ಹಣವಿಲ್ಲದವರು ಸಿನಿಮಾ ನೋಡಲು ಮುಂದಗಡೆ ಸಾಲಿನಲ್ಲಿ ನೆಲದ ಮೇಲೆ ಕುಳಿತು ನೋಡುವ ವಿಭಾಗಕ್ಕೆ ಗಾಂಧಿ ಕ್ಲಾಸ್ ಎಂದೆ ಹೆಸರು. ಅದು ಮೊದ ಮೊದಲು ವ್ಯಂಗ್ಯ ಮಾಡುವ ಹಾಗೆ ಇದ್ದರೂ, ಈಗ ಅದೇ ನಿಜವಾಗಿ ಹೋಗಿದೆ. ಯಾರಾದರೂ ನ್ಯಾಯವಾದ ಮಾರ್ಗದಲ್ಲಿ ನಡೆದರೆ, ಗಾಂಧಿ ತರ ಆಡಬೇಡ ಎಂದು ಹಂಗಿಸುತ್ತಾರೆ. ದುಂದು ವೆಚ್ಚ ಮಾಡದೆ, ಸಾಧಾರಣ ಜೀವನ ನಡೆಸಿದರೆ ಅವರಿಗೆ ಗಾಂಧಿ ಎನ್ನುವ ಹಣೆಪಟ್ಟಿ ಹಚ್ಚಿ ನಗುತ್ತಾರೆ. ಯಾವ ಹೆಸರನ್ನು ಕೇಳಿ ಹೆಮ್ಮೆ ಪಡಬೇಕೋ, ಯಾರ ಹೆಸರನ್ನು ನಮ್ಮ ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಸಂತಸ ಪಡಬೇಕೊ, ಅಂತಹ ಹೆಸರನ್ನು ಜಗತ್ತು ವ್ಯಂಗ್ಯವಾಗಿ ಉಪಯೋಗಿಸುತ್ತಿರುವುದು ಎಷ್ಟು ನೋವಿನ ಸಂಗತಿ. ಪ್ರಶಾಂತ್‌ ಬೀಚಿ ಅಂಕಣ

 

ರಾಜಕಾರಣ ಎಂದರೆ ಎಷ್ಟು ಒಳ್ಳೆಯ ಪದ, ಗೌರವದ ಕೆಲಸ, ಪರೋಪಕಾರದ ಸಂತೃಪ್ತಿ, ಶಕ್ತಿಯ ಸದುಪಯೋಗ. ಆದರೆ ಈಗಿನ ಕಾಲದಲ್ಲಿ ಯಾರಾದರು ಮೋಸ ಮಾಡಿದರೆ, ನಂಬಿಸಿ ಕೈ ಕೊಟ್ಟರೆ, ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ, ಸುಳ್ಳು ಹೇಳಿದರೆ. ಅದಕ್ಕೆಲ್ಲಾ ಹೇಳುವುದು ರಾಜಕಾರಣ ಮಾಡುತ್ತಾರೆಂದು. ವಿಪರ್ಯಾಸವೆಂದರೆ ರಾಜಕಾರಣಿಗಳೆ ಈ ಪದವನ್ನು, ಹಂಗಿಸುವ ಅಥವ ವ್ಯಂಗ್ಯಮಾಡುವ ರೀತಿಯಲ್ಲಿ ಉಪಯೋಗಿಸುತ್ತಾರೆ.

ನಾನು ಚಿಕ್ಕವನಿದ್ದಾಗಿನಿಂದಲೂ ಗಮನಿಸಿದ ಒಂದು ವಿಷಯವೇನೆಂದರೆ, ಯಾವುದೇ ಅತೀ ಒಳ್ಳೆಯ ವ್ಯಕ್ತಿ ಅಥವ ಕೆಲಸವನ್ನು ಜನರು ಪಾಲಿಸಲು ಬಹಳ ಕಷ್ಟವೆನಿಸಿದಾಗ, ಅದನ್ನು ವ್ಯಂಗ್ಯ ಮಾಡುವುದಕ್ಕೆ ಶುರುಮಾಡುತ್ತಾರೆ.

