ಇರುವ ಚೆಂದವನ್ನು ಕಾಪಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸುವ ತಾಕಲಾಟ ಬಲ್ಲೆ. ಒಂದೇ ಘಟ್ಟದಲ್ಲಿ ಹೆಚ್ಚು ಕಾಲ ಇರಲಾಗದು. ನಿಧಾನಕ್ಕೆ ಈ ಜತನ ಮಾಡುವ ಉಸಾಬರಿ ಸಾಕೆನ್ನಿಸಿತು. ಹೊರಗೆ ‘ಕಾಣುವ’ ಚೆಂದಕ್ಕಿಂತ ನಾನು ಬೇರೆ ಅನ್ನಿಸಿತು. ಎಷ್ಟೇ ಕಷ್ಟಪಟ್ಟರೂ ಕಾಲನ ಹೊಡೆತ ತನ್ನ ಕೆಲಸ ಮಾಡಿಯೇ ತೀರುತ್ತದೆ. ಕಾಲದೊಂದಿಗೆ ಹೋರಾಡುವುದಕ್ಕಿಂತ ನನ್ನ ವ್ಯಕ್ತಿತ್ವ, ಪ್ರತಿಭೆ, ಬುದ್ಧಿ, ಮನಸ್ಸಿನ ಜೊತೆ ಗುದ್ದಾಡುತ್ತಾ ಬೆಳೆಯುವುದರಲ್ಲಿ ಬದುಕಿನ ಸೌಂದರ್ಯವಿದೆ. ಈ ಸಮಯ ಮತ್ತೆ ಬರಲಾರದು. ಈ ಅವಕಾಶ ಮತ್ತೆ ಸಿಗಲಾರದು. ಹಠಕ್ಕೆ ಬಿದ್ದಂತೆ ಸಂಗೀತ ಮುಂದುವರೆಸಿದೆ.
ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

“ನಾನು ಸುಂದರಿ ಎನ್ನುವುದೇ ನನ್ನ ಎಲ್ಲಾ ಸಾಧನೆಗಳನ್ನು ಸಾರಾಸಗಟು ನಿರಾಕರಿಸಲು, ನಿಕೃಷ್ಟಗೊಳಿಸಲು ಜಗತ್ತು ಹುಡುಕಿಟ್ಟ ಕಾರಣವಾಗಿದೆ ನೋಡು…” ಚೆಂದವಿರುವುದೇ ಏಕಮಾತ್ರ ಸಾಧನೆಯೆಂಬಂತೆ ಜಗತ್ತು ಸೌಂದರ್ಯದ ಹಿಂದೆ ಓಡುವಾಗ, ಇವಳು ಹೀಗೆ ಮಾತಾಡಿ ಮನಸ್ಸು ಕದಡಿದ್ದಳು. ಮಾತಿಲ್ಲದೆ ಅವಳನ್ನೇ ದಿಟ್ಟಿಸಿದೆ. ನಿಜಕ್ಕೂ ಸುಂದರಿಯೇ… ಈಗ ಹತ್ತು ಹದಿನೈದು ವರ್ಷದ ಹಿಂದೆ ಇನ್ನೂ ಮಾಟವಾಗಿದ್ದಿರಬಹುದು. ಆದರೂ ಜೊತೆಗಾರ್ತಿಯರಿಗೆ ಹೋಲಿಸಿದರೂ, ನೂರಾರು ಜನರ ಗುಂಪಿನಲ್ಲಿದ್ದರೂ ಎದ್ದು ತೋರುವ ನಿಲುವು. ಕಣ್ಣಿನ ಹೊಳಪು, ನಗುವಿನ ಚೆಲುವು, ಉತ್ತಮ ಅಭಿರುಚಿ, ವ್ಯಕ್ತಿತ್ವದಲ್ಲಿ ಬೆರೆತು ಹೋದ ಆತ್ಮವಿಶ್ವಾಸ, ಹೃದಯವಂತಿಕೆಗಳು ಅವಳನ್ನು ವಿಶೇಷವಾಗಿಸಿತ್ತು. ಶಾಲಾ ಕಾರ್ಯಕ್ರಮಗಳಿಂದ ಹಿಡಿದು ಸಂದರ್ಶನಗಳವರೆಗೂ ಚೆಂದ ಕಾಣುವವರಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಅನುಭವಕ್ಕೆ ಬಂದಿರುವ ಸಂಗತಿಯೇ. ಆದ್ಯತೆ ಅಸಹ್ಯ ಹುಟ್ಟಿಸಲು ಸಾಧ್ಯವೇ? ಅವಳ ಮಾತು ವಿಚಿತ್ರವೆನಿಸಿತು. ಬಹುಶಃ ಯಾರೋ ಒಮ್ಮೆ ಅಂದಿರಬಹುದಾದ ಮಾತಿಗೆ ಇವಳು ಅತಿಯೆನಿಸುವಷ್ಟು ಯೋಚಿಸುತ್ತಿದ್ದಾಳೆ. ಸೂಕ್ಷ್ಮ ಪ್ರವೃತ್ತಿಯ ಜನರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಬೇಕು ಎನ್ನಿಸಿತು.

