ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ, ನಾನಲ್ಲಿಗೆ ಹೋಗಲೇಬೇಕಾಗಿದೆ. ಆದರೆ ಹೋಗುವ ದಾರಿಯ ನೆನಪಿಲ್ಲ. ಅಲೆಯುತ್ತಿದ್ದೇನೆ, ಕಳೆದುಹೋಗಿದ್ದೇನೆ, ಸುಸ್ತಾಗಿದೆ. ಅಥವಾ ನಾನು ಊರಿಗೆ ಮರಳಿದ್ದೇನೆ, ಅಲ್ಲಿ ಯಾರೂ ನನ್ನನ್ನು ಸ್ವೀಕರಿಸುತ್ತಿಲ್ಲ.
ಕನ್ನಡದ ಹಿರಿಯ ಬರಹಗಾರ ಕೆ.ವಿ.ತಿರುಮಲೇಶರಿಂದ ಒಂದು ಇಳಿ ವಯಸ್ಸಿನ ಸ್ವಗತ

 

Men must endure
Their going hence even as their coming hither.
Ripeness is all.
-William Shakespeare, King Lear

ವಡ್ಡಾರಾಧನೆಯೆಂದರೆ ವೃದ್ಧರ ಆರಾಧನೆ ಎಂದು ತಿಳಿಯುವ ಹೊತ್ತಿಗಾಗಲೇ ನಾನು ವೃದ್ಧನಾಗಿದ್ದೆ. ವೃದ್ಧ ಎಂದರೆ ವೃದ್ಧಿಸಿದವ ಎಂಬ ಅರ್ಥ. ನಾನು ಏತರಲ್ಲಿ ವೃದ್ಧಿಸಿದ್ದೇನೆ ಗೊತ್ತಿಲ್ಲ. ವಯೋವೃದ್ಧ, ಜ್ಞಾನವೃದ್ಧ ಎಂಬ ಎರಡು ಪ್ರಧಾನ ಕೆಟಗರಿಗಳಿವೆ. ಅನೇಕ ಪುಸ್ತಕಗಳನ್ನು ಓದಿದ್ದೇನೆ ನಿಜ, ಆದರೆ ಯಾವುದೂ ತಲೆಯಲ್ಲಿ ಉಳಿದಿಲ್ಲ. ತುಂಬ ಓದಿದ್ದೀರಿ ಎಂದು ಯಾರಾದರೂ ಹೇಳಿದರೆ ನಾನು ತಲೆ ತಗ್ಗಿಸುತ್ತೇನೆ, ತುಂಬ ಎಂದರೆ ಏನು ಎಂದು ತಿಳಿಯದೆ. ಬೃಹತ್ ಗ್ರಂಥಾಲಯಗಳನ್ನು ಕಂಡಾಗ ನನ್ನ ಎದೆ ಕುಸಿಯುತ್ತದೆ.

ಭಾರತ, ಇಂಗ್ಲೆಂಡ್, ಅಮೇರಿಕಗಳಲ್ಲಿ ನಾನಿದನ್ನು ಅನುಭವಿಸಿದ್ದೇನೆ. ಇಷ್ಟು ಪುಸ್ತಕಗಳಲ್ಲಿ ಯಾವುದನ್ನು ಎತ್ತಿಕೊಳ್ಳಲಿ? ಎಂದು ತಿಳಿಯದೆ. ಅದು ನೀಲಿ ಆಕಾಶದಲ್ಲಿ ನಕ್ಷತ್ರಗಳನ್ನ ನೋಡಿದಂತೆ. ಇಷ್ಟು ನಕ್ಷತ್ರಗಳಲ್ಲಿ ಯಾವುದು ನನ್ನ ನಕ್ಷತ್ರ ಎಂದು ರಿಲ್ಕೆಯೋ ಇನ್ನು ಯಾರೋ ಕೇಳಿದರಲ್ಲ. ಆತ ಹುಚ್ಚನೇ ಇರಬೇಕು, ಅರ್ಥಾತ್ ಕವಿ. ಇಷ್ಟು ಪುಸ್ತಕಗಳಲ್ಲಿ ಒಂದಂಶವನ್ನಾದರೂ ನಾನು, ಅಥವಾ ಯಾವನೇ ಒಬ್ಬ, ಓದಿ ಮುಗಿಸುವುದಿದೆಯೇ? ಕಿಂಗ್ ಲೀಯರ್ ಹೇಳಿದ ಹಾಗೆ, I fear I am not in my perfect mind. ನನ್ನಲ್ಲಿರುವ ಪುಸ್ತಕಗಳನ್ನೇ ನಾನು ಪೂರ್ತಿಯಾಗಿ ಓದಿಲ್ಲ. ಇನ್ನು ದೊಡ್ಡ ದೊಡ್ಡ ಲೈಬ್ರರಿಗಳ ಮಾತು ದೂರವೇ ಉಳಿಯಿತು. ಎಷ್ಟೊಂದು ಲೇಖಕರು ಅಲ್ಲಿ ಶೆಲ್ಫುಗಳಲ್ಲಿ ಕೂತಿದ್ದಾರೆ! ಯಾರು ಅವರನ್ನು ಮಾತಾಡಿಸುತ್ತಾರೆ? ಯಾರೂ ಇದುವರೆಗೆ ಮುಟ್ಟಿರದ ಪುಸ್ತಕಗಳೂ ಅಲ್ಲಿ ಇರಬಹುದು ಎನ್ನುವ ವಿಚಾರ ನನ್ನ ಹೃದಯವನ್ನು ಹಿಂಡುತ್ತದೆ.

ನಿಜ, ನನ್ನ ಮನಸ್ಸು ನನ್ನ ಸ್ತಿಮಿತದಲ್ಲಿ ಇಲ್ಲ. ಹೆಚ್ಚು ಓದಿದಷ್ಟೂ ಮನುಷ್ಯ ಜ್ಞಾನಿಯಾಗುತ್ತಾನೆಯೇ? ನನಗೆ ಗೊತ್ತಿಲ್ಲ. ಆದರೆ ಓದದೆ ಜ್ಞಾನಿಯಾಗುವುದು ಕಷ್ಟಸಾಧ್ಯ. ನಮ್ಮಲ್ಲಿ ಮೌಖಿಕ ಸಂಸ್ಕೃತಿಯನ್ನು ಅಕ್ಷರ ಸಂಸ್ಕೃತಿಯ ವಿರುದ್ಧ ನಿಲ್ಲಿಸಿ ಅವುಗಳ ಮಧ್ಯೆ ವೈಷಮ್ಯ ತರುವ ಪ್ರಯತ್ನವಿದೆ. ಇದರ ಅಗತ್ಯವಿಲ್ಲ. ಅವು ಪರಸ್ಪರ ಪೂರಕ ಎಂದು ತಿಳಿಯುವುದು ಲೇಸು. ಕೇವಲ ಮೌಖಿಕ ಪ್ರಸರಣದ ಮೂಲಕ ಜ್ಞಾನವೃದ್ಧಿ ಆಗುವುದಿಲ್ಲ. ನನ್ನ ಬಾಲ್ಯದ ವಾತಾವರಣದಲ್ಲಿ ನನಗೆ ವಿದ್ಯಾಭ್ಯಾಸಕ್ಕೆ ಮನೆಯ ಪ್ರೋತ್ಸಾಹ ಸಿಗಲಿಲ್ಲ. ಇಂದು ಇದು ಆಶ್ಚರ್ಯವೆನಿಸೀತು. ನಾನು ಹೋದ ಪ್ರಾಥಮಿಕ ಶಾಲೆಯೂ ಕೆಟ್ಟದಾಗಿತ್ತು. ನನಗೆ ಕಲಿಕೆಯಲ್ಲೇ ನಿರಾಸಕ್ತಿ ಹುಟ್ಟಿತು. ಪ್ರೌಢ ಶಾಲೆಗೆ ಸೇರಿ ವಿದ್ಯೆಯಲ್ಲಿ ಆಸಕ್ತಿ ಹುಟ್ಟುವ ಕಾಲಕ್ಕೆ ಇನ್ನು ಓದಿದ್ದು ಸಾಕು ಎಂದು ನಿತ್ಯ ಪೀಡನೆ ಸುರುವಾಯಿತು.

