ಎರಡುಮೂರು ದಶಕಗಳ ಹಿಂದೆ ಯಾರೂ ಈ ಪದಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಪೌಷ್ಟಿಕತೆ ಹಾಗೂ ಕ್ಯಾಲೋರಿಗಳ ಲೆಕ್ಕಚಾರವಿದ್ದರೂ ನಮಗೆ ಏನ್ನನ್ನು ತಿನ್ನಬೇಕು ಎಂಬುದೇ ಗೊತ್ತಿಲ್ಲ. ತಾನು ವಿಜ್ಞಾನಿ ಅಥವಾ ಪೌಷ್ಟಿಕ ನಿಪುಣವಿಲ್ಲದಿದ್ದರೂ ಕುತೂಹಲಕ್ಕಾಗಿ ಆರೋಗ್ಯ ಮತ್ತು ಡಯೆಟ್ ಬಗ್ಗೆ ಇರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ.
ಸೀಮಾ ಸಮತಲ ತಾವು ಓದಿದ ಪುಸ್ತಕಗಳ ಕುರಿತು ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ.

 

ಚಿಕ್ಕವಳಿದ್ದಾಗ ಮನೆಯಲ್ಲಿ ತಿಂಡಿಯ ಡಬ್ಬ ತಡಕಾಡುವುದೆಂದರೆ ಸಂಭ್ರಮ. ಕಿಚನ್‍ ನಲ್ಲಿ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡು ಅಮ್ಮ ಅಡುಗೆ ಮಾಡುತ್ತಿರುವ ದೃಶ್ಯ ಅಲ್ಪಸ್ವಲ್ಪ ನೆನಪಿದೆ. ಏರಿಯಲ್ ವ್ಯೂವ್‍ ನಲ್ಲಿ ಕುದಿಯುತ್ತಿರುವ ಸ್ವಾದಿಷ್ಟ ಪದಾರ್ಥ ನೋಡುವ ಮಜ ಬೇರೆಯೇ. ಬೇಸಿಗೆ ರಜೆಯೆಂದರೆ ಸೋದರಅತ್ತೆಯ ಮನೆ. ಯಾವಾಗ ಬೇಕಾದರೂ ಏನು ಬೇಕಾದರೂ ತಿನ್ನುವ ಫುಲ್ ಫ್ರೀಡಂ. ಅರಿಶಿಣ ಇಲ್ಲದ ಮಂಡಕ್ಕಿ ಒಗ್ಗರಣೆಗೆ ‘ನಮ್ ಮನೇಲಿ ಹಿಂಗೆ ಮಾಡಲ್ಲ’ ಅಂತ ಹೇಳಿ ಆ ಕ್ಷಣವೇ ತಟ್ಟೆಯಲ್ಲಿ ಅರಿಶಿಣ ಕಲೆಸಿಕೊಂಡು ತಿಂದದ್ದು ಅತ್ತೆ ಈಗಲೂ ನೆನಪಿಸುತ್ತಾರೆ.

