ಈ ಬಾರಿ ಸಿಡ್ನಿ ಮಹಾನಗರ ವಲಯದಲ್ಲಿ ಜಾರಿಗೆ ಬಂದ ಲಾಕ್ ಡೌನ್ ಸ್ವಲ್ಪ ಗಲಾಟೆ ಎಬ್ಬಿಸಿದೆ. ನಗರದ ಪಶ್ಚಿಮ ಬಡಾವಣೆಗಳಲ್ಲಿ ಹೆಚ್ಚು ಡೆಲ್ಟಾ ವೈರಸ್ ಸೋಂಕು ಕಾಣಿಸಿದ್ದು ವರದಿಯಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿರುವ, ಅನೇಕತೆಗಳಿರುವ- ಅಂದರೆ ಆಂಗ್ಲೋ-ಆಸ್ಟ್ರೇಲಿಯನ್ ಅಲ್ಲದ ಬೇರೆ ಸಂಸ್ಕೃತಿಗಳ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲವೆಂದು ಸುದ್ದಿಯಾಗಿತ್ತು. ರಾಜ್ಯಸರ್ಕಾರ ಆ ಬಡಾವಣೆಗಳಲ್ಲಿ ಬಂದೋಬಸ್ತು ಮಾಡಲು, ಜನರಿಗೆ ಎಚ್ಚರಿಕೆ ನೀಡಲು ಪೊಲೀಸರನ್ನು ಕಳಿಸಿತು. ಇದು ಅಲ್ಲಿನ ವಿವಿಧ ಸಂಸ್ಕೃತಿಗಳ, ಮುಖ್ಯವಾಗಿ ಅರೇಬಿಕ್ ಸಂಸ್ಕೃತಿಗಳ ಜನಸಮುದಾಯಗಳಲ್ಲಿ ಗಾಬರಿ ಹುಟ್ಟಿಸಿ ಅನಾವಶ್ಯಕ ಅವರನ್ನು ಆತಂಕಕ್ಕೀಡು ಮಾಡಿದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

ಒಬ್ಬರ ಮುಖದಲ್ಲಿ ಮಂದಹಾಸ, ಮುಗುಳ್ನಗೆ, ಗೆಲುವಿನ ನಗು ಮತ್ತು ನಿರಾಳ ಭಾವನೆ. ಮತ್ತೊಬ್ಬರ ಮುಖದಲ್ಲಿ ಚಿಂತೆ, ವಿಷಣ್ಣತೆ, ಕಟ್ಟಿಹಾಕಿರುವ ಭಾವನೆ. ನಾನು ಹೇಳುತ್ತಿರುವ ಇವರಿಬ್ಬರು ಅಕ್ಕಪಕ್ಕ ರಾಜ್ಯಗಳ ಮಹಿಳಾ ಮುಖ್ಯಮಂತ್ರಿಗಳು. ಗೆದ್ದೆನೆಂಬ ಮಂದಹಾಸ ಸೂಸುತ್ತಿರುವುದು ನಮ್ಮ ರಾಣಿರಾಜ್ಯ ‘ಕ್ವೀನ್ಸ್‌ಲ್ಯಾಂಡ್’ನ ಪ್ರಿಮಿಯರ್ ಅಂದರೆ ಮುಖ್ಯಮಂತ್ರಿ. ಸೋತುಸೊರಗಿದ ಭಾವನೆ ಹೊತ್ತವರು ನಮ್ಮ ನೆರೆರಾಜ್ಯವಾದ ನ್ಯೂ ಸೌತ್ ವೇಲ್ಸ್ ಮುಖ್ಯಮಂತ್ರಿ. ಇದೇನು, ಇದಕ್ಕೆ ಒಲಿಂಪಿಕ್ಸ್ ಪದಕಗಳು ಕಾರಣವೇ ಎಂದು ನೀವು ಕೇಳಿದರೆ ಉಹುಂ, ಅಲ್ಲವೇ ಅಲ್ಲ. ಮತ್ತೊಮ್ಮೆ ನೀವು ಉತ್ತರಿಸಲು ಪ್ರಯತ್ನಿಸಿದರೆ ಖಂಡಿತವಾಗಿಯೂ ಸರಿಯಾದ ಊಹೆಯನ್ನೇ ಮಾಡಿಬಿಡುತ್ತೀರಿ.

