ಫಾರೆಸ್ಟ್ ವಿಸ್ಪರ್ ಅಂತೆ. ಅದೊಂದು ಬಣ್ಣದ ಹೆಸರು. ಮನೆಯ ಗೋಡೆಗಳಿಗೆ ಬಳಿಯುವ ಬಣ್ಣ. ಮಲೆನಾಡಿನ ಕಾಡಿನ ಹಸುರನ್ನೆಲ್ಲ ಚಳಿ ಶುರುವಾಗುವ ಮುಂಚಿನ ಮಳೆ, ಚಳಿಬಿದ್ದ ಮೇಲಿನ ಇಬ್ಬನಿಗಳೊಂದಿಗೆ ಸೇರಿಸಿ ಕಲಸಿದರೆ ಬರುವ ತಿಳಿ ಹಸಿರು ಬಣ್ಣಕ್ಕೆ ಚೂರೇ ಚೂರು ಬೆಳಿಗ್ಗೆ ಮುಂಚೆಯ ಸೂರ್ಯನ ಕಿರಣಗಳನ್ನು ಸೇರಿಸಿಬಿಟ್ಟರೆ ಮೂಡಿಬರುವ ಒಂಥರಾ ತುಂಬ ಚಂದಗಿನ ಹಸಿರು ಬಣ್ಣ ಅದು.. ನಾನು ಅವನೂ ಇಬ್ಬರೂ ಅಲ್ಲಿ ಮೂಗು ತುಂಬುವ ಡಿಸ್ಟೆಂಪರ್ ಬಣ್ಣದ ವಾಸನೆಯ ಪೇಂಟ್ಸ್ ಅಂಗಡಿಯಲ್ಲಿ ಕೂತು ಇದ್ದ ನೂರಾರು ಬಣ್ಣಗಳಲ್ಲಿ ಅದನ್ನು ಆರಿಸಿದೆವು.

ನಮ್ಮನೆಯ ಗೋಡೆಗಳಿಗೆ ಇದೇ ಚಂದ ಕಾಣುವುದು ಅಂತ ಇಬ್ಬರಿಗೂ ಒಟ್ಟಿಗೆ ಅನ್ನಿಸಿ ಒಮ್ಮತದ ಆಯ್ಕೆಯಾಗಿ ಮೂಡಿಬಂತದು.. ಏನೋ ಅಪರೂಪಕ್ಕೆ ಬಹಳ ಬೇಗ ಒಮ್ಮತ ಬಂದು ಇಬ್ಬರಮುಖದಲ್ಲೂ ನಗೆ ಹೂವಿನ ಪಲ್ಲವ. ಅವಶ್ಯ ಇದ್ದಷ್ಟು ಲೀಟರ್ ಗಳನ್ನು ತಿಳಿಸಿ, ಮನೆಯವಿಳಾಸ ಕೊಟ್ಟು ಕಳಿಸಲು ಹೇಳಿ, ಕಾರ್ಡ್ ದುಡ್ಡು ಕೊಟ್ಟು ಹೊರಟೆವು. ಬರುತ್ತಾ ದಾರಿಯಲ್ಲಿ ಸಿಕ್ಕ ಮನೆಗಳೆಲ್ಲದರ ಬಣ್ಣ, ಅಂದ, ಚಂದ ನೋಡುತ್ತಾ, ಚರ್ಚಿಸುತ್ತಾ ಗಾಡಿಯಲ್ಲಿ ಹೊರಟೆವು. ಎಲ್ಲ ಮನೆಗಳ ಬಾಗಿಲು ಭದ್ರವಾಗಿ ಮುಚ್ಚಿದ್ದವು, ಅಲ್ಲಲ್ಲಿ ಸೆಕ್ಯುರಿಟಿ ಸಿಬ್ಬಂದಿ ಕೂಡ. ಹೆಚ್ಚೂ ಕಡಿಮೆ ಎಲ್ಲ ಮನೆಗಳ ನಾಯಿಗೂಡಲ್ಲೂ ಭಯಹುಟ್ಟಿಸುವ ಆಕಾರದ ನಗರ ಸಿಂಹಗಳು..

