ಡಿಜಿಟಲ್ ಲೋಕವು ಬದುಕಿಗೆ ವೇಗವನ್ನು ಕೊಡುತ್ತದೆ. ಎಲ್ಲಿಗೋ ಪ್ರಯಾಣಿಸುವುದಕ್ಕಾಗಿ ಸಮಯವನ್ನು ಮೀಸಲಿಡಬೇಕಿಲ್ಲ, ಯಾವುದೋ ವಸ್ತುವನ್ನು ತರಿಸಿಕೊಳ್ಳಲು ಸಮಯವನ್ನು ಖರ್ಚು ಮಾಡಬೇಕಿಲ್ಲ. ತಿಂಡಿ ತಿನಿಸು, ಉಡುಪು, ಸಾಮಾಜಿಕ ಚರ್ಚೆಗಳು, ಕಾರ್ಯಕ್ರಮಗಳು, ಸಂಭ್ರಮಗಳೆಲ್ಲವೂ ಡಿಜಿಟಲ್ ಲೋಕವನ್ನು ಸರ ಸರನೇ ಪ್ರವೇಶಿಸಿಬಿಟ್ಟಿವೆ. ಹೀಗೆ ನಮಗೆ ಉಳಿತಾಯವಾಗುವ ಸಮಯವೆಷ್ಟು, ಅದನ್ನು ನಾವು ಹೇಗೆಲ್ಲಾ ಬಳಸುತ್ತೇವೆ ಎಂಬ ಲೆಕ್ಕಪರಿಶೋಧನೆ ಮಾಡಿಕೊಂಡರೆ ಹೊಸ ವರ್ಷದ ಅರ್ಥ ಬದಲಾದೀತು.
ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

ಜಗತ್ತು ಡಿಜಿಟಲ್ ಲೋಕಕ್ಕೆ ಕಾಲಿಟ್ಟು ದಶಕಗಳೇ ಕಳೆದವು. ಆದರೆ ಡಿಜಿಟಲ್ ಪರಿಭಾಷೆಯನ್ನೂ ಸೌಕರ್ಯವನ್ನೂ ಒಪ್ಪಿಕೊಂಡು, ಅಳವಡಿಸಿಕೊಂಡು ವ್ಯವಹಾರ ಮಾಡುವಲ್ಲಿ ನಾವು ಸ್ವಲ್ಪ ನಿಧಾನಗತಿಯನ್ನೇ ಅನುಸರಿಸಿದ್ದೆವು. ಕೋವಿಡೋತ್ತರ ಕಾಲದಲ್ಲಿ ನಾವು ಒಂದಂಶವನ್ನು ಗಮನಿಸಿದ್ದೇವೆ. ಈ ಅವಧಿಯಲ್ಲಿ, ಡಿಜಿಟಲ್ ಲೋಕದ ಕುರಿತು ಎಲ್ಲರೂ ಒಲವನ್ನು ಬೆಳೆಸಿಕೊಂಡರು. ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್‌ಗಳಿಗೆ ಬೈಯ್ಯುತ್ತಿದ್ದವರೂ ಕೂಡ, ಕೋವಿಡ್ ಸಂದರ್ಭದಲ್ಲಿ ಸೋಂಕು ತಡೆಗೆ ಹೇರಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಡಿಜಿಟಲ್ ಸೌಕರ್ಯಗಳನ್ನು ಬಳಸಿದರು. ಬಳಸುವುದನ್ನು ಕಲಿತರು. ಝೂಮ್ ಮೀಟಿಂಗ್‌ಗಳು, ಗೂಗಲ್ ಕ್ಲಾಸ್‌ಗಳು, ಕ್ಲಬ್ ಹೌಸ್ ಪಂಚಾಯಿತಿಗಳು ನಮ್ಮ ಸಾಮಾಜಿಕ ಕೂಡುವಿಕೆಯ ಪರಿಕಲ್ಪನೆಯನ್ನು ಬದಲಾಯಿಸಿದವು. ಅಂದರೆ ಅನಿವಾರ್ಯ ಸಂದರ್ಭಗಳು ಸೃಷ್ಟಿಯಾದಾಗಲೆಲ್ಲ ನಾವು ಎಷ್ಟೋ ವಿಷಯಗಳನ್ನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇವೆ.

ಡಿಜಿಟಲ್ ಲೋಕವು ಬದುಕಿಗೆ ವೇಗವನ್ನು ಕೊಡುತ್ತದೆ. ಎಲ್ಲಿಗೋ ಪ್ರಯಾಣಿಸುವುದಕ್ಕಾಗಿ ಸಮಯವನ್ನು ಮೀಸಲಿಡಬೇಕಿಲ್ಲ, ಯಾವುದೋ ವಸ್ತುವನ್ನು ತರಿಸಿಕೊಳ್ಳಲು ಸಮಯವನ್ನು ಖರ್ಚು ಮಾಡಬೇಕಿಲ್ಲ. ತಿಂಡಿ ತಿನಿಸು, ಉಡುಪು, ಸಾಮಾಜಿಕ ಚರ್ಚೆಗಳು, ಕಾರ್ಯಕ್ರಮಗಳು, ಸಂಭ್ರಮಗಳೆಲ್ಲವೂ ಡಿಜಿಟಲ್ ಲೋಕವನ್ನು ಸರ ಸರನೇ ಪ್ರವೇಶಿಸಿಬಿಟ್ಟಿವೆ.