(ಅನಸ್ತೇಸಿಯಾ- Annastacia Pałaszczuk)

ತನ್ನ ಎರಡನೇ ಸುತ್ತಿನ ಆಟದಲ್ಲಿ ಕೋವಿಡ್-೧೯ ಎನ್ನುವ ಚತುರ ಮಾಯಾವಿ ಮತ್ತೊಮ್ಮೆ ಆಸ್ಟ್ರೇಲಿಯಾದ ಕೆಲ ರಾಜ್ಯಗಳ ನಾಯಕಿ/ನಾಯಕರಲ್ಲಿ ನಡುಕ ಹುಟ್ಟಿಸಿದೆ. ಈ ಎರಡನೇ ಸುತ್ತಿನ ಕೊರೋನಾ ಡೆಲ್ಟಾ ವೈರಸ್ಸಿನ ಹಾವಳಿ ಶುರುವಾಗಿದ್ದು ಸಿಡ್ನಿ ನಗರದಲ್ಲಿ. ಸುಮಾರು ಐದು ಮಿಲಿಯನ್ ಜನಸಂಖ್ಯೆಯಿರುವ ಸಿಡ್ನಿ ಮಹಾನಗರ ವಲಯದಲ್ಲಿ ಹಲವಾರು ಪ್ರಸಿದ್ಧ ಮತ್ತು ಜನಜಂಗುಳಿ ತುಂಬಿರುವ ಪಟ್ಟಣಗಳಿವೆ (ಬ್ಲೂ ಮೌಂಟನ್ಸ್, ವೊಲಂಗಾಂಗ್ ಮುಂತಾದವು).  ಮೂರು ತಿಂಗಳ ಹಿಂದೆ ಡೆಲ್ಟಾ ವೈರಸ್ ಸೋಂಕು ಕಾಣಿಸಿ ನಂತರ ನಾಲ್ಕು ಪಟ್ಟಣಗಳನ್ನೊಳಗೊಂಡ ಮಹಾನಗರ ವಲಯದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಹೋದ ವರ್ಷ ಹೀಗೇ ತಿಂಗಳಾನುಗಟ್ಟಲೆ ಲಾಕ್ ಡೌನಿನಲ್ಲಿ ಬದುಕಿದ ಮೆಲ್ಬೋರ್ನ್ ನಗರವಾಸಿಗಳು ‘ಅಯ್ಯೋ ಪಾಪ, ನಿಮಗೂ ಅದೇ ಅವಸ್ಥೆ ಬಂತಲ್ಲ!’ ಎಂದು ಲೊಚಗುಟ್ಟಿದ್ದು ಮೇಲಿನ ನಮ್ಮ ರಾಣಿರಾಜ್ಯದವರಿಗೆ ಚೆನ್ನಾಗಿಯೇ ಕೇಳಿಸಿತ್ತು. ಯಾಕೆಂದರೆ ಇದೇ ಮೆಲ್ಬೋರ್ನ್ ವಾಸಿಗಳು ಹೋದ ವರ್ಷ ತಮ್ಮ ಗಡಿಬಾಗಿಲು ಮುಚ್ಚಿ ಭದ್ರಮಾಡಿದ್ದ ರಾಣಿರಾಜ್ಯದವರ ಮೇಲೆ ಹರಿಹಾಯ್ದಿದ್ದರು. ಅವರಿಂದ ಈಗ ಸಿಡ್ನಿಯವರಿಗೆ ಧಾರಾಳ ಅನುಕಂಪ ಲಭಿಸಿತ್ತು.