ಹಾಗೇ ವರ್ತುಲ ರಸ್ತೆಯಲ್ಲಿ ತಿರುಗಿ ಇನ್ನೊಂದು ರಸ್ತೆ ಸೇರುವಾಗ ಸಂಜೆಯ ಇಣುಕು ಮುಖ ನೋಡಿದ ಮಧ್ಯಾಹ್ನದ ಬಿಸಿಲು ನಿದ್ದೆ ತಿಳಿದೆದ್ದು ಬಿಸಿ ಕಳೆದುಕೊಂಡು ತಂಪಾಗತೊಡಗಿತ್ತು. ಬಿಸಿಲ ಕೋಲಿನ ಜಾಡನ್ನೇ ನೋಡುತ್ತ ಅವನ ಹಿಂದೆ ಕುಳಿತವಳಿಗೆ ರಸ್ತೆಬದಿಯ ಸಾಮ್ರಾಜ್ಯ ಕಾಣಿಸಿತು. ಒಂದು ೩೦೦-೪೦೦ ಮೀಟರ್ ದೂರದವರೆಗೆ ಪಸರಿಸಿದ ಟೆಂಟ್ ಮನೆಗಳು. ಯಾವುದೋ ಊರಿನಿಂದ ತಮ್ಮ ಮನೆ ಮಾರುಗಳನ್ನೆಲ್ಲ ಇದ್ದಲ್ಲೆ ಖಾಲಿ ಬಿಟ್ಟು ಹೊಟ್ಟೆಪಾಡಿಗೆ ನಗರಗಳಿಗೆ ಬಂದು ಇಲ್ಲಿನ ರಸ್ತೆ, ಬೃಹತ್ ಕಟ್ಟಡಗಳು ಮತ್ತು ಮೇಲ್ಸೇತುವೆಗಳನ್ನು ಕಟ್ಟುವವರ ಮನೆಗಳು. ಪ್ಲಾಸ್ಟಿಕ್ ಹೊದಿಕೆಯ ಗೋಡೆಗೆ ಮುರುಕು ಕಂಬಿಗಳ ಪಿಲ್ಲರ್, ಭದ್ರತಳಪಾಯವಾಗಿರಲೆಂದು ಕಟ್ಟಿದ ಮುರುಕು ಇಟ್ಟಿಗೆಯ ಪುಟಾಣಿ ಕಟ್ಟೆಗಳು, ಅಲ್ಲಲ್ಲಿ ಮೋಟುಗೋಡೆಯ ಡಿಸೈನರ್ ಬಚ್ಚಲು ಮನೆಗಳು…

ಹಾಗೆ ಕೆಲವೊಂದು ಕಡೆ ಕೂತುಕೊಂಡಿರುವ ಅಕ್ಕನೋ ತಂಗಿಯೋ ಗೆಳತಿಯೋ ಅವರ ತಲೆ ಬಾಚುತ್ತಿರುವ ಜೀವಗಳು. ತೆರೆದ ಬಾಗಿಲ ಹೊಸ್ತಿಲ ಬಳಿಯಲಿ ಬಟ್ಟೆ ಒಗೆಯುತ್ತಿರುವ ಅಮ್ಮ, ಅಲ್ಲೇ ಈಚೆ ಹಿಂದೆ ಸ್ವಲ್ಪ ಒಣಗಿರುವ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿಯ ಮೇಲೆ ದಿವ್ಯನಿದ್ದೆಯ ಪುಟ್ಟ ಮಗು, ಇಲ್ಲೇ ರಸ್ತೆಪಕ್ಕದ ಗುಲ್ ಮೊಹರ್ ಮರದ ಕೆಳಗಿನ ಕೊಂಬೆಗೆ ಅಕ್ಕನ ದಾವಣಿ ಕಟ್ಟಿ ಉಯ್ಯಾಲೆಯಾಡುವ ಮಕ್ಕಳು ಮತ್ತು ಅವರ ಉಲ್ಲಸ. ಕೆ.