ಇಲ್ಲೊಂದು ಚಿಕ್ಕ ಉದಾಹರಣೆಯನ್ನು ಕೊಡಬಯಸುತ್ತೇನೆ. ನಾವು ಮಂಗಳೂರಿನಿಂದ ಮಣಿಪಾಲಕ್ಕೆ ತೆರಳಬೇಕಾದರೆ ಹಿಂದೆ ಎರಡು ಗಂಟೆಗೂ ಹೆಚ್ಚು ಸಮಯ ಬೇಕಿತ್ತು. ಇಂದು ಸುಧಾರಿತ ರಸ್ತೆಗಳು, ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡ ವಾಹನಗಳ ಕಾರಣದಿಂದಾಗಿ ಪ್ರಯಾಣದ ಅವಧಿ ಬಹಳವೇ ಕಡಿಮೆಯಾಗಿದೆ. ಹಾಗಿದ್ದರೆ ಈ ರೀತಿಯಲ್ಲಿ ನಮಗೆ ಲಭ್ಯವಾದ ಸಮಯವನ್ನು ನಾವು ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ?

ಇದೇ ತರ್ಕವನ್ನು ಮುಂದುವರೆಸಿ ಹೇಳುವುದಾದರೆ, ಮಣಿಪಾಲದವರೆಗೆ ಹೋಗಲು ವ್ಯಯಿಸುವ ಅಷ್ಟೂ ಸಮಯವನ್ನು ಉಳಿತಾಯ ಮಾಡಿ, ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ನಿರ್ವಹಿಸುವುದು ಇಂದು ಸಾಧ್ಯವಿದೆ. ಹಾಗಿದ್ದರೆ ಉಳಿತಾಯವಾದ ಅಷ್ಟು ಸಮಯವನ್ನು ನಾವು ಹೇಗೆ ಬಳಕೆ ಮಾಡಿಕೊಂಡೆವು?

ಹೌದು, ಹೊಸದೊಂದು ವರ್ಷ ಬಂತೆಂದರೆ ಮುಂಬರುವ ಹಬ್ಬ ಹರಿದಿನಗಳು, ಆಚರಣೆಗಳು, ಮಾಡಬೇಕಾದ ಕೆಲಸಗಳು, ಹಾಕಿಕೊಂಡ ಗುರಿಗಳನ್ನು ತಲುಪುವುದಕ್ಕೆ – ಪೂರಕವಾದ ಯೋಜನೆಗಳನ್ನು ರೂಪಿಸುವುದರಲ್ಲಿಯೇ ಎಲ್ಲರೂ ಮುಳುಗಿರುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ವಿಧದ ಪ್ಲಾನುಗಳು. ಉದ್ದೇಶಗಳು. ಖುಷಿಗಳು.

ಈ ಅನಂತ ವಿಶ್ವದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂಬ ಆಕಾಂಕ್ಷೆ ಮನುಷ್ಯನಲ್ಲಿ ತೀವ್ರವಾಗಿದೆ. ತನ್ನ ಗುರುತನ್ನು ಹೇಳಬೇಕು, ತಾನು ಸಾಗಿ ಬಂದ ದಾರಿಯನ್ನು ನೆನಪಿಟ್ಟುಕೊಳ್ಳಬೇಕು, ಬೇನೆ ಬೇಸರಗಳ ಲೆಕ್ಕಾಚಾರ ಹಾಕಬೇಕು ಎಂಬ ಆಸೆಗಳು ಮನುಷ್ಯನ ಮನಸ್ಸಿನಲ್ಲಿ ಸದಾ ಜಾಗೃತವಾಗಿರುತ್ತದೆ. ಅದಕ್ಕಾಗಿ ಎಷ್ಟೆಲ್ಲ ವ್ಯವಸ್ಥೆಗಳನ್ನು ಅವನು ಮಾಡಿಕೊಂಡಿರುತ್ತಾನೆ. ಅದರಲ್ಲಿ ಮುಖ್ಯವಾದುದು ‘ಕಾಲದ ಲೆಕ್ಕಾಚಾರ’ ಎನ್ನಬಹುದು. ಮನುಕುಲದ ಇತಿಹಾಸದಲ್ಲಿ ಕಾಲದ ಲೆಕ್ಕಾಚಾರವನ್ನು ಮಾಡಿರುವ ಅನೇಕ ಉದಾಹರಣೆಗಳಿವೆ. ಈ ಕಾಲದ ಲೆಕ್ಕಾಚಾರಕ್ಕೊಂದು ದೀರ್ಘ ಇತಿಹಾಸವೇ ಇದೆ. ಮತ್ತು ಈ ಲೆಕ್ಕಾಚಾರವು ಮುಂದುವರೆಯುತ್ತಲೇ ಇದೆ.