ಮೋಹನ್‍ದಾಸ್ ಕರಮ್‌ಚಂದ್ ಗಾಂಧಿ, ಎಲ್ಲರ ಬಾಯಿಯಲ್ಲಿ ಪ್ರಚಲಿತವಾಗಿ ‘ಗಾಂಧೀಜಿ’ ಎಲ್ಲಾ ಭಾರತೀಯನಿಗೂ ಗೊತ್ತಿರುವ ವ್ಯಕ್ತಿ. ಈಗಿನ ಹೊಸ ಪೀಳಿಗೆಯ ಹುಡುಗರಿಗೆ ಗಾಂಧಿಯ ಬಗ್ಗೆಯಾಗಲೀ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯಾಗಲೀ, ಸ್ವಾತಂತ್ರ್ಯ ಪೂರ್ವ ವಿಷಯಗಳ ಬಗ್ಗೆ ತಿಳುವಳಿಗೆ ಕಡಿಮೆ. ಇನ್ನೂ ಆಂಗ್ಲರ ಅತಿಕ್ರಮಣಕ್ಕಿಂತ ಮುಂಚಿನ ಭಾರತದ ಬಗ್ಗೆ ಅವರಿಗೆ ಅರಿವೇ ಇಲ್ಲ. ಈಗ ಗಾಂಧಿಜಿಯ ವಿಷಯಕ್ಕೆ ಬರೋಣ. ಅವರ ಹೋರಾಟದ ಬಗ್ಗೆ ಮತ್ತು ನಿಲುವುಗಳ ಬಗ್ಗೆ ಪರ ವಿರೋಧ ಏನೇ ಇದ್ದರೂ ಅವರು ಭಾರತದ ರಾಷ್ಟ್ರಪಿತಾ. ಅವರ ಜೀವನ ಈಗಿನವರಿಗೆ ನಡೆಸಲು ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಕಷ್ಟ. ಹಾಗಾಗಿ ಅವರ ಹಾಗೆ ಸಾಧಾರಣ ಜೀವನ ಮಾಡಿದರೆ ಗಾಂಧಿ ಎನ್ನುವ ವ್ಯಂಗ್ಯ ಕೇಳಿಬರುತ್ತದೆ. ಹಣವಿಲ್ಲದವರು ಸಿನಿಮಾ ನೋಡಲು ಮುಂದಗಡೆ ಸಾಲಿನಲ್ಲಿ ನೆಲದ ಮೇಲೆ ಕುಳಿತು ನೋಡುವ ವಿಭಾಗಕ್ಕೆ ಗಾಂಧಿ ಕ್ಲಾಸ್ ಎಂದೆ ಹೆಸರು. ಅದು ಮೊದ ಮೊದಲು ವ್ಯಂಗ್ಯ ಮಾಡುವ ಹಾಗೆ ಇದ್ದರೂ, ಈಗ ಅದೇ ನಿಜವಾಗಿ ಹೋಗಿದೆ. ಯಾರಾದರೂ ನ್ಯಾಯವಾದ ಮಾರ್ಗದಲ್ಲಿ ನಡೆದರೆ, ಗಾಂಧಿ ತರ ಆಡಬೇಡ ಎಂದು ಹಂಗಿಸುತ್ತಾರೆ. ದುಂದು ವೆಚ್ಚ ಮಾಡದೆ, ಸಾಧಾರಣ ಜೀವನ ನಡೆಸಿದರೆ ಅವರಿಗೆ ಗಾಂಧಿ ಎನ್ನುವ ಹಣೆಪಟ್ಟಿ ಹಚ್ಚಿ ನಗುತ್ತಾರೆ. ಯಾವ ಹೆಸರನ್ನು ಕೇಳಿ ಹೆಮ್ಮೆ ಪಡಬೇಕೋ, ಯಾರ ಹೆಸರನ್ನು ನಮ್ಮ ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಸಂತಸ ಪಡಬೇಕೊ, ಅಂತಹ ಹೆಸರನ್ನು ಜಗತ್ತು ವ್ಯಂಗ್ಯವಾಗಿ ಉಪಯೋಗಿಸುತ್ತಿರುವುದು ಎಷ್ಟು ನೋವಿನ ಸಂಗತಿ. ರಾಜಕಾರಣವೂ ಹಾಗೆ ಆಗಿದೆ.