ನಾನು ಹಟದಿಂದಲೇ ಶಿಕ್ಷಣ ಪಡೆದದ್ದು. ಅದರಿಂದಲೇ ಓದಲು ಬರೆಯಲು ಕಲಿಸಲು ಸಾಧ್ಯವಾದ್ದು. ಈ ಹಿನ್ನೆಲೆಯುಳ್ಳ ನಾನೀಗ ವೃದ್ಧನಾಗಿದ್ದೇನೆ, ಆದರೆ ಜ್ಞಾನವೃದ್ಧ ಅನ್ನಲಾರೆ. ಅನ್ನುವುದು ಅಹಂಕಾರ. ಅರಿವು ಎಂದರೆ ಅಜ್ಞಾನದ ಕುರಿತಾದ್ದು; ಅರಿತಷ್ಟೂ ಇನ್ನಷ್ಟು ಅರಿಯುವುದು ಇದ್ದೇ ಇರುತ್ತದೆ. ಆದ್ದರಿಂದ ನನಗೆ ಯಾವ ಆರಾಧನೆಯೂ ಬೇಡ. ನನಗೆ ಇಳಿ ವಯಸ್ಸಾಗಿದೆಯೆಂದರೆ ದೈಹಿಕ ಮತ್ತು ಮಾನಸಿಕ ಕಾರ್ಯಕ್ಷಮತೆ ಕುಗ್ಗಿದೆ, ಕಾಯಿಲೆಗಳು ಹೆಚ್ಚಾಗಿವೆ ಎಂದಷ್ಟೆ ಅರ್ಥ. ಹೌದು, ನನಗೀಗ ೮೦ ಅಥವಾ ಅದರ ಆಜೂಬಾಜು. ಯಾಕೆ ಆಜೂಬಾಜು ಎಂದರೆ ನನ್ನ ಹುಟ್ಟಿದ ದಿನ, ತಾರೀಖು, ಇಸವಿ ನಿರ್ಧರಿಸಿದ್ದು ಶಾಲೆಯ ಹೆಡ್‌ ಮಾಸ್ಟರು. ಅವರು ಮುಖ ನೋಡಿ ಇದನ್ನು ನಿಶ್ಚಯಿಸುತ್ತಾರೆ. ಈ ಲೆಕ್ಕ ತಪ್ಪೆಂದು ಹಲವು ವರ್ಷಗಳ ನಂತರ ನನಗೆ ಗೊತ್ತಾಯಿತು. ದಾಖಲೆ ತಿದ್ದುವ ಗೊಡವೆಗೆ ನಾನು ಹೋಗಲಿಲ್ಲ. ನಾಲ್ಕೈದು ತಿಂಗಳುಗಳ ವ್ಯತ್ಯಾಸ ನನಗೆ ಏನೂ ಆಗಿರಲಿಲ್ಲ. ನಾನು ನನ್ನ ಜನ್ಮದಿನವನ್ನು ಎಂದೂ ಆಚರಿಸಲಿಲ್ಲ. ಕಾಲ ನಿರಂತರವಾದುದು; ಅದನ್ನು ನಮ್ಮ ಸಂಸ್ಕೃತಿ ದಿನ, ಮಾಸ, ವರ್ಷ ಎಂದು ವಿಭಜಿಸುತ್ತದೆ ಅಷ್ಟೆ.

ಇನ್ನು ಶತಮಾನ, ಯುಗ, ಮನ್ವಂತರ, ಕಲ್ಪ ಎಂಬ ಸುದೀರ್ಘಾವಧಿಯ ಕಾಲಗತಿಗಳೂ ಇವೆ. ಈ ವಿಭಜನೆ ಅನಗತ್ಯ ಎಂದೂ ಹೇಳಲಾರೆ. ಏನಿಲ್ಲದಿದ್ದರೂ ಜನ್ಮದಿನ ಮುಂತಾದ ಆಚರಣೆಗಳು ನಮಗೆ ನಮ್ಮ ಅಲ್ಪಾವಧಿಯ ಬಗ್ಗೆ ಎಚ್ಚರಿಕೆ ನೀಡುತ್ತವೆ. ಪುರಾಣಗಳಲ್ಲಿ ಮಾತ್ರ ಚಿರಂಜೀವಿಗಳು ಬರುತ್ತಾರೆ. ನಿಜದಲ್ಲಿ ಎಲ್ಲ ಜೀವಿಗಳೂ ನಶ್ವರರು. ಕೆಲವೊಮ್ಮೆ ಚಿರಂಜೀವಿತ್ವ ಒಂದು ಶಾಪವಾಗಬಹುದು. ಎಲಿಯಟ್‌ ನ ವೇಸ್ಟ್ ಲ್ಯಾಂಡಿನಲ್ಲಿ ಬರುವ ಮಾಟಗಾತಿ ಸಿಬಿಲ್‌ಗೆ ಚಿರಂಜೀವಿತ್ವ ಇತ್ತು, ಆದರೆ ಚಿರ ಯೌವನವಿರಲಿಲ್ಲ. ಕಾಲ ಕಳೆಯುತ್ತಿದ್ದಂತೆ ಅವಳು ಕೃಶಳಾಗುತ್ತ ಹೋದಳು. ಒಮ್ಮೆ ಸತ್ತರೆ ಸಾಕು ಎನ್ನುವುದೇ ಅವಳ ಅಭಿಲಾಷೆಯಾಯಿತು! ಹಲವು ವೃದ್ಧರ ಬಾಯಿಂದ ನಾನೀ ಮಾತನ್ನು ಕೇಳಿದ್ದೇನೆ. ಇದು ಮನುಷ್ಯನ ದೀರ್ಘಾಯುಸ್ಸಿಗೆ ಒಂದು ರೂಪಕ ಅಲ್ಲವೇ ಎಂದು ಕೂಡ ನನಗನಿಸುತ್ತದೆ.

