ಸಾರಾ ಫೋಟೋಗಳು: ರಶೀದ್

ದಕ್ಷಿಣ ಕನ್ನಡದ ಮುಸ್ಲಿಮ್ ಸಮಾಜದಿಂದ ಬಂದ ಬರಹಗಾರರು ಎಪ್ಪತ್ತರ ದಶಕದಲ್ಲಿ ತಮ್ಮ ಸಮಾಜದ ಬಗ್ಗೆ ಅದುವರೆಗೆ ಯಾರೂ ಬರೆಯದಿದ್ದ ತಮ್ಮ ಸಮಾಜದ ಆಗುಹೋಗುಗಳನ್ನು ಕನ್ನಡ ಸಾಹಿತ್ಯದಲ್ಲಿ ಮೂಡಿಸತೊಡಗಿದ್ದಕ್ಕೆ ಕಾರಣಗಳು ಏನಿರಬಹುದು ಎಂಬುದನ್ನು ಅವಲೋಕಿಸಿದಾಗ ಅನೇಕ ಕಾರಣಗಳು ನಮ್ಮ ಮುಂದೆ ಮೂಡಿಬರುತ್ತವೆ. ಮುಖ್ಯವಾದ ಒಂದು ಕಾರಣವೆಂದರೆ ಆಧುನಿಕತೆ, ವಿದ್ಯಾಭ್ಯಾಸದ ಅಗತ್ಯವನ್ನು ಸಮಾಜ ಮನಗಂಡಿದ್ದು. ಇಲ್ಲಿನ ಮುಸ್ಲಿಮರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ಯಾರಿ ಜನಾಂಗ ಆಳರಸರ ಹಿಂಬಾಲಕರಾಗಿ ಅಥವಾ ಅವರ ಪ್ರಭಾವದ ಹಿನ್ನೆಲೆಯಲ್ಲಿ ಬೆಳವಣಿಗೆಯನ್ನು ಕಂಡ ಸಮಾಜವಲ್ಲ. ಬದಲಿಗೆ ವ್ಯಾಪಾರಿಗಳಾಗಿ ವಿಶ್ವದಾದ್ಯಂತ ಸಂಚರಿಸುವ ಅರಬರು ಮತ್ತು ಅವರ ಜೊತೆಗೆ ಬಂದ ಕೂಡು ಸಂಸ್ಕೃತಿಯ ಪ್ರತಿಪಾದಕರಾದ ಸೂಫಿ ಉಲೇಮಾಗಳು ಮುಖ್ಯವಾಗಿ ಮಾಲಿಕ್-ಇಬ್ನ್ ದೀನಾರ್ ರಂತಹ ಇಸ್ಲಾಮ್ ಧರ್ಮ ಪ್ರಚಾರಕರ ಪ್ರಭಾವದಿಂದ ಬೆಳೆದ ಸಮಾಜ ಈ ಬ್ಯಾರಿಗಳದ್ದು.

ಉರ್ದು ಭಾಷಿಕ ಮುಸ್ಲಿಮರು ಕೇಳುವಂತಹ ಸಾಮಾನ್ಯ ಪ್ರಶ್ನೆಯೆಂದರೆ ನೀವು ನಮ್ಮ ಸಮಾಜದ ಬಗ್ಗೆ ಸಾಹಿತ್ಯ ರಚನೆಯನ್ನು ಉರ್ದುವಲ್ಲಿ ಮಾಡದೆ ಕನ್ನಡದಲ್ಲಿ ಯಾಕೆ ಮಾಡಿದಿರಿ? ಭಾರತದ ಬಹುಸಂಖ್ಯಾತ ಮುಸ್ಲಿಮರ ಮಾತೃಭಾಷೆಯಾದ ಉರ್ದುಭಾಷೆಯ ಸಂಪರ್ಕ ಈ ಕರಾವಳಿಯ ಶಾಫಿ ಪಂಗಡದ ಮುಸ್ಲಿಮರಿಗೆ ಇಲ್ಲದಿರುವುದು ಇಲ್ಲಿನ ಒಂದು ವೈಶಿಷ್ಟ್ಯ. ಈ ಬ್ಯಾರಿಗಳ ಮನೆಮಾತಾದ ಬ್ಯಾರಿ ಭಾಷೆಗೆ ಲಿಪಿ ಇಲ್ಲವಾದ್ದರಿಂದ ಪರಿಸರದ ಸಂಪರ್ಕ ಭಾಷೆಯಾಗಿ, ಶಿಕ್ಷಣ ಮಾಧ್ಯಮವನ್ನಾಗಿ ಕನ್ನಡವನ್ನು ವ್ಯಾಪಕವಾಗಿ ಬಳಸುವ ಅನಿವಾರ್ಯತೆ ಉಂಟಾಯಿತು. ಇದು ಕನ್ನಡದ ಬ್ಯಾರಿ ಸಮಾಜದಿಂದ ಬಂದ ಬರಹಗಾರರಿಗೆ ವರವಾಗಿ ಪರಿಣಮಿಸಿತು. ಮೂಲತಃ ಕರಾವಳಿ ಕರ್ನಾಟಕದ ಸ್ಥಳೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವೈಶಿಷ್ಟ್ಯಪೂರ್ಣವೆನಿಸಿದ ಸಾಹಿತ್ಯ, ಜನಪದ ಕಲೆಗಳನ್ನೊಳಗೊಂಡ ಸಮೃದ್ಧ ಉಪಸಂಸ್ಕೃತಿಯೊಂದನ್ನು, ಒಂದು ಪ್ರತ್ಯೇಕ ಅನನ್ಯತೆಯನ್ನು ಬೆಳೆಸಿಕೊಂಡ ಬ್ಯಾರಿ ಸಮಾಜದ ಒಡಲಲ್ಲಿ ಸಾಹಿತಿಗಳು ಹುಟ್ಟುವುದಕ್ಕೆ ಅವಕಾಶ ಸಹಜವಾಗಿಯೇ ಒದಗಿಬಂತು. ಒಂದು ಕಡೆಯಲ್ಲಿ ಮಳಯಾಳಂ ಭಾಷೆಯ ಪ್ರಭಾವ ಇನ್ನೊಂದು ಕಡೆಯಲ್ಲಿ ಉರ್ದು ಭಾಷೆಬಾರದಿದ್ದರೆ ಅದೆಂತಹ ಮುಸ್ಲಿಮರಪ್ಪಾ ಇವರು ಎನ್ನುವ ಒತ್ತಡದ ಮಧ್ಯೆ ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದದ್ದು ಒಂದು ರೀತಿಯಲ್ಲಿ ಸಾಧನೆಯೇ ಆಗಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ತೀರಾ ಇತ್ತೀಚಿನ ತನಕವೂ ಮಳಯಾಳಂ ಬಳಕೆ ಮತ್ತು ಧಾರ್ಮಿಕ ಪುರೋಹಿತರು ಅಂದರೆ ಮೌಲವಿಗಳು ಮಳಯಾಳಿಗಳೇ ಇರಬೇಕಾದ ಅನಿವಾರ್ಯತೆ ಬ್ಯಾರಿ ಜನಾಂಗಕ್ಕೆ ಇತ್ತು.

ಧಾರ್ಮಿಕ ಬೋಧನೆಗಳಿಗಾಗಿ ಕೇರಳದ ಮೌಲವಿಗಳನ್ನು ಅವಂಲಂಬಿಸಿದ ಕಾರಣಕ್ಕಾಗಿ ಅಲ್ಲಿನ ಸಂಸ್ಕೃತಿಯ ಪ್ರಭಾವ ಎಷ್ಟರವರೆಗೆ ಬೆಳೆಯಿತೆಂದರೆ ಬ್ಯಾರಿಗಳು ಕೂಡ ಮಾಪ್ಳಗಳೆಂದೂ, ಇವರ ಭಾಷೆ ಮಲಯಾಳಂ ಎಂದೂ ಸರಕಾರಿ ದಾಖಲೆಗಳಲ್ಲಿ ನಮೂದಿಸಲಾಗುತ್ತಿತ್ತು. ಒಂದು ಕಾಲಕ್ಕೆ ಬ್ಯಾರಿ ಎಂಬ ಕುಲನಾಮವನ್ನು ತಮ್ಮ ಹೆಸರಿನ ಜೊತೆಗೆ ಹಾಕುವುದು ಗೌರವ ಸೂಚಕವೆನಿಸಿತ್ತು. ಕಾಲಕ್ರಮೇಣ ತಮ್ಮಲ್ಲಿ ಬೆಳೆಸಿಕೊಂಡ ಕೀಳರಿಮೆಯಿಂದಾಗಿ ಇಂದಿಗೂ ಕೂಡ ಬ್ಯಾರಿ ಎಂದು ಗುರುತಿಸಲು ಹಿಂಜರಿಯುವ ದೊಡ್ಡ ಸಂಖ್ಯೆಯ ಮಂದಿ ಈ ಜನಾಂಗದಲ್ಲಿದ್ದಾರೆ. ಇದಕ್ಕೆ ಹಲವಾರು ಆರ್ಥಿಕ, ಐತಿಹಾಸಿಕ, ಸಾಮಾಜಿಕ ಕಾರಣಗಳು ಇವೆ.

