುದಿಲ್ಲ. ಹಾಗೆ ಗಟ್ಟಿಯಾದ ಎಷ್ಟೋ ತಿಂಗಳು, ವರ್ಷದ ನಂತರ ಸಾಮಾನ್ಯವಾಗಿ ಆ ಕಥೆಯನ್ನು ಒಂದೇ ‘ಸಿಟ್ಟಿಂಗ್’ನಲ್ಲಿ ಬರೆದು ಮುಗಿಸುವ ಜಾಯಮಾನ ನನ್ನದು. ಹಾಗೆ ಉಕ್ಕಿದ ಕಥೆಯನ್ನು ಪದೇ, ಪದೇ ತಿದ್ದುವ ಅವಕಾಶ ಕೂಡ ಬರುವುದಿಲ್ಲ. ಕಾಗುಣಿತ ತಿದ್ದುವುದನ್ನು ಬಿಟ್ಟರೆ, ಒಟ್ಟಾರೆ ಕತಾ ಹಂದರ- ಆಶಯ ಬದಲಾಗುವುದಿಲ್ಲ.

ಕಥೆ ಹುಟ್ಟುವ ಪರಿಯ ಬಗ್ಗೆ ಈಗ ಬರೆಯಲು ಹೊರಟಿರಲು ಮುಖ್ಯ ಕಾರಣ ನನ್ನ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ ಜನ್ಮ ತಾಳಿರುವ ಸಂದರ್ಭ. ಅದೂ ಕೂಡ ಒಂದು ವಿಚಿತ್ರ ಸಂಧಿಗ್ಧದಲ್ಲಿ. ಕಳೆದ ಐದಾರು-ವರ್ಷಗಳಲ್ಲಿ ಹಲವಾರು ವೈಯಕ್ತಿಕ ಕಾರಣಗಳಿಂದ ‘ಇನ್ನು ಮುಂದೆ ಏನನ್ನೂ ಬರೆಯಲೇಬಾರದು’ ಎಂಬ ನಿರ್ಧಾರಕ್ಕೆ ಬಂದ ದಿನಗಳು ಬದುಕಲ್ಲಿ ಹಲವಿವೆ. ಹೆಚ್ಚಿನ ಪಕ್ಷ ಮಾಧ್ಯಮಲೋಕದ ಅವಿಭಾಜ್ಯ ಅಂಗವಾಗಿ ಎರಡು ದಶಕ ಕಳೆದಿದ್ದರ ಪರಿಣಾಮವಾಗಿ ಆ ಭಾವನೆಗಳು ಮೊಳಕೆ ಒಡೆದಿರಬಹುದು.

‘ಪ್ರಜಾವಾಣಿ’ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದ ಮೇಲೆ, ‘ಪ್ರಜಾವಾಣಿ’ಯ ಭಾಗವಾಗಲು ಹೊರಟ ಸಂದರ್ಭದಲ್ಲಿ ಹಿರಿಯ ಸಹೋದ್ಯೋಗಿಗಳಾದ್ದ ಡಿ.ವಿ. ರಾಜಶೇಖರ ಮತ್ತು ಲಕ್ಷ್ಮಣ ಕೊಡಸೆ ಇಬ್ಬರೂ, “ಇನ್ನೊಬ್ಬ ಕಥೆಗಾರ ಸತ್ತ ಬಿಡಿ” ಎಂದು ಪ್ರೀತಿಯಿಂದಲೇ ನನ್ನನ್ನು ಸ್ವಾಗತಿಸಿದ ನೆನಪು ಇಪ್ಪತ್ತೈದು ವರ್ಷಗಳ ನಂತರ ಕೂಡ ಈಗಲೂ ಮನದಲ್ಲಿ ಹಸಿಯಾಗಿಯೇ ಇದೆ. ಮಾಧ್ಯಮ ಲೋಕದಲ್ಲಿ ಸೃಜನಶೀಲ ಮನೋಭಾವ ಮತ್ತು ಮನುಷ್ಯತ್ವ ಎರಡೂ ಸಾಯುವುದು ಸಹಜ. ಆ ಸಹಜದ ವಿರುದ್ಧವಾಗಿ ಈಜಿ ಯಶಸ್ವಿಯಾದವರ ಸಂಖ್ಯೆ ಅತ್ಯಂತ ವಿರಳ. ಒಮ್ಮೆ ನನಗೂ ಆ ಸೋತ ಅನುಭವ ಆಗಿತ್ತು. ಅದು ನನ್ನನ್ನು ಗಾಢವಾಗಿ ಕಾಡಿತ್ತು. ‘ನನ್ನ ಕೈಯಲ್ಲಿ ಇನ್ನೆಂದೂ ಕಥೆ ಬರೆಯಾಗದು’ ಎಂದು ಒಬ್ಬಂಟಿಯಾಗಿ ಕೂತು ನಾನು ಕಣ್ಣೀರು ಕೂಡ ಸುರಿಸಿದ ದಿನಗಳಿವೆ.