ಈ ಬಾರಿ ಸಿಡ್ನಿ ಮಹಾನಗರ ವಲಯದಲ್ಲಿ ಜಾರಿಗೆ ಬಂದ ಲಾಕ್ ಡೌನ್ ಸ್ವಲ್ಪ ಗಲಾಟೆ ಎಬ್ಬಿಸಿದೆ. ನಗರದ ಪಶ್ಚಿಮ ಬಡಾವಣೆಗಳಲ್ಲಿ ಹೆಚ್ಚು ಡೆಲ್ಟಾ ವೈರಸ್ ಸೋಂಕು ಕಾಣಿಸಿದ್ದು ವರದಿಯಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅನೇಕತೆಗಳಿರುವ ಅಂದರೆ ಆಂಗ್ಲೋ-ಆಸ್ಟ್ರೇಲಿಯನ್ ಅಲ್ಲದ ಬೇರೆ ಸಂಸ್ಕೃತಿಗಳ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲವೆಂದು ಸುದ್ದಿಯಾಗಿತ್ತು. ರಾಜ್ಯಸರ್ಕಾರ ಆ ಬಡಾವಣೆಗಳಲ್ಲಿ ಬಂದೋಬಸ್ತು ಮಾಡಲು, ಜನರಿಗೆ ಎಚ್ಚರಿಕೆ ನೀಡಲು ಪೊಲೀಸರನ್ನು ಕಳಿಸಿತು. ಇದು ಅಲ್ಲಿನ ವಿವಿಧ ಸಂಸ್ಕೃತಿಗಳ, ಮುಖ್ಯವಾಗಿ ಅರೇಬಿಕ್ ಸಂಸ್ಕೃತಿಗಳ ಜನಸಮುದಾಯಗಳಲ್ಲಿ ಗಾಬರಿ ಹುಟ್ಟಿಸಿ ಅನಾವಶ್ಯಕ ಅವರನ್ನು ಆತಂಕಕ್ಕೀಡು ಮಾಡಿದೆ ಎಂದು ಸುದ್ದಿಯಾಗಿ ಚರ್ಚೆಗೆ ಬಂದಿದೆ. ಸರಕಾರವು ಬೇಕೆಂತಲೆ ತಮ್ಮಗಳ ವಿಷಯದಲ್ಲಿ ತಾರತಮ್ಯ ಮಾಡಿದೆ ಎಂದು ಅಲ್ಲಿನ ಜನರು ಆಪಾದಿಸಿದ್ದಾರೆ. ನಗರದ ಪೂರ್ವ ವಲಯದಲ್ಲಿ ಸೋಂಕು ಕಾಣಿಸಿದ್ದರೂ, ಅಲ್ಲಿನ ಶ್ರೀಮಂತ ಬಡಾವಣೆಗಳ ಜನರು ನಿಯಮಗಳನ್ನು ಪಾಲಿಸದಿದ್ದರೂ ಅವರನ್ನು ಪ್ರಶ್ನಿಸದೆ ಸರಕಾರವು ಪಶ್ಚಿಮದ ಮಧ್ಯಮ ಮತ್ತು ಕೆಳ ಆರ್ಥಿಕ ವರ್ಗದ ಜನರು ಬದುಕುವ ಪ್ರದೇಶಗಳ ಬಗ್ಗೆ ಮಾತ್ರ ಮಲತಾಯಿ ಧೋರಣೆ ತಳೆದು ಭೇದಭಾವ ತೋರಿಸಿದೆ ಎನ್ನುವ ಗುಲ್ಲು ಜೋರಾಗಿದೆ. ಬರಿ ಪೊಲೀಸರಲ್ಲದೆ ಕೇಂದ್ರ ಸರಕಾರದಿಂದ ಚಿಕ್ಕದೊಂದು ಸೈನಿಕ ತೂಕಡಿಯನ್ನೂ ಕರೆಸಿಕೊಂಡು ಅವರನ್ನು ಜನರ ನಡುವೆ ಕಳಿಸಿ ಭಯಹುಟ್ಟಿಸುವ ತಂತ್ರವನ್ನು ಮಾಡಲಾಗಿದೆ ಅನ್ನುವ ವಾದವನ್ನು ಜನಸಮುದಾಯಗಳ ನಾಯಕರು ಮುಂದಿಟ್ಟಿದ್ದಾರೆ.

