ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ

ಎನ್. ಎಸ್. ಶ್ರೀಧರ ಮೂರ್ತಿ ಕನ್ನಡ ಸಾಹಿತ್ಯ ಲೋಕ, ಸಂಗೀತ ಲೋಕ ಹಾಗೂ ಬೆಳ್ಳಿಪರದೆಯ ನಂಟು ಹೊಂದಿದವರು. ಈ ಮೂರು ಅವರ ನಿರಂತರ ಕರ್ಮಭೂಮಿಗಳು. ಈ ಮೂರು ಕ್ಷೇತ್ರಗಳ ಬಗ್ಗೆಯೂ ಮಾತನಾಡಬಲ್ಲ ಸಾರ್ಮರ್ಥ್ಯವಿದೆ. ಒಂದೇ ಚೂಯಿಂಗ ಗಮ್ ಬಾಯಲಿಟ್ಟುಕೊಂಡು ಅಗಿದುದ್ದನ್ನೆ ಅಗಿಯುವ ಜಾಯಮಾನ ಅವರದಲ್ಲ. 2020ರಲ್ಲಿ ಬರೆದ ‘ನಾದದ ನೆರಳು’ ಕಳೆದ ವರ್ಷ ಅವರು ಬರೆದ ‘ಪ್ರೊ. ಎಲ್.ಎಸ್. ಶೇಷಗಿರಿರಾವ್- ಬದುಕು ಬರಹ’ ಪುಸ್ತಕ ಮತ್ತು ಈ ವರ್ಷದ ‘ಅಂದದ ಹೆಣ್ಣಿನ ನಾಚಿಕೆ’, ಹೀಗೆ ವೈವಿಧ್ಯಮಯ ಬರೆಹಗಳ ಮೂಲಕ ಬಹುಮುಖ ವಿಷಯ ಜ್ಞಾನವನ್ನು ಹೊಂದಿದವರು. “ಅಂದದ ಹೆಣ್ಣಿನ ನಾಚಿಕೆ” ಪುಸ್ತಕದ ಹಲವು ಪ್ರಬಂಧಗಳನ್ನು ಅದಾಗಲೇ ಟಿವಿ9 ಪೋರ್ಟಲ್‌ನಲ್ಲಿ ಓದಿದ್ದೆ. ಪುಸ್ತಕ ಬಂದಾಗ ಓದಲು ವಿಶ್ವಾಸದಿಂದ ಕಳಿಸಿದ್ದರು. ಎನ್. ಎಸ್. ಶ್ರೀಧರ ಮೂರ್ತಿಯವರಲ್ಲಿ ಕಲಾ ಸೋಪಜ್ಞತೆ ಇದೆ. ಸಿನೇಮಾ ಜಗತ್ತಿನ ರೋಚಕ ಕಥೆಗಳ ಅಡಿಯಲ್ಲಿ ಉಸಿರುಗಟ್ಟಿ ನಿಂತ ತೀವ್ರ ನೋವಿನ ಹೃದಯದ ಮಿಡಿತವನ್ನು ಆ ಕಲೆ ಇಲ್ಲಿ ಅಕ್ಷರರೂಪಕ್ಕಿಳಿಸಿದೆ. ಹಾಗೆಂದು ಅವರು ಸಿನೆಮಾ ಜಗತ್ತಿಗೆ ಸೀಮಿತರಾದವರಲ್ಲ. ಅದವರ ಪೂರ್ಣ ಪ್ರಮಾಣದ ಕ್ರೇತ್ರವಲ್ಲ. ಒಂದು ಭಾಗ ಮಾತ್ರ. ಶಂಕರ್ ನಾಗ್ ಪರಿಚಯವಾದ ದಿನಗಳಲ್ಲಿ ಶ್ರೀಧರಮೂರ್ತಿಯವರಿಗೆ ಒಂದು ಮಾತು ಹೇಳಿದ್ದರಂತೆ “ನಿಮ್ಮಂತಹ ಸೂಕ್ಷ್ಮ ಮನಸ್ಸಿನವರಿಗೆ ಈ ಸಿನೆಮಾ ಜಗತ್ತು ಪೂರ್ಣವಾಗಿ ಅರ್ಥವಾಗಲಾರದು. ಹಾಗಾಗಿ ಇದು ನಿಮಗೆ ಪಕ್ಕದ ಮನೆಯಾಗಿಯೇ ಇರಲಿ, ಮನೆಯಾಗೋದು ಬೇಡ. ಯಾಕೆಂದರೆ ಆ ಜಗತ್ತು ಬಹಳ ಅನ್ ಸರ್ಟನ್” ಎಂದಿದ್ದರಂತೆ.