ಮತ್ತೊಂದು ಹಂತ, ಇನ್ನು ಮುಂದೆ ಕನ್ನಡದಲ್ಲಿ ಬರೆಯಬೇಕೋ ಅಥವಾ ಬೇಡವೋ ಎಂಬ ದ್ವಂದ್ವ ನನ್ನಲ್ಲಿ ಹುಟ್ಟಿಕೊಂಡಿತ್ತು. ಅದೇ ಸಂದರ್ಭದಲ್ಲಿ ಯು.ಆರ್.ಅನಂತಮೂರ್ತಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ರವೀಂದ್ರನಾಥ್ ಠಾಗೂರ್ ಪೀಠದ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿರುವ ಕನ್ನಡ ಭವನದ ಕಚೇರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಾವಿಬ್ಬರೂ ಆ ಗೊಂದಲದ ಬಗ್ಗೆಯೇ ಮಾತನಾಡಿದ್ದವು. ಕೊನೆಗೆ ಅನಂತಮೂರ್ತಿ, “ಯಾವುದೇ ಒಬ್ಬ ಲೇಖಕನ ನಿಜ ಪ್ರತಿಭೆಯ ಅನಾವರಣವಾಗಬೇಕು ಎಂದರೆ ಆತ ಸೃಜನಶೀಲ ಸಾಹಿತ್ಯವನ್ನು ಮಾತೃ ಭಾಷೆಯಲ್ಲಿಯೇ ಬರೆಯಬೇಕು. ಆ ಕಾರಣಕ್ಕಾಗಿಯೇ ಇಂಗ್ಲಿಷ್ ಮೇಷ್ಟ್ರಾಗಿದ್ದರೂ ನಾನು ಕನ್ನಡಕ್ಕೆ ಅಂಟಿಕೊಂಡಿದ್ದು. ನೀನು ಕೂಡ ನಿನ್ನ ಸೃಜನಶೀಲ ಬರವಣಿಗೆಗಳನ್ನು ಕನ್ನಡದಲ್ಲಿ ಮತ್ತು ಪತ್ರಿಕೋದ್ಯಮದ ಬರವಣಿಗೆಗಳನ್ನು ಇಂಗ್ಲಿಷ್ ನಲ್ಲಿ ಮುಂದುವರೆಸು” ಎಂದು ಪ್ರೀತಿಯಿಂದಲೇ ಆಜ್ಞಾಪಿಸಿದ್ದರು! ನನಗೂ ಅವರ ಅಭಿಪ್ರಾಯ ಒಪ್ಪಿಗೆಯಾಗಿತ್ತು.