ಹೋದ ವರ್ಷ ಇದೆ ರೀತಿಯ ಗುಲ್ಲು, ವಾದ ವಿವಾದ ಮತ್ತು ಚರ್ಚೆ ಮೆಲ್ಬೋರ್ನ್ ನಗರವಾಸಿಗಳಲ್ಲೂ ಎದ್ದಿತ್ತು. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಒಂದು ಮುಖ್ಯವಾದ ವಿಷಯವನ್ನು ಗಮನಿಸಬೇಕು. ಚಳಿ ತುಂಬಿರುವ ದೂರದ ಬ್ರಿಟನ್ನಿನಿಂದ ಬಂದ ವಸಾಹತುಶಾಹಿಗಳು ಆಸ್ಟ್ರೇಲಿಯಾದಲ್ಲಿ ನೆಲೆಸುವಾಗ ಪೂರ್ವದ ನಯನ ಮನೋಹರ ಸಮದ್ರತೀರಗುಂಟ ನಗರಗಳನ್ನು, ಪಟ್ಟಣಗಳನ್ನು ನಿರ್ಮಿಸಿದರು. ಸಮುದ್ರ ತೀರಕ್ಕೆ ಹತ್ತಿರವಾದ ಬಡಾವಣೆಗಳಲ್ಲಿ ಆಸ್ತಿಪಾಸ್ತಿ ಮಾಡುತ್ತಾ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ಹಂಚಿದರು. ಆ ನಂತರ ಬಂದ ಬಡಪಾಯಿ ವಲಸಿಗರು ನಗರ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಹರಡಿಕೊಂಡರು. ಅದರಲ್ಲೂ ಹೆಚ್ಚಾಗಿ ಅಗಾಧ ವಿಶಾಲತೆಯುಳ್ಳ ಆದರೆ ಅಷ್ಟೇನೂ ಆಹ್ಲಾದಕರ ಹವಾಮಾನವಿಲ್ಲದ ಪಶ್ಚಿಮದಲ್ಲಿ ರೆಂಬೆಕೊಂಬೆಗಳನ್ನು ಬೆಳೆಸಿಕೊಂಡು ಹಬ್ಬಿಕೊಂಡರು. ವಲಸಿಗರಾದ್ದರಿಂದ ಅವರುಗಳು ಆರ್ಥಿಕವಾಗಿ ಶ್ರೀಮಂತರಾಗಲು ಕೆಲ ತಲೆಮಾರುಗಳೇ ಬೇಕಾಗುತ್ತದೆ ಅಲ್ಲವೇ? ಆದರೆ ಆಂಗ್ಲೋ-ಆಸ್ಟ್ರೇಲಿಯನ್ನರಿಗೆ ಕಾಣಿಸಿದ್ದು ಅವರ ಬಡ ಆರ್ಥಿಕತೆ ಮತ್ತು ಅವರುಗಳ ಅನೇಕತೆಗಳುಳ್ಳ ಸಂಸ್ಕೃತಿಗಳು. ಎರಡನ್ನೂ ಅವರು ಮೂದಲಿಸಿ ವಲಸಿಗರನ್ನು ಸ್ವಲ್ಪ ದೂರವೇ ಇಟ್ಟುಬಿಟ್ಟರು. ಅದೇ ಧೋರಣೆ ಈಗಲೂ ಮುಂದುವರೆದಿದೆ ಎಂದು ಕಾಣುತ್ತದೆ.

ಹೋದ ವರ್ಷ ಹೀಗೇ ತಿಂಗಳಾನುಗಟ್ಟಲೆ ಲಾಕ್ ಡೌನಿನಲ್ಲಿ ಬದುಕಿದ ಮೆಲ್ಬೋರ್ನ್ ನಗರವಾಸಿಗಳು ‘ಅಯ್ಯೋ ಪಾಪ, ನಿಮಗೂ ಅದೇ ಅವಸ್ಥೆ ಬಂತಲ್ಲ!’ ಎಂದು ಲೊಚಗುಟ್ಟಿದ್ದು ಮೇಲಿನ ನಮ್ಮ ರಾಣಿರಾಜ್ಯದವರಿಗೆ ಚೆನ್ನಾಗಿಯೇ ಕೇಳಿಸಿತ್ತು.

