ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ [email protected] ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ಸರ್ವಮಂಗಳ ಬರೆದ ಕವಿತೆ.

1
ಮಣ್ಣಾಗಿದ್ದಾನವ
ಕಣ್ಣ ಮುಂದೆಯೇ.
ಕಣ್ಣೊಳಗೆ ಕಣ್ಣಿಟ್ಟು
ಎವೆಯೊಳಗೆ ಬಚ್ಚಿಟ್ಟು
ನೋಟವಾಗುತ್ತೇನೆಂದು,
ಕೂಟವಿತ್ತು ಮಾಟವಾಗುತ್ತೇನೆಂದು
ಮಾತು ಕೊಟ್ಟು
ಕೈಬಿಟ್ಟು
ಕಲ್ಲಾಗಿದ್ದವನಿಂದು
ಮಣ್ಣಾಗಿದ್ದಾನೆ.
‘ಕ್ಷಮಯಾಧರಿತ್ರಿ’ಯ ಕಿರೀಟ ತೊಟ್ಟು
ಬದುಕ ಕಾದು
ಕುದಿವ ನೆಲವಾಗಿದ್ದವಳೀಗ
ಕಲ್ಲಾಗುವ ದಾರಿ ಕಾಣದೆ
ಕಂಗಾಲು.

2
ಕಣ್ಣಲ್ಲೊಂದಿಷ್ಟು ನಿದ್ದೆ
ತೆಪ್ಪಗೆ ನುಸುಳಲು ಬಿಡು
ಕದಡಬೇಡ ಕನಸು
ಅಲ್ಲೇ ಸುಮ್ಮನಿದ್ದುಬಿಡು
ಹಾಡಿದ್ದೇ ಹಾಡು
ಯುಗಯುಗ ಅಳಿದರೂ
ಬದಲಿಲ್ಲ ಸಾಲು
ಹುಳಿಯಲ್ಲ ಹಾಲು
ಒಪ್ಪಲಿಲ್ಲ ಒಮ್ಮೆಯೂ ನೀನು
ಒಲವು ಸಾಕಾರ
ಜೀವಜಲದಾಳ
ಬತ್ತಿಹೋಗಿದೆ ಕಡಲು
ಕಡೆಯಬೇಡ ನೋವಿನೊಡಲು
ಅಲ್ಲೇ ಸುಮ್ಮನಿದ್ದುಬಿಡು
ಬಾನಹಿಗ್ಗು ನೆಲದ ಪುಳಕ
ನೆಲದ ಹಿಗ್ಗು ಹಸಿರು ಕನಕ
ಎಳೆಯ ಬಾಳೆಯ ಸುಳಿಗೆ
ಬಡಿದಂತೆ ಸಿಡಿಲು
ಛಿದ್ರವಾಗಿದೆ ಮಡಿಲು
ಅಲ್ಲೇ ಸುಮ್ಮನಿದ್ದುಬಿಡು
ಒಡಲ ತುಂಬ ಒಲವ ಕೆಂಡ
ಕದಡಬೇಡ ಕಣಸು
ಅಲ್ಲೇ ಸುಮ್ಮನಿದ್ದುಬಿಡು.

3
ಅಪರಾಧಿ ನನಗೆ
ಸುಖವೆಲ್ಲಿಂದ ಬಂದೀತು ಹೇಳು
ನಡುಮನೆಯ ಗೂಡಿಗೆ
ಹಣತೆಯೆಂದು ಹಿಡಿಯಬಂದದ್ದು.
ಸೂರ್ಯನೆಂಬ ಅರಿವು
ಇರಲಿಲ್ಲ ಆಗ
ಮುಸುಕು ಕವಿದ ಮೋಹಜಾಲ
ಭೂಮಿಗೊಬ್ಬನೇ ಆಸರಾ ನೇಸರ
ಉಂಟೆ ಅವಗೆ ಕಟ್ಟುಪಾಡು; ಬಂಧನ!
ಉರಿದುರಿದು ಬೂದಿಯಾಗುತಿದೆ ಚಂದನ
ನನ್ನ ಸಂಕಟವಿಷ್ಟೇ
ಯಾವ ಜೋಗಿಗೋ ಚಂದದ ಲೇಪನ
ಹೂವಿನ ಹಂಬಲ ದುಂಬಿಗೂ
ಇತ್ತೆ?
ಕೇಳುವ ಮೊದಲೇ ನನ್ನನ್ನಿತ್ತೆ.
ಸುಖವೆಲ್ಲಿಂದ ಬಂದೀತು ಹೇಳು?
ನಗು ತುಟಿಯ ಮೇಲೆ
ಅಳು ನಾಭಿಯಿಂದೆದ್ದು ಕೊರಳಲ್ಲಿ ಸೆರೆ
ಕಂಗಳ ಕೊಳದಲ್ಲಿ ನೀನು ಮೀನುಗಾಳ
ಸುಖ ಎಂದರೇನೆಂದೆ
ಗೆಳೆಯಾ ನನ್ನ ಉತ್ತರ …….ನೀನು! ! !