ನನಗೆ ಬುದ್ಧಿ ಬಂದಾಗ ನಾನು ಬಯಸಿದ್ದು ಒಬ್ಬ ಲೇಖಕನಾಗಲು. ಆಯುಸ್ಸಿನ ವಿಚಾರ ಅಂಥ ಪ್ರಾಯಕ್ಕೆ ಬರುವುದಿಲ್ಲ. ಅದು ಬಂದಾಗ ನನ್ನ ಹೀರೋಗಳು ಅಲ್ಪಾಯುಷಿ ಲೇಖಕರಾಗಿದ್ದರು. ಕೀಟ್ಸ್, ಶೆಲ್ಲಿ, ಬೈರನ್, ಜೆರಾರ್ಡ್ ದ ನೆರ್ವಾಲ್, ಕಾಫ್ಕಾ, ಯೆರ್ಮುಂಜೆ ರಾಮಚಂದ್ರ, ಪೇಜಾವರ ಸದಾಶಿವರಾವ್, ಬಿ. ಸಿ. ದೇಸಾಯಿ, ಶ್ರೀಕೃಷ್ಣ ಆಲನಹಳ್ಳಿ, ವಿಭಾ ಮುಂತಾದವರು. ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಹೇಗೆ ನಾಯಕರಾಗುವುದು ಸಾಧ್ಯ ಎಂದು ಅಂಥವರನ್ನು ಕೆಲವರು ಟೀಕಿಸುತ್ತಾರೆ. ಆದರೆ ನಾನದರಲ್ಲಿ ಇಲ್ಲ. ಇವರೆಲ್ಲ ಇನ್ನಷ್ಟು ಬರೆಯುವ ಸಾಧ್ಯತೆ ಇತ್ತು ಎನ್ನುವುದೇ ಒಂದು ಮನ ಕಲಕುವ ಸಂಗತಿ. ನಾನು ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವ ಕವಿ ಎಂದು ವಿಮರ್ಶಕರೊಬ್ಬರು ಹೇಳಿದ್ದು ನೆನಪಿಗೆ ಬರುತ್ತದೆ – ಎಂದರೆ ಪದೇ ಪದೇ ಮಾರ್ಗ ಬದಲಿಸುವ ಕವಿ ಎಂದು ಅರ್ಥ. ಅವರ ಮಾತನ್ನು ನಾನು ಗೌರವಿಸುತ್ತೇನೆ. ಕವಿಗಳನ್ನು ಹಲವು ರೀತಿಗಳಲ್ಲಿ ನಾವು ನೋಡಬಹುದು: ಒಂದೇ ತರದಲ್ಲಿ ಬರೆಯುವವರು, ಪ್ರಯೋಗಶೀಲರಾಗಿ ಬರೆಯುವವರು ಮುಂತಾಗಿ.

ಪ್ರಯೋಗಶೀಲತೆ ನನಗಿಷ್ಟ. ಆದರೆ ಅದರ ಅಪಾಯವನ್ನೂ ನಾನು ಬಲ್ಲೆ. ಪ್ರಾಯೋಗಿಕತೆಯೇ ಮುಂದಾಗಿಬಿಟ್ಟರೆ ಅದುವೇ ಗಮನ ಸೆಳೆಯುತ್ತದೆ. ಹಾಗಾಗಬಾರದಲ್ಲ? ಅಥವಾ ಹಾಗೂ ಆಗಬಹುದೇ? ಎಲಿಯಟ್‌ ನ ವೇಸ್ಟ್ ಲ್ಯಾಂಡ್ ಆಗಲಿ, ಬೆಕೆಟ್‌ ನ ವೈಟಿಂಗ್ ಫಾರ್ ಗೋದೋ ಆಗಲಿ ಪ್ರಾಯೋಗಿಕವಾಗಿ ಕಣ್ಣಿಗೆ ಕಟ್ಟುವಂತಿಲ್ಲವೇ? ಆದರೆ ಅವು ಸುಲಭ ಸ್ವೀಕೃತವಾಗುವುದಿಲ್ಲ. ಆಗಲೂ ಬಾರದು. ಇನ್ನಷ್ಟು ವೈರುಧ್ಯಮಯವಾಗಿ ಹೇಳುವುದಾದರೆ ಸ್ವೀಕೃತವೇ ಆಗಬಾರದು. ಗೋಪಾಲಕೃಷ್ಣ ಅಡಿಗರ ಚಂಡೆ ಮದ್ದಳೆ ಬಂದಾಗಲೂ ಹೀಗೆಯೇ ಆಯಿತು. ಯಾವಾಗಲೂ ಹೀಗೆ ಆಗುತ್ತದೆ. ಆಗದೆ ಇರಬೇಕಾದರೆ ಸಮಾಜ ಮತ್ತು ವ್ಯಕ್ತಿ ಇದ್ದಲ್ಲೆ ಇರಬೇಕು, ಎಲ್ಲ ಅರ್ಥದಲ್ಲೂ. ಇದ್ದಲ್ಲೆ ಇರುವುದು ಸಾಧ್ಯವೇ? ಎಲ್ಲರೂ ಚಲಿಸುತ್ತ ಇರುತ್ತಾರೆ. ಹಲವರು ಪೂರ್ವಸಿದ್ಧ ಗೆರೆಯಲ್ಲಿ, ಹಿಸ್ ಮಾಸ್ಟರ್ಸ್ ವಾಯ್ಸ್, ಕೆಲವರು ಗೆರೆ ಬಿಟ್ಟು.

ನಾನು ಎಳವೆಯಲ್ಲೇ ವಿದ್ಯಾಭ್ಯಾಸ ನಿಲ್ಲಿಸಿ ಹಳ್ಳಿಯಲ್ಲಿ ತೋಟ ಮಾಡಿಕೊಂಡು, ಮದುವೆ, ಮಕ್ಕಳು, ಸಂಸಾರ ಎಂಬುದಾಗಿ ಸ್ಕ್ರಿಪ್ಟೆಡ್ ಜೀವನ ಬದುಕಬೇಕೆಂದು ನನ್ನ ಹಿರಿಯರು ನಿರ್ಣಯಿಸಿದ್ದರು; ಯಾಕೆಂದರೆ ಅವರು, ಅವರ ಇಡೀ ವರ್ಗದವರು ಆ ರೀತಿಯ ಜೀವನ ನಡೆಸುತ್ತಿದ್ದರು. ಆಗ ಮನುಷ್ಯ ಪೇಪರ್ ಕಟೌಟಿನಂತೆ ಆಗುತ್ತಾನೆ. ಅಲ್ಲಿ ಬೆಳವಣಿಗೆ (ಬದಲಾವಣೆ) ಇರುವುದಿಲ್ಲ. ಇಲ್ಲವೆಂದೂ ಹೇಳಲಾರೆ, ಇರುವುದು ಸಣ್ಣ ಪ್ರಮಾಣದಲ್ಲಿ, ಮೇಲ್ಮೈಯಲ್ಲಿ ಮಾತ್ರ, ಆಮೂಲಾಗ್ರವಾಗಿ ಅಲ್ಲ. ನನಗಾದರೆ ಇದೆಲ್ಲವನ್ನೂ ದಾಟಬೇಕಿತ್ತು. ಕಾಣದ ಕಡಲಿಗೆ ಧುಮುಕಿದಂತೆ. ಇದಕ್ಕಾಗಿ ನಾನು ಕಳಕೊಂಡದ್ದು ಬಹಳಷ್ಟು. ಗಳಿಸಿದ್ದು? ಅದನ್ನು ಲೆಕ್ಕಿಗರು ಲೆಕ್ಕ ಹಾಕಲಿ. ಅಂತೂ ಮೈಲಾರ ಸುತ್ತಿ ಮರಳಿ ಹೈದರಾಬಾದಿಗೆ ಬಂದು ಬಿದ್ದಾಗ ನನಗೆ ೭೧ ವರ್ಷ. ವೃತ್ತಿ ಜೀವನದಿಂದ ಸಂಪೂರ್ಣ ನಿವೃತ್ತಿ. ಆದರೆ ಪ್ರವೃತ್ತಿಯಿಂದಲ್ಲ.