ಈ ಹಿನ್ನೆಲೆಯನ್ನು ನಾನು ಇಲ್ಲಿ ತರಲು ಕಾರಣವೇನೆಂದರೆ ನಾವೆಲ್ಲ ಬರಹಗಾರರಾಗಿ ಹೆಚ್ಚು ಕಮ್ಮಿ ನಾಲ್ಕುದಶಕಗಳು ಕಳೆದಿವೆ. ನಮ್ಮ ಸಾಮಾಜಿಕ ಬದುಕು ನಮ್ಮ ಬರಹಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದನ್ನು ಅವಲೋಕಿಸುವುದು ಇಂದಿನ ಸಂದರ್ಭದಲ್ಲಿ ಅಗತ್ಯವೆಂದು ನಾನು ತಿಳಿಯುತ್ತೇನೆ.

ನನ್ನ ಅನುಭವದಂತೆ ನಾನು ಬರೆಯುವಾಗ ಈ ಸಾಮಾಜಿಕ ಬದ್ಧತೆ, ಸಾಮಾಜಿಕ ಜವಾಬ್ದಾರಿ, ಶ್ರೇಷ್ಟತೆ, ಇವು ಯಾವುವೂ ನನ್ನ ಮುಖ್ಯ ಗುರಿಯಾಗಿರಲಿಲ್ಲ. ಇದುವರೆಗೆ ಕನ್ನಡದಲ್ಲಿ ಬರೆಯುತ್ತಿದ್ದ ಮುಸ್ಲಿಮ್ ಸಮಾಜದಿಂದ ಬಂದ ಸಾಹಿತಿಗಳು ಯಾರೂ ಮಾಡದೆ ಇರುವಂತಹ ಪ್ರಯತ್ನವೊಂದನ್ನು ನಾನು ಮಾಡುತ್ತಿದ್ದೇನೆ ಎಂಬ ಅರಿವೂ ನನಗಿರಲಿಲ್ಲ. ಬರೆಯುವ ಮತ್ತು ಬರೆದದ್ದು ಪತ್ರಿಕೆಯಲ್ಲಿ ಪ್ರಕಟವಾಗುವ ಖುಷಿ ಅಷ್ಟೆ. ಇವೆಲ್ಲ ನನಗೆ ಅರಿವಾದದ್ದು ೧೯೭೯ ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರದಲ್ಲಿ. ಬಂಡಾಯ ಸಾಹಿತ್ಯ ಸಂಘಟನೆ ನನ್ನಲ್ಲಿ ಬರೆಯುವ ಆತ್ಮವಿಶ್ವಾಸವನ್ನು ಗಟ್ಟಿಮಾಡಿತ್ತು.

ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕತೆಗಳನ್ನು ಬರೆದಾಗ ಸಹಜವಾಗಿ ಸಮಾಜದಲ್ಲಿ ಹೊಸತೊಂದು ವೈಚಾರಿಕ ಅಲೆಯನ್ನು ಎಬ್ಬಿಸಿದಂತಾಗುತ್ತದೆ. ತಾವು ನಂಬಿಕೊಂಡು ಬಂದಿರುವ ಮೌಲ್ಯಗಳ ಶ್ರೇಷ್ಟತೆಯ ಬಗ್ಗೆ ಬರಹಗಾರ ಪ್ರಶ್ನಿಸುವಾಗ ಅಥವಾ ಅದರ ಬಗೆಗಿನ ಟೀಕೆಯನ್ನು ಮಾಡುವಾಗ ಜನರು ಸುಲಭವಾಗಿ ಒಪ್ಪಿಕೊಳ್ಳಲಾರರು. ಲಾಗಾಯ್ತಿನಿಂದ ಬೆಳೆಸಿಕೊಂಡು ಬಂದ ತಮ್ಮ ಅಹಮ್ಮಿಗೆ ಪೆಟ್ಟು ಬಿದ್ದಾಗ ಒಮ್ಮೆಲೇ ಜನ ಸಿಡಿದೇಳುವುದು ಮತ್ತು ಉಗ್ರ ರೂಪದ ಪ್ರತಿಕ್ರೀಯೆ ನೀಡುವುದು ಸಾಧಾರಣ ಮಟ್ಟಿಗೆ ಈ ತರದ ಬರವಣಿಗೆಗಳಿಗೆ ಸಾಮಾನ್ಯವಾಗಿರುತ್ತದೆ. ಸಮಾಜ ಮುಖಿಯಾದ ಸಾಹಿತ್ಯ ರಚನೆಯಲ್ಲಿ ತೊಡಗಿದ ಸಾಹಿತಿಗಳು ಅನಂತಮೂರ್ತಿ, ಲಂಕೇಶ್, ಆಲನಹಳ್ಳಿ ಮುಂತಾದವರೆಲ್ಲರೂ ಇಂತಹ ಸಂದರ್ಭವನ್ನು ಒಂದಲ್ಲ ಒಂದು ವಿಧದಲ್ಲಿ ಬದುಕಿನಲ್ಲಿ ಎದುರಿಸಿಯೇ ಬೆಳೆದಿದ್ದಾರೆ. ಇಂತಹ ಪ್ರತಿಕ್ರಿಯೆಗಳು ಮುಸ್ಲಿಮ್ ಸಮಾಜಕ್ಕೆ ಮಾತ್ರ ಸೀಮಿತವಾದದ್ದಲ್ಲ. ಕಾಲಾನಂತರ ಸಮಸ್ಯೆಗಳ ಬಗ್ಗೆ ಸಮಾಜದ ಗಮನಸೆಳೆದು ಅದರ ಸುಧಾರಣೆಗೆ ಜನ ತಮ್ಮನ್ನು ಒಡ್ಡಿಕೊಳ್ಳದೆ ಇರಲು ಸಾಧ್ಯವಾಗದು.

ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ದೇಶಗಳನ್ನು ಬಿಟ್ಟರೆ ಉಳಿದ ಎಲ್ಲಾ ಇಸ್ಲಾಮಿಕ್ ದೇಶಗಳಲ್ಲಿ ಆಧುನಿಕ ವಿಚಾರಗಳಿಗೆ, ಟೀಕೆಗಳಿಗೆ ಜವಾಬ್ದಾರಿಯುತ ಅವಕಾಶವನ್ನು ಕೊಡುವುದು ಬಿಡಿ, ಪೈಗಂಬರರ ಕಾಲದ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು, ಸ್ಮಾರಕಗಳನ್ನು ಉಳಿಸುವಂತಹ ಕೆಲಸವನ್ನು ಕೂಡ ಮಾಡುತ್ತಿಲ್ಲ. ವಾಹನ ನಿಲುಗಡೆಗೆ, ರಸ್ತೆಗಳನ್ನು ಮಾಡುವುದಕ್ಕೆ, ಮಸೀದಿಗಳನ್ನು ಆಧುನಿಕೀಕರಣಗೊಳಿಸುವ ಕಾರಣಕ್ಕೆ ಕೆಡವುತ್ತಲೇ ಇದ್ದಾರೆ. ಈ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳನ್ನು ಬಳಸಿಕೊಂಡು ಪೈಗಂಬರರನ್ನು ಒಂದು ಕಾಲಕ್ಕೆ ಸೀಮಿತಗೊಳಿಸಿ, ಮುಸ್ಲಿಮರು ಅವರನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ನೋಡುತ್ತಾ ಇಂತಹ ಕಾಲದಲ್ಲಿ ಬದುಕಿ ಬಾಳಿದ ಮನುಷ್ಯನೆಂದು ಮಹತ್ವಗೊಳಿಸುವ ಬೇಡಿಕೆಯನ್ನು ಮುಂದಿಡುತ್ತಾರೆಂದು ಅಲ್ಲಿನ ಸರಕಾರಗಳ ಆಕ್ಷೇಪ. ಅವರನ್ನು ದೈವಿಕ ಪ್ರೇರಣೆಯ ಹಿನ್ನೆಲೆಯಲ್ಲಿ ಮಾತ್ರ ನೋಡುವ ಏಕತ್ರ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಸ್ಥಾಪಿಸಬೇಕೆಂದು ಪ್ರತಿಪಾದಿಸುವ ಧೋರಣೆಯ ಮೂಲಭೂತವಾದಿಗಳು ಮುಖ್ಯವಾಗಿ ವಹ್ಹಾಬಿಗಳು ಮತ್ತು ಅವರ ಬೆಂಬಲಿಗರು, ಈ ಹಿನ್ನೆಲೆಯ ರಾಜಕೀಯ ನಿರಂಕುಶ ಪ್ರಭುಗಳು ಇಂತಹ ಸತತ ಪ್ರಯತ್ನಗಳನ್ನು ವಿಶ್ವದಾದ್ಯಂತ ಮಾಡುತ್ತಿದ್ದಾರೆ.

