ಅಂತೂ ಇಂತೂ ಅಲ್ಲಿನ ಸೊಸೈಟಿಯಲ್ಲಿ ನಮ್ಮ ಖಾತೆ ತೆರೆದಿದ್ದು ಆಯ್ತು. ಬೆಳೆ ಸಾಲವಂತೂ ಸಿಕ್ಕಿತು. ಸ್ವಲ್ಪ ಉಸಿರಾಡುವಂತಾಯ್ತು. ಬೇಲಿ ಕಟ್ಟಲು ಸಾಲವನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಅಲ್ಲಿನವರು ಹೇಳಿದರಾದರೂ ಒಂದು ಹೆಜ್ಜೆಯಾದರೂ ಮುಂದೆ ಬಂದೆನಲ್ಲ ಅಂತ ಖುಷಿಯಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಶಂಭುಲಿಂಗ ಹೆಗಡೆ ಮಾವನ ಪಾತ್ರ ತುಂಬಾ ದೊಡ್ಡದು. ಅವರಿಲ್ಲದಿದ್ದರೆ ನನಗೆ ಇಷ್ಟೆಲ್ಲ ಸುಲಭದಲ್ಲಿ ಸೊಸೈಟಿ ಸಾಲ ಸಿಗುತ್ತಿರಲಿಲ್ಲ. ದೇವರು ತಾನೇ ಪ್ರತ್ಯಕ್ಷನಾಗಿ ಸಹಾಯ ಮಾಡೋದಿಲ್ಲವಂತೆ. ಯಾರೋ ಒಬ್ಬರ ಮೂಲಕ ನಮ್ಮ ಹಿಂದೆ ಇರುತ್ತಾನೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

ಮನುಷ್ಯರಿಂದ ನಮ್ಮ ಹೊಲವನ್ನು ರಕ್ಷಿಸಲು ಸಿಗಂದೂರು ದೇವಿಯ ಮೊರೆ ಹೊದೆವೇನೋ ಸರಿ ಆದರೆ ದನಗಳಿಂದ ಕಾಯಬೇಕಲ್ಲ! ಹಿಂದೆಲ್ಲಾ ಯಾವಾಗಲೋ ಒಮ್ಮೆ ನನ್ನ ಹೊಲಕ್ಕೆ ಹೋಗುತ್ತಿದ್ದ ಸಮಯದಲ್ಲಿ ಯಾವಾಗ ಹೋದರೂ ಅಲ್ಲೊಂದಿಷ್ಟು ದನ ಕುರಿ ಮೇಯಿಸುವವರು ಇದ್ದೆ ಇರುತ್ತಿದ್ದರು. ಯತೇಚ್ಛವಾಗಿ ಬೆಳೆದ ಸಾವಯವ ಹುಲ್ಲನ್ನು ಅವುಗಳಾದರೂ ತಿನ್ನಲಿ ಅಂತ ಆಗೆಲ್ಲ ಸುಮ್ಮನಿರುತ್ತಿದ್ದೆ. ಆದರೆ ಈಗ ಬೆಳೆ ಬೆಳೆಯುವಾಗಲೂ ಹಾಗೆ ಮಾಡಲಾದೀತೇ? ಅದಕ್ಕಂತ ಇದ್ದ ಒಂದು ಉಪಾಯ ತಂತಿಯ ಬೇಲಿ ಹಾಕುವುದು. ಬೇಲಿ ಹಾಕಬೇಕು ಅಂದರೆ ನಮ್ಮ ಗಡಿಯನ್ನು ನಿರ್ಧರಿಸಿಕೊಳ್ಳಲೇಬೇಕು. ನಮ್ಮ ಹೊಲ ಮೂರು ಕಡೆ ಬೇರೆ ಬೇರೆ ರೈತರ ಜೊತೆಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ಕನಿಷ್ಠ ಮೂರು ಕಡೆಗಾದರೂ ಬೇಲಿ ಹಾಕಲೇಬೇಕಿತ್ತು. ನಾಲ್ಕು ಎಕರೆಗೆ ಬೇಲಿ ಹಾಕೋದು ಅಂದರೆ ಸುಲಭದ ಖರ್ಚು ಅಲ್ಲ. ಹೆಚ್ಚುಕಡಿಮೆ ಎರಡರಿಂದ ಮೂರು ಲಕ್ಷವಾದರೂ ಬೇಕು. ಕೊರೋನ ಕಾಲವದು, ಎಲ್ಲರಂತೆ ನನ್ನ ಬಿಸಿನೆಸ್‌ಗೂ ತುಂಬಾ ಹೊಡೆತ ಬಿದ್ದಿತ್ತು. ಹೀಗಾಗಿ ಕೈಯಲ್ಲಿದ್ದ ದುಡ್ಡು ಹಾಕುವುದಕ್ಕೆ ಹಿಂದೇಟು ಹಾಕುತ್ತಿದ್ದೆ. ಬೇಲಿ ಹಾಕಲು ಸಾಲವಾದರೂ ಸಿಕ್ಕಿತೇನೋ ಅಂತ ಅಲ್ಲಿನ ಸೊಸೈಟಿಗೆ ಹೋದೆ.

ಪ್ರತಿ ಊರಿಗೆ ರೈತರ ಸಹಾಯಕ್ಕೆ ಅಂತ ಸಹಕಾರಿ ಸಂಘಗಳು ಇರುತ್ತವೆ. ಅಲ್ಲಿ ಬೆಳೆ ಸಾಲ, ಬಾವಿಗೆ ಹಾಗೂ ಬೇಲಿಗೆ ಅಂತ ಇನ್ನೂ ಇತರ ಮಧ್ಯಮಾವಧಿ ಸಾಲಗಳು ಸಿಗುತ್ತವೆ ಅಂತ ತಿಳಿಯಿತು. ಸರಕಾರಗಳು ಯಾವುದೇ ಸಾಲವನ್ನೂ ಈ ಸಹಕಾರಿ ಸಂಸ್ಥೆಗಳ ಮೂಲಕವೇ ರೈತರಿಗೆ ನೀಡುತ್ತವೆ. ಬೆಳೆ ಸಾಲಕ್ಕೆ ಬಡ್ಡಿ ಇರುವುದಿಲ್ಲ. ಅದನ್ನು ಪ್ರತಿ ವರ್ಷ ಬೆಳೆಗೆ ಅನುಸಾರವಾಗಿ ಕೊಡುತ್ತಾರೆ. ಏಪ್ರಿಲ್ ಸಮಯದಲ್ಲಿ ವಾಪಸ್ಸು ಪಾವತಿಸಿದರೆ ಮುಂದಿನ ವರ್ಷ ಮತ್ತೆ ಸಿಗುತ್ತದೆ. ಪ್ರಕೃತಿ ವಿಕೋಪಗಳಿಂದಲೋ ಬೇರ್ಯಾವುದೋ ಕಾರಣಗಳಿಂದ ಬೆಳೆ ಹಾನಿಯಾದಾಗ, ಅಥವಾ ಚುನಾವಣೆ ಹತ್ತಿರ ಬಂದಾಗ ಮನ್ನಾ ಮಾಡುವ ಅಥವಾ ಆಶ್ವಾಸನೆ ನೀಡುವ ಸಾಲ ಅಂದರೆ ಇದೇ ಬೆಳೆ ಸಾಲ! ಇನ್ನೊಂದು ಮಧ್ಯಮಾವಧಿ ಸಾಲ. ಅದಕ್ಕೆ ೩% ಬಡ್ಡಿ ಇರುತ್ತದೆ. ಅದನ್ನು ೧೦ ಕಂತುಗಳಲಿ ತುಂಬಬಹುದು. ಏನೇ ಆಗಲಿ ಈ ಸಾಲಗಳು ಹೊಸದಾಗಿ ತೋಟ ಮಾಡುವವರಿಗೆ, ಸಣ್ಣ ರೈತರಿಗೆ ಸಹಾಯವಾಗುವುದಂತೂ ಹೌದು.