ಇನ್ನೀಗ ಪೂರ್ತಿ ಓದು ಬರಹದಲ್ಲಿ ತೊಡಗಿಸಿಕೊಳ್ಳುವುದು ಎಂದುಕೊಂಡೆ. ಆದರೆ ಜೀವನ ನಾವಂದುಕೊಂಡಷ್ಟು ಸಲೀಸಲ್ಲವಲ್ಲ, ಅದೂ ವೃದ್ಧಾಪ್ಯದಲ್ಲಿ. ಆದರೂ ಕತೆ, ಕವಿತೆ, ಲೇಖನಗಳನ್ನು ಬರೆಯುತ್ತಲೇ ಇದ್ದೆ. ಕೆಲವು ಅನುವಾದಗಳನ್ನೂ ಮಾಡಿದೆ. ಇವನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಆಸೆಯಾಯಿತು. ಕರ್ನಾಟಕದ ಹಲವು ಪ್ರಕಾಶಕರನ್ನು ಸಂಪರ್ಕಿಸಿದೆ. ಆಗ ನನಗೆ ನಿಜಕ್ಕೂ ಗೊತ್ತಾದುದು ಕನ್ನಡದ ಜನರ ದೃಷ್ಟಿಯಲ್ಲಿ ನಾನು ಯಾರು ಎನ್ನುವುದು. ನಾನು ಯಾರೂ ಅಲ್ಲವಾಗಿದ್ದೆ. ನನ್ನ ಅಹಂ ಬೆಲೂನು ಒಡೆಯಿತು. ಸುಮಾರು ಅರ್ಧ ಶತಕಗಳಷ್ಟು ಕಾಲ ನಾನು ಮಾಡಿದ್ದು ಶೂನ್ಯ ಸಂಪಾದನೆಯಾಗಿತ್ತು. ನನ್ನ ಬರಹಗಳಿಗೆ ಯಾವ ಬೆಲೆಯೂ ಇರಲಿಲ್ಲ. ಅಥವಾ ನನಗೆ ಬೆಲೆಯಿರಲಿಲ್ಲ ಎನ್ನುವುದು ಸರಿಯಿದ್ದೀತು. ನಾನೆಷ್ಟು ಕನ್ನಡ ಕನ್ನಡ ಎಂದು ಬಡಕೊಂಡರೂ ಕನ್ನಡಕ್ಕೆ ಹೊರಗಿನವನಾಗಿಯೇ ಉಳಿಯುತ್ತೇನೆ ಎನ್ನುವುದು ನನಗೆ ನಿಶ್ಚಯವಾಯಿತು.

ಬೆಂಗಳೂರು, ಮೈಸೂರು, ಧಾರವಾಡದ ಕೋಟೆಗಳು ನನಗೆ ಮುಚ್ಚಿದ್ದುವು. ಯಾಕೆ? ಯಾಕೆಂದರೆ ನಾನು ಜನರನ್ನು ಕಲ್ಟಿವೇಟ್ ಮಾಡಿರಲಿಲ್ಲ. ಹೇಗಾದರೂ ಮಾಡಿ ಹೆಸರು ಮಾಡಿರಲಿಲ್ಲ. ೭೦ರ ವಯಸ್ಸು ಆಚೀಚೆ ತಿರುಗಾಡುವ ವಯಸ್ಸಲ್ಲ; ಅಲ್ಲದೆ ನಾನು ಹೋಗಿ ನೋಡಿಯೋ ಫೋನ್ ಮಾಡಿಯೋ ಜನರನ್ನು ಉಪಯೋಗಿಸಿಕೊಳ್ಳುವ ವ್ಯಕ್ತಿಯೂ ಅಲ್ಲ. ಆದರೂ ಒಂದು ಐರನಿಯನ್ನು ನೋಡಿ: ನಾನು ಅನೇಕ ಲೇಖಕರ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ, ಲೇಖನಗಳನ್ನು ಬರೆದಿದ್ದೇನೆ. ಅವರಿಗೆ ನನ್ನಿಂದ ಮನ್ನಣೆ ಬೇಕು. ಅದರೆ ಅವರು ಯಾರೂ ಅನಂತರ ನನ್ನ ಕಡೆ ತಿರುಗಿ ನೋಡಿದವರಲ್ಲ! ಇನ್ನು ಹಲವರು ತಮ್ಮ ಪುಸ್ತಕಗಳನ್ನು ನನಗೆ ಕಳಿಸಿ ನನ್ನ ಅಭಿಪ್ರಾಯ ಕೇಳುತ್ತಾರೆ. ನನಗೆ ಓದುವುದಕ್ಕೆ ಕಷ್ಟವಾಗುತ್ತದೆ ಎಂದರೂ ಬಿಡುವುದಿಲ್ಲ. ಈಗಂತೂ ಈ-ಮೇಲಿನಲ್ಲಿ ಮೊಬೈಲಿನಲ್ಲಿ ಕಳಿಸಲು ತೊಡಗಿದ್ದಾರೆ. ‘ನೀನು ಹೇಗಿದ್ದೀ ಮನುಷ್ಯ?’ ಎಂದು ಕಳಕಳಿಯಿಂದ ಕೇಳುವವರಿಲ್ಲ. ನಾನಿರುವುದು ಟು ಸ್ವೆಲ್ ದ ಪ್ರೊಸೆಶನ್ ಎಂದುಕೊಂಡಿದ್ದಾರೆ.