ಅಂತಹ ಒಂದು ಲೆಕ್ಕಾಚಾರದ ಪ್ರಕಾರ ನಾವೀಗ ಹೊಸ ವರ್ಷದ ನಿರೀಕ್ಷೆಯಲ್ಲಿದ್ದೇವೆ. ಕಳೆದ ವರ್ಷ ಏನೆಲ್ಲ ನಡೆಯಿತು ಎಂಬುದನ್ನು ಲೆಕ್ಕ ಹಾಕುತ್ತ, ಮುಂದಿನ ವರ್ಷ ಏನೆಲ್ಲ ಮಾಡಬೇಕು ಎಂಬುದನ್ನು ಅಂದಾಜು ಮಾಡುತ್ತಾ ಡಿಸೆಂಬರ್ ಎಂಬ ಸುಂದರ ತಿಂಗಳೊಂದನ್ನು ದಾಟಿ ಬಂದಿದ್ದೇವೆ. ಸೋಲುಗಳು ಮನುಷ್ಯನಿಗೆ ಪಾಠವಾಗಿ, ಮುಂದಿನ ಹೆಜ್ಜೆಯನ್ನು ಎಚ್ಚರದಿಂದ ಇರಿಸಬೇಕು ಎಂಬ ಕಿವಿಮಾತನ್ನು ಹೇಳುತ್ತವೆ. ಪ್ರಸ್ತುತ ವರ್ಷಾಂತ್ಯಕ್ಕೆ ಈ ಮಾತು ಹೆಚ್ಚು ಸೂಕ್ತವೆನಿಸುತ್ತದೆ.

ಕೋವಿಡ್ ಎಂಬ ಹೊಸದೊಂದು ಸೋಂಕು ಜಗತ್ತಿಗೇ ಸೂತಕ ಛಾಯೆಯೊಂದು ಅಪ್ಪಳಿಸುವಂತೆ ಮಾಡಿದ್ದರಿಂದ ಈ ವರ್ಷಾಂತ್ಯದ ಸಂಭ್ರಮವು, ಹಿಂದಿನಂತೆ ಬಹಳ ಮುಕ್ತವಾಗಿಯೇನೂ ಇಲ್ಲ. ಕಳೆದ ವರ್ಷ ಹೊಸ ವರ್ಷವನ್ನು ಸ್ವಾಗತಿಸಲು ಸ್ವಲ್ಪವಾದರೂ ಹುಮ್ಮಸ್ಸು ಉಳಿದಿತ್ತು. ಆದರೆ 2020ಕ್ಕಿಂತಲೂ, 2021ನೇ ವರ್ಷವು ಜಗತ್ತಿನ ಅನೇಕ ದೇಶಗಳನ್ನು ಜರ್ಝರಿತಗೊಳಿಸಿದವು. ಹಾಗಾಗಿ ಇದೀಗ 2022 ನೇ ವರ್ಷವನ್ನು ಸ್ವಾಗತಿಸುವ ಸಂದರ್ಭದಲ್ಲಿಯೂ ಅನೇಕ ಹಳೆಯ ನೆನಪುಗಳು ಕಾಡುತ್ತಿವೆ.

ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರವನ್ನೋ, ವ್ಯಕ್ತಿಯನ್ನೋ, ಖುಷಿಯನ್ನೋ ಕಳೆದುಕೊಂಡಿರುವ ಖಿನ್ನ ಭಾವದಲ್ಲಿಯೇ ಈ ಹೊಸ ವರ್ಷಕ್ಕೆ ಸ್ವಾಗತ ಕೋರಲು ಆರತಿ ತಟ್ಟೆಯನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಕುರಿತ ಆತಂಕವೂ ಮಗ್ಗುಲ ಮುಳ್ಳಿನಂತೆ ನಯವಾಗಿ ಚುಚ್ಚುತ್ತಲೇ ಇದೆಯೆನ್ನಿ.