ಎಸ್.ನ. ಬರೆದಿದ್ದರಲ್ಲಾ – ಚೈತ್ರ ಮಾಸದ ಕನಸ ಕಂಡೆ ಆಷಾಢದಲಿ, ನಗುವ ಮಕ್ಕಳ ಕಂಡೆ ಹಸಿರಿನ ಬಯಲಲಿ – ಅಂತ ಆ ಸಾಲುಗಳು ಆಕಾರ ತಳೆದು ಬಂದಂತೆ ಭಾಸವಾಯಿತು.ಫಾರೆಸ್ಟ್ ವಿಸ್ಪರ್ ಬಣ್ಣ, ಈ ತೆರೆದ ಬಾಗಿಲಿನ ಮನೆ-ಮನಗಳ ಬಣ್ಣದ ಮುಂದೆ ಮಂಕಾದಹಾಗೆನಿಸಿತು.

ಹಾಗೇ ಮುಂದುವರಿದು ಪೇಟೆಯ ಟ್ರಾಫಿಕ್ಕಿನಲ್ಲಿ ತೆವಳುತ್ತಾ, ಗಾಂಧಿಬಜಾರೆಂಬ ಮೋಹಕಜಾಲರಿಯಲ್ಲಿ ಕಷ್ಟಪಟ್ಟು ಗಾಡಿ ನಿಲ್ಲಿಸಿ, ಪಾದಪಥದಲ್ಲಿ ಹೊರಟರೆ, ಮಾತಿಲ್ಲದನಡಿಗೆ ಎಸ್.ಎಲ್.ವಿ ಯ ದರ್ಶಿನಿ ಟೇಬಲ್ ಮುಂದೆ ತಂದು ನಿಲ್ಲಿಸಿತು. ಗ್ಲಾಸಲ್ಲಿ ಕೊಟ್ಟ ಬಿಸಿಬಿಸಿ ಸ್ಟ್ರಾಂಗ್ ಕಾಫಿ ಕುಡಿಯುತ್ತಿದ್ದರೆ, ಅಸಿಡಿಟಿಯ ಹೊಟ್ಟೆನೋವು ಅಲ್ಲೇ ಸಣ್ಣಕರುಳಿನ ಹಿಂದೆ ಅಡಗಿಕೊಂಡು ಬೆಚ್ಚಗೆ ನಿದ್ದೆಹೋಯಿತು. ಪುಟ್ಟ ಮಕ್ಕಳೂ, ಅಜ್ಜಂದಿರೂ, ಕಾಲೇಜು ಕನ್ಯೆಯರೂ, ಕ್ರೀಡಾಳುಗಳು, ಸುಮ್ಮನೆ ಸಂಜೆಯ ವಾಲ್ಕಿಂಗಿಗೆ ಅಂತ ಹೊರಟವರೂ, ಯುವ ಜೀವಗಳು, ನಮ್ಮ ಹಾಗಿನ ತಲೆಕೆಟ್ಟವರು ಎಲ್ಲರೂ ಬಿಸಿ ಬಿಸಿ ಕಾಫಿ ಕುಡಿಯುತ್ತಾ ಅದ್ವೈತ ಅನುಭವಿಸುತ್ತಿದ್ದೆವು.ರಸ್ತೆಯಲ್ಲಿ ತೂರಿಹೋಗುವ ವಾಹನಗಳ ಬಿರುಸನ್ನೇ ನೋಡುತ್ತಾ ನಿಂತವಳ ಬಳಿ ತುಂಬ ನಿಧಾನವಾಗಿ ಸರಿದು ಬಂದ ಜೀವವೊಂದು ಇನ್ನೂ ನಿಧಾನವಾಗಿ ಕೈಯೊಡ್ಡಿತು.

