ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು. ದಾನ ಸಂಗ್ರಹಿಸುವ ನೂರಾರು ಸಮುದಾಯ ಸಂಸ್ಥೆಗಳು ಅವನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತವೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

ದೀಪಾವಳಿ ಹಬ್ಬದ ಝಗಝಗಿಸುವ ದೀಪಗಳು ಉರಿದು ತಣ್ಣಗಾಗಿ ಉತ್ತರಗೋಳದ ದೇಶಗಳಲ್ಲಿ ಚಳಿ ವ್ಯಾಪಿಸುತ್ತಾ ಅಂಧಕಾರ ದಟ್ಟೈಸಿ ನಿಟ್ಟುಸಿರು ಹೊರಬೀಳುವಾಗ ಝಗ್ಗೆಂದು ಚಿಮ್ಮುವುದು ಕ್ರಿಸ್ಮಸ್ ಹಬ್ಬದ ಸೀಸನ್. ಈ ಒಂದು ಹಬ್ಬಕ್ಕೆ ಬಡವ-ಬಲ್ಲಿದ, ಮೇಲು-ಕೀಳು ವರ್ಗದ ಭೇದವಿಲ್ಲ. ಕ್ರಿಸ್ಮಸ್ ಆಚರಿಸುವುದಾದರೆ ಸೈ, ಅದನ್ನು ನಿಮ್ಮ ಮಟ್ಟಕ್ಕೆ ತಂದುಕೊಂಡು ನಿಮ್ಮದೇ ರೀತಿಯಲ್ಲಿ ಆಚರಿಸಬಹುದು. ನನಗೆ ತಿಳಿದಂತೆ ಭಾರತದಿಂದ ದೂರವಾಗಿ ಹೊರದೇಶಗಳಲ್ಲಿ ವಾಸಿಸುವ ಅನೇಕ ಭಾರತೀಯರು ತಮ್ಮ ಮನೆಗಳಲ್ಲಿ ಕ್ರಿಸ್ಮಸ್ ಮರವನ್ನಿಟ್ಟುಕೊಂಡು ಅದಕ್ಕೆ ಅಲಂಕಾರ ಮಾಡಿ ಆನಂದಿಸುತ್ತಾರೆ. ಅಂದರೆ ಜಾತಿ, ಧರ್ಮಗಳ ಚೌಕಟ್ಟನ್ನು ಮೀರಿ ಸಂಭ್ರಮ, ಸಡಗರಗಳಿಂದ ಎಲ್ಲರೂ ಖುಷಿಪಡುವುದು ಬಹುಶಃ ಈ ಒಂದು ಕ್ರಿಸ್ಮಸ್ ಸೀಸನ್‌ನಲ್ಲಿ ಮಾತ್ರವೆನಿಸುತ್ತದೆ.

ಶಾಲೆಗಳಲ್ಲಿ ಕ್ರಿಸ್ಮಸ್ ಲಂಚ್ ಮತ್ತು ಉದ್ಯೋಗ ಸಂಸ್ಥೆಗಳಲ್ಲಿ ಸಹೋದ್ಯೋಗಿಗಳು ಸೇರುವ ‘ಕ್ರಿಸ್ಮಸ್ ಡು’ ಡಿನ್ನರ್ ಗೆಟ್ ಟುಗೆದರ್ ಖಾಯಂ ಆಗಿದೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಡಿಸೆಂಬರ್ ೨೫ರಿಂದ ಜನವರಿ ೨ರ ತನಕ ಸಾರ್ವತ್ರಿಕ ರಜೆಯಿರುತ್ತದೆ. ನಮ್ಮ ಆಸ್ಟ್ರೇಲಿಯಾದಲ್ಲಿ ಕ್ರಿಸ್ಮಸ್ ಹಬ್ಬವು ಕಡು ಬೇಸಿಗೆಯಲ್ಲಿ ಬರುತ್ತದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಬೇಸಿಗೆ ರಜೆ. ಹಾಗಾಗಿ ಬಹುತೇಕ ಜನರು ಏಳು, ಎಂಟು ದಿನಗಳ ಕ್ರಿಸ್ಮಸ್ ಕ್ಲೋಶರ್ ಅವಧಿಗೆ ಹೊಂದಿಸಿಕೊಂಡು ಮತ್ತಷ್ಟು ರಜೆ ಪಡೆದು ಪ್ರವಾಸ ಹೊರಡುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಣ್ಣ ಉದ್ಯಮಗಳವರು ಕ್ರಿಸ್ಮಸ್ ದಿನದಂದು ಕೂಡ ಕೆಲಸ ಮಾಡುತ್ತಲೇ ಒಂದಷ್ಟು ಹೆಚ್ಚುವರಿ ಲಾಭ ಮಾಡಿಕೊಳ್ಳುತ್ತಾರೆ.