ಆದರೆ ವಿಭಿನ್ನ ಪ್ರಯತ್ನ ಮಾಡುವ ಹಂಬಲ ಹಾಗೆಯೇ ಉಳಿದುಕೊಂಡಿತ್ತು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಹೆಚ್ಚಿನೆಲ್ಲ ಬರವಣಿಗೆಗಳನ್ನು ಕೇವಲ ಇಂಗ್ಲಿಷ್ ಗೆ ಸೀಮಿತಗೊಳಿಸಿ ಹಲವು ವರ್ಷಗಳೇ ಆದವು. ಅದರಿಂದ ಮನಸ್ಸಿಗೆ ಅಂತಹ ಕಿರಿ-ಕಿರಿ ಆಗಲಿಲ್ಲ. ಆ ನಡುವೆ ಕಥೆ ಮತ್ತು ಕಾದಂಬರಿಯ ಕಥಾವಸ್ತು ಎದೆಯಲ್ಲಿ ಮೊಳಕೆಯೊಡೆದಾಗಲೆಲ್ಲ, ಕನ್ನಡ ಮತ್ತು ಇಂಗ್ಲಿಷ್ ಸಂಘರ್ಷ ಮಿತಿ ಮೀರಿ ನಿಂತಿತು. ದಶಕದಿಂದ ಎದೆಯಲ್ಲಿ ಇಟ್ಟುಕೊಂಡಿದ್ದ ‘ಮೋಕ್ಷ’ ಎಂಬ ಕಾದಂಬರಿಯ ಕಥಾ ಹಂದರವನ್ನು ಇಂಗ್ಲಿಷ್ ನಲ್ಲಿ ಬರೆಯುವ ಯತ್ನ ಮಾಡಿದ್ದು ಆಯಿತು. ಒಂದು ಅಧ್ಯಾಯ ಬರೆದ ಮೇಲೆ ಕೂಡ ಮನದೊಳಗಿನ ದ್ವಂದ್ವಕ್ಕೆ ಕೊನೆ ಹಾಡಲಾಗದೇ, ‘ಮೋಕ್ಷ’ಕ್ಕೆ ಮೋಕ್ಷ ನೀಡಲು ಆಗಲೇ ಇಲ್ಲ. ಕೊನೆಗೂ ಆ ದ್ವಂದ್ವದಿಂದ ಹೊರಗೆ ಬರಲು ಸುಮಾರು ಮೂರು ವರ್ಷಗಳಷ್ಟು ದೀರ್ಘ ಕಾಲ ಬೇಕಾಯಿತು. ಕೊನೆಗೂ ಅನಂತಮೂರ್ತಿ ಎದೆಯಾಳದಲ್ಲಿ ಅನಂತವಾಗಿ ಉಳಿದುಕೊಂಡು ಬಿಟ್ಟರು. ಆಗ ಸೃಜನಶೀಲ ಬರವಣಿಗೆಗಳೆಲ್ಲ ಕನ್ನಡದಲ್ಲಿ ಮತ್ತು ನನ್ನ ವೃತ್ತಿಗೆ ಸಂಬಂಧಿಸಿದ ಬರವಣಿಗೆಗಳೆಲ್ಲ ಇಂಗ್ಲಿಷ್ ನಲ್ಲಿ ಎಂಬ ನಿರ್ಧಾರ ಮೂಡಿದ ಮೇಲೆ ಮನಸ್ಸು ಸ್ವಲ್ಪ ನಿರಾಳವಾಯಿತು.
ಆದರೂ ಮನಸ್ಸಿನ ಕಿರಿ-ಕಿರಿ ತಪ್ಪಲಿಲ್ಲ. ಅದಕ್ಕೆ ಒಂದು ಬಲವಾದ ಕಾರಣ ಕೂಡ ಇತ್ತು.

ಮಿದುಳಿನ ನರ-ನರದಲ್ಲಿ ಕಥೆ ಹುಟ್ಟಿ ಹರಿಯುವಾಗ ಆಗುವ ಆ ಆನಂದ ವರ್ಣಿಸಲಸಾಧ್ಯ. ಒಮ್ಮೆ ಮಿದುಳಲ್ಲಿ ಹರಿದಾಡಿ, ಹೃದಯದಲ್ಲಿ ಗಟ್ಟಿಯಾದ ಕಥೆ ಎಂದೂ ನನ್ನನ್ನು ಬಿಟ್ಟು ಹೋಗುವುದಿಲ್ಲ. ಹಾಗೆ ಗಟ್ಟಿಯಾದ ಎಷ್ಟೋ ತಿಂಗಳು, ವರ್ಷದ ನಂತರ ಸಾಮಾನ್ಯವಾಗಿ ಆ ಕಥೆಯನ್ನು ಒಂದೇ ‘ಸಿಟ್ಟಿಂಗ್’ನಲ್ಲಿ ಬರೆದು ಮುಗಿಸುವ ಜಾಯಮಾನ ನನ್ನದು.