ಯಾವುದೇ ಸಾಲ ತೆಗೆದುಕೊಂಡರೂ ಅದು ನಮ್ಮ RTC / ಪಹಣಿಯಲ್ಲಿ ದಾಖಲಾಗುತ್ತದೆ. ಹೀಗಾಗಿ ನಮ್ಮ ಜಮೀನನ್ನು ಮಾರಬೇಕೆಂದಾದರೆ ಸಾಲವನ್ನು ತೀರಿಸಿ ಅದರ ಎಂಟ್ರಿ ತೆಗಿಸಬೇಕು. ಅದೊಂದು ದೊಡ್ಡ ತಲೆನೋವಿನ ಕೆಲಸ. ಸುಲಭವಾಗಿ ಜಮೀನು ಯಾರದೋ ಹೆಸರಿಗೆ ಹೋಗಬಾರದು ಎಂಬ ಒಳ್ಳೆಯ ಉದ್ದೇಶದಿಂದಲೇ ಇಂತಹ ಕೆಲವು check point ಗಳು ಇವೆಯೇನೋ. ಆದರೂ ಹಲವು ಕಡೆಗಳಲ್ಲಿ ಕೆಲವು ತಪ್ಪು ಮಾಡಲೇ ಹುಟ್ಟಿರುವ ಅಥವಾ ಬೇಕಂತಲೇ ತಪ್ಪು ಮಾಡುವ (!) ಸಿಬ್ಬಂದಿಗಳಿಂದ ಕೆಲವು ಗೊಂದಲಗಳಿಗೆ ಕಾರಣ ಆಗುತ್ತದೆ. ಅದಲ್ಲದೆ ಸರಕಾರೀ ಕಛೇರಿಗಳಲ್ಲಿ ಸಿಬ್ಬಂದಿಗಳು ಲಂಚ ತೆಗೆದುಕೊಳ್ಳಲು ಮತ್ತೊಂದಿಷ್ಟು ದಾರಿಗಳನ್ನು ಅದು ತೆರೆಯುತ್ತದೆ.

ಒಂದು ಸಲ ಹೀಗೆ ಆಗಿತ್ತು. ಹೆಸರಿನ ಕುರಿತ ಇಷ್ಟೆಲ್ಲಾ “ಆಧಾರ”ಗಳನ್ನು ಸಲ್ಲಿಸಿದ್ದರೂ ಕೂಡ RTC ಯಲ್ಲಿ ಹೆಸರನ್ನು ತಪ್ಪಾಗಿ ನಮೂದಿಸಿದ್ದರು. ಅದೊಂದು ಸಣ್ಣ ಕಾಗುಣಿತ ದೋಷ. ಆದರೆ ಅದನ್ನು ಸರಿಪಡಿಸಲು ರೂ. ೫೦೦೦ ಖರ್ಚಾಗಿತ್ತು! ಅದರ ಹೆಚ್ಚಿನಂಶ ಲಂಚವೆ ಆಗಿತ್ತು! ಒಂದೊಂದು ಸಲ ತುಂಬಾ ಕೋಪ ಬರುತ್ತದೆಯಾದರೂ ಏನು ಮಾಡಲು ಸಾಧ್ಯ ಎಂಬ ಹತಾಶೆಯೊಂದಿಗೆ ಮತ್ತೆ ಮತ್ತೆ ಇಂತಹ ಅಧ್ವಾನಗಳನ್ನು ವಿರೋಧಿಸದೆ ಸಹಿಸಿಕೊಂಡು ಮನದಲ್ಲಿಯೇ ಕುದ್ದು ಹೋಗುತ್ತೇನೆ.