(ಎನ್. ಎಸ್. ಶ್ರೀಧರ ಮೂರ್ತಿ)

ಎನ್. ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳನ್ನು ಅಲ್ಲಲ್ಲಿ ಓದಿದ ನಾನು ಅವರ ಅದ್ಭುತ ನೆನಪಿನ ಶಕ್ತಿಯ ಬಗ್ಗೆ ‘ಇವುಗಳನ್ನೆಲ್ಲಾ ಟಿಪ್ಪಣಿ ಮಾಡಿಟ್ಟುಕೊಂಡು ಬರೆಯುವಿರೋʼ? ಎಂದು ಕೇಳಿದ್ದೆ. ಅದಕ್ಕವರು ‘ಹಾಗೇನೂ ಇಲ್ಲ, ನೆನಪಾದಾಗ ಇಂತಹವರ ಬಗ್ಗೆ ಬರೆಯಬೇಕೆಂದುಕೊಂಡಾಗ ಅವರೊಂದಿಗಿನ ಒಡನಾಟದ ಪ್ರಸಂಗಗಳು, ಘಟನೆಗಳು, ಕೇಳಿದ ಸಂಗತಿಗಳನ್ನು ನೆನಪಿಸಿಕೊಂಡರೆ ರೀಲಿನಂತೆ ಬಿಚ್ಚಿಕೊಳ್ಳುತ್ತವೆ, ಅವುಗಳನ್ನೆ ದಾಖಲಿಸುತ್ತಾ ಹೋಗುತ್ತೇನೆ, ಅಗತ್ಯದ ಮಾಹಿತಿಗಳು ಬೇಕೆನ್ನಿಸಿದಾಗ ಅವರನ್ನೋ ಅಥವಾ ಅವರ ಸ್ನೇಹಿತರನ್ನೋ ಕೇಳಿ ಪಡೆದು ದಾಖಲಿಸುತ್ತೇನೆʼ ಎಂದಿದ್ದರು.

ಹಾಗಾಗಿ ಇಲ್ಲಿರುವ ಪ್ರಬಂಧಗಳು ಚಿತ್ರರಂಗದ ಒಟ್ಟಾರೆ ಒಳಹೊರಗನ್ನು ತೆರೆದಿಡುತ್ತವೆ. ಸಿನೆಮಾ ಸಾಹಿತ್ಯ ಎಂಬ ಕ್ಲುಪ್ತ ಅಭಿಪ್ರಾಯಕ್ಕೆ ಬೇರೆಯದೇ ಆದ ಆಯಾಮವೂ ಇದೆ ಎಂಬುದಕ್ಕೆ ‘ಸಿನೆಮಾ ಕ್ಷೇತ್ರದ ಗಾಸಿಪ್, ಗ್ಲಾಮರ್ ಪರದೆಯನ್ನು ಸರಿಸಿ ಕಲೆಯ ನೆಲೆಯಲ್ಲಿ ನೋಡುವ ಹಂಬಲ ನನ್ನದುʼ ಎಂದು ಸ್ವತಃ ಶ್ರೀಧರಮೂರ್ತಿ ಹೇಳಿಕೊಂಡಿದ್ದಾರೆ. ನಮ್ಮ ಕನಸಿನ ಹೀರೋ ಹೀರೋಯಿನ್‌ಗಳ, ಅಂದಕಾಲತ್ತಿಲ್ ನಟ ಭಯಂಕರರ, ಸಂಗೀತ ದಿಗ್ಗಜರ ಜೊತೆಗಿನ ಲೇಖಕರ ಒಟನಾಟ, ಅವರಿಂದಲೇ ಕೇಳಿ ತಿಳಿದ ಸಂಗತಿಗಳು, ಇವುಗಳೇ ಇಲ್ಲಿಯ ಪ್ರಬಂಧದ ವಿಷಯವಸ್ತುಗಳು. ಯಾವ ಇಸಂಗಳಿಲ್ಲದೇ, ಓಲೈಕೆಗಳ ಹಂಗಿಲ್ಲದೇ ಇಲ್ಲಿಯ ಪ್ರಬಂಧಗಳು ಮೂಡಿರುವುದು ಇವುಗಳ ಸತ್ವ. ಅವುಗಳಲ್ಲಿಯ ನಿರೂಪನಾ ಶೈಲಿ ವಿಧಾನದಲ್ಲಿ ಹೊಸತನವಿದೆ. ಕವಿತೆ, ಕಥೆ ಕಾದಂಬರಿಗಳು ಕೊಡುವ ಜೀವನ ಸಂದೇಶಗಳನ್ನು ಈ ಸಿನೆಮಾ ಜಗತ್ತಿನ ರೂಪಕಗಳಲ್ಲಿ ಹಿತವಾಗುವಂತೆ, ಮನಕ್ಕಿಳಿಯುವಂತೆ ಶ್ರೀಧರ ಮೂರ್ತಿಯವರು ಬರೆಯುತ್ತಾರೆ.

ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.

ತಮ್ಮ ಬದುಕಿನ ಸರ್ವಸ್ವವೇ ಆಗಿದ್ದ ತಾಯಿ ನಿಧನರಾದಾಗ ಬಹುಭಾಷಾ ತಾರೆ ಜ್ಯೂಲಿಲಕ್ಷ್ಮೀ ವಿಪರೀತ ಅತ್ತು ಬಳಲಿದ್ದರಂತೆ. ಆಗ ನೆರೆದವರಲೊಬ್ಬರು “ಸಿನೆಮಾದವರಲ್ಲವೇ? ಅತ್ತು ಅತ್ತು ಅನುಭವ ಚೆನ್ನಾಗಿರುತ್ತದೆ” ಎಂದಿದ್ದರಂತೆ. ಅದಕ್ಕೆ ಲಕ್ಷ್ಮೀ “ನಾವು ಸಿನೆಮಾದವರು ನಿಜ. ಅದು ನಮ್ಮ ವೃತ್ತಿ. ಹಾಗೆಂದು ನಮಗೆ ಖಾಸಗಿ ಬದುಕು ಇರಲೇಬಾರದೇ? ನಮ್ಮ ಖಾಸಗಿ ಬದುಕನ್ನು ಕೆದಕಿ ಚ್ಯೂಯಿಂಗ್ ಗಂ ತರಹ ರೋಚಕ ಕಥೆಗಳನ್ನು ಮಾಡಬಹುದು. ಅದು ಮಾಧ್ಯಮದಲ್ಲಿ ಯಶಸ್ಸನ್ನು ತಂದುಕೊಡಬಹುದು. ಆದರೆ ನಮ್ಮ ಮೇಲೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಚಿಂತಿಸಬೇಕಲ್ಲವೇ?” ಎಂದಿದ್ದರಂತೆ.

ನಮ್ಮ ಕನಸಿನ ಹೀರೋ ಹೀರೋಯಿನ್‌ಗಳ, ಅಂದಕಾಲತ್ತಿಲ್ ನಟ ಭಯಂಕರರ, ಸಂಗೀತ ದಿಗ್ಗಜರ ಜೊತೆಗಿನ ಲೇಖಕರ ಒಟನಾಟ, ಅವರಿಂದಲೇ ಕೇಳಿ ತಿಳಿದ ಸಂಗತಿಗಳು, ಇವುಗಳೇ ಇಲ್ಲಿಯ ಪ್ರಬಂಧದ ವಿಷಯವಸ್ತುಗಳು. ಯಾವ ಇಸಂಗಳಿಲ್ಲದೇ, ಓಲೈಕೆಗಳ ಹಂಗಿಲ್ಲದೇ ಇಲ್ಲಿಯ ಪ್ರಬಂಧಗಳು ಮೂಡಿರುವುದು ಇವುಗಳ ಸತ್ವ. ಅವುಗಳಲ್ಲಿಯ ನಿರೂಪನಾ ಶೈಲಿ ವಿಧಾನದಲ್ಲಿ ಹೊಸತನವಿದೆ.