ಪತ್ರಿಕಾ ವ್ಯವಸಾಯದಿಂದ ಹೊರಬಂದು, ಮಾಧ್ಯಮ ಲೋಕದಿಂದ ಬಹುದೂರ ಪಯಣಿಸಿದ ಮೇಲೆ, ನಿಜಕ್ಕೂ ಸೃಜನಶೀಲವಲ್ಲದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕೆ ಎಂಬ ಗೊಂದಲ ಕೂಡ ಹುಟ್ಟಿಕೊಂಡಿತ್ತು. ಆ ಗೊಂದಲದ ನಡುವೆಯೇ ‘ಪ್ರಜಾವಾಣಿ’ಯಲ್ಲಿ ಒಂದು ವರ್ಷ ಕಾಲ ‘ಮುಸಾಫಿರ್’ ಅಂಕಣದ ಪಯಣ ಮುಗಿದ ಮೇಲೆ, ಅದು ನನ್ನ ಅಂತ್ಯ ಎಂದೆನ್ನಿಸಿತು. ಅದು ನನ್ನದಲ್ಲದ ಲೋಕ ಎಂಬ ಭಾವ ದೃಢವಾಯಿತು. ಏನಿದ್ದರೂ ಇನ್ನು ಬದುಕಲ್ಲಿ ಇನ್ನು ಮುಂದೆ ಸೃಜನಶೀಲ ಬರವಣಿಗೆ ಮಾತ್ರ ಎಂಬ ಭಾವನೆ ಕೂಡ ಬಲವಾಯಿತು. ಏಕೆಂದರೆ ಯಾವುದೋ ಒಂದು ಹಂತದಲ್ಲಿ ಅನಿವಾರ್ಯವಾಗಿ ಬದುಕಲ್ಲಿ ಹಲವನ್ನು ಬಿಟ್ಟು, ಹೊಟ್ಟೆ ಪಾಡಿಗಾಗಿ ನಮ್ಮದೇ ಆದ ಒಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈಗ ವೈಯಕ್ತಿಕವಾಗಿ ಅಂತಹ ದುಸ್ಥಿತಿಯಿಲ್ಲ. ಆ ಕಾರಣ ಇನ್ನು ಏನಿದ್ದರೂ ಸೃಜನಶೀಲ ಬರವಣಿಗೆ, ಅದರಲ್ಲೂ ಕಥೆ-ಕಾದಂಬರಿ ಮಾತ್ರ ಎಂಬ ನಿರ್ಧಾರ ಬಲವಾಗಿ ಬಿಟ್ಟಿದೆ. ಮೇಲಿನೆಲ್ಲ ಸಮುದ್ರ ಮಥನದ ಪರಿಣಾಮದಿಂದಲೇ ಆಷಾಢದ ಮಳೆ ಮತ್ತೆ ಸುರಿಯುತ್ತಿರುವುದು.

ಸುಮಾರು ಹತ್ತು ವರ್ಷಗಳ ಸೇವೆಯ ನಂತರ 2007ರಲ್ಲಿ ‘ಪ್ರಜಾವಾಣಿ’ಯಿಂದ ಹೊರಬಂದೆ. 1997 ರಿಂದ 2007ರವರೆಗೆ ‘ಪ್ರಜಾವಾಣಿ’ಯಲ್ಲಿ ಇದ್ದ ಸಂದರ್ಭದಲ್ಲಿ ಒಂದೇ ಒಂದು ಕಥೆ ಬರೆಯಲು ಸಾಧ್ಯವೇ ಆಗಿರಲಿಲ್ಲ. ನಂತರ ‘ಟಿವಿ 9’ ನಲ್ಲಿ ಇದ್ದಾಗ ಸೃಜನಶೀಲ ಮನಸ್ಸಿನ ತಿಥಿಯಾಗಿತ್ತು. ಅದಾದ ಮೇಲೆ ‘ದಿ ಸಂಡೆ ಇಂಡಿಯನ್’ ಸೇರಿದ ಮೇಲೆ ಮತ್ತೆ ‘ಕಥೆ’ಗಳು ಹುಟ್ಟಲಾರಂಭಿಸಿದವು. ನಂತರ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕೂಡ ಓದಲು-ಬರೆಯಲು ಸಾಕಷ್ಟು ಅವಕಾಶ ದೊರಕಿತ್ತು. ಕೊನೆಗೆ 2013ರಲ್ಲಿ ‘ದಿಗ್ವಿಜಯ’ ಮುಗಿಸಿ ಪತ್ರಿಕೋದ್ಯಮಕ್ಕೆ ಕೊನೆಯ ನಮಸ್ಕಾರ ಹೊಡೆದ ಮೇಲೆ ನನ್ನೊಳಗಿನ ಕಥೆಗಾರನನ್ನು ನಾನೇ ಮರಳಿ ಹುಡುಕಿಕೊಂಡೆ. ಅದು ಸಾವಿನ ಮನೆಯಿಂದ ಹೊರ ಬಂದಂತಹ ಭೀಕರ ಅನುಭವ. ಈ ನನ್ನ ಮನಸ್ಸಿಗೆ ಜೀವವಿಲ್ಲ ಎಂಬ ಅರಿವಾದ ಮೇಲೆ ಕೂಡ ಹಲವು ವರ್ಷಗಳ ಕಾಲ ಹಗಲು-ರಾತ್ರಿ ಹೋರಾಟ ನಡೆಸಿ ಮರುಜೀವ ಪಡೆದ ಅನುಭವವಿದು. ಸುಮಾರು ಹದಿನೈದು ವರ್ಷಗಳ ಕಾಲ ‘ವೆಂಟಿಲೇಟರ್’ನಲ್ಲಿದ್ದ ಒಂದು ಬಡಜೀವ ಈಗ ಪುನರ್ಜನ್ಮ ತಾಳಿದೆ.
ಅದರ ಫಲವೇ, ‘ವರ್ಜಿನ್ ಮೊಹಿತೊ.’