ಒಂದು ಚಲನಶೀಲ ಸಮಾಜವೊಂದು ಸಾಹಿತ್ಯಲೋಕದ ಪ್ರಭಾವದಿಂದ ಎಷ್ಟು ಸಮಯದ ತನಕ ತನ್ನನ್ನು ಬಚ್ಚಿಟ್ಟುಕೊಳ್ಳುವುದು ಸಾಧ್ಯ? ನನ್ನ ’ಗೋರಿ ಕಟ್ಟಿಕೊಂಡವರು’ ಕಥಾ ಸಂಕಲನ ೧೯೮೧ರಲ್ಲಿ ಪ್ರಕಟವಾದಾಗ ನಮ್ಮ ಊರ ಮಸೀದಿಯಲ್ಲಿನ ಜಮಾತ್ ಮೀಟಿಂಗಲ್ಲಿ ಕೆಲವರು ಗಲಾಟೆ ಎಬ್ಬಿಸುವ ಪ್ರಯತ್ನ ಮಾಡಿದರು. ಆ ಕತೆಯೊಳಗಿರುವ ಒಂದು ಕತೆಯ ಬಗ್ಗೆ ಅವರ ಮುಖ್ಯ ಆಕ್ಷೇಪವಾಗಿತ್ತು. ತಮ್ಮ ಸಮಾಜದ ಸಮಸ್ಯೆಗಳನ್ನು ಬಹಿರಂಗಗೊಳಿಸುವುದು ಅವರ ಮಟ್ಟಿಗೆ ಅಪರಾಧವೆನಿಸಿತ್ತು. ಜಮಾಯತ್ ಸಭೆಗಳಲ್ಲಿ ಆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಬೇಕಾದಷ್ಟಿದೆ ಎನ್ನುವುದು ಅವರ ಅಭಿಪ್ರಾಯ. ಬೇರೆ ಸಮಾಜಗಳಿಗೆ ನಮ್ಮ ಸಮಸ್ಯೆಗಳ ಬಗ್ಗೆ ತಿಳಿಸುವ ಅಗತ್ಯವಿಲ್ಲ ಮತ್ತು ಇದು ನಮ್ಮ ಸಮಾಜದ ಗೌರವಕ್ಕೆ ಕುಂದು ಎಂದು ಸಭೆಯಲ್ಲಿ ಅಂದಿದ್ದರು. ಅಲ್ಲಿ ತಿಳಿದವರೊಬ್ಬರು ಈ ಕತೆಯು ನಮ್ಮ ಹದೀಸಿನಲ್ಲಿ ಇರುವಂತಾದ್ದೇ, ಹೊಸತೇನಲ್ಲ ಎಂದು ಹೇಳಿದಾಗ ಆಕ್ಷೇಪವೆತ್ತಿದವರು ಮೆತ್ತಗಾಗಬೇಕಾಯಿತು.

ಮೊದಲ ಹತ್ತು ವರ್ಷಗಳಲ್ಲಿ ಕತೆಗಳು, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅನೇಕ ರೀತಿಯ ಪ್ರತಿಕ್ರಿಯೆಗಳನ್ನೊಳಗೊಂಡ ಅನೇಕ ಪತ್ರಗಳು ನನಗೆ ಬರುತ್ತಿದ್ದವು. ಅವುಗಳಲ್ಲಿ ಬಹುಪಾಲು ಆಕ್ಷೇಪಗಳು, ಬಯ್ಗಳು, ಧಮಕಿಗಳು ಮತ್ತು ‘ನೀನೂ ಒಬ್ಬ ಮುಸ್ಲಿಮನಾ?’ ಎನ್ನುವ ಕೆಣಕುವ ಪ್ರಶ್ನೆ ಕೂಡ ಒಳಗೊಂಡಿರುತ್ತವೆ. ಇವು ಮೊದ ಮೊದಲು ಭಯ, ಮುಜುಗರ, ಕಿರಿಕಿರಿಯುಂಟು ಮಾಡುತ್ತಿತ್ತು. ಕಾಲ ಕಳೆದಂತೆ ಇವೆಲ್ಲ ಮಾಮೂಲು ಎಂಬಂತಾಯಿತು. ಇಷ್ಟುಮಂದಿ ನಮ್ಮ ಓದುಗರಿದ್ದಾರಲ್ಲ ಎಂಬ ಸಮಾಧಾನವಾಗಿತ್ತು. ೨೦೦೭ರಲ್ಲಿ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಾನು ಸಮಾರೋಪದ ಸಂದರ್ಭದಲ್ಲಿ ಈ ಬಗ್ಗೆ ನಮ್ಮ ಜನಗಳಿಗೆ ನೆನಪಿಸಿದ್ದೆ.

ಸಾರಾರವರು ಮಂಗಳೂರಿನವರಾಗಿದ್ದರೂ ಅವರ ಪರಿಚಯ ನನಗಾದದ್ದು ಲಂಕೇಶ್ ಪತ್ರಿಕೆಯ ಮೂಲಕ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಲೇಖನಗಳನ್ನು ಓದುತ್ತಿದ್ದರೆ ಹೆಣ್ಣುಮಗಳೊಬ್ಬಳು ಇಷ್ಟು ದಿಟ್ಟತನದಿಂದ ಬರೆಯುತ್ತಿರುವುದು ಕಂಡು ಖುಶಿಯಾಗಿತ್ತು. ಸಾರಾ ಪ್ರಥಮ ಬಾರಿಗೆ ಮಂಗಳೂರಿನ ಯಾವುದೋ ಸಮಾರಂಭದಲ್ಲಿ ಭೇಟಿಯಾದವರು “ನಿಮ್ಮ ‘ಒಂದು ಹಗಲು ಒಂದು ರಾತ್ರಿ’ ಕಥೆಯನ್ನು ಮಯೂರದಲ್ಲಿ ಓದಿದ್ದೆ. ಬಹಳ ಒಳ್ಳೆಯ ಕಥೆ. ಅದರ ಪ್ರೇರಣೆಯಿಂದ ನಾನು ನನ್ನ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಬರೆದೆ” ಎಂದಿದ್ದರು. ಅವರ ಪ್ರಾಮಾಣಿಕತೆ ಕಂಡು ತುಂಬ ಸಂತೋಷವಾಗಿತ್ತು.

೧೯೮೫ರಲ್ಲಿನ ಪುತ್ತೂರಿನ ಘಟನೆಯ ನಂತರ ಸಾರಾ ಅವರ ಪರಿಚಯ ಹೆಚ್ಚು ನಿಕಟವಾಯಿತೆಂದು ನನ್ನ ನೆನಪು. ಬಂಡಾಯ ಸಾಹಿತ್ಯ ಸಂಘಟನೆಯ ಪುತ್ತೂರು ಘಟಕ ನಡೆಸಿದ ‘ಜನಾಂಗಿಕ ಅಧ್ಯಯನ’ ಸಾಹಿತ್ಯಿಕ ಸಭೆಯಲ್ಲಿ ಭಾಗವಹಿಸಲು ನಾನು ಹೋಗಿದ್ದೆ. ವೇದಿಕೆಯಲ್ಲಿ ವಿವೇಕ ರೈಯವರ ಅಧ್ಯಕ್ಷತೆಯಲ್ಲಿ, ಅಮೃತ ಸೋಮೇಶ್ವರರು, ಸಾರರವರು ಪ್ರಬಂಧ ಮಂಡನೆಗಾಗಿ ಕೂತಿದ್ದರು. ಸಭೆಯಲ್ಲಿ ಆರ್.ಕೆ. ಮಣಿಪಾಲ, ಬೊಳುವಾರು, ವಾಸುದೇವ ಉಚ್ಚಿಲ, ಸಬಿಹಾ, ಪುರುಷೋತ್ತಮ ಬಿಳಿಮಲೆ, ಮುಂತಾದವರು ಸೇರಿದ್ದರು. ಪುಟ್ಟ ಹಾಲಿನಲ್ಲಿ ಜನ ತುಂಬಿತ್ತು. ಸಾರರವರು ಮಾತಾಡುವುದಕ್ಕೆ ಎದ್ದ ಕೂಡಲೇ ಕೆಲವರು ಎದ್ದು ನಿಂತು ಗಲಾಟೆ ಶುರು ಮಾಡಿದ್ದರು.