ಅಲ್ಲಿನ ಸಹಕಾರಿ ಸಂಘಕ್ಕೆ ಹೋದಾಗ ಅವರು ನನ್ನ ಆಧಾರ್‌ ಕಾರ್ಡ್‌ನ ವಿಳಾಸ ಗಮನಿಸಿ ಹೇಳಿದರು “ನೀವು ಸಾಲಾ ಬೆಂಗಳೂರಿನ್ಯಾಗ ತೊಗೋಬೇಕು ರೀ…”

ಅರೆ ನನ್ನ ಜಮೀನು ಇರೋದು ದಾಸನಕೊಪ್ಪದಲ್ಲಿ, ಅದು ಹೇಗೆ ಬೆಂಗಳೂರಿನಲ್ಲಿ ಸಾಲ ಕೊಡುತ್ತಾರೆ? ಅದೊಂದು ಆಗ ತಾನೆ ಬಂದಿದ್ದ ಹೊಸ ನಿಯಮವಂತೆ! ಎಲ್ಲಿ ಆಧಾರ ಇರುವುದೋ ಅಲ್ಲಿನ ಸಹಕಾರಿ ಸಂಘದಲ್ಲಿಯೇ ಸಾಲ ತೆಗೆಯಬೇಕು. ಇದೊಳ್ಳೆ ಫಜೀತಿ ಅಂತ ನಾನು ಬೆಂಗಳೂರಿನ ಸಹಕಾರಿ ಸಂಘಗಳಿಗೆ ಭೇಟಿ ನೀಡಿದೆ. ಅಲ್ಲಿನವರು “ನಿಮ್ಮ ಹೊಲ ಇರೋದು ಅಲ್ಲಿ. ನೀವ್ಯಾಕೆ ಇಲ್ಲಿ ಸಾಲ ಕೇಳುತ್ತೀರಿ” ಅಂತ ನನ್ನನ್ನು ಮತ್ತೆ ಹುಚ್ಚು ಹಿಡಿಯುವಂತೆ ಮಾಡಿದರು. ಒಟ್ಟಿನಲ್ಲಿ ತಬರನ ಕತೆ ಈ ಕಾಲಕ್ಕೂ ಇನ್ನೊಂದು ರೀತಿಯಲ್ಲಿ ಮುಂದುವರೆದಿತ್ತು. ಈ ಹುಚ್ಚರ ಸಂತೆಯಲ್ಲಿ ಸುಮ್ಮನೆ ತಲೆ ಕೆಡಿಸಿಕೊಂಡು ಪ್ರಯೋಜನ ಇಲ್ಲ ಅನಿಸಿ ಆಧಾರ್‌ನ ವಿಳಾಸವನ್ನೇ ಹಳ್ಳಿಯ ವಿಳಾಸಕ್ಕೆ ಬದಲಿಸಿಬಿಟ್ಟೆ. ಅಲ್ಲಿ ಹೇಗಿದ್ದರೂ ನಮ್ಮ ಹೆಸರಿನಲ್ಲೇ ಬಾಡಿಗೆ ಮನೆ ಇತ್ತಲ್ಲ!

ಅಂತೂ ಇಂತೂ ಅಲ್ಲಿನ ಸೊಸೈಟಿಯಲ್ಲಿ ನಮ್ಮ ಖಾತೆ ತೆರೆದಿದ್ದು ಆಯ್ತು. ಬೆಳೆ ಸಾಲವಂತೂ ಸಿಕ್ಕಿತು. ಸ್ವಲ್ಪ ಉಸಿರಾಡುವಂತಾಯ್ತು. ಬೇಲಿ ಕಟ್ಟಲು ಸಾಲವನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಅಲ್ಲಿನವರು ಹೇಳಿದರಾದರೂ ಒಂದು ಹೆಜ್ಜೆಯಾದರೂ ಮುಂದೆ ಬಂದೆನಲ್ಲ ಅಂತ ಖುಷಿಯಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಶಂಭುಲಿಂಗ ಹೆಗಡೆ ಮಾವನ ಪಾತ್ರ ತುಂಬಾ ದೊಡ್ಡದು. ಅವರಿಲ್ಲದಿದ್ದರೆ ನನಗೆ ಇಷ್ಟೆಲ್ಲ ಸುಲಭದಲ್ಲಿ ಸೊಸೈಟಿ ಸಾಲ ಸಿಗುತ್ತಿರಲಿಲ್ಲ. ದೇವರು ತಾನೇ ಪ್ರತ್ಯಕ್ಷನಾಗಿ ಸಹಾಯ ಮಾಡೋದಿಲ್ಲವಂತೆ. ಯಾರೋ ಒಬ್ಬರ ಮೂಲಕ ನಮ್ಮ ಹಿಂದೆ ಇರುತ್ತಾನೆ! ಒಟ್ಟಿನಲ್ಲಿ ನಮ್ಮ ಉದ್ದೇಶ ಸರಿಯಾಗಿರಬೇಕು. ಇದು ಎಷ್ಟೋ ಸಲ ನನಗೆ ಅನುಭವ ಆಗಿದೆ. ಸರಿಯಾದ ಸಮಯಕ್ಕೆ ಬಂದು ನನ್ನ ಕೆಲಸಗಳನ್ನು ಸುಲಭದಲ್ಲಿ ಪರಿಹರಿಸಿ ಕೊಟ್ಟ ಎಷ್ಟೋ ದೇವದೂತ ಮಾನವರಿಗೆ ನಾನು ಚಿರಋಣಿ!

