ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ. ಈ ಪದ್ಯಕ್ಕೆ ಸ್ಪಂದಿಸಿರುವ ಪದ್ಯಭಾಗಕ್ಕೆ ಮೊದಲು ಬರುವುದು, ಮತ್ತು ಪರಂಪರೆಯಲ್ಲಿನ ಬಹುದೊಡ್ಡ ವಿದ್ವಾಂಸರು, ವಿಮರ್ಶಕರು ಆಡಿರುವ ಮಾತುಗಳನ್ನು ಆ ನಂತರ ನೋಡುವುದು ಉಚಿತವಾಗುತ್ತದೆ.
ಆರ್. ದಿಲೀಪ್ ಕುಮಾರ್ ಅಂಕಣ

 

ಮಹಾಭಾರತಕ್ಕೆ, ಅದರ ಯುದ್ಧಕ್ಕೆ ಬೀಜರೂಪೀ ಕ್ರಿಯೆಯೇ ದುಶ್ಯಾಸನನು ದ್ರೌಪತಿಗೆ ತುಂಬಿದ ಸಭೆಯಲ್ಲಿ ಮಾಡಿದ ಅವಮಾನ. ಈ ಅವಮಾನದ ಪ್ರತೀಕಾರಕ್ಕೆ ಮಹಾಭಾರತದ ಅಷ್ಟೂ ಯುದ್ಧ ನಡೆಯುವುದು ಇದರ ಪ್ರತೀಕಾರಕ್ಕಾಗಿಯೇ. ಅಂತಃಪುರದ ಸ್ತ್ರೀ ಮಾತ್ರವೆಂದು ವ್ಯಾಖ್ಯಾನಿಸದೆ ಸ್ತ್ರೀಗಾದ ಅನ್ಯಾಯವೆಂದು ವಿಶಾಲವಾಗಿ ತೆರೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪ್ರತೀಕಾರವನ್ನು ತೋರುವ ಕ್ರಮ ಮತ್ತು ಅದಕ್ಕಾಗಿ ನಡೆದ ಕ್ರಿಯೆ ಎಲ್ಲಾ ಕಾಲದ ಸ್ತ್ರೀ ಪರವಾದ ಕಾಳಜಿಯಾಗಿದೆ.

ವಿರೋಧಿಸಿ ಬಿಲ್ಲನ್ನು ಮುರಿಯುವ ವಿದುರ, ಆ ಕ್ಷಣದಲ್ಲಿ ಅಟ್ಟಹಾಸದಿ ನಗುವ ಕರ್ಣ, ಹಿಡಿದೆಳೆದ ದುಶ್ಯಾಸನ, ಆ ಹಿಡಿದೆಳೆವ ಕ್ರಿಯೆಗೆ ಕಾಯಣವಾದ ದುರ್ಯೋಧನ, ಎಲ್ಲವನ್ನೂ ನೋಡುತ್ತಲೇ ಕುಳಿತ ಕುರುಕುಲದ ಹಿರಿಯ ಭೀಷ್ಮ, ಅವರೆಲ್ಲರ ಗುರು ದ್ರೋಣ ಹೀಗೆ ಒಂದಿಡೀ ಸಭಾಂಗಣದಲ್ಲಿನ ಮೌನ, ನಗು, ಖಂಡನೆಗಳೇ ಮುಂದಿನ ಕಾರ್ಯವನ್ನು ನಡೆಯುವ ಹಾಗೆ ಪ್ರೇರೇಪಣೆ ನೀಡಿಬಿಡುತ್ತದೆ.

ಪಂಪ ಇದನ್ನು ಕಡೆದು ನಿಲ್ಲಿಸುವ ಕ್ರಮವು ಎಂತಹವರನ್ನಾದರೂ ಒಂದುಕ್ಷಣ ತಡೆದು, ನಿಂತು ನೋಡಿ, ಮುಂದೆ ಹೋಗುವ ಹಾಗೆ ಮಾಡುತ್ತದೆ. ಮುಂದಿನ ಎಲ್ಲಾ ಕಾರ್ಯಗಳೂ ಇದರ ಅಡಿಯಲ್ಲಿ ಜರುಗುವುದಕ್ಕೆ ಬಹುದೊಡ್ಡ ರಾಜಕಾರಣವಾಗಿ ಪರಿಣಮಿಸಿ ಅದು ಯಶಸ್ವಿಯೂ ಆಗುತ್ತದೆ. ಅದರಲ್ಲಿಯೂ ದ್ಯೂತದಲ್ಲಿ ಪಾಂಡವರು ಸೋತ ತಕ್ಷಣ ದುರ್ಯೋಧನ ಮಾಡಿಸುವ ಕ್ರಿಯೆಗಳನ್ನೊಮ್ಮೆ ಗಮನಿಸಿದರೆ ಅದು ಎಂತಹವರಿಗಾದರೂ ಅಸಹ್ಯವೆನಿಸದೆ ಇರದು.

