ವೇದಕಾಲದಲ್ಲಿದ್ದ ಹೆಚ್ಚಿನ ರಾಜ್ಯಗಳು ರಾಜರುಗಳಿಂದ ಆಳಲ್ಪಡುತ್ತಿದ್ದುವು. ಕೆಲವು ಪ್ರಜಾರಾಜ್ಯಗಳೂ ಇದ್ದುವು. ಅಧಿಕಾರವು ಪಾರಂಪರ್ಯವಾಗಿತ್ತು. ರಾಜರ ನಿರಂಕುಶ ಅಧಿಕಾರಕ್ಕೆ ಆಸ್ಪದವಿರಲಿಲ್ಲ. ರಾಜರ ಸಹಾಯಕ್ಕಾಗಿ ಒಂದು ಬೋಧಕ ಮಂಡಳಿಯಿತ್ತು. ಪುರೋಹಿತನು ಇದರ ಪ್ರಧಾನಿಯಾಗಿದ್ದನು. ಸೇನಾನಿ ಮತ್ತು ಗ್ರಾಮದ ಮುಖ್ಯಸ್ಥ ಗ್ರಾಮಣಿಯು ಯುದ್ಧದಲ್ಲಿ ರಾಜನಿಗೆ ಸಹಾಯಕರಾಗಿರುತ್ತಿದ್ದರು. ಸಮಿತಿ ಮತ್ತು ಸಭ ಎಂಬ ಎರಡು ಸಂಸ್ಥೆಗಳಿದ್ದುವು. ರಾಜ್ಯವು ವಿಸ್ತಾರವಾಗುತ್ತ, ರಾಜನ ಅಧಿಕಾರವು ಹೆಚ್ಚುತ್ತಾ ಬಂದು, ವಾಜಪೇಯ, ರಾಜಸೂಯ, ಅಶ್ವಮೇಧವೆಂಬ ಯಾಗಗಳನ್ನು ಮಾಡುವ ಅರಸರ ರಾಜ್ಯಗಳು ರಾಜ್ಯ, ವೈರಾಜ್ಯ, ಸಾಮ್ರಾಜ್ಯಗಳೆಂದು ಕರೆಯಲ್ಪಡುತ್ತಿದ್ದುವು. ಆದರೂ ರಾಜನ ಸಮಿತಿಯಲ್ಲಿ ಪುರೋಹಿತರ ಪ್ರಾಬಲ್ಯವೇನೂ ಕಡಿಮೆಯಾಗಿರಲಿಲ್ಲ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

ಶಿಲಾಯುಗದ ಜನಜೀವನ

ಅತಿ ಪುರಾತನ ಕಾಲದಲ್ಲಿ ಹಿಂದೂದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ನಾಗರಿಕತೆ ಮತ್ತು ಧರ್ಮದ ಅರಿವು ಇದ್ದಂತೆ ತೋರುವುದಿಲ್ಲ. ಮಧುರೆ, ತಿರುಚಿರಪಳ್ಳಿ, ತಂಜಾವೂರು, ಕಡಪ, ಬಳ್ಳಾರಿ ಮೊದಲಾದೆಡೆಗಳಲ್ಲಿ ಸಿಕ್ಕಿದ ಕುರುಹುಗಳ ಮೂಲಕ ಇವರು ನಾಡಾಡಿ ಜೀವನವನ್ನು ಅನುಸರಿಸುತ್ತಿದ್ದರೆಂದೂ, ಪ್ರಕೃತಿಯಲ್ಲಿ ದೊರೆತ ಗೆಡ್ಡೆಗೆಣಸುಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಹಾಗೂ ಬೇಟೆಯಾಡಿ ಸಿಕ್ಕಿದ ಮೃಗ ಪಕ್ಷಿಗಳ ಮಾಂಸಗಳನ್ನೂ ತಿಂದು ಬದುಕುತ್ತಿದ್ದರು ಎಂದೂ ತಿಳಿಯುತ್ತದೆ. ಇವರಿಗೆ ದೇವರ ಕುರಿತಾದ ಜ್ಞಾನವಿರಲಿಲ್ಲ. ಮೃತಶರೀರಕ್ಕೆ ಸಂಸ್ಕಾರವಿರಲಿಲ್ಲ. ಮೃಗಗಳಿಗೆ ಸಮಾನವಾದ ಜೀವನವನ್ನು ಅವರು ಜೀವಿಸುತ್ತಿದ್ದರು. ಮೈಗೆ ಸೊಪ್ಪನ್ನೋ ಮೃಗಚರ್ಮವನ್ನೋ ಸುತ್ತಿಕೊಂಡಿರುತ್ತಿದ್ದರು. ಆದಿಯಲ್ಲಿ ಬೆಂಕಿಯ ಅರಿವು ಕೂಡಾ ಇರಲಿಲ್ಲ. ಬೇಟೆಯಾಡಲು ಕಲ್ಲುಗಳನ್ನು, ಕಲ್ಲಿನ ಸಾಧನಗಳನ್ನು ಉಪಯೋಗಿಸುತ್ತಿದ್ದರು. ಮೊದಲು ಶಿಲಾಯುಗ – ಪುರಾತನ ಶಿಲಾಯುಗದಲ್ಲಿ ಈ ಕಲ್ಲಿನ ಆಯುಧಗಳು ಅಷ್ಟು ನಾಜೂಕಾಗಿರಲಿಲ್ಲ. ಕಾಲಕ್ರಮೇಣ ನೂತನ ಶಿಲಾಯುಗದಲ್ಲಿ ಅವು ನಾಜೂಕಾಗತೊಡಗಿದುವು. ಕಲ್ಲಿನಿಂದ ವಿವಿಧ ಉಪಕರಣಗಳನ್ನು ಅವರು ತಯಾರಿಸಲು ಕಲಿತರು. ಮೊದಲಿನ ಭಾಗವನ್ನು ಪುರಾತನ ಶಿಲಾಯುಗವೆಂತಲೂ (ಪಲೆಯೋಲಿತಿಕ್) ಎರಡನೇ ಭಾಗವನ್ನು ನೂತನ ಶಿಲಾಯುಗವೆಂತಲೂ (ನಿಯೋಲಿತಿಕ್) ಪರಿಭಾವಿಸಲಾಗುತ್ತದೆ.

ದ್ರಾವಿಡರ ಜನಜೀವನ

ಮುಂದೆ ದ್ರಾವಿಡರ ಕಾಲಕ್ಕೆ ಬಂದರೆ, ದ್ರಾವಿಡರು ನಗರ ಯೋಜನೆಯಲ್ಲಿ ಮುಂದುವರಿದವರಾಗಿದ್ದರು. ಆರೋಗ್ಯ ನಿಯಮಗಳು, ಸೌಂದರ್ಯಾಭಿರುಚಿ ಇವರಲ್ಲಿದ್ದುವು. ಲಿಪಿಗಳ ಜ್ಞಾನವೂ ಇತ್ತು. ಗೋಧಿ, ಬಾರ್ಲಿ, ಮೀನು ಇವರ ಆಹಾರ ವಸ್ತುಗಳಾಗಿದ್ದುವು. ಹತ್ತಿಬಟ್ಟೆಯನ್ನು ನೇಯಲು ಮತ್ತು ಉಡಲು ಕಲಿತುಕೊಂಡಿದ್ದರು. ಕ್ಷೌರ ಮಾಡಿಕೊಳ್ಳುತ್ತಿದ್ದರು. ದಂತ, ತಾಮ್ರ, ಚಿನ್ನ, ಚಿಪ್ಪುಗಳಿಂದ ಮಾಡಿದ ಬಳೆ, ತೋಳುಬಂದಿ ಮೊದಲಾದ ಆಭರಣಗಳನ್ನು ಧರಿಸುತ್ತಿದ್ದರು. ಮೀನುಗಾರಿಕೆ, ಬೇಟೆ ಇವರ ಮುಖ್ಯ ವಿನೋದಗಳಾಗಿದ್ದುವು. ಕೃಷಿ ಮತ್ತು ವ್ಯಾಪಾರ ಪ್ರಮುಖ ವೃತ್ತಿಗಳಾಗಿದ್ದುವು. ಜಾನುವಾರು, ನಾಯಿ ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಪಟ್ಟಣದ ಆಡಳಿತೆಗೆ ಸಕ್ರಮವಾದ ಹೆಜ್ಜೆಗಳನ್ನು ತೆಗೆದುಕೊಂಡಿದ್ದರು.

ಆರ್ಯರ ಕಾಲದ ಸಾಮಾಜಿಕ ಜೀವನ

ವೇದಕಾಲದ ಆರ್ಯರ ಪ್ರಧಾನ ವೃತ್ತಿಯು ಕೃಷಿಯಾಗಿದ್ದಿತು. ಗೋಧಿ, ಬಾರ್ಲಿಗಳನ್ನು ಬೆಳೆಸುತ್ತಿದ್ದರು; ದನ, ಕುರಿ, ನಾಯಿ ಮುಂತಾದ ಪ್ರಾಣಿಗಳ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದರು. ಚಿನ್ನ, ಕಬ್ಬಿಣಗಳನ್ನು ಬಳಸಲು ಅರಿತಿದ್ದರು. ರೊಟ್ಟಿ, ಹಾಲು, ತುಪ್ಪ, ಮಾಂಸಗಳು ಅವರ ಮುಖ್ಯ ಆಹಾರಗಳಾಗಿದ್ದುವು. ಬೇಟೆ, ಜೂಜು, ರಥಸವಾರಿ, ವಾದ್ಯ ಬಾರಿಸುವುದು ಮತ್ತು ನೃತ್ಯ ಅವರ ಕೆಲವು ಪ್ರಮುಖ ವಿನೋದಗಳಾಗಿದ್ದುವು. ಉಣ್ಣೆ ಮತ್ತು ಹತ್ತಿಯ ಬಟ್ಟೆಯನ್ನು ಉಪಯೋಗಿಸುತ್ತಿದ್ದರು. ತಮ್ಮ ತಲೆಗೂದಲನ್ನು ಅಲಂಕರಿಸಿಕೊಳ್ಳುತ್ತಿದ್ದರು.

ಆರ್ಯರಲ್ಲಿ ಪೈತೃಕ ಸಮಾಜ ಪದ್ಧತಿ ಆಚರಣೆಯಲ್ಲಿತ್ತು. ಸ್ತ್ರೀ-ಪುರುಷ ವೈವಾಹಿಕ ಜೀವನವು ಪವಿತ್ರವೆಂದು ತಿಳಿಯಲಾಗುತ್ತಿತ್ತು. ಹೆಂಗಸು ಗಂಡನಿಗೆ ವಿಧೇಯಳಾಗಿ ಇರಬೇಕಿತ್ತು. ಹದಿನೈದು ಅಥವಾ ಹದಿನಾರು ವರ್ಷಗಳನ್ನು ಸ್ತ್ರೀಯರ ವಿವಾಹದ ವಯಸ್ಸೆಂದು ಇರಿಸಿದ್ದರು. ಸ್ತ್ರೀಯರಿಗೆ ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿತ್ತು. ಸತಿ ಸಹಗಮನ ಪದ್ಧತಿ ಇರಲಿಲ್ಲ. ನಿಯೋಗವು ಕೆಲವೊಮ್ಮೆ ಆಚರಿಸಲ್ಪಡುತ್ತಿತ್ತು. ವರ್ಣಾಶ್ರಮ ಪದ್ಧತಿ ಆಚರಣೆಯಲ್ಲಿದ್ದು, ಒಂದು ತರದ ಶ್ರಮ ವಿಭಾಗವು ರೂಢಿಯಲ್ಲಿತ್ತು. ಜಾತಿಗಳಲ್ಲಿ ಮೇಲು ಕೀಳೆಂಬ ಭಾವನೆಯಿರಲಿಲ್ಲ. ಕಳವು, ಕೊಲೆ, ಭ್ರೂಣಹತ್ಯೆ ಮುಂತಾದುವು ಅಪರಾಧಗಳೆಂದು ಪರಿಗಣಿಸಲ್ಪಡುತ್ತಿದ್ದುವು. ಬ್ರಹ್ಮಹತ್ಯೆ, ಸುವರ್ಣಸ್ತೇಯಗಳಿಗೆ ಕಾಯಿಸಿದ ಕೊಡಲಿಯನ್ನು ಅಂಗೈಯಲ್ಲಿ ಹಿಡಿಸುವುದೇ ಮೊದಲಾದ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು.

ಇತಿಹಾಸಕಾಲದ ಸಾಮಾಜಿಕ ಸ್ಥಿತಿ

ದೇಶವು ಸಂಪತ್ಸಮೃದ್ಧವಾಗಿತ್ತು. ಜಾತಿ ನಿರ್ಬಂಧಗಳಿರಲಿಲ್ಲ. ಆದರೆ ಚಾತುರ್ವರ್ಣ್ಯಗಳು ಕ್ರಮವಾಗಿ ಆಚರಣೆಯಲ್ಲಿದ್ದುವು. ಜನರು ಕುಲಕ್ಕಿಂತಲೂ ಶೀಲವೇ ಪ್ರಧಾನವೆಂದು ತಿಳಿಯುತ್ತಿದ್ದರು. ಬ್ರಾಹ್ಮಣ ಕುಲೋತ್ಪನ್ನನಾದ ರಾವಣನು ತನ್ನ ದುಷ್ಟತನಕ್ಕಾಗಿ ಶಿಕ್ಷಿಸಲ್ಪಟ್ಟನು. ಶೂದ್ರಜನಾದ ವಿದುರನು ಕೃಷ್ಣನಿಂದ ಪರಿಗ್ರಹಿಸಲ್ಪಟ್ಟನು. ಸ್ತ್ರೀಯರಿಗೆ ವಿದ್ಯಾಭ್ಯಾಸವು ಕೊಡಲ್ಪಡುತ್ತಿದ್ದರೂ, ಅದು ವೈದಿಕ ಕಾಲದ ಮಟ್ಟದಲ್ಲಿ ಇರಲಿಲ್ಲ. ಬಾಲ್ಯವಿವಾಹವು ಆಚರಣೆಯಲ್ಲಿರಲಿಲ್ಲ. ಸತಿ ಸಹಗಮನವು ಆಚರಣೆಯಲ್ಲಿತ್ತು, ಆದರೆ ಒತ್ತಾಯಪೂರ್ವಕವಾಗಿರಲಿಲ್ಲ. ವಿಧವೆಯರು ಈಗಿನಂತೆ ಸಮಾಜದಲ್ಲಿ ಹೀನರೆಂದು ಗಣಿಸಲ್ಪಡುತ್ತಿರಲಿಲ್ಲ.

ಸಂಗಂ ಕಾಲದ ಜನರ ಜೀವನ

ಸಂಗಂ ಕಾಲದಲ್ಲಿ ಭಾರತದಲ್ಲಿದ್ದ ಜನಜೀವನ ಕ್ರಮವು ಕ್ರಿ.ಶ. ಮೂರನೇ ಶತಮಾನದ ಕಾಮಸೂತ್ರಕಾರನಾದ ವಾತ್ಸ್ಯಾಯನನಿಂದ ತಿಳಿದುಬರುತ್ತದೆ. ಪರಕೀಯರ ಆಳ್ವಿಕೆಯೇ ಹೆಚ್ಚಾಗಿದ್ದ ಈ ಕಾಲದಲ್ಲಿ ಯುದ್ಧ ಮತ್ತು ವರ್ಣಸಂಕರಗಳ ಪರಿಣಾಮವಾಗಿ ನೈತಿಕ ಮಟ್ಟವು ಕೆಳಗಿಳಿದಿತ್ತು. ಮಧ್ಯ ಮತ್ತು ಪೂರ್ವ ಭಾರತವು ನೈತಿಕ ಮಟ್ಟದಲ್ಲಿ ಮುಂದುವರಿದು ನೀತಿಯ ತವರು ಮನೆಯಾಗಿತ್ತು. ಅಲ್ಲಿಯ ಜನರು ಶಿಷ್ಟರು ಅಥವಾ ಅತ್ಯುತ್ತಮ ಗುಣನಡತೆಯುಳ್ಳವರೆಂದು ಕರೆಯಲ್ಪಡುತ್ತಿದ್ದರು. ಬೆಕ್ಟ್ರಿಯಾದ ಸ್ತ್ರೀಯರು ಬಹುಪತೀತ್ವವನ್ನು ಆಚರಿಸುತ್ತಿದ್ದರು, ಮತ್ತು ಗಂಡಸರನ್ನು ಅಂತಃಪುರದ ಸ್ತ್ರೀಯರ ಮಟ್ಟಕ್ಕೆ ಇಳಿಸುತ್ತಿದ್ದರು. ಸಿಂಧ್, ಕಾಥಿಯಾವಾಡ್, ಗುಜರಾತ್ ಮತ್ತು ವಿದರ್ಭ, ಉತ್ತರ ಕೊಂಕಣಗಳಲ್ಲೂ ರಾಜರ ಅಂತಃಪುರಗಳಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದುವು. ದಾಕ್ಷಿಣಾತ್ಯರಲ್ಲಿ ಸೋದರ ಮಾವನ ಮಗಳನ್ನು ಮದುವೆಯಾಗುವ ಸಂಪ್ರದಾಯವಿತ್ತು. ಅಲ್ಲದೆ ತುಂಬು ಹರೆಯದ ಗಂಡಸು ತನಗಿಂತ ತೀರ ಎಳೆವಯಸ್ಸಿನ ಬಾಲೆಯನ್ನು ಮದುವೆಯಾಗುವ ಕ್ರಮವೂ ಇತ್ತು.

ವಾತ್ಸ್ಯಾಯನನ ಕಲ್ಪನೆಯ ನಾಗರಿಕ-ಪೌರನು ಬಹಳ ಸುಸಂಸ್ಕೃತನೂ ಆಯಾ ಕಾಲಕ್ಕೆ ನವೀನವಾದ ಬಟ್ಟೆಬರೆ ತೊಟ್ಟುಕೊಳ್ಳುವವನೂ ಅಗಿದ್ದನು. ಅವನು ವಾರದಲ್ಲಿ ಎರಡು ಸಲ ಕ್ಷೌರ ಮಾಡಿಸಿಕೊಳ್ಳುತ್ತಿದ್ದನು. ಸಾಹಿತ್ಯಾಸಕ್ತಿಯುಳ್ಳವನೂ ಸೌಂದರ್ಯಾಭಿರುಚಿಯುಳ್ಳವನೂ ವಿದ್ಯಾವಂತನೂ ಆಗಿದ್ದನು. ವಿಹಾರಭವನಗಳಿದ್ದುವು. ಆದರೆ ಅವನ ಪತ್ನಿಯು ಸ್ವಲ್ಪವೇ ಅಕ್ಷರಜ್ಞಾನವುಳ್ಳ ಆದರ್ಶ ಗೃಹಿಣಿಯಾಗಿದ್ದಳು.

ಸಾಮಾಜಿಕ ಜೀವನ – ಗುಪ್ತರ ಕಾಲ

ಕ್ಷಾತ್ರಪರೇ ಮೊದಲಾದ ಪರಕೀಯ ಜನಾಂಗಗಳು ಹಿಂದೂ ಮತವನ್ನು ಸೇರಿದ ಮೇಲೆ ಸಾಮಾಜಿಕ ಪುನರ್ವ್ಯವಸ್ಥೆ ಉಂಟಾಯಿತು. ಜಾತಿ ನಿರ್ಬಂಧಗಳು ಹೆಚ್ಚಾಗಿ ಬ್ರಾಹ್ಮಣರು ಸಮಾಜ ಮುಖಂಡರೆಂದು ಪರಿಗಣಿಸಲಾಯಿತು. ಪುರಾಣಗಳನ್ನು ಮತ್ತು ಜಾತಿ ನಿರ್ಬಂಧಗಳನ್ನು ಮೀರಿದವರಿಗೆ ನರಕದಲ್ಲಿ ದೊರಕುವ ಶಿಕ್ಷೆಗಳನ್ನು ಭಯಾನಕವಾಗಿ ಚಿತ್ರಿಸುವ ಕತೆಗಳು ಬರೆಯಲ್ಪಟ್ಟು ಜನರು ಜಾತಿಧರ್ಮಗಳನ್ನು ಮೀರದಿರಲು ಕಾರಣವಾದುವು. ಭಾರತದಲ್ಲಿ ಎಲ್ಲರೂ ಆಚರಿಸುತ್ತಿದ್ದ ಅಹಿಂಸೆಯನ್ನು ನೋಡಿ ಚೀನೀ ಯಾತ್ರಿಕ ಫಾಹಿಯಾನನು (ಕ್ರಿ.ಶ. 5ನೇ ಶತಮಾನ) ಆಶ್ಚರ್ಯಪಟ್ಟನು. “ಯಾರೂ ಪ್ರಾಣಿ ಹಿಂಸೆಯನ್ನು ಮಾಡುವುದಿಲ್ಲ. ಮದ್ಯವನ್ನು ಸೇವಿಸುವುದಿಲ್ಲ. ಈರುಳ್ಳಿಯನ್ನು ತಿನ್ನುವುದಿಲ್ಲ. ಕುರಿ ಕೋಳಿಗಳನ್ನು ಸಾಕುವುದಿಲ್ಲ. ಪಟ್ಟಣದ ಹೊರಗೆ ವಾಸಿಸುವ ಚಾಂಡಾಲರು ಮಾತ್ರ ಬೇಟೆಯಾಡುತ್ತಾರೆ, ಮಾಂಸವನ್ನು ತಿನ್ನುತ್ತಾರೆ,” ಎಂದು ಫಾಹಿಯಾನನು ಬರೆಯುತ್ತಾನೆ. ಸ್ತ್ರೀಯರ ಸ್ವಾತಂತ್ರ್ಯವು ಈ ಕಾಲದಲ್ಲಿ ಸಂಪೂರ್ಣವಾಗಿ ಇಲ್ಲದಾಯಿತು. ಪತಿಯು ಹೇಗೆ ಹಿಂಸಿಸಿದರೂ ಪತ್ನಿಯು ಆತನನ್ನು ಪೂಜಿಸಬೇಕಿದ್ದಿತು. ಧಾರ್ಮಿಕ ಗ್ರಂಥಗಳ ಅಭ್ಯಾಸವು ಸ್ತ್ರೀಯರಿಗೆ ನಿಷಿದ್ಧವಾಗಿತ್ತು. ನಿಯೋಗವನ್ನು ನಿಷೇಧಕ್ಕೆ ಒಳಪಡಿಸಲಾಯಿತು. ಅನುರೂಪನಾದ ವರನು ದೊರಕದೆ ಇದ್ದಲ್ಲಿ ಮಾತ್ರ ಸ್ತ್ರೀಯರು ಬ್ರಹ್ಮಚರ್ಯವನ್ನು ಪಾಲಿಸುವುದು ಸಮ್ಮತವಾಗಿತ್ತು.

ಹರ್ಷನ ಕಾಲದ ಸಾಮಾಜಿಕ ಜೀವನ

ದೇಶವು ಸಂಪತ್ಸಮೃದ್ಧವಾಗಿದ್ದಿತು. ನಾಲ್ಕೂ ವರ್ಣದವರು ಅನ್ಯೋನ್ಯ ಹೊಂದಿಕೊಂಡು ಜೀವನ ಮಾಡುತ್ತಿದ್ದರು. ಅವರದು ಸರಳ ಜೀವನವಾಗಿದ್ದಿತು. ನೀತಿವಂತರೂ ಧರ್ಮನಿಷ್ಠರೂ ಆಗಿದ್ದರು. ಚಂಡಾಲರೆ ಮುಂತಾದವರು ಪಟ್ಟಣದ ಹೊರಗಡೆ ವಾಸಿಸುತ್ತಿದ್ದರು. ಸ್ತ್ರೀ ಪುನರ್ವಿವಾಹವು ನಿಷೇಧಿಸಲ್ಪಟ್ಟಿತ್ತು. ಸಮಾಜದ್ರೋಹಿಗಳಿಗೆ ಕಠಿಣವಾದ ಶಿಕ್ಷೆ ನೀಡಲ್ಪಡುತ್ತಿತ್ತು: ಕೈಕಾಲು ಕಡಿಯುವುದು, ಜೀವಾವಧಿ ಕಾರಾಗೃಹವಾಸ, ಜುಲ್ಮಾನೆ ಇತ್ಯಾದಿ. ಆದ್ದರಿಂದ ಅಂಥವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ಚೋಳರ ಏಳಿಗೆಯ ಕಾಲ

ನಾಲ್ಕು ವರ್ಣಗಳೊಳಗೆ ಅಸಂಖ್ಯ ಒಳಜಾತಿಗಳು ಹುಟ್ಟಿಕೊಂಡಿದ್ದುವು. ಬೇರೆ ಬೇರೆ ಜಿವನವನ್ನು – ಉದ್ಯೋಗಗಳನ್ನು – ಅವಲಂಬಿಸುವವರನ್ನು ಬೇರೆ ಬೇರೆ ಜಾತಿಯವರೆಂದು ಪರಿಗಣಿಸಲಾಗುತ್ತಿತ್ತು. ಜಾತಿಗಳೊಳಗೆ ನಿರ್ಬಂಧಗಳು ಬಿಗಿಯಾಗಿದ್ದು, ಅಂತರ್ಜಾತೀಯ ವಿವಾಹ ಸಂಬಂಧವು ನಿಷೇಧಿಲ್ಪಟ್ಟಿತ್ತು. ಅನುಲೋಮ ವಿವಾಹ ಕೂಡಾ ಆಚರಣೆಯಲ್ಲಿ ಇರಲಿಲ್ಲ. ಜಾತಿಭ್ರಷ್ಟರಾದವರನ್ನು ಸಂಸ್ಕರಿಸಿ ಪನಃ ಜಾತಿಗೆ ಸೇರಿಸಿಕೊಳ್ಳುವ ಪದ್ಧತಿಯೂ ಇರಲಿಲ್ಲ. ಇದರಿಂದಾಗಿ ಜಾತಿ ಕಳಕೊಂಡವನಿಗೆ ಹಿಂದಿನ ಜಾತಿಗೆ ಮರಳುವ ಯಾವ ಆಸೆಯೂ ಇರಲಿಲ್ಲ. ಸ್ತ್ರೀಯರಿಗೆ ಯಾವುದೇ ತರದ ಸ್ವಾತಂತ್ರ್ಯವೂ ಇರಲಿಲ್ಲ. ವಿಧವೆಯರಿಗೆ ಅಶನಾರ್ಥವು ವಿಧಿಸಲ್ಪಟ್ಟಿದ್ದು ಅವರ ಆರ್ಥಿಕ ಸ್ಥಿತಿ ಸುಧಾರಿಸಿದ್ದರೂ, ಸಮಾಜದಲ್ಲಿ ಅವರ ಸ್ಥಾನಮಾನ ಶೋಚನೀಯವಾಗಿತ್ತು. ಜತೆಯಲ್ಲಿ ಸತೀ ಪದ್ಧತಿಯೂ ಬೆಳೆದು ಬಂದಿತ್ತು.

ಇಸ್ಲಾಂ ಸಮಾಜ ತತ್ವ

ಮುಸ್ಲಿಮರ ಸಮಾಜ ಜೀವನವು ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇಲ್ಲವಾದರೂ, ಅದು ಪ್ರಾದಿ ಮಹಮ್ಮದರ ಕೊನೆಯ ಉಪದೇಶದ ಮೇಲೆ ಅವಲಂಬಿಸಿದೆ. ಮಹಮ್ಮದರ ಉಪದೇಶದ ಸಾರಾಂಶ: “ನಿಮ್ಮ ಪ್ರಾಣ ಮತ್ತು ಆಸ್ತಿಪಾಸ್ತಿಗಳು ಪವಿತ್ರವೂ ಅವಧ್ಯವೂ ಆದುವು; ಆದ್ದರಿಂದ ಒಬ್ಬರ ಮೇಲೆ ಒಬ್ಬರು ಕೈಮಾಡಲಾಗದು. ಪ್ರತಿಯೊಬ್ಬರಿಗೂ ಅವರವರ ಸ್ಥಿತಿಗನುಸಾರವಾಗಿ ಆಸ್ತಿಯಲ್ಲಿ ಹಕ್ಕಿದೆ. ಮಗುವು ತಾಯಿತಂದೆಯರಿಗೆ ಸೇರಿದ್ದು. ನಿಮ್ಮ ಹೆಂಡಿರ ಮೇಲೆ ನಿಮಗೆ ಅಧಿಕಾರವುಂಟು. ಹಾಗೆಯೇ ನಿಮ್ಮ ಮೇಲೆ ಅವರಿಗೆ ಅಧಿಕಾರವಿದೆ. ನೀವು ಅವರನ್ನು ಪ್ರೀತಿ ಮತ್ತು ದಯೆಯಿಂದ ಕಾಣಬೇಕು. ಅವರು ನಿಮ್ಮಲ್ಲಿಟ್ಟಿರುವ ನಂಬಿಕೆಗೆ ತಪ್ಪಿ ನೀವು ನಡೆಯಬೇಡಿ. ಬಡ್ಡಿಯೆತ್ತಿ ಬದುಕಬೇಡಿ. ರಕ್ತಕ್ಕೆ ರಕ್ತ ಎಂದು ಹೋಗಬೇಡಿ. ಗುಲಾಮರನ್ನು ಕರುಣೆಯಿಂದ ಕಾಣಿರಿ. ನೀವು ತಿನ್ನುವ ತಿಂಡಿಯನ್ನೇ ಅವರಿಗೂ ಕೊಡಿರಿ. ನೀವು ಉಡುವ ಉಡುಗೆಯನ್ನೇ ಅವರಿಗೂ ಉಡಿಸಿ. ದೇವರಲ್ಲಿ ಪ್ರಾರ್ಥನೆ ಮಾಡುವ ಗುಲಾಮರು ನಮಗೆ ಅಣ್ಣ ತಮ್ಮಂದಿರು ಇದ್ದಂತೆ. ಎಲ್ಲ ಮುಸ್ಲಿಮರೂ ಅಣ್ಣ ತಮ್ಮಂದಿರು. ಅನ್ಯಾಯಕ್ಕೆ ಹೋಗಬೇಡಿ.

ಭ್ರಾತೃಭಾವವು ಇಸ್ಲಾಂ ಸಮಾಜದ ತಳಹದಿಯಾಗಿದೆ. ಎಲ್ಲರೂ ಒಂದೇ ದೇವರ ಭಕ್ತರಾಗಿಯೂ, ಒಂದೇ ಗುರುವಿನ ಶಿಷ್ಯರಾಗಿಯೂ ಇರುವಾಗ ಅವರಲ್ಲಿ ಮೇಲು ಕೀಳೆಂಬ ಭಾವನೆ ಸಲ್ಲದು ಎನ್ನುತ್ತಾರೆ ಮುಸ್ಲಿಮರು. ಇಸ್ಲಾಮಿನಲ್ಲಿ ಮನೆಯ ಯಜಮಾನನು ಗಂಡಸು. ಅವನಿಗೆ ಮನೆಯ ಜವಾಬ್ದಾರಿಯೂ ಅಧಿಕಾರವೂ ಇರುತ್ತದೆ. ಹೆಂಗಸರಿಗೂ ಕೂಡಾ ಪ್ರಧಾನ ಸ್ವಾತಂತ್ರ್ಯ, ಗೌರವಗಳಿವೆ. ಅವಳ ಆಸ್ತಿಯಲ್ಲಿ ಗಂಡನಿಗೆ ಹಕ್ಕಿಲ್ಲ. ಪ್ರಾಯ ಬಂದ ಹೆಂಗಸಿಗೆ ಮನವೊಪ್ಪಿದವನನ್ನು ಮದುವೆಯಾಗುವ ಹಕ್ಕಿದೆ. ಅಥವಾ ಅವಳು ಮದುವೆಯಾದವನನ್ನು ಬಿಟ್ಟು ಆಮೇಲೆ ಬೇರೊಬ್ಬನನ್ನು ಮದುವೆಯಾಗಬಹುದು. ಭಾರತದಲ್ಲಿ ಮುಸ್ಲಿಂ ಸ್ತ್ರೀಯರು ಮುಖಕ್ಕೆ ಮುಖಪರದೆಯನ್ನು ಹಾಕಿಕೊಳ್ಳುವ ಸಂಪ್ರದಾಯವಿದೆ. ಅವರು ಪರಪುರುಷರಿಗೆ ಮುಖ ತೋರಿಸುವುದಿಲ್ಲ. ಅವರು ಹೊರಗೆ ಹೋಗುವುದು ಬಹಳ ಕಡಿಮೆ. ಅವಿವಾಹಿಕ ಜೀವನವನ್ನು ಮುಸ್ಲಿಮರು ಒಪ್ಪುವುದಿಲ್ಲ. ಸ್ತ್ರೀಪುರುಷರು ಒಂದು ಸಲ ಮಾತ್ರ ಮದುವೆಯಾಗಬಹುದು ಎಂಬ ನಿಯಮವಿಲ್ಲ. ವಿಧವೆಯರೂ ಮದುವೆಯಾಗಬಹುದು.

ಗುಲಾಮರನ್ನು ಬಿಡುಗಡೆ ಮಾಡುವುದು ಮುಸ್ಲಿಮರ ಒಂದು ಧಾರ್ಮಿಕ ಕಾರ್ಯ. ಆದರೆ ಗುಲಾಮರನ್ನಿಟ್ಟುಕೊಳ್ಳುವುದು ಶ್ರೀಮಂತಿಕೆಯ ಲಕ್ಷಣವೆಂದು ಧನಿಕರು ಗುಲಾಮರನ್ನು ಖರೀದಿಸಿ ತಮ್ಮ ಸೇವೆಯಲ್ಲಿ ಇರಿಸಿಕೊಳ್ಳುತ್ತಾರೆ. ಗುಲಾಮಸ್ತ್ರೀಯರನ್ನು ಮದುವೆಯಾಗುವ ಕ್ರಮವಿದೆ. ಗುಲಾಮಸ್ತ್ರೀಯಲ್ಲಿ ಹುಟ್ಟಿದ ಮಕ್ಕಳಿಗೂ ಹೆಂಡತಿಯಲ್ಲಿ ಹುಟ್ಟಿದ ಮಕ್ಕಳಿಗೂ ವ್ಯತ್ಯಾಸವಿಲ್ಲ; ಸಮಾಜದಲ್ಲಿ ಇವರಿಗೆ ಇತರರಿಗಿಂತ ಸ್ವಲ್ಪ ಕಡಿಮೆ ಸ್ಥಾನಮಾನ ಇರುತ್ತದೆಯಷ್ಟೆ.

ಬ್ರಾಹ್ಮಣ ಕುಲೋತ್ಪನ್ನನಾದ ರಾವಣನು ತನ್ನ ದುಷ್ಟತನಕ್ಕಾಗಿ ಶಿಕ್ಷಿಸಲ್ಪಟ್ಟನು. ಶೂದ್ರಜನಾದ ವಿದುರನು ಕೃಷ್ಣನಿಂದ ಪರಿಗ್ರಹಿಸಲ್ಪಟ್ಟನು. ಸ್ತ್ರೀಯರಿಗೆ ವಿದ್ಯಾಭ್ಯಾಸವು ಕೊಡಲ್ಪಡುತ್ತಿದ್ದರೂ, ಅದು ವೈದಿಕ ಕಾಲದ ಮಟ್ಟದಲ್ಲಿ ಇರಲಿಲ್ಲ. ಬಾಲ್ಯವಿವಾಹವು ಆಚರಣೆಯಲ್ಲಿರಲಿಲ್ಲ. ಸತಿ ಸಹಗಮನವು ಆಚರಣೆಯಲ್ಲಿತ್ತು, ಆದರೆ ಒತ್ತಾಯಪೂರ್ವಕವಾಗಿರಲಿಲ್ಲ. ವಿಧವೆಯರು ಈಗಿನಂತೆ ಸಮಾಜದಲ್ಲಿ ಹೀನರೆಂದು ಗಣಿಸಲ್ಪಡುತ್ತಿರಲಿಲ್ಲ.

ಎರಡನೆ ಭಾಗ: ರಾಜ್ಯ ಪದ್ಧತಿ

ವೇದಕಾಲದ ರಾಜ್ಯಾಡಳಿತೆ

ವೇದಕಾಲದಲ್ಲಿದ್ದ ಹೆಚ್ಚಿನ ರಾಜ್ಯಗಳು ರಾಜರುಗಳಿಂದ ಆಳಲ್ಪಡುತ್ತಿದ್ದುವು. ಕೆಲವು ಪ್ರಜಾರಾಜ್ಯಗಳೂ ಇದ್ದುವು. ಅಧಿಕಾರವು ಪಾರಂಪರ್ಯವಾಗಿತ್ತು. ರಾಜರ ನಿರಂಕುಶ ಅಧಿಕಾರಕ್ಕೆ ಆಸ್ಪದವಿರಲಿಲ್ಲ. ರಾಜರ ಸಹಾಯಕ್ಕಾಗಿ ಒಂದು ಬೋಧಕ ಮಂಡಳಿಯಿತ್ತು. ಪುರೋಹಿತನು ಇದರ ಪ್ರಧಾನಿಯಾಗಿದ್ದನು. ಸೇನಾನಿ ಮತ್ತು ಗ್ರಾಮದ ಮುಖ್ಯಸ್ಥ ಗ್ರಾಮಣಿಯು ಯುದ್ಧದಲ್ಲಿ ರಾಜನಿಗೆ ಸಹಾಯಕರಾಗಿರುತ್ತಿದ್ದರು. ಸಮಿತಿ ಮತ್ತು ಸಭ ಎಂಬ ಎರಡು ಸಂಸ್ಥೆಗಳಿದ್ದುವು. ರಾಜ್ಯವು ವಿಸ್ತಾರವಾಗುತ್ತ, ರಾಜನ ಅಧಿಕಾರವು ಹೆಚ್ಚುತ್ತಾ ಬಂದು, ವಾಜಪೇಯ, ರಾಜಸೂಯ, ಅಶ್ವಮೇಧವೆಂಬ ಯಾಗಗಳನ್ನು ಮಾಡುವ ಅರಸರ ರಾಜ್ಯಗಳು ರಾಜ್ಯ, ವೈರಾಜ್ಯ, ಸಾಮ್ರಾಜ್ಯಗಳೆಂದು ಕರೆಯಲ್ಪಡುತ್ತಿದ್ದುವು. ಆದರೂ ರಾಜನ ಸಮಿತಿಯಲ್ಲಿ ಪುರೋಹಿತರ ಪ್ರಾಬಲ್ಯವೇನೂ ಕಡಿಮೆಯಾಗಿರಲಿಲ್ಲ.

ಚೋಳರ ರಾಜ್ಯಾಡಳಿತೆ

ಮಂತ್ರಿಮಂಡಲವಿರದ ಚೋಳ ಅರಸರು ನಿರಂಕುಶರಾಗಿದ್ದರು. ಸುಶಿಕ್ಷಿತ ಮತ್ತು ಯೋಗ್ಯ ಅಧಿಕಾರಿಗಳಿಂದ ಆಡಳಿತೆ ನಡೆಸಲ್ಪಡುತ್ತಿತ್ತು. ರಾಜನು ಆಗಾಗ ದೇಶದ ಬೇರೆ ಬೇರೆ ಭಾಗಗಳನ್ನು ಸುತ್ತಿ ಆಡಳಿತೆಯು ಸುಸೂತ್ರವಾಗಿ ನಡೆಯುತ್ತಿದೆಯೋ ಇಲ್ಲವೋ ಎಂದು ನೋಡಿಕೊಳ್ಳುತ್ತಿದ್ದನು. ಉತ್ಪತ್ತಿಯ ಮೂರನೇ ಒಂದಂಶವನ್ನು ತೆರಿಗೆಯ ರೂಪದಲ್ಲಿ ಎತ್ತಲಾಗುತ್ತಿತ್ತು. ಭೂಕಂದಾಯವು ಭೂಮಿಯನ್ನು ಸರ್ವೆ ಮಾಡಿ ನಿಶ್ಚಯಿಸಲ್ಪಡುತ್ತಿತ್ತು. ಅಲ್ಲದೆ ಆಗಾಗ ಭೂಸರ್ವೆ ಮಾಡುತಿದ್ದರು. ತೆರಿಗೆಯನ್ನು ವಸೂಲು ಮಾಡುವ ಅಧಿಕಾರವು ಗ್ರಾಮಸಮಿತಿಗಳಿಗಿತ್ತು. ಆ ಸಮಿತಿಯು ತೆರಿಗೆಯನ್ನು ಧಾನ್ಯ ಯಾ ನಾಣ್ಯದ ರೂಪದಲ್ಲಿ ಸಂಗ್ರಹಿಸಿ ಸರಕಾರಕ್ಕೆ ಒಪ್ಪಿಸುತ್ತಿತ್ತು. ಕ್ಷಾಮ ಬಂದ ಕಾಲದಲ್ಲಿ ಕಂದಾಯವನ್ನು ಕಡಿಮೆ ಮಾಡಲಾಗುತ್ತಿತ್ತು. ತೆರಿಗೆಯು ಬೇಸಾಯವಲ್ಲದೆ ಇತರ ವೃತ್ತಿಗಳ ಮೇಲೂ ಹೇರಲ್ಪಡುತ್ತಿತ್ತು. ಈ ರೀತಿಯಾಗಿ ಬಂದ ತೆರಿಗೆಯನ್ನು ಅರಮನೆ, ಅಧಿಕಾರಿವರ್ಗ, ಸೈನ್ಯ ಮೊದಲಾದವುಗಳಿಗೆ, ಕೆರೆ, ಕಾಲುವೆ, ಮಾರ್ಗ ನಿರ್ಮಾಣ ಇತ್ಯಾದಿಗಳ ಖರ್ಚಿಗೆ ಉಪಯೋಗಿಸುತ್ತಿದ್ದರು.

ಗ್ರಾಮಗಳ ಆಡಳಿತೆ; ಚೋಳ ಸಾಮ್ರಾಜ್ಯವು ಒಟ್ಟು ಎಂಟು ಮಂಡಲಗಳಾಗಿಯೂ, ಮಂಡಲಗಳು ನಾಡು ಮತ್ತು ವಳನಾಡುಗಳಾಗಿಯೂ, ನಾಡುಗಳು ಕುರ್ರಂ ಅಥವಾ ಕೊಟ್ಟಂಗಳಾಗಿಯೂ, ಆಡಳಿತೆಯ ಅನುಕೂಲಕ್ಕಾಗಿ ವಿಭಜಿಸಲ್ಪಟ್ಟಿತ್ತು. ಕುರ್ರಂ ಅಥವಾ ಕೊಟ್ಟಂಗಳೆಂದು ಕರೆಯಲ್ಪಡುತ್ತಿದ್ದ ಗ್ರಾಮಗಳಿಗೆ ಅವುಗಳ ಆಡಳಿತದ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾಗಿತ್ತು. ಗ್ರಾಮಾಡಳಿತೆಯು ಚೋಳ ರಾಜ್ಯಾಡಳಿತೆಯ ವೈಶಿಷ್ಟ್ಯವಾಗಿರುತ್ತದೆ. ಮಂಡಲಗಳು ರಾಜವಂಶಕ್ಕೆ ಸೇರಿದ ಪ್ರತಿನಿಧಿಗಳಿಂದ ಆಳಲ್ಪಡುತ್ತಿದ್ದುವು. ಗ್ರಾಮಗಳ ಆಡಳಿತೆಗೆ ಸಭಾ ಎಂದು ಕರೆಯಲ್ಪಡುವ ಸಮಿತಿಯಿತ್ತು. ಈ ಸಮಿತಿಯ (ಸಬಾದ) ಕಾರ್ಯಕಲಾಪಗಳು, ಸದಸ್ಯರಿಗಿರಬೇಕಾದ ಯೋಗ್ಯತೆಗಳು: ಸದಸ್ಯರು ಮೂವತ್ತೈದು ವರ್ಷ ದಾಟಿದವರಾಗಿರಬೇಕೆಂದು ಪರಾಂತಕನಿಂದ ಉತ್ತರ ಮೇರೂರ್ ಶಾಸನದಲ್ಲಿ ಕೆತ್ತಿಸಲ್ಪಟ್ಟಿದೆ. ಒಂದೂವರೆ ಎಕರೆಯಷ್ಟಾದರೂ ಸ್ವಂತ ಭೂಮಿಯಿದ್ದು ಅದರಲ್ಲಿ ವಾಸಿಸುತ್ತಿರಬೇಕು. ಬ್ರಾಹ್ಮಣಗಳ ಸರಿಯಾದ ಜ್ಞಾನವಿರಬೇಕು. ಎಷ್ಟು ಯೋಗ್ಯತೆಗಳಿದ್ದರೂ, ವೇಶ್ಯಾಸಹವಾಸ ಮಾಡಿದವನು, ಕಳವು ಮಾಡಿದವನು, ಜಾತಿಧರ್ಮಗಳನ್ನು ಮೀರಿದವನು, ಹಿಂದೆ ಮೂರು ವರ್ಷಗಳವರೆಗೆ ಸದಸ್ಯನಾಗಿದ್ದವನು, ಮತ್ತು ಸದಸ್ಯನಾಗಿದ್ದು ಲೆಕ್ಕಪತ್ರಗಳನ್ನು ಸಲ್ಲಿಸದಿದ್ದವನು ಸದಸ್ಯತನಕ್ಕೆ ಅರ್ಹನಾಗಿರುವುದಿಲ್ಲ. ಸದಸ್ಯತನಕ್ಕೆ ಅರ್ಹತೆಯುಳ್ಳ ಯೋಗ್ಯ ಜನರನ್ನು ಒಳಗೊಂಡಿರುವ ಗ್ರಾಮಭಾಗಗಳಿಂದ ಆರಿಸಲ್ಪಟ್ಟ ಮೂವತ್ತು ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ. ಸೋಡತಿ ಚೀಟಿಯ ಮೂಲಕ ಇವರನ್ನು 5 ಉಪಸಮಿತಿಗಳಾಗಿ ವಿಭಾಗಿಸಲಾಗುವುದು. ಈ ಸಮಿತಿಗಳು ಗ್ರಾಮಾಡಳಿತದ ಬೇರೆ ಬೇರೆ ಕಾರ್ಯಗಳನ್ನು ತಮ್ಮೊಳಗೆ ಹಂಚಿಕೊಳ್ಳುತ್ತವೆ. ಸಭೆಯ ಸದಸ್ಯತನವು ನಿಸ್ವಾರ್ಥ ಸೇವೆಯಾಗಿದ್ದು ಗೌರವಾನ್ವಿತ ಸ್ಥಾನವಾಗಿರುತ್ತದೆ.

ಸಬಾದ ಸದಸ್ಯರ ಅಥವಾ ಸಮಿತಿಗಳ ಕಾರ್ಯಕಲಾಪಗಳು; ಗ್ರಾಮಸಮಿತಿಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಶತ್ರುಗಳಿಂದ ದೇಶರಕ್ಷಣೆ, ರಾಜ್ಯದಲ್ಲಿ ಶಾಂತಿಯನ್ನಿರಿಸುವುದು, ಮತ್ತು ಧಾರ್ಮಿಕ ಅಭಿವೃದ್ದಿ ಕಾರ್ಯಗಳು ಕೇಂದ್ರ ಸರಕಾರದ ಅಧೀನವಿದ್ದುವು. ಉಳಿದೆಲ್ಲಾ ಅಧಿಕಾರವು ಮಹಾಸಭೆಗಿತ್ತು. ಸಾರ್ವಜನಿಕ ಆಸ್ತಿಯ ರಕ್ಷಣೆ, ಕಾಡು ಮತ್ತು ಬಂಜರು ಪ್ರದೇಶಗಳನ್ನು ಕೃಷಿಯೋಗ್ಯವಾಗಿ ಮಾಡುವುದು, ಸಾರ್ವಜನಿಕ ಹಿತಕಾರ್ಯಗಳು, ಕಂದಾಯ ನಿರ್ಣಯ ಮತ್ತು ವಸೂಲಿ ಇವು ಮಹಾಸಭೆಯ ಮುಖ್ಯ ಕಾರ್ಯಕಲಾಪಗಳಾಗಿದ್ದುವು. ಮಾರ್ಗಗಳ ನಿರ್ಮಾಣ ಮತ್ತು ದುರಸ್ತಿ, ನೀರಾವರಿ ಕೆಲಸಗಳು, ಧಾರ್ಮಿಕ ಸಂಸ್ಥೆಗಳು, ಆಸ್ಪತ್ರೆ, ವಿದ್ಯಾಲಯಗಳ ಮೇಲ್ವಿಚಾರಣೆ ಕೂಡಾ ಮಹಾಸಭೆಯ ಕೈಕೆಳಗೆ ಬರುತ್ತಿದ್ದುವು. ಅಂತಹ ಕಾರ್ಯಗಳಿಂದಾಗಿ ಕೃಷಿ ಕೈಗಾರಿಕೆಗಳು ಅಭಿವೃದ್ದಿಗೊಂಡು ದೇಶದಲ್ಲಿ ಸುಭಿಕ್ಷೆ ನೆಲಸಿತ್ತು.

ನ್ಯಾಯ ಪರಿಪಾಲನೆ: ಕೇಂದ್ರ ಸರಕಾರದಿಂದ ನಿಯಮಿಸಲ್ಪಟ್ಟ ಗ್ರಾಮಾಧಿಕಾರಿಗಳು ಕಳ್ಳರನ್ನು ಮತ್ತು ಸಮಾಜದ್ರೋಹಿಗಳನ್ನು ಪತ್ತೆಹಚ್ಚಿ ಸರಕಾರದಿಂದ ನಿಯಮಿಸಲ್ಪಟ್ಟ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಿದ್ದರು. ಶಿಕ್ಷೆಯು ಬಹಳ ಸೌಮ್ಯ ತರದಲ್ಲಿ ಇತ್ತು. ಕಠಿಣ ಶಿಕ್ಷೆಯನ್ನು ವಿಧಿಸಿದ ಉಲ್ಲೇಖಗಳು ಕಂಡುಬರುವುದಿಲ್ಲ. ಜುಲ್ಮಾನೆ, ಕತ್ತೆಯ ಮೇಲೆ ಸವಾರಿ, ಕೊಲೆಗಡುಕರು ದೇವಾಲಯಗಳಲ್ಲಿ ನಂದಾದೀಪ ಉರಿಸುವುದು ಮುಂತಾದ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು.

ಚೋಳರು ವಿದ್ಯೆಗೆ ಪ್ರೋತ್ಸಾಹ ಕೊಡುತ್ತಿದ್ದರು. ಪ್ರಜೆಗಳು ಜ್ಞಾನವಂತರಾಗಿದ್ದರು.