ರಾಜಕಾರಣದ ಒಳಗುಟ್ಟನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೂ, ನನಗೆ ರಾಜಕಾರಣಿಗಳ ನೇರ ಒಡನಾಡ ಇಲ್ಲದಿದ್ದರೂ ಮೊದಲಿನಿಂದಲೂ ರಾಜಕೀಯ ಮತ್ತು ರಾಜಕಾರಣದಲ್ಲಿ ವಿಶೇಷವಾದ ಆಸಕ್ತಿ. ಪ್ರತೀ ಚುನಾವಣೆಯಲ್ಲೂ ಎಲ್ಲಾ ರಾಜಕೀಯ ಪಕ್ಷಗಳ ನಡೆ, ಚುನಾವಣೆಗೆ ನಿಲ್ಲುವವರ ಹೊಡೆದಾಟ, ಬೆಂಬಲಿಗರ ಗುದ್ದಾಟ ಬಹಳ ವಿಚಿತ್ರವಾಗಿ ಕಾಣುತ್ತದೆ. ಬೇರೆ ಬೇರೆ ದೇಶಗಳಲ್ಲಿ, ಖಂಡಗಳಲ್ಲಿ ಚುನಾವಣೆಯನ್ನು ನೋಡಿದಾಗ, ಈ ಚುನಾವಣೆ ಎನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.

ಭಾರತದಲ್ಲಿ ನೆಡೆಯುವ ರಾಜಕೀಯ ಚುನಾವಣೆ ಬಗ್ಗೆ ಹೇಸಿಗೆ ಮೂಡಿ, ತಾನ್ಜಾನಿಯಾದಂತ ಬಡ ರಾಷ್ಟ್ರದಲ್ಲಿ ನೋಡಿದಾಗ, ಹೆದರಿಕೆ ಶುರುವಾಗಿತ್ತು. ಭಾರತಲ್ಲಿ ಚುನಾವಣೆ ಜನರಿಗೆ ಮೋಸಮಾಡುವ ಒಂದು ಪದ್ಧತಿಯಾದರೆ ಆಫ್ರಿಕಾದ ಅನೇಕ ದೇಶಗಳಲ್ಲಿ ಚುನಾವಣೆಗಳು ನೂರಾರು, ಸಾವಿರಾರು ಪ್ರಾಣಗಳನ್ನು ತೆಗೆಯುತ್ತವೆ. ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಚುನಾವಣೆಗಳು ಗಮನಕ್ಕೆ ಬಾರದ ಹಾಗೆ ಮುಗಿದೆ ಹೋಗುತ್ತವೆ. ಮುಂದುವರೆದ ದೇಶಗಳ ಚುನಾವಣೆಯ ಪ್ರಕ್ರಿಯೆ ಬಹಳ ಭಿನ್ನ. ಎಲ್ಲವೂ ಪ್ರಜಾ ಪ್ರಭುತ್ವದ ಚುನಾವಣೆಗಳೇ ಆದರೂ ಬಹಳ ವಿಭಿನ್ನ.

ಭಾರತದ ಮತ್ತು ಅದರಲ್ಲೂ ಕರ್ನಾಟಕದ ರಾಜಕಾರಣದ ಚಿತ್ರಣ ಸುಮಾರು ದಶಕಗಳಿಂದ ಬದಲಾಗಿಲ್ಲ. ಈಗಲೂ ಹಣ, ಹೆಂಡ, ಜಾತಿ, ತೋಳ್ಬಲದಿಂದ ಗೆದ್ದುಬರುವುದೇ ಪ್ರತೀತಿಯಾಗಿದೆ. ಅಲ್ಲಲ್ಲಿ ಆಗಾಗ ನೇರ ನಡೆಯ ಜನ ಚುನಾವಣೆಗೆ ಬಂದರೂ, ಹೇಳ ಹೆಸರಿಲ್ಲದ ಹಾಗೆ ಕಾಣೆಯಾಗಿ ಹೋಗುತ್ತಾರೆ ಜನರನ್ನು ದೂರಿದರೆ ಮತ ಸಿಗುವುದಿಲ್ಲ ಎನ್ನುವ ಒಂದೇ ಹೆದರಿಕೆಗೆ ಜನರನ್ನು ಓಲೈಸುತ್ತಾ ಮತ ಕೇಳುತ್ತಾರೆ. ಭ್ರಷ್ಟರನ್ನು, ಲಂಚಕೋರರನ್ನು, ಲೂಟಿ ಹೊಡೆಯುವವರನ್ನು ಆರಿಸುವುದು ಜನರೆ ಅಲ್ಲವೆ?