ಹತ್ತಾರು ಯುವಕರು ಕಿರಿಚಾಡುತ್ತಿದ್ದರು. ಕೆಲವರು ಕೈಯಲ್ಲಿದ್ದ ಹಿಡಿಸೂಡಿ (ಪೊರಕೆ) ಕಡ್ಡಿಗಳನ್ನು ಸಾರಾರವರತ್ತ ತೂರುತ್ತಿದ್ದರು. ಕೆಲವರು ತಂಪು ಪಾನೀಯದ ಬಾಟ್ಲಿಯ ಬಿರಡೆಗಳನ್ನು ಎಸೆಯುತ್ತಿದ್ದರು. ನಾನು, ಆರ್‍ಕೆ, ಉಚ್ಚಿಲ್ ಮುಂತಾದವರೆಲ್ಲ ಅಡ್ಡ ತಡೆಗೋಡೆಯಂತೆ ನಿಂತು ಸಾರಾರವರನ್ನು ಅವರೆಸೆದ ಯಾವುದೇ ವಸ್ತುಗಳು ತಾಗದಂತೆ ತಡೆದೆವು. ಮತ್ತೆ ಧಿಕ್ಕಾರವನ್ನು ಕೂಗುತ್ತ ಕುರ್ಚಿಗಳನ್ನೆಸೆದರು. ಕುರ್ಚಿಯೊಂದು ವಿವೇಕ ರೈಯವರ ಹಣೆಯ ಬದಿಗೆ ತಾಗಿ ಗಾಯವಾಯಿತು. ಆರ್‍ಕೆಯವರ ಕೈಗೂ ತಾಗಿತ್ತು. ನಾವೆಲ್ಲ ಗಲಾಟೆ ಮಾಡುತ್ತಿದ್ದ ಯುವಕರನ್ನು ತಡೆದು ವಾಗ್ವಾದಕ್ಕಿಳಿದೆವು. ಯುವಕನೊಬ್ಬ ‘ಬುರ್ಖಾ ಇಲ್ಲದೆ ವೇದಿಕೆಯಲ್ಲಿ ಗಂಡಸರ ನಡುವೆ ಭಾಷಣ ಮಾಡುವ ಇವಳು ಎಂತಹ ಮುಸ್ಲಿಮಳು?’ ಎಂದು ಕೂಗಿದ. ಆ ಗಲಾಟೆಯ ನಡುವೆಯೂ ‘ರಸೂಲುಲ್ಲಾಹರ ಕಾಲದಲ್ಲಿ ಮಹಿಳೆಯರಿಗೆ ಬುರ್ಖಾ ಎಲ್ಲಿತ್ತೋ? ಆಗ ಮಹಿಳೆಯರು ಸಭೆಗಳಲ್ಲಿ ಭಾಗವಹಿಸಿದ್ದಾರಲ್ಲಾ’ ಎಂದು ವಾದಕ್ಕಿಳಿದೆ. ಅದಕ್ಕೆ ಉತ್ತರಿಸುವಷ್ಟು ಜ್ಞಾನ ಇರುವವನೆಂದು ನನಗನ್ನಿಸಲಿಲ್ಲ.

ಬಿಳಿ ದಾಡಿ ಇಟ್ಟಿದ್ದ ಒಬ್ಬ ವಯಸ್ಸಾದ ಮುಸ್ಲಿಮ ಒಂದು ಕುರ್ಚಿಯ ಮೇಲೆ ನಿಂತು ‘ಎಲ್ಲರೂ ಶಾಂತವಾಗಿ, ಈ ಥರ ಒಬ್ಬ ಮಹಿಳೆಯ ಮೇಲೆ ಧಾಳಿ ನಡೆಸುವುದು ಮುಸಲ್ಮಾನರ ನಡವಳಿಕೆಗೆ ತರವಲ್ಲ. ಇಸ್ಲಾಂ ಧರ್ಮ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ.’ ಎಂದು ಸಮಾಧಾನ ಪಡಿಸಲು ಪ್ರಯತ್ನಿಸಿದ. ಯುವಕರೆಲ್ಲ ಆ ವ್ಯಕ್ತಿಯನ್ನು ಕೆಳಗಿಳಿಸಿ ‘ಸುಮ್ಮನಿರೊ’ ಎಂದು ಜರಿದರು.

ಹತ್ತು ಹದಿನೈದು ನಿಮಿಷಗಳಷ್ಟು ಕಾಲ ವಾದ-ವಿವಾದ ಎಳೆದಾಟ ಜಗ್ಗಾಟಗಳಲ್ಲಿ ಕಳೆಯಿತು. ಇಷ್ಟೆಲ್ಲ ಆಗುತ್ತಿರುವಾಗ ಆ ಊರವರೇ ಆದ ಬೊಳುವಾರು ಮಹಮ್ಮದ್ ಕುಂಞಿಯವರು ಒಂದೆಡೆ ಕುರ್ಚಿಯಲ್ಲಿ ಕೂತು ಸಿಗರೇಟು ಸೇದುತ್ತಿದ್ದರು. ಬಹುಷಃ ಆ ಯುವಕರೆಲ್ಲ ಅವರ ಊರವರೂ ಪರಿಚಯಸ್ಥರೂ ಆಗಿದ್ದವರೇನೋ! ಸಾರಾ ಅವರ ಗಂಡ ಅಬೂಬಕ್ಕರ್ ರವರೂ ಕೂಡ ಒಂದೆಡೆ ನಿಂತಿದ್ದರು. ಅವರನ್ನು ಈ ಯುವಕರು ನಿಂದಿಸಿದ್ದರು.

ಯುವಕರ ಹುಚ್ಚಾಟ ನಿಲ್ಲುವಂತೆ ಕಾಣಲಿಲ್ಲ. ವಯಸ್ಸಾದ ಮುಸ್ಲಿಮ್ ವ್ಯಕ್ತಿ ‘ಇದು ಸರಿಯಲ್ಲ, ಇದರಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಗೊಣಗುತ್ತಾ ಆ ಕಡೆ ಈಕಡೆ ನಡೆಯುತ್ತಿದ್ದ. ಸಂಘಟಕರು ಸಾರಾರವರನ್ನು ಅಲ್ಲಿಂದ ಮಂಗಳೂರಿಗೆ ಕಳುಹಿಸುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದರು. ಒಂದು ಅಂಬಾಸೆಡರ್ ಟ್ಯಾಕ್ಸಿಯನ್ನು ಗೊತ್ತು ಪಡಿಸಿದರು. ಸಾರಾ ಅವರನ್ನು ಕಾರಿನೊಳಗೆ ಒತ್ತಾಯ ಪೂರ್ವಕವಾಗಿ ಕೂರಿಸಿದರು. ಸಾರಾರವರು ‘ನಾನು ಮಾತಾಡಿಯೇ ತೀರುತ್ತೇನೆ. ಅವರೇನು ನನ್ನನ್ನು ಕೊಲ್ಲುತ್ತಾರಾ ? ಕೊಲ್ಲಲಿ, ನೋಡುವ..’ ಎನ್ನುತ್ತಿದ್ದರು. ನಾನು, ಸಬಿಹಾ ಮತ್ತೆ ಎರಡು ಮೂರು ಮಂದಿ ಕಾರನ್ನೇರಿ ಕೂತು ಸಾರಾರನ್ನು ಸಮಾಧಾನ ಪಡಿಸುತ್ತಾ ಮನೆಗೆ ತಲಪಿಸುವ ತನಕ ಜೊತೆಗಿದ್ದೆವು.