ಆದರೆ ಮಾನವ ನಿರ್ಮಿತ ಜಗತ್ತಿನಲ್ಲಿ ಏನೇ ಅಲ್ಲೋಲ ಕಲ್ಲೋಲಗಳಾಗಲೀ, ಈ ಜಗದ ನಡೆಯು ನಿರಂತರವಾಗಿರುತ್ತದೆ ಮತ್ತು ನಾವೆಲ್ಲರೂ ಅನಿವಾರ್ಯವಾಗಿ ಹೊಂದಾಣಿಕೆಗೆ ಶರಣಾಗಿ ಬಾಳಬೇಕು ಎಂಬ ಪಾಠವನ್ನು ಈ ಕೋವಿಡ್ ಎಂಬ ಸೋಂಕು, ಬೋಧಿಸಿದೆ. ಈ ಅರಿವು, ಕೆಲವೆಡೆ ಸಕಾರಾತ್ಮಕವಾಗಿಯೂ, ಕೆಲವೆಡೆ ಋಣಾತ್ಮಕವಾಗಿಯೂ ಅನೇಕ ಪರಿಣಾಮಗಳನ್ನ ಬೀರಿದೆ. ಹಿಂದಿನ ಕಾಲದವರು, ಮುಂದಿನ ದಿನಗಳಿಗಾಗಿ ಬದುಕನ್ನು, ವೈಯಕ್ತಿಕ ಸಂಪತ್ತನ್ನೂ, ಸಾಮಾಜಿಕ ಸಂಪನ್ಮೂಲಗಳನ್ನೂ ಜೋಪಾನ ಮಾಡುತ್ತಿದ್ದರೆ, ಇಂದಿನ ಜೀವನವು ಇದಕ್ಕೆ ವಿರುದ್ಧವಾಗಿದೆ. ಅತೀ ಹೆಚ್ಚು ವ್ಯಯ ಮಾಡುವುದೇ ಉತ್ಕಟವಾದ ಜೀವನ ಪ್ರೀತಿಯ ಲಕ್ಷಣ ಎಂಬಂತಹ ತಪ್ಪು ಗ್ರಹಿಕೆಯೊಂದು ಮೂಡುತ್ತಿದೆ. ಈ ರೀತಿಯ ಗ್ರಹಿಕೆಯು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಈ ಧೋರಣೆಯು ಹಣಕಾಸಿನ ವಿಷಯಕ್ಕೆ ಸೀಮಿತವಾಗದೇ, ಸಾಮಾಜಿಕ ಸಂಪನ್ಮೂಲಗಳ ಬಳಕೆಗೂ ಅನ್ವಯವಾದರೆ, ಮುಂದಿನ ತಲೆಮಾರಿನ ಬದುಕು ಕಷ್ಟವಾಗಬಹುದು.

ಮನುಷ್ಯನ ಜೀವನ ಆದ್ಯತೆಗಳನ್ನು ಆಧರಿಸಿಕೊಂಡು ಮುಂದುವರೆಯುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯನ್ನು ನೋಡಿ, ನಾವು ಅವನಿಗಿಂತ ಸ್ವಲ್ಪವಾದರೂ ಚೆನ್ನಾಗಿರಬೇಕು ಎನ್ನುತ್ತೇವೆ. ಅಥವಾ ಅವನಷ್ಟಾದರೂ ಅನುಕೂಲಸ್ಥರಾಗಿರಬೇಕು ಎಂದೊ, ಅವರಿಗಿಂತ ನಾವೇ ಪರವಾಗಿಲ್ಲಪ್ಪ ಎಂದೋ ಅಂದುಕೊಳ್ಳುತ್ತ ನಮ್ಮ ಜೀವನದ ಗುಣಮಟ್ಟವನ್ನು ಅಂದಾಜು ಮಾಡಿಕೊಳ್ಳುತ್ತೇವೆ. ಅವರಂತೆ ಬುದ್ಧಿವಂತರಾಗಿರಬೇಕು, ಪ್ರತಿಭಾವಂತರಾಗಿರಬೇಕು, ಅಷ್ಟು ಕ್ರಿಯಾಶೀಲರಾಗಿರಬೇಕು, ಇಷ್ಟು ಕೀರ್ತಿಶಾಲಿಗಳಾಗಬೇಕು ಎಂಬೆಲ್ಲ ಆಶಯಗಳನ್ನು ವ್ಯಕ್ತಪಡಿಸುವಾಗ ನಮಗೊಂದು ಹೋಲಿಕೆ, ಆಧಾರ ಬೇಕೇಬೇಕು. ದೀರ್ಘ ದಾರಿಯಲ್ಲಿ ನಡೆಯುವ ನಡಿಗೆಯನ್ನು ಲೆಕ್ಕ ಹಾಕಲು ಮೈಲಿಗಲ್ಲುಗಳೋ, ಕೈ ಕಂಬಗಳೋ ಬೇಕಾಗುತ್ತವಲ್ಲ. ಹಾಗೆ.

ಈ ಅನಂತ ವಿಶ್ವದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂಬ ಆಕಾಂಕ್ಷೆ ಮನುಷ್ಯನಲ್ಲಿ ತೀವ್ರವಾಗಿದೆ. ತನ್ನ ಗುರುತನ್ನು ಹೇಳಬೇಕು, ತಾನು ಸಾಗಿ ಬಂದ ದಾರಿಯನ್ನು ನೆನಪಿಟ್ಟುಕೊಳ್ಳಬೇಕು, ಬೇನೆ ಬೇಸರಗಳ ಲೆಕ್ಕಾಚಾರ ಹಾಕಬೇಕು ಎಂಬ ಆಸೆಗಳು ಮನುಷ್ಯನ ಮನಸ್ಸಿನಲ್ಲಿ ಸದಾ ಜಾಗೃತವಾಗಿರುತ್ತದೆ.