ಈ ಕಥಾ ಸಂಕಲನದಲ್ಲಿರುವ ಒಂದು ಕಥೆಯನ್ನು ಬಿಟ್ಟು, ಉಳಿದೆಲ್ಲ ಕಥೆಗಳು ಕೂಡ ಆಷಾಢದ ಮಳೆ ಹನಿಗಳ ನಡುವೆಯೇ ಅರಳಿ ನಿಂತವು. ಆ ಒಂದೇ ಒಂದು ಅಪವಾದವೆಂದರೆ ‘ಗರ್ಭ.’ ಈ ಕಥೆ ಹುಟ್ಟಿದ್ದು, ಅದನ್ನು ನಾನು ಬರೆದಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಅದೆಂತಹ ಸನ್ನಿವೇಶ ಎನ್ನುವುದರ ಪೂರ್ಣ ವಿವರಣೆಯನ್ನು ಇಲ್ಲಿ ನೀಡುವ ಅಗತ್ಯವಿಲ್ಲ. ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ ಮುಂಜಾನೆ ಒಂದು ಗಂಟೆ. ಕಥೆ ಮುಗಿಸಿದ್ದು ಮುಂಜಾನೆ ಐದು ಗಂಟೆಗೆ! ಆಗ ಬಾನಲ್ಲಿ ಸೂರ್ಯ ಎದ್ದು ಕೂತು ಮೈ ಮುರಿಯಲಾರಂಭಿಸಿದ್ದ.

‘ಬೇರು’ ಕಥಾ ಸಂಕಲನದಿಂದ ‘ವರ್ಜಿನ್ ಮೊಹಿತೊ’ ವರೆಗೆ ನಾನು ಬರೆದ ಯಾವುದೇ ಕಥೆ ಬಲವಂತವಾಗಿ ಹಡೆದ ಕೂಸಲ್ಲ. ಪ್ರತಿಯೊಂದು ಕಥೆ ಕೂಡ ಅವಾಗಿಯೇ ಬರೆಸಿಕೊಂಡ ತುಣುಕುಗಳು. ಆ ಕಾರಣದಿಂದಲೇ ಕಳೆದ ಇಪ್ಪತೈದು ವರ್ಷಗಳ ಅವಧಿಯಲ್ಲಿ ನನಗೆ ಇಪ್ಪತೈದು ಕಥೆ ಕೂಡ ಬರೆಯಲು ಸಾಧ್ಯವಾಗದೇ ಇರುವುದು. ಹಾಗೆಂದ ಕೂಡಲೇ ಬರೆದ ಕಥೆಗಳೆಲ್ಲ ಶ್ರೇಷ್ಠ ಅಥವಾ ಅತ್ಯುತ್ತಮ ಕಥೆಗಳು ಎಂಬ ಭ್ರಮೆ ನನಗಿಲ್ಲ. ಒಬ್ಬ ನಿಜವಾದ ಕಥೆಗಾರ ಅಥವಾ ಯಾವುದೇ ಸೃಜನಶೀಲ ಲೇಖಕ ಅನುಭವಿಸುವ ‘ಸೃಜನಶೀಲ ಸ್ಖಲನ’ದ ಮುಂದೆ ಶ್ರೇಷ್ಠತೆಯ ವ್ಯಸನಗಳು ನಶ್ವರ. ಯಾವುದೇ ಒಂದು ಸೃಜನಶೀಲ ಕ್ರಿಯೆ ಮುಗಿದ ತತ್ ಕ್ಷಣ ಸಿಗುವ ಆ ಒಂದು ಕ್ಷಣದ ‘ಆ ಸುಃಖ’ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದನ್ನು ಬಿಟ್ಟು ಆನಂತರ ಬರುವ ತೆಗಳಿಕೆ, ಹೊಗಳಿಕೆ, ಅಪ್ರಶಸ್ತಿ, ಪ್ರಶಸ್ತಿಗಳು… ಒಂದು ನಿಜವಾದ ಸೃಜನಶೀಲ ಮನಸ್ಸಿಗರ ಅಂತಹ ಪರಿಣಾಮ ಬೀರುವುದಿಲ್ಲ ಮತ್ತು ಬೀರಲೂ ಬಾರದು. ನನ್ನ ಮೇಲಂತೂ ಆ ಯಾವುವೂ ಯಾವುದೇ ಪರಿಣಾಮ ಬೀರಿಲ್ಲ. ಇನ್ನು ಮುಂದೆ ಕೂಡ ಬೀರಲಾರವು.