ಕರೆಯಾದ ಪುಟ್ಟಕೈಗಳ ಮುಖದ ಮುದ್ದು, ಕೆದರಿದ ಕೂದಲ ಹಿಂದೆ ಇಣುಕುತ್ತಿತ್ತು. ಕೊಡಕ್ಕಾ ಎಂಬ ದೈನ್ಯದ ಕಣ್ಣ ಪಾಪೆಯ ಸುತ್ತ, ನೀನ್ ಕೊಡ್ದೆ ಇದ್ರೇನ್ ಬಿಡು, ನಾನ್ ಹೇಗೋ ಗಿಟ್ಟಿಸ್ ಕೊಳ್ತೀನಿ ಎಂಬ ತುಂಬುಗೂದಲ ಉಡಾಫೆ ರೆಪ್ಪೆಗಳು.. ನಾನು ಗಲಿಬಿಲಿಗೊಂಡೆ, ಏನ್ ತಿಂತೀಯಾ ಅಂತ ಕೇಳಿದರೆ, ತಿನ್ನೋಕ್ಕೆ ಬೇಡ ಮನೆಯಲ್ಲಿ ಯಾರೂ ಮೂರ್ ದಿನದಿಂದ ಊಟಮಾಡಿಲ್ಲ, ಹತ್ರುಪಾಯ್ ಕೊಡು ಸಾಕು ಬ್ರೆಡ್ ತಗೊಂಡ್ ಹೋಗ್ತೀನಿ ಅಂತ ಕ್ಷೀಣದನಿಯ ಮಾತು, ಇನ್ನೇನು ತೆಗೆದುಕೊಡಬೇಕು ಅಷ್ಟರಲ್ಲಿ ಅಲ್ಲಿ ಹೂಬಿರಿದ ಮರವೊಂದರ ಹಿಂದೆ ಅಡಗಿದ ಈಪೋರನದೇ ಇನ್ನೊಂದು ರೂಪ ಕಾಣಿಸಿತು. ಇದು ಸ್ವಲ್ಪ ದೊಡ್ಡಕಿತ್ತು. ಅವನ ಕಣ್ಣ ತುಂಬ ಚಾಲಾಕಿ ತಮ್ಮನ ದೈನ್ಯತೆಗೆ ಮೆಚ್ಚುಗೆ ತುಂಬಿತುಳುಕುತ್ತಿತ್ತು..

ನನ್ನ ಮುಂದಿನ ಪುಟ್ಟ ಜೀವದ ಕಣ್ಣು ಅವನನ್ನೋಡಿ ಕಣ್ ಮಿಟುಕಿಸಿತಾ, ಗೊತ್ತಾಗಲಿಲ್ಲ ನನಗೆ, ಇದ್ದಕ್ಕಿದ್ದಂಗೆ ತುಂಬ ಸಿಟ್ಬಂತು. ಎಷ್ಟ್ ಜೋರಿದಾನಲ್ಲಾ ಅನ್ನಿಸಿತು. ಮುಂದ್ ಹೋಗಪ್ಪಾ ಅಂದವಳು ದುಡ್ಡನ್ನ ಹಾಗೇ ಪರ್ಸಲ್ಲಿಟ್ಟೆ.