ಇದೇ ಮಾದರಿಯಲ್ಲಿ ಕಾಲವನ್ನು ಗ್ರಹಿಸುವುದಕ್ಕೆ ರೂಪಿಸಿಕೊಂಡ ಅವಯವಗಳೇ ನಮ್ಮೊಡನೆ ಇರುವ ವಿವಿಧ ಮಾದರಿಗಳು. ಕ್ಯಾಲೆಂಡರ್ ಎಂಬುದು ಅಂತಹ ಒಂದು ಮಾದರಿಯಾಗಿದೆ. ನಮ್ಮ ಪೂರ್ವಜರು ಕಣ್ಣಿಗೆ ಗೋಚರಿಸುವ ಮತ್ತು ಸಕಲ ಚರಾಚರಗಳಿಗೆ ಧೀ ಶಕ್ತಿಯನ್ನು ಒದಗಿಸುವ ಸೂರ್ಯನ ಚಲನೆಯನ್ನು ಆಧರಿಸಿಯೇ ಕಾಲ ನಿರ್ಣಯದ ವ್ಯವಸ್ಥೆಯೊಂದನ್ನು ರೂಪಿಸಿದರು.

ಜ್ಯೋತಿರ್ವಿಜ್ಞಾನದ ಶಾಖೆಗಳು ಈ ಕಾಲ ನಿರ್ಣಯದ ವಿವಿಧ ಆಯಾಮಗಳ ಕುರಿತು, ಜಗತ್ತಿನ ಅನಂತವನ್ನು ಗ್ರಹಿಸುವ ಪ್ರಯತ್ನಗಳನ್ನು ಮಾಡಿವೆ. ಕಾಲದ ಲೆಕ್ಕಾಚಾರ ಪರಮಾಣುವಿನಿಂದ ಆರಂಭವಾಗುತ್ತದೆ. ನಿಮಿಷ, ಕ್ಷಣ, ಲಘು, ನಾಡಿಕಾ, ಮುಹೂರ್ತ, ಪ್ರಹರ ಎಂಬೆಲ್ಲ ಲೆಕ್ಕಾಚಾರಗಳನ್ನು ಬಳಸಿಯೇ, ಪೂರ್ವಜರು ಗ್ರಹಗಳ ಚಲನೆಯನ್ನು ಹೇಳಬಲ್ಲವರಾಗಿದ್ದರು. ದಿನ ರಾತ್ರಿಗಳ ಅಧ್ಯಯನ ನಡೆಸಿ, ಹವಾಮಾನವು ಯಾವ ರೀತಿ ಬದಲಾಗಲಿದೆ, ಕೃಷಿ ಕೆಲಸಗಳಿಗೆ ಮಳೆ, ಗಾಳಿಯು ಹೇಗೆ ಪೂರಕವಾಗಬಹುದು ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದ್ದರು. ಗ್ರಹಣಕಾಲ, ದಿನರಾತ್ರಿಗಳಲ್ಲಿ ನಡೆಯುವ ಸೌರವಿದ್ಯಮಾನಗಳನ್ನು ಕರಾರುವಾಕ್ಕಾಗಿ ತಿಳಿಸಬಲ್ಲವರಾಗಿದ್ದರು. ಹಾಗೆ ನೋಡಿದರೆ ಎಲ್ಲ ರೀತಿಯ ಕ್ಯಾಲೆಂಡರ್‌ಗಳು, ಪಂಚಾಂಗಗಳು ಧಾರ್ಮಿಕತೆಯನ್ನೇ ಅವಲಂಬಿಸಿದ್ದರೂ, ಅವುಗಳಿಗೆ ಕೃಷಿ ಕ್ಷೇತ್ರಗಳ ಚಟುವಟಿಕೆಗಳೇ ಪ್ರಧಾನವಾಗಿರುತ್ತವೆ.

ವಿದ್ವಾನ್ ಎನ್. ರಂಗನಾಥ ಶರ್ಮ ಅವರು ಹೇಳುವಂತೆ, ‘ಕಾಲ ಮತ್ತು ಕ್ರಿಯೆ ಎಂಬುದು ಪ್ರತಿದಿನದ ವ್ಯವಹಾರದಲ್ಲಿ ಎಲ್ಲರಿಗೂ ಬೇಕಾದ, ಎಲ್ಲರಿಗೂ ಗೊತ್ತಿರುವ ವಿಚಾರಗಳು. ನಮ್ಮ ಜೀವನದ ಗತಿಯನ್ನು ಗ್ರಹಿಸಲು ಗಂಟೆ, ನಿಮಿಷ, ಹಗಲು, ರಾತ್ರಿ, ನಿನ್ನೆ, ನಾಳೆ, ತಿಂಗಳು, ವರ್ಷ ಎಂಬುದಾಗಿ ಕಾಲದ ಅಂತರ್ಭೇದಗಳನ್ನು ಮಾಡಿಕೊಂಡಿದ್ದೇವೆ. ಅದೇ ರೀತಿ ಇದೇ ಕಾಲವನ್ನು ಆಧರಿಸಿ, ಹೋಗುತ್ತಾನೆ, ಬರುತ್ತಾನೆ, ನಿಲ್ಲುತ್ತಾಳೆ, ನೋಡುತ್ತಿದ್ದಾಳೆ ಎಂಬೆಲ್ಲ ಕ್ರಿಯಾಭೇದಗಳು ಕೂಡ ನಮ್ಮ ಬಳಕೆಯಲ್ಲಿವೆ. ಹಾಗಿದ್ದರೆ ಈ ಕಾಲ ಮತ್ತು ಕ್ರಿಯೆಯಲ್ಲಿ ಅಂತರ್ಗತವಾಗಿದ್ದುಕೊಂಡು, ವ್ಯಾಪಕವಾಗಿ ಇರುವ ಸಾಮಾನ್ಯ ಲಕ್ಷಣಗಳೇನು ಎಂಬ ಪ್ರಶ್ನೆಯೇ ನಮ್ಮ ಪೂರ್ವಸೂರಿಗಳನ್ನು, ವಿದ್ವಾಂಸರನ್ನು ಬಹಳಷ್ಟು ಕಾಡಿದೆ’.