ಹೋದವಾರ ಟಿವಿಯಲ್ಲಿ ಫಿನ್ಲ್ಯಾಂಡ್ ದೇಶದ ಜಗತ್ಪ್ರಸಿದ್ಧಿ ಪಡೆದ ಲಾಪ್ಲ್ಯಾಂಡ್ ನಲ್ಲಿರುವ ಸಾಂಟಾ ಕ್ಲಾಸ್ ಹಳ್ಳಿಯ ಬಗ್ಗೆ ಕಾರ್ಯಕ್ರಮವನ್ನು ವೀಕ್ಷಿಸುವಾಗ ಕ್ರಿಸ್ಮಸ್ ಹಬ್ಬವು ಸಂಪ್ರದಾಯವನ್ನು ದಾಟಿ ಈಗೊಂದು ಸಾಂಘಿಕ ಮನಃಸ್ಥಿತಿಯಾಗಿದೆ ಅನ್ನಿಸಿತು. ಜೊತೆಗೆ ಪ್ರವಾಸೋದ್ಯಮವೂ ಸೇರಿದೆ. ಮತ್ತೊಂದು ಜನಪ್ರಿಯ ವಿಷಯ ಕ್ರಿಸ್ಮಸ್ ಮಾರ್ಕೆಟ್ಸ್ ಎನ್ನುವುದು. ಇಂತಹ ಮಾರುಕಟ್ಟೆಗಳನ್ನು ನೋಡಲು ಜನರು ಪ್ಯಾರಿಸ್, ಜರ್ಮನಿ, ನ್ಯೂಯಾರ್ಕ್‌ಗಳಿಗೆ ಧಾವಿಸುತ್ತಾರೆ. ಬೀದಿಬೀದಿಯಲ್ಲಿ ಬಣ್ಣದ ಓಕುಳಿ, ಎಲ್ಲೆಲ್ಲೂ ಬಣ್ಣಬಣ್ಣದ ದೀಪಾಲಂಕಾರ, ಹಾಡುಗಳು, ಬಗೆಬಗೆಯ ತಿಂಡಿತಿನಿಸುಗಳ ಮಾರಾಟ. ಫೆಸ್ಟೀವ್ ಸೀಸನ್‌ನಲ್ಲಿ ಅದ್ದಿಕೊಂಡು, ಮುಳುಗಿ, ‘ಖುಷಿ’ ಎನ್ನುವ ಫೇರಿಯನ್ನು ಮೈಮೇಲೆ ಅಂಟಿಸಿಕೊಂಡು ಆನಂದಿಸುವ ಜನರನ್ನು ನೋಡುವುದು ಇನ್ನೊಂದು ತರಹದ ಖುಷಿ. ಮೈಕೊರೆಯುವ ಚಳಿಯನ್ನು ನಿಭಾಯಿಸಲು ಮೈಮೇಲೆ ಕಪ್ಪು ಉಡುಗೆಯಿದ್ದರೂ ಅದೇನೋ ಉಲ್ಲಾಸದಿಂದ ಸಡಗರಿಸುತ್ತ ಸುತ್ತಲೂ ಹರಡಿರುವ ಬಣ್ಣಗಳ ಲೋಕವನ್ನು ಆಸ್ವಾದಿಸುವ ಜನರಿಗೆ ಕ್ರಿಸ್ಮಸ್ ಒಂದು ಆತ್ಮವನ್ನ ಬೆಚ್ಚಗಿರಿಸುವ ಸೀಸನ್. ಹಿಮದೇಶಗಳ ಚಳಿ, ಕತ್ತಲು ತುಂಬಿದ ವಾತಾವರಣಕ್ಕೆ ಬೇಕೇಬೇಕಿದ್ದ ಹಬ್ಬ.