ಸಣ್ಣ ಮಟ್ಟದ ಚುನಾವಣೆ ಕರ್ನಾಟಕದಲ್ಲಿ ಸಾಗುತ್ತಿದೆ. ಜನರ ಅನಾನುಕೂಲತೆ ಏನಿದೆ, ಯಾವ ಯಾವ ಸೌಕರ್ಯದಿಂದ ವಂಚಿತರಾಗಿದ್ದಾರೆ, ಜೀವನವನ್ನು ಹೇಗೆ ಉತ್ತಮಗೊಳಿಸಬಹುದು ಎನ್ನುವ ಯಾವುದೇ ಮಾತನ್ನು ಯಾವ ಚುನಾವಣ ಅಭ್ಯರ್ಥಿಯೂ ಮಾತನಾಡುತ್ತಿಲ್ಲ, ತಾನು ಏನು ಮಾಡುತ್ತೇನೆ ಎನ್ನುವ ಬದಲು, ಬೇರೆ ಪಕ್ಷದವರು ಏನೇನು ತಪ್ಪು ಮಾಡುತ್ತಾರೆ, ಎಷ್ಟು ಮಾಡಿದ್ದಾರೆ ಎಂದು ಹೇಳಿ, ತಮ್ಮ ತಪ್ಪುಗಳು ಅವುಗಳ ಮುಂದೆ ಬಹಳ ಕಡಿಮೆ ಎಂದು ಬೀಗುತ್ತಾರೆ. ಜನ ಕೂಡ ತಮ್ಮ ಜಾತಿಯವ ಅಥವ ತನ್ನ ಬೆಂಬಲಿತ ಪಕ್ಷದವ ಎಂದು ಮತ ಹಾಕಿ ಮಂಕಾಗುತ್ತರೆ.

ಒಂದು ಸರ್ಕಾರ ಅಥವ ಒಂದು ದೇಶ ಮುಖ್ಯವಾಗಿ ನಾಕರೀಕರ ಮೂಲಭೂತ ಅವಶ್ಯಕತೆಯನ್ನು ಪೂರೈಸಬೇಕು. ಅದಕ್ಕೆಂದೆ ಪ್ರತೀ ನಾಗರೀಕರಿಂದ ತೆರಿಗೆಯನ್ನು ಪಡೆದುಕೊಳ್ಳುತ್ತದೆ. ಆದಾಯ ತೆರಿಗೆ ಕಟ್ಟದ ನಾಗರೀಕ ಕೂಡ ತಾನು ಖರೀದಿಸುವ ಪ್ರತೀ ವಸ್ತುವಿನ ಬೆಲೆಯಲ್ಲಿ ತೆರಿಗೆಯನ್ನು ಕೊಟ್ಟಿರುತ್ತಾನೆ. ಆ ತೆರಿಗೆಯ ಹಣದಿಂದ ಪ್ರತೀ ನಾಗರೀಕನಿಗೆ ಕುಡಿಯಲು ಯೋಗ್ಯವಾದ ನೀರು, ಅನುಕೂಲಕ್ಕೆ ವಿದ್ಯುತ್ತು, ಮಕ್ಕಳ ಉತ್ತಮ ಭವಿಷ್ಯಕ್ಕೆ ಉಚಿತ ವಿದ್ಯಾಭ್ಯಾಸ ಮತ್ತು ಎಲ್ಲಾ ನಾಗರೀಕರಿಗೆ ಉಚಿತ ಆರೋಗ್ಯದ ನಿರ್ವಹಣೆ ಮಾಡಲೇಬೇಕು. ಇದನ್ನೆಲ್ಲಾ ಜನಸಾಮಾನ್ಯರು ಎಲ್ಲಿಯ ತನಕ ಕೇಳುವುದಿಲ್ಲವೋ, ಅಲ್ಲಿಯ ತನಕ ರಾಜಕಾರಣಿಗಳು ತಮ್ಮ ತಮ್ಮ ಮನೆಯನ್ನಷ್ಟೆ ಜೋಪಾನ ಮಾಡಿಕೊಳ್ಳುತ್ತಾರೆ.

ಗಾಂಧೀಜಿಯ ಸರಳ ಜೀವನ ಎಲ್ಲರಿಗೂ ಹೆಮ್ಮೆಯ ಪ್ರತೀಕವಾಗಲಿ, ರಾಜಕಾರಣದ ಅರ್ಥ ನ್ಯಾಯವಾದುದು ಎಂದು ತಿಳಿಯಲಿ. ಎಲ್ಲಾ ನಾಗರೀಕರ ಬದುಕು ಹಸನಾಗಿಸುವ ರಾಜಕಾರಣಿಯನ್ನು ಚುನಾಯಿಸುವ ಬುದ್ಧಿ ಮತ್ತು ಶಕ್ತಿ ಪ್ರತಿಯೊಬ್ಬರಲ್ಲೂ ಬರಲಿ ಎನ್ನುವ ಆಶಯ.