ಕನ್ನಡ ಬೆಳ್ಳಿತೆರೆಯ ಮಿನುಗುತಾರೆ ಕಲ್ಪನಾರ ಜೀವನದ ಘಟನೆಗಳು, ಅವರ ಅತಿರೇಕದ ಕೆಲವು ವರ್ತನೆಗಳನ್ನು ಭಿನ್ನವಾಗಿ ಬರೆದು ಆಕೆಯೊಬ್ಬ ಅಸೆಂಟ್ರಿಕ್ ಆಗಿದ್ದಳು ಎಂಬಂತೆ ಬರೆದ ಸಿನೆಮಾ ಸಾಹಿತ್ಯ ಓದಿದ್ದ ನಮಗೆ ಆಕೆಯ ಪ್ರತಿ ವರ್ತನೆಯಲ್ಲೂ ಉದಾಹರಿಸುವುದಾದರೆ ಸಂಜೆ ಶೂಟಿಂಗ್‌ ಒಪ್ಪದ ಕಲ್ಪನಾ ಅವರ ನಿರ್ಧಾರದ ಹಿಂದೆ ಸಿನೆಮಾ ಜಗತ್ತಿನ ಕಪ್ಪುಮುಖಗಳ ನಿಯಂತ್ರಿಸುವ ಮತ್ತು ಅದರಿಂದಾಗಬಹುದಾದ ಎಡವಟ್ಟುಗಳಿಂದ ಬಚಾವಾಗುವ ಉದ್ದೇಶವಿತ್ತೆಂಬ ಕಲ್ಪನೆ ಇರಲಿಲ್ಲ. ಇಂತಹವುಗಳ ಬಗ್ಗೆ ದಾಖಲಾಗುವ ವಿಚಾರವೇನೆಂದರೆ ನಟಿ ಮಣಿಗಳ ಧಿಮಾಕು ಎಂತಲೇ ಚಿತ್ರಿಸಲಾಗುತ್ತದೆ. ಇಲ್ಲಿಯ ಕೆಲವು ಸೂಕ್ಷ್ಮಗಳು ಅದೆಷ್ಟೋ ಸಂದರ್ಭಗಳಲ್ಲಿ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ‘ಕಾಸ್ಟಿಂಗ್ ಕ್ಯಾಚ್ʼ ಕೂಡಾ ಈ ಕ್ಷೇತ್ರದಲ್ಲಿ ಕಲಾವಿದೆಯರ ದೋಚುವ ಇನ್ನೊಂದು ಮುಖವಾಡ.

“ತನುವು ಮನವೂ ಇಂದು ನಿಂದಾಗಿದೆ” ಬರಹ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತದೆ. ಹುಡುಗರಿಗಿಂತ ಹುಡುಗಿಯರನ್ನು, ನಾಯಕರಿಗಿಂತ ನಾಯಕಿಯರನ್ನು ಕಾಡುವ ಬಾಡಿ ಶೇಮಿಂಗ್ ಆರತಿ, ಕಲ್ಪನಾರಂತಹ ಹಿರಿಯ ಕಲಾವಿದೆಯರಿಂದ ಹಿಡಿದು ಇಂದಿನ ದೀಪಿಕಾ ಪಡಕೋಣೆಯವರೆಗೂ ದಟ್ಟವಾಗಿ ಕಾಡುತ್ತವೆ. ಗಾಸಿಪ್‌ಗಳಿಗೆ ಕಾರಣವಾಗುತ್ತವೆ. ಇನ್ನು ರಿಯಾಲಿಟಿ ಶೋಗಳಲ್ಲಿ ಹಾಡುಗಾರ ಅಥವಾ ಹಾಡುಗಾರ್ತಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಸಾಲದು, ನೋಡಲು ಆಕರ್ಷಕವಾಗಿರಬೇಕು ಎಂಬ ಸಂಗತಿಯನ್ನು ಲೇಖಕರು ತಿಳಿಸುತ್ತಾರೆ. ಇದೊಂದು ಕಲೆ ಅನ್ನುವುದಕ್ಕಿಂತ ಕಲೆಯ ವ್ಯಾಪಾರ.