ಕರ್ನಾಟಕದ ಯಾವುದೇ ಪ್ರಕಾಶನ ನಿಮ್ಮದೇನಾದರೂ ಪುಸ್ತಕ ಪ್ರಕಟಿಸುವುದಕ್ಕಿದೆಯೇ ಎಂದು ನನ್ನನ್ನು ತಾನಾಗಿ ಕೇಳಿಲ್ಲ. ನಾನು ಸಂಪರ್ಕಿಸಿದಾಗ ನನ್ನನ್ನು ಅವಮಾನಿಸಿವೆ. ನನ್ನ ಕೈಲಾದ ಕಾಲದಲ್ಲಿ ಕರ್ನಾಟಕದಿಂದ ಬಂದ ಸಾಹಿತಿಗಳಿಗೆ ನಾನು ಮತ್ತು ನನ್ನ ಪತ್ನಿ ಉಪಚರಿಸಿದ್ದೇವೆ. ಹಲವರನ್ನು ನಾನು ಹೈದರಾಬಾದು ಸುತ್ತಿಸಿದ್ದೇನೆ – ಗೊಲ್ಕೊಂಡ ಕೋಟೆ, ಸಾಲಾರ್ ಜಂಗ್ ಮ್ಯೂಸಿಯಂ, ಚಾರ್ ಮಿನಾರ್ ಕಟ್ಟಡ, ಬ್ಯಾಂಗ್ಲ್ ಬಝಾರ್, ಹುಸೇನ್ ಸಾಗರ್ ಸರೋವರ. ಆದರೆ ಅವರು ಆಮೇಲೆ ನನ್ನನ್ನು ಮರೆತಿದ್ದಾರೆ. ಅನ್ಯನಾಗಿರುವುದು ಸುಲಭವಲ್ಲ. ಎಲ್ಲವನ್ನೂ ಹೇಳಿ ಮುಗಿಸಿಬಿಡೋಣ ಎನಿಸುತ್ತದೆ ಕೆಲವೊಮ್ಮೆ. ಆದರೆ ಕನ್ನಡ ಸಮಾಜವೇ ಹಾಗಿರುವಾಗ ಯಾರಿಗೆ ಹೇಳುವುದು? ದ್ಯಾಟಿಸ್ ನೋ ಕಂಟ್ರಿ ಫಾರ್ ಓಲ್ಡ್ ಮೆನ್! ಇಂಥಾ ಸ್ಥಿತಿಯಲ್ಲಿ ನನಗೆ ೮೦ ಆಯಿತೆಂಬ ಕಾರಣ ಹಿಡಿದು ಒಮ್ಮೆಲೇ ಲೇಖನಗಳು, ಕವಿತೆಗಳು, ಸಂದರ್ಶನದ ತುಣುಕುಗಳು ಬಂದರೆ ಹೇಗನಿಸಬೇಡ? ಇದರ ಅಭ್ಯಾಸವೇ ಇಲ್ಲದಿರುತ್ತ ಗಾಬರಿಯಾಗುತ್ತದೆ. ಇದು ನಾನಲ್ಲ, ನಾನಲ್ಲ ಎಂದು ಕೂಗಬೇಕೆನಿಸುತ್ತದೆ. ಮೂಕಸ್ಮಿತನಾಗಿ ಎರಡು ದಿನ ಸುಮ್ಮನೆ ಕೂತೆ.

(ರೇಖಾಚಿತ್ರಗಳು: ಎಂ.ಎಸ್.ಪ್ರಕಾಶಬಾಬು)

ನಾನು ಹಟದಿಂದಲೇ ಶಿಕ್ಷಣ ಪಡೆದದ್ದು. ಅದರಿಂದಲೇ ಓದಲು ಬರೆಯಲು ಕಲಿಸಲು ಸಾಧ್ಯವಾದ್ದು. ಈ ಹಿನ್ನೆಲೆಯುಳ್ಳ ನಾನೀಗ ವೃದ್ಧನಾಗಿದ್ದೇನೆ, ಆದರೆ ಜ್ಞಾನವೃದ್ಧ ಅನ್ನಲಾರೆ. ಅನ್ನುವುದು ಅಹಂಕಾರ. ಅರಿವು ಎಂದರೆ ಅಜ್ಞಾನದ ಕುರಿತಾದ್ದು; ಅರಿತಷ್ಟೂ ಇನ್ನಷ್ಟು ಅರಿಯುವುದು ಇದ್ದೇ ಇರುತ್ತದೆ.

ಜರೆಯ ಸಹಜ ದುರ್ಬಲತೆಗಳು ನನ್ನನ್ನು ಕಾಡುತ್ತಿವೆ. ಓದುವ ಹುಚ್ಚಿನವನ ಕಣ್ಣುಗಳನ್ನೇ ತೆಗೆದರೆ ಹೇಗೆ? ನನಗೀಗ ಹಾಗಾಗಿದೆ. ದೃಷ್ಟಿ ಮಾಂದ್ಯತೆಯಿಂದ ತೊಳಲುತ್ತಿದ್ದೇನೆ. ಬಿಸಿಲು ಹೆಚ್ಚಾದರೆ ಅದರ ಝಳವನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ, ಕಡಿಮೆಯಾದರೆ ಬೆಳಕು ಸಾಕಾಗುವುದಿಲ್ಲ. ರಾತ್ರಿಯ ಓದು ಬಿಟ್ಟು ಹಲವು ಕಾಲವಾಯಿತು. ಹದವಾದ ಬೆಳಕಿನಲ್ಲೂ ಅಕ್ಷರಗಳು ಕುಣಿಯುತ್ತವೆ, ಸಾಲುಗಳು ಅದಲು ಬದಲಾಗುತ್ತವೆ, ಓದಿದ ಪದಗಳ ನೆರಳುಗಳು ಮುಂದಿನ ಪದಗಳ ಮೇಲೆ ಹಾಯುತ್ತವೆ. ಪುಸ್ತಕಗಳು ದಪ್ಪ ಇದ್ದರೆ ಹೆಚ್ಚು ಹೊತ್ತು ಹಿಡಿದುಕೊಳ್ಳುವ ಶಕ್ತಿ ಇರುವುದಿಲ್ಲ. ಕೈಗಳಿಗೆ ನರದೌರ್ಬಲ್ಯ ಬಂದುಬಿಟ್ಟಿದೆ. ಬೆರಳುಗಳು ನಡುಗುತ್ತವೆ. ಹೆಚ್ಚು ಶಕ್ತಿ ಹಾಕಿದರೆ ಅಥವಾ ಮನಸ್ಸು ತಲ್ಲಣಗೊಂಡರೆ ನಡುಕ ಜಾಸ್ತಿ.