ಇದೇ ಮಾದರಿಯಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ಕಾಲವನ್ನು ಅಳೆಯುವ ಅನೇಕ ರೀತಿಯ ಪ್ರಯತ್ನಗಳು ನಡೆದಿವೆ. ಅದರ ಯಶಸ್ಸು ಅಪಯಶಸ್ಸುಗಳು ಏನೇ ಇರಲಿ, ಪ್ರಸ್ತುತ ಒಂದು ಅಂದಾಜಿನ ಪ್ರಕಾರ, ಸುಮಾರು ನಲ್ವತ್ತು ಕ್ಯಾಲೆಂಡರ್ ಗಳನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ. ಧಾರ್ಮಿಕ ಆಚರಣೆ, ನಂಬಿಕೆಗಳನ್ನು ಆಧರಿಸಿ ಜೀವಿಸಲು ಈ ವೈವಿಧ್ಯಮಯ ಕ್ಯಾಲೆಂಡರ್ ಗಳನ್ನು ಜನರು ಬಳಸುತ್ತಿದ್ದಾರೆ. ಆದರೆ ಕಚೇರಿಯ ಬಳಕೆ, ಆಧುನಿಕ ವ್ಯವಹಾರಗಳಿಗೆ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನೇ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಬಳಸಲಾಗುತ್ತಿದೆ. ಈ ಕ್ಯಾಲೆಂಡರ್ ಕೂಡ ಸೌರಮಾನ ದಿನಗಣನೆಯನ್ನು ಆಧರಿಸಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ಅಸ್ತಿತ್ವಕ್ಕೆ ಬರುವ ಮುನ್ನ ಜೂಲಿಯನ್ ಕ್ಯಾಲೆಂಡರ್ ಬಳಕೆಯಲ್ಲಿತ್ತು.

ಬರವಣಿಗೆ ಅಥವಾ ಲಿಪಿಗಳು ಆರಂಭವಾದ ಮೇಲೆ ಮೊದಲ ಬಾರಿಗೆ ರೂಪುಗೊಂಡ ಕ್ಯಾಲೆಂಡರ್ ಎಂದರೆ ಅದು ಸುಮೇರಿಯನ್ ಕ್ಯಾಲೆಂಡರ್. ನಂತರ ಈಜಿಪ್ಷಿಯನ್, ಅಸಿರಿಯನ್, ಎಲಮೈಟ್ ಕ್ಯಾಲೆಂಡರ್ ಗಳೂ ರೂಪು ಪಡೆದಿದ್ದವು. ಆದರೆ ರೋಮ್ ನಲ್ಲಿ ಕ್ರಿಸ್ತಪೂರ್ವ 45ನೇ ವರ್ಷದಲ್ಲಿ ಜೂಲಿಯಸ್ ಸೀಸರ್ ರಚಿಸಿದ ಜೂಲಿಯನ್ ಕ್ಯಾಲೆಂಡರ್ ನ, ನಂತರದ ಪರಿಷ್ಕೃತ ರೂಪವಾಗಿ 1582ರಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಂತು.

