ಕಡಲ ಒಡಲು

ನೀಲಿಯಲೆಯ ಕಡಲ ಒಡಲು
ವಿಚಿತ್ರ ಗೂಡುಗಳ ಮಡಿಲು
ಸುಳಿವ ಗಾಳಿ ಆ ಸುಳಿಯೊಳ್ ತೇಲಿ
ಬಗೆದು ಅದರಾಳ ಹುಡುಕಿ ಸೋತಿದೆ

ಕಡಲ ತಡಿಯ ಮರಳು ಹಾಸಿನ
ತೆರೆದ ಎದೆಯ ಅಂಗಣ
ಅಂತ ಕಾಣದ ಅಗಣಿತ ಹೆಜ್ಜೆ
ಗುರುತುಗಳ ವಿಸ್ತಾರದ ತಾಣ
ಯಾವುದಕ್ಕೂ ದಿಕ್ಕು ಇಲ್ಲ
ದೆಸೆಯ ಹೆಸರು ಅಲ್ಲಿ ಇಲ್ಲ
ಸುಳಿವ ಗಾಳಿ ಆ ಸುಳಿಯೊಳ್ ತೇಲಿ
ಬಗೆದು ಅದರಾಳ ಹುಡುಕಿ ಸೋತಿದೆ

ಕಡಲ ಒಡಲಾಳ ತಿಳಿಯದ ಪುಟ್ಟ
ಹಕ್ಕಿ ಅಲೆಯೊಡನೆ ಆಡಿ
ತೆರೆಯ ದೋಣಿಯೇರಿ ಇಳಿದು ಜೀಕಿ
ನೀರ ಚಿಮ್ಮಿ ಚಿಮ್ಮಿ ನೆಗೆದು ಹಾರಿ
ಅರಿಯದದು ಆ ಅಲೆಯೇ ಅದನು
ಬಿಸುಡಲಹುದು ದೂರ ದಡಕೆ
ಸುಳಿವ ಗಾಳಿ ಆ ಸುಳಿಯೊಳ್ ತೇಲಿ
ಬಗೆದು ಅದರಾಳ ಹುಡುಕಿ ಸೋತಿದೆ

ಇಳಿ ಸಂಜೆಯ ಹೊಂಗಿರಣ ಹಾಸಿ
ಮರಳು ಕಣದಿ ರಂಗು ತುಂಬಿ
ಹೊನ್ನ ಹೊದಿಕೆಯ ತುಂಬ ರನ್ನ
ಕೋದೊಲು ಬೀಸಿರೆ
ಒಂದು ಚಣ ಎಲ್ಲ ಮರೆತು
ಮರುಳು ಜೀವ ಭ್ರಮಿಸಿ ನಗುಬೀರೆ
ಸುಳಿವ ಗಾಳಿ ಆ ಸುಳಿಯೊಳ್ ತೇಲಿ
ಬಗೆದು ಅದರಾಳ ಹುಡುಕಿ ಸೋತಿದೆ

ಬೆಪ್ಪು ಮನದ ತಳದಲುಂಟು
ಚಿಮ್ಮೊ ಭಾವಗಳ ಒರತೆ
ಎಗ್ಗಿಲ್ಲದೆ ಭೋರ್ಗರೆದಿದೆ ತಿಳಿಯದೇ
ಅಲ್ಲಿರುವ ಕೊರತೆ
ಹುಚ್ಚು ಹೊಳೆ ತುಂಬಿ ಹರಿದಂತೆ
ಕಡಲು ಉಬ್ಬರಿಸಿ ಮೊರೆದಂತೆ
ಸುಳಿವ ಗಾಳಿ ಆ ಸುಳಿಯೊಳ್ ತೇಲಿ
ಬಗೆದು ಅದರಾಳ ಹುಡುಕಿ ಸೋತಿದೆ

ಆ ನೀಲಿಯೊಡಲ ಕಡಲ ಬಿಂಬ
ಮನದ ಅಂತರಾಳದ ಮಡಿಲು
ಕಟ್ಟಿಲ್ಲ ಬಂಧವಿಲ್ಲ ಅಲೆಯ ಉಬ್ಬರಕೆ
ಯೋಚನೆಗಳ ಅಬ್ಬರಕೆ
ಯಾವ ಸುಳಿಗಾಳಿಗೂ ಸಿಗದು ಬಗೆದು
ಹುಡುಕಿದರೂ ಅದರ ಆಳ
ಅಗಮ್ಯ ಆ ಗಮ್ಯ ಆರ ಪಾರ ಆ ಆಳ
ಇದು ಕಡಲ ಗೂಢತೆಯ ಗುಟ್ಟು
ಈ ಮನವು ಒಡೆಯಲಾಗದ ಒಗಟು

 

ಸರೋಜಿನಿ ಪಡಸಲಗಿ ಬೆಂಗಳೂರು ವಾಸಿ.
ಕಥೆ, ಪ್ರಬಂಧಗಳ ಬರವಣೆಯಲ್ಲದೇ ಕವನಗಳನ್ನ ರಚಿಸಿ, ಸಂಯೋಜಿಸಿ ಹಾಡುವುದು ಇವರ ಹವ್ಯಾಸ.