ಕಾಲೇಜ್ ಟೈಮ್‍ ನಲ್ಲಿ ನನ್ನ ಊಟದ ಬ್ಯಾಗ್ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಭಾರವಿರುತ್ತಿತ್ತು. ಜಾಂಡೀಸ್ ಆದ ಸಮಯದಲ್ಲಿ ಗಂಟೆಗೊಮ್ಮೆ ತಿನ್ನುವಂತೆ ಅಮ್ಮ ತಯಾರು ಮಾಡುತ್ತಿದ್ದ ಸಾಲು ಸಾಲು ಡಬ್ಬಿಗಳನ್ನು ನೋಡಿ ಅಪ್ಪ ತನಗೂ ಕಾಯಿಲೆ ಬರಬಾರದೆ ಎಂದು ಅಸೂಯೆ ಪಟ್ಟಿದ್ದರು. ಹಾಸ್ಟೆಲ್‍ ನಲ್ಲಿದ್ದಾಗ ಪ್ರತೀಸಲ ತಪ್ಪದೆ ನಂಗಿಷ್ಟವಿದ್ದ ಊಟತಿಂಡಿಗಳ ದೊಡ್ಡ ಪಟ್ಟಿ ನಾನು ಮನೆ ಸೇರುವ ಮೊದಲೇ ಅಮ್ಮನಿಗೆ ತಲುಪುತ್ತಿತ್ತು. ಆ ರೂಢಿ  ಈಗಲೂ ಜಾರಿಯಲ್ಲಿದೆ. ಆದರೆ ಕೊಂಚ ಬದಲಾವಣೆಯಾಗಿದೆ; ತವರುಮನೆಗೆ ಬಂದಾಗ ಬೆರಳಣಿಕೆಯ ಐಟಮ್‍ ಗಳನ್ನು ಬಿಟ್ಟು ಬೇರೆ ಏನಾದರು ಮಾಡಬಹುದಾದ ಸ್ವಾತಂತ್ರ್ಯ ಈಗ ಅಮ್ಮನಿಗಿದೆ. ಇದೆಲ್ಲ ಸಾಮಾನ್ಯ ‘ಫುಡ್ ಜರ್ನಿ’ ಅನಿಸಬಹುದು. ಆದರೆ ಇದು ಖಂಡಿತ ಹಾಗಲ್ಲ. ಈ ಪಯಣದಲ್ಲಿ ಸಾಕಷ್ಟು ಕಲಿತಿದ್ದೇನೆ. ಇಷ್ಟವಿರುವುದನ್ನು ತಿನ್ನುವ ಅಥವಾ ಅಡುಗೆ ಮಾಡುವುದರ ಆಚೆಗೆ ಹೊಸದೊಂದು ಆಹಾರದ ಜಗತ್ತಿಗೆ ನನ್ನನ್ನು ನಾನು ಪರಿಚಯ ಮಾಡಿಕೊಳ್ಳುತ್ತಿದೇನೆ. ಓದಿದ್ದು, ಕಂಡಿದ್ದು, ಅನುಭವಸಿದ್ದು, ಆಸ್ವಾದಿಸಿದ್ದು ಸಾಕಷ್ಟಿದೆ. ಪ್ರತಿಯೊಂದು ಆಹಾರ ಸಂಸ್ಕೃತಿ ತನ್ನದೇ ಆದ ವಿಶಿಷ್ಟತೆಯಿಂದ ಸೋಜಿಗ ಹುಟ್ಟುಹಾಕಿದೆ. ಅದೊಂದು ಅದ್ಭುತ ಜ್ಞಾನ. ಆಹಾರವಿರಲಿ ಅನುಭವಿರಲಿ ಹಂಚಿಕೊಳ್ಳುವುದರಲ್ಲಿ ಭಾರಿ ಸುಖವಿದೆ.

ಆಹಾರ ನಿಯಮಗಳು

2020ರ ಕೊನೆಯ ತಿಂಗಳಲ್ಲಿ ಕೆ.ಸಿ ರಘು ಎಂಬುವವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಹಾರದ ಕುರಿತು ಚೆನ್ನಾಗಿ ಮಾತನಾಡುತ್ತಾರೆ. ಏನನ್ನು, ಹೇಗೆ ಹಾಗು ಯಾಕೆ ಸೇವಿಸಬೇಕು ಎಂಬುದರ ನಮ್ಮ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಬಲು ಶಿಸ್ತಿನ ಮನುಷ್ಯ ಆರೋಗ್ಯಕರ ಲೈಫ್‍ಸ್ಟೈಲ್ ಇರಬೇಕೆಂದರೆ ಅಂತಹವರ ಜೊತೆ ಮಾತುಕತೆ ಆಗಲೇಬೇಕು ಎಂದು ಬಹಳಷ್ಟು ಕೇಳಿದ್ದೆ. ಲಾಕ್‍ಡೌನ್‍ ನಲ್ಲಿ ಲಂಗುಲಗಾಮ್ ಇಲ್ಲದೆ ಸಿಕ್ಕಿದೆಲ್ಲ ತಿಂದು ದೇಹ ಅಳತೆಗೆ ಸಿಗದೆ ಹೋಗಿದ್ದು. ಆರೋಗ್ಯಕರ ದಾರಿ ತೋರಿಸುವವರೊಬ್ಬರು ಬೇಕಾಗಿದ್ದರು. ನಂಬರ್ ಗಿಟ್ಟಿಸಿಕೊಂಡು ಕರೆಯ ಮೂಲಕ ಭೇಟಿ ಮಾಡುವ ದಿನ, ಗಂಟೆ ನಿಗದಿಪಡಿಸಿಕೊಂಡು, ಮನೆ ಹುಡುಕುತ್ತ ಸರಿಯಾದ ಸಮಯಕ್ಕೆ ಅವರ ಮುಂಬಾಗಿಲಲ್ಲಿ ಹಾಜರಾದೆ.