ಆದರೆ ವಲಸಿಗರ ಮಕ್ಕಳು, ಮೊಮ್ಮಕ್ಕಳು ಈ ನಾಡಿನಲ್ಲೇ ಹುಟ್ಟಿ ಬೆಳೆದವರು. ಅವರ ಮಟ್ಟಿಗೆ ಅವರು ಪೂರ್ತಿಯಾಗಿ ಆಸ್ಟ್ರೇಲಿಯನ್ನರು. ಅಂಥದ್ದೊಂದು ಖಚಿತ ಅಸ್ಮಿತೆಯುಳ್ಳ ಜನರ ನಡುವೆ ಅವರನ್ನು ಸಂಶಯದಿಂದ ನೋಡುತ್ತಾ ರಾಷ್ಟ್ರದ ಸೈನಿಕರನ್ನು, ಹೆಚ್ಚುವರಿ ಪೊಲೀಸರನ್ನು ಬಿಟ್ಟರೆ ಅವರಿಗೆ ಮನ ನೋಯುವುದಿಲ್ಲವೇ? ಒಂದೆಡೆ ಕೊರೋನಾ ವ್ಯಥೆಯ ಕತೆಯನ್ನು ಮುಂದುವರೆಸುವ ಜವಾಬ್ದಾರಿಯುಳ್ಳ ರಾಜ್ಯದ ಮುಖ್ಯಮಂತ್ರಿಗಳಿಗೆ ಇನ್ನೊಂದೆಡೆ ಈ ಜನಾಂಗೀಯ ಭೇದದ ರಗಳೆಯನ್ನು ಇತ್ಯರ್ಥಪಡಿಸುವ ತಲೆನೋವು ಹತ್ತಿಕೊಂಡು ಮುಖ್ಯಮಂತ್ರಿ ಗ್ಲಾಡಿಸ್ ರವರ ಮುಖ ಸದಾ ಜೋತು ಹಾಕಿಕೊಂಡು ವಿಷಣ್ಣತೆ, ಆತಂಕ ತುಂಬಿದ ಕೊಡದಂತೆ ಕಾಣುತ್ತದೆ.

ಸರಿ ವಾಪಸ್ ಮೊದಲಿನ ವಿಷಯಕ್ಕೆ ಬರುತ್ತೀನಿ. ಹೋದ ಶನಿವಾರ ಬೆಳಗ್ಗೆ ಸಿಡ್ನಿ ಮಹಾ ನಗರ ವಲಯದಲ್ಲಿ ಮುನ್ನೂರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಸೋಂಕು ಕೇಸುಗಳು ಪತ್ತೆಯಾಗಿ, ಅಷ್ಟೇ ಅಲ್ಲದೆ ರಾಜ್ಯದ ಇತರ ಭಾಗಗಳಿಗೂ ಡೆಲ್ಟಾ ವೈರಸ್ ಹಬ್ಬಿರುವ ಪುರಾವೆ ಸಿಕ್ಕು, ಇಡೀ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದ್ದರು. ಅಯ್ಯೋ ಪಾಪವೇ ಅನ್ನಿಸಿಬಿಟ್ಟಿತು.