ಇಷ್ಟೊತ್ತೂ ಇನ್ನೆಲ್ಲೋ ನೋಡ್ತಾ ಇದ್ದ ನನ್ನವನು, ಯಾಕೇ ಅವ್ನಿಗೆ ಏನೂಕೊಡಲಿಲ್ಲ ಅಂತ ಕೇಳಿದ. ನನ್ನ ಅಸಹನೆಯನ್ನೆಲ್ಲಾ ಮಾತಿಗಿಳಿಸಿದೆ. ಹೆಚ್ಚು ಮಾತಿನವನಲ್ಲದ ಅವನಂದ. ಸರಿ ಏನು ಮಹಾ ಮೋಸ ಅದು – ದಿನದಿನವೂ ನಮ್ಮನ್ನು ಹಿಂಡುವ ನೂರಾರು ಆಮಿಷಗಳಿಗೆ ಸಲೀಸಾಗಿ ಬಕ್ರಾ ಆಗ್ತಿರ್ತೀವಿ. ಬಡತನದ ಹುಡುಗು ಬದುಕು ಕಂಡುಕೊಂಡ ಸುಲಭದಾರಿಗೆ ಬಯ್ದು ತಳ್ಳಬೇಕಾ, ಐದ್ರೂಪಾಯಿ ಕೊಡಬಹುದಿತ್ತು.. ನಂಗೆ ಗೊಂದಲ.. ಆದ್ರೆ ನಾವೇ ಅವರನ್ನ ಭಿಕ್ಷಾಟನೆಗೆ ಪ್ರೋತ್ಸಾಹಿಸಿದಂತಾಗುತ್ತಲ್ಲಾ ಅಂತ ಏನೇನೋ ಗೊಂದಲಮಯ ಮಾತುಗಳು… ಅವನು ನಕ್ಕ..

ನಮ್ಮದೇನು ಪ್ರೋತ್ಸಾಹ.. ಆ ಮಕ್ಕಳ ಬದುಕನ್ನ ನೇರ ಮಾಡುವ ಜವಾಬ್ದಾರಿ ತಗೊಳ್ಳಲಿಕ್ಕಾಗುತ್ತಾ? ಮತ್ಯಾಕೆ ಅವರ ಒಂದು ಸಂಜೆಯ ಪುಟಾಣಿ ಖುಶಿಯನ್ನ ಕದಿಯಬೇಕು ಹೇಳು..? ಸದಾ ಮಾತನಾಡುವ ನನ್ನ ಬಾಯಿಗೆ ಮಾತು ಮರೆತು ಹೋಯಿತು. ದೇವರ ಹೂತೋಟದಲ್ಲಿ ನಗುವ ಹೂಗಳೇ ಮಕ್ಕಳೆಂದ ನನ್ನಿಷ್ಟದ ಯಾವುದೋ ಬರಹ ನೆನಪಾಯಿತು, ದುಬಾರಿ ದೇವರಿಗೆ ಕೊಂಡುಹೋಗುವ ಹೂಮಾಲೆಗಳ ನೆನಪು ಜಗ್ಗಿತು, ಇಷ್ಟವಾಗುವ ಡಿಸೈನರ್ ಬಟ್ಟೆಗಳನ್ನ ಚೌಕಾಶಿ ಮಾಡದೆ ಕೊಂಡ ನೆನಪು ಇನ್ನೊಂದು ಮೂಲೆಯಿಂದ ನುಗ್ಗಿ ನಗಾಡಿತು.. ಮಲ್ಟಿಪ್ಲೆಕ್ಸಗಳಲ್ಲಿ ದುಡ್ಡಿನ ಮುಖ ನೋಡದೆ ಕೊಳ್ಳುವ ಸಿನಿಮಾ ಟಿಕೇಟು ವಿಸಲ್ ಹೊಡೆಯಿತು.. ಹೀಗೇ ಇನ್ನೂ ಏನೇನೋ..