ಇದು ನನ್ನ ಬರವಣಿಗೆಯ ಮೇಲೂ ಪರಿಣಾಮ ಬೀರಿದೆ, ಬರೆಯುವುದೇ ಕಡಿಮೆಯಾಗಿದೆ. ಓದಿ ಬರೆಯದೆ ನಾನು ಹೇಗೆ ಜೀವಿಸಲಿ? ಬೇರೆ ದಾರಿಯೇ ಗೊತ್ತಿಲ್ಲವಲ್ಲ. “They also serve who only stand and wait” ಎಂದು ಮಿಲ್ಟನ್‌ನ ಜತೆ ದನಿಗೂಡಿಸಲೇ? ಮಿಲ್ಟನ್‌ ಗೆ ಮಧ್ಯ ವಯಸ್ಸಿಗೇ ಅಂಧತ್ವ ಬಂದು ಬಿಟ್ಟಿತ್ತು. ಅವನು ಬರೆಯಲು ಬಯಸಿದ ಮಹಾಕಾವ್ಯಗಳು, ನಾಟಕಗಳು ಇನ್ನೂ ಭವಿಷ್ಯದ ಗರ್ಭದಲ್ಲಿ ಅಡಗಿದ್ದವು. ದೇವರು ಕೊಟ್ಟ ಪ್ರತಿಭೆಯನ್ನು ತಾನು ಸರಿಯಾಗಿ ಬಳಸಲಿಲ್ಲವಲ್ಲಾ ಎಂದು ತನ್ನ ಅಂಧತ್ವದ ಬಗ್ಗೆ ಮಿಲ್ಟನ್ ಬರೆದ ಸಾನೆಟ್‌ ನ ಕೊನೆಯ ಸಾಲು ಇದು. ಬಹಳ ಪ್ರಸಿದ್ಧವಾದುದು, ದೈವಭಕ್ತಿಯ ಪರಾಕಾಷ್ಠೆಯೇ ಇದರಲ್ಲಿ ಅಡಕವಾಗಿದೆ. ಸುಮ್ಮನೆ ನಿಂತು ಕಾಯುವುದೂ ದೇವರ ಸೇವೆಯೇ ಎನ್ನುವ ಮಾತು. ನನಗೆ ಇಷ್ಟವಾದ ಒಂದು ಕವಿತೆ. ಇದು ಕೇವಲ ವಿಧಿವಾದವನ್ನು ಸಾರುತ್ತದೆ ಎಂದು ತಿಳಿದರೆ ತಪ್ಪಾಗುತ್ತದೆ. ಕ್ರತುಶಕ್ತಿಯ ಕರ್ತವ್ಯವನ್ನೂ ಎತ್ತಿ ಹಿಡಿಯುತ್ತದೆ. ಮಿಲ್ಟನ್ ಆದರೂ ಎಲ್ಲಿ ಸುಮ್ಮನಿದ್ದ? ತನ್ನ ಮುಂದಿನ ಶ್ರೇಷ್ಠ ಕೃತಿಗಳನ್ನು ಹೇಳಿ ಬರೆಸಿದ. ಆದರೆ ನನಗಂಥಾ ಮಹಾಕಾವ್ಯಗಳು ಮನಸ್ಸಿನಲ್ಲಿಲ್ಲ. ಏನಾದರೂ ಓದುವುದು ಬರೆಯುವುದು ಮಾಡಬೇಕು ಎಂದು ಪ್ರತಿ ದಿನ ಯೋಚಿಸುವುದಿದೆ. ಕಲ್ಪನೆಗಳು ಬರುತ್ತವೆ, ಹೋಗುತ್ತವೆ.

ಒಂದು ಕಾಲದಲ್ಲಿ (ಬಾಲ್ಯದಲ್ಲಿ) ನಾನು ದೈವವಿಶ್ವಾಸಿಯಾಗಿದ್ದೆ. ದೇವರಿಗೆ ಹರಕೆ ಹೊರುತ್ತಿದ್ದೆ. ಇದು ನನ್ನ ಅಮ್ಮನ ಪ್ರಭಾವ. ಆಕೆ ನನಗೆ ಸ್ತೋತ್ರಗಳನ್ನು ಕಲಿಸುತ್ತಿದ್ದಳು – ಶ್ರೀಕೃಷ್ಣಾಷ್ಟೋತ್ತರ (ಶ್ರೀಕೃಷ್ಣನ ನೂರೆಂಟು ಹೆಸರುಗಳು) ಪ್ರತಿ ಸಂಜೆ ಹೇಳುತ್ತಿದ್ದೆ, ಅದು ನನಗೆ ಕಂಠಪಾಠ ಬರುತ್ತಿತ್ತು. ಅದೇ ರೀತಿ ವಿಷ್ಣು ಸಹಸ್ರನಾಮವನ್ನೂ (ವಿಷ್ಣುವಿನ ಸಾವಿರ ನಾಮಗಳು) ನಾನು ಕಲಿಯಬೇಕೆನ್ನುವುದು ನನ್ನ ಅಮ್ಮನ ಆಸೆಯಾಗಿತ್ತು. ಅದು ಮಾತ್ರ ನನ್ನಿಂದ ಸಾಧ್ಯವಾಗಲಿಲ್ಲ. ದೇವರ ಜಾತ್ರೆಗಳಿಗೆ ಹೋಗುತ್ತಿದ್ದೆ, ಆದರೆ ನನ್ನ ಆಕರ್ಷಣೆ ದೇವಾಲಯದ ಹೊರಗಿನ ಸಂತೆಯಲ್ಲೇ ಆಗಿತ್ತು. ಕ್ರಮೇಣ ನಾನು ವಿದ್ಯಾಭ್ಯಾಸ ಮುಂದುವರಿದಂತೆ ದೈವ ವಿಶ್ವಾಸವೂ ಹೊರಟು ಹೋಯಿತು. ಅದಕ್ಕೆ ಯಾವುದೊಂದು ಘಟನೆಯೂ ಕಾರಣ ಎಂದು ಹೇಳಲಾರೆ. ಇಂಥ ದಿನ ಅದು ಹೊರಟು ಹೋಯಿತು ಎನ್ನುವಂತೆಯೂ ಇಲ್ಲ.
ಮ್ಯಾತಮೆಟಿಶಿಯನ್ ಲ್ಯಾಪ್ಲೇಸ್ ಹೇಳಿದಂತೆ, ದೇವರು ಎಂಬ ಕಲ್ಪನೆಗೆ (ಹೈಪೋಥೆಸೆಸ್‌ ಗೆ) ಯಾವ ಅಗತ್ಯವೂ ಕಂಡುಬರಲಿಲ್ಲ.

ಇದು ದೊಡ್ಡ ಮಾತಾಯಿತು, ಯಾಕೆಂದರೆ ನನ್ನಲ್ಲಿ ಈ ಪರಿವರ್ತನೆ ನಡೆಯುವಾಗ ನಾನು ಲ್ಯಾಪ್ಲೇಸಿನ ಹೆಸರನ್ನೇ ಕೇಳಿರಲಿಲ್ಲ. ಅವನದು ವೈಜ್ಞಾನಿಕ ಪರಿಭಾಷೆ. ಮುಂದೆ ನೀತ್ಸೆ ದೇವರನ್ನು ಚಾರಿತ್ರೀಕರಿಸಿ ಸಾಯಿಸಿದ. ಡಾರ್ವಿನ್ ಜೀವ ವಿಕಸನದ ಸಿದ್ಧಾಂತವನ್ನು ಮುಂದಿಟ್ಟು ದೇವರ ಜವಾಬ್ದಾರಿಯನ್ನು ಅಲ್ಪ ಪ್ರಮಾಣಕ್ಕೆ ಇಳಿಸಿದ. ಹಾಗೆಂದು ನಾನೆಂದೂ ನಾಸ್ತಿಕನೂ ಆಗಲಿಲ್ಲ. ನಾನೊಬ್ಬ ಅಜ್ಞೇಯವಾದಿ – ನಿಮಗೊಂದು ಪದ ಬೇಕಾದರೆ. ದೈವ ದೇವರು ಧರ್ಮಗಳಿಗೆ ಸಂಬಂಧಿಸಿದ ಎಲ್ಲವನ್ನೂ ನಾಶಪಡಿಸಬೇಕು ಎನ್ನುವವನಲ್ಲ. ಎಲ್ಲವನ್ನೂ ಕೆಡವಿ ನೆಲಸಮ ಮಾಡಿದರೆ ಉಳಿಯುವುದು ಬರೇ ಬಂಜರು ಭೂಮಿ ಮಾತ್ರ. ಎಲಿಯಟ್‌ ನ ಕಾವ್ಯ ಇದನ್ನೇ ಹೇಳುತ್ತದೆ.