ಇನ್ನು ನಮ್ಮ ರಾಣಿರಾಜ್ಯದ ಕಥೆಗೆ ಬರೋಣ. ನಮ್ಮ ಮುಖ್ಯಮಂತ್ರಿ ಅನಸ್ತೇಸಿಯಾ ರವರ ಮುಖದಲ್ಲಿ ಕಾಣುವ ಮಂದಹಾಸ ಇತ್ತೀಚೆಗೆ ಹೆಚ್ಚಾಗಿದೆ. ಐದಾರು ಕೊರೋನಾ ವೈರಸ್ ಡೆಲ್ಟಾ ಸೋಂಕು ಕೇಸುಗಳು ಪತ್ತೆಯಾದ ಕೂಡಲೇ ನಮ್ಮವರು ಬ್ರಿಸ್ಬೇನ್ ಮಹಾನಗರವಲಯದ ಹನ್ನೊಂದು ನಗರಪಾಲಿಕೆ ಪ್ರದೇಶದಲ್ಲಿ ಧಿಡೀರ್ ಲಾಕ್ ಡೌನ್ ಜಾರಿಗೆ ತರುತ್ತಾರೆ. ದೇವರಾಣೆಗೂ ಅದು ಧಿಡೀರ್ ಉಪ್ಪಿನಕಾಯಿ ಅಥವಾ ಧಿಡೀರ್ ಮಜ್ಜಿಗೆಯಂತೆ ರುಚಿಕರವಾಗಿರುವುದಿಲ್ಲ. ಆದರೂ ವಿಧಿಯಿಲ್ಲದೆ ಒಲ್ಲದ ಔಷಧಿಯನ್ನು ನುಂಗುವ ತರಹ ನಾವೆಲ್ಲಾ ಬಾಯಿಮುಚ್ಚಿಕೊಂಡು ಲಾಕ್ ಡೌನ್ ಆಜ್ಞೆಯನ್ನು ಪಾಲಿಸುತ್ತೀವಿ. ಸೋಂಕುಗಳು ಕಡಿಮೆಯಾಗುತ್ತವೆ. ಗಂಭೀರವಾಗಿದ್ದು ಹುಬ್ಬುಗಂಟಿಕ್ಕಿಕೊಂಡಿದ್ದ ಅನಸ್ತೇಸಿಯಾ ಮುಖಾರವಿಂದ ಮತ್ತೆ ಸಡಿಲವಾಗಿ ಅರಳುತ್ತದೆ.

(ಗ್ಲಾಡಿಸ್- Gladys Berejiklian)

ಜುಲೈ ತಿಂಗಳಲ್ಲಿ ನಾವು ಒಂದು ವಾರದ ಮಟ್ಟಿಗೆ ಲಾಕ್ ಡೌನಿನಲ್ಲಿದ್ದಾಗ ಸಣ್ಣದಾಗಿ ಬೇರೆ ಆಲಾಪನೆಯ ಸ್ವರವೆದ್ದಿದೆ. ಅದು ಅಪಸ್ವರವೋ ಇಲ್ಲಾ ಅವರದ್ದೇ ಆದ ಸಂಗೀತದ ಆಲಾಪನಾ ಸ್ವರವೋ ಇನ್ನೂ ಗೊತ್ತಾಗಿಲ್ಲ. ಬರಿಯ ಬೆರಳೆಣಿಕೆ ಸೋಂಕು ಕೇಸುಗಳಿದ್ದಾಗ ಈಯಮ್ಮ ಯಾಕೆ ಧಿಡೀರ್ ಲಾಕ್ ಡೌನ್ ಹೇರುತ್ತಾರೆ? ಅದರಿಂದ ಉಂಟಾಗುವ ಮನೋಕ್ಲೇಶದ ಬಗ್ಗೆ ನಾವೆಲ್ಲಾ ಮಾತನಾಡಬೇಕು; ಕೇಸುಗಳೇ ಅಷ್ಟೊಂದು ಕಡಿಮೆಯಿರುವಾಗ ಯಾಕೆ ನಾವೆಲ್ಲಾ ಪ್ರತಿಕ್ಷಣವೂ ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಇರಬೇಕು; ಇದೆಲ್ಲ ತುಂಬಾ ಅತಿಯಾಯ್ತು; ಎಲ್ಲವೂ ರಾಜಕೀಯ ತಂತ್ರ ನಂಬಬೇಡಿ ಎನ್ನುವ ಕ್ಷೀಣ ದನಿಗಳ ಸಂಗೀತ ಕೇಳಿಬರುತ್ತಿದೆ. ಕ್ಷೀಣದನಿಗೆ ಸಾಥ್ ಕೊಡಲು ಅಲ್ಲೊಂದು ಇಲ್ಲೊಂದು ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿವೆ. ಆದರೆ ಅವುಗಳಿಗೆ ಪ್ರತ್ಯುತ್ತರ ಕೊಡುವಂಥ ನಿರ್ಧಾರಗಳನ್ನು ರಾಜ್ಯ ಸರಕಾರಗಳು ತೆಗೆದುಕೊಳ್ಳುತ್ತಿವೆ. ಹೋದ ಕೆಲದಿನಗಳಲ್ಲಿ ಆ ನಿರ್ಧಾರಗಳು ಢಾಳಾಗಿ ಕಾಣಿಸುತ್ತಿವೆ.