ಪಂಪ ಭಾರತದಲ್ಲಿನ ರೂಪಕವೊಂದು ನಾಗರಹಾವು ಸಿನೆಮಾದ ಹಾಡಿನ ನುಡಿಯಾಗಿ ಪ್ರಸಿದ್ಧವಾದದ್ದನ್ನು ಉಲ್ಲೇಖಸುತ್ತಾ ಆ ರೂಪಕವನ್ನೆ ಪ್ರಬಂಧವಾಗಿಸಿ “ಅಂದದ ಹೆಣ್ಣಿನ ನಾಚಿಕೆ” ಬರೆದು ಆಶ್ಚರ್ಯ ಮೂಡಿಸುತ್ತಾರೆ. ಆತ್ಮ ಗೌರವಕ್ಕಿಂತ ಮಿಗಿಲಾದ್ದು ಯಾವುದು ಇಲ್ಲ ಎಂಬುದನ್ನು ಹೇಳಹೊರಟ ಶ್ರೀಧರ ಮೂರ್ತಿಯವರು ‘ಹಿಂಡ ಬಾರದು ದುಂಡು ಮಲ್ಲಿಗೆಯ ದಂಡೆಯನ್ನುʼ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಪದಬಳಕೆಯಲ್ಲೂ ಕಾಣುವ ಅವರ ಕಲಾತ್ಮಕತೆ ಅನನ್ಯ. ಇದಕ್ಕೆ ಸಂವಾದಿಯಾಗಿ ಬರುವ ಇನ್ನೊಂದು ಲೇಖನ ‘ಬರೆದು ಜೀವಿಸಬಹುದೇ?’ ಬರೆದು ಜೀವಿಸುವವರು ಎಂದು ಕೊಂಕಾಡುವ ಜನರಿಗೆ ಪರೋಕ್ಷ ಸವಾಲಿನಂತಿದೆ ಈ ಪ್ರಬಂಧ. ಒಂದು ಬರಹ ಹಣ ಪಡೆದು ಬರೆದರೂ, ಇಲ್ಲ ಕೇವಲ ಆತ್ಮ ಸಂತೋಷಕ್ಕೆ ಬರೆದರೂ ಅದರ ಗುಣಮಟ್ಟದ ಮೇಲೆ ಯಾವ ಪರಿಣಾಮ ಬೀರದು ಎಂಬುದನ್ನು ಸುಂದರವಾಗಿ ನಿರೂಪಿಸುತ್ತಾರೆ. ‘ಏರಿ ಏರಿಯೊಳು ಅಂತರಂಗದ ಸಿರಿಯ ಜಗಕೆ ತೋರಿʼ ಆರ್ ಎನ್ ಜಯಗೋಪಾಲ, ಸಿ ಅಶ್ವತ್ಥ್, ನರೇಂದ್ರ ಬಾಬು ಮುಂತಾದ ಮಹನೀಯರ ಅಂತರಂಗದ ಸಿರಿಯನ್ನು ತೋರುವ ಪ್ರಸಂಗಗಳನ್ನು ಓದಿಯೇ ಆನಂದಿಸಬೇಕು.

ಪರರ ಸಾವನ್ನೂ ಸಂಭ್ರಮಿಸುವ ಜನರ ಸ್ವಭಾವ ವಿಡಂಬನೆಯ ಜೊತೆ ಹೆಸರಾಂತ ವ್ಯಕ್ತಿಗಳ ಸಾವನ್ನೂ ದಾಖಲಿಸಬೇಕಾದ ತುರ್ತಿಗೆ ಒಳಗಾಗಿರುವ ಪತ್ರಕರ್ತನೊಬ್ಬ ಆ ಸಂದರ್ಭಗಳಲ್ಲಿ ಎದುರಿಸುವ ಮುಜುಗರಗಳು, ನೋವು ಹೇಗಿರುತ್ತದೆ ಎಂಬುದನ್ನು ‘ಸಾವು ತನ್ನ ತಣ್ಣಗಿನ ಕೈ ಸವರಿದಾಗ’ ಲೇಖನದಲ್ಲಿ ಎಸ್‍ಪಿಬಿ, ಪಿಬಿಎಸ್ ಡಾ. ರಾಜ್ ಮುಂತಾದವರ ಸಾವಿನ ಸಂದರ್ಭಗಳ ನೆನೆದು ಬರೆಯುತ್ತಾರೆ. ‘ಅಕಾಲದಲ್ಲಿ ಆರದಿರಲಿ ಬೆಳಕು’, ‘ಹೇಳಿ ಹೋಗಬಹುದಿತ್ತೇ ಕಾರಣ’ ಕಲಾ ಜಗತ್ತಿನ ಶ್ರೇಷ್ಠರ ಸಾವು ಮೂಡಿಸುವ ಶೂನ್ಯ ಮನಸ್ಥಿತಿಯನ್ನು ಸಾವಿನ ಘೋರಮುಖವನ್ನು ಪರಿಚಯಿಸುತ್ತದೆ. ಆದರೆ ಯಾವ ಬರಹವೂ ಭಾರವೆನಿಸುವುದಿಲ್ಲ.