ಈ ಘಟನೆ ಕರ್ನಾಟಕದ ಎಲ್ಲ ಪತ್ರಿಕೆಯಲ್ಲೂ ವರದಿಯಾಯಿತು. ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿ ದೇಶವ್ಯಾಪಿ ಸುದ್ದಿಯಾಯಿತು. ಎಲ್ಲ ಕಡೆಗಳಿಂದಲೂ ಜನರು ಈ ಹಲ್ಲೆಯನ್ನು ಖಂಡಿಸಿದರು. ಕರಾವಳಿಯ ಪತ್ರಿಕೆ ಉದಯವಾಣಿಯಲ್ಲಿ ಈ ಬಗ್ಗೆ ವಾಚಕರ ವಾಣಿಯಲ್ಲಿ ವಾದವಿವಾದ ಚರ್ಚೆ ಜೋರಾಗಿ ನಡೆಯಿತು. ಮೊದಲ ಪತ್ರಗಳ ಪೈಕಿ ನನ್ನದೂ ಇತ್ತು.  ನೇರವಾಗಿ ನಮ್ಮ ಅಭಿಪ್ರಾಯಕ್ಕೆ ಎದುರಾಗಿ ತಮ್ಮ ಧಾರ್ಮಿಕ ಕಾರ್ಡನ್ನು ಚಲಾಯಿಸಿ ಕರಾವಳಿಯ ಕನ್ನಡ ಬರಹಗಾರರ ವಿರುದ್ಧ ನೇರವಾದ ಧಾಳಿಯನ್ನು ನಡೆಸಿದರು. ಕರ್ನಾಟಕದ ಎಲ್ಲ ಪತ್ರಿಕೆಗಳ ವಾಚಕರ ವಾಣಿಯಲ್ಲಿ ವಾದ ವಿವಾದಗಳು ಭರ್ಜರಿಯಾಗಿ, ಸಾಕಷ್ಟು ದೀರ್ಘಕಾಲ ನಡೆದು ಸಾರಾರವರು ಪ್ರಖ್ಯಾತರಾಗಿಬಿಟ್ಟರು. ಇದರಿಂದ ಸಾರಾರವರಿಗೆ ಮಾತ್ರವಲ್ಲ, ಲಂಕೇಶ್ ಪತ್ರಿಕೆಗೆ ಕೂಡ ಸಾಕಷ್ಟು ಜನಪ್ರಿಯತೆಗಳಿಸಿ ಕೊಟ್ಟಂತಾಯಿತು. ಇದರ ನಂತರ ದೀರ್ಘ ಕಾಲದ ತನಕ ಸಾರಾರವರು ಬರೆದದ್ದಲ್ಲವೂ ಹೆಚ್ಚು ಕಮ್ಮಿ ಲಂಕೇಶ್ ಪತ್ರಿಕೆಗೇ ಮೀಸಲಾಯಿತು.

ಈ ಘಟನೆಯ ನಂತರ ನಾನು ಸಾರಾರವರನ್ನು ಆಗಾಗ ಭೇಟಿಯಾಗುತ್ತಿದ್ದೆ ಮತ್ತು ಅವರ ಬರವಣಿಗೆಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಿದ್ದೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಅವರು ವ್ಯಕ್ತಪಡಿಸುತ್ತಿದ್ದ ಕಳಕಳಿ, ಅಭಿಪ್ರಾಯವೆಲ್ಲವೂ ಪ್ರಾಮಾಣಿಕವಾಗಿತ್ತು. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಸಾಕಷ್ಟು ಅವರಿಗೆ ಬೆಂಬಲ ದೊರೆತರೆ, ಸಂಪ್ರದಾಯವಾದಿಗಳಿಂದ ಅವರು ಸಾಕಷ್ಟು ಕಿರಿಕಿರಿಗಳನ್ನು ಅನುಭವಿಸಬೇಕಾಗಿ ಬಂತು. ಜಮಾತೆ ಇಸ್ಲಾಮಿಯವರ ಪತ್ರಿಕೆ ‘ಸನ್ಮಾರ್ಗ’ದ ವಿರುದ್ಧ ಅವರು ಕಾನೂನಿನ ಸಮರ ಹೂಡಬೇಕಾಗಿ ಬಂತು. ಜಾಕೀರ್ ನಾಯಕ್ ರವರ ಒಂದು ಮಂಗಳೂರಿನ ಕಾರ್ಯಕ್ರಮಕ್ಕೆ ಹೋಗಿ ನಿಕಾಹ್ ಮತ್ತು ತಲಾಕ್ ನಿಯಮಗಳಲ್ಲಿ ಕುರಾನ್ ಮತ್ತು ವೈಯಕ್ತಿಕ ಕಾನೂನಿನಲ್ಲಿರುವ ಅಂತರ, ಮಹಿಳೆಯರಿಗಿರುವ ಆಕ್ಷೇಪ ಅನುಮಾನಗಳ ಬಗ್ಗೆ ಚರ್ಚೆಗೆ ಇಳಿದಾಗ ಸಂಘಟಕರು ಈ ಪ್ರಶ್ನೆಗಳನ್ನು ಮುಸ್ಲಿಮರ ಸಭೆಗೆ ಸೀಮಿತವಾಗಿರಲಿ, ಸಾರ್ವಜನಿಕ ಸಭೆಗಳಿಗೆ ಬೇಡವೆಂದು ಹೇಳಿ ಅವರನ್ನು ನಿರಾಶೆಗೊಳಿಸಿದರು.

ಇಸ್ಲಾಮಿನ ಇತಿಹಾಸದಲ್ಲಿ ಕೂಡ ಇಸ್ಲಾಮಿನ ಹಲವು ನಿಯಮಗಳನ್ನು ರೂಪಿಸುವ ಸಂದರ್ಭಗಳಲ್ಲಿ ಮಹಿಳೆಯರ ಪ್ರಶ್ನೆಗಳು ಪುರಷರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮದುವೆಯ ಸಂದರ್ಭದಲ್ಲಿ ಮಹರ್ ಬಹಳ ಜಾಸ್ತಿ ಕೇಳುತ್ತಿದ್ದಾರೆಂದು ಪ್ರವಾದಿಯವರಿಗೆ ಪುರುಷರಿಂದ ದೂರು ಬಂದಿತ್ತು. ಆ ಬಗ್ಗೆ ಚರ್ಚಿಸುವಾಗ ಮಹಿಳೆಯರು ಎದ್ದು ನಿಂತು ‘ಮಹರ್ ನಮ್ಮ ಹಕ್ಕು. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದವರು ನಾವು, ನೀವು ಗಂಡಸರಲ್ಲ’ ಎಂದು ಆಕ್ಷೇಪ ಎತ್ತಿದ್ದರು. ಇದಲ್ಲದೆ ಹಜ್ರತ್ ಉಮರ್ ರವರು ಖಲೀಫ ಆಗಿದ್ದಾಗ ಯುದ್ಧವೊಂದರ ಸಮರಾರ್ಜಿತ ವಸ್ತುಗಳ ವಿತರಣೆ ಸಮಾನವಾಗಿಲ್ಲವೆಂದು ಮಹಿಳೆಯರು ಆಕ್ಷೇಪವೆತ್ತಿದ್ದರು. ಒಂದು ಶುಕ್ರವಾರ ಮಸೀದಿಯಲ್ಲಿ ಖುತ್ಬಾಕ್ಕಾಗಿ ಇಮಾಮರಾದ ಹಜ್ರತ್ ಉಮರ್‌ರವರು ಹೊಸ ನಿಲುವಂಗಿಯನ್ನು ಧರಿಸಿ ಎದ್ದು ನಿಂತಾಗ ಮಸೀದಿಯಲ್ಲಿ ಜುಮಾ ನಮಾಜಿಗೆ ಆಗಮಿಸಿದ ಮಹಿಳೆಯೋರ್ವಳು “ಸಮರಾರ್ಜಿತ ಬಟ್ಟೆಯ ಹಂಚುವಿಕೆ ನ್ಯಾಯಯುತವಾಗಿಲ್ಲವೆಂದು ಕಾಣುತ್ತದೆ. ಇಮಾಮರು ಎಲ್ಲರಿಗಿಂತ ಹೆಚ್ಚು ಪಾಲು ಬಟ್ಟೆಯನ್ನು ಪಡೆದಂತೆ ಕಾಣುತ್ತದೆ. ಆದುದರಿಂದ ಅವರಿಗೆ ಇಮಾಮರಾಗಿರುವ ಹಕ್ಕಿಲ್ಲ” ಎಂದು ಆಕ್ಷೇಪವೆತ್ತಿದ್ದಳು. ಇದಕ್ಕೆ ಹಜ್ರತ್ ಉಮರ್‌ರವರು ತನ್ನ ಮಗನ ಪಾಲಿನ ಬಟ್ಟೆಯನ್ನೂ ಸೇರಿಸಿಕೊಂಡು ತಾನು ತನ್ನ ನಿಲುವಂಗಿಯನ್ನು ಹೊಲಿಸಿದ್ದೆನೆಂದು ಸಮರ್ಪಕವಾದ ಉತ್ತರ ನೀಡಿದ್ದರಾದರೂ, ಅಲ್ಲಿಯ ತನಕ ಮಹಿಳೆಯರು ಮಸೀದಿಯಲ್ಲಿ ನಮಾಜು ಸಭೆಗಳಲ್ಲಿ ಪುರುಷರೊಂದಿಗೆ ಭಾಗವಹಿಸುತ್ತಿದ್ದದ್ದು, ನಂತರದಲ್ಲಿ ಮಹಿಳೆಯರು ಮಸೀದಿಯಲ್ಲಿ ಸಭೆ, ನಮಾಜುಗಳಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧಿಸಲಾಯಿತೆಂದು ಹೇಳಲಾಗುತ್ತದೆ.

