(ಕಮಲಾ ದಾಸ್)

ಶಿಖಂಡಿಗಳ ಕುಣಿತ

ಶಿಖಂಡಿಗಳು ತಮ್ಮ ಪಾಡನ್ನೇ ಹಾಡಿ ಕುಣಿಯಲು ಬರುವ ಮೊದಲು
ಬಿರುಬಿಸಿಲು, ಬಸವಳಿದು ಬೀಳಿಸುವ ಧಗೆ!
ಅಗಲಗಲದ ಲಂಗವನ್ನು ಇನ್ನಷ್ಟು ಹರಡುತ್ತಾ, ಹಾಡುತ್ತಾ
ಕಂಚಿನ ಝಲ್ಲರಿಯನ್ನು ಲಬಕು ಲಬಕೆನ್ನಿಸುತ್ತಾ
ಕಾಲ್ಗೆಜ್ಜೆಯನ್ನು ಜಣಕು ಜಣಕೆನ್ನಿಸುತ್ತಾ
ರವರವನೆ ಹೊಳೆಯುತ್ತಿದ್ದ ಗುಲ್ಮೊಹರಿನ ಕೆಳಗೆ
ಉದ್ದುದ್ದ ಜಡೆಯನ್ನು ಬೀಸುತ್ತಾ ಎಸೆಯುತ್ತಾ
ಓಹೋ ಆಹಾ ಎನ್ನಿಸುವಂತೆ ಕುಣಿದರಲ್ಲ!
ಕಿತ್ತು ರಕ್ತ ಬರುವ ತನಕ ಕುಣಿದರಲ್ಲ!
ಅವರ ಕೆನ್ನೆಯ ಮೇಲೆ ಹಸಿರು ಹಚ್ಚೆಯ ಹಾಡು
ತಲೆಯಲ್ಲಿ ಮಲ್ಲಿಗೆಯ ಕುಣಿತ
ಕೆಲವರು ಕಪ್ಪೆನ್ನಿಸುವಷ್ಟು ಕಪ್ಪು
ಕೆಲವರು ಬೆಳ್ಳಗಿರುವರೇನೋ ಎನಿಸುವಷ್ಟು ಕಪ್ಪು
ಅವರ ದನಿಗಳು ಒರಟು
ಹಾಡು ವಿಷಾದರಾಗ
ದುರಂತಕ್ಕೀಡಾದ ಪ್ರೇಮಿಗಳ
ಹುಟ್ಟುವ ಮುನ್ನವೇ ಮರೆಯಾದ ಕಂದಮ್ಮಗಳ
ಬದುಕಿನ ವಿಷಾದಗೀತ
ಕೆಲವರು ತಾಳವನ್ನು ಕುಟ್ಟಿದರೆ ಉಳಿದವರು ತಮ್ಮ
ಎದೆಯನ್ನೇ ಕುಟ್ಟುತ್ತಾ ಹಾಡಿದರು
ಹೋ ಎಂದು ಮೊರೆಯುತ್ತಾ, ಮುರಿಯುತ್ತಾ
ಶೂನ್ಯದಾನಂದದಲಿ ನುಲಿದರು.
ಸಣಕಲ ಕೈಕಾಲು,ಅರೆಬರೆ ಸುಟ್ಟ
ಸ್ಮಶಾನದ ಕಟ್ಟಿಗೆ ತುಂಡಿನಂತೆ
ಪ್ರತಿಯೊಬ್ಬರಲ್ಲೂ ಕ್ಷಾಮದ, ಕೊಳೆತದ ಹಬ್ಬು.
ಆ ವಿಷಾದ ರಾಗಕ್ಕೆ
ಸೊಲ್ಲಡಗಿ ಕೂತಿದ್ದ ಮರದ ಮೇಲಿನ ಕಾಗೆಗಳು
ವಿಷಣ್ಣ ಕುಣಿತಕ್ಕೆ
ಬಿಟ್ಟ ಕಣ್ಣು ಬಿಟ್ಟಂತೆ ನಿಂತಿದ್ದ ಮಕ್ಕಳು
ಈ ಪಾಪದ ಜೀವಿಗಳ
ಮೊರೆತವನು, ಮುರಿತವನು, ನುಲಿತವನು
ಬಿರುಗಣ್ಣಿನಲ್ಲಿ ನೋಡುತ್ತಾ ನಿಂತಿದ್ದ ಸುತ್ತ ಮುತ್ತಲಿನವರು.
ಆಗ
ಬಾನು ಚಿಟಿಲುಗುಡುತ್ತಾ ಬಿರಿಯಿತು
ಗುಡುಗು ಧಡಧಡಗುಟ್ಟಿತು
ಮಿಂಚು, ಮಳೆ…
ಬಿದ್ದ ಬಡಕಲು ಮಳೆಯಲ್ಲಿ
ಅಟ್ಟದ ಧೂಳಿನ
ಹಲ್ಲಿಇಲಿಗಳ ಉಚ್ಚೆಯ
ವಾಸನೆಯಿತ್ತು.