ಮುಗುಳ್ನಗೆಯಿಂದ ಸ್ವಾಗತಿಸಿದರು. ರುಚಿಕರ ಹರಟೆಯಲ್ಲಿ ಸಮಯ ಕಳೆದಿದ್ದು ಗೊತ್ತಾಗಲಿಲ್ಲ. ತಾಜಾ ಹಣ್ಣು, ತರಕಾರಿಗಳನ್ನು ಖರೀದಿಸುವುದು ಒಂದು ಕಲೆ ಎನ್ನುತ್ತಾರೆ ಅವರು. ಇದು ಎಲ್ಲರಲ್ಲಿ ಇರುವುದಿಲ್ಲ ಎಂದೂ ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಉಪ್ಪು ಮತ್ತು ಸಕ್ಕರೆ ನಮ್ಮ ದೇಹಕ್ಕೆ ಸೇರಿಕೊಂಡರೆ ತಡೆಯಲಾರದಂತಹ ಅನಾಹುತಗಳು ಸಂಭವಿಸುತ್ತವೆ. ನಮ್ಮನಮ್ಮ ಶರೀರ ನಮಗೆ ಏನನ್ನೋ ಹೇಳುತ್ತಿರುತ್ತಲೇ ಇರುತ್ತದೆ. ಅದಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಆಸ್ಪತ್ರೆಯ ಸುತ್ತು ಹೊಡೆಯಬೇಕಾಗುತ್ತದೆ. ಇಂತಹದೊಂದು ಗಂಭೀರ ವಿಷಯವನ್ನು ಲವಲವಿಕೆಯಿಂದ, ಉತ್ಸಾಹದಿಂದ ಮತ್ತು ಅಷ್ಟೇ ಎಚ್ಚರಿಕೆಯಿಂದ ಹೇಳುವ ಗುಣ ಬಹಳ ಅಪರೂಪ. ಅದು ರಘು ಸರ್ ಅವರಲ್ಲಿದೆ.

ಇಷ್ಟರಲ್ಲಿ ತಮಾಷೆಯೊಂದು ಜರುಗಿತು. ಅಪಾರ್ಟ್‍ಮೆಂಟ್ ಒಳಗಿನ ಯಾವ ಗೊಡೆಯನ್ನು ಬಿಡದೆ ಸಾಲು ಸಾಲು ಶೆಲ್ಫ್ ಗಳಲ್ಲಿ ರಾಶಿ ರಾಶಿ ಪುಸ್ತಕಗಳನ್ನು ತುಂಬಿಸಿಟ್ಟಿದ್ದರು. ಆ ಸಾಲು ಬೆಡ್‍ರೂಮ್ ತನಕವೂ ಸಾಗಿತ್ತು. ನನ್ನ ಕಿವಿಗಳು ಅವರತ್ತ ಇದ್ದರೆ, ಕಣ್ಣುಗಳು ಪುಸ್ತಕಗಳನ್ನು ಸ್ಕ್ಯಾನ್ ಮಾಡುತ್ತಿದ್ದವು. ಅವರ ಮಾತಿನಲ್ಲಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಒಂದಾದರು ಪುಸ್ತಕದ ಬಗ್ಗೆ ರೆಫರೆನ್ಸ್ ಕೊಡುತ್ತಿದ್ದರು. ಪುಸ್ತಕ ಪ್ರೀತಿ ಕಂಡುಹಿಡಿದರು.