೧೯೮೫ರ ಶಾಬಾನು ಪ್ರಕರಣವು ನಮ್ಮನ್ನೆಲ್ಲರನ್ನೂ ಇಸ್ಲಾಮಿಕ್ ವೈಯಕ್ತಿಕ ಕಾನೂನಿನಲ್ಲಿರುವ ಲೋಪದೋಷಗಳ ಬಗ್ಗೆ ತೀವ್ರವಾಗಿ ಯೋಚಿಸಲಿಕ್ಕೆ ಹಚ್ಚಿತು. ೧೯೭೮ರ ಮಾರ್ಚಿನಲ್ಲಿ ಕುರಾನ್‌ನ ಕನ್ನಡ ಅನುವಾದವನ್ನು ಮಂಗಳೂರಿನ ಶಾಂತಿಪ್ರಕಾಶನದವರು ‘ದಿವ್ಯ ಕುರಾನ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಕುರಾನ್ ಸಂದೇಶವನ್ನು ಇಡಿಯಾಗಿ ತಿಳಿಯಬೇಕಂಬ ನಮ್ಮಂತಹ ಆಸಕ್ತರಿಗೆ ಬಹಳ ಅನುಕೂಲವಾಯಿತು. ಈ ಹಿನ್ನೆಲೆಯಲ್ಲಿ ಕುರಾನ್ ಮತ್ತು ವೈಯಕ್ತಿಕ ಕಾನೂನಿನಲ್ಲಿರುವ ಅಂತರವನ್ನು ನಮ್ಮ ಲೇಖನಗಳಲ್ಲಿ ಬಯಲು ಮಾಡಿದ್ದು ಸಂಪ್ರದಾಯವಾದಿಗಳ ಸಿಟ್ಟಿಗೆ ಕಾರಣವಾಯಿತು. ಮಹಿಳೆಯರಿಗೆ ಇಸ್ಲಾಮಿನಲ್ಲಿರುವ ಸ್ವಾತಂತ್ರ್ಯ, ಹಕ್ಕುಗಳು, ಅವಕಾಶಗಳ ಬಗ್ಗೆ ಹೇಳುತ್ತ ಬಂದ ಸಂಪ್ರದಾಯವಾದಿಗಳಿಗೆ ನಮ್ಮ ಲೇಖನಗಳು ಸವಾಲಾದವು. ಜೊತೆಗೆ ಹಿಂದುತ್ವವಾದಿಗಳು ಶಾಬಾನು ಪ್ರಕರಣವನ್ನು ತಮ್ಮ ಇಸ್ಲಾಮ್ ವಿರೋಧಿ ಅಜೆಂಡಾಕ್ಕೆ ಸೇರಿಸಿಕೊಂಡು ಗುಲ್ಲೆಬ್ಬಿಸತೊಡಗಿದರು. ಈ ಸಂದರ್ಭದಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಚರ್ಚಿಸುವ ನಮ್ಮ ಲೇಖನಗಳು ಇಸ್ಲಾಮ್ ವಿರೋಧಿಗಳಿಗೆ ಸಹಕಾರಿಯಾಗುತ್ತಿವೆ, ನಾವು ಹಿಂದೂ ಕೋಮುವಾದಿಗಳ ಚಪ್ಪಾಳೆ ಗಿಟ್ಟಿಸುವುದಕ್ಕಾಗಿ ಬರೆಯುತ್ತಿದ್ದೇವೆ ಎಂಬ ಗುರುತರವಾದ ಆರೋಪಗಳನ್ನು ಎದುರಿಸಬೇಕಾಯಿತು. ಇದು ನನ್ನ ಬರವಣಿಗೆಯ ಮೇಲೆ ಪರಿಣಾಮ ಬೀರತೊಡಗಿತಾದರೂ, ಸಾರಾರವರು ತಮ್ಮ ನಿಲುವನ್ನು ಬದಲಿಸಲಿಲ್ಲ.

ಶಾಬಾನು ಪ್ರಕರಣದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್‌ರವರು ಅಂದು ಬರೆಯುತ್ತಿರುವ ಎಲ್ಲ ಮುಸ್ಲಿಮ್ ಸಮಾಜದಿಂದ ಬಂದ ಕನ್ನಡದ ಬರಹಗಾರರೆಲ್ಲರನ್ನು ಕರೆಸಿ ಹಾಸನದಲ್ಲಿ ಒಂದು ಸಭೆಯನ್ನು ಏರ್ಪಡಿಸಿದರು. ಸಾರಾರವರನ್ನು ಹೊರತುಪಡಿಸಿ(ಇವರ ಗೈರುಹಾಜರಿಗೆ ಭಾನುರವರ ಜೊತೆಗೆ ಇದ್ದ ಅಸಮಾಧಾನ ಕಾರಣವೆಂದು ಅಲ್ಲಿ ಮಾತು ಬಂದಿತ್ತು) ಇದರಲ್ಲಿ ಬಹಳಷ್ಟು ಕನ್ನಡದ ಬರಹಗಾರರು ಭಾಗವಹಿಸಿದ್ದರು. ನಮ್ಮ ನಿಲುವು ಸ್ಪಷ್ಟವಾಗಿತ್ತು. ಕೊನೆಯಲ್ಲಿ ಹಾಸನದ ಕೆಲವು ಇಸ್ಲಾಮೀ ಪಂಡಿತರು, ಇಮಾಮ್‌ಗಳನ್ನು ಕರೆಸಿ ನೇರ ಸಂವಾದಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಈ ಮುಖಾಮುಖಿ ಬಹಳ ಕುತೂಹಲಕಾರಿಯಾಗಿತ್ತು. ನಾನು ಮತ್ತು ರಮಜಾನ ದರ್ಗಾರವರು, ರಹ್‌ಮತ್ ತರೀಕೆರೆಯವರು ಮತ್ತಿತರರು ಕೇಳಿದಂತಹ ಹಲವು ಪ್ರಶ್ನೆಗಳಿಗೆ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಇಸ್ಲಾಮಿ ಪಂಡಿತರಿಗೆ ಸ್ವಲ್ಪ ಕಷ್ಟವಾಯಿತೆಂದು ಅಂದುಕೊಂಡಿದ್ದೇನೆ. ಒಬ್ಬ ಉರ್ದು ಉಪನ್ಯಾಸಕಿ ಮಹಿಳೆ ತನಗೆ ಗಂಡ ನೀಡಿದ ತಲಾಕ್ ಸಂದರ್ಭ ಮತ್ತು ಉಟ್ಟ ಉಡುಗೆಯಲ್ಲಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದ ಘಟನೆಯನ್ನು ಈ ಪಂಡಿತರ ಮುಂದೆ ಇಟ್ಟು ವೈಯಕ್ತಿಕ ಕಾನೂನು ಎಷ್ಟು ಪುರಷ ಪರವಾಗಿದೆ, ಮಹಿಳಾ ವಿರೋಧಿಯಾಗಿದೆ ಎನ್ನುವುದನ್ನು ಭಾವೋದ್ವೇಗದೊಂದಿಗೆ ವ್ಯಕ್ತಪಡಿಸಿದ್ದರು. ಹೀಗೆ ನಾವು ಪ್ರತಿಕ್ರಿಯಿಸುವಾಗ ಈ ಇಸ್ಲಾಮೀ ಪಂಡಿತರು ತುಂಬ ಸಂಯಮದಿಂದ ಸ್ನೇಹದಿಂದ ನಮ್ಮೊಂದಿಗೆ ನಡೆದುಕೊಂಡಿದ್ದರು. ಈ ಮಟ್ಟಿಗೆ ಹಾಸನದ ಸಭೆ ಬಹಳ ಮಹತ್ವದ್ದಾಗಿತ್ತು ಮತ್ತು ಅವಿಸ್ಮರಣೀಯವಾಗಿತ್ತು.