ತಿರುಗಿ ನೋಡಿದರೆ ಕೃಷ್ಣ ಬಲರಾಮರಂತೆ ಅವರಿಬ್ಬರೂ ಅಲ್ಲೆ ಹತ್ತಿರದಲ್ಲಿ ಯಾರೋ ನಿಲ್ಲಿಸಿದ್ದ ಹೋಂಡಾ ಬೈಕಿನಕನ್ನಡಿಯಲ್ಲಿ ವಿಧವಿಧದ ಮುಖಭಂಗಿಗಳನ್ನ ಮಾಡುತ್ತಾ ನಗಾಡುತ್ತಿದ್ದರು.ಹತ್ತಿರ ಹೋದೆ.ಸ್ವಲ್ಪ ಹೆದರಿಕೊಂಡ ಇಬ್ಬರ ನಗೆಹೂಗಳೂ ಭಯದ ಎಲೆ ಮರೆ ಹೊಕ್ಕವು, ನಾನು ತೆಗೆದಿಟ್ಟುಕೊಂಡಿದ್ದ ಐದೈದು ರೂಪಾಯಿಗಳನ್ನ ಅವರಿಬ್ಬರ ಮುಂದಿಟ್ಟೆ. ಇನ್ನೇನು ಅಲ್ಲಿಂದ ಓಡಬೇಕೆಂದು ತಯಾರಾಗಿದ್ದವರ ಕತ್ತಲಮುಖಗಳಲ್ಲಿ ಬಿದಿಗೆಯ ಬಿಂಬದಂತದೇನೋಮೂಡುತ್ತಿದ್ದರೆ, ಭಯದ ಎಲೆ ಸರಿದಾಡಿ ನಗೆಹೂಗಳ ಒಂದೊಂದೇ ಎಸಳು ಅರಳತೊಡಗಿದವು. ಸಂಜೆಗತ್ತಲು ರಾತ್ರಿಯೊಳಗೆ ಇಳಿಯುತ್ತಿದ್ದರೆ, ಬೀದಿ ತುಂಬಾ ಬೆಳಕಿನ ಓಕುಳಿ. ಮತ್ತೆ ಮಾತಿಲ್ಲದ ಜೊತೆನಡಿಗೆ.

ದೂರದಲ್ಲಿ ನಿಲ್ಲಿಸಿದ್ದ ಗಾಡಿ ಹತ್ತಿ, ಮನೆಯ ದಾರಿ ಹಿಡಿದರೆ, ಅದೇ ರಸ್ತೆ ಬದಿಯ ಸಾಮ್ರಾಜ್ಯದ ರಾತ್ರಿಯ ನೋಟ.. ಪುಟ್ಟ ಪುಟ್ಟ ಲ್ಯಾಂಟರ್ನ್ ದೀಪಗಳು ತೆರೆದ ಬಾಗಿಲಿನಮನೆಯೊಳಗಣ ಕತ್ತಲೆಯನ್ನ ಮೆತ್ತಗೆ ಹೊರತಳ್ಳಿ ಹೊರಗಿನ ಗಂವ್ವೆನ್ನುವ ಕತ್ತಲೆಯ ಜೊತೆಯಿರು ಅಂತ ನೂಕುತ್ತಿದ್ದವು. ಹೊರಗೆ ಬೀಸುವ ಕುಳಿರ್ಗಾಳಿ ಬಾಗಿಲು ತೆರೆದೇ ಇದ್ದರೂ ಒಳಗಿನ ಜೀವಗಳ ಬೆಚ್ಚಗಿನ ಮೂಲೆಯನ್ನ ಬಳಸಲಾಗದೆ ಹೊಸ್ತಿಲಲ್ಲೇ ಸುಳಿಯುತ್ತಿತ್ತು. ಗಾಡಿಯಲ್ಲಿ ಅವನ ಹಿಂದೆ ಕುಳಿತ ನಾನು ಚಳಿಯಾಗಿ ನಡುಗುತ್ತ ಅವನ ಬೆನ್ನು ಬಳಸಿದೆ.. ಮನೆಯೊಳ ಹೊಕ್ಕರೆ, ಅಲ್ಲಿ ಬೆಣ್ಣೆಕೃಷ್ಣನ ಮುಂದೆ ಅಮ್ಮ ಹಚ್ಚಿಟ್ಟ ಗೋಕುಲಾಷ್ಟಮಿಯ ತುಪ್ಪದ ದೀಪದ ಮಿನುಗುಬೆಳಕು.