ಸಿಡ್ನಿ ನಗರದ ಆಗಸದಲ್ಲಿ ಪೊಲೀಸ್ ಹೆಲಿಕಾಪ್ಟರ್ ಗಳು ತಿರುಗಾಡುತ್ತಿವೆಯಂತೆ. ಮೂಳೆ ಕೊರೆಯುವ ಚಳಿಗಾಲದಲ್ಲೂ ಮೈತುಂಬಾ ವೆಟ್ ಸೂಟ್ ಧರಿಸಿ ಸಮುದ್ರದಲ್ಲಿ ಸರ್ಫಿಂಗ್ ಮಾಡುವ ಎಂಟೆದೆ ಬಂಟರ ಮೇಲೆ ಕಣ್ಣಿಡಲು ಪೊಲೀಸ್ ಸಿಬ್ಬಂದಿ ಕುದುರೆಗಳನ್ನೇರಿ ಬೀಚುಗಳಲ್ಲಿ ಬೀಟು ಹಾಕುತ್ತಿದ್ದಾರೆ. ಇನ್ನು ಇತ್ತಕಡೆ ನೋಡಿದರೆ ನಾಗರಿಕರ ಗೋಳುದನಿ ತಾರಕಕ್ಕೇರುತ್ತಿದೆ.

ನಗರದಿಂದ ದೂರ ಪ್ರದೇಶದಲ್ಲಿರುವ ಒಂದು ಬಡಾವಣೆಯಲ್ಲಿ ಈ ಬೀದಿಯಲ್ಲಿ ವಾಸಿಸುವ ಜನ ಪಕ್ಕದ ಬೀದಿಗೆ ಕಾಲಿಡುವಂತಿಲ್ಲ. ಕಾರಣ ಆ ಪಕ್ಕದ ಬೀದಿ ಲಾಕ್ ಡೌನ್ ಸರಹದ್ದಿನೊಳಗೆ ಬರುತ್ತದೆ. ನಮ್ಮ ಬ್ರಿಸ್ಬೇನ್ ನಗರದ ಪಶ್ಚಿಮದಲ್ಲಿರುವ Toowoomba ದಲ್ಲಿ ವಾಸಿಸುವ ಪರಿಚಯದವರು ತಾವು ಪ್ರತಿವಾರ ಹೋಗುವ ಸೂಪರ್ ಮಾರುಕಟ್ಟೆಗೆ ಹೋಗಲು ಮಾಸ್ಕ್ ಹಾಕಿ ಸಿದ್ಧರಾಗಬೇಕು. ಮಾರುಕಟ್ಟೆಯಿರುವ ಬೀದಿ ಬಿಟ್ಟಕೂಡಲೇ ಮಾಸ್ಕ್ ತೆಗೆಯಬಹುದು; ಕಾರಣ ಅವರಿರುವ ಕಡೆ ಲಾಕ್ ಡೌನ್ ಇಲ್ಲ. ಅಂದರೆ, ಆ ಬೀದಿಯಲ್ಲಿ ಕೊರೋನ ಇದೆ, ಇತ್ತಕಡೆ ಅವರ ಬೀದಿಯಲ್ಲಿ ಇಲ್ಲ, ಎಂದು ಜೋಕ್ ಮಾಡುತ್ತಾ ಅವರು ನಕ್ಕಿದ್ದರು. ಈ ದೇಶದ ಇತರೆ ನಗರಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ಗಮನಿಸಿದಾಗ ಅವರ ಜೋಕ್ ಬಾಣ ನಮಗೆ ತಗಲುತ್ತದೆ. ಎಲ್ಲವೂ ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಿಗೆ ಕೇಂದ್ರಿತವಾಗಿದೆ. ದೇಶದ ನೆತ್ತಿಯಲ್ಲಿರುವ ಡಾರ್ವಿನ್ ನಗರದಲ್ಲಿ ಒಂದೇ ಒಂದು ಡೆಲ್ಟಾ ಕೇಸ್ ಕಾಣಿಸಿ ಒಂದು ವಾರದ ಲಾಕ್ ಡೌನ್ ಬಂದಿದೆ. ದೇಶದ ಪಶ್ಚಿಮ ಸಮದ್ರತೀರದಲ್ಲಿರುವ ಪರ್ತ್ ನಗರದಲ್ಲಿ ಅದೇನಾಗುತ್ತಿದೆಯೋ ಏನೋ!! ಕೆಳಗಡೆ ಅಡಿಲೈಡ್ ಮತ್ತು ಹೋಬಾರ್ಟ್ ನಗರಗಳಲ್ಲಿ ಲಾಕ್ ಡೌನ್ ಎಂಬುದು ಅಪರೂಪದ ‘ಹೋದಾ ಪುಟ್ಟಾ, ಬಂದಾ ಪುಟ್ಟಾ’ ಎಂಬಂತಾಗಿದೆ.

ಈ ಪತ್ರವನ್ನು ಮುಗಿಸುವ ವೇಳೆಗೆ ಬಂದಿರುವ ಸುದ್ದಿ ಮೆಲ್ಬೋರ್ನ್ ನಗರದಲ್ಲಿ ಇದ್ದಕ್ಕಿದ್ದಂತೆ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ. ಕಳೆದ ವಾರಾಂತ್ಯದಲ್ಲಿ ಸುಮಾರು ಎಪ್ಪತ್ತು ಜನರು ನಿಶ್ಚಿತಾರ್ಥ ಸಂದರ್ಭದಲ್ಲಿ ಆನಂದಿಸುತ್ತಾ ಮುಖದ ಮಾಸ್ಕ್ ಸರಿಸಿ, ತೆಗೆದು ತಮ್ಮ ಪಾನೀಯ, ತಿಂಡಿತಿನಿಸುಗಳನ್ನು ಸವಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿ ಅದು ಸರಕಾರವನ್ನು ಬೆಚ್ಚಿಬೀಳಿಸಿತ್ತು. ತಲೆಮೇಲಿನ ಸಿಡ್ನಿಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ತಮ್ಮಲ್ಲೂ ಆಗಬಾರದು ಎಂದು ಸರಕಾರವು ರಾತ್ರಿ ಕರ್ಫ್ಯೂ ಜಾರಿಗೆ ತಂದಿದೆ. ಇದನ್ನು ಕೇಳಿ ನ್ಯೂ ಸೌತ್ ವೇಲ್ಸ್ ಮುಖ್ಯಮಂತ್ರಿ ಗ್ಲಾಡಿಸ್ ತಮ್ಮ ಪೆಚ್ಚುಮೋರೆಯ ಮುಖವನ್ನು ಸಡಿಲಿಸಿ ನಕ್ಕರೋ ಬಿಟ್ಟರೊ ವರದಿಯಾಗಿಲ್ಲ. ಅಲ್ಲಿ ಬೆಸ ಇಲ್ಲಿ ಸಮ ಎಂಬ ಸರಿಗಮಕ್ಕೆ ಒಗ್ಗುವ ತಾಳದ ಸರಿ ಸೂತ್ರ ಮಾತ್ರ ಇನ್ನೂ ಯಾರಿಗೂ ಸಿಕ್ಕಿಲ್ಲ. ಗೊಂಬೆಯಾಟವಯ್ಯಾ …