ಬರೆದ ಭಾರಕ್ಕೆ ಬರಹವೇ ಹೊರೆಯಾದಂತೆ ಎನ್ನಿಸುವ ಸೋ ಕಾಲ್ಡ್ ಅಕಾಡೆಮಿಕ್ ವಲಯದ ಬರಹಗಳು ಕೆಲವೊಮ್ಮೆ ಪಂಡಿತ ವರ್ಗಕ್ಕೂ ಹೊರೆ ಎನಿಸುವುದಿದೆ. ತಮ್ಮ ಮೂಗಿನ ನೇರಕ್ಕೆ ಬರೆದು ಅದರಾಚೆ ಒಂದಿಷ್ಟು ಜರುಗದ ವಿಮರ್ಶಕರು ನಮ್ಮಲ್ಲಿದ್ದಾರೆ. ಅಂತಹ ಬೋರಿಂಗ್ ಅಕಾಡೆಮಿಕ್ಸ್ ಜೊತೆಗೆ ಕವಿತೆಗಳ ಬರೆದು ಬರೆದು ಗೋಪುರ ಕಟ್ಟಿದ ಕವಿ ಪುಂಗವರಿದ್ದಾರೆ. ಸಿನೇಮಾ ಜಗತ್ತಿನ ಬಗ್ಗೆ ಕಲಾವಿದರ ಖಾಸಗಿ ಬದುಕಿನ ಕುರಿತು ಯದ್ವಾತದ್ವಾ ಬಣ್ಣಿಸಿ ಬರೆವ ಸಿನೆಮಾ ಸಾಹಿತಿಗಳಿದ್ದಾರೆ. ಆ ಎಲ್ಲ ಅತಿರೇಕದ ನಡುವೆ ಆ ಜಗತ್ತಿನ ಹಲವರ ಅನುಭವಗಳನ್ನು, ಘಟನೆಗಳನ್ನು ಶ್ರೀಧರ ಮೂರ್ತಿಯವರು ವಿಶಿಷ್ಟವಾಗಿ ಬರೆಯುತ್ತಾರೆ. ಸಿನೆಮಾ ಸಾಹಿತ್ಯ ಎಂದರೆ ‘ಔಟಕಾಸ್ಟ್‌ ಲಿಟರೇಚರ್’ ಎನ್ನುವ ಜಾಯಮಾನ ಬದಲಾಗುವ ಹಾಗೇ ಇಲ್ಲಿಯ ಬರಹಗಳು ಹೊಸದಾದ ಒಂದು ಪರಂಪರೆಯನ್ನು ಹಾಕಿಕೊಟ್ಟಿವೆ. ಹೆಸರಾಂತ ಕಥೆಗಾರರಾದ ಕೆ. ಸತ್ಯನಾರಾಯಣ ಅವರು ‘ಸೋಗಿನ ಬುದ್ಧಿಜೀವಿಗಳು ಸುಳ್ಳುಸುಳ್ಳೇ ಹಬ್ಬಿಸಿರುವ ಈ ಕೃತಕ ವಿಭಜನೆಯನ್ನು ಶ್ರೀಧರ ಮೂರ್ತಿ ಮಾನ್ಯ ಮಾಡದಿರುವುದು ನನಗೆ ತುಂಬಾ ಸಂತೋಷ ನೀಡಿತು’ ಎಂದಿದ್ದಾರೆ ಮುನ್ನುಡಿಯಲ್ಲಿ. ಬರವಣಿಗೆ ಎಂದರೆ ಬದುಕಿಗೆ ಮೂಲವಾಗಿರುವ ನಮ್ಮೆಲ್ಲರ ಅನುಭವಗಳ ಮೂರ್ತ ಅಥವಾ ಅಮೂರ್ತ ಪರಿಕಲ್ಪನೆ. ಸಾಹಿತ್ಯ ಯಾವುದೇ ಆಗಿರಲಿ ಅದರ ಮೂಲ ಗುರಿ ಜನರ ಶ್ರೇಯಸ್ಸನ್ನು ಸಾಧಿಸುವುದು ಮತ್ತು ಆಪೇಕ್ಷಿಸುವುದು. ಈ ನಿಟ್ಟಿನಲ್ಲಿ ಇಲ್ಲಿಯ ಪ್ರಬಂಧಗಳು ಬಹುಮುಖ್ಯವಾಗುತ್ತವೆ.