ಭೀತಿ (Fear)…..

ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕ
ಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂ
ಗಿರಿಯ ಕಡಿದಾದ ತುದಿಯಿಂದ
ಕೊರಕಲು – ತಿರುವು – ಹಳ್ಳ- ತಿಟ್ಟುಗಳಗುಂಟ
ಜೊತೆಗೇ ಸಮತಟ್ಟು ಬಯಲು ಜನಸಂದಣಿಯ ನಡುವಿಂದ
ಸಾಗಿ ಬಂದ ಹಾದಿ ಅದು ಬಲ್ಲದದನ
ಈಗ ಇದಿರಿಗುಂಟು ಅರಿಯದ ವಿಶಾಲ ಸಾಗರ
ಒಳಹೊಗಲೇ ಬೇಕಾದ ನೀಲ ನೀರ ಹರವು

ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ
ಬೇಕೋ ಬೇಡವೋ ಒಂದಾಗಲೇ ಬೇಕು ಕಡಲ ಒಡಲಲ್ಲಿ
ಆವಾಗಲೇ ಅನುಭವಿಸೀತು ಭೀತಿ ದೂರಾಗಿ ಅದೇನೋ ಆನಂದವ
ತಿಳಿದೀತು ನನ್ನ ಅಸ್ತಿತ್ವ ಅಳಿದಿಲ್ಲ ಬೆಳೆದೆ ನಾ ಎಂದು
ಈ ಬಲು ವಿಸ್ತಾರದ ನೀಲ ನೀರ ಬಯಲಲ್ಲಿ ಸೇರಿ ಬಯಲಾದೆ ಎಂದು
ನಾನೀಗ ಕಡಲೊಡನೆ ಸೇರಿ ಕಡಲಾದೆ ಎಂದು||