ಅದೊಂದು ಸಣ್ಣ ಕಾಗುಣಿತ ದೋಷ. ಆದರೆ ಅದನ್ನು ಸರಿಪಡಿಸಲು ರೂ. ೫೦೦೦ ಖರ್ಚಾಗಿತ್ತು! ಅದರ ಹೆಚ್ಚಿನಂಶ ಲಂಚವೆ ಆಗಿತ್ತು! ಒಂದೊಂದು ಸಲ ತುಂಬಾ ಕೋಪ ಬರುತ್ತದೆಯಾದರೂ ಏನು ಮಾಡಲು ಸಾಧ್ಯ ಎಂಬ ಹತಾಶೆಯೊಂದಿಗೆ ಮತ್ತೆ ಮತ್ತೆ ಇಂತಹ ಅಧ್ವಾನಗಳನ್ನು ವಿರೋಧಿಸದೆ ಸಹಿಸಿಕೊಂಡು ಮನದಲ್ಲಿಯೇ ಕುದ್ದು ಹೋಗುತ್ತೇನೆ.

ಬೇಲಿ ಮಾಡಿಸಲು ಸಾಲ ಯಾವಾಗಲೋ ಸಿಗಲಿ, ಸಧ್ಯಕಂತೂ ನಮ್ಮ ಹೊಲದ ಗಡಿಗಳನ್ನು ಗುರುತಿಸುವ ಕೆಲಸ ಆಗಬೇಕಿತ್ತು. ಅದಕ್ಕೆ ಹದ್ದುಬಸ್ತು/ ಸರ್ವೇ ಅಂತಾರೆ. “ಹದ್ದುಬಸ್ತಿನಲ್ಲಿ ಇಡೋದು” ಎಂಬ ಪದವನ್ನು ಬಳಸಿ ಗೊತ್ತಿತ್ತಾದರೂ, ಈಗ ನಿಜವಾದ ಹದ್ದುಬಸ್ತಿಗೆ ಕೈ ಹಾಕಿದ್ದೆ. ಅದಕ್ಕೊಂದು “ಹಾತ್ ನಕಾಶೆ” ಬೇಕಾಗುತ್ತದೆ. ಅದಕ್ಕಾಗಿ ಒಂದು ಅರ್ಜಿ ಹಾಕಬೇಕು. ಇಂತಹ ಡಿಜಿಟಲ್ ಯುಗದಲ್ಲಿ ಕೂಡ ಕೈಯಿಂದ ಬರೆದ ಆ ನಕ್ಷೆಯನ್ನು ತಂದು ಸರ್ವೇ ಮಾಡಲು ಬಂದ ವ್ಯಕ್ತಿಗೆ ಕೊಡಬೇಕು. ಇದೆಲ್ಲ ಸಂಭ್ರಮಗಳಿಗೆ ಹಲವು ತಿಂಗಳುಗಳು ಬೇಕು! ಹಲವಾರು ಸುಧಾರಣೆಗಳು ಆಗಿವೆಯಾದರೂ ಇನ್ನೂ ಓಬಿರಾಯನ ಕಾಲದಲ್ಲೇ ಈ ವ್ಯವಸ್ಥೆ ಇದೆ ಅಂತ ಅನಿಸಿತು. ದಿಶಾಂಕ ಎಂಬ ಮೊಬೈಲ್ app ಸರ್ವೇಗೆ ಸಹಕಾರಿ ಆಗಿದೆಯಾದರೂ ಕೆಲವು ಅಡೆತಡೆಗಳು ಅದರಲ್ಲೂ ಇವೆ. ಹೀಗಾಗಿ ನಾನು ಸರ್ವೇ ಮಾಡಿಸಲೇಬೇಕಿತ್ತು. ಅದಕ್ಕೆ ಅಂತ ಅರ್ಜಿ ಕೊಟ್ಟೆ. ಎಷ್ಟೋ fees ಕಟ್ಟಿಸಿಕೊಂಡರು. ಸಿಬ್ಬಂದಿ ನಾನು ಕೊಟ್ಟ ಹಣಕ್ಕೆ ರಸೀದಿ ಕೊಟ್ಟರೂ ಅದಕ್ಕಿಂತ ಜಾಸ್ತಿಯೇ ನನ್ನ ಬಳಿ ಕಿತ್ತಿದ್ದರು. ಯಾಕೆ ಅಂತ ಕೇಳಲು ಅದಕ್ಕೊಂದಿಷ್ಟು ಅಸಮರ್ಪಕ ಉತ್ತರ ನೀಡಿದರು. ನಾನು ಮತ್ತೆ ಹಾಳಾಗಿ ಹೋಗಲಿ ಅಂತ ಲಂಚಾವತಾರಕ್ಕೆ ನನ್ನ contribution ಮುಂದುವರಿಸಿದ್ದೆ!

ಸರ್ವೇ ಎರಡು ಬಗೆಯದು. ಒಂದು ಸರಕಾರದ ಸಿಬ್ಬಂದಿಯಿಂದ ಮಾಡಿಸುವುದು. ಅದು ತುಂಬಾ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಆದರೆ ಅದಕ್ಕೆ ಸಮಯ ಹಿಡಿಯುತ್ತದೆ. ಆಗಂತೂ ಕೊರೋನ ಯುಗವಾಗಿತ್ತು. ಹೀಗಾಗಿ ಮತ್ತಷ್ಟು ತಡ. ಎಲ್ಲರಿಗೂ ಒಂದೊಳ್ಳೆಯ ಕಾರಣ ಈ ಕೊರೋನ! ಇನ್ನೊಂದು ಆಯ್ಕೆಯೆಂದರೆ Private ಸರ್ವೇ. ಅದು ಜಾಸ್ತಿ ಖರ್ಚು, ಮತ್ತು ಬೇಗನೆ ಆಗುತ್ತದೆ. ಆದರೆ ಏನಾದರೂ ತಂಟೆ ತಗಾದೆಗಳು ಇದ್ದರೆ ಅದು ಏನೂ ಉಪಯೋಗಕ್ಕೆ ಬರುವುದಿಲ್ಲ. ಅದಕ್ಕಾಗಿ ಮತ್ತೆ ಸರಕಾರೀ ಸರ್ವೆ ಆಗಬೇಕು. ಸರ್ವೆ ಆಗುವವರೆಗೆ ಜಮೀನು ಮಾರಾಟ ಕೂಡ ಮಾಡಲು ಬರೋದಿಲ್ಲ. ಈ ಒಂದು ನಿಯಮವನ್ನು ಜನರು ತುಂಬಾ ದುರ್ಬಳಕೆ ಕೂಡ ಮಾಡುತ್ತಾರಂತೆ. ಪಕ್ಕದ ಹೊಲ ಮಾರಾಟ ಆಗಬಾರದು ಅಂತ ಯಾವನೋ ನಿರ್ಧರಿಸಿದರೆ ಅವನು ಪದೆ ಪದೆ ಯಾರಾರದೋ ಬಳಿಯಲ್ಲಿ ಸರ್ವೇ ಅಪ್ಲೈ ಮಾಡಿಸಬಹುದಂತೆ. ಸರ್ವೆ ತಡವಾದಷ್ಟು ಜಮೀನಿನ ಮಾರಾಟ ವಿಳಂಬವಾಗಿ ಕೊನೆಗೆ ವ್ಯಾಪಾರ ರದ್ದಾಗಿ ತನಗೇ ಜಮೀನು ದಕ್ಕುವಂತೆ ಮಾಡುತ್ತಾರಂತೆ! ಇಂತಹ ಕ್ರಿಮಿನಲ್ ವಿಚಾರಧಾರೆಗಳನ್ನು ತಿಳಿಸಿದಾತನೂ ತಾನೊಂದು ಹೊಲದ ಮೇಲೆ ಕಣ್ಣು ಹಾಕಿದವನೇ ಆಗಿದ್ದ.