‘ನೋಡಿ ನಾನು ಹೇಳಿದ ಲೇಖಕನ/ಲೇಖಕಿಯ ಕೃತಿ ಇಲ್ಲಿದೆ’ ಎಂದು ಕಪಾಟಿನಿಂದ ಒಂದೊಂದೆ ಪುಸ್ತಕಗಳನ್ನು ತೆಗೆದು ನನಗೆ ಕೊಡಲು ಶುರುಮಾಡಿದರು. ಸುಮಾರು ಆರೇಳು ಬುಕ್ಸ್ ಆದವು. ನಂತರ ‘ಇದನೆಲ್ಲಾ ನೀವು ಓದಲೇಬೇಕು. ತೆಗೆದುಕೊಂಡು ಹೋಗಿ’ ಎನ್ನಬೇಕೇ? ಎಷ್ಟು ನಿರಾಕರಿಸಿದರೂ ಇಟ್ಟುಕೊಳ್ಳಲೇಬೇಕು ಎಂದು ಒತ್ತಾಯಿಸಿದರು. ನಿಮಗೆ ಮತ್ತೆ ಓದಬೇಕಾಗಿ ಬಂದರೆ ಎಂದಾಗ ‘ನಾನು ಇತ್ತೀಚಿಗೆ ಡಿಜಿಟಲ್ ಬುಕ್ಸ್ ಓದುತ್ತಿದ್ದೇನೆ’ ಎಂದು ತಮ್ಮ ಟ್ಯಾಬ್‍ ನಲ್ಲಿದ್ದ ಸಾವಿರಾರು ಪ್ರತಿಗಳನ್ನು ತೋರಿಸಿದರು.

(ಮೈಕಲ್ ಪಾಲನ್)

ಆಹಾರಕ್ಕೆ ರಿಲೇಟ್ ಆಗಿದ್ದ ಹತ್ತಾರು ವಿಷಯಗಳಿಗೆ ನೂರಾರು ಪುಸ್ತಕಗಳು. ತಮ್ಮ ಅಕ್ಷರ ಭಂಡಾರದಿಂದ ಸಣ್ಣ ಭಾಗವನ್ನು ಆಗತಾನೆ ಪರಿಚಯಗೊಂಡವಳ ಜೋಳಿಗೆಯಲ್ಲಿ ಸುರಿದಿದ್ದು ಆಶ್ಚರ್ಯ. ಈ ಮನುಷ್ಯ ಅಸಾಮಾನ್ಯ. ಉದಾರವಾದಿ.

ಖುಷಿಯಿಂದ ಮನೆಗೆ ವಾಪಸಾದೆ. ಅವರು ಕೊಟ್ಟ ಉಡುಗೊರೆಗಳಲ್ಲಿ ಅತ್ಯಂತ ಕಡಿಮೆ ಪುಟಗಳಿದ್ದ ಪುಸ್ತಕವನ್ನು ಸುಮ್ಮನೆ ಒಮ್ಮೆ ಕಣ್ಣಾಡಿಸುವ ಎಂದು ಕೈಗೆತ್ತಿಕೊಂಡೆ. ಕೇವಲ ಅರ್ಧ ಗಂಟೆಯೊಳಗೆ ಓದುವುದು ಮುಗಿದೇ ಹೋಯಿತು. ಅಮೇರಿಕಾದ ಖ್ಯಾತ ಪತ್ರಕರ್ತ ಮೈಕಲ್ ಪಾಲನ್ ಬರೆದ ‘ಫುಡ್ ರೂಲ್ಸ್: ಆನ್ ಈಟರ್ಸ್ ಮ್ಯಾನುವಲ್’. 2009ರಲ್ಲಿ ಪ್ರಕಟಗೊಂಡಿದ್ದು ದ ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಎಂದೆನಿಸಿಕೊಂಡಿದೆ. ಈ ಪುಸ್ತಕ ಇಷ್ಟವಾಗುವ ಮೊಟ್ಟಮೊದಲ ಕಾರಣವೆಂದರೆ, ಒಮ್ಮೆ ಪುಟಗಳನ್ನು ತಿರುವಿಹಾಕಿದರೆ ಎಡದಲ್ಲಿ ತರಕಾರಿ ಇಲ್ಲವೆ ಹಣ್ಣಿನ ಅಥವಾ ಮೀನು ಇಲ್ಲ ಒಂದು ಚಿಕ್ಕ ಚಮಚದ ಚಿತ್ರ, ಬಲದಲ್ಲಿ ಹೆಚ್ಚೆಂದರೆ ಹದಿನೈದು ಸಾಲುಗಳು. ಕಡಿಮೆ ಪದಗಳಲ್ಲಿ ಮನಸ್ಸಿಗೆ ನಾಟುವ ಯುಕ್ತಿಗಳು.