ಇನ್ನು ಆತ್ಮ, ಅಧ್ಯಾತ್ಮ, ಅನುಭಾವ, ಭಕ್ತಿ, ವೇದಾಂತ, ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಜನ್ಮ ಜನ್ಮಾಂತರ. ಸ್ವರ್ಗ ನರಕಗಳಲ್ಲೂ ನನಗೆ ವಿಶ್ವಾಸವಿಲ್ಲ. ಇವನ್ನೆಲ್ಲ ಹೇಳಿಕೊಡುವ, ಉಪದೇಶಿಸುವ ಗುರುಗಳಿದ್ದಾರೆ ನಿಜ; ಆದರೆ ಪರೋಪಜೀವಿಗಳಾದ ಈ ಗುರುಗಳನ್ನು ನಾನು ತಿರಸ್ಕರಿಸುತ್ತೇನೆ. ಅವರು ಜನರ ಯಾವುದೋ ಹಂಬಲವನ್ನು ದೋಚುತ್ತಾರೆ. ಇಂಥ ಗುರುಗಳನ್ನು ಲೇವಡಿ ಮಾಡುವುದಕ್ಕೆಂದೇ ಬುದ್ಧಿಸಂನಲ್ಲಿ ಝೆನ್ ಕತೆಗಳು ಹುಟ್ಟಿಕೊಂಡುದು. ಆದರೆ ಜನಮನದಲ್ಲಿ ಈ ಗುರು ಕಲ್ಪನೆ ಎಷ್ಟು ಭದ್ರವಾಗಿದೆಯೆಂದರೆ ಕತೆ ಕೇಳಿ ತಮಗೊಬ್ಬ ಝೆನ್ ಗುರು ಸಿಕ್ಕುವುದಾದರೆ ಹುಡುಕುವುದಕ್ಕೂ ಜನ ತಯಾರು! ಕ್ಷಮಿಸಿ, ನಾನು ಅಧ್ಯಾತ್ಮ ಜೀವಿಯಲ್ಲ. ಯಾಕಿದನ್ನು ಪ್ರಸ್ತಾಪಿಸುತ್ತಿದ್ದೇನೆಂದರೆ, ಇಳಿವಯಸ್ಸಿನಲ್ಲಿ ಸಾವಿನ ಕುರಿತಾದ ಭಯ ಜಾಸ್ತಿಯಾಗುತ್ತದೆ, ಆಗ ಮನುಷ್ಯರು ದೇವರ ಮೊರೆ ಹೊಗುತ್ತಾರೆ. ನಾನೇನೂ ಸಾವಿನ ಅನೂಹ್ಯ ಭಯದಿಂದ ಹೊರತಾಗಿಲ್ಲ. ನನಗೂ ದೇವರ ಕುರಿತು ಭಕ್ತಿ ವಿಶ್ವಾಸ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತೇನೆ. ಕೊನೆಗಾದರೂ ಅದು ಬರಲಿ ಎಂದು ಆಶಿಸುತ್ತೇನೆ.

ಜರಾಮರಣದ ಕುರಿತು ಅನೇಕ ಕವಿಗಳು ಬರೆದಿದ್ದಾರೆ, ಅದರಲ್ಲೂ ಇಂಗ್ಲಿಷ್ ಕವಿಗಳು ಬರೆದುದನ್ನು ನಾನು ಓದಿದ್ದೇನೆ: ಶೇಕ್ಸ್‌ಪಿಯರ್, ಜಾನ್ ಡನ್, ಎಮಿಲಿ ಡಿಕಿನ್ಸನ್, ರಾಬರ್ಟ್ ಬ್ರೌನಿಂಗ್, ಟೆನ್ನಿಸನ್, ಎಲಿಯಟ್, ಡಿಲಾನ್ ಥಾಮಸ್ ಮುಂತಾಗಿ. ಇನ್ನು ಕನ್ನಡ ಮತ್ತು ಸಂಸ್ಕೃತ ಅಭಿಜಾತ ಸಾಹಿತ್ಯದಲ್ಲಿ, ಕೀರ್ತನೆಗಳಲ್ಲಿ, ತತ್ವಪದಗಳಲ್ಲಿ, ವಚನಗಳಲ್ಲಿ, ಶತಕಗಳಲ್ಲಿ, ಜನಪದ ಸಾಹಿತ್ಯದಲ್ಲಿ, ಗಾದೆ ಮಾತುಗಳಲ್ಲಿ, ಯಯಾತಿ ಮುಂತಾದ ಪುರಾಣ ಕತೆಗಳಲ್ಲಿ ಈ ಬಗ್ಗೆ ಹೇರಳವಾಗಿ ಇದೆ. ಶಂಕರಾಚಾರ್ಯರ ಭಜಗೋವಿಂದಂ ಮರೆಯುವುದು ಹೇಗೆ? ಶಂಕರರು ಸಂಪೂರ್ಣ ವೈರಾಗ್ಯವನ್ನು ಬೋಧಿಸುತ್ತಾರೆ. ಬುದ್ಧನ ಸಾಸಿವೆ ಕತೆ ಸಮಚಿತ್ತವನ್ನು ಸಾರುತ್ತದೆ. ಇನ್ನು ಸಾಕ್ರೆಟಿಸ್ ಮರಣಶಿಕ್ಷೆಯ ನಿಕಟಪೂರ್ವದಲ್ಲಿ ಹೊಸ ರಾಗವೊಂದನ್ನು ಅಭ್ಯಾಸ ಮಾಡುತ್ತಿದ್ದನಂತೆ! ಕತೆಗಳು ಸಾವಿರ ಇವೆ. ಹುಟ್ಟು ಸಾವಿನ ಕುರಿತಾದ ಆಚರಣೆಗಳು ಮನುಷ್ಯ ಸಮಾಜವನ್ನು ಆವರಿಸಿವೆ. ಆದರೂ ಹುಟ್ಟು ಸಾವಿನಲ್ಲಿ ಜೀವಿ ಒಬ್ಬನೇ. ಆತ ಹೇಗೆ ವರ್ತಿಸುತ್ತಾನೆ, ಅವನ ಮನಸ್ಸಿನಲ್ಲಿ ಏನಿರುತ್ತದೆ ಏನಿರುವುದಿಲ್ಲ ಎನ್ನುವುದನ್ನು ಯಾರೂ ಊಹಿಸಲಾರರು.