‘ ದ ಡಾನ್ಸ್ ಆಫ್ ದ ಯೂನಕ್’ (‘The Dance of the Eunuchs’-from Summer in Calcutta)

 

ಹೆಣದೊಳಗಿನ ಹುಳಗಳು

ಸೂರ್ಯಾಸ್ತದ ಹೊತ್ತಿನಲ್ಲಿ
ನದೀತೀರದಲಿ
ಕೃಷ್ಣ ಕೊನೆಯ ಬಾರಿಗೆ
ರಮಿಸಿ
ತೆರಳಿದ ದಿನ…

ರಾತ್ರಿ ಗಂಡನ ತೋಳತೆಕ್ಕೆಯಲ್ಲಿದ್ದ
ರಾಧೆಯಲಿ ಜೀವವಿರಲಿಲ್ಲ.
ಏನಾಯಿತು ಮುದ್ದೇ
ನನ್ನ ಮುತ್ತು ನಿನಗೆ ಹಿಡಿಸದೆ?
ಎಂದು ಕೇಳಿದ ಗಂಡನಿಗೆ
ಛೆ! ಏನಿಲ್ಲವಪ್ಪ!
ಎಂದು ಸವರಿಸಿಕೊಂಡರೂ
ಮನದಲ್ಲಿ ಸುಳಿದ ಯೋಚನೆಯೇ ಬೇರಿತ್ತು:
ವಿಲಿಗುಡುವ ಕೊಳೆಹುಳುಗಳು
ಕಡಿದರೂ ಕಚ್ಚಿದರೂ
ಹೆಣಕ್ಕೇನು?

‘ದ ಮ್ಯಾಗ್ಗಾಟ್ಸ್’ ( ‘The Maggots’-from The Descendants)

 