‘ಕಾಲ ಮತ್ತು ಕ್ರಿಯೆ’ ಕೃತಿ (ಭರ್ತೃಹರಿಯ ‘ವಾಕ್ಯಪದೀಯ’ ದ ‘ಕಾಲ ಸಮುದ್ದೇಶ’ ಮತ್ತು ‘ಕ್ರಿಯಾಸಮುದ್ದೇಶ’ಗಳ ಅನುವಾದ-ವಿವರಣೆ: ವಿದ್ವಾನ್ ಎನ್. ರಂಗನಾಥ ಶರ್ಮ) ಯ ಪ್ರಕಾರ, ‘ಕಣ್ಣಿಗೆ ಕಾಣದ, ವೈಜ್ಞಾನಿಕ ಪ್ರಯೋಗಾಲಯಕ್ಕೆ ನಿಲುಕದ, ಆದರೆ ಸಮಸ್ತ ಜನರ ವ್ಯವಹಾರದಲ್ಲಿ ಪ್ರತಿದಿನವೂ ಬಳಕೆಯಾಗುವ ಈ ಕಾಲವೆಂಬ ನಿಗೂಢತೆಯ ಸ್ವರೂಪವನ್ನು ನಿರ್ಧರಿಸುವುದು ಸಾಧ್ಯವಾಗಿಲ್ಲ. ಭಾರತೀಯರ ಸಂದರ್ಭಕ್ಕೆ ಬಂದರೆ, ವೇದ, ವೇದಾಂಗ ಜ್ಯೋತಿಶ್ಶಾಸ್ತ್ರವು ಕಾಲದ ಅಂತರ್ಭೇಧಗಳನ್ನು ಸಾಧ್ಯವಾದಷ್ಟು ಅಧ್ಯಯನ ಮಾಡಲು ಪ್ರಯತ್ನಿಸಿದೆ. ಆದರೆ ‘ಕಾಲ’ ಎಂಬುದರ ಸ್ವರೂಪವನ್ನು ನಿರ್ಣಯಾತ್ಮಕವಾಗಿ ಹೇಳುವುದು ಸಾಧ್ಯವಾಗಿಲ್ಲ.

ಕಾಲೋಂsಶಃ ಪರಮಾತ್ಮನಃ
ಕಾಲಾತ್ಮನಾ ತ್ವಿದಂ ಭಿನ್ನಮಭಿನ್ನಂ ಶ್ರೂಯತೇ ಹಿ ಯತ್ |
ಅನಾದ್ಯಂತಮಜಂ ದಿವ್ಯಮವ್ಯಕ್ತಮಜರಂ ಧ್ರುವಮ್ |

ಎಂಬ ಶ್ಲೋಕವನ್ನು ಮಹಾಭಾರತದಲ್ಲಿ ವ್ಯಾಸರು ಹೇಳುತ್ತಾರೆ. ಅಂದರೆ ಕಾಲವು ಪರಮಾತ್ಮನ ಒಂದು ಅಂಶವಾಗಿದೆ. ಇದು ನಿತ್ಯವಾದದ್ದು. ಆದ್ಯಂತವಿಲ್ಲದ್ದರಿಂದ ಕಾಲವು ಶಾಶ್ವತವಾದುದು. ಅದಕ್ಕೇ ಹಿರಿಯರು ಹೇಳಿದರು, ಸಮಯ ಹಾಳುಮಾಡುವುದು ಎಂದರೆ ಪರಮಾತ್ಮನ ಈ ಅಗಾಧವಾದ, ಭವ್ಯವಾದ ಸೃಷ್ಟಿಗೆ ಅವಮಾನ ಮಾಡಿದಂತೆ’. (ಪುಟ 7)

ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ, ಯಾತಿ ಕ್ಷಯಂ ಯೌವ್ವನಂ,
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸ ಕಾಲೋ ಜಗದ್ಭಕ್ಷಕಃ

ಎಂಬ ಕಿವಿಮಾತೊಂದನ್ನು ಹಿರಿಯರು ಹೇಳಿದ್ದಾರೆ. ಅಂದರೆ ನಮ್ಮ ಆಯುಸ್ಸು ಪ್ರತಿದಿನವೂ ಪ್ರತಿ ಕ್ಷಣವೂ ನಾಶವಾಗುತ್ತ ಹೋಗುತ್ತದೆ. ಯೌವ್ವನವು ಕ್ಷಯಿಸುತ್ತಿರುವುದು. ಮುಪ್ಪಿನತ್ತ ಹೆಜ್ಜೆ ಹಾಕುತ್ತಲೇ ಇರುತ್ತೇವೆ. ಕಳೆದು ಹೋದ ದಿನವೊಂದು ಮತ್ತೆಂದೂ ಬರುವುದೇ ಇಲ್ಲ. ಈ ಜಗತ್ತನ್ನು ಕಾಲವು ಇಂಚಿಂಚಾಗಿ ಭಕ್ಷಿಸುತ್ತಲೇ ಇರುತ್ತದೆ. ಅಂದಮೇಲೆ, ನಾವು ಈ ಕಾಲವನ್ನು ಹಿಡಿದು ನಿಲ್ಲಿಸುತ್ತೇವೆಂದು ಹೇಳಿದರೆ ಅದು ಹುಂಬತನವಾಗುವುದು. ಮನುಷ್ಯನ ಮುಂದೆ ಇರುವ ಏಕೈಕ ಅವಕಾಶವೆಂದರೆ, ಲಭ್ಯವಾದ ಕ್ಷಣಗಳನ್ನು ಸುಂದರವಾಗಿ, ಸಂತೋಷವಾಗಿ ಕಳೆಯುವುದು. ಅಷ್ಟೇ ಅಲ್ಲ ಇತರರೂ ಸಂತೋಷವಾಗಿರುವಂತೆ ಜವಾಬ್ದಾರಿಯಿಂದ, ಜಾಗೃತಿ ವಹಿಸಿ ಕಳೆಯುವುದಾಗಿದೆ. ಅದಕ್ಕೋಸ್ಕರ ವಿವೇಕವೆಂಬ ಸೂತ್ರವನ್ನು ಬಳಸಿಕೊಂಡರೆ ಸಾಕು. ತುಸು ಕಾಳಜಿ, ತುಸು ಸ್ವೀಕೃತಿ, ಒಂದಿಷ್ಟೇ ತ್ಯಾಗವು ನಮ್ಮ ಜೀವನದಲ್ಲಿ ಇರಲೇಬೇಕಾಗುತ್ತದೆ. ನಮ್ಮ ಕ್ಷಣಗಳು ಸುಂದರವಾಗಿದ್ದಂತೆ, ಇತರರ ಕ್ಷಣಗಳೂ ಸುಂದರವಾಗಿರಬೇಕಲ್ಲವೇ. ಇಲ್ಲವಾದಲ್ಲಿ ಒಟ್ಟಾರೆ ಸಾಮಾಜಿಕತೆ ಹೇಗೆ ಸುಸ್ಥಿತಿಯಲ್ಲಿ ಇರುತ್ತದೆ?