ಒಬ್ಬ ಸೃಜನಶೀಲ ಲೇಖಕ, ಕಲಾವಿದ, ಸಂಗೀತಗಾರ… ಯಾರೇ ಆಗಲಿ, ಯಾರಿಗಾಗಿ ಸೃಜನಶೀಲ ಕ್ರಿಯೆಯಲ್ಲಿ ತನ್ಮಯನಾಗುತ್ತಾರೆ? ಎಂಬ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರ, ‘ಅವನಿಗಾಗಿ ಅಥವ ಅವಳಿಗಾಗಿ.’ ಒಬ್ಬ ಕಥೆಗಾರನನ್ನೇ ತೆಗೆದುಕೊಂಡರೆ ಕಥೆ ಹುಟ್ಟುವ, ಬರೆಯುವ, ಸ್ಖಲನದ ಸುಃಖ ಅನುಭವಿಸುವುದು ಆತನಿಗೆ ಮುಖ್ಯವಾಗಿರುತ್ತದೆ. ಅದಕ್ಕಿಂತ ಮೊದಲಿನ ಹಾಗೂ ಆನಂತರದ ಗಳಿಗೆಗಳು ಕಥೆಗಾರನ ಪಾಲಿಗೆ ಅಷ್ಟು ಮುಖ್ಯವಾಗುವುದಿಲ್ಲ. ಅಂತಹ ಒಂದು ಸನ್ನಿವೇಶದಲ್ಲಿ ಎರಡನೇ ಬಾರಿಗೆ ನಾನೀಗ ನಿಂತಿದ್ದೇನೆ.

ಅದೃಷ್ಟವೋ ಅಥವ ದುರಾದೃಷ್ಟವೋ, ‘ವರ್ಜಿನ್ ಮೊಹಿತೊ’ದ ಯಾವುದೇ ಕಥೆ ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ‘ಬೊಂಬಾಯಿ ಪೆಟ್ಟಿಗೆ’ಯನ್ನು ಪ್ರಕಟಿಸುವಂತೆ ಎರಡು ದಿನ ಪತ್ರಿಕೆಗಳ ಭಾನುವಾರದ ಪುರವಣಿ ವಿಭಾಗದ ಸಂಪಾದಕರ ಬಳಿ ಕೇಳಿಕೊಂಡೆ. ಆ ಎರಡೂ ಆತ್ಮೀಯ ಗೆಳೆಯರು ಕಥೆಯನ್ನು ಓದಿ ಮೆಚ್ಚುಗೆ ಕೂಡ ಸೂಚಿಸಿದರು. ಒಬ್ಬ ಪ್ರಧಾನ ಸಂಪಾದಕರಂತೂ, “ಕಥೆ ಓದಿದ ಕೂಡಲೇ ಯಶವಂತ ಚಿತ್ತಾಲರು ನೆನಪಾದರು” ಎಂದು ಕೂಡ ಮನಸ್ಸು ಬಿಚ್ಚಿ ಹೇಳಿದರು, ಉತ್ಸಾಹ ತುಂಬಿದರು. ಆದರೆ, “ಹೆಚ್ಚೆಂದರೆ ಎಂಟುನೂರು ಪದಗಳು. ಅದಕ್ಕಿಂತ ಜಾಸ್ತಿ ಇದ್ದರೆ ಪ್ರಕಟಿಸಲು ಆಗುವುದಿಲ್ಲ” ಎಂಬ ಪ್ರಾಮಾಣಿಕ ಉತ್ತರ ಅವರಿಂದ ಬಂತು. ಮತ್ತೊಬ್ಬರು, “ಒಂದು ಕೆಲಸ ಮಾಡಿ ಸರ್! ನಿಮ್ಮ ಕಥೆಯನ್ನ ಎಂಟುನೂರು ಪದಗಳಿಗೆ ಎಡಿಟ್ ಮಾಡಿ ಕಳುಹಿಸಿ” ಎಂಬ ಅಮೋಘ ಸಂದೇಶ ನೀಡಿದರು. “ಏನು ಸ್ವಾಮಿ, ಎಡಿಟ್ ಮಾಡೋಕೆ ಕಥೆಯೇನು ಲೇಖನವೇ? ಲೇಖನಗಳನ್ನಾದರೆ ಎಡಿಟ್ ಮಾಡಬಹುದು. ಆದರೆ, ಕಥೆಗಳನ್ನು ಎಡಿಟ್ ಮಾಡಲಾಗುವುದಿಲ್ಲ. ನನಗಂತೂ ಅದು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬಿಡಿ” ಎಂದು ನಗು-ನಗುತ್ತಲೇ ಅವರಿಗೆ ಉತ್ತರ ನೀಡಿದ್ದೆ. ಪತ್ರಿಕಾ ವ್ಯವಸಾಯದ ಒಳಹೊರಗನ್ನು ಬಲ್ಲ ನನಗೆ ಆ ಆತ್ಮೀಯ ಸ್ನೇಹಿತರಿಬ್ಬರ ಬಗ್ಗೆ ಮರುಕ ಉಂಟಾಯಿತೇ ಹೊರತೂ ಕೋಪ ಉಕ್ಕಲಿಲ್ಲ.