ಶಿಲಾಯುಗ

ಪ್ರೀತಿಸುವ ಗಂಡ,
ತಲೆಯನ್ನು, ಮನಸ್ಸನ್ನು ಹೊಕ್ಕು
ಆಕ್ರಮಿಸಿ ನೆಲೆಸಿದ ಪುರಾತನ ವಲಸಿಗ
ಕೊಬ್ಬಿದ ಹಳೆಯ ಜೇಡ
ಗೊಂದಲದ ಬಲೆಯನ್ನು ನನ್ನ
ಸುತ್ತ ಹೆಣೆಯುತ್ತ ಹೆಣೆಯುತ್ತಾ
ನನ್ನನ್ನೊಂದು ಕಲ್ಲಿನ ಹಕ್ಕಿಯಾಗಿ
ಸ್ಫಟಿಕದ ಪಾರಿವಾಳವಾಗಿ
ಪರಿವರ್ತಿಸುತ್ತಿದ್ದೀ,
ಸ್ವಲ್ಪ ಕರುಣೆಯಿರಲಿ
ನನ್ನ ಸುತ್ತ ಕಳಪೆ ಕೊಠಡಿಯೊಂದನ್ನು ಕಟ್ಟುತ್ತಿದ್ದೀ
ನಿನ್ನ ಎದೆಯೊಳಗೆ ಹುದುಗಿದ ನನ್ನ ಮುಖವನ್ನು
ಅನ್ಯಮನಸ್ಕನಾಗಿ ಸವರುತ್ತಾ
ಏನನ್ನೋ ಓದುವುದರಲ್ಲಿ ಮಗ್ನನಾಗಿದ್ದೀ
ಬೆಳಗಿನ ಜಾವದ ನನ್ನ ಸಕ್ಕರೆ ನಿದ್ದೆಯನ್ನು
ನಿನ್ನ ಜೋರುದನಿಯ ಮಾತಿನಿಂದ
ಘಾಸಿಗೊಳಿಸುತ್ತಿದ್ದೀ
ಕನಸು ಕಾಣುವ ಕಣ್ಣುಗಳನ್ನು
ಬೆರಳಿನಿಂದ ಚುಚ್ಚುತ್ತಿದ್ದೀ
ಆದರೂ ಸಹ…
ನನ್ನ ಹಗಲುಗನಸುಗಳ ಮೇಲೆ
ನನ್ನ ದ್ರಾವಿಡ ರಕ್ತದ ಉಬ್ಬರದೊಳಗೆ
ಮುಳುಗುವ ಬಿಳಿಯ ಸೂರ್ಯರಂತ
ಬಲಶಾಲಿ ಗಂಡಸರ ನೆರಳು ಬೀಳುವುದು ಮಾತ್ರ ನಿಂತಿಲ್ಲ
ಪವಿತ್ರ ನಗರಗಳ ಅಡಿಯಲ್ಲೂ
ಹರಿಯುವ ಚರಂಡಿಗಳ ಹರವು.
ನೀನು ಹೊರಹೋದದ್ದೇ
ನನ್ನ ನೀಲಿ ಬಣ್ಣದ ಡಬ್ಬಾ ಕಾರನ್ನು ಹತ್ತಿ
ನಾನೂ ಹೊರಡುತ್ತೇನೆ.
ಕಾಲಿಟ್ಟರೆ ಡಂಗುರ ಸಾರುವ
ನಲ್ವತ್ತು ಮೆಟ್ಟಿಲುಗಳನ್ನು
ಹಾರಿ ಇನ್ನೊಂದು ಕದವನ್ನು ತಟ್ಟುತ್ತೇನೆ.
ಬಾಗಿಲ ಕಿಂಡಿಗಳೊಳಗೆ ನೆರೆಹೊರೆಯ
ಕಣ್ಣುಗಳು ಕೀಲಿಸುತ್ತವೆ
ಮಳೆಯಂತೆ ನಾನು ಬಂದು ಹೋಗುವುದನ್ನು
ಗಮನಿಸುತ್ತವೆ.
ಅವನು ನಿನ್ನಲ್ಲೇನು ಕಂಡ? ಎಂದು ಕೇಳಬೇಕೆ?
ಕೇಳಿ! ಪ್ರತಿಯೊಬ್ಬರೂ ಕೇಳಿ!
ಅವನನ್ನು ಹುಲಿಯೆಂದು,
ಲಂಡ ಲಂಪಟನೆಂದು ಯಾಕೆ ಕರೆಯುತ್ತಾರೆ? ಎಂದು ಕೇಳಿ!
ನನ್ನ ಗುಂಜೆಲುಬಿನ ಮೇಲೆ ಅವನ ಕೈ
ಹೆಡೆ ಬಿಚ್ಚಿದ ಹಾವಿನಂತೆ ಯಾಕೆ ಎರಗುತ್ತದೆ? ಎಂದು ಕೇಳಿ!
ಅಗಾಧ ಮರವೊಂದು ಉರುಳಿದಂತೆ
ಯಾಕೆ ನನ್ನ ಮೊಲೆಗಳ ಮೇಲೆ ಕುಸಿದು ನಿದ್ದೆಗೆ ಜಾರುತ್ತಾನೆ? ಎಂದು ಕೇಳಿ
ಬದುಕು ಯಾಕಿಷ್ಟೊಂದು ಹೃಸ್ವ?
ಪ್ರೀತಿ ಇನ್ನಷ್ಟು ಹೃಸ್ವ? ಎಂದು ಕೇಳಿ!
ಆನಂದವೆಂದರೇನು? ಅದಕ್ಕೆ ತೆರಬೇಕಾದ ಬೆಲೆಯೇನು?
ಎಂದು ಕೇಳಬೇಕೆ? ಕೇಳಿ! ಕೇಳಿ!

ದ ಸ್ಟೋನ್ ಏಜ್ (‘The Stone Age’- from The Old Playhouse and Other Poems)

 

 

(ಕಲೆ: ರೂಪಶ್ರೀ ಕಲ್ಲಿಗನೂರ್)