ನನಗೇನು ಜಮೀನು ಮಾರಾಟ ಮಾಡುವುದು ಇರಲಿಲ್ಲವಾದ್ದರಿಂದ ನಾನು ಕಾಯಲು ಸಿದ್ಧನಿದ್ದೆ. ಅದೂ ಅಲ್ಲದೆ ಬೇಲಿಗೆ ಅಂತ ಸಿಗುವ ಸಾಲ ಇನ್ನೂ ಒಂದು ವರ್ಷ ತಡ ಇತ್ತಲ್ಲ. ಅದೂ ಅಲ್ಲದೆ ಸರ್ವೇ ಮಾಡಬೇಕೆಂದರೆ ಸುತ್ತಮುತ್ತಲಿನ ಗಡಿ ಹಂಚಿಕೊಂಡ ರೈತರಿಗೂ ತಿಳಿಸಬೇಕು. ಎಲ್ಲರ ಸಮಕ್ಷಮವೇ ಸರ್ವೆ ಕಾರ್ಯ ನಡೆಯಬೇಕು.

ಸರ್ವೇಗೆ ಅರ್ಜಿ ಸಲ್ಲಿಸಿ ಒಂದೆರಡು ತಿಂಗಳಾಗಿತ್ತು. ಅಷ್ಟೊತ್ತಿಗೆ ಮಳೆ ಇನ್ನೂ ಜೋರಾಗಿತ್ತು. ಭತ್ತದ ತೆನೆಗಳು ಸಮೃದ್ಧವಾಗಿ ಬೆಳೆದಿದ್ದವು. ಕಳೆ ನಾಶಕದ ಬಳಕೆ ಮಾಡಿರಲಿಲ್ಲವಾದ್ದರಿಂದ ಭತ್ತದ ನಡುವೆ ಕಳೆ ಕೂಡ ಜಾಸ್ತಿ ಇತ್ತು. ನಮಗೆ ಮಾತ್ರ ಸಹಜ ಕೃಷಿ ಮಾಡುತ್ತಿರುವ ತೃಪ್ತಿಯಿತ್ತು. ತುಂಬಾ ಭತ್ತದ ಹುಲ್ಲು ಇದ್ದ ಕಾರಣ ಹೊಲದ ನಡುವೆ ಅಡ್ಡಾಡುವುದು ಕಷ್ಟ ಆಗಿತ್ತು. ಮಳೆಯೂ ಬಿಟ್ಟುಬಿಡದೆ ಹೊಡೆಯುತ್ತಿದ್ದ ಕಾರಣ ನಾನು ಕೆಲವು ದಿನಗಳ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದೆ. ಅವತ್ತೊಂದು ದಿನ ಒಂದು ಕರೆ ಬಂತು. ಅವರು ತಮ್ಮ ಹೆಸರು ಹೇಳಿ ಸರ್ವೇ department ನಿಂದ ಕರೆ ಮಾಡಿರುವುದಾಗಿ ತಿಳಿಸಿ ತಾನು ನಮ್ಮ ಹೊಲದಲ್ಲಿ ಇದ್ದೇನೆ ಎಂದರು. ಮೊದಲೇ ತಿಳಿಸಬೇಕಿತ್ತು ನಾನು ಊರಲಿಲ್ಲ ಅಂದಿದ್ದಕ್ಕೆ, ನಿಮಗೆ ಈಗಾಗಲೇ ಪತ್ರ ಕಳಿಸಿದ್ದೇವೆ, ನಿಮಗೆ ತಿಳಿದಿಲ್ಲವೇ ಎಂಬ ಉತ್ತರ ನೀಡಿದರು. ಮೊಬೈಲ್ ಬಳಕೆ ಸರ್ವೇಸಾಮಾನ್ಯ ಆಗಿರುವ ಈ ಡಿಜಿಟಲ್ ಯುಗದಲ್ಲಿ ಕೂಡ ಪತ್ರ ಕಳಿಸಿದ್ದೆ ಎನ್ನುವ ಅವರು ಸುಳ್ಳು ಹೇಳುತ್ತಿದ್ದಾರೆ ಅಂತ ನನಗೆ ಅನಿಸಿತು.