ನನ್ನ ಮುಖಭಾವದಲ್ಲಿ ಅವಳೇನು ಹುಡುಕಿದಳೋ, ತನ್ನ ಮಾತಿಗೆ ಮತ್ತಷ್ಟು ಪುರಾವೆ ಸೇರಿಸುತ್ತಾ ಹೋದಳು. “ಎಲ್ಲರ ಹಾಗೆ ನನಗೂ ಹರೆಯದಲ್ಲಿ ಈ ಸೌಂದರ್ಯ ವಿಶೇಷವೆನಿಸುತ್ತಿತ್ತು. ಮತ್ತೆ ಮತ್ತೆ ತಿರುಗಿ ನೋಡುವ ಹುಡುಗರ ನೋಟ ಜಂಬ ಹೆಚ್ಚಿಸಿ, ಖುಷಿ ನೀಡಿದ್ದು ಸುಳ್ಳೆನ್ನಲಾರೆ. ಸ್ನೇಹಿತೆಯರ ಹೊಟ್ಟೆಕಿಚ್ಚಿನ ಮಾತುಗಳೂ ಮಜವೆನಿಸುತ್ತಿತ್ತು. ಮುಖದ ಮೇಲೆ ಒಂದು ಮೊಡವೆ ಮೂಡಿದರೂ, ಕೂದಲತುದಿ ಸೀಳಿದರೂ, ಕಣ್ಣಲ್ಲಿ ಸುಸ್ತು ಇಣುಕಿದರೂ, ತೂಕ ಇನ್ನೂರು ಗ್ರಾಂ ಹೆಚ್ಚಾದರೂ ತಲೆಕೆಡಿಸಿಕೊಳ್ಳುವಷ್ಟು ಜೋಪಾನ ಮಾಡುವ ಹುಚ್ಚು ನನಗಿತ್ತು. ಇಲ್ಲದ ಅಂದಚೆಂದಕ್ಕೆ ತುಡಿಯುವ ಕಷ್ಟದ ಅರಿವು ನನಗಿಲ್ಲ. ಆದರೆ ಇರುವ ಚೆಂದವನ್ನು ಕಾಪಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸುವ ತಾಕಲಾಟ ಬಲ್ಲೆ. ಒಂದೇ ಘಟ್ಟದಲ್ಲಿ ಹೆಚ್ಚು ಕಾಲ ಇರಲಾಗದು. ನಿಧಾನಕ್ಕೆ ಈ ಜತನ ಮಾಡುವ ಉಸಾಬರಿ ಸಾಕೆನ್ನಿಸಿತು. ಹೊರಗೆ ‘ಕಾಣುವ’ ಚೆಂದಕ್ಕಿಂತ ನಾನು ಬೇರೆ ಅನ್ನಿಸಿತು. ಎಷ್ಟೇ ಕಷ್ಟಪಟ್ಟರೂ ಕಾಲನ ಹೊಡೆತ ತನ್ನ ಕೆಲಸ ಮಾಡಿಯೇ ತೀರುತ್ತದೆ. ಕಾಲದೊಂದಿಗೆ ಹೋರಾಡುವುದಕ್ಕಿಂತ ನನ್ನ ವ್ಯಕ್ತಿತ್ವ, ಪ್ರತಿಭೆ, ಬುದ್ಧಿ, ಮನಸ್ಸಿನ ಜೊತೆ ಗುದ್ದಾಡುತ್ತಾ ಬೆಳೆಯುವುದರಲ್ಲಿ ಬದುಕಿನ ಸೌಂದರ್ಯವಿದೆ. ಈ ಸಮಯ ಮತ್ತೆ ಬರಲಾರದು. ಈ ಅವಕಾಶ ಮತ್ತೆ ಸಿಗಲಾರದು. ಹಠಕ್ಕೆ ಬಿದ್ದಂತೆ ಸಂಗೀತ ಮುಂದುವರೆಸಿದೆ. ಬರವಣಿಗೆ ಅಭ್ಯಾಸ ಮಾಡಿಕೊಂಡೆ. ಶಬ್ದವೊಂದು ತಾನೇ ಬೆಳೆಯುತ್ತಾ ಅನೂಹ್ಯ ತಿರುವುಗಳಲ್ಲಿ ನಿಂತು, ಓಡಿಸಿ ಚಿಂತನೆಯ ಕ್ರಮವನ್ನೇ ಬದಲಾಯಿಸಿ ತನ್ನ ಗುರಿಯನ್ನು ತಲುಪುವ ವಿಸ್ಮಯ ಅನುಭವಿಸಿದೆ. ತನ್ಮಯಳಾಗಿ ಹಾಡುವಾಗಿನ ಸವಾಲು, ಒದಗಿ ಬರುವ ಮನೋಧರ್ಮ, ಕಡಲಿನ ಬಿಂದು ನಾನೆಂಬ ವಿನೀತ ಭಾವ ಹೃದಯಕ್ಕೆ ಹಾಯೆನ್ನಿಸಿತು. ಪ್ರಾಮಾಣಿಕತೆ, ಸರಳತೆ, ಸಹಜತೆ ಕೊಡುವ ನಿರಾಳ ಮನಃಸ್ಥಿತಿ ಇಷ್ಟವಾಯಿತು. ಆದರೆ ನೂರರಲ್ಲಿ ತೊಂಭತ್ತು ಜನರಿಗೆ ಇದು ಮುಖ್ಯವೆನಿಸುವುದೇ ಇಲ್ಲ. ನನ್ನ ಪರಿಶ್ರಮ, ಶ್ರದ್ಧೆ, ಆಸಕ್ತಿ, ಅಭಿರುಚಿ, ಪ್ರೌಢಿಮೆ ಇದ್ಯಾವುದೂ ಗೆಲುವಿಗೆ ಕಾರಣವಿರಬಹುದೆಂದು ಯೋಚಿಸುವುದೇ ಇಲ್ಲ. ಎಲ್ಲಾ ಬಣ್ಣ ಮಸಿ ನುಂಗಿತು ಅಂತಾರೆ. ಇಲ್ಲಿ ಆ ಮಸಿ ಚೆಲುವು. ಚೆಲುವಿನಾಚೆಗೆ ನನ್ನನ್ನು ಇಷ್ಟಪಡುವವರು ಇದ್ದಾರೆಯೇ ಎಂಬ ಅನುಮಾನದ ನೋವು ಎಷ್ಟು ತೀವ್ರವಾಗಿರುತ್ತದೆ ಅಂದಾಜಿದೆಯೇ?” ಅಂತರಂಗದ ಅಹವಾಲು ಮುಂದಿತ್ತು. ಒಂದೇ ವಿಷಯದ ಎರಡನೇ ಮಗ್ಗುಲು ಸ್ಪಷ್ಟರೂಪ ತೆಳೆದಿತ್ತು.