ಕಾಲ ನಿರವಧಿ, ನಿರಂತರ, ಅಖಂಡ, ಅನಾದಿ, ಅನಂತ. ಜೀವನದ (ಕತೆ, ಕವಿತೆ, ಕಲೆಗಳ) ಅರ್ಥವೇನು ಎನ್ನುವುದಕ್ಕೆ ವಿಜ್ಞಾನ, ತತ್ವಜ್ಞಾನ, ಸಾಹಿತ್ಯ ಯಾವುದರಲ್ಲೂ ಉತ್ತರವಿಲ್ಲ. ಅನಂತದಲ್ಲಿ ಪ್ರಶ್ನೆಯೂ ಇಲ್ಲ, ಉತ್ತರವೂ ಇಲ್ಲ. ಹಾಗಾದರೆ ಇದೆಲ್ಲ ಯಾಕೆ ಎನ್ನುವ ಅಸ್ತಿತ್ವವಾದಿ ಸಮಸ್ಯೆ ಎದುರಾಗುತ್ತದೆ. ಪಂಪ, ಪೊನ್ನ, ರನ್ನ ಮುಂತಾದ ಅನೇಕ ಕವಿಗಳ ಕಾವ್ಯಗಳು ಕೇವಲ ಆಕಸ್ಮಿಕವಾಗಿ ಲಭ್ಯವಾಗಿವೆ; ಅವನ್ನು ಓದಿ ತಿಳಕೊಳ್ಳುವವರು ಬಹಳ ಕಡಿಮೆ ಮಂದಿ. ಭಾಷೆಯೇ ಬದಲಾಗಿಬಿಟ್ಟಿದೆ. ಎಲ್ಲವೂ ಬದಲಾಗುತ್ತವೆ. ಹಲವು ಕಳೆದು ಹೋಗುತ್ತವೆ. ಇಂಗ್ಲಿಷ್ ಕವಿ ಥಾಮಸ್ ಗ್ರೇಯ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್‌ಯಾರ್ಡ್ ಈ ನಶ್ವರತೆಯ ಕುರಿತೇ ಹೇಳುತ್ತದೆಯಲ್ಲವೇ? ಈವತ್ತು ಪ್ರಸಿದ್ಧರಾದವರು ನಾಳೆ ಮರೆತೇ ಹೋಗುತ್ತಾರೆ. ಎಂದೂ ಬೆಳಕಿಗೆ ಬರದೆ ಸಾಯುವವರೇ ಜಾಸ್ತಿ. ನಾಗರಿಕತೆಗಳು, ನಗರಗಳು, ನದಿಗಳು, ಬೆಟ್ಟಗಳು ಮಾಯವಾಗುತ್ತವೆ.

ಮೊಹೆಂಜೊದಾರೋ, ಮಾಚ್ಚುಪಿಚು, ಒಝಿಮಾಂಡಿಯಾಸ್ ಈಗ ಎಲ್ಲಿ? ಹೆಸರಲ್ಲಾದರೂ ಇವೆ. ಇಂದು ಗೊತ್ತೇ ಇಲ್ಲದೆ ಹೋದವು ಎಷ್ಟೋ ಗೊತ್ತಿಲ್ಲ. ಅಲ್ಪಾವಧಿಯಲ್ಲಿ ಮಾತ್ರವೇ ನಾವಿರುವುದು. ಮತ್ತು ಸಣ್ಣ ಸಣ್ಣ ಚೌಕಟ್ಟುಗಳಲ್ಲಿ ಮಾತ್ರವೇ ಅರ್ಥವಿರುವುದು. ಇದೆಲ್ಲ ಗೊತ್ತಿದ್ದೂ ಗೊತ್ತಿಲ್ಲದೆಯೂ ನಾವು ಅಜರಾಮರರಂತೆ ಬದುಕುತ್ತಿದ್ದೇವಲ್ಲ, ಅದು ಆಶ್ಚರ್ಯ. ಬಹುಶಃ ಜೀವವಿಕಸನವೇ ಆ ರೀತಿಯಲ್ಲಿ ಆಗಿದೆ. ಅದರಲ್ಲಿ ನಮ್ಮ ಆಯ್ಕೆಯೇನೂ ಇಲ್ಲ.

******

ವೃದ್ಧನಾಗು ನನ್ನ ಜತೆ!
ಅತ್ಯುತ್ತಮವಾದ್ದು ಇನ್ನೂ ಇದೆ,
ಬದುಕಿನ ಕೊನೆ, ಅದಕ್ಕಾಗಿಯೇ ಮಾಡಿದ್ದು ಆರಂಭ:
ನಮ್ಮ ಕಾಲಗಳಿರುವುದು ಅವನ ಕೈಯಲ್ಲಿ
ಅವನನ್ನುವನು ನಾನು ಇಡಿಯನ್ನು ಯೋಜಿಸಿದೆ,
ಯೌವನ ತೋರಿಸುವುದು ಅರ್ಧ ಮಾತ್ರ; ದೇವರನ್ನು ನಂಬು:
ಎಲ್ಲವನ್ನೂ ನೋಡು, ಭಯಪಡಬೇಡ!

ಅಪ್ರತಿಮ ಆಶಾವಾದಿಯಾದ ಬ್ರಿಟಿಷ್ ಕವಿ ರಾಬರ್ಟ್ ಬ್ರೌನಿಂಗ್ ಬರೆದ ‘ರಬಿ ಬೆನ್ ಎಝ್ರಾ’ ಎಂಬ ಸುಪ್ರಸಿದ್ಧ ಕವಿತೆಯ ಆರಂಭ ಇದು; ಇದರ ಅಂತ್ಯವೂ ಅಷ್ಟೇ ಆಶಾದಾಯಕವಾದುದು. ಮನುಷ್ಯಜೀವನದ ಅಂತ್ಯವೂ ಹಾಗೇ ಇದ್ದರೆ ಎಷ್ಟು ಚಂದ! ಈ ಕವಿತೆಯಿಂದ ಸ್ಫೂರ್ತಿಗೊಂಡು ಬೀಟ್ಲ್ ಕವಿ ಜಾನ್ ಲೆನನ್ ಗ್ರೋ ಓಲ್ಡ್ ವಿದ್ ಮಿ ಎಂಬ ಹಾಡು ಬರೆದಿದ್ದು ಬ್ರೌನಿಂಗ್ ಫಿಲಾಸಫಿಯನ್ನು ಇನ್ನಷ್ಟು ಜನಪ್ರಿಯಗೊಳಿಸಿದೆ. ಹೌದು, ಆಸೆ ನಿರಾಸೆಗಳಿರುವುದು, ಅಂತ ಅನಂತಗಳಿರುವುದು ನಮ್ಮ ಮನಸ್ಸಿನಲ್ಲಿ. ವೃದ್ಧಾಪ್ಯವೆಂದರೆ ಸಂಸಾರ ಸಾರ ಸರ್ವಸ್ವ ಫಲವನ್ನು ಅನುಭವಿಸುವ ಕಾಲವೂ ಹೌದು. ಬೆಳೆಯುತ್ತ ಮಾಗುತ್ತ (ರೈಪ್‌ನೆಸ್ ಈಸ್ ಆಲ್) ಮನುಷ್ಯ ಸಾಯುವ ಕಾಲಕ್ಕೆ ದೇವರ ಸಮಾನ ಆಗಿರುತ್ತಾನೆ.


(ಕೃಪೆ: ಆಂದೋಲನ ದೀಪಾವಳಿ ವಿಶೇಷಾಂಕ)