ಮೊಬೈಲ್ ಬಳಸದ ಕೆಲವು ಜನ ಇನ್ನೂ ಹಳ್ಳಿಯಲ್ಲಿ ಇರಬಹುದು. ಆ ಕಾರಣಕ್ಕೆ ನಿಯಮಾನುಸಾರ ಪತ್ರದಲ್ಲಿ ತಿಳಿಸಿರಬಹುದು. ಆದರೂ ಬರುವ ಮೊದಲು ಒಂದು ಫೋನ್ ಮಾಡಬಹುದಿತ್ತು ಅಂತ ಅಂದೇ. ಅದಕ್ಕವರು ಆಯ್ತು ಬಿಡಿ ಈ ಸರ್ವೆ ಕಂಪ್ಲೀಟ್ ಅಂತ ಮಾಡುತೀನಿ. ಮುಂದೆ ಒಂದು ದಿನ ಯಾವುದೋ ರವಿವಾರ ನಿಮಗೆ ಸರ್ವೆ ಮಾಡಿಕೊಡುತ್ತೇನೆ ಅಂದರು! ಆಗ ನನಗೆ ಇವರ ಉದ್ದೇಶ ತಿಳಿಯಿತು. ಭತ್ತದ ಬೆಳೆ ಇರುವಾಗ ಅದೂ ಮಳೆಗಾಲದಲ್ಲಿ ಹೆಚ್ಚಾಗಿ ಯಾರೂ ಸರ್ವೇ ಮಾಡಲು ಸಾಧ್ಯವೇ ಇಲ್ಲ. ಅಂಥದರಲ್ಲಿ ನಿಮ್ಮ ಹೊಲಕ್ಕೆ ಬಂದಿದ್ದೆ ಅಂತ ಹೇಳಿ ಈ ರೀತಿ ಸುಲಿಗೆ ಮಾಡುವುದು ಎಂತಹ ನ್ಯಾಯ? ಅವರು ಸರಕಾರೀ ನೌಕರ ಆಗಿದ್ದೂ, ಹೀಗೆ ನಾವಿಲ್ಲದ ಹೊತ್ತಿನಲ್ಲಿ ಬಂದು, ಮುಂದೊಮ್ಮೆ private ಲೆಕ್ಕದಲ್ಲಿ ಸರ್ವೇ ಮಾಡಿಕೊಡುವ ಯೋಜನೆ ಅವರದು. ಈಗಾಗಲೇ ಕೊಟ್ಟ ಫೀಸ್ ಹೋಯ್ತು. ಮತ್ತೊಮ್ಮೆ ಅವರಿಗೆ ಇನ್ನೊಂದಿಷ್ಟು ಸಾವಿರಗಳನ್ನು ಕೊಡಬೇಕು. ಯಾರಿಗೆ ಹೇಳಬೇಕು? ಒಟ್ಟಿನಲ್ಲಿ ನಮ್ಮದು ಅರಣ್ಯರೋಧನ!

(ಮುಂದುವರಿಯುವುದು)