ಪಾಲನ್ ಪ್ರಕಾರ ನಮ್ಮ ಕಾಲದಲ್ಲಿ ತಿನ್ನುವುದು ಜಟಿಲ ಕ್ರಿಯೆಯಾಗಿದೆ. ಇತ್ತೀಚಿಗೆ ನಾವೆಲ್ಲರು ಏನನ್ನು ತಿನ್ನಬೇಕು ಎಂಬುದಕ್ಕೆ ಡಾಕ್ಟರ್, ನ್ಯೂಟ್ರೀಶಿನಿಯನಿಸ್ಟ್, ಡಯಟ್ ಬುಕ್ಸ್, ಹೊಸ ಸಂಶೋಧನೆಯನ್ನು ಬಿತ್ತರಿಸುವ ಸೋಷಿಯಲ್ ಮೀಡಿಯಾ ಮೊರೆ ಹೋಗುತ್ತೇವೆ. ಆಂಟಿಓಸ್ಕಿಡೆಂಟ್ಸ್, ಸ್ಯಾಚುರೇಟೆಡ್ ಫ್ಯಾಟ್, ಒಮೇಗಾ-3 ಫ್ಯಾಟಿ ಆಸಿಡ್ಸ್, ಕಾರ್ಬೊಹೈಡ್ರೇಟ್ಸ್, ಗ್ಲುಟೇನ್ ಎಂಬ ಪದಗಳು ಈಗೀಗ ಪರಿಚಯವಾಗಿರುವುದು. ಎರಡುಮೂರು ದಶಕಗಳ ಹಿಂದೆ ಯಾರೂ ಈ ಪದಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಪೌಷ್ಟಿಕತೆ ಹಾಗೂ ಕ್ಯಾಲೋರಿಗಳ ಲೆಕ್ಕಚಾರವಿದ್ದರೂ ನಮಗೆ ಏನ್ನನ್ನು ತಿನ್ನಬೇಕು ಎಂಬುದೇ ಗೊತ್ತಿಲ್ಲ. ತಾನು ವಿಜ್ಞಾನಿ ಅಥವಾ ಪೌಷ್ಟಿಕ ನಿಪುಣವಿಲ್ಲದಿದ್ದರೂ ಕುತೂಹಲಕ್ಕಾಗಿ ಆರೋಗ್ಯ ಮತ್ತು ಡಯೆಟ್ ಬಗ್ಗೆ ಇರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ.

ಹಾಸ್ಟೆಲ್‍ ನಲ್ಲಿದ್ದಾಗ ಪ್ರತೀಸಲ ತಪ್ಪದೆ ನಂಗಿಷ್ಟವಿದ್ದ ಊಟತಿಂಡಿಗಳ ದೊಡ್ಡ ಪಟ್ಟಿ ನಾನು ಮನೆ ಸೇರುವ ಮೊದಲೇ ಅಮ್ಮನಿಗೆ ತಲುಪುತ್ತಿತ್ತು. ಆ ರೂಢಿ  ಈಗಲೂ ಜಾರಿಯಲ್ಲಿದೆ.

‘ಫುಡ್ ರೂಲ್ಸ್’ ಪುಸ್ತಕ ಸಿದ್ಧಾಂತ, ಇತಿಹಾಸ ಮತ್ತು ವಿಜ್ಞಾನಕ್ಕಿಂತ ನಮ್ಮ ದೈನಂದಿನ ಬದುಕು ಹಾಗೂ ಆಚರಣೆಗಳ ಬಗ್ಗೆ ಇದೆ. ಈ ಪೌಷ್ಟಿಕ ವಿಜ್ಞಾನದವರು ಹೇಗೆ ಇರಬೇಕು ಅಂತ ಹೇಳುವ ಮುಂಚೆಯೇ ಸಹಸ್ರಮಾನದಿಂದ ಮನುಷ್ಯರು ಚೆನ್ನಾಗಿ ತಿಂದು, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಂಗಂದ ಮಾತ್ರಕ್ಕೆ ಈ ಪುಸ್ತಕ ವಿಜ್ಞಾನ ವಿರೋಧಿಯಲ್ಲ. ಇದರ ಹೊರತಾಗಿಯೂ ಆಹಾರ ಅರಿವಿನ ಅನೇಕ ಮೂಲಗಳಿವೆ ಎಂದು ಪಾಲನ್ ನಂಬುತ್ತಾರೆ. ಆ ಮೂಲ ಬೇರೆ ಯಾರೂ ಅಲ್ಲ, ನಮ್ಮ ಅಮ್ಮ, ಅಜ್ಜಿ, ಪೂರ್ವಜರೇ ಆಹಾರದ ಮೂಲ ಎನ್ನುತ್ತಾರೆ. ಅವರ ಹತ್ತಿರ ಆಹಾರದ ಬಗ್ಗೆ ಆಳವಾದ ಜ್ಞಾನ ಕಣಜವಿದೆ. ಅದರಿಂದಲೇ ಇಲ್ಲಿಯ ತನಕ ನಾವು ಬದುಕುಳಿದಿದ್ದೇವೆ, ಅಭಿವೃದ್ಧಿಗೊಂಡಿದ್ದೇವೆ. ತಲೆತರಾಂತರಗಳಿಂದ ಆಹಾರ ಅಭ್ಯಾಸ, ಪ್ರಕಾರ, ನಿಯಮ, ಕೆಲವು ನಿಷೇಧಗಳು, ಆಯಾ ಋತುಮಾನದ ಪದ್ಧತಿಗಳು ಮುಂದೆಸಾಗುತ್ತಿವೆ. ಇದರಲ್ಲಿ ಯಾವ ಲೋಪದೋಷಗಳಿಲ್ಲವೆ? ಸಹಜವಾಗಿ ಹಲವಾರು ಮೂಢನಂಬಿಕೆಗಳಿವೆ. ಆದರೆ ಇಲ್ಲಿರುವ ಬಹುತೇಕ ತಿಳಿವಳಿಕೆಯನ್ನು ಜೋಪಾನ ಮಾಡಲು, ತಿದ್ದಲು ಹಾಗೂ ಎಚ್ಚರಿಕೆವಹಿಸುವುದಕ್ಕೆ ಯೋಗ್ಯವಾಗಿದೆ. ಇದೇ ಈ ಪುಸ್ತಕದ ಮುಖ್ಯ ಧ್ಯೇಯ.

ಮೂರು ವಿಭಾಗಳಲ್ಲಿ ವಿಂಗಡನೆಗೊಂಡ ಒಟ್ಟು ಅರವತ್ತನಾಲ್ಕು ನಿಯಮಗಳಿಗೆ. ಏನ್ನನ್ನು ತಿನ್ನಬೇಕು? ಯಾವ ರೀತಿಯ ಆಹಾರವನ್ನು ತಿನ್ನಬೇಕು ಹಾಗೂ ಎಷ್ಟು ತಿನ್ನಬೇಕು? ಲೇಖಕ ಪಾಶ್ಚಾತ್ಯ ಆಹಾರ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಒಂದೆರೆಡು ನಿಯಮಗಳನ್ನು ಬಿಟ್ಟರೆ ಬಹುತೇಕ ಎಲ್ಲರಿಗೂ ಅನ್ವಯಿಸುತ್ತದೆ. ಅವುಗಳಲ್ಲಿ ನನಗೆ ಇಷ್ಟವಾದದ್ದು ಹಲವಾರು. ಅವುಗಳಲ್ಲಿ ಕೆಲವು ಹೀಗಿವೆ.

• ಆಹಾರ ತಿನ್ನಿ. ಸೂಪರ್ ಮಾರ್ಕೆಟ್‍ ನಲ್ಲಿರುವ ಸಂಸ್ಕರಿಸಿದ ತಿಂಡಿಗಳನ್ನಲ್ಲ.

• ನಮ್ಮ ಅಜ್ಜಿ ಗುರುತಿಸಲಾಗದ ಆಹಾರವನ್ನು ತಿನ್ನಲೇಬಾರದು.

• ಕೃತಕ ಸಕ್ಕರೆಯಿಂದ ದೂರವಿರಬೇಕು.

• ಆರೋಗ್ಯ ಸುಧಾರಿಸುತ್ತವೆ ಎಂದು ಭರವಸೆ ಕೊಡುವ ಉತ್ಪನ್ನಗಳನ್ನು ಕಡೆಗಣಿಸಬೇಕು.

• ಟಿ.ವಿ. ಜಾಹಿರಾತಿನಲ್ಲಿ ತೋರಿಸುವ ಆಹಾರದಿಂದ ದೂರವಿದ್ದರೆ ಚೆಂದ.

• ಕೊಂಚ ಸಮಯದ ನಂತರ ಕೊಳೆತುಹೋಗುವ ಆಹಾರವನ್ನು ಮಾತ್ರ ತಿನ್ನಬೇಕು. ಉದಾಹರಣೆಗೆ ತಾಜಾ ತರಕಾರಿ, ಹಣ್ಣುಹಂಪಲು, ಮಾಂಸ. ತಿಂಗಳುಗಟ್ಟಲೆ ಕೆಟ್ಟುಹೋಗಬಾರದೆಂದು ಸಂರಕ್ಷಕ ರಸಾಯನಿಕ ಬೆರೆಸಿ ಪ್ಯಾಸ್ಟಿಕ್‍ ನಲ್ಲಿ ತಯಾರಿಸಿ ಅಂದವಾಗಿ ಕಾಣುವಂತೆ ಸೂಪರ್‍ ಮಾರ್ಕೆಟ್‍ಗಳಲ್ಲಿ ಜೋಡಿಸಿರುತ್ತಾರೆ. ಅಗತ್ಯಕ್ಕಿಂದ ಹೆಚ್ಚು ಕೆಮಿಕಲ್ಸ್ ದೇಹಕ್ಕೆ ಸೇರುವುದೂ ಒಳ್ಳೆಯದಲ್ಲ. ಹಾಗಾಗಿ ನಮ್ಮ ಆಹಾರ ನೇರವಾಗಿ ರೈತನಿಂದ ಬಂದಾಗ ಮಾತ್ರ ಅದು ಸುರಕ್ಷಿತ ಹಾಗೂ ಆರೋಗ್ಯಕರ.

• ಎಷ್ಟು ಸಾಧ್ಯವೊ ಅಷ್ಟು ಬೇಗ ಸೂಪರ್ ಮಾರ್ಕೆಟ್‍ನಿಂದ ಆಚೆ ಬರಬೇಕು.

• ಫ್ಯಾಕ್ಟರಿಗಳಲ್ಲಿ ಮಶೀನುಗಳು ತಯಾರಿಸುವ ಆಹಾರ ಗಂಟಲಿನ ಕೆಳಗೆ ಹೋಗಲೇಬಾರದು.

• ಪ್ರಕೃತಿ ಕೊಡುವ ಆಹಾರವು ವೈವಿಧ್ಯಮಯ ಬಣ್ಣಗಳಿಂದ ಕೂಡಿದೆ. ತಟ್ಟೆಯಲ್ಲಿ ಕೂಡ ನಾವು ತಿನ್ನುವ ಊಟ ಕಲರ್‍ ಫುಲ್ ಆಗಿರಬೇಕು. ಪ್ರತಿಯೊಂದನ್ನು ಆಸ್ವಾದಿಸಬೇಕು.

• ಹಸಿರು ಸೊಪ್ಪನ್ನು ಹೆಚ್ಚಾಗಿ ತಿನ್ನಬೇಕು.

• ತಾವು ಚೆನ್ನಾಗಿ ತಿಂದು ಆರೋಗ್ಯವಾಗಿರುವ ಪ್ರಾಣಿಗಳನ್ನು ನಾವು ಸೇವಿಸುವುದು.

• ಫಲವತ್ತಾದ ಮಣ್ಣಿನ ಉತ್ವನ್ನಗಳು ಉತ್ತಮ.

• ಒಳ್ಳೆಯ ಬ್ಯಾಕ್ಟೀರಿಯಾದಿಂದ ತಯಾರಾದ ಆಹಾರವನ್ನು ಆಗಾಗ ತೆಗೆದುಕೊಳ್ಳಬೇಕು. ಉದಾಹರಣೆಗೆ ಮೊಸರು, ಉಪ್ಪಿನಕಾಯಿ, ಸೋಯಾ ಸಾಸ್, ಕಿಮ್ಚಿ( ಕೋರಿಯಾದ ಪ್ರಚಲಿತ ಆಹಾರ)

• ಸ್ವತಃ ನಮಗೆ ಎಷ್ಟು ಬೇಕೊ ಅಷ್ಟು ಉಪ್ಪು ಹಾಗೂ ಸಕ್ಕರೆ ಹಾಕಿಕೊಳ್ಳುವ ಅಭ್ಯಾಸ ಬೆಳೆಸುವುದು.

• ಎಷ್ಟು ಬಿಳಿ ಬಣ್ಣದ ಬ್ರೆಡ್ ಇರುವುದೊ ಸಾವೂ ಅಷ್ಟೇ ಬೇಗ ಬರುವುದು.

• ಕಡಿಮೆ ಊಟ ಸೇವಿಸುವುದು.

• ಇನ್ನೇನು ಹೊಟ್ಟೆ ತುಂಬುತ್ತಿದೆ ಎನ್ನುವ ಮುಂಚೆಯೇ ನಮ್ಮ ಊಟ ನಿಂತಿರಬೇಕು.

• ಹಸಿವಾದಾಗ ಮಾತ್ರ ಊಟ ಮಾಡಬೇಕೇ ಹೊರತು ಬೇಜಾರಾದಾಗಲ್ಲ.

• ನಿಧಾನವಾಗಿ ತಿನ್ನುವುದು.

• ಕೊನೆಯದಾಗಿ, ಮೈಕಲ್ ಪಾವ್ಲನ್ ಹೇಳುವ ಪ್ರಕಾರ ನಾವು ಯಾವುದೇ ನಿಯಮಗಳನ್ನು ಎಷ್ಟೇ ಕಟ್ಟುನಿಟ್ಟಾಗಿ ಪಾಲಿಸುತ್ತಿರಬಹುದು ಆದರೆ ಒಮ್ಮೊಮ್ಮೆ ಅವುಗಳನ್ನು ಮುರಿಯಬೇಕು. ಬೇಸರ ಹಿಡಿಸುವಂತಾದರೆ ನಮಗೆ ನಾವೇ ವೈರಿಗಳಾಗಿ ಬಿಡುತ್ತೇವೆ. ಆಯ್ದ ದಾರಿಗೆ ಪುನಃ ಬರಲು ಖುಷಿ ಇಮ್ಮಡಿಗೊಂಡಿರುತ್ತದೆ.

ಈಗ ಐದಾರು ತಿಂಗಳಾಗಿದೆ. ಈ ಪುಸ್ತಕ ಓದಿದ ಮೇಲೆ, ಇದರ ಕುರಿತಾಗಿ ಸಾಕಾಷ್ಟು ಮಾಹಿತಿ ಸಂಗ್ರಹಿಸಿದ್ದೇನೆ. ನನ್ನ ಜೀವನ ಶೈಲಿಯನ್ನು ತಡವಾದರು ಸಹ ಬದಲಿಸಿದ್ದೇನೆ. ತಿಂಡಿಪೋತಿ ಎಂದೇ ಮನೆಯಲ್ಲಿ ಹೆಸರು ಗಿಟ್ಟಿಸಿಕೊಂಡ ನನಗೆ ಮೊದಮೊದಲು ಕಷ್ಟವಾಯಿತು. ಅಳುವುದೊಂದು ಬಾಕಿಯಿತ್ತು. ಆದರೆ ತಾಳ್ಮೆಯೇ ಇದಕ್ಕೆ ಮಂತ್ರ. ಯಾವುದು ಸರಿ? ಯಾವುದು ತಪ್ಪು? ಎಂದು ನಾವೇ ಅರಿತುಕೊಂಡ ನಂತರ ಇವೆಲ್ಲ ಸುಗಮವಾಗುತ್ತದೆ.

ತರಕಾರಿ, ಹಣ್ಣುಹಂಪಲು, ಸಿರಿಧಾನ್ಯ, ಬೇಳೆಕಾಳುಗಳು, ಒಣಹಣ್ಣುಗಳು, ಬೀಜಗಳು ಈಗ ನನ್ನ ಸ್ನೇಹಿತರಾಗಿದ್ದಾರೆ. ಈಗ ನನ್ನ ದೇಹ ಒಳಗಿಂದ ಹಾಯಾಗಿದೆ. ಈಗಾಗಲೆ ಕಲುಷಿತ ಪರಿಸರದಿಂದ ಬರುವ ಹೆಸರು ಕೇಳದ ರೋಗಗಳನ್ನು ಸಾಧ್ಯವಾದಷ್ಟು ಬಹುದೂರ ತಳ್ಳಿದ್ದೇನೆ. ಈಗ ಸ್ವರ್ಗಕ್ಕೆ ಮೂರೇ ಗೇಣು ಅಂತ ಹೇಳಬಹುದೆ?