ಆ ಪಲಗೆಯುಂ ಸೋಲ್ತು ಮಹೀಪತಿ
ಚಲದಿಂ ಬೞಿಕ್ಕೆ
ಸೋಲ್ತುಂ ಗಡಮ್ ಆ ದ್ರೌಪದಿಯುಮನ್
ಏನಾಗದೊ ಪಾಪದ ಫಲಂ
ಎಯ್ದೆವಂದ ದಿವಸದೊಳಾರ್ಗಂ ( ೭.೪ )

ವಚನ : ಅಂತು ದುರ್ಯೋಧನನ್ ಅಜಾತಶತ್ರುವಿನ ಸರ್ವಸ್ವಮೆಲ್ಲಂ ಗೆಲ್ದು, ಕಸವರಮೆಲ್ಲಂ ಬಂದುದು, ಪಾಂಚಾಳ ರಾಜ ತನೂಜೆಯೊರ್ವಳ್ ಬಂದಳಿಲ್ಲ. ಆಕೆಯಂ ತನ್ನಿಮೆಂದು ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನ್ ಅಱಿದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು, ಕರ್ಣನ ಲೆಂಕಂ ಪ್ರತಿಗಾಮಿ ಎಂಬನುಮಂ, ತನ್ನ ತಮ್ಮಂ ದುಶ್ಯಾಸನನುಮಂ ಪೇೞ್ದೊಡೆ ಅವಂದಿರಾಗಳೆ ಬೀಡಿಂಗೆ ವಂದು – “ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಮ್, ಒತ್ತಂಬದಿಂದೆ ಒಳಗಂ ಪೊಕ್ಕು ಕಣ್ಜಡಿದು ( ಕಣ್ಣನ್ನು ಹೊಡೆದು ), ನುಡಿದು, ಮುಡಿಯಂ ಪಿಡಿದು, ತನ್ಮಧ್ಯದಿಂ ( ಅವಳ ಸೊಂಟವನ್ನು ಹಿಡಿದು ) ಸುಯೋಧನನ ಸಭಾಮಧ್ಯಕ್ಕೆ ತಂದು”

ಎಂಬಲ್ಲಿಗೆ ನಿಲ್ಲಿಸುವ ಈ ಕ್ರಿಯೆಯು ಮೊದಲು ಸಿಟ್ಟಾಗಿಸುವುದು ಭೀಮನನ್ನೇ, ಆ ನಂತರ ಉಳಿದ ಪಾಂಡವರು ಕೆರಳಿದರೂ ಧರ್ಮರಾಯನ ಮೇಲಿನ ಪ್ರೀತಿ (ನನ್ನಿ!) ಯಿಂದ ಸುಮ್ಮನಾಗುತ್ತಾರೆ. ಆ ಕ್ಷಣದಲ್ಲಿ ದ್ರೌಪತಿಯಾಡುವ ಮಾತು ಅನವ ಪ್ರತಿಜ್ಞೆಗೆ ಕಾರಣವಾಗಿ ಮುಂದಿನ ಕ್ರಿಯೆಗಳು ನಡೆಯುತ್ತದೆ. ಮಹಾಭಾರತದ ಪಾತ್ರವನ್ನು ವಿದ್ವಾಂಸರು ವಿವೇಚಿಸುವಾಗ ಬಹಳ ಮುಖ್ಯವಾದ ಒಂದು ಅಂಶವನ್ನು ಪ್ರಸ್ತಾಪಿಸುತ್ತಾರೆ. ಮಹಾಭಾರತದ ಪ್ರೇರಕ ಶಕ್ತಿ ಮತ್ತು ಕಾರಕ ಶಕ್ತಿಯೆಂದು ಅದಕ್ಕೆ ಕರೆದು, ಅದರಲ್ಲಿ ಪ್ರೇರಕ ಶಕ್ತಿಯಾಗಿ ದ್ರೌಪತಿಯನ್ನು, ಕಾರಕ ಶಕ್ತಿಯಾಗಿ ಭೀಮನನ್ನು ನಿಲ್ಲಿಸುತ್ತಲೇ ಮಹಾಭಾರತವನ್ನು ಇವರ ಕಡೆಯಿಂದ ನೋಡುವ ಕ್ರಮವನ್ನು ತಿಳಿಸುತ್ತಾರೆ. ಆ ಅಂಶಕ್ಕೆ ಉದಾಹರಣೆಯಾಗಿ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ. ದ್ರೌಪತಿಯ ಕಣ್ಣೀರು ಮತ್ತೆ ಅವಳಾಡಿದ ಮಾತುಗಳನ್ನೊಮ್ಮೆ ನೋಡಿದರೆ ಅದರಲ್ಲಿನ ಕುರುವಂಶದ ನಾಶಕ್ಕೆ ಪ್ರೇರಣೆಯ ಬೀಜವು ತಿಳಿಯುತ್ತದೆ.

ವಚನ : ಆಗಳ್ ದ್ರೌಪತಿ ತನ್ನ ಕೇಶಪಾಶಮಂ ದುಶ್ಯಾಸನಂ ಪಿಡಿದು ತೆಗೆದನೆಂದು ಸಿಗ್ಗು ಅಗ್ಗಳಂ ಪರ್ಚಿ, ಸಭೆಯೊಳ್ ಇಂತೆಂದಳ್

ಮುಡಿಯಂ ಪಿಡಿದೆೞೆದವನಂ ಮಡಿಯಿಸಿ
ಮತ್ತವನ ಕರುಳ ಪಿಣಿಲಿಂದೆ
ಎನ್ನಂ ಮುಡಿಯಿಸುವೆನೆಗಂ
ಮುಡಿಯಂ ಮುಡಿಯೆಂ ಗಡ
ಕೇಳಿಮೀಗಳಾನ್ ನುಡಿದೆಂ ( ೭.೧೦ )

ಎಂದು ಮೊದಲು ಪ್ರತಿಜ್ಞೆಯನ್ನು ಮಾಡುವಂತೆ ಪ್ರೇರಣೆ ನೀಡಿದ ತಕ್ಷಣ ಭೀಮ ಸಿಡಿದೆದ್ದು ಅವಳ ಪರವಾಗಿ ನಿಂತು ಮಾತನಾಡಲು ಪ್ರಾರಂಭ ಮಾಡಿ, ಮಾತು ಪ್ರತಿಜ್ಞೆಯಾಗಿ ಹೊರಹೊಮ್ಮುತ್ತದೆ. ಆ ಮುಂದಿನ ಸಿಡಿಲ ಮಾತುಗಳನ್ನೊಮ್ಮೆ ನೋಡಿ…

ಮುಳಿಸಿದಂ ನುಡಿದೊಂದು ನಿನ್ನ ನುಡಿ ಸಲ್ಗೆ
ಆರಾಗದೆಂಬರ್ ?
ಮಹಾಪ್ರಳಯೋಲ್ಕೋಪಮ ಮದ್ ಗದಾಹತಿಯಿನ್
ಅತ್ಯುಗ್ರಾಜಿಯೊಳ್
ಮುನ್ನಮೀ
ಖಳ ದುಶ್ಯಾಸನ ಪೊರಳ್ಚಿ
ಬಸಿರಂ ಪೊೞ್ದಿಕ್ಕಿ
ಬಂಬಲ್ಗರುಳ್ಗಳಿನ್
ಆನಲ್ತೆ ವಿಳಾಸದಿಂದ ಮುಡಿಯಿಪೆಂ
ಪಂಕೇಜ ಪತ್ರೇಕ್ಷಣೇ ( ೭.೧೨ )

ಕುಡಿವೆಂ
ದುಶ್ಯಾಸನೋರಸ್ಥಲಮನ್ ಆಗಲೆ ಪೋೞ್ದು ಆರ್ದು
ಕನ್ನೆತ್ತರಂ
ಪೊಕ್ಕು
ಉಡಿವೆಂ ಪಿಂಗಾಕ್ಷನ ಊರುದ್ವಯಮನ್
ಉರು ಗಧಾಘಾತದಿಂ
ನುಚ್ಚುನೂಱಾಗೊಡೆವೆಂ
ತದ್ ರತ್ನ ರಶ್ನಿ ಪ್ರಕಟ ಮುಕುಟಮಂ
ನಂಬ ನಂಬು
ಎನ್ನ ಕಣ್ಣಿಂ ಕಿಡಿಯುಂ ಕೆಂಡಂಗಳುಂ
ಸೂಸಿಪುವು ಅಹಿತರಂ ನೋಡಿ, ಪಂಕೇಜ ವಕ್ತ್ರೇ ( ೭.೧೩ )

ಇದಷ್ಟಲ್ಲದೆ ದೊಡ್ಡವರೆನಿಸಿಕೊಂಡು ನೋಡುತ್ತಾ ಕುಳಿತ ಎಲ್ಲರೆದುರು ಪ್ರತಿಜ್ಞೆ ಮಾಡುತ್ತಾನೆ. ಯಾರು ಯಾರು ನೋಡುತ್ತಲೇ ಕುಳಿತರೋ, ತಡೆಯುವ ಶಕ್ತಿಯಿದ್ದೂ, ಅದು ತಪ್ಪೆಂದು ಹೇಳುವುದು ತಿಳಿದಿದ್ದೂ, ಆ ಯೋಗ್ಯತೆಯಿದ್ದೂ ಅದನ್ನು ಮಾಡದೆ ಕುಳಿತಿದ್ದವರ ಎಲ್ಲರ ಹೆಸರನ್ನೆತ್ತಿ ಸಾಕ್ಷಿ ಮಾಡಿದಂತೆ ಮಾತಾಡುತ್ತಾನೆ.

ಸುರಸಿಂಧು ಪ್ರಿಯ ಪುತ್ರ ಕೇಳ್
ಕಳಶಜಾ ನೀಂ ಕೇಳ್
ಕೃಪಾ ಕೇಳ
ಮಂದರದಿಂದಂಭುದಿಯಂ ಕಲಂಕಿದ
ಅಸುರ ಪ್ರಧ್ವಂಸಿವೋಲ್
ಬಾಹು ಮಂದರದಿಂ
ವೈರಿ ಬಲಾಬ್ಧಿ ಘೂರ್ಣಿಸೆ
ಬಿಗುರ್ತ ಈ ಕೌರವರ್ ಕೂಡೆ ನೂರ್ವರುಮಂ ಕೊಲ್ವೆನ್
ಇದೆನ್ನ ಪೂಣ್ಕೆ
ನುಡಿದೆಂ ನಿಮ್ಮೀ ಸಭಾಮಧ್ಯದೊಳ್ ( ೭.೧೫ )

ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ. ಈ ಪದ್ಯಕ್ಕೆ ಸ್ಪಂದಿಸಿರುವ ಪದ್ಯಭಾಗಕ್ಕೆ ಮೊದಲು ಬರುವುದು, ಮತ್ತು ಪರಂಪರೆಯಲ್ಲಿನ ಬಹುದೊಡ್ಡ ವಿದ್ವಾಂಸರು, ವಿಮರ್ಶಕರು ಆಡಿರುವ ಮಾತುಗಳನ್ನು ಆ ನಂತರ ನೋಡುವುದು ಉಚಿತವಾಗುತ್ತದೆ.