ಅದೆಷ್ಟೋ ವರ್ಷಗಳ ಹಿಂದೆ ನಾವೂ ಕೂಡ ಕ್ರಿಸ್ಮಸ್ ಸೀಸನ್ ಹೇಗಿರುತ್ತದೆ, ಅದನ್ನು ಒಮ್ಮೆ ನೋಡೋಣವೆಂದು ಕುಟುಂಬಸಮೇತ ಪ್ಯಾರಿಸ್ ನಗರಕ್ಕೆ ಹೋಗಿದ್ದೆವು. ಪ್ಯಾರಿಸ್ ನಗರದ ಮುಖ್ಯ ರಸ್ತೆಗಳಲ್ಲಿ, ಕ್ರಿಸ್ಮಸ್ ಮಾರುಕಟ್ಟೆಗಳಲ್ಲಿ ಇದ್ದ ಆ ಪಾಟಿ ಜನಜಂಗುಳಿ ನೋಡಿ ಮಕ್ಕಳು ಸ್ವಲ್ಪ ಗಾಬರಿಯಾಗಿದ್ದರು. ನಮಗೂ ಸ್ವಲ್ಪ ಚಿಂತೆಯಾಗಿತ್ತು. ಅದರ ನಡುವೆಯೂ ಅಲ್ಲಿಲ್ಲಿ ಓಡಾಡಿ, ಬೆರಗುಗೊಂಡು, ಫ್ರೆಂಚ್ ಕ್ರೆಪ್ಸ್ ತಿಂದು, mulled wine ಕುಡಿದು ನಾವೂ ಸ್ವಲ್ಪ ಫ್ರೆಂಚರಾದೆವು. ಈ ಫ್ರೆಂಚ್ ಕ್ರೆಪ್ಸ್ ಎನ್ನುವುದು ದೋಸೆ ತರಹದ ತಿಂಡಿ. ಅದರ ಜೊತೆ ಕ್ರೀಮ್ ಮತ್ತು ಮೇಪಲ್ ಸಿರಪ್ ನೆಂಚಿಕೊಂಡು ತಿನ್ನುವುದು ಸಂಪ್ರದಾಯ. ಅದಲ್ಲದೆ ನೆಂಚಿಕೊಳ್ಳಲು ತರಹಾವರಿ ಪದಾರ್ಥಗಳಿವೆ-ಚಾಕೋಲೇಟ್, ಐಸ್ ಕ್ರೀಮ್, ವಿವಿಧ ಸಿರಪ್, ಉಪ್ಪು-ಖಾರದ ಪದಾರ್ಥಗಳೂ ಇವೆ.

ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು. ದಾನ ಸಂಗ್ರಹಿಸುವ ನೂರಾರು ಸಮುದಾಯ ಸಂಸ್ಥೆಗಳು ಅವನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತವೆ. ಇಲ್ಲವೇ, ಅಗತ್ಯವಿರುವ ಜನರು ತಾವೇ ಹೋಗಿ ದಾನ ಕೇಳಿ ಪಡೆಯುತ್ತಾರೆ. ನಾವೂ ಕೂಡ ಒಂದಷ್ಟು ಮಕ್ಕಳ ಆಟಿಕೆಗಳು, ಎಂದೂ ಉಪಯೋಗಿಸಿದ ವಸ್ತುಗಳನ್ನು ದಾನ ಮಾಡಿದ್ದೀವಿ. ಅಷ್ಟೊಂದು ಕೋವಿಡ್-೧೯ ರ ಕಾಟವಿಲ್ಲದ ಈ ವರ್ಷ ಆಸ್ಟ್ರೇಲಿಯಾದ ನಗರಗಳ ಹಲವೆಡೆ ಕ್ರಿಸ್ಮಸ್ ದಿನದಂದು ಉಚಿತ ಭೋಜನದ ಏರ್ಪಾಡಾಗಿದೆ. ಜನರು ಸಾಮಾಜಿಕ ತಾಣಗಳಲ್ಲಿ ಅವುಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದಾರೆ.

ಹೊರನಾಡಿನ ಭಾರತೀಯರು ಸಾಂಟಾ ಇದ್ದಾನೋ, ಇಲ್ಲವೋ, ಕ್ರಿಸ್ಮಸ್ ಆಚರಿಸುವುದೋ ಬೇಡವೋ ಎನ್ನುವ ಜಿಜ್ಞಾಸೆಗೆ ಒಳಗಾಗುವುದು ಇಲ್ಲವೇಇಲ್ಲ. ನಮ್ಮ ಮಕ್ಕಳು ತಮ್ಮ ಶಾಲೆಯಲ್ಲಿ ಆಚರಿಸುವ ಕ್ರಿಸ್ಮಸ್ ನಮ್ಮಗಳ ಮನೆಗೂ ಬಂದಿಳಿಯುತ್ತದೆ. ಶಾಲೆಯಲ್ಲಿ ಮಕ್ಕಳು ಒಂದು ತಿಂಗಳು ಕ್ರಿಸ್ಮಸ್ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ದೊಡ್ಡವರೂ ಕೂಡ ಅವುಗಳಲ್ಲಿ ಭಾಗಿಯಾಗಲೇ ಬೇಕು. ಅಂತಹ ಆಕರ್ಷಣೆ, ಮುಕ್ತ ಮನಸ್ಸಿನ ಆಹ್ವಾನ ಒಂದು ಮಾತಾದರೆ, ಇನ್ನೊಂದು ನಾವು ಬದುಕುವ ಸಮಾಜದ ಅವಿಭಾಜ್ಯ ಅಂಗವಾದ ಕ್ರಿಸ್ಮಸ್ ಸೀಸನ್‌ನಿಂದ ದೂರವಿರುವುದು ಕಷ್ಟವೇ ಸರಿ. ಈ ಮಾತು ಹೇಳುವಾಗ ಹೋದವರ ಒಂದು ಸುದ್ದಿ ನೆನಪಿಗೆ ಬಂತು. ನಮ್ಮ ಬ್ರಿಸ್ಬೇನ್ ನಗರದ ಉತ್ತರದ ಬಡಾವಣೆಯಲ್ಲೊಂದು ಕಡೆ ಅಲ್ಲಿನ ಜನರು ನೇಟಿವಿಟಿ ಶೋ ಏರ್ಪಡಿಸಿದ್ದರಂತೆ. ಅಂದರೆ ಯೇಸು ಕ್ರಿಸ್ತ ಹುಟ್ಟಿದ ಸಂದರ್ಭದ ಪ್ರದರ್ಶನ. ಯೇಸು ಹುಟ್ಟಿದ ಕೊಟ್ಟಿಗೆಯ ಚಿತ್ರಣದೊಂದಿಗೆ ಅಲ್ಲಿ ನಿಜವಾಗಿಯೂ ಒಂಟೆಗಳನ್ನು ಕರೆಸಿ ನಿಲ್ಲಿಸಿದ್ದರಂತೆ. ತುಂಟ ಒಂಟೆಗಳು ತಪ್ಪಿಸಿಕೊಂಡು ಅಲ್ಲಲ್ಲಿ ಬಡಾವಣೆಗಳನ್ನು ಸುತ್ತುತ್ತಾ ಓಡಾಡುವುದು ದೊಡ್ಡ ಸುದ್ದಿಯಾಗಿತ್ತು.