ಶಾಬಾನು ಪ್ರಕರಣದ ನಂತರದಲ್ಲಿ ಸಾರಾರವರು ಪೂನಾದ ಹಮೀದ್ ದಲ್ವಾಯಿಯವರ ಸತ್ಯಶೋಧಕ್ ಮಂಡಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಈ ಬಗ್ಗೆ ಅವರು ಆಗಾಗ ನನ್ನ ಅಭಿಪ್ರಾಯ ಕೇಳುತ್ತಿದ್ದರು. ನನ್ನ ಪ್ರಕಾರ ಸಮಾಜದಿಂದ ಹೊರಗೆನಿಂತು ನಾವು ಮಾಡುವ ಸುಧಾರಣೆ ಬರಿ ಬೂಟಾಟಿಕೆಯದ್ದು, ನಾವು ಸಮುದಾಯದ ಜೊತೆಗಿದ್ದು ಸಮಸ್ಯೆಗಳನ್ನು ಎದುರಿಸುವುದು ಸಮರ್ಪಕವಾದದ್ದು ಮತ್ತು ಪ್ರಭಾವಶಾಲಿಯಾಗಿರುತ್ತದೆ ಎಂದು ಹೇಳಿದೆ. ಸಾರಾರವರು ಪೂನಾದಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕ್ರಮೇಣ ಅದರಲ್ಲಿ ಭ್ರಮನಿರಸನಗೊಂಡರೆಂದು ಕಾಣುತ್ತದೆ.

ಸಾರಾರವರಂತೆ ಕರ್ನಾಟಕದಲ್ಲಿ ನಜ್ಮಾ ಭಾಂಗಿ, ರಮಜಾನ್ ದರ್ಗಾ ಮುಂತಾದವರು ಮೂಲಭೂತವಾದಿ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದರು. ರಮಜಾನ್ ದರ್ಗಾರವರ ‘ತಲಾಕ್ ಕೊಟ್ಟರೆ ಬಾರೇಟಿನ ಶಕ್ಷೆ’ ಎಂಬ ಕೃತಿಗೆ ವಿರೋಧ ವ್ಯಕ್ತಪಡಿಸಿ ಒಬ್ಬ ರಸ್ತೆಯಲ್ಲಿ ಚಾಕು ಹಿಡಿದು ನಿಂತಿದ್ದ. ಭಾನು ಮುಷ್ತಾಕ್ ಮಸೀದಿಯಲ್ಲಿ ನಮಾಜ್ ಮಾಡುವ ಅವಕಾಶ ಕೇಳಿದ್ದಕ್ಕೆ ಜಮಾತ್‌ನಿಂದ ಅಮಾನತಿಗೊಳಗಾಗುವ ಬೆದರಿಕೆಯನ್ನು ಮಾಡಲಾಯಿತು. ಇವೆಲ್ಲವೂ ಒಂದು ರೀತಿಯ ಸಮೂಹ ಸನ್ನಿಯ ಪ್ರಭಾವವೆಂದುಕೊಂಡರೂ, ಸಮುದಾಯನಿಷ್ಟ ಬರಹಗಾರರು ಎದುರಿಸಲೇಬೇಕಾಗಿಬರುವ ಅನಿವಾರ್ಯತೆಯೂ ಹೌದು. ತಸ್ಲೀಮ ನಸ್ರೀನ್‌ರವರ ಬರವಣಿಗೆಯನ್ನು ವಿರೋಧಿಸಿ ಬಂಗ್ಲಾದೇಶದ ಹಾವಾಡಿಗರು (ಮುಸ್ಲಿಮರು) ಹಾವುಗಳನ್ನು ಬಿಟ್ಟು ಅವರನ್ನು ಕೊಲ್ಲಲು ಬಂದಿದ್ದರು. ಈ ಘಟನೆಗೆ ಪ್ರತಿಕ್ರಿಯಿಸುತ್ತ ತಸ್ಲಿಮರವರು “ನನಗೆ ಈ ಪಾಪದ ಅನಕ್ಷರಸ್ಥ ಹಾವಾಡಿಗರ ಸಮುದಾಯದ ಬಗ್ಗೆ ಏನೂ ಸಿಟ್ಟಿಲ್ಲ, ಬದಲಿಗೆ ನನ್ನ ಹೋರಾಟ ಇರುವುದು ಅವರನ್ನು ಪ್ರಚೋದಿಸಿ ಕಳುಹಿಸಿದ್ದಾರಲ್ಲಾ ಅವರ ವಿರುದ್ಧ.” ಎಂದಿದ್ದರು. ತಸ್ಲಿಮರವರ ಎಲ್ಲ ವಿಚಾರಕ್ಕೆ ಬೆಂಬಲವಿಲ್ಲದಿದ್ದರೂ ಅವರು ವ್ಯಕ್ತ ಪಡಿಸುವ ತಮ್ಮ ದೇಶದ ಅಲ್ಪಸಂಖ್ಯಾತರ ಪರವಾದ ನಿಲುವು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ಬಹಳ ಸಂಖ್ಯೆಯ ಪ್ರಜ್ಞಾವಂತ ಮುಸ್ಲಿಮರು ಬಂಗ್ಲಾದೇಶದಲ್ಲಿ ಅವರ ಬೆಂಬಲಕ್ಕಿದ್ದಾರೆ ಎಂಬುದನ್ನು ಮರೆಯಲಾಗದು. ಪಾಕಿಸ್ತಾನದ ಮುಖ್ತಾರನ್ ಮಾಯಿಯ ಮೇಲಾದ ಬರ್ಬರ ರೀತಿಯ ಅತ್ಯಾಚಾರ ಬೆಳಕಿಗೆ ಬಂದದ್ದು ಸ್ಥಳೀಯ ಮಸೀದಿಯ ಇಮಾಮ್ ಮೌಲಾನ ಅಬ್ದುಲ್ ರಜಾಕ್‌ರವರು ಶುಕ್ರವಾರದ ಖುತ್ಬಾದಲ್ಲಿ ಇದರ ಬಗ್ಗೆ ಕ್ರೋಧ ವ್ಯಕ್ತಪಡಿಸಿ ಖಂಡಿಸಿದ್ದರಿಂದ. ಇಂತಹ ಘಟನೆಗಳನ್ನು ಖಂಡಿಸುವಾಗ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವವರು ಅದರೊಳಗಿರುವ ಅಲ್ಪಸಂಖ್ಯಾತರೆನಿಸಿದ ಪ್ರಜ್ಞಾವಂತರನ್ನು ಮರೆಯಲಾಗದು.

ಎಂಟು ಹತ್ತು ವರ್ಷಗಳಿಂದ ನನ್ನಂತಹ ಬರಹಗಾರರು, ಸೌಮ್ಯವಾದಿ ಇಸ್ಲಾಮಿಕ್ ಸ್ಕಾಲರ್‌ಗಳು, ವಿಶ್ವದಾದ್ಯಂತ ಭಯೋತ್ಪಾದನೆ ಇಸ್ಲಾಮಿನ ಸಂದೇಶಗಳಿಗೆ ವಿರುದ್ಧವಾದದ್ದು ಎಂದು ಬರೆದರೂ ಸುಮ್ಮನೆ ಇದ್ದ ಮುಲ್ಲಾಗಳು, ಈಗ ಭಯೋತ್ಪಾದಕರು ಹತೋಟಿ ತಪ್ಪುವಷ್ಟು ಬೆಳೆದು ನಿಂತಂತಹ ಸಂದರ್ಭದಲ್ಲಿ ಎಚ್ಚತ್ತು ಸಂದರ್ಭಸಿಕ್ಕಾಗಲೆಲ್ಲ ಶುಕ್ರವಾರದ ಖುತ್ಬಾ ಮುಂತಾದ ಪ್ರವಚನಗಳಲ್ಲಿ, ಫತ್ವಾಗಳ ಮೂಲಕ ಜಿಹಾದ್ ಹೆಸರಿನಿಂದ ಮಾಡುತ್ತಿರುವ ಭಯೋತ್ಪಾದನೆಯನ್ನು ಖಂಡಿಸುತ್ತಿದ್ದಾರೆ. ಇಂದು ಇತರ ಧರ್ಮೀಯ ಪುರೋಹಿತರು, ಧಾರ್ಮಿಕ ಮುಖಂಡರು ತಮ್ಮಲ್ಲ್ಲಿ ಬೆಳೆದಿರುವ ವಿವಿಧ ರೂಪದ ಭಯೋತ್ಪಾದನೆಯನ್ನು ಮೌನವಾಗಿ, ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಪರೋಕ್ಷವಾಗಿ ಆತಂಕವಾದಕ್ಕೆ ಬೆಂಬಲನೀಡುತ್ತಿರುವ ಸಂದರ್ಭದಲ್ಲಿ ತಡವಾಗಿಯಾದರೂ ಇಸ್ಲಾಮ್ ಸಮಾಜದಲ್ಲಿ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೆಂದು ನನಗೆ ಅನ್ನಿಸುತ್ತಿದೆ.