ಆದ್ದರಿಂದ ಹೊಸ ವರ್ಷದಲ್ಲಿ ವಿವೇಕದ ಸೂತ್ರವನ್ನು ಎಂದೂ ಮರೆಯುವುದಿಲ್ಲ ಎಂಬ ನಿರ್ಣಯವೊಂದನ್ನು ತೆಗೆದುಕೊಳ್ಳುವ ಸಮಯವಿದು.
ಸಮಯವನ್ನು ಹಾಳು ಮಾಡುವುದಕ್ಕೆ ಇಂದು ಸಾವಿರ ಸಾವಿರ ದಾರಿಗಳನ್ನು ಕೂಡ ಇದೇ ಡಿಜಿಟಲ್ ಲೋಕವು ಕಲ್ಪಿಸಿಕೊಟ್ಟಿದೆ. ಆದರೆ ಮನುಷ್ಯನ ವಿವೇಕವನ್ನು ಕಿತ್ತುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ ತಾನೇ. ಆದ್ದರಿಂದ ಹೊಸ ವರ್ಷಕ್ಕೆ ಅಡಿಯಿಡುವ ಈ ಸಂದರ್ಭದಲ್ಲಿ ನಾವೆಲ್ಲರೂ ಸಮಯದ ಆಡಿಟಿಂಗ್ ಮಾಡಿಕೊಳ್ಳುವ ನಿರ್ಧಾರವೊಂದನ್ನು ಮಾಡಿಕೊಳ್ಳೋಣ. ಡಿಜಿಟಲ್ ಲೋಕವು ಕರುಣಿಸಿದ ಸೌಕರ್ಯಗಳನ್ನು ಬಳಸಿಕೊಂಡು, ಸಕಾರಾತ್ಮಕವಾದ ಕಾರ್ಯಗಳನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ ಯೋಚಿಸಲು ಒಂದಿಷ್ಟು ಸಮಯವನ್ನು ಮೀಸಲಿಡೋಣ. ಪ್ರವಾಸ, ಓದು, ಸಾಮಾಜಿಕ ಚಟುವಟಿಕೆಗಳಿಗೆ ನಮ್ಮ ಜೀವನದ ಸಮಯವನ್ನು ಹಂಚಿಕೆ ಮಾಡಿಕೊಂಡಾಗಲಷ್ಟೇ ಜೀವನದಲ್ಲಿ ಖುಷಿಯನ್ನು ಮೊಗೆದುಕೊಳ್ಳುವುದು ಸಾಧ್ಯ. ಮನೆಯೊಳಗೇ ಬಂಧಿಯಾಗಿದ್ದಾಗಲೂ ಬದುಕು ಹೇಗೆ ನಿಸ್ಸಾರವಾಗಿರುತ್ತದೆ ಎಂಬುದನ್ನು ಕಳೆದೆರಡು ವರ್ಷಗಳಲ್ಲಿ ನಾವು ಗಮನಿಸಿದ್ದೇವೆ. ಆದ್ದರಿಂದ ಹೊಸದಾದ ಸಕಾರಾತ್ಮಕ ನಿರ್ಧಾರಗಳನ್ನು ಮಾಡುವಾಗ ಜೊತೆಗೆ ಬಾಳುವವರಿಗೆ, ಸಮಾಜಕ್ಕೆ ತೊಂದರೆಯಾಗದಂತಹ ನಿರ್ಧಾರಗಳನ್ನು ತೆಗೆದುಕೊಳ್ಳೋಣ ಅಲ್ಲವೇ. ಈಗ ಹೇಳಿ, ಹೊಸವರ್ಷದಲ್ಲಿ ನಿಮ್ಮ ನಿರ್ಣಯಗಳೇನು?