ಮಾಧ್ಯಮ ಈಗ ಉದ್ಯಮವಾಗಿರುವ ಹಿನ್ನಲೆಯಲ್ಲಿ ಸಂಪಾದಕರ ಸ್ಥಾನ ‘ಬ್ರಾಂಡಿಂಗ್ ಡಿರೆಕ್ಟರ್’ಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳುತ್ತಿದೆ. “ಯಾಕ್ರೀ ಅಷ್ಟೊಂದು ದೊಡ್ಡ-ದೊಡ್ಡ ಲೇಖನ, ಕಥೆ ಹಾಕಿ ಜಾಗ ಹಾಳು ಮಾಡ್ತೀರಾ? ಯಾರೀ ಓದುತ್ತಾರೆ ಅವನ್ನ. ನಾವು ತರೋ ಜಾಹೀರಾತುಗಳಿಗೆ ಒಗ್ಗುವ ರೀತಿಯಲ್ಲಿ ಸಣ್ಣ-ಸಣ್ಣ ಲೇಖನಗಳು ಅಥವಾ ಕಥೆ ಪ್ರಕಟಿಸಿ. ಈಗ ಎಲ್ಲವೂ ಷಾರ್ಟ್ ಅಂಡ್ ಸ್ವೀಟ್ ಆಗಿರಬೇಕು. ಯಾರೀ ನಿಮ್ಮ ಪುರಾಣ ಓದುತ್ತಾರೆ?” ಎಂಬ ಮಾತುಗಳನ್ನು ಮ್ಯಾನೇಜ್ಮೆಂಟ್ ಸಭೆಗಳಲ್ಲಿ ನನ್ನ ಕಿವಿಗಳೇ ಕೇಳಿಸಿಕೊಂಡಿವೆ. ಒಬ್ಬ ಸಂಪಾದಕ ಮಿತ್ರರಂತೂ, “ನಮ್ಮ ಮಾಲೀಕರಿಗೆ ಕಥೆ-ಕವಿತೆ ಅಂದ್ರೆ ಅಲರ್ಜಿ. ಪುಸ್ತಕಗಳ ವಿಮರ್ಶೆ ಅಂದರೆ ಕೋಪ ಬರುತ್ತೆ. ಅವುಗಳ ಬದಲು ಬಾಬಾ ರಾಮದೇವ, ರವಿಶಂಕರ್ ಗುರೂಜಿ, ನಿತ್ಯಾನಂದನ ಬಗ್ಗೆ ಒಳ್ಳೆ ಲೇಖನ ಬರೆದು ಪ್ರಕಟಿಸಿ ಎಂಬ ಆದೇಶ ನೀಡಿದ್ದಾರೆ” ಎಂದು ಗುಟ್ಟಾಗಿ ಹೇಳಿಕೊಂಡಿದ್ದರು. ಈಗಂತೂ ಭಾನುವಾರದ ಪುರವಣಿಗಳಲ್ಲಿ ಕಥೆ ಹಾಗೂ ಕವನ ಕ್ಯೂಆರ್ ಕೋಡ್ ಆಗಿ ಪರಿವರ್ತನೆಗೊಂಡು ಬಿಟ್ಟಿವೆ!