ಆಧುನಿಕ ಅವಶ್ಯಕತೆಗಳಿಗೆ ಸ್ಪಂದಿಸದ, ಚಲನಶೀಲ ಗುಣವಿಲ್ಲದ ಸಮಾಜ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮುಸ್ಲಿಮ್ ಸಮಾಜ ಕೂಡ ಅನೇಕ ಬದಲಾವಣೆಗಳಿಗೆ ಮೈಯೊಡ್ಡಿಕೊಂಡಿದೆ. ಇದರಲ್ಲೂ ಮುಖ್ಯವಾಗಿ ಮಹಿಳೆಯರ ವಿದ್ಯಾಭ್ಯಾಸ, ಉದ್ಯೋಗ, ವೈಯಕ್ತಿಕ ಕಾನೂನು ಮುಂತಾದ ವಿಷಯಗಳಲ್ಲಿ ಮಾತ್ರವಲ್ಲ, ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೆ ಅನೇಕ ಕಡೆಗಳಲ್ಲಿ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದಕ್ಕೂ ಮುಖ್ಯವಾದ ಬದಲಾವಣೆಯೆಂದರೆ ಮುಸ್ಲಿಮ್ ಮಹಿಳೆ ಇಮಾಮ್ ಆಗಿರುವುದು. ಆಮಿನಾ ವದೂದ್ ಎಂಬ ಇಸ್ಲಾಮಿಕ್ ಸ್ಕಾಲರ್, ‘ವಿಮೆನ್ ಇನ್ ಕುರಾನ್’ ಮುಂತಾದ ಜಗತ್ಪ್ರಸಿದ್ಧ ಗ್ರಂಥಗಳನ್ನು ಬರೆದ ಮಹಿಳೆ ಇಂದು ಮಸೀದಿಯಲ್ಲಿ ಇಮಾಮ್ ಆಗಿ ಸ್ತ್ರೀಪುರುಷರ ನಮಾಜಿನ ಮುಖಂಡತ್ವವನ್ನು ವಹಿಸಿದ್ದಾರೆ. ಮಹಿಳೆ ಇಮಾಮ್ ಆಗಲು ಸಾಧ್ಯವಿಲ್ಲವೆಂಬ ಮುಲ್ಲಾಗಳ ವಾದಕ್ಕೆ ಬೆಲೆಯಿಲ್ಲವಾಗಿದೆ.

ಸಾರಾರವರ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದೆನೇ ಹೊರತು ಅವುಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಅವರು ಕೇಳುತ್ತಲೂ ಇರಲಿಲ್ಲ. ನಾನೂ ಎಲ್ಲೂ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿರಲಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದು ನನಗೆ ಅನ್ನಿಸಿದ್ದು ಅವರ ‘ವಜ್ರಗಳು’ ಕಾದಂಬರಿ ಬಿಡುಗಡೆಯ ಸಂದರ್ಭದಲ್ಲಿ. ನವಕರ್ನಾಟಕ ಪುಸ್ತಕ ಪ್ರಕಾಶನದವರು ಮಂಗಳೂರಿನ ಸಹಕಾರಿ ಬ್ಯಾಂಕಿನ ಹಾಲ್‌ನಲ್ಲಿ ಬಿಡುಗಡೆಯ ಕಾರ್ಯಕ್ರಮದಲ್ಲಿ ರಮಜಾನ್ ದರ್ಗಾರವರು ವ್ಯಕ್ತಪಡಿಸಿದ ಅಭಿಪ್ರಾಯ ಅವರಿಗೆ ಇಷ್ಟವಾಗಲಿಲ್ಲ. ಅವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯನ್ನು ಮಂಗಳೂರಿನ ಆಕಾಶವಾಣಿಯವರು ಕೋರಿದಂತೆ ನಾಟಕಕ್ಕೆ ರೂಪಾಂತರಿಸಿದ್ದೆ. ಅದು ತುಂಬ ಜನಪ್ರೀಯವಾಗಿ ಹಲವುಬಾರಿ ಪ್ರಸಾರಗೊಂಡಿತು. ಮತ್ತು ಅಖಿಲಭಾರತ ಆಕಾಶವಾಣಿ ನಾಟಕ ಸ್ಪರ್ಧೆಯಲ್ಲಿ ಬಹುಮಾನವನ್ನು ಗಳಿಸಿತ್ತೆಂದೂ ಕೇಳಿದ್ದೇನೆ.

ಸಾರಾರವರು ಜನಪ್ರೀಯ ಲೇಖಕಿಯಾಗುತ್ತಿದ್ದಂತೆ ಅವರ ಬಳಿಗೆ ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಗತೊಡಗಿತ್ತು. ತನ್ನ ಅಭಿಮಾನಿಗಳ ಹಲವು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಲೇಖನಗಳ ಮೂಲಕವೂ ಹಲವಾರು ನಿಜಜೀವನದ ಸಂಗತಿಗಳನ್ನು ಲಂಕೇಶ್ ಪತ್ರಿಕೆಯ ಮೂಲಕ ಪ್ರಕಟಿಸಿ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದರು. ತನ್ನ ಗಂಡನನ್ನು ಬಿಟ್ಟು, ಮಕ್ಕಳಾಗಲೀ ಸಂಬಂಧಿಕರಾಗಲೀ ತನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲವೆಂಬ ಕೊರಗು ಅವರಿಗಿತ್ತು.

ಸಾರರವರು ವೈಯಕ್ತಿಕವಾಗಿ ಇಸ್ಲಾಮ್ ಧರ್ಮವನ್ನು ನಿಷ್ಟೆಯಿಂದ ಪಾಲಿಸುವವರು. ಐದು ಹೊತ್ತು ನಮಾಜು, ರಂಜಾನಿನಲ್ಲಿ ಉಪವಾಸ ತಪ್ಪದೆ ಪಾಲಿಸುವವರು. ತಂದೆಯವರು ಕಾಸರಗೋಡಿನಲ್ಲಿ ಹೆಸರಾಂತ ವಕೀಲರು. ಸಾರಾರವರ ಗಂಡ ಅಬೂಬಕ್ಕರ್ ಸರಕಾರದ ಇಂಜಿನಿಯರ್ ಆಗಿ ನನಗೆ ತಿಳಿದಾಗ ನಿವೃತ್ತರು.

ಸಾಹಿತ್ಯವಲಯದ ಆಗುಹೋಗುಗಳಲ್ಲೂ ಅವರಿಗೆ ತಕರಾರುಗಳಿದ್ದವು. ಆದರೆ ತನ್ನದೇ ಆದ ರೀತಿಯಲ್ಲಿ ಸಾರಾ ಪ್ರತಿಭಟಿಸಿ ಗೆದ್ದವರು. ಮೊದಮೊದಲು ಬರೆದದ್ದಕ್ಕೆ ಸಿಕ್ಕ ಗೌರವಧನವನ್ನು ಸಂತೋಷದಿಂದ ಸ್ವೀಕರಿಸಿದ ಸಾರಾ ನಂತರ ಬರೆಯುವವರಿಗೆ ಸರಿಯಾದ ಕೂಲಿ ಕನ್ನಡದಲ್ಲಿ ಸಿಗುವುದಿಲ್ಲ ಎನ್ನುವುದನ್ನು ಕಂಡುಕೊಂಡು ತುಂಬ ವ್ಯಥೆ ಪಟ್ಟುಕೊಂಡಿದ್ದರು.  ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರು ತಮಗೆ ಹೇಳಿದ ಪ್ರಕಾರ ಗೌರವಧನವನ್ನು ಕೊಡಲಿಲ್ಲವೆಂಬ ಕಾರಣಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನದೇ ಸ್ವಂತ ‘ಚಂದ್ರಗಿರಿ ಪ್ರಕಾಶನ’ ಮಾಡಿಕೊಂಡ ದಿಟ್ಟ ಬರಹಗಾರ್ತಿ ಸಾರಾ ಅಲ್ಲೂ ಗೆದ್ದುಕೊಂಡರು.