ಬೇಕಿರದ ತುಂಟಾಟ, ಚೇಷ್ಟೆ, ಒಂದಷ್ಟು ಕಳ್ಳಾಟಗಳು ಕ್ರಿಸ್ಮಸ್ ಸೀಸನ್ ನಲ್ಲಿ ಹೆಚ್ಚುತ್ತವೆ. ನಾವು ವಲೊಂಗೊಂಗ್‌ನಲ್ಲಿ ವಾಸವಿದ್ದಾಗ ಕ್ರಿಸ್ಮಸ್ ಸಮಯದಲ್ಲಿ ನಮ್ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರಿಗೆ ಪ್ರಿಯವಾದದ್ದು ನಮ್ಮ laptop, waterproof ಕ್ಯಾಮೆರಾ, ಮ್ಯೂಸಿಕ್ ಸಿಸ್ಟಮ್ ಸ್ಪೀಕರ್‌ಗಳು. ಈಗೀಗಂತೂ ಕಳ್ಳತನ ಹೆಚ್ಚುತ್ತಿದೆ. ಸರಕಾರದವರು ಪ್ರತಿ ಕ್ರಿಸ್ಮಸ್ ಸಮಯದಲ್ಲೂ ಬಿ ಕೇರ್ಫುಲ್ ಎಂದು ಹೇಳುತ್ತಿರುತ್ತಾರೆ. ಇದರ ಜೊತೆಗೆ ರಸ್ತೆ ಅಪಘಾತಗಳ ತಡೆಗಾಗಿ ‘ಆಲ್ಕೋಹಾಲ್ ಕುಡಿದು ವಾಹನ ಚಲಾಯಿಸಬೇಡಿ’ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಕೊಡುತ್ತಾರೆ.

ಇದೆಲ್ಲದರ ನಡುವೆ, ಕೋವಿಡ್-೧೯ರ ಕಾಟವಿಲ್ಲದ ಈ ವರ್ಷ ಕ್ರಿಸ್ಮಸ್ ಸಡಗರವೇ ಒಂದು ತರಹದ ಥೆರಪಿ ಎನ್ನಿಸಿದೆ. ಮನಕ್ಕೆ ಉಲ್ಲಾಸ, ಎಲ್ಲರೊಡನೆ ನಗು, ಹಾಡು, ಕುಣಿತ, ಕುಟುಂಬದ ಸದಸ್ಯರೆಲ್ಲ ಸೇರಿ ನಲಿಯುವ ಸಮಯ. ಕ್ರಿಸ್ಮಸ್ ಕ್ಯಾರೋಲ್ ಹಾಡುಗಾರಿಕೆ, ವಾದ್ಯಗಳ ಸಂಗೀತ, ಸಾಂಟಾ ಕ್ಲಾಸ್-ಧಾರಿಗಳು ಶುಭಹಾರೈಕೆ ಹೇಳುವುದು, ಮಕ್ಕಳಿಗೆ ವಿಶೇಷವಾಗಿ ಹರಸುವುದು ಬಲು ಚೆಂದ. ಬೀದಿಗಳಲ್ಲಿ ಸಾಂಟಾನ ಹಾಡುವ ಗಾಡಿ ಬಂತೆಂದರೆ ಮಕ್ಕಳು, ದೊಡ್ಡವರಿಗೂ ಏನೋ ಉಲ್ಲಾಸ. ಕತ್ತಲಾದೊಡನೆ ಕ್ರಿಸ್ಮಸ್ ಲೈಟ್ಸ್ ನೋಡಲು ಬೀದಿಬೀದಿ ಸುತ್ತುವುದು, ಸ್ನೇಹಿತರನ್ನು ಭೇಟಿಯಾಗುವುದು ಎಲ್ಲವೂ Season‘s Greetings!