ಅವೆಲ್ಲವನ್ನೂ ಕೇಳಿ, ಅನುಭವಿಸಿ, ತಿರಸ್ಕಾರಕ್ಕೆ ಒಳಗಾದ ಮೇಲೆ ಇಲ್ಲಿರುವ ಯಾವುದೇ ಕಥೆಯನ್ನು ಪತ್ರಿಕೆ ಅಥವಾ ನಿಯತಕಾಲಿಕಗಳಿಗೆ ತಿರುಗಿ ಕಳುಹಿಸುವ ಧೈರ್ಯ ಮಾಡಲಿಲ್ಲ. ಆ ನಿರಾಳ ಮನೋಭಾವದಿಂದಲೇ ‘ವರ್ಜಿನ್ ಮೊಹಿತೊ’ವನ್ನು ‘ಪ್ರಕಾಶ’ಕರ ಕೈಗೆ ತಲುಪಿಸುವುದು ಮಾತ್ರ ನನ್ನ ಕರ್ತವ್ಯ ಎಂದುಕೊಂಡೆ. ಅವರು ಪ್ರಕಟಿಸಿದಲ್ಲಿ ಅದು ಓದುಗರ, ಸಾಹಿತ್ಯಾಸಕ್ತರ ಕೂಸು; ಇಲ್ಲವಾದಲ್ಲಿ ಇಲ್ಲ ಎಂದುಕೊಂಡಿದ್ದೆ. ಅದೀಗ ಸಾಧ್ಯವಾಗಿದೆ. ಈ ನಡುವೆ ಆಷಾಢದ ಮಳೆಯ ನಡುವೆ ಮಿಂದೆದ್ದ ಸುಃಖ ಮಾತ್ರ ನನ್ನದು.

ಒಬ್ಬ ಕಥೆಗಾರನ ಬದುಕು ಧನ್ಯವಾಗಲು ಆಗೊಮ್ಮೆ-ಈಗೊಮ್ಮೆ ಇಂತಹ ಸುಃಖ-ಸಮಾಧಾನ ಸಿಕ್ಕರೆ ಸಾಕು. ಉಳಿದಂತೆ ಎಲ್ಲ ಸೃಜನಶೀಲ ಕೃತಿಗಳು ಓದುಗರು, ಕೇಳುಗರು ಅಥವಾ ನೋಡುಗರ ಆಸ್ತಿ. ಆ ಭಾವನೆಗಳನ್ನೇ ತುಂಬಿಕೊಂಡು ‘ವರ್ಜಿನ್ ಮೊಹಿತೊ’ವನ್ನು ನಿಮ್ಮ ಕೈಗೆ ತಲುಪಿಸುತ್ತಿದ್ದೇನೆ. ಈ ಸಂಕಲನದಲ್ಲಿರುವ ಕಥೆಗಳನ್ನು ಓದುಗ ಮಹಾಪ್ರಭುಗಳಾದ ನೀವು ಇಷ್ಟ ಪಟ್ಟರೆ, ಒಂದೆರಡು ಉತ್ಸಾಹದ ಮಾತುಗಳನ್ನಾಡಿದರೆ, ಒಂದಿಷ್ಟು ಟೀಕಿಸಿದರೆ ನನ್ನೊಡಲಲ್ಲಿ ಮತ್ತೊಂದಿಷ್ಟು ಕಥೆಗಳು ಹುಟ್ಟಲು ಸಹಾಯವಾಗಬಹುದು. ಆ ಮೂಲಕ ನಾನು ಮತ್ತೆ-ಮತ್ತೆ ಜೀವಂತವಾಗಿ ಬದುಕಲು ನೀವು ನೆರವು ನೀಡಬಹುದು.
ವಂದನೆಗಳು.

(‘ವರ್ಜಿನ್ ಮೊಹಿತೊ’ ಕಥಾ ಸಂಕಲನ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 120/-)