೧.
ನಾನು ಹೇಳಿದೆ:
ನನ್ನ ಕಣ್ಣುಗಳ ಬಗ್ಗೆ ಹೇಳು?
ದೇವರು ಹೇಳಿದ:
ಅವುಗಳನ್ನು ರಸ್ತೆಯ ಮೇಲಿಡು.

ನಾನು ಹೇಳಿದೆ:
ನನ್ನ ವ್ಯಾಮೋಹದ ಬಗ್ಗೆ ಹೇಳು?
ದೇವರು ಹೇಳಿದ:
ಅವುಗಳನ್ನು ಉರಿಯಲು ಬಿಡು.

ನಾನು ಹೇಳಿದೆ:
ನನ್ನ ಹೃದಯದ ಬಗ್ಗೆ ಹೇಳು?
ದೇವರು ಹೇಳಿದ:
ಅದರೊಳಗೆ ಏನು ಹಿಡಿದಿಟ್ಟಿರುವೆ ನನಗೆ ಹೇಳು?

ನಾನು ಹೇಳಿದೆ:
ನೋವು ಮತ್ತು ದುಃಖ
ದೇವರು ಹೇಳಿದ:
ನೀನು ಅದರೊಂದಿಗೇ ಇರು…,
ಗಾಯ ಅಂತಹದೊಂದು ಸ್ಥಳ, ನಿನ್ನೊಳಗೆ ಬೆಳಕು ಪ್ರವೇಶಿಸಲು.

೨.
ಕಳೆದ ರಾತ್ರಿ ನಾನು
ವಾಸ್ತವದ ಮೇಲೆ ನನ್ನ
ಹಿಡಿತವನ್ನು ಕಳೆದುಕೊಂಡೆ
ಮತ್ತು ಹುಚ್ಚುತನವನ್ನು ಆದರಿಸಿದೆ.

ಪ್ರೀತಿ
ನನ್ನನ್ನು ನೋಡಿ
ನಾನು ಬಹಿರಂಗ ಪಡಿಸುವೆ
ಕಣ್ಣೀರನ್ನು ಒರೆಸಿಕೋ
ಮತ್ತು ಮೌನವಾಗಿರು ಎಂದಿತು.

ಓ ಪ್ರೀತಿಯೇ
ನಾನು ಬೆದರಿದ್ದೆ ,
ಆದರೆ ಅದು ನೀನಲ್ಲ ಎಂದೆ .

ನನಗೆ ಪ್ರೀತಿ ಹೇಳಿತು
ಅಲ್ಲಿ ಏನೂ ಇಲ್ಲ ,ಅದು ನಾನಲ್ಲ
ಮೌನವಾಗಿರು .
ನಾನು ನಿನ್ನ ಕಿವಿಯಲ್ಲಿ
ಗುಟ್ಟುಗಳ ಪಿಸುಗುಡುವೆ
ಕೇವಲ ಹೌದೆಂದು ತಲೆಯಾಡಿಸು
ಮತ್ತು ಮೌನವಾಗಿರು.


ಪ್ರೇಮದ ಉತ್ಸವದಲ್ಲಿ
ಚಂದ್ರ ನರ್ತಕನಾಗಿದ್ದಾನೆ.
ಈ ಬೆಳಕಿನ ನೃತ್ಯ,
ಈ ಪವಿತ್ರ ಅನುಗ್ರಹ,
ಈ ದೈವಿಕ ಪ್ರೀತಿ,
ನಮಗೆ ಕೈ ಸನ್ನೆ ಮಾಡುತ್ತದೆ
ಪ್ರೇಮಿಗಳು ಮಾತ್ರ
ತಮ್ಮ ಸುಡು ವ್ಯಾಮೋಹದ ಕಣ್ಣುಗಳಿಂದ
ಜಗದಾಚೆಗೂ ನೋಡಬಲ್ಲರೆಂದು.

ಯಾರು ಶರಣಗತರಾದರೋ
ಅವರನ್ನೇ ಆರಿಸಲಾಗಿದೆ.

ಅವರೊಮ್ಮೆ ಬೆಳಕಿನ ಕಣವಾಗಿದ್ದರು
ಈಗ ಸೂರ್ಯನ ಹೊಳಪಾಗಿದ್ದಾರೆ.

ಅವರು ಜಗದ ಕಪಟದಾಟಗಳನ್ನು
ಹಿಂದೆ ಬಿಟ್ಟುಹೊರಟಿದ್ದಾರೆ.