ಪ್ರತಿಭೆ ಇಲ್ಲದಿದ್ದರೂ ಚೆಂದ ಇದ್ದಾರೆನ್ನುವ ಕಾರಣಕ್ಕೆ ನೃತ್ಯ, ನಾಟಕ, ನಿರೂಪಣೆಗೆ ಆಯ್ಕೆಯಾಗುತ್ತಿದ್ದ ದಂತದ ಬೊಂಬೆಗಳ ಕಥೆಯಲ್ಲವಿದು. ತಮ್ಮ ಪರಿಶ್ರಮದ ಮೂಲಕ ಪಡೆದ ವಿದ್ವತ್ತಿಗೆ ಕಿಮ್ಮತ್ತು ಸಿಗದ, ಬಾಯಿಚಪಲದ ಮಾತಿಗೆ ತುತ್ತಾದವರ ಒಡಲಾಳ. ಚೆಂದ ಇದ್ದಾಳೆ ಅದಕ್ಕೆ ಅವಕಾಶ ಸಿಕ್ಕಿದೆ. ಪ್ರಶಸ್ತಿ ಬಂದಿದೆ. ಆಹ್ವಾನ ನೀಡುತ್ತಾರೆ. ಜನ ಅವರ ಮಾತು ಕೇಳಲಲ್ಲ ‘ನೋಡಲು’ ಬರುತ್ತಾರೆ. ಸುಂದರ ಮುಖಪುಟ ನೋಡಿ ಪುಸ್ತಕ ಕೊಳ್ಳುತ್ತಾರೆ. ಹತ್ತಿರಾಗುವ ಅವಕಾಶಕ್ಕಾಗಿ ಹೊಗಳಿ ಬರೆಯುತ್ತಾರೆ. ಹೀಗೆ ಒಂದಕ್ಷರ ಓದದೆಯೂ, ಒಂದು ಆಲಾಪ ಕೇಳದೆಯೂ ಷರಾ ಬರೆಯುವ ಜನರು ನಮ್ಮೊಡನಿದ್ದಾರೆ. ಸುಂದರಿಯ ಗಂಡ ಸದಾ ಅಸುಖಿ. ಕೆಂಪು ಡೊಂಕು ಮುಚ್ಚಿತು. ರೂಪಕ್ಕಿಂತ ಗುಣ ಮುಖ್ಯ. ಎಂದು ರೂಢಿಗತ ಮಾತುಗಳಿಂದ ತಿವಿಯುವ ಜನರೂ ಕಮ್ಮಿ ಇಲ್ಲ. ಸುಂದರಿ ಸಿಟ್ಟಾದರೂ, ಒಂದು ಮಾತು ಬೈದರೂ “ಸಿಟ್ಯಾಕೆ ಸಿಡುಕ್ಯಾಕೆ ನನ ಜಾಣೆ” ಅಂತಲೋ “ಕೋಪದಲ್ಲೂ ಚೆನ್ನ ನಲ್ಲೆ” ಎಂದು ಕಿಚಾಯಿಸುತ್ತಲೋ ಸುಮ್ಮನಾಗುವವರೇ ಹೆಚ್ಚು. ವಾದಗಳ ಕೊನೆಯಲ್ಲಿ ರೂಪಮದ ಹಾಗಾಡಿಸ್ತಿದೆ ಎಂದು ಹೊಟ್ಟೆಕಿಚ್ಚು ಶಮನ ಮಾಡಿಕೊಳ್ಳುವ ಜನರಿರುವೆಡೆ ಇದು ಸುಲಭಕ್ಕೆ ಪರಿಹಾರ ಕಾಣುವ ಹಾಗಿಲ್ಲ. ಪ್ರತಿಯೊಬ್ಬರಿಗೂ ಅವರಿಗೆ ಮಾತ್ರ ಅರ್ಥವಾಗುವ, ಬೇಧಿಸಲು ಸಾಧ್ಯವಿರುವ ಸವಾಲುಗಳನ್ನು ವಿಧಿಯೇ ಹೊರೆಸಿ ಕಳಿಸಿರಬಹುದು. ನಿನ್ನ ಸವಾಲಿಗೆ ನೀನು ಹುಡುಕುವ ಉತ್ತರವೇ ಪ್ರಶಸ್ತ. ನನ್ನ ಕಣ್ಣಿನಿಂದ ನಿನ್ನ ಜಗತ್ತಿನ ಬಣ್ಣಗಳನ್ನು ಹೇಗೆ ಗುರುತಿಸಿದರೂ ತಪ್ಪಾಗಬಹುದು. ಕೇಳುವ ಕಿವಿಯಾಗಿ ನಾನಿರುವೆ. ಹಾದಿಯ ಹೂವುಮುಳ್ಳುಗಳೇನಿದ್ದರೂ ನಿನ್ನವೇ. ಹುಡುಕಿಬಿಡು ಗೆಳತಿ… ಇದಕ್ಕೊಂದು ಉತ್ತರ. ಎಂದು ನಡೆದುಬಿಟ್ಟೆ.

“ಅಪ್ಪ-ಅಮ್ಮ ನನ್ನ ಮದುವೆಗೆ ಹುಡುಗಿ ಹುಡುಕ್ತಿದ್ದಾರೆ. ಎಲ್ಲರಿಗೂ ನನ್ನ ಸಂಬಳ, ಆಸ್ತಿಯ ಮೇಲೇ ಕಣ್ಣು. ಅಂಗಡಿಯಲ್ಲಿ ತರಕಾರಿ ಕೊಂಡಂತೆ ಇಷ್ಟು ಕೊಟ್ಟರೆ ಇಂಥ ಗಂಡು ಸಿಗದೆ ಏನು ಎಂಬಂತೆ ಮಾತಾಡುತ್ತಾರೆ. ವರದಕ್ಷಿಣೆ ಬೇಡವೆಂದರೆ ಒಂಥರಾ ಅನುಮಾನದ ನೋಟ. ನಮ್ಮ ಅಪೇಕ್ಷೆ ಏನಿಲ್ಲ. ನಿಮ್ಮ ಹುಡುಗಿಗೆ ನಿಮ್ಮ ಆಸೆ ಪ್ರಕಾರ ಏನು ಬೇಕಾದ್ರೂ ಕೊಡಿ ಅಂತ ಅಮ್ಮ ನಯವಾಗಿ ಪಾಠ ಒಪ್ಪಿಸುತ್ತಾರೆ. ಇಷ್ಟೊಳ್ಳೆ ಸಂಬಳ ಇರುವಾಗ ಚೆಂದದ ಹುಡುಗಿಯೇ ಸಿಕ್ತಾಳೆ ಬಿಡು ಎನ್ನುವ ಅಕ್ಕಪಕ್ಕದವರು. ಸಾಕಾಗಿದೆ ಕಣೆ…. ಹುಡುಗನ ಹಣ, ಹುಡುಗಿಯ ಸೌಂದರ್ಯ ಇಷ್ಟು ಬಿಟ್ಟರೆ ಪ್ರಪಂಚಕ್ಕೆ ಬೇರೇನೂ ಬೇಕಿಲ್ಲವಾ?” ಅವನು ಕೇಳಿದ್ದು ನನಗೆ ಮಾತ್ರವೆನ್ನಿಸಲಿಲ್ಲ.

ಕಾಲ ಮುಂದುವರೆದಿದೆ. ಹೆಣ್ಣಿನ ಹಣ, ಆಸ್ತಿ, ಅಧಿಕಾರವೂ, ಗಂಡಿನ ರೂಪವೂ ಪ್ರಸ್ತುತವಾಗುತ್ತಿದೆ ಎನ್ನುವಿರಾದರೆ, ಮತ್ತದೇ ಪ್ರಶ್ನೆ. ಹೊರಗೆ ‘ಕಾಣುವ’ ರೂಪ, ಹಣ, ಅಂತಸ್ತು ಮೀರಿ ಬದುಕಿಗೊಂದು ಅರ್ಥವಿದೆಯಲ್ಲವೇ? ಅದನ್ನು ಅರಿತಿದ್ದೇವೆಯೇ?