ಇದಱೊಳ್
ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದು ಅೞ್ಕಡಾಡಿತ್ತು
ಅಡಂಗಿತ್ತು ಇದರೊಳ್ ಕುರುರಾಜಾನ್ವಯಂ
ಮತ್ಪ್ರತಾಪಕ್ಕೆ ಇದರಿಂದಂ ನೋಡು
ಅಗುರ್ವು ಉರ್ವಿದುದು
ಇದುವೆ ಮಹಾಭಾರತಕ್ಕಾದಿಯಾಯ್ತು
ಅಬ್ಜದಳಾಕ್ಷಿ ಪೇೞ
ಸಾಮಾನ್ಯಮೆ ಬಗೆಯೆ ಭವತ್ ಕೇಶಪಾಶ ಪ್ರಪಂಚಂ ( ೧೨.೧೫೬ )

ಮೊಟ್ಟ ಮೊದಲ ಬಾರಿಗೆ ಪಂಪ ಭಾರತವನ್ನು ಸಮಗ್ರವಾಗಿ ಸಂಪಾದಿಸಿದ ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಪ್ರಕೃತ ಪದ್ಯಕ್ಕೆ ಅರ್ಥ ಹೇಳುವಾಗ “ಕಮಲಾಕ್ಷಿಯೇ! ನಿನ್ನ ಕೇಶಪಾಶ ಪ್ರಪಂಚದಲ್ಲಿ ಬೆಳ್ಗೊಡೆಯೊಡನೆ ಕೂಡಿದ ದಶ ದಿಶಾಮಂಡಲದ ರಾಜಚಕ್ರವೂ ಕುರುರಾಜಾನ್ವಯವೂ ಹುದುಗಿಕೊಂಡಿರುವುವು. ಇದರಿಂದ ನನ್ನ ಪ್ರತಾಪವೂ ಅತಿ ಭಯಂಕರವಾಗಿ ಪರಿಣಮಿಸಿತು. ಇದೇ ಮಹಾಭಾರತಕ್ಕೆ ಆದಿಯಾಯ್ತು. ಹೀಗಿರುವಲ್ಲಿ ಇದೇನು ಸಾಮಾನ್ಯವಾದುದೇ ಹೇಳು” ಎಂದು ವಿಕ್ರಮಾರ್ಜುನ ವಿಜಯವನ್ನು ಕಥೆಯಾಗಿ ಹೇಳಿದ್ದಾರೆ (ಪಂಪ ಭಾರತಂ ಎಂಬ ವಿಕ್ರಮಾರ್ಜುನ ವಿಜಯಂ) ಆಚಾರ್ಯರ ಡಿ. ಎಲ್. ನರಸಿಂಹಾಚಾರ್ಯರು ಈ ಪದ್ಯ ಭಾಗಕ್ಕೆ ಅರ್ಥ ಮಾಡುತ್ತಾ “ಈ ಮುಡಿಯಲ್ಲಿಯೇ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು, ಕುರುವಂಶವು ಇದರಲ್ಲಿ ಅಡಗಿ ಹೋಯಿತು, ನನ್ನ ಶೌರ್ಯಕ್ಕೆ ಇದರಿಂದ ಗೌರವವು ಹೆಚ್ಚಾಯಿತು, ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಂತೆ ವಿಸ್ತಾರವಾದ ಕಣ್ಣುಳ್ಳ ದ್ರೌಪತಿಯೇ ವಿಚಾರ ಮಾಡಿದರೆ ನಿನ್ನ ತಲೆಯ ಕುರುಳೋಳಿಯು ಸಾಮಾನ್ಯವಾದುದೇ ಹೇಳು” ಎಂದಿದ್ದಾರೆ.

ಮಹಾಭಾರತದ ಪಾತ್ರವನ್ನು ವಿದ್ವಾಂಸರು ವಿವೇಚಿಸುವಾಗ ಬಹಳ ಮುಖ್ಯವಾದ ಒಂದು ಅಂಶವನ್ನು ಪ್ರಸ್ತಾಪಿಸುತ್ತಾರೆ. ಮಹಾಭಾರತದ ಪ್ರೇರಕ ಶಕ್ತಿ ಮತ್ತು ಕಾರಕ ಶಕ್ತಿಯೆಂದು ಅದಕ್ಕೆ ಕರೆದು, ಅದರಲ್ಲಿ ಪ್ರೇರಕ ಶಕ್ತಿಯಾಗಿ ದ್ರೌಪತಿಯನ್ನು, ಕಾರಕ ಶಕ್ತಿಯಾಗಿ ಭೀಮನನ್ನು ನಿಲ್ಲಿಸುತ್ತಲೇ ಮಹಾಭಾರತವನ್ನು ಇವರ ಕಡೆಯಿಂದ ನೋಡುವ ಕ್ರಮವನ್ನು ತಿಳಿಸುತ್ತಾರೆ.

(ಪಂಪ ಭಾರತ ದೀಪಿಕೆ) ಆಚಾರ್ಯ ಟಿ. ಎಸ್. ವೆಂಕಣ್ಣಯ್ಯನವರು “ಮಹಾಭಾರತ ಯುದ್ಧಕ್ಕೆ ಕರಗಂಬೊತ್ತ ಡಾವರ ಡಾಕಿನಿಯಾದಳು ಆಕೆ” ಎಂದರೆ(ಟಿ. ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ), ಆಚಾರ್ಯ ತೀ ನಂ ಶ್ರೀಕಂಠಯ್ಯನವರು “ದ್ರೌಪತಿಯ ಕೇಶಪಾಶವು ಕುರುಕುಲಕ್ಕೆ ಮಾತ್ರವಲ್ಲ, ಸಮಸ್ತ ರಾಜಕುಲಕ್ಕೆ ಯಮಪಾಶವಾಯಿತು. ಅದನ್ನು ದುಶ್ಯಾಸನ ಮುಟ್ಟಿದ್ದೇ ಮಹಾಭಾರತಕ್ಕೆ ಆದಿಯಾಯಿತು. ಈ ವಿಷಯ ಪಂಪನಿಗೆ ಚೆನ್ನಾಗಿ ಗೊತ್ತು” ಎಂದಿದ್ದಾರೆ. (ತೀ ನಂ ಶ್ರೀ ಸಮಗ್ರ ಗದ್ಯ), ಶ್ರೀ ವಿ. ಸೀತಾರಾಮಯ್ಯನವರು “ಇದರ ಮೊದಲ ಪದ ಜಯದ ಪತಾಕೆ, ಸಾಮಾನ್ಯವಲ್ಲ. ದ್ರೌಪತಿಯ ಕೇಶಪಾಶ ಪ್ರಪಂಚ” ಎಂದಿರುವುದು ಬಹಳ ಮುಖ್ಯವಾದ ಮಾತಾಗುತ್ತದೆ (ಪಂಪ – ಕವಿ ಕಾವ್ಯ ಪರಂಪರೆ) ಶ್ರೀ ಮುಳಿಯ ತಿಮ್ಮಪ್ಪಯ್ಯನವರು “ಪ್ರತಿಜ್ಞಾಕ್ಷರಗಳನ್ನೆಲ್ಲಾ ಕಾರ್ಯರೂಪಿ ಶಾಸನವನ್ನಾಗಿ ಕೆತ್ತಿದನ” (ನಾಡೋಜ ಪಂಪ), ಶ್ರೀ ಜಿ. ಹೆಚ್. ನಾಯಕರು “ಕುರುಕ್ಷೇತ್ರ ಯುದ್ಧಕ್ಕೆ ಪ್ರೇರಕಶಕ್ತಿ ಮತ್ತು ವ್ಯಕ್ತಿ ಮುಖ್ಯರಲ್ಲಿ ದ್ರೌಪತಿಯೂ ಒಬ್ಬಳು” ಎಂದಿದ್ದಾರೆ (ಮತ್ತೆ ಮತ್ತೆ ಪಂಪ) ಇದೆಲ್ಲವೂ ಒಂದು ಅರ್ಥದಲ್ಲಿ ಭೂಮಂಡಲವನ್ನೆಲ್ಲಾ ಮಟ್ಟಹಾಕಿದ ಭೀಮನ ಅಟ್ಟಹಾಸದ ಕಡೆಗೆ ಗಮನ ಕೊಡುವಂತೆ ಮಾಡುತ್ತದೆ.

ಇದೇ ಸಂದರ್ಭದ ಪದ್ಯಭಾಗದ ರಸದ ಬಗೆಗೆ ಮಾತಾಡಿರುವುದು ಕೆಲವೇ ಕೆಲವು ವಿದ್ವಾಂಸರು. ಈ ಪದ್ಯ ಭಾಗದ ಕೆಲವು ಕ್ರಿಯೆಗಳು ಮತ್ತು ಅದರೊಂದಿಗೆ ಮೇಲಿನ ಪದ್ಯವನ್ನು ಸೇರಿಸಿ ನೋಡಿದಾಗ ಇಲ್ಲಿ ಸ್ಪುರಿಸಿರುವ ಭಾವ ಯಾವುದು? ಅದು ತನ್ನ ಪ್ರಖರಾವಸ್ಥೆಗೆ ತಲುಪಿ ಉಂಟುಮಾಡುವ ರಸ ಯಾವುದು? ಅಲ್ಲಿಂದ ಮುಂದೆ ಪಡೆಯುವ ದಿಕ್ಕು
ಯಾವುದು? ಅನ್ನುವ ಪ್ರಶ್ನೆ ಉಂಟಾಗದೆ ಇರದು.

ಇದಕ್ಕೆ ಕೆಲವು ಹಿಂದಿನ ಪದ್ಯಗಳನ್ನು ಗಮನಿಸುವುದು ಬಹಳ ಉತ್ತಮ. ಆ ಭಾಗದಲ್ಲಿನ ಆಯ್ದ ಕೆಲವು ಪದ್ಯಗಳನ್ನು ಗಮನಿಸಿ. ಭೀಮನ ಪ್ರಹಾರದಿಂದ ದುಶ್ಯಾಸನ ಸತ್ತಿಲ್ಲ, ಇನ್ನೂ ಸಾಯುತ್ತಿರುತ್ತಾನೆ. ಅದನ್ನು ಕಂಡು ಸಂತಸ ಪಡುವ ದ್ರೌಪತಿಯ ಚಿತ್ರ ಭಯಾನಕ ಚಿತ್ರವಾಗಿದೆ.

ಉಸಿರೊತ್ತಿ ತಿದಿಯಂತಿರೆ
ಒತ್ತಿದ ಬಸಿಱ್
ಪೋತಂದ ಕಣ್
ಬಿಟ್ಟ ಬಾಯ್
ಮಸಕಂಗುದಿದ ಮೆಯ್ ವಲಂ ಬಡಿವ ಕಾಲ್
ಭೂಭಾಗದೊಳ್ ತಂದು ತಾಟಿಸುತಂ
ಕೋಟಲೆಗಳೊಳ್ವ ರತ್ನಮಕುಟ ದ್ಯೋತೋತ್ತಮಾಂಗಂ
ವಿರಾಜಿಸುವನ್ನಂ
ಪುಡಿಯೊಳ್ ಪೊರಳ್ವ ಪಗೆಯಂ
ಕಣ್ಣಾರ್ವಿನಂ ನೋಡಿದಳ್ ( ೧೨.೧೫೧ )

ವಚನ : ಆಗಳ್ ವೃಕೋದರಂ ತಳೋದರಿಯ ಮುಖಮಂ ನೋಡಿ – ನಿನ್ನ ಎನ್ನ ಪ್ರತಿಜ್ಞೆಯಂ ನೆರಪುವಂ ಬಾ ಎಂದು ಕೆಲದೊಳೆ ಕುಳ್ಳಿರಿಸಿ ದೃಢಕಠಿಣ ಹೃದಯನಪ್ಪ ಹಿರಣ್ಯಾಕ್ಷನ ಉರಮಂ ಪೋೞ್ವ ನಾರಸಿಂಹನಂತೆ

ಡೊಕ್ಕನೆ
ಸುರಿಗೆಯೊಳ್
ಉರಮಂ ಬಿಕ್ಕನೆ ಬಱಿಯಿಱಿದು
ಬರಿಯನ್ ಅಗಲೊತ್ತಿ ಮನಂ ಕೊಕ್ಕರಿಸದೆ
ಅಳುರ್ಕೆಯೆ
ಮೊಗೆಮೊಗೆದು ನೆತ್ತರಂ
ಪವನಸುತಂ ( ೧೨.೧೫೩ )

ನೆತ್ತಿಯೊಳ್ ಎಱೆದೆಱೆದು
ಇನಿಸು ಅಱೆಯೊತ್ತಿ
ಬೞಿಕ್ಕ
ಇೞಿಯೆ ಪೊಸೆದು ಜಡೆಗೊಂಡಿರ್ದ
ಉದ್ವೃತ್ತ ಕುಚಯುಗೆಯ ಕೇಶಮನ್
ಎತ್ತಂ ಪಸರಿಸಿದನ್
ಎಯ್ದೆ ಪಸರಿಸಿದ ಅದಟಂ ( ೧೨.೧೫೪ )

ಪಸರಿಸಿ ಪಂದಲೆಯಂ ಮೆಟ್ಟಿಸಿ
ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ
ಪೊದಳ್ದ ಒಸಗೆಯಿನ್
ಅವನ ಕುರುಳ್ಗಳೆ ಪೊಸವಾಸಿಗಮಾಗೆ
ಕೃಷ್ಣೆಯಂ ಮುಡಿಸಿದಂ ( ೧೨.೧೫೫ )

ಇಲ್ಲಿನ ಘಟನೆಗಳು ಕಣ್ಣಿಗೆ ಕಟ್ಟುವಂತೆ ಬರುವುದು. ದುಶ್ಯಾಸನ ಇನ್ನೂ ಸ್ವಲ್ಪ ಜೀವಂತವಾಗಿದ್ದಾನೆ. ಇನ್ನೇನು ಜೀವ ಹೋಗುವ ಹಾಗಿದೆ ಅವನ ಮುಂದೆ ದ್ರೌಪತಿ “ಪುಡಿಯೊಳ್ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್” ಈ ಪದವೇ ವಿಚಿತ್ರ ಅನಿಸಿಬಿಡುತ್ತದೆ. ಒಬ್ಬ ವ್ಯಕ್ತಿಯ ಸಾವನ್ನು ಅಷ್ಟು ಪಕ್ಕದಲ್ಲಿ ಕುಳಿತು, ಅದನ್ನು ನೋಡಿ, ನಗುವುದೆಂದರೆ – ಅವಳಲ್ಲಿ ಅದೆಷ್ಟು ಮಟ್ಟದ ಸಿಟ್ಟು, ದ್ವೇಶ ಮತ್ತು ಆ ವ್ಯಕ್ತಿಯ ಸಾವಿನ ಕಾತರಿಕೆ ಇರಬೇಡ ಅನಿಸದೆ ಇರದು. ಆ ನಂತರದ ಕಾರ್ಯವಂತೂ ಮಹಾಭಾರತದಲ್ಲಿಯೇ ದೊಡ್ಡ ಪ್ರಸಂಗಗಳಲ್ಲಿ ಒಂದು. “ತನ್ನ ಕೈಯಿಂದ ಅವನ ರಕ್ತವನ್ನು ಅವಳ ತಲೆಗೆ ಹಾಕಿ, ಅವನ ಬೆನ್ನುಮುಳೆಯ ಬಾಚಣಿಗೆ ಮಾಡಿ, ಅವಳ ಎದೆಯ ಮೇಲೆ ಚಾಚಿ ಜಟೆಯಂತಾಗಿದ್ದ ಕೂದಲನ್ನು ಬಾಚುವುದು” ಇದಿಷ್ಟೆ ಎಲ್ಲರಿಗೂ ಸಾಮಾನ್ಯ ತಿಳಿದಿರುವುದು ಪಂಪ ಒಂದು ಪದವನ್ನು (೧೫೪) ಬಳಸುತ್ತಾನೆ ಆ ಪದ “ಇನಿಸು ಅಱೆಯೊತ್ತಿ” ಸಾಮಾನ್ಯ ಈ ಪದ ಓದುವಾಗ ಜಾರಿ ಹೋಗುತ್ತದೆ. ಒಂದಷ್ಟು ಗಮನ ಹರಿಸಿದರೆ “ಅವಳ ತಲೆಗೆ ರಕ್ತ ಹಾಕುತ್ತಲೇ ಕುಟ್ಟುವ ಕ್ರಿಯೆಯ ಚಿತ್ರ ಇದು” (ಸಾಮಾನ್ಯ ಹಳ್ಳಿಗಳ ಕಡೆ ಇದನ್ನು ಮಕ್ಕಳಿಗೆ ಮಾಡುವ ಕ್ರಿಯೆ. ಎಣ್ಣೆಯ ಅಂಶ ತಲೆಯ ಕೂದಲನ್ನು ದಾಟಿ ಚರ್ಮ ಭಾಗಕ್ಕೆ ತಲುಪಲಿ ಎಂದು) ಇಷ್ಟೆಲ್ಲಾ ಆದ ನಂತರದ ವಚನವನ್ನೂ ಗಮನಿಸಿ

ವಚನ : ಅಂತು ತನ್ನ ಪಗೆಯುಂ ಬಗೆಯುಂ ಮುಡಿಯೆ ರಿಪು ವಿಪುಳ ರುಧಿರ ಜಲಂಗಳೊಳಂ, ರುಚಿರ ತದೀಯಾಂತ್ರ ಮಾಲೆಯನೆ ಮಾಲೆ ಮಾಡಿ ಮುಡಿಯಿಸಿ, ಕೃಷ್ಣೆಯ ಮೊಗಮಂ ನೋಡಿ ‘ ಮುಗುಳು ನಗೆ ನಕ್ಕು ‘ ಕೌರವ ಕುಳ ವಿಳಯ ಕೇತು ಇಂತೆಂದಂ

ಅನ್ನುವುದನ್ನು ಸೇರಿಸಿಕೊಂಡು “ಇದಱೊಳೆ …” ಪದ್ಯದ ಓದನ್ನು ಮಾಡುವುದು ಉಚಿತವಾಗುವುದು. ಈ ಸಂದರ್ಭಕ್ಕೆ ಕನ್ನಡ ಸಾಹಿತ್ಯದಲ್ಲಿ ಕೆಲವು ಅಭಿಪ್ರಾಯಗಳು ಬಂದಿರುವುದನ್ನು ಈ ಮೊದಲೇ ಹೇಳಿದ್ದೇನೆ. ಆದರೆ ಇದರಲ್ಲಿನ ರಸದ ಬಗೆಗೆ ಮಾತಾಡಿರುವುದು ಕೆಲವರು ಮಾತ್ರ. ಶ್ರೀ ಎಸ್. ವಿ. ರಂಗಣ್ಣನವರು “ಭಯಾನಕ ರಸ ಸಾಹಿತ್ಯ ಸಹಿಸಬಲ್ಲ ಭೀಷಣತೆಯ ಪರಿಮಿತಿಯನ್ನು ದಾಟಿ ಭೈರವ ಸ್ವರೂಪವನ್ನು ತಾಳಿ ಸತ್ಯುಗ್ರವೂ ಅಸಹ್ಯವೂ ಆಗಿಬಿಡುತ್ತದೆ” ಎಂದಿದ್ದಾರೆ (ಶೈಲಿ – ಪಂಪನ ಶೈಲಿ). ಶ್ರೀ ವಿ ಸೀತಾರಾಮಯ್ಯನವರು “ಭೀಭತ್ಸ ದುರ್ಮದಕ್ಕೂ ಹೇಸಿಗೆಗೂ ತಿರುಗುತ್ತದೆ, ಅದೂ ರಸವಲ್ಲವೇ?” ಎಂದಿದ್ದಾರೆ (ಪಂಪ – ಕವಿ ಕಾವ್ಯ ವಿಚಾರ) ಶ್ರೀ ಮುಳಿಯ ತಿಮ್ಮಪ್ಪಯ್ಯನವರು “ಭೀಮನ ಪೌರುಷ ಪ್ರಸಾರವನ್ನು ಕೆಲಮಂದಿ ವಿಮರ್ಶಕರ ಮುಂಗಣ್ಣು ನಿಂದಿಸಲೂಬಹುದು, ಅವರಿಗದು ಪೈಶಾಚಿಕ ಪ್ರದರ್ಶನದ ಜಿಗುಪ್ಸೆಯಾಗಿ ತೋರಲೂ ಬಹುದು, ಅದರೆ ಅದು ಹಿಂಗಣ್ಣನ್ನೊಂದಿಷ್ಟು ಹರಿಯಿಸಬೇಕು” ಎಂದು ಹೇಳುತ್ತಲೇ (ನಾಡೋಜ ಪಂಪ ) ರಸದ ಚರ್ಚೆಗೆ ಒಂದಷ್ಟು ಹಿನ್ನೋಟವನ್ನೂ ಸೇರಿಸಿ ಅಳತೆ ಮಾಡಲು ಕರೆಕೊಟ್ಟಿದ್ದಾರೆ.

ಈ ಎಲ್ಲಾ ಮಾತುಗಳನ್ನು ಗಮನಿಸಿಯೂ, ಗೌರವಿಸಿಯೂ ಕೆಲವು ಮಾತುಗಳನ್ನು ಆಡುವುದು ಉಚಿತವೆನಿಸದೆ ಇರದು. ಇಲ್ಲಿ ಯುದ್ಧ ನಡೆಯುತ್ತಿರುವುದು ಅಪೇಕ್ಷಿತ ಪ್ರತೀಕಾರ. ಇಲ್ಲಿನ ಸಮಯದಲ್ಲಿನ ಬಹುಮುಖ್ಯ ಎರಡು ಅಂಶಗಳು ಇಲ್ಲಿನ ರಸವನ್ನು ಜಿಗುಪ್ಸೆ, ಭೀಭತ್ಸವೆಂದು ನಿರ್ಧಾರಿತ ಉತ್ತರಗಳನ್ನು ಕೊಡುವಂತೆ ಮಾಡಿದ್ದರೂ ಇಲ್ಲೊಂದು ಅದ್ಭುತದೊಂದಿಗಿನ ಶೃಂಗಾರವಿದೆ. ಇದಕ್ಕೆ ಎರಡು ಕಾರಣಗಳೆಂದರೆ – ಒಂದು ಭೀಮನು ಎಣ್ಣೆಯಂತೆ ಅವಳ ಕೂದಲಿಗೆ ರಕ್ತವನ್ನು ಹಾಕಿ ತಲೆಗೆ ಕುಟ್ಟುವುದರ ಜೊತೆಗೆ ಅವಳ ಉಳಿದ ದೇಹ ಭಾಗಗಳ ವಿವರಣೆ ಬರುವುದು.

ಸಾಮಾನ್ಯವಾಗಿ ಇದು ಆ ಕ್ಷಣದಲ್ಲೇ ಆದರೂ ಹೆಣ್ಣಿನ ಸೌಂದರ್ಯದ ಪ್ರಮುಖ ಅಂಶವಾದ ಕೂದಲನ್ನು ಕಟ್ಟುವಷ್ಟೆ ಹೇಳದೆ ಉಳಿದ ಭಾಗದ ವಿವರಣೆ ಬಂದಿರುವುದು ಒಂದಷ್ಟು ಹೊಸ ನೋಟಗಳಿಗೆ ಹಾದಿ ಮಾಡಿಕೊಡುತ್ತದೆ. ಮತ್ತೊಂದು ಇದಱೊಳೆ ಪದ್ಯ ಭಾಗ ಪ್ರಾರಂಭ ಆಗುವುದಕ್ಕೂ ಮುಂಚೆ ಅವನಾಡುವ ಮಾತುಗಳಾದ ನಂತರ ಬರುವ “ಮುಗುಳು ನಗೆ ನಕ್ಕು” ಅನ್ನುವ ಪದ. ಇವುಗಳನ್ನು ಗಮನಿಸಿದರೆ ಈ ಭಾಗವೊಂದು ಭೀಭತ್ಸಾದ್ಭುತ ಶೃಂಗಾರವಾಗಿ ನಿಲ್ಲುತ್ತದೆ. ಮೀಮಾಂಸಕರ ಪರಿಭಾಷೆಯಲ್ಲಿಯೇ ಹೇಳುವುದಾದರೆ “ಈ ಭಾಗದಲ್ಲಿ ಭೀಭತ್ವವು ವರ್ಣಿತವಾಗುತ್ತಿದ್ದು (ದುಶ್ಯಾಸನನ ಸಾವು) ತತ್ ಕ್ಷಣದಲ್ಲಿಯೆ ಅದನ್ನು ಮೀರಿಸುವ ಮತ್ತೊಂದು ಭಾವೋದಯ ಆಗುತ್ತದೆ (ದ್ರೌಪತಿಯ ನಗೆ ಮತ್ತು ಭೀಮನ ನಗೆ) ಈ ಎರಡೂ ಭಾವಗಳು ಒಂದನ್ನೊಂದು ಸಂಧಿಸಿಕೊಂಡು ನಡೆದೇ ಕೊನೆಯ ಪದ್ಯವಾದ ‘ಇದಱೊಳೆ …’ ಯಲ್ಲಿ ಇವುಗಳನ್ನು ಮೀರಿಸಿ ಹೊಸ ಭಾವವೊಂದು ಉಂಟಾಗಿ ತನ್ನ ವೈಶಾಲ್ಯತೆಯನ್ನು ಸಾಧಿಸಿ ಕೊನೆಗೆ ಭಾವಶಾಂತಿಯ ಹಂತಕ್ಕೆ ತಲುಪಿ ಯಶಸ್ವಿಯಾಗುತ್ತದೆ.

ಇಲ್ಲಿನ ಪ್ರತಿಯೊಂದು ಪದ್ಯಗಳಲ್ಲಿಯೂ ಒಂದನ್ನು ಮೀರಿಸಲು ಮತ್ತೊಂದು ಬಂದ ಹಾಗಿದ್ದು, ಎರಡೆರಡು ಭಾವಗಳು ಸಮಾನಾಂತರತೆ ಕಾಯ್ದುಕೊಂಡು ಚಲಿಸುತ್ತಲೇ ಕೊನೆಗೆ ಕಾವ್ಯ ಸಂದರ್ಭ, ಪಾತ್ರಗಳು ಮತ್ತು ಓದುಗನ ಕಡೆಯಿಂದ ಭಾವಶಾಂತಿ ಉಂಟಾಗುತ್ತದೆ. ಈ ಭಾವಶಾಂತಿಯೂ ಪ್ರಕೃತ ಪದ್ಯದ ಓದು ಮುಗಿದ ನಂತರ ಅಲ್ಲಿಂದ ಮುಂದೆ ಮತ್ತೆ ಹೊಸ ಪಾತ್ರವೊಂದು ಬಂದು ಸೇರಿಕೊಂಡು ಮತ್ತೆ ಭೀಭತ್ಸಕ್ಕೆ ಹಾದಿ ಮಾಡಿಕೊಡುತ್ತದೆ. ಹೀಗೆ ಪಂಪ ಭಾರತದ ಈ ಭಾಗವು ರಸದ ಮೇಲಾಟದಲ್ಲಿಯೇ ತನ್ನ ಯಶಸ್ವಿಯನ್ನು ಕಂಡುಕೊಂಡು ಆಚಾರ್ಯ ತೀ ನಂ ಶ್ರೀ ಹೇಳುವ ಹಾಗೆ “ಪಂಪ ಮಹಾಕವಿಯಷ್ಟೇ ಅಲ್ಲ, ಅವನು ಕವಿಗಳ ಕವಿ” ಅನ್ನುವುದನ್ನು ಸಾರ್ಥ್ಯಗೊಳಿಸಲು ಈ ಭಾಗವು ಸಾಕ್ಷಿಯಾಗಿ ನಿಲ್ಲುತ್ತದೆ.