ಯಾರು ತಮ್ಮ ಸುಡು ವ್ಯಾಮೋಹದ
ಕಣ್ಣುಗಳಿಂದ ಹೊಸ ಜಗತ್ತನ್ನು
ಸೃಷ್ಠಿಸುತ್ತಾರೋ ಅವರೆಲ್ಲಾ
ಪುಣ್ಯವಂತ ಪ್ರೇಮಿಗಳು.

 

 

 

 

 

 

 

೪.
ಲೆಕ್ಕವಿಲ್ಲದಷ್ಟು ಬಾಗಿಲುಗಳಿಗೆ
ನನ್ನಾತ್ಮದ ಕಿವಿಗೊಟ್ಟೆ
ನಿನ್ನ ಧ್ವನಿಯಷ್ಟು
ಸುಮಧುರವಾದ ಧ್ವನಿಯನ್ನು
ಮತ್ತೆಂದೂ ಕೇಳಲಿಲ್ಲ .

೫.
ನಿಮ್ಮನ್ನು ನೀವು ಮಣ್ಣಿನಿಂದಾದ
ದೇಹದಂತೆ ಕಾಣಬೇಡಿ.
ದಿವ್ಯ ಸೌಂಧರ್ಯವನ್ನು ಪ್ರತಿಬಿಂಬಿಸುವ
ಕನ್ನಡಿಯಂತೆ ಕಾಣಿರಿ.

ಪ್ರೀತಿಯ ಮೋಡಗಳು ಉತ್ಕಟ ಬಯಕೆಯ ಮಳೆ ಸುರಿಸುತ್ತವೆ.
ಇದೇ ಮಣ್ಣಿನಲ್ಲಿ ಹೂ ಬಿಡಲು ಶುರುವಾದರೆ
ನೀವು ಚಕಿತಗೊಳ್ಳಬೇಡಿ.

೬.
ನಿನ್ನ ಕೆಲಸ
ಪ್ರೀತಿಯನು ಹುಡುಕುವುದಲ್ಲ
ಈ ನಿನ್ನ ಹಾದಿಗಡ್ಡವಾಗಿರುವ
ಎಲ್ಲಾ ಅಡಚಣೆಗಳ ಹುಡುಕುವುದು

ಚತುರತೆಯ ಮಾರಿಬಿಡು
ಕುತೂಹಲವ ಕೊಳ್ಳು
ಸುರಕ್ಷತೆಯ ಮರೆತುಬಿಡು
ನಿನಗೆಲ್ಲಿ ಭಯವಾಗುವುದೊ ಅಲ್ಲಿ ಬದುಕು
ನಿನ್ನೆಲ್ಲ ಪ್ರತಿಷ್ಠೆಗಳ ನಾಶಗೊಳಿಸು
ಕುಖ್ಯಾತನಾಗು …..

೭.

ಪ್ರೀತಿಯಿಲ್ಲದೆ
ಅರ್ಹತೆಯೆಲ್ಲವೂ ಹೊರೆ,
ನರ್ತಿಸುವುದೂ ಕೆಲಸ,
ಸಂಗೀತವೆಲ್ಲವೂ ಶಬ್ಧ ಮಾತ್ರ.

ಸ್ವರ್ಗದ ಮಳೆಯೆಲ್ಲವೂ
ಸಮುದ್ರಕ್ಕೆ ಸುರಿದರೂ
ಪ್ರೀತಿಯಿಲ್ಲದೆ
ಒಂದು ಹನಿಯೂ ಮುತ್ತಾಗುವುದಿಲ್ಲ.

ನೀನು ನಿಜವಾಗಿಯೂ ಮನುಷ್ಯನಾಗಿದ್ದಲ್ಲಿ
ಪ್ರೀತಿಗಾಗಿ ಎಲ್ಲವನ್ನು ಪಣಕ್ಕಿಡು.
ಅರೆಮನಸ್ಸು ಘನತೆಯನ್ನು ತಲುಪುವುದಿಲ್ಲ.

ಸುನಿತಾ ಹೆಬ್ಬಾರ್  ಕವಯಿತ್ರಿ ಮತ್ತು ಅನುವಾದಕಿ.
ಕಸೂತಿ ,ಹಸೆ, ಮೆಹಂದಿ ,ಎಂಬೋಸಿಂಗ್ ಕಲೆಗಳಲ್ಲಿ ಆಸಕ್ತಿ.
ಹಾಸನದಲ್ಲಿ ಕಸೂತಿಗೆ ಸಂಬಂಧಪಟ್ಟ ಸಣ್ಣ ಉದ್ಯಮ ನಡೆಸುತ್